ಬಹುಕಾಲ ಪತ್ರಕರ್ತರಾಗಿ ಕೆಲಸ ಮಾಡಿ ಅನುಭವವಿರುವ ಭಾರದ್ವಾಜ ಕೆ ಆನಂದತೀರ್ಥ ಅವರು ತಮ್ಮ ವೃತ್ತಿಜೀವನದಲ್ಲಿ ಸಾಮಾಜಿಕ , ರಾಜಕೀಯ ಜನಜೀವನದ ಆಳ ಅಗಲಗಳನ್ನು ಅರಿತಿರುವವರು ಮತ್ತು ಆ ಕುರಿತು ಹೆಚ್ಚು ಹೆಚ್ಚು ಬರೆದವರು. ಅದರ ಜೊತೆಜೊತೆಗೆ ಸೃಜನಶೀಲವಾಗಿಯೂ ತಮ್ಮನ್ನು ದುಡಿಸಿಕೊಂಡವರು. ಕತೆ, ಕವಿತೆ, ಕಾದಂಬರಿ, ಜೀವನ ಚರಿತ್ರೆ, ಪ್ರಬಂಧ ಮುಂತಾದ ಪ್ರಕಾರಗಳಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡವರು; ಸಂಚಲನ ಮೂಡಿಸಿದವರು.
‘ಸಂದಾಯಿ’ಯನ್ನು ಮೊದಲ ಓದುಗನಾಗಿ ಒಳಗೊಳ್ಳುವ ಮೊದಲು ‘ಕಳೆದುಕೊಂಡವರು’ ಮತ್ತು ‘ಕ್ರಮಣ’ ಕಾದಂಬರಿಗಳನ್ನು ಓದಿದ್ದೆ. ಅವು ಎತ್ತುವ ವೈಚಾರಿಕ ಮತ್ತು ಜೀವಪರ ನಿಲುವುಗಳೆದುರು ಬೆರಗಾಗಿದ್ದೆ. ಸಂದಾಯಿಯನ್ನು ಇದ್ದಕ್ಕಿದ್ದಂತೆ ಎದುರುಗೊಳ್ಳುವುದಕ್ಕಿಂತ ಆ ಎರಡು ಕಾದಂಬರಿಗಳ ಓದಿನ ಬಲದಲ್ಲಿ ನೋಡುವುದು ನನಗೆ ಮುಖ್ಯವೆನಿಸಿತು. ವಸ್ತು, ವಿಚಾರ ಮತ್ತು ಭಾಷಿಕ ಕ್ರಮಗಳನ್ನು ಪರಸ್ಪರ ತೌಲನಿಕವಾಗಿಯೂ ಅದರಿಂದ ನೋಡಲು ಸಹಕಾರಿಯಾಯಿತು.
**
ಸಂದಾಯಿಯನ್ನು ಅದು ನಿರೂಪಿಸುವ ಕಥೆಯ ಸ್ವರೂಪವನ್ನಾಧರಿಸಿ ಮೂರು ಭಾಗಗಳನ್ನಾಗಿ ವಿಂಗಡಿಸಬಹುದು : ಕೌಟುಂಬಿಕ, ರಾಜಕೀಯ ಮತ್ತು ಧಾರ್ಮಿಕ. ಕುಬೇರನ ನಿರೂಪಣೆಯಲ್ಲಿ ಮೊದಲ್ಗೊಳ್ಳುವ ಕಾದಂಬರಿಯು ಅವನ ಕೌಟುಂಬಿಕ ಜೀವನದ ನೋವು ನಲಿವುಗಳನ್ನು ವ್ಯಕ್ತಪಡಿಸುತ್ತಾ ಸಾಗುತ್ತದೆ. ತಂದೆ ಭದ್ರಯ್ಯನ ನಿರ್ಲಿಪ್ತತೆ, ತಾಯಿ ಸುಬ್ಬಮ್ಮಳ ಉಳಿವಿಗಾಗಿನ ಹೋರಾಟ, ಬದುಕಿಗೆ ಸಂಬಂಧವೇ ಇಲ್ಲದ ತಾನು ಪಡೆದ ಶಿಕ್ಷಣ, ಗ್ರಾಮೀಣ ಮುಗ್ಧ ಬದುಕು ಮತ್ತು ಅವರ ಪ್ರಾಮಾಣಿಕತೆ- ಇವು ಮೊದಲ ಭಾಗದ ಕಥಾ ವಸ್ತು. ಅಪಘಾತದಿಂದ ಮೂರ್ಛೆಹೋದವನನ್ನು ಆಸ್ಪತ್ರೆಗೆ ಸಾಗಿಸಿದ್ದಲ್ಲದೆ ಅವರ ಹಣವನ್ನು ಹಿಂತಿರುಗಿಸುವಲ್ಲಿ ಕಾದಂಬರಿಗೆ ತಿರುವು ಲಭಿಸುತ್ತದೆ.
ಎರಡನೆಯ ಭಾಗದಲ್ಲಿ ಕುಬೇರನ ಅಸ್ತಿತ್ವ ಗಟ್ಟಿಗೊಳ್ಳುತ್ತಾ ಹೋಗುವುದರೊಂದಿಗೆ ತನ್ನ ಒಡೆಯ ಸದಾಶಿವ ಅವರ ರಾಜಕೀಯ ಬದುಕು ಹಸನಾಗುವುದು, ಕುಬೇರನ ಸಖ್ಯದಲ್ಲಿ ಸದಾಶಿವ ಅವರ ತಂದೆ ವೆಂಕಟಪ್ಪ ಅವರ ಬದುಕಲ್ಲಿ ಗೆಲುವು ಕಾಣುವುದು, ವಿಜಯದ ಮೆಟ್ಟಿಲುಗಳ ಹಿಂದಿರುವ ತಂತ್ರ, ಕುತಂತ್ರ, ಕುಟಿಲತೆಗಳ ವಿವರಗಳಿವೆ.
ಮೂರನೇ ಭಾಗವು ಸದಾಶಿವ- ಭವಾನಿಯವರ ಪುತ್ರಿ ದಿವ್ಯ ಮತ್ತು ಆಜಂ ಖಾನ್‍ರ ನಡುವಿನ ಪ್ರೀತಿಯ ಸುತ್ತ ಹಬ್ಬಿಕೊಳ್ಳುವ ಪ್ರತಿಷ್ಠೆ ಮತ್ತು ಧರ್ಮದ ಕುರಿತಾದದ್ದು.
**
ಇದೊಂದು ‘ರಾಜಕೀಯ’ ಕಾದಂಬರಿ ಎಂದು ಸಂಕುಚಿತಾರ್ಥದಲ್ಲಿ ಬಳಸಬಹುದಾದರೂ ಅದರ ಆಚೆಗೂ ಸರಿಯಬಹುದಾದ ಅವಕಾಶವಾದವೇ ಇದರ ಜೀವದ್ರವ್ಯ. ಒಂದೊಂದು ಪಾತ್ರವೂ ಅವಕಾಶದ ಬೆನ್ನುಬಿದ್ದು ಈಡೇರಿಸಿಕೊಳ್ಳಲು ಹವಣಿಸುತ್ತದೆ. ಅದಕ್ಕಾಗಿ ಪ್ರಾಮಾಣಿಕತೆಯನ್ನೂ, ಅಪ್ರಾಮಾಣಿಕತೆಯನ್ನೂ ಬಂಡವಾಳವಾಗಿಸಿಕೊಳ್ಳುತ್ತದೆ. ಈ ಎರಡರ ಮುಖಾಮುಖಿ ಮತ್ತು ತಾಕಲಾಟಗಳು ಪ್ರತಿಯೊಬ್ಬರ ಒಳಗೂ ನಡೆಯುತ್ತವೆ. ದಿವ್ಯಾಳಿಂದ ಆಜಂಖಾನ್‍ನನ್ನು ಪ್ರತ್ಯೇಕಿಸುವ(ಕೊಲೆ ಮಾಡಿಸಬೇಕಾದ) ಸಂದರ್ಭದಲ್ಲಿ ಕುಬೇರನ ಒಳಗೆ ನಡೆಯುವ ಮೌಲ್ಯಾತ್ಮಕ ಸಂಘರ್ಷಗಳು ಕಾಡುವಂತಹದ್ದು. ಆದರೆ, ಇಲ್ಲಿ ಬರುವ ಕುಬೇರನ ತಂದೆ ಭದ್ರಯ್ಯ ಮತ್ತು ಸದಾಶಿವನ ಉಪ ಪತ್ನಿ ಮೇಘ ಎಂಬ ಎರಡು ಪಾತ್ರಗಳು ‘ಸ್ವ’ವನ್ನು ವಿಸರ್ಜಿಸಿ ‘ಪರ’ದ ಪರ ನಿಂತು ಉದಾತ್ತ ಪಾತ್ರಗಳಾಗಿ ಚಿತ್ರಿತವಾಗಿವೆ.
**
ವರ್ತಮಾನದ ಶಿಕ್ಷಣದ ಮಾದರಿ, ಚುನಾವಣಾ ಮಾದರಿ ಹಾಗೂ ಜನಪ್ರತಿನಿಧಿಗಳ ಬದುಕಿನ ಮಾದರಿಯನ್ನು ಈ ಕಾದಂಬರಿ ಹೇಳುತ್ತದೆ. ಎಲ್ಲರೂ ಒಪ್ಪಿಕೊಳ್ಳುವ ಡೆಮಾಕ್ರಸಿ ಮತ್ತು ಎಲ್ಲರೂ ಪ್ರಶ್ನಾತೀತವಾಗಿ ನೋಡುವ ರಾಜಕಾರಣ- ಇದು ನಮ್ಮಲ್ಲಿ ಇಂದು ಕಾಣುತ್ತಿರುವ ಆಡಳಿತದ ವಿರೋಧಾಭಾಸ. ಈ ನೆಲೆಯೇ ನಮ್ಮ ಹಿನ್ನಡೆಗೆ ಮೂಲ. ಹಣ, ಹೆಣ್ಣು, ಮಣ್ಣು, ಹೆಂಡ,ಜಾತಿ,ಧರ್ಮ.. ಹೀಗೆ ಒಡೆದು ಆಳುವ, ಕೊಟ್ಟು ಪಡೆಯುವ ರಾಜಕಾರಣದ ಅನಿಷ್ಠ ನಡೆಯನ್ನು ಕಾದಂಬರಿಯು ನಿರೂಪಿಸುತ್ತಾ ಹೋಗುತ್ತದೆ. ಈ ನಡೆಯನ್ನು ಒಪ್ಪಿಕೊಂಡಿರುವ ನಾವು ಇದರಿಂದ ಹೊರಬರುವ ದಾರಿಯ ಕುರಿತು ಆಲೋಚಿಸಲು ಪ್ರೇರೇಪಿಸುತ್ತದೆ. ಅದರೊಂದಿಗೆ ಪ್ರತಿಷ್ಠೆಯ ಬೆನ್ನುಬಿದ್ದಾಗ ದಾಂಪತ್ಯ ಜೀವನವು ಹೇಗೆ ಕಡಿದುಕೊಳ್ಳುತ್ತದೆಂಬ ಬಗೆಯನ್ನು ಕಾದಂಬರಿಯು ತಿಳಿಸುತ್ತದೆ.
**
ಸಂದಾಯಿಯು ಒಂದೇ ಉಸಿರಿನಲ್ಲಿ ಓದಿಸಿಕೊಳ್ಳುತ್ತದೆ. ಆದರೆ, ಕಾದಂಬರಿಯಲ್ಲಿ ಕಥನಗಾರಿಕೆಯೇ ಮುಖ್ಯವಾದಾಗ ವಸ್ತುವನ್ನು ಸೂಕ್ಷ್ಮವಾಗಿ ಗ್ರಹಿಸುವಲ್ಲಿ ಹಿನ್ನಡೆಯಾಗುತ್ತದೆ. ಸಲೀಸಾಗಿ ಓದಿಸಿಕೊಂಡರೂ ತಾಂತ್ರಿಕವಾಗಿ ಸೊರಗುತ್ತದೆ. ಕೆಲವೊಂದು ಅಪ್ರಧಾನ ಸಂಗತಿಗಳು ಪುನರಪಿ ಬಳಕೆ(ಉದಾಹರಣೆಗೆ- ಚಹಾ)ಯಾದಾಗ ಅಭಿವ್ಯಕ್ತಿ ವಾಚ್ಯವಾಗುತ್ತದೆ. ‘ಸಂದಾಯಿ’ ಕಾದಂಬರಿಯು ಒಬ್ಬ ವ್ಯಕ್ತಿಯು ಮತ್ತೊಬ್ಬ ವ್ಯಕ್ತಿಗೆ ಮೌಖಿಕವಾಗಿ ಕಥೆ ಹೇಳುವಂತೆ ಸಾಗುತ್ತದೆ. ಜನಪ್ರಿಯ ಮಾದರಿ ಅದು(ಮ್ಯಾಕ್ರೋ ಮಾದರಿ). ಮೈಕ್ರೋಕಾಸಂ ದಾರಿಯಲ್ಲಿ ಸಾಗಿದ್ದಲ್ಲಿ ಅದು ಹೆಚ್ಚು ಸೆನ್ಸಿಬಿಲಿಟಿಯನ್ನು ಗಳಿಸಿಕೊಳ್ಳುತ್ತದೆ. ಈ ಕಾದಂಬರಿಯಲ್ಲಿ ನನಗೆ ಕಾಣಿಸಿದ ಕೊರತೆಯಿದು.
**
ಓರ್ವ ಪತ್ರಕರ್ತರಾಗಿ ವೆಂಕಟಪ್ಪ, ಸದಾಶಿವರಂತಹ ಹಲವು ರಾಜಕಾರಣಿಗಳನ್ನು, ಕುಬೇರನಂತಹ ಒಡೆಯನಿಗೆ ನಿಷ್ಠನಾದ ಸಹಾಯಕರನ್ನು ಹತ್ತಿರದಿಂದ ಗಮನಿಸಿರುವ ಭಾರದ್ವಾಜರಲ್ಲಿ ಕಥೆ ಹೇಳುವುದರಲ್ಲಿರುವ ಆಸ್ಥೆಯ ಜೊತೆಗೆ ಸಾಮಾಜಿಕ ಬದ್ಧತೆಯೂ ಇದೆ. ಯಾವುದನ್ನು ನಿರ್ಣಯಿಸಬೇಕು ಮತ್ತು ಯಾವುದನ್ನು ಓದುಗರಲ್ಲಿ ಬೆಳೆಸಬೇಕು ಎಂಬ ಪ್ರಜ್ಞೆ ಇದೆ. ಇವರ ಎಲ್ಲ ಕಾದಂಬರಿಗಳ ಶಕ್ತಿ ಕೂಡ ಇದೇ ಆಗಿದೆ.
*
ಕಾಜೂರು ಸತೀಶ್
No comments:
Post a Comment