ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Tuesday, November 18, 2025

ಕಣ್ಣಲ್ಲಿಳಿದ ಮಳೆಹನಿ ಕುರಿತು ಕಿರುಟಿಪ್ಪಣಿ - ಡಾ. ಮಹಾಂತೇಶ ಪಾಟೀಲ

ನವೆಂಬರ- ೧೮, ೨೦೨೫.


@ಕಾಜೂರು ಸತೀಶ್ 
@ಸಂಗಾತ ಪುಸ್ತಕ, ರಾಜೂರು.

ಈ ಲೋಕಕ್ಕೆ ತುಂಬಾ ಅಗತ್ಯವಾಗಿರುವುದು ಕಾಡು ಮತ್ತು ಕವಿತೆ. ಭೂಮಿ ಮತ್ತು ಮನುಷ್ಯರನ್ನು ಅವೆರಡೂ ತಂಪಾಗಿ ಇಡಬಲ್ಲವು. ಅವುಗಳ ಸಾಂಗತ್ಯದಿಂದ ಹೊರತಾದ ಜಗತ್ತು ಏನಾಗುತ್ತಿದೆ ಅಂತ ನಿತ್ಯ ನರಕಗಳ ನೋಡಿದರೆ ಅರ್ಥವಾಗುತ್ತದೆ. ಇಂತಹ ಹೊತ್ತಲ್ಲಿ ನಮಗೆ ಕಾಜೂರು ಸತೀಶ್ ಅವರ 'ಕಣ್ಣಲ್ಲಿಳಿದ ಮಳೆಹನಿ ' ಎದೆಗಿಳಿಯುವ ದೆಸೆಯಿಂದ ಗುರುತರ ರಚನೆಗಳೆನಿಸುತ್ತವೆ. ಕಾಡನ್ನು, ಕವಿತೆಯನ್ನು, ಜೀವನ ಕೊನೆಯನ್ನು ಕ್ಯಾಮೆರಾ ಕಣ್ಣಿನ ಮೂಲಕ ಲೋಕವನ್ನು ನೋಡುವ ಕವಿಗೆ ಕಾಣಿಸುವ ಜಗತ್ತು ಬೇರೆಯದೇ ಬಗೆಯದು. ಅಂತಹ ಬೇರೊಂದು ಲೋಕದರ್ಶನ ಮಾಡಿಸುತ್ತಾನೆ ಕವಿ.

ಹೊಸ ತಲೆಮಾರಿನ ಕವಿಗಳಲ್ಲಿ ಅಪ್ಪಟ ಪರಿಸರ ಸಂವೇದನೆಯಿಂದ ಬರೆಯುತ್ತಿರುವ ಏಕೈಕ ಇಕೋಪೊಯಟ್ ಕಾಜೂರು ಸತೀಶ್. ಈ ಮಾತು ಉತ್ಪ್ರೇಕ್ಷೆಯಲ್ಲ ಎನ್ನುವುದು ಅವರ 'ಗಾಯದ ಹೂವುಗಳು, ಕಣ್ಣಲ್ಲಿಳಿದ ಮಳೆಹನಿ' ಸಂಕಲನಗಳನ್ನು ಓದಿದವರು ಬಲ್ಲರು. ವರ್ತಮಾನದ ತಲ್ಲಣಗಳಿಗೆ ಪ್ರಕೃತಿ ಆಪ್ತತೆಯಿಂದ ನಿರ್ವಾಣ ಹೊಂದಲು ಸಾಧ್ಯವೆನ್ನುವುದನ್ನು ನಿವೇದಿಸುತ್ತವೆ. ಒಂದು ಪದ, ಸಾಲು, ನುಡಿ, ಪಂದ್ಯವೊಂದರಲ್ಲಿ ಅಗಾಧವಾದುದನ್ನು ಭಾಷಿಕ ಶಕ್ತಿಯಲ್ಲಿ ಸಾಧ್ಯವಾಗಿಸಬಲ್ಲರು.

ಮರ ಯಾರದು?, ಮ್ಯಾನ್ಹೋಲಿನಲ್ಲಿ ಸತ್ತ ಕವಿತೆ, ಒಂದಾದರೂ ಬರಬಾರದೇ?, ನನ್ನೊಳಗೆ ಇಳಿಯುವಾಗ, ನಡುರಾತ್ರಿ ನಾಯಿ ಬೊಗಳುತ್ತಿದೆ ಎಂದರೆ, ಹೊಟೇಲ್, ಎಷ್ಟು ಸುಖಿ ನೀನು ಕವಿತೆಯೇ?, ಒಂದು ಕವಿತೆ ಹುಟ್ಟುವುದರಲ್ಲಿತ್ತು, ಕುರ್ಚಿ, ನನ್ನ ಶವಸಂಸ್ಕಾರದ ದಿನ, ನಾನು ಸತ್ತ ಮೇಲೆ, ಕಾಡುಗಳಿದ್ದವು ಕವಿತೆಯಲ್ಲಿ - ಇವೆಲ್ಲವೂ ಚೇತೋಹಾರಿ ರಚನೆಗಳು. ಒಂದು ಎಲೆ, ಚಿಗುರು, ಹೂವು, ಮರವನ್ನು ಕವಿತೆಯಾಗಿ ಧ್ಯಾನಿಸಬಲ್ಲ ಗುಣ ಬೆರಗು ಮೂಡಿಸುತ್ತದೆ. ಕಾಡಿನ ಹಾಗೆ ಕಾಂಕ್ರೀಟ್ ಬಗ್ಗೆಯೂ ಈ ಕವಿ ಬರೆಯಬಲ್ಲ. ಸಾವು ಇವರ ಕಾವ್ಯದ ಶೋಧಗಳಲ್ಲಿ ಒಂದು. ಈ ಸಾವು ಮಾಗಿಕಾಲದಂತೆ, ಮತ್ತೆ ವಸಂತದ ಮೂಲಕ ಮರುಹುಟ್ಟು ಪಡೆಯುವ ದಿವ್ಯ ಹಂಬಲವುಳ್ಳದ್ದು.


ಕಾಡುಗಳಿದ್ದವು ಕವಿತೆಗಳಲ್ಲಿ
ಮಾತಿಗಿಳಿದ ಮಾನವ ಬೇಲಿಕಟ್ಟಿ ಬಂದ.....

ನೇರಳೆಯ ಪೊಟರೆಯೊಳಗಿಟ್ಟ ಹೃದಯ
ಅಲ್ಲೇ ಇದೆ ಈಗಲೂ

ಕಾಡುಗಳಿಲ್ಲ ಕವಿತೆಗಳಲ್ಲಿ
ಮೃಗಾಲಯವಿದೆ (ಕಾಡುಗಳಿದ್ದವು ಕವಿತೆಯಲ್ಲಿ).
*

ಯಾರು ಹಡೆಯುತ್ತಾರೆ
ನನ್ನ ಕವಿತೆಗಳನ್ನು ನಾನು ಸತ್ತ ಮೇಲೆ
ಯಾರು ಸುಡುತ್ತಾರೆ ಅವುಗಳನ್ನು
ನಾನು ಸತ್ತ ಮೇಲೆ

ಯಾರು ಕೈಹಿಡಿದು ಬರೆಸುತ್ತಾರೆ ನನ್ನ ಕವಿತೆಗಳನ್ನು ನಾನು ಸತ್ತ ಮೇಲೆ
ಯಾರು ಮತ್ತೆ ಮತ್ತೆ ಓದಿಸುತ್ತಾರೆ
ಅವುಗಳನ್ನು ನಾನು ಸತ್ತ ಮೇಲೆ. (ನಾನು ಸತ್ತ ಮೇಲೆ).

*

ಈ ರಾತ್ರಿ
ಮಿಡತೆಯ ಹಾಡು
ಕಾಡಾನೆಯ ಘೀಳು
ನಾಯಿಗಳ ಬೊಗಳು
ಮೈಸೋಕುವ ಗಾಳಿ
ಮಳೆಯ ಸಪ್ಪಳ
ಇರದಿದ್ದರೆ
ಕವಿತೆ ಬರೆಯುತ್ತಿದ್ದೆ
ನಿನ್ನ ಕುರಿತು (ಬರೆಯಲಾರೆ).
*

ಊಟಕ್ಕೆಂದು ಹೊಟೇಲಿನ ಬಳಿಬಂದೆ
ಬಾಗಿಲು ಹಾಕಿ ಎಲ್ಲೋ ಹೊರಟುಹೋಗಿದೆ.

ಎಲ್ಲಿ ಹೋಗಿರಬಹುದು ಅದು
ಬೆವರಲ್ಲಿ ತೋಯ್ದ ತನ್ನ ಅಂಗಿಯ ಕಳಚಿಟ್ಟು.
(ಹೋಟೆಲ್).
*

ನಡುರಾತ್ರಿ ನಾಯಿ ಬೊಗಳುತ್ತಿದೆ ಎಂದರೆ...
ಎಲ್ಲ ಕಳೆದುಕೊಂಡ ಕಾಡು ನಡೆದು ಬಂದಿರಬಹುದು ಕಂಬಗಾಲುಗಳಲ್ಲಿ/
 ಹೆಜ್ಜೆ ಎತ್ತಿಟ್ಟಲ್ಲೆಲ್ಲ ಲದ್ದಿ ಹಾಕಿ
ಹಿಂತಿರುಗಿಸುತ್ತಿರಬಹುದು ಯಾರೋ ಮರೆತು ಬಂದ ಗರಗಸವನ್ನು (ನಡುರಾತ್ರಿ ನಾಯಿ ಬೊಗಳುತ್ತಿದೆ ಎಂದರೆ...).
*

ಎಷ್ಟೊಂದು ಹಕ್ಕಿಗಳಿವೆ ಇಲ್ಲಿ
ಒಂದಾದರೂ ಬರಬಾರದೇ?

ಒಂದು ಮರಕುಟಿಗವಾದರೂ ಬಂದು
ಕುಟುಕುಟು ಕುಟುಕಿ
ಮೊಬೈಲಿನಲ್ಲೊಂದು ತೂತು ಮಾಡಿ ನುಗ್ಗಿ
ಜೋರಾಗಿ ಹಾಡಿ....
ಆಮೇಲೆ ಅದರ ಹಾಡೇ ರಿಂಗ್ಟೋನಾಗಿ
ಅದರ ಚಿತ್ರವೇ ಡಿಪಿಯಾಗಿ
(ಒಂದಾದರೂ ಬರಬಾರದೇ).
*

ಚಿಕ್ಕವನಿದ್ದಾಗ
ಈ ಮರ ನನ್ನದಾಗಿತ್ತು

ಅದರ ನೆರಳಲ್ಲಿ ಕುಳಿತು
ಪುಸ್ತಕ ಓದಿದೆ
ಕೊಂಬೆಗಳ ಮೇಲೆ ಕುಳಿತು
ಜಗದ ಸುದ್ದು ಮರೆತೆ (ಮರ ಯಾರದು).

ಕೊಡಗಿನ ಕವಿ ಕಾಜೂರು ಸತೀಶ್ ಕಾವ್ಯ ದಟ್ಟ ಕಾಡಿನ ಮಂಜಿನಂತೆ, ಜೇಡರ ಬಲೆಯಲ್ಲಿ ಹೆಣೆದ ನೀರ್ಮುತ್ತಿನಂತೆ, ಮರದ ಎಲೆಗಳ ನಡುವೆ ಸುಳಿದ ಸೆಳೆಯುವ ಕುಳಿರ್ಗಾಳಿಯಂತೆ- ಈ ದಿವ್ಯತೆ ಅನುಭೂತಿ ಪಡೆಯಲು ಓದಬೇಕಾದ ಕವಿತೆಗಳಿವು.
*


✍️ಮಹಾಂತೇಶ ಪಾಟೀಲ 

Monday, October 27, 2025

ಕಾಜೂರು ಸತೀಶ್ ಅವರ ಕಾಡಿನ ಕವಿತೆಗಳ ಜಾಡು ಹಿಡಿದು...



✍️ಡಾ. ಮಹಾಂತೇಶ ಪಾಟೀಲ, ಕನ್ನಡ ಅಧ್ಯಯನ ವಿಭಾಗ, ದಾವಣಗೆರೆ ವಿಶ್ವವಿದ್ಯಾನಿಲಯ


ಕೃಪೆ- Alliance University

'ಕಾಡುಗಳಿದ್ದವು ಕವಿತೆಯಲ್ಲಿ' ಎನ್ನುವ ಕೊಡಗಿನ ಕಾಜೂರು ಸತೀಶ್‌, ಹೊಸ ತಲೆಮಾರಿನ ವಿಶಿಷ್ಟ ಸಂವೇದನೆಯ ಬರಹಗಾರ. ಒಳ್ಳೆಯ ಕಾವ್ಯ ಮತ್ತು ಕಾಡು ಕಡಿಮೆಯಾಗುತ್ತಿರುವ ವರ್ತಮಾನದಲ್ಲಿ ಅವರ ಬರಹಗಳು ಗಮನ ಸೆಳೆಯುತ್ತವೆ. ಚಾರಣ, ಹಾಡುಗಾರಿಕೆ, ಚಿತ್ರಕಲೆ ಮತ್ತು ಪೋಟೊಗ್ರಫಿಯಂತಹ ಬಹುಬಗೆಯ ಅಭಿವ್ಯಕ್ತಿಗಳಲ್ಲಿ ತೊಡಗಿಸಿಕೊಂಡಿರುವ ಕವಿಯ ನೋಟಕ್ರಮವು ಕವಿತೆಗಳಲ್ಲಿಯೂ ಮೈದಾಳಿದೆ. ಅವರ ಸಂವೇದನೆಗಳಿಗೆ ಅನೇಕ ಮುಖಗಳಿವೆ. ಅವುಗಳ ಹಿಂದಿರುವ ಮೂಲ ಚಾಲನಾಶಕ್ತಿ ಎಂದರೆ ಕಾಡು, ಮತ್ತದರ ಅನಂತತೆ, ಅನಿಕೇತನತೆ. ಕುವೆಂಪುರವರ ಸೌಂದರ್ಯ ವರ್ಣನಾ ದೃಷ್ಟಿ, ದ.ರಾ ಬೇಂದ್ರೆಯವರ ನಾದದ ನೆಲೆಗಳಿಗಿಂತ ವಿಭಿನ್ನವಾಗಿ ಪ್ರಕೃತಿಯ ಸಂವೇದನೆಯನ್ನು ಕಾಜೂರು ಸತೀಶರ ಕವನ ಸಂಕಲನಗಳಲ್ಲಿ (ಗಾಯದ ಹೂವುಗಳು-೨೦೧೫, ಕಡಲ ಕರೆ-೨೦೧೭) ಕಾಣುತ್ತೇವೆ. ಪ್ರಸ್ತುತ ಲೇಖನವು 'ಕಣ್ಣಲ್ಲಿಳಿದ ಮಳೆಹನಿ'(೨೦೨೧) ಸಂಕಲನದ ಕವಿತೆಗಳ ವಿವೇಚನೆಗೆ ಮಾತ್ರ ಸೀಮಿತಗೊಳಿಸಲಾಗಿದೆ.

ಇಲ್ಲಿನ ಸಂವೇದನೆಯು ಕಾಡು, ಕಾವ್ಯ, ಸಮಾಜ ಮತ್ತು ಸಾವು; ನಾಲ್ಕು ಕವಲುಗಳಾಗಿ ಸಂಕಲನದಲ್ಲಿ ಹರಿದು ಓದುಗರನ್ನು ಸೇರುತ್ತವೆ. ಈ ನಾಲ್ಕು ಆಯಾಮಗಳಲ್ಲಿ ಕಾಡಿನ ನೆಲೆಯು ಮಹಾನದಿಯಂತಿದೆ. ಇಲ್ಲಿನ ಕಾಡು ಜೀವ, ಜೀವನ ಮತ್ತು ಲೋಕದ ಜೊತೆಗೆ ಸಾತತ್ಯತೆಯನ್ನು ಬೆಳಿಸಿದೆ. ಹಾಗಾಗಿ ಕವಿತೆ, ಸಾವು, ಸಮಾಜದ ಬಗ್ಗೆ ಬರೆಯುವಾಗಲೂ ಕಾಡೇ ಮುಂಚೂಣಿಯಾಗಿ ಬರುತ್ತದೆ. ಅದೆಲ್ಲವನ್ನು ಗಮನಿಸಿದಾಗ ಕವಿಗೆ ಕಾಡೇ ಏಕಾಂತ, ಲೋಕಾಂತವೆಲ್ಲ ಆಗಿರುವುದು ಅನುಭವಕ್ಕೆ ಬರುತ್ತದೆ.


-1-
ಕಾಡು, ಮರ, ಎಲೆ, ಮಳೆ, ಝರಿಯ ವಿವಿಧ ರೂಪಗಳು ಕಾಜೂರು ಸತೀಶರ ಕವಿತೆಗಳಲ್ಲಿ ಮತ್ತೆ ಮತ್ತೆ ಕಾಣಿಸಿಕೊಂಡರೂ, ಪ್ರತಿ ಸಲ ಹೊಸದಾಗಿಯೇ ತೋರುತ್ತವೆ. ಇಲ್ಲಿನ ಕೆಲವು ಕವಿತೆಗಳು ಕಾಡನ್ನು ಮಾತ್ರ ಒಳಗೊಂಡರೆ, ಇನ್ನೂ ಕೆಲವು ಕವಿತೆಗಳು ಕಾಡು ಮತ್ತು ಕಾಂಕ್ರಿಟ್ ಕಲ್ಚರ್ ಅನ್ನು ಮುಖಾಮುಖಿಯಾಗಿಸುತ್ತವೆ. ಪ್ರಕೃತಿಯ ಸೌಂದರ್ಯಕ್ಕಿಂತ ಅದರ ಅನುಭವದ ಅನುಭೂತಿಯ ಕಡೆಗೆ ಕವಿಯ ಗಮನವಿದೆ. 'ಚಿಕ್ಕವನಿದ್ದಾಗ ಈ ಮರ ನನ್ನದಾಗಿತ್ತು' ಎಂದು ಶುರುವಾಗುವ 'ಮರ ಯಾರದು?' ರಚನೆಯು ಮರ ಬೆಳೆದಂತೆ ಕವಿತೆಯು ಬೆಳೆಯುತ್ತ 'ನನ್ನದಲ್ಲ' ಎನಿಸಿಬಿಡುತ್ತದೆ. ಪಂಚಭೂತಗಳು, ಚರಾಚರಗಳು ಸೇರಿಕೊಂಡು ಪರಿಸರವಾದಿ ಹೆನ್ರಿ ಡೆವಿಡ್ ಥರೋ ಹೇಳುವ 'ಅತೀಂದ್ರತೆ(ಟ್ರಾನ್ಸೆನ್ಡೆಂಟಾಲಿಸ್ಮ್)ಯನ್ನು ಮಂಡಿಸುತ್ತದೆ. 'ಎಲೆ' ಕವಿತೆಯಲ್ಲಿ ಎಲೆಯ ಜೀವನಕ್ರಮದ ವಿದ್ಯಮಾನಗಳನ್ನು ಮಾನವರ ಬದುಕಿನೊಟ್ಟಿಗೆ ಸಮೀಕರಿಸಲಾಗಿದೆ. ಮರದಿಂದ ಹಣ್ಣೆಲೆ ಅಗಲಿ ಭೂಮಿ ಸೇರುವುದನ್ನು 'ಹೆಣ್ಣು ತವರು ಸೇರುವುದ'ರ ಜೊತೆಗೆ ಸಮೀಕರಿಲಾಗಿದೆ.

'ಒಂದಾದರೂ ಬರಬಾರದೇ?' ದಲ್ಲಿ ಹಕ್ಕಿ ಮತ್ತು ಮೊಬೈಲ್‌ನ್ನು ಎದುರುಬದುರು ಮಾಡಲಾಗಿದೆ. ಈ ಎದುರಾಟದಲ್ಲಿ 'ಭೋಗ ಸಂಸ್ಕೃತಿ' ಎದುರು ಪ್ರಕೃತಿಯನ್ನು ಪರ್ಯಾಯವಾಗಿ ಸ್ಥಾಪಿಸಲಾಗಿದೆ. ಬರಡು ನೆಲ ಕಾಡಾಗಬೇಕು, ಬರದ ಹೃದಯಗಳು ಹಸಿರಾಗಬೇಕೆಂಬ ಅಭೀಷ್ಟೆಯು ಕವಿತೆಯ ಕೊನೆಯಲ್ಲಿ ಒಡಮೂಡುತ್ತದೆ. ಕಾಡು ಮತ್ತು ನಾಯಿಯ ಆಕೃತಿಗಳು ಕಾಣಿಸುವ 'ನಡುರಾತ್ರಿ ನಾಯಿ ಬೊಗಳುತ್ತಿದೆ ಎಂದರೆ' ರಚನೆಯಲ್ಲಿ ನಾಯಿ ಎಂಬುದು ಕಾಡುಗಳ್ಳ ಮನುಷ್ಯರು ಎನ್ನುವುದನ್ನು ಧ್ವನಿಸುತ್ತದೆ. ಗರಗಸ, ಧಣಿ- ಎಂಬ ಪದಬಳಕೆಯು ಮೇಲ್ವರ್ಗದವರೇ ಆ ಕಾಡುಗಳ್ಳರೆಂಬುವುದನ್ನು ಕವಿತೆಯು ಬೊಟ್ಟುಮಾಡಿ ತೋರಿಸುತ್ತದೆ.

'ನಡುರಾತ್ರಿ ನಾಯಿ ಬೊಗಳುತ್ತದೆ ಎಂದರೆ
ಎಲ್ಲ ಕಳೆದುಕೊಂಡ ಕಾಡು ನಡೆದು ಬಂದಿರಬಹುದು ಕಂಬಗಾಲುಗಳಲ್ಲಿ
ಹೆಜ್ಜೆ ಎತ್ತಿಟ್ಟಲ್ಲೆಲ್ಲ ಲದ್ದಿಹಾಕಿ
ಹಿಂತಿರುಗುತ್ತಿರಬಹುದು ಯಾರೋ ಮರೆತು ಬಂದ ಗರಗಸವನ್ನು' (ಪು-೩೦)

ಕವಿತೆಯಲ್ಲಿ ವ್ಯಂಗ್ಯದ ಧ್ವನಿಯಿದೆ. 'ಝರಿ'ಯಲ್ಲಿ ನಿಸರ್ಗದ ಚಲನವಲನ, ವಿದ್ಯಮಾನ, ಸಂಗತಿಗಳು ಕವಿತೆಯ ಅವಯವಗಳಾಗಿವೆ. ಸಂಕಲನದ ಪರಿಪೂರ್ಣ ಕವಿತೆಯೆಂದರೆ 'ಕಾಡುಗಳಿದ್ದವು ಕವಿತೆಗಳಲ್ಲಿ'. ಪರೋಕ್ಷವಾಗಿ ಕಾಜೂರು ಸತೀಶರು ಈಗ ಕವಿತೆಗಳಲ್ಲಿ ಕಾಡು ಇಲ್ಲ ಎನ್ನುತ್ತಾರೆ. ಆದರೆ ಕವಿಗೆ ಕಾಡು ಮತ್ತು ಕವಿತೆಯು ಏಕದೇಹಿಗಳು. ಕೊನೆಯಲ್ಲಿ

'ಕಾಡುಗಳಿಲ್ಲ ಕವಿತೆಗಳಲ್ಲಿ
ಮೃಗಾಲಯವಿದೆ' (ಪು-೬೬)

ಎಂಬ ಸಾಲು ವರ್ತಮಾನ ಲೋಕವು ಮಾನವಕೇಂದ್ರಿತ (ಎಂತ್ರಪೋಸೆಂಟ್ರಿಕ್) ಆಗಿರುವುದನ್ನು ಹೇಳುತ್ತದೆ. ಜೊತೆಗೆ ಪರಿಸರ ಕೇಂದ್ರಿತ (ಇಕೋಸೆಂಟ್ರಿಕ್) ಆಗಬೇಕಾದ ಅನಿವಾರ್ಯತೆಯನ್ನು ಸೂಚಿಸುತ್ತದೆ. ಅದನ್ನು ಪರಿಸರವಾದಿ ವಿಮರ್ಶೆಯು 'ಪ್ರಕೃತೀಕರಣ' (ವೈಲ್ಡರ್‌ನೆಸ್) ಎಂದು ಕರೆಯುತ್ತದೆ. ಅಂತಹ ಕವಿತೆಗಳು ವರ್ಡ್ಸ್ ವರ್ಥ್, ಕುವೆಂಪುರವರ ನಿಸರ್ಗ ಕವಿತೆಗಳ ಮುಂದುವರಿಕೆಯೆನಿಸದೆ, ವಿಭಿನ್ನ ಮತ್ತು ವಿಶಿಷ್ಟ ಅಭಿವ್ಯಕ್ತಿಗಳೆನಿಸುತ್ತವೆ.

-2-
ಕವಿತೆಯ ಕ್ರಿಯಾತ್ಮಕ ಕುಶರಿಯ ಕುರಿತು, ಮತ್ತದರ ಅರ್ಥ-ಶಬ್ದಲೋಕಗಳ ಬಗೆಗೆ ಕವಿಗಳು 'ಕಾವ್ಯ' ಕಟ್ಟುವುದು ಸಹಜ. ಕಾವ್ಯ ಕ್ರಿಯೆಯನ್ನು ಹೊಸದಾಗಿ ಮಂಡಿಸುವ ಕ್ರಮದಿಂದ ಪ್ರಸ್ತುತ ಸಂಕಲನವು ಬೇರೆಯಾಗಿ ನಿಲ್ಲುವುದು. ಅಂತಹ ವಿಕ್ರಮವನ್ನು ಕಾಜೂರು ಸತೀಶರವರ ಕಾವ್ಯಗಳಲ್ಲಿ ಗಮನಿಸುತ್ತೇವೆ. ಹೊಸ ತಲೆಮಾರಿನಲ್ಲಿ ಸಖಿ, ಸಖನಾಗಿ ಕಾಣಿಸುವ ಕವಿತೆಗಳು; ಇಲ್ಲಿನ ರಚನೆಗಳಲ್ಲಿ ಕಾವ್ಯವು ಕಾಡಾಗಿ, ಮರವಾಗಿ, ಲೋಕವಾಗಿ ಮತ್ತು ಮನುಷ್ಯರಾಗಿಯೂ ಮೈದಾಳಿದೆ.

'ಕಾಡುಗವಿತೆ'ಯು ಆನೆಯ ಹಾದಿಯನ್ನು ಸೂಕ್ಷ್ಮ ದೃಷ್ಟಿಯಿಂದ ನೋಡುತ್ತಾ ಇರುವೆಯ ದಾರಿಗಳನ್ನು ಕಾಣಿಸುತ್ತದೆ. 'ಮ್ಯಾನ್ಹೋಲಿನಲ್ಲಿ ಸತ್ತ ಕವಿತೆ'ಯು ಶುದ್ಧ ಸಮಾಜವಾದಿ ನಿಲುವಿನದು. ಮಲದ ಗುಂಡಿ, ಚರಂಡಿಯನ್ನು ಸ್ವಚ್ಛಗೊಳಿಸುವವರ ಪ್ರತಿನಿಧಿ. ದುರಂತವೆಂದರೆ ಬಾಯಿಬಡುಕು ಮಾಧ್ಯಮಗಳ ಮತ್ತು ವೈಟ್‌ಕಾಲರ್ ಕವಿಗಳ ಕಣ್ಣಿಗೆ ಅಂತಹ ಕವಿತೆಯು ಕಾಣಿಸದು:

'ಮ್ಯಾನ್ಹೋಲಿನಲ್ಲ ಉಸಿರುಗಟ್ಟಿ ಸತ್ತ ಕವಿತೆಯ ಶವ
ಕವಿಗೂ ಸಿಗಲಿಲ್ಲ, ಟಿವಿಗೂ ಸಿಗಲಿಲ್ಲ.' (ಪು-90)

ಕವಿಯು 'ಕಾವ್ಯಮೀಮಾಂಸೆ'ಯಲ್ಲಿ 'ನೀರಿಲ್ಲದೆ ಸ್ನಾನ ಮುಗಿಸಿದೆ' ಎನ್ನುತ್ತಾನೆ. ಕವಿತೆಗಾಗಿ ಧ್ಯಾನಿಸುತ್ತ ಮೌನವಾಗಿ ಕುಳಿತವರೆದುರು ಹಲ್ಲಿಯು ಲೊಚಗುಟ್ಟಿ ಮೌನಭಂಗಗೊಳಿಸುತ್ತದೆ. ಅಪಶಕುನವೆಂದು ಭಾವಿಸುವ ಕವಿ ಮಹೋದರರು ನಮ್ಮ ನಡುವಿದ್ದಾರೆ. ಅಂತವರ ಕಾವ್ಯದ ಮಡಿವಂತಿಕೆಯನ್ನು 'ನೀರಿಲ್ಲದ ಸ್ನಾನ'ವೆಂದು ಕವಿಯು ವ್ಯಂಗ್ಯವಾಡುತ್ತಾನೆ. 'ಬಂಧಿ' ಕವಿತೆಯಲ್ಲಿ ಮಗು, ಹೂವು, ನೀರು, ಸಾವು- ಅನುಕ್ರಮವಾಗಿ ಕಾಣಿಸುತ್ತ ಜೀವ ಮತ್ತು ಜೀವನಗಳ ಒಂದಾಗಿಸುತ್ತದೆ. ಅದೇ ಕಾವ್ಯ ಬಂಧುರತೆ.

ನಿಸರ್ಗ, ಮರ, ಹಕ್ಕಿ, ನೆಲ, ಮುಗಿಲಿನ ಅನಂತ ರೂಪಗಳನ್ನು ಕವಿತೆಯ ಅವತಾರವಾಗಿಸುವ ಪ್ರಯೋಗಶೀಲತೆಯನ್ನು 'ಎಷ್ಟು ಸುಖಿ ನೀನು ಕವಿತೆಯೇ?' ದಲ್ಲಿ ಕಾಣುತ್ತೇವೆ. 'ಒಂದು ಕವಿತೆ ಹುಟ್ಟುವುದರಲ್ಲಿತ್ತು' ಕಾಡಿನ ಕುರಿತು ಕವಿತೆಗಳಿರುವಂತೆಯೇ, ಕವಿತೆಯೇ ಕಾಡಾಗುವ, ಜೀವನದ ಪಾಡಾಗುವ ಕ್ರಮವನ್ನು ನೋಡುತ್ತೇವೆ. ಕವಿತೆಯೆಂದರೆ ಏಕಾಂತ ಮತ್ತು ಲೋಕಾಂತ. ಆದರೆ ಅವೆರಡು ಸಾವಯವ ರೂಪಗಳಾದರೆ ಕವಿತೆಯ ರಚನೆಯು ಕಷ್ಟಸಾಧ್ಯ. ಈ ಕಾಲಕ್ಕೆ ಕಾವ್ಯ ವಿಘ್ನಗಳಾಗಿರುವ ಟಿ.ವಿ, ಮೊಬೈಲ್, ಬೈಕು, ಕತ್ತಿಗಳಂತಹ ನಾಗರಿಕ ಸಮಾಜದ ಸಾಧನಗಳನ್ನು ಕವಿತೆಯು ಪ್ರತಿರೋಧಿಸುತ್ತದೆ. ಕವಿತೆ ಆಗುವಿಕೆ ಮಾಗುವಿಕೆಯಲ್ಲಿನ ಪಲ್ಲಟಗಳನ್ನು ಕಾಜೂರು ಸತೀಶರವರು ಹಿಡಿದಿಡುವ ಯತ್ನವನ್ನು ಮಾಡಿದ್ದಾರೆ.


-3-
ಕಾವ್ಯವು ಸಮಾಜದ ಭಾಗವಾಗಿ ಕಾಣಿಸುವಿಕೆಯು ಕಡಿಮೆಯಾಗುತ್ತಿರುವ ವರ್ತಮಾನದಲ್ಲಿ ಕಾಡಿನಷ್ಟೇ ಗಾಢವಾಗಿ ಸಮಾಜವನ್ನು ಚಿತ್ರಿಸುವ ಮನೋಭಾವವು ಕಾಜೂರು ಸತೀಶರ ಕಾವ್ಯದಲ್ಲಿದೆ. ಜಾತಿ ಮತ್ತು ಲಿಂಗನಿಷ್ಠ ಸಮಾಜಕ್ಕಿಂತ ವರ್ಗನಿಷ್ಠ ಸಮಾಜದ ರಚನೆಯನ್ನು ಮುಖಾಮುಖಿಯಾಗುತ್ತಾರೆ. 'ಗುಡಿಸಲು'ದಲ್ಲಿ ಬಡತನದ, ಹಸಿವಿನ ಸಾಂಕೇತಿಕತೆಗಿಂತ ಅದೊಂದು ತಪ್ತ ಧ್ಯಾನಸ್ಥ ಹೃದಯವಂತಿಕೆಯ ರೂಪ ಮತ್ತು ರೂಪಕವಾಗಿದೆ. ಒಳಗೊಳ್ಳುವಿಕೆ ಮತ್ತು ಮಮತೆಯ ಒಡಲಾಗಿ ಒಡಮೂಡಿದೆ.

'ಗುಡಿಸಲಿನ ಹೊಟ್ಟೆಗೆ ಒಂದು ಮಗು ಗೇರುಬೀಜದ ಹಾಗೆ ಅಂಟಿಕೊಂಡು ' (೨೧)

ಈ ಕವಿತೆಯ ಆರಂಭವು ಸಾಮಾನ್ಯವಾಗಿದ್ದರೂ ಅಂತಿಮವಾಗಿ ಅದು ಪಡೆದುಕೊಳ್ಳುವ ತಿರುವು ಕವಿತೆಗೆ ಚೈತನ್ಯವನ್ನು ಒದಗಿಸುತ್ತವೆ. 'ನನ್ನೊಳಗೆ ಇಳಿಯುವಾಗ'ದಲ್ಲಿ ಆಗಂತುಕರ ಆಹ್ವಾನವಿದೆ. ಅದು ವ್ಯಂಗ್ಯವಾಗಿರುವ ಕಾರಣದಿಂದ ಪರಿಣಾಮಕಾರಿ ಅನಿಸುತ್ತದೆ. ಇಲ್ಲಿ ಹೃದಯಹೀನರನ್ನು ಹೃದಯಕ್ಕೆ ಕರೆಯುವ ಬಗೆಯಿಂದಲೇ ಕವಿತೆ ಗೆಲ್ಲುತ್ತದೆ.

'ಕರೆಗಂಟೆ ಇಲ್ಲದ ಮನೆ ನನ್ನದು
ನನ್ನ ಪಕ್ಕೆಲುಬುಗಳ ತಟ್ಟಿದರೆ ಸಾಕು
ಬಾಗಿಲು ತೆರೆಯುವೆ' (ಪು-೨೮)

ಕವಿಯು ಮನೆಯನ್ನು ತನ್ನ ದೇಹಕ್ಕೆ, ಕಾಡಿಗೆ ಮತ್ತು ಮಣ್ಣಿನ ಜೊತೆಗೆ ಸಮೀಕರಿಸುತ್ತಾನೆ. ಹಾಗಾಗಿ ಏಕತ್ವದಿಂದ ಶುರುವಾಗುವ ಕವಿತೆಯು ಬಹುತ್ವದೆಡೆಗೆ ಜಿಗಿಯುತ್ತದೆ. ಅದನ್ನು ನಾವು ಕೊನೆಯ ಸಾಲು: 'ಮಣ್ಣೇ ನನ್ನ ಮನೆ'ಯು ಸರಿಯಾಗಿ ಧ್ವನಿಸುತ್ತದೆ. ಕಾಡಿನ ಸಂಕೀರ್ಣತೆ ಮತ್ತು ಸೊಬಗುಗಳು ಕವಿತೆಯಲ್ಲಿವೆ. ವೈಯಕ್ತಿಕತೆಯಿಂದ ಆರಂಭವಾಗಿ ಸಾರ್ವತ್ರಿಕತೆಯಡೆಗೆ ಸಾಗುತ್ತದೆ. ಹೀಗೆ ಕವಿತೆಯಲ್ಲಿ ಭಾವ ಮತ್ತು ಅನುಭಾವದ ಚಲನೆಯನ್ನು 'ಎದೆಯ ದನಿಯಿದು', 'ಶೃಂಗಾರ ಕಾವ್ಯವಲ್ಲ' ರಚನೆಯಲ್ಲೂ ಗಮನಿಸುತ್ತೇವೆ. ನನ್ನ(ಗಂಡು), ನಿನ್ನ(ಹೆಣ್ಣು) ಎನ್ನುವ ಸರ್ವನಾಮಗಳಿಗೆ ನಿರ್ದಿಷ್ಟತೆಯಿದೆ.

'ನನ್ನ ಎದೆಯ ದಾರಿಗಳು ಬೃಹತ್ ವಾಹನಗಳು ಸಂಚರಿಸಿ ದುರಸ್ತಿಯಲ್ಲಿವೆ
ನಮ್ಮಿಬ್ಬರ ನಡುವಿನ ಅವರು ಕಾಮಗಾರಿ ಕೈಗೆತ್ತಿಕೊಂಡಿದ್ದಾರೆ' (ಪು-೩೯)

ಇಲ್ಲಿ ಸಂಗಮಿಸಿರುವ ಪ್ರೇಮಿಗಳು ತಮ್ಮ 'ಖಾಸಗಿ ರಸನಿಮಿಷಗಳ' ನಿವೇದನೆ, ವೇದನೆಯಲ್ಲಿ ತಲ್ಲೀನವಾಗಲಾರರು. ಅವರು ಶುದ್ಧ ಸಾಮಾಜಿಕರು ಮತ್ತು ಸಮಾಜವಾದಿಗಳು ಕೂಡ. ಮರ್ಯಾದೆಗೇಡು ಹತ್ಯೆಗೈವ ಜನರಿಗೆ ಗೂಡು ಕಟ್ಟಿ, ಮೊಟ್ಟೆಗೆ ಕಾವು ಕೊಟ್ಟು, ಅವರು ಕೋಗಿಲೆ ಮರಿಯಾಗಿ ಹೊರಬಂದು ಕುಹೂ ಕುಹೂ ಹಾಡಿಕೊಳ್ಳಲಿ ಎನ್ನುತ್ತಾನೆ ಕವಿ. ಈ ಸಂಕಲನದ ಕೆಲವು ಕವಿತೆಗಳಲ್ಲಿ ಆಹ್ವಾನದ ಕರೆ, ಹಾರೈಕೆಯ ಧಾಟಿಯಿದೆ. ಅದು ವ್ಯಂಗ್ಯ, ಮೊನಚಾದ ಶೈಲಿಯಲ್ಲಿ ಇರುವುದರಿಂದ ಕವಿತೆಗಳು ಧ್ವನಿಪೂರ್ಣ ಅನಿಸುತ್ತವೆ. 'ಅಪ್ಪ ಮತ್ತು ಮಳೆ'ಯಲ್ಲೂ ನೀರಿದೆ, ನೆರೆಯಿದೆ. ಆದರೆ ಕುಡಿಯುವ ನೀರಿಲ್ಲ ಎಂಬಲ್ಲಿ ಅದೇ ವ್ಯಂಗ್ಯದ ವಿಕ್ರಮವಿದೆ. 'ಬುಡ್ಡಿ ದೀಪದ ಬುಡ' ರಚನೆಯು ಹಸಿವು ಮತ್ತು ಅದನ್ನು ಅರಸಿ ಬರುವವರ ಆಹುತಿಯನ್ನು ದಾಖಲಿಸುತ್ತದೆ. ಬೆಳಕನ್ನು ಅರಸಿ ಬರುವ ಕೀಟಗಳು, ಅದರಿಂದಲೇ ಕೊನೆಯಾಗುವಂತೆ ಹಸಿದವರೇ ಹಸಿವಿಗೆ ಆಹಾರವಾಗುವ ಸಾಮಾಜಿಕ ದುರಂತಕ್ಕೆ ಕನ್ನಡಿ ಹಿಡಿಯುತ್ತದೆ. ಹಸಿವು-ಕೀಟ, ಬೆಳಕು-ಭ್ರಮೆಗಳನ್ನು ಸಾಮಾಜೀಕರಣಗೊಳಿಸಲಾಗಿದೆ. ಪರದೆ, ಹೋಟೆಲು, ಕ್ಷಮಿಸು- ಕವಿತೆಗಳು ವೈಯಕ್ತಿಕ ಅಥವಾ ಸ್ವ-ದ ನಿಲುವುಗಳನ್ನು ಸಾಮಾಜಿಕ ನೆಲೆಯಲ್ಲಿಟ್ಟು ಮಂಡಿಸುತ್ತವೆ.

-4-
ಸಂಕಲನದಲ್ಲಿ ಕೆಲವಷ್ಟು ಸಾವಿನ ಬಗೆಗಿನ ಕವಿತೆಗಳಿವೆ. ಇಲ್ಲಿ ಸಾವನ್ನು ಸುಖವಾಗಿ, ಮರುಹುಟ್ಟಾಗಿ, ಬಿಡುಗಡೆಯ ದಾರಿಯಾಗಿ ನೋಡಲಾಗಿದೆ. ಪರಿಸರದ ಭಾಗವಾಗಿ ಬರೆಯುವ ಕಾಜೂರು ಸತೀಶರಿಗೆ 'ಸಾವು ಸಾಮಾಜಿಕತೆಗಿಂತ ಪ್ರಾಕೃತಿಕ ಸ್ಥಿತಿಯಾಗಿ ಕಂಡಿದ್ದೇ ಹೆಚ್ಚು. ಹಣ್ಣಾದ ಎಲೆಯು ಮರದಿಂದ ಉದುರಿ, ಗಾಳಿಯಲ್ಲಿ ತೇಲಿ ತೇಲಿ ಮಣ್ಣಿಗೆ ಬಿದ್ದು ಮಣ್ಣಾಗುವುದನ್ನು ಕವಿಯು 'ಸಾಯ್ವ ಸುಖ' ಎಂದು ವ್ಯಾಖ್ಯಾನಿಸುತ್ತಾನೆ. ಮನುಷ್ಯರ ಕೊನೆಯ ಪಯಣದ ಸಾಂಕೇತಿಕತೆಯನ್ನು 'ಕುರ್ಚಿ'ಯು ನಿವೇದಿಸುತ್ತದೆ. ಅದರ ಎರಡು ಕಾಲುಗಳು ಮನುಷ್ಯರನ್ನು, ನಾಲ್ಕು ಕಾಲುಗಳು ಪ್ರಾಣಿಯನ್ನು ಹೋಲುತ್ತವೆ. ಕವಿತೆಯ ಮೊದಲರ್ಧ ಭಾಗವು ಮನುಷ್ಯ ಮತ್ತು ಕುರ್ಚಿಯನ್ನು ವಿವರಿಸುವಂತೆ ಕಂಡರೂ, ಕೊನೆಯಲ್ಲಿನ 'ನಾಲ್ಕೇ ನಾಲ್ಕು ಕಾಲು/ ಮುಂದೆ ಇಬ್ಬರು, ಹಿಂದೆ ಇಬ್ಬರು' ಎಂಬ ಸಾಲು ಹೊಸ ತಿರುವನ್ನು ಕೊಡುತ್ತದೆ.

'ನನ್ನ ಶವಸಂಸ್ಕಾರದ ದಿನ'ವು ಕವಿಗೆ ಬದುಕಿನಲ್ಲಿ ಹೇಗೋ ಹಾಗೆ ಸಾವಿನಲ್ಲೂ 'ಪ್ರಕೃತಿ'ಯ ಸಾಂಗತ್ಯವನ್ನು ಬಯಸುತ್ತಾನೆ. ಹುಟ್ಟು, ಯೌವನ, ಜೀವನ, ಸಾವು: ಈ ಎಲ್ಲೆಡೆಯಲ್ಲೂ ಕವಿಗೆ ಧ್ಯಾನವೊಂದೇ: ಕಾಡು. ಇಲ್ಲಿ ಸಾವು, ವಿಷಾದತೆ, ಭಯ-ಆತಂಕವಾಗಿ ಕಾಣಿಸದೇ, ಅದೊಂದು ನಿಸರ್ಗದ ಸಹಜ ವಿದ್ಯಮಾನವಾಗಿ ತೋರುತ್ತದೆ. 'ನಾನು ಸತ್ತ ಮೇಲೆ' ಎಂಬ ಗಜಲ್ ವ್ಯಕ್ತಿನಿರಪೇಕ್ಷವಾಗಿ ಸಾವನ್ನು ಮಂಡಿಸುತ್ತದೆ.

'ಯಾರು ರಸ್ತೆ ದಾಟಿಸುತ್ತಾರೆ ನನ್ನ ಕವಿತೆಗಳನ್ನು ನಾನು ಸತ್ತ ಮೇಲೆ
ಯಾರು ಆಸ್ಪತ್ರೆಗೊಯ್ಯುತ್ತಾರೆ ಅವುಗಳನ್ನು ನಾನು ಸತ್ತ ಮೇಲೆ' (ಪು-೬೭)

ಮನುಷ್ಯರ ಜೀವನವು ಹಲವು ಅವಸ್ಥಾಂತರ, ಸಾಮಾಜಿಕ ನಡುವಳಿಕೆಯನ್ನು ದಾಟಿಕೊಂಡು ಸಾವನ್ನು ಸೇರುತ್ತದೆ. ಕವಿ ಸಾವಿನ ನಂತರ ಕವಿತೆಯು ಅನಾಥವಾಗುತ್ತದೆ, ಅಸಹಾಯಕವಾಗುತ್ತದೆ. ತನ್ನ ಗೈರಿನಲ್ಲಿ ಕವಿತೆಯನ್ನು ಕೈಹಿಡಿದು ಮುನ್ನಡಿಸುವವರಾರು? ಎಂಬ ಪ್ರಶ್ನೆಯನ್ನು ಎತ್ತುತ್ತದೆ. ಈ ಕವಿತೆಯು 'ಲೇಖಕನ ಸಾವು' (ಡೆತ್ ಆಫ್ ದಿ ಆಥರ್) ಎನ್ನುವ ರೋಲಾನ್ ಬಾರ್ತೃ ಹೇಳಿಕೆಯನ್ನು ಒಡೆದುಹಾಕುತ್ತದೆ. ಇಲ್ಲಿ ಕವಿತೆಯು ಕವಿಯಂತೆ ಒಂದು ಜೀವ. ತಬ್ಬಲಿಯಾದ ಮಗುವಿಗೆ ಮರುಗುವಂತೆ ಹಳಹಳಿಸುತ್ತಾನೆ. 'ಶವದ ಮನೆ ಮತ್ತು ನೊಣ' ಕವಿತೆಯಲ್ಲಿ ಶವದಿಂದ ದೂರವಾಗುವ ಮಾನವರು ಒಂದೆಡೆಗೆ, ಶವದ ಮೇಲೆ ಕೂತು ಮುತ್ತಿಡುವ ನ
ನೊಣ ಇನ್ನೊಂದೆಡಗೆ ಇದೆ. ಈ ಕವಿತೆಯು ಕವಿಯ ಸೂಕ್ಷ್ಮ ಲೋಕಗ್ರಹಿಕೆಗೆ ನಿಶಾನೆಯನ್ನು ಹಿಡಿದಂತಿದೆ. ಸಾವು ಹುಟ್ಟಿನಂತೆಯೇ ಒಂದು ಸಂಭ್ರಮದ ಸಂಗತಿಯಾಗಿ ಭಾವಿಸಲಾಗಿದೆ.

'ಮತ್ತೆ ಮತ್ತೆ ಹಸಿರು'(ಪು-೧೯), 'ನೋಡಲ್ಲಿ, ನೋಡೀ, ನೋಡು' (-೪೪), 'ಒಂಟೀ ಮರ ನಿಂತೂ ನಿಂತೂ (೫೬), 'ಕಾದೂ ಕಾದೂ ದಣಿದೆ' (-೫೮)- ಇಂತಹ ದ್ವಿರುಕ್ತಿಗಳು ಕವಿತೆಯ ಮೈಮೇಲೆ ಅಲ್ಲಲ್ಲಿ ಕಾಣಿಸುತ್ತವೆ. ಹೀಗೆ ಭಾಷೆಯನ್ನು ಬಳಸುವಲ್ಲಿ ಓದುಗರಿಗೆ ಸ್ಪಷ್ಟಪಡಿಸಲು, ವಿಷಯವನ್ನು ಒತ್ತುಕೊಟ್ಟು ಹೇಳುವ ಆಶಯವಿರುವಂತೆ ತೋರುತ್ತದೆ. ಇಡೀ ಸಂಕಲನದ ಕಾವ್ಯಭಾಷೆ, ವಸ್ತುವಿಷಯ, ಸಂವೇದನೆಯ ನಿವೇದನಾ ಕ್ರಮವು ಹೊಸತನದಿಂದ ಕೂಡಿದೆ. ಒಂದರ್ಥದಲ್ಲಿ ನಿರಾಭರಣ ಸುಂದರಿಯೇ ಸರಿ. ಇಲ್ಲಿನ ಕೆಲವು ಕವಿತೆಗಳು ಹೂ ಬಿಡದ, ಹಣ್ಣು ಕೊಡದ ಹಸಿರಾದ ಮರಗಳಂತಿವೆ. ಆ ಹಸಿರು ಕಾವ್ಯದಲ್ಲಿ (ಗ್ರಿನ್ ಪೊಯಟ್ರಿ) ಕಾಣಬಹುದಾದ ಮಿತಿಗಳಿಗೆ ಹೊದಿಸಿದ ಮುಂಜಾವಿನ ಮಂಜಿನಂತಿದೆ. ವಾಚ್ಯ ಮತ್ತು ಗದ್ಯಮಯ ವಿವರಣೆ, ರಾಜಕಾರಣಿಗಳ ಭಾಷಣ ಶೈಲಿ, ಪ್ರೇಮಸಂಕಲ್ಪದ ವಿಷಾದಮಯ ಹಳಹಳಿಕೆ, ಹೇಳಿಕೆ(ಸ್ಟೇಟ್‌ಮೆಂಟ್) ರೀತಿಯ ನಿರೂಪಣೆಯಿಂದ ಈ ಕವಿತೆಗಳು ಹೊರತಾಗಿವೆ. ಅದಕ್ಕೆ ಮುಖ್ಯ ಕಾರಣ 'ಹಚ್ಚ ಹಸಿರಿನ ಹೃದಯದ ಮನುಷ್ಯರ ನೋಡಬಹುದಿತ್ತು' ಎಂಬ ದಿವ್ಯ ಹಂಬಲವು ಕವಿಯದು, ಕವಿತೆಯದು ಆಗಿರುವುದು.
*


✍️ ಡಾ. ಮಹಾಂತೇಶ ಪಾಟೀಲ


Wednesday, October 22, 2025

ಪಟ

ರಜಾದಿನದಂದು ಹುಡುಗನೊಬ್ಬ ಬೀದಿಬದಿಯಲ್ಲಿ ವ್ಯಾಪಾರ ಮಾಡುತ್ತಿದ್ದ. ಮೇಷ್ಟ್ರು ಅವನ ಪಟ ತೆಗೆದು ಹಂಚಿಕೊಂಡಿದ್ದರು.

ಇದು 'ಮಾನವ ರಕ್ಷಣಾ ಸಂಘ'ದ ಕಣ್ಣಿಗೆ ಬಿತ್ತು. "ಇದು ಅತ್ಯಂತ ಹೇಯವಾದ ಪರಿಸ್ಥಿತಿ... ಹುಡುಗ ವ್ಯಾಪಾರ ಮಾಡುವುದು ತಪ್ಪು'' ಎನ್ನುತ್ತಾ ಆ ಹುಡುಗನನ್ನು ಅವನ ಮನೆಗೆ ಬಿಟ್ಟು, ಪಟ ತೆಗೆದು, ವಿಡಿಯೋ ಮಾಡಿ ಹೊರಟುಹೋದರು.

ಅಜ್ಜಿಯ ಪಿತ್ತ ನೆತ್ತಿಗೇರಿ ''ಅಷ್ಟು ಕಾಳಜಿ ಇದ್ರೆ ದುಡ್ಡು ಕೊಡ್ಬೇಕು, ದುಡಿಯೋದನ್ನ ನಿಲ್ಸೋದಲ್ಲ, ಬಡ್ಡಿ ಮಕ್ಳು'' ಮಲಗಿದ್ದಲ್ಲೇ ಕಿರುಚಲಾರಂಭಿಸಿದಳು.

 ಫೋಟೋದಲ್ಲಿರುವ ಅಪ್ಪ ಏನೂ ತಿಳಿಯದೆ ಸುಮ್ಮನೆ ನೋಡುತ್ತಿದ್ದರು.
*
✍️ ಕಾಜೂರು ಸತೀಶ್

ಸಿಡಿಲು

ಡಿಸೆಂಬರ್ ತಿಂಗಳು. ಇದ್ದಕ್ಕಿದ್ದಂತೆ ಮಳೆ ಸುರಿಯಲಾರಂಭಿಸಿತು.

ತಿಮ್ಮ ಬೈಕು ನಿಲ್ಲಿಸಿ ಮರದ ಕೆಳಗೆ ಬಂದು ನಿಂತ. ವಿಶಾಲವಾಗಿ ಬಾಹುಗಳನ್ನು ಚಾಚಿ ನಿಂತ ಮರ. ಈಗಾಗಲೇ ಇಬ್ಬರು ಅದನ್ನು ಆಶ್ರಯಿಸಿ ನಿಂತಿದ್ದರು.

"ಹೀಗೆ ಮಳೆ ಸುರಿಯುವಾಗ ಮರದ ಕೆಳಗೆ ನಿಲ್ಲಬಾರದು. ಸಿಡಿಲು ಬಡಿದರೆ ಅಪಾಯ ಕಟ್ಟಿಟ್ಟ ಬುತ್ತಿ" ತಾನು ಓದಿದ ಸಂಗತಿಗಳು ತಿಮ್ಮನಲ್ಲಿ ಮಾತಿಗಿಳಿದವು.

"ಎಷ್ಟು ಚಂದದ ಮರ, ಒಂದು ಹನಿ ಕೂಡ ಬೀಳ್ತಿಲ್ಲ" ಆ ಇಬ್ಬರು ಮಾತನಾಡುತ್ತಿದ್ದರು.
"ಇಲ್ಲೇ ಮಲಗಿದ್ರೆ ಹೇಗೆ? " ಯೋಚಿಸುತ್ತಿದ್ದರು.

ಸ್ವಲ್ಪ ಹೊತ್ತಿನ ಅನಂತರ ಮಳೆ ನಿಂತಿತು.

"ಸದ್ಯ ಸಿಡಿಲು ಬಡಿಯಲಿಲ್ಲ'' ತಿಮ್ಮ ಹೇಳಿಕೊಂಡು ಅಲ್ಲಿಂದ ಹೊರಟ.

ಆ ಇಬ್ಬರು ಅಲ್ಲೇ ಕುಳಿತಿದ್ದರು. ಜಗತ್ತನ್ನೇ ಮರೆತ ಹಾಗೆ ಅವ್ಯಕ್ತವಾದ ಸುಖವನ್ನು ಅನುಭವಿಸುತ್ತಿದ್ದರು.

"ಸಿಡಿಲು ಅವರಿಗೆ ಬಡಿಯುವುದಿಲ್ಲ, ಅದೀಗ ನನ್ನ ಎದೆಯೊಳಗೇ ಇರುವ ಹಾಗೆ ಅನ್ನಿಸುತ್ತಿದೆ" ಹೇಳಿಕೊಂಡ ತಿಮ್ಮ.
*

✍️ಕಾಜೂರು ಸತೀಶ್


Sunday, October 19, 2025

ಹೂವು

ಗುಂಡ, ಗಿಡದ ಹೂವುಗಳನ್ನು ಕಿತ್ತು ಫೋಟೋಗಳನ್ನು ಅಲಂಕರಿಸಿದ.

'ಎಷ್ಟು ಚಂದದ ಅಲಂಕಾರ' ಎಂದರು ಬಂದು ಹೋದವರು.
*
ತಿಮ್ಮನ ಸರದಿ ಬಂದಾಗ ಅವನು ಹೂವುಗಳನ್ನು ಗಿಡದಲ್ಲೇ ಉಳಿಸಿದ.

ಹಕ್ಕಿಗಳು ಬಂದವು;ಕಣ್ಣು ತುಂಬಿಕೊಂಡ. ಹಕ್ಕಿಗಳು ಹಾಡಿದವು; ಕಿವಿ ತುಂಬಿಕೊಂಡ.

ಆಮೇಲೆ ಅವನು ಹೂವಾಗಿ ಬಿರಿದ. ಹಕ್ಕಿಯಾಗಿ ಹಾರಿದ. ಪರಿಮಳವಾದ.

'ಇವತ್ತು ಅಲಂಕಾರವೇ ಇಲ್ಲ' ಎಂದರು ಬಂದು ಹೋದವರು.
*
✍️ಕಾಜೂರು ಸತೀಶ್

Thursday, October 16, 2025

ಚೊಂಬು

ರಾಜನಿಗೆ ತನ್ನ ಪ್ರಜೆಗಳ ವಿವರವನ್ನು ತಿಳಿಯುವ ಕುತೂಹಲ ಉಂಟಾಗಿ ಮಂತ್ರಿಗಳಿಗೆ ಆ ಕಾರ್ಯವನ್ನು ವಹಿಸಿದನು. ಹೀಗೆ ಮಾಡುವುದರಿಂದ ಅವನ ವರ್ಚಸ್ಸು ಹೆಚ್ಚುವುದೆಂದು ಆಸ್ಥಾನದ ಪಂಡಿತರು ಹೇಳಿದ್ದರು.

ಪ್ರತೀ ಮನೆಯಲ್ಲಿರುವ ಕೋಣೆಗಳ ಸಂಖ್ಯೆ, ಜನರ ಸಂಖ್ಯೆ, ಅವರ ಬಣ್ಣ, ಎತ್ತರ, ತೂಕ, ಕೂಡಿಟ್ಟಿರುವ ಆಭರಣಗಳು, ಶಸ್ತ್ರಾಸ್ತ್ರ, ಪಡೆದ ವಿದ್ಯೆ, ಕುದುರೆಗಳ ಸಂಖ್ಯೆ, ಭಾಗಿಯಾಗಿರುವ ಯುದ್ಧಗಳ ಸಂಖ್ಯೆ, ರಾಜನಿಂದ ಬಂದಿರುವ ಆಸ್ತಿ, ಬೆಳೆದ ಬೆಳೆಗಳು, ರಾಜನಿಗೆ ಪಾವತಿಸಿದ ಕಂದಾಯ... ಹೀಗೆ ತಾವೇ ಎಲೆಗಳನ್ನು ಸಂಗ್ರಹಿಸಿ ಅದರಲ್ಲಿ ದಾಖಲಿಸಲು ರಾಜ ಆಜ್ಞೆ ಮಾಡಿದನು. 'ಒಂದು ಮನೆಗೆ ಒಂದು ಚೊಂಬು' ಎಂಬ ಆಸೆಯನ್ನು ಮಂತ್ರಿಗಳಲ್ಲಿ ಹುಟ್ಟಿಸಿದನು.

ಚೊಂಬಿನ ಆಸೆಗಾಗಿ ಕೆಲವು ಮಂತ್ರಿಗಳು ತಮಗೆ ಸಿಕ್ಕಿದ ಮನೆಗಳಿಗೆ ನುಗ್ಗಿ ಮಾಹಿತಿ ಬರೆದುಕೊಂಡರು. "ಚೊಂಬು ಸಿಗದಿದ್ದರೂ ಸರಿ ನಮಗೆ ಈ ಕೆಲಸ ಬೇಕಿರಲಿಲ್ಲ" ಎಂದು ಹಲವು ಮಂತ್ರಿಗಳು ಅಂದುಕೊಂಡರು. ಆದರೂ ಮರಣದಂಡನೆಯ ಭಯದಿಂದ ಕೆಲಸದಲ್ಲಿ ನಿರತರಾದರು.

ಸುದ್ದಿ ತಿಳಿದ ಮನೆಮಂದಿಯವರು ತಮ್ಮ ಆಭರಣ-ಶಸ್ತ್ರಾಸ್ತ್ರಗಳನ್ನೆಲ್ಲ ಅಡಗಿಸಿಟ್ಟರು. ತಮ್ಮ ಬಳಿ ಇರುವ ಕುದುರೆಗಳನ್ನು ಯಾರ ಕಣ್ಣಿಗೂ ಬೀಳದಂತೆ ನೋಡಿಕೊಂಡರು. ಹೇಗೋ, ಬಂದ ಮಂತ್ರಿಗಳಿಗೆ ಅಲ್ಪ ಸ್ವಲ್ಪ ಮಾಹಿತಿ ಕೊಟ್ಟು ಕಳುಹಿಸಿದರು. ಬಾಯಿಗೆ ಬಂದಂತೆ ಮಂತ್ರಿಗಳನ್ನು ನಿಂದಿಸಿದರು. 

ಗುಪ್ತಚರರು ಮರದ ಕೆಳಗೆ ಕುಳಿತು ಕತ್ತಲಾದ ಮೇಲೆ ಮನೆಗೆ ತೆರಳಿದರು

ಹೋದ ಮನೆಗೇ ಹತ್ತಾರು ಮಂತ್ರಿಗಳು ಹೋದರು. ಮೊದಲು ಹೋದವರಿಗೆ ಅದೃಷ್ಟ. ಕೆಲವರು "ಈಗಷ್ಟೇ ಬಂದು ಹೋದರು" ಎಂದು ಸುಳ್ಳು ಹೇಳಿದರು.

ಹೀಗೆ ತಿಂಗಳು ಕಳೆದರೂ ಎಲ್ಲಾ ಮನೆಗಳಿಗೆ ಭೇಟಿ ನೀಡಲು ಸಾಧ್ಯವಾಗದೆ ಇರುವುದರಿಂದ ಕೆಂಡಾಮಂಡಲನಾದ ರಾಜನು ಕೆಲವು ಮಂತ್ರಿಗಳನ್ನು ಕೆಲಸದಿಂದ ವಜಾ ಮಾಡಿದನು. ಕೆಲವರಿಗೆ ಗಲ್ಲುಶಿಕ್ಷೆ ವಿಧಿಸಿದನು. ಬಿಟ್ಟುಹೋದ ಮನೆಗಳನ್ನು ಹುಡುಕಿ ಮಾಹಿತಿ ಕಲೆಹಾಕಲು ಮತ್ತೆ ಆಜ್ಞಾಪಿಸಿದನು.

ಕೆಲವು ಮಂತ್ರಿಗಳು ಬಿದ್ದು ತಲೆಯೊಡೆದುಕೊಂಡರು. ಕೆಲವರು ಕೈ ಕಾಲು ಮುರಿದುಕೊಂಡರು, ಕೆಲವರನ್ನು ಕಾಡಾನೆ ಸಾಯಿಸಿತು. ಕೆಲವರು ಕೆರೆಗೆ ಹಾರಿ ಸತ್ತರು.

ಆದರೂ ಛಲಬಿಡದ ರಾಜ ಎಲ್ಲಾ ಮನೆಗೂ ಹೋಗಿ ವಿವರಗಳನ್ನು ಬರೆದು ತರಲು ಕಟ್ಟಪ್ಪಣೆ ವಿಧಿಸಿದನು.

ಒಂದು ಮನೆಯ ಪ್ರತೀ ಸದಸ್ಯರನ್ನು ಒಂದೊಂದು ಮನೆ ಎಂದು ಸುಳ್ಳು ವರದಿ ನೀಡಿ ಮನೆಗಳ ಸಂಖ್ಯೆಯನ್ನು ಹೆಚ್ಚಿಸಿಕೊಂಡ ಮಂತ್ರಿಗಳಿಗೆ ಬಡ್ತಿ ನೀಡಲಾಯಿತು.

ಅನ್ನ ನೀರು ಇಲ್ಲದೆ ನಿರಂತರವಾಗಿ ಸುತ್ತಿ ಸುತ್ತಿ ಬಸವಳಿದ ಮಂತ್ರಿಗಳು ನರಪೇತಲರಂತೆ ಕಾಣಿಸತೊಡಗಿದರು. ಕುಳ್ಳಗಿದ್ದ ಮಂತ್ರಿಯೊಬ್ಬನನ್ನು ಆಟಿಕೆ ಎಂದುಕೊಂಡ ಮಗುವೊಂದು ತನಗೆ "ಆಟಿಕೆ ಬೇಕೂ..ಊಊ.." ಎಂದು ರಚ್ಚೆ ಹಿಡಿಯಿತು.
*
ಇದೆಲ್ಲವನ್ನು ನೋಡುತ್ತಿದ್ದ ಅರಮನೆಯಲ್ಲಿ ಕಸಗುಡಿಸುವ ತಿಮ್ಮ ಯೋಚಿಸಿದ:" ಒಬ್ಬೊಬ್ಬರಿಗೆ ಒಂದೊಂದು ಊರು, ಒಂದು ಗಡಿ, ಮನೆಯ ಯಜಮಾನನ ಹೆಸರು ಕೊಟ್ಟು ಏನು ಮಾಡಬೇಕೆಂದು ಹೇಳಿ ಕಳಿಸಿಬಿಟ್ಟಿದ್ದರೆ ಒಂದು ವಾರದಲ್ಲಿ ಈ ಕೆಲಸ ಮುಗಿಯುತ್ತಿತ್ತು. "

ಆದರೆ, ಅವನು ಕಸಗುಡಿಸುವ ಕೆಲಸದವನಾದ್ದರಿಂದ ಹಾಗೆ ಜೋರಾಗಿ ಹೇಳುವ ಸ್ವಾತಂತ್ರ್ಯ ಅವನಿಗಿರಲಿಲ್ಲ.
*
✍️ಕಾಜೂರು ಸತೀಶ್


Wednesday, October 15, 2025

ನೆಲ

ಗುಂಡ ಓದಿನಲ್ಲಿ ದಡ್ಡ. ಎಷ್ಟು ಹೇಳಿದರೂ ಅವನಿಗೆ ಅರ್ಥವಾಗುತ್ತಿರಲಿಲ್ಲ.

ಅವನ ಅಕ್ಕ ತಿಮ್ಮಿ ಬುದ್ಧಿವಂತೆ. ಮನೆಯ ಕೆಲಸಗಳನ್ನು ಮಾಡುತ್ತಲೇ ತರಗತಿಯಲ್ಲಿ ಸದಾ ಮುಂದೆ ಇದ್ದಳು.

ತಿಮ್ಮಿಯನ್ನು ಕಾಲೇಜು ಬಿಡಿಸಿ ಕೂಲಿ ಕೆಲಸಕ್ಕೆ ಹಾಕಿದರು.

ಗುಂಡ ಹೇಗೋ ಓದಿ ಮುಂದೆ ನಾಗರಿಕ ಸೇವೆಯ ಹುದ್ದೆಯನ್ನು ಗಿಟ್ಟಿಸಿಕೊಂಡ. ಆಗಲೂ ತಪ್ಪಿಲ್ಲದೆ ಓದಲು, ಬರೆಯಲು ಅವನು ಕಲಿತಿರಲಿಲ್ಲ. ಅವನಿಗೆ ಏಸಿ ಕೊಠಡಿ ಅಷ್ಟಾಗಿ ಒಗ್ಗುತ್ತಿರಲಿಲ್ಲವಾದರೂ ಅಲ್ಲಿಯೇ ಹಲವು ಯೋಜನೆಗಳನ್ನು ರೂಪಿಸುತ್ತಿದ್ದ.

ತಿಮ್ಮಿ ಪುಸ್ತಕ ಓದುವುದನ್ನೇ ನಿಲ್ಲಿಸಿದಳು. ಕೂಲಿ ಕೆಲಸ ಮಾಡುತ್ತಲೇ ಸತ್ತುಹೋದಳು.

ಸಹಿ ಮಾಡಲು ಹಸಿರು ಪೆನ್ನನ್ನು ಬಳಸುವುದನ್ನು ಬಿಟ್ಟರೆ ಗುಂಡನೂ ಓದುವುದನ್ನು ನಿಲ್ಲಿಸಿದ.

ಹತ್ತು ಪದವಿಗಳನ್ನು ಪಡೆದಿದ್ದ ನೆರೆಮನೆಯ ತಿಮ್ಮ ವಿದೇಶದಲ್ಲಿ ಹೋಟೆಲ್ ಕೆಲಸಕ್ಕೆ ಸೇರಲು ಸಿದ್ಧತೆ ನಡೆಸುತ್ತಿದ್ದ.
*
✍️ ಕಾಜೂರು ಸತೀಶ್

Friday, October 10, 2025

ಹುಡುಗಿ ಮತ್ತು ಸನ್ಯಾಸಿ

ಸನ್ಯಾಸಿಗೆ ಹುಡುಗಿಯೊಬ್ಬಳು ಎದುರಾದಳು. ಅವಳು ಅಪಾರ ದುಃಖದಲ್ಲಿದ್ದಳು. ತನ್ನ ದುಃಖವನ್ನು ನಿತ್ಯ ಸನ್ಯಾಸಿಯಲ್ಲಿ ಹೇಳುತ್ತಾ ಹಗುರಾಗುತ್ತಿದ್ದಳು. ಸನ್ಯಾಸಿ ಧ್ಯಾನದಲ್ಲಿ ನಿರತನಾಗಿದ್ದಾಗಲೂ ಅವಳು ಬಂದು ತನ್ನ ದುಃಖವನ್ನು ನಿವೇದಿಸುತ್ತಿದ್ದಳು.

ತಾನು, "ದುಃಖಿತನಾದ ಕಾರಣದಿಂದಲೇ ಸನ್ಯಾಸಿಯಾಗಿದ್ದು"ಎಂದರೆ ''ನಿನಗೇನು ದುಃಖ'' ಎಂದು ತನ್ನ ದುಃಖವನ್ನು ಹೇಳಿಕೊಳ್ಳುತ್ತಿದ್ದಳು. ಅವನು ಧ್ಯಾನದಲ್ಲಿ ನಿರತನಾದರೆ ಇವಳು ಜೋರಾಗಿ ಅಳುತ್ತಿದ್ದಳು. 'ನಿಮಗೆಲ್ಲ ನಮ್ಮ ಕಷ್ಟ ಅರ್ಥವಾಗುವುದಿಲ್ಲ' ಎನ್ನುತ್ತಿದ್ದಳು.

ಧ್ಯಾನರಹಿತ ಸ್ಥಿತಿಯಿಂದಲೂ ಏಕಾಂತದ ಕೊರತೆಯಿಂದಲೂ ಸನ್ಯಾಸಿಯು ಮತ್ತಷ್ಟೂ ದುಃಖಿತನಾದ. ಆದರೆ ಸನ್ಯಾಸಿಯಾದ ಕಾರಣ ತನ್ನ ದುಃಖವನ್ನು ಯಾರೊಂದಿಗೂ ಹೇಳಿಕೊಳ್ಳಲಿಲ್ಲ.

ಸನ್ಯಾಸಿ ಸಿಕ್ಕ ಮೇಲೆ ಹುಡುಗಿ ಗೆಲುವಾದಳು.
*

✍️ಕಾಜೂರು ಸತೀಶ್

Thursday, October 9, 2025

ನನ್ನಲ್ಲಿ ಇರದ ಒಳ್ಳೆಯತನ...

ದಿನಾಂಕ 30/07/2025.
ನಮ್ಮೂರು ವಿದ್ಯುತ್ ಕಾಣದೆ ಎಂಟನೇ ದಿನದ ಸಂಭ್ರಮದಲ್ಲಿದ್ದಾಗ ಮೊಬೈಲ್ ಚಾರ್ಜ್ ಮಾಡಲೆಂದು ಕೂಡಿಗೆಗೆ ತೆರಳಿದ್ದೆ. ಚಾರ್ಜ್ ಮಾಡಿ ಹೊರಬಂದಾಗ ನನ್ನ ಕೈಜಾರಿದ ಚಾರ್ಜರ್ ರಸ್ತೆಯ ಕೆಸರಿನಲ್ಲಿ ಮುಳುಗಿತು. ಅದನ್ನು ಎತ್ತಿಕೊಳ್ಳುವುದನ್ನೇ ನೋಡುತ್ತಿದ್ದ ಆಟೋ ಡ್ರೈವರ್ ಒಬ್ಬರು ತಾವು ಕುಡಿಯಲು ಇಟ್ಟಿದ್ದ ನೀರನ್ನೇ ನೀಡಿ ಚಾರ್ಜರಿನ ಕೆಸರನ್ನು ತೊಳೆಯಲು ಸಹಕರಿಸಿದರು(ನನ್ನೊಳಗಿನ ಕೆಸರನ್ನೂ).
*
ಆ ಡ್ರೈವರಿನ ಜಾಗದಲ್ಲಿ ನಾನಿದ್ದಿದ್ದರೆ ಖಂಡಿತವಾಗಿಯೂ ಕುಡಿಯಲು ಇಟ್ಟಿದ್ದ ನೀರನ್ನು ಕೊಡುತ್ತಿರಲಿಲ್ಲ. ನಾನು 'ಬೇಡ' ಎಂದಾಗಲೂ ಮತ್ತೆ ಒತ್ತಾಯಿಸಿದ ಆ ಮುಖ ಈಗ ನನ್ನೊಳಗೆ save ಆಗಿದೆ. ಇನ್ನು ಆ ದಾರಿಯಲ್ಲಿ ಕ್ರಮಿಸುವಾಗಲೆಲ್ಲ ಅದೇ ಮುಖಕ್ಕಾಗಿ ಕಣ್ಣುಗಳು ಹುಡುಕತೊಡಗುತ್ತವೆ.
*
ಸಣ್ಣ ಸಣ್ಣ ಸಂಗತಿಗಳು ಹೇಗೆಲ್ಲಾ ಕಾಡುತ್ತವೆ, ಎಷ್ಟೆಲ್ಲಾ ಕಲಿಸುತ್ತವೆ, ಸದಾ ಡವಗುಟ್ಟುತ್ತಲೇ ಇರುವ ಈ ಪುಟ್ಟ ಹೃದಯದ ಭಾರವನ್ನು ಹೇಗೆಲ್ಲಾ ಹೆಚ್ಚಿಸುತ್ತಲೇ ಇರುತ್ತವೆ ಅಲ್ಲವೇ?
ಇದೊಂದು ಸೋಜಿಗ.
**

✍️ ಕಾಜೂರು ಸತೀಶ್

Wednesday, October 8, 2025

ಒಂದು ಕ್ರೌರ್ಯವನ್ನು ನೆನೆದು...

ಜಗತ್ತು ಎಷ್ಟು ಭಯಾನಕವಾಗಿದೆ ಎಂಬುದಕ್ಕೆ ಇಂದಿನ ಘಟನೆಯೂ ಸೇರ್ಪಡೆಗೊಂಡಿತು.

ಈ ಮಧ್ಯಾಹ್ನ ನನಗೊಂದು ಕರೆ ಬಂದಿತು. ವೃತ್ತಿ ಸಂಬಂಧಿತ ಕರೆ ಅದು. 'ಈಗ ಬರಬಹುದಾ?' ಎಂದಾಗ 'ನಾಳೆ' ಎಂದು ಮೊದಲು ಹೇಳಿದೆನಾದರೂ ಆಮೇಲೆ ಒಪ್ಪಿಕೊಂಡು ಹೊರಟೆ. ಹೊರಟುಹೋಗುತ್ತಿರುವಾಗಲೂ ಕರೆಮಾಡಿದೆ. 'ಊಟ ಮಾಡಿ ಬರುವೆ' ಎಂದಿತು.

ಸುಮಾರು ಮೂರು ಗಂಟೆಗಳಷ್ಟು ಕಾದೆ. ಈ ನಡುವೆ ಮೂರು ಬಾರಿ ಕರೆ ಮಾಡಲಾಗಿ ಅದರಲ್ಲಿ ಒಮ್ಮೆ ಕರೆ ಸ್ವೀಕೃತಗೊಂಡು 'ಇನ್ನೇನು ಬರುವೆ' ಎಂದಿತು! ಒಂದು ಸಂದೇಶವನ್ನೂ ಎಸೆದೆ; ಅದೂ 'ಅದರ' ಕಣ್ಣಿನ ಕಸದಬುಟ್ಟಿ ಸೇರಿತು.

ಆಮೇಲೆ 'ಅದು' ಬರಲಿಲ್ಲ. ನಾನು ಮನೆಗೆ ಹಿಂತಿರುಗಿದೆ.
*
ನಾನು ಹಿಂತಿರುಗಿ ಒಂದು ಗಂಟೆ ಕಳೆದರೂ ಅತ್ತಲಿಂದ ಒಂದು ಎಲೆಯಲುಗುವಷ್ಟಾದರೂ ಸದ್ದು ಕೇಳಿಸಲಿಲ್ಲ. 'ನನಗಾಗಿ ಕಾದವನು ಏನಾದ' ( ಅದು ನನ್ನ ಕೆಲಸ ಅಲ್ಲ ಎನ್ನುವುದು ಒತ್ತಟ್ಟಿಗಿರಲಿ! )ಎಂಬ ಕನಿಷ್ಟ ಮನುಷ್ಯಪ್ರಜ್ಞೆಯೂ ಅದಕ್ಕಿಲ್ಲವಲ್ಲ ಎಂಬ ಭಯಾನಕ ಸ್ಥಿತಿಯ ಬಗ್ಗೆ ನೆನೆದು ನಾನೀಗ ಮರುಗುತ್ತಿರುವೆ.
*
ಈಗ ಹೊರಗಡೆ ಗುಡುಗಿನ ಸದ್ದು ಕೇಳಿಸುತ್ತಿದೆ. ನನ್ನೊಳಗೂ ಅದೇ ಸದ್ದು! ಹೀಗೆ ಬರೆಯುತ್ತಿರುವ ಈ ಶಬ್ದಗಳಲ್ಲಿ ಗುಡುಗು ಅಡಗಿದೆಯೋ ನಾನರಿಯೆ..
*
✍️ಕಾಜೂರು ಸತೀಶ್

Saturday, October 4, 2025

ಗುಂಡಿ

ಗುಂಡ ರಸ್ತೆಯ ಗುಂಡಿಯಲ್ಲಿ ಹೂತುಹೋದ. ಅವನ ಸಹೋದರ ತಿಮ್ಮ "ನನ್ನ ತಮ್ಮನನ್ನು ಎತ್ತಲು ಸಹಕರಿಸಿ" ಎಂದು ಗೋಗರೆದ. ಯಾರೂ ಬರಲಿಲ್ಲವಾದ್ದರಿಂದ ಗುಂಡ ಸತ್ತುಹೋದ.

'ರಾಜನಿಗೆ ಇದು ಮುಜುಗರದ ವಿಷಯ' ಎಂದು ಹಲವರು ಮಾತನಾಡಿಕೊಂಡರು. ಇದು ರಾಜನ ಕಿವಿಗೂ ಬಿದ್ದ ಕಾರಣ ರಾಜ ಹೆಲಿಕಾಪ್ಟರ್ ನಲ್ಲಿ ಬಂದು ಘಟನಾ ಸ್ಥಳವನ್ನು ವೀಕ್ಷಿಸಿ ಹೋದ.
*
ಕಾಜೂರು ಸತೀಶ್

Tuesday, September 9, 2025

ನಿನ್ನೊಡಲಿನಲ್ಲಿ

ಪುಸ್ತಕದ ಒಳಗೆ ಭದ್ರವಾಗಿ ಬದುಕಿಕೊಂಡಿತ್ತು ನನ್ನೀ ಕವಿತೆ. ಇಪ್ಪತ್ತು ವರ್ಷಗಳ ಹಿಂದೆ, ನಾನು ವಿದ್ಯಾರ್ಥಿಯಾಗಿದ್ದಾಗ ಹುಟ್ಟಿದ್ದು . ಪತ್ರಿಕೆಗೆ ಕಳುಹಿಸಲು ಟೈಪ್ ರೈಟರಿನಲ್ಲಿ ಟೈಪು ಮಾಡಿಸಿ ಇಟ್ಟಿದ್ದೆ. ಅದರ ಛಾಯಾ ಪ್ರತಿಯನ್ನು ಸ್ಥಳೀಯ ಪತ್ರಿಕೆಯೊಂದಕ್ಕೆ ಕಳಿಸಿದ್ದೆ.ಅದು ಪ್ರಕಟವಾಗಲಿಲ್ಲ ಅನ್ನೋದು ನನಗೀಗ ಖುಷಿಯ ಸಂಗತಿ! (ಆದರೆ ಆಗ ಬೇಸರವಾಗಿತ್ತು!)

ಈ ಕವಿತೆಯಲ್ಲಿ ಮಾತು ಹೆಚ್ಚಿದೆ.  ಹೊಸ ನುಡಿಚಿತ್ರಗಳನ್ನು ಕಟ್ಟುವ ಹಂಬಲವಿದ್ದರೂ ಪೂರ್ವಸೂರಿಗಳ ನೆರಳಿದೆ. ಈಗ ನಾನು ಮೂರ್ನಾಲ್ಕು ಸಾಲುಗಳಲ್ಲಿ ಇದೇ ಅರ್ಥವನ್ನು ಹೆಣೆಯಬಹುದಾದ/ ಹೊಳೆಯಿಸಬಹುದಾದ ಈ ಕವಿತೆ ನನಗೆ ಹೊಸ ಭರವಸೆಯನ್ನೂ, ಅಧ್ಯಯನಕ್ಕೆ ಮುನ್ನುಡಿಯನ್ನೂ ಒದಗಿಸಿದ್ದಂತೂ ಸತ್ಯ.
*


 

ನಿನ್ನೊಡಲಿನಲ್ಲಿ
-----------------------

ನಿನ್ನ ಮೌನ ಸಾಮ್ರಾಜ್ಯದ ತುಂಬ ನಿತ್ಯ ಪರ್ವ
ಗರಿಬಿಚ್ಚಿ ಚಿಗಿಯುತಿದೆ ಹಸಿರು ಸೀರೆಯ ನೀರೆ
ಎದೆಯೊಳಗವಿತು ಹರಿದರೇನು ವೈತರಣಿಯ ನೆತ್ತರ ಧಾರೆ?
ಧಾರಣದ ಹಾಲುಮೊಗದಿ ನಲಿಯುತಿದೆ ಬೆರಗಿನ ಕೋಟಿ ತಾರೆ.

ಅರಿವಿನ ಝಳಪಿನಲಿ ಇರುಳು ಕ್ಷಯಿಸುವ ಹಾಗೆ
ಬೂರುಗ, ಮುತ್ತುಗದ ಸಾಲುದೀಪದ ಹೊಳಪಿಗೆ
ಸಕಲ ಕಣ್ಣ ಇರುಳ ತೆರೆಹರಿದು ಹೃದಯಸುಮ ಬಿರಿದು ದುಂಬಿಗಳ ಕರೆದು
ನೆನಪಿನಾಳದ ಬಿರುಕುಗಳೆಲ್ಲಾ ಬಿಗಿದು
ಚಿತ್ರ-ವಿಚಿತ್ರ ಸ್ವಪ್ನಗಳಾಗುತ್ತವೆ!

ನಿನ್ನುಸಿರ ಮಂದಾನಿಲದ ಸ್ಪರ್ಶಕೆ
ಈ ಲೇಖನಿ, ಕೋಟಿ ಉದರವಿರದ ಹಸುಳೆಗಳು ನಿದ್ರಿಸುತ್ತವೆ
ಒಮ್ಮೊಮ್ಮೆ ಉಸಿರು ಮಂದ್ರವಾಗಿ ಮೈಕೊಡವಿದಾಗ
ಜೀವಜಾಲ ನಿರ್ಲಿಪ್ತಗೊಳ್ಳುತ್ತದೆ
ಎದೆಯ ಮಬ್ಬು ಕರಗಿ ವಿಮಲ ದೀಪಗಳುರಿಯುತ್ತವೆ.

ಬೇಡ ತಾಯೇ, ಬೇಡ ಗುರುವೇ
ನಿನ್ನೊಡಲಿನಲ್ಲಿ ಬೋಧಿವೃಕ್ಷವಾಗುವುದು ಬೇಡ
ಒಂದು ಕಿರು ಮಿಂಚುಹುಳುವಾದರೂ ಸರಿಯೆ
ಹೆಸರಿರದ ಬಾಂದಳದ ಚುಕ್ಕಿಯಂತೆ
ನನ್ನದೇ ಬೆಳಕಿನಲಿ ಬದುಕಲವಕಾಶ ನೀಡು.
*

✍️ಕಾಜೂರು ಸತೀಶ್

Monday, September 8, 2025

ಒಂದು ಫೋನ್ ಕರೆ ಮತ್ತು...

ಮೂರು ವರ್ಷಗಳ ಹಿಂದೆ ಒಂದು ಸಂಜೆ ನನಗೆ ಕರೆಮಾಡಿ ತಮ್ಮನ್ನು ಪರಿಚಯಿಸಿಕೊಂಡು 'ಸತೀಶ್ ನಿಮ್ಮ ಪುಸ್ತಕ ಓದಿದೆ...' ಎನ್ನುತ್ತಾ ಮಾತಿಗಿಳಿದರು. ನೋವಿನ ಆಳಬಾವಿಯಿಂದ ಪ್ರತಿಧ್ವನಿಸುತ್ತಿದೆಯೇನೋ ಎಂಬಂತಿದ್ದವು ಅವರ ಮಾತುಗಳು. ನಡುನಡುವೆ ಜೀವವನ್ನು ಹಿಸುಕುತ್ತಿವೆಯೇನೋ ಎಂಬಂಥ ಕೆಮ್ಮು.

ಕವಿತೆ ಹೇಗಿರಬೇಕು ಎಂಬುವುದರ ಕುರಿತು ಹೇಳುತ್ತಾ 'ನಾವು ಏನು ಹೇಳುತ್ತಿದ್ದೇವೆ ಎಂಬ ಖಚಿತತೆ ಬರೆಯುವವರಿಗೇ ಇಲ್ಲದಿದ್ದಾಗ ದೊಡ್ಡ ದೊಡ್ಡ ಉಪಮೆ ಪ್ರತಿಮೆಗಳೆಲ್ಲ ಸೊರಗುತ್ತವೆ' ಎಂದರು. ಅದನ್ನು ಪುಷ್ಟೀಕರಿಸಲು ತಾವು ಓದಿದ ಕವನ ಸಂಕಲನವನ್ನು ಉದಾಹರಿಸಿದ್ದರು.


ಸರ್ಕಾರಿ ಕೆಲಸ ದಕ್ಕದಿರುವುದು, ಮದುವೆಯಾಗದಿರುವುದು ಮತ್ತು ಅನಾರೋಗ್ಯ- ಈ ಮೂರೂ ಅವರನ್ನು ಹಸಿಹಸಿ ತಿಂದುಹಾಕಿದ್ದವು. ಖಾಸಗಿ ಸಂಸ್ಥೆಯಲ್ಲಿ ಇಂಗ್ಲಿಷ್ ವಿಷಯವನ್ನು ಬೋಧಿಸುತ್ತಾ ಪ್ರಾಂಶುಪಾಲರ ಹುದ್ದೆಯನ್ನು ನಿರ್ವಹಿಸಿ ಕಡೆಗೆ ಸರಿಯಾದ ಸಂಬಳ ದೊರೆಯದೆ, ಪ್ರಶ್ನಿಸಿದಕ್ಕಾಗಿ ಕೆಲಸವನ್ನೂ ಕಳೆದುಕೊಂಡು, ಒಂದಷ್ಟು ವರ್ಷ ವಕೀಲರಾಗಿ ದುಡಿದು ಕೊನೆಗೆ ಎಲ್ಲವನ್ನೂ ತೊರೆದು ಸಹೋದರಿಯೊಂದಿಗೆ ಬದುಕುತ್ತಿರುವ ಕಥೆಯನ್ನು ವಿಷಾದದಿಂದಲೇ ಹೇಳಿಕೊಂಡಿದ್ದರು.


ಅವರು ನನ್ನ ಕೃತಿಯ ಬಗ್ಗೆ ಮಾತನಾಡಿದ್ದು ನನಗೆ ಮುಖ್ಯವೆನಿಸಲೇ ಇಲ್ಲ. ಅವರ ಧ್ವನಿಯ ಕಂಪನಾಂಕದ ದುಃಖಭರಿತ ಕಂಪನಗಳಷ್ಟೇ ನನ್ನೊಳಗೆ ರಿಂಗಣಿಸತೊಡಗಿದ್ದು.

ಆ ಮಾತುಗಳು ನನ್ನ ಕಿವಿಯಿಂದ ಇನ್ನೂ ತಪ್ಪಿಸಿಕೊಂಡಿರಲಿಲ್ಲ- ತಿಂಗಳು ಕೂಡ ಕಂತಿರಲಿಲ್ಲ - ಒಂದು ಮುಂಜಾವ ಎಂದಿನಂತೆ ಪ್ರಜಾವಾಣಿ ಓದುತ್ತಿದ್ದಾಗ ಕಸ್ತೂರಿ ಬಾಯರಿ ಎಂಬ ಆ ಲೇಖಕಿಯ ನಿಧನದ ಕುರಿತು ಸುದ್ದಿ ಓದಿದೆ!
*


ನಿನ್ನೆ ಮುದೋಳದಿಂದ ಒಂದು ಕರೆ ಬಂದಿತ್ತು. ಹಿರಿಯರಾದ ಮಲ್ಲಿಕಾರ್ಜುನ ಹೆಗ್ಗಳಗಿ ಸರ್ ಕರೆ ಮಾಡಿ 'ಸಂಗಾತ'ದಲ್ಲಿ ಪ್ರಕಟಗೊಂಡ ನನ್ನ ಮಿನಿಕತೆಗಳ ಕುರಿತು ಮಾತನಾಡಿದರು. ಅವರ ಪ್ರೊಫೈಲ್ ಹುಡುಕುತ್ತಿದ್ದಾಗ ಕಸ್ತೂರಿ ಬಾಯರಿ ಅವರ ಕುರಿತು ಬರೆದ ಲೇಖನವೊಂದು ಕಾಣಿಸಿತು- ಇದೆಲ್ಲ ನೆನಪಾಯಿತು.


ಸಂಗಾತ ಪುಸ್ತಕವು ಕಸ್ತೂರಿ ಬಾಯರಿಯವರ ಸಮಗ್ರ ಕಥೆಗಳನ್ನು ಪ್ರಕಟಿಸಿದೆ. ನನ್ನ ಕೃತಿಯನ್ನು ಪ್ರಕಟಿಸಿದ್ದ ಸಂಗಾತ ಇಂತಹ ನೆನಪುಗಳಿಗೆ ಕಾರಣವಾಗಿದೆ. ಸಂಗಾತದ ಟಿ ಎಸ್ ಗೊರವರ ಇಂತಹ ನೆನಪುಗಳಿಗೆ ಸೇತುವೆಯಾಗಿದ್ದಾರೆ.
*

✍️ ಕಾಜೂರು ಸತೀಶ್

Friday, September 5, 2025

ಮಿಲ್ಲಿ ಮೇಡಂ

ನಾನು ಹತ್ತನೇ ತರಗತಿಯ ಪರೀಕ್ಷೆ ಬರೆಯಲು OLV ಶಾಲೆಗೆ ತೆರಳಿದ್ದಾಗ, ಅಲ್ಲಿ ಪರೀಕ್ಷಾ ಅಧೀಕ್ಷಕರಾಗಿದ್ದವರು ಮಿಲ್ಲಿ ಮೇಡಂ. ಅಲ್ಲಿಯೇ ನಾನವರನ್ನು ಮೊದಲ ಬಾರಿಗೆ ನೋಡಿದ್ದು.  ಮತ್ತೆ ಅವರನ್ನು ಭೇಟಿಯಾಗಿದ್ದು ವಿಶ್ವಮಾನವ ಕುವೆಂಪು ವಿದ್ಯಾಸಂಸ್ಥೆಯಲ್ಲಿ. ಈ ನಡುವೆ ಹಲವು ವರ್ಷಗಳೇ ಸಂದುಹೋಗಿದ್ದವು.




ಮಿಲ್ಲಿ ಮೇಡಂ ಎಂದೇ ಜನಪ್ರಿಯರಾಗಿರುವ ಮಿಲ್ಡ್ರೆಡ್ ಗೋನ್ಸಾಲ್ವೆಸ್ ಮೇಡಂ ಅವರಿಗೆ ಅರ್ಧಶತಮಾನದಷ್ಟು  ಸೇವಾನುಭವವಿದೆ. ಅದರಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಅವಧಿಯೇ ಹೆಚ್ಚು. ಯಶಸ್ವಿ ಆಡಳಿತಗಾರರ ಲಕ್ಷಣವನ್ನು ಅವರಿಂದ ನೋಡಿ ಕಲಿಯುವಷ್ಟು ಮಾಗಿದ ಜೀವನಾನುಭವ ಅವರಲ್ಲಿದೆ. ವಿವಿಧ ಬಗೆಯ ಸಿಬ್ಬಂದಿಯನ್ನು, ಅಧಿಕಾರಿಗಳನ್ನು, ಪೋಷಕರನ್ನು ನಿಭಾಯಿಸುವ ಚಾಕಚಕ್ಯತೆಯಿದೆ.  ಸಮರ್ಥ ನಾಯಕರಿಗಿರಬೇಕಾದ- ನಿರ್ಧಾರ ಕೈಗೊಳ್ಳುವಿಕೆ, ಸ್ಮರಣಶಕ್ತಿ, ನಿಷ್ಠೆ, ಹದವಾದ ಮಾತುಗಾರಿಕೆ... ಎಲ್ಲವೂ ಅವರೊಳಗಿದೆ. ಅದು ಅವರನ್ನು ಈಗ ವಿಶ್ವಮಾನವ ಕುವೆಂಪು ವಿದ್ಯಾ ಸಂಸ್ಥೆಯ ಪ್ರಾಂಶುಪಾಲರ ಹುದ್ದೆಗೇರಿಸಿದೆ.

ಅರ್ಧ ಶತಮಾನದ ತಮ್ಮ ಶಿಕ್ಷಕ ವೃತ್ತಿಯ ಅನುಭವದಲ್ಲಿ ವರ್ಷದಿಂದ ವರ್ಷಕ್ಕೆ ತಮ್ಮ ಉತ್ಸಾಹವನ್ನು ಊರ್ಧ್ವಮುಖಿಯಾಗಿಸುತ್ತಲೇ ಸಾಗಿದ್ದಾರೆ. ಇದು ನಮ್ಮೆಲ್ಲರಿಗೂ ಮಾದರಿ. ಅಸಂಖ್ಯ ಶಿಷ್ಯಬಲ ಅವರ ಬೆನ್ನ ಹಿಂದಿದೆ. ಕನ್ನಡವನ್ನೂ, ಇಂಗ್ಲಿಷ್ ಭಾಷೆಯನ್ನೂ ಸ್ಪಷ್ಟವಾಗಿ ಮಾತನಾಡುವ, ಬರೆಯುವ, ಬೋಧಿಸುವ ಅವರ ಜಾಣ್ಮೆಗೆ ನಾನಂತೂ ಬೆರಗಾಗಿ ಹೀಗೆ ಬರೆಯುತ್ತಿದ್ದೇನೆ.

ಪ್ರಿಯ ಮಿಲ್ಲಿ ಮೇಡಂ, ಶಿಕ್ಷಕರ ದಿನಾಚರಣೆಯ ಶುಭಾಶಯಗಳು 🙏💐

*
✍️ಕಾಜೂರು ಸತೀಶ್

Wednesday, August 27, 2025

ಡೆಮಾಕ್ರಸಿ

ತಿಮ್ಮ ಮೂರು ಮೂಟೆಗಳನ್ನು ಒಂದೇ ಸಲ ಹೊರುತ್ತಿದ್ದ. ಈ ವಿಷಯ ಎಲ್ಲೆಲ್ಲೂ ಹಬ್ಬಿತ್ತು. ಅದಕ್ಕಾಗಿಯೇ ಅವನು ಹೋದ ಹೋದಲ್ಲೆಲ್ಲ ಕೆಲಸ ಇದ್ದೇ ಇರುತ್ತಿತ್ತು. ಆದರೆ ಒಂದು ಮೂಟೆ ಹೊರುವವರಿಗೂ ಇವನಿಗೂ ಒಂದೇ ಸಂಬಳ ಸಿಗುತ್ತಿತ್ತು.

ಮೊದಮೊದಲು ಯಜಮಾನನಿಗೆ ತಿಮ್ಮನ ಮೇಲೆ ಅಭಿಮಾನ ಉಕ್ಕುತ್ತಿತ್ತು. ಆದರೆ ತಿಮ್ಮ ಬಹುಬೇಗ ಕೆಲಸವನ್ನು ಮುಗಿಸುತ್ತಿದ್ದುದರಿಂದ ಯಜಮಾನನು ಕ್ರಮೇಣ ನಾಲ್ಕು ಮೂಟೆಗಳನ್ನು ಒಟ್ಟಿಗೆ ಹೊರಿಸುತ್ತಿದ್ದನು. ಅದನ್ನೂ ಮಾಡಿದ ತಿಮ್ಮನ ಮೇಲೆ ಮತ್ತೆ ಸಿಟ್ಟು ಬಂದು ಐದು ಮೂಟೆಗಳನ್ನು ಹೊರಿಸುತ್ತಿದ್ದನು. ಅಲ್ಲಿಗೆ ತಿಮ್ಮನ ತಾಳ್ಮೆ ಮುಗಿದು ಯಜಮಾನನ ಕಪಾಳದಲ್ಲೊಂದು ಸೇಬುಹಣ್ಣು ಮೂಡಿಸಿ ಊರು ಬಿಡುತ್ತಿದ್ದನು.

ಇದು ಅವನ ದಿನಚರಿಯಾಗಿದ್ದರಿಂದ ತಿಮ್ಮ ಒಂಟಿಯಾಗಿಯೇ ಇದ್ದನು.

*
✍️ಕಾಜೂರು ಸತೀಶ್

ಗಡಿ



'ಗಡಿಸಮಸ್ಯೆ'ಯ ಬಗ್ಗೆ ಚರ್ಚೆ ಸಾಗಿತ್ತು. 

ಹಕ್ಕಿಯೊಂದು ಅಲ್ಲೇ ಸನಿಹದಲ್ಲಿದ್ದ ಹಣ್ಣಿನ ಮರದಿಂದ ಹಣ್ಣನ್ನು ಕಿತ್ತು ನೆರೆಯ ದೇಶಕ್ಕೆ ಹಾರಿಹೋಗಿ ತಿಂದ ಹಣ್ಣಿನ ಬೀಜವನ್ನು ಹಿಕ್ಕೆ ಹಾಕಿತು. 

ಅದು ಮೊಳಕೆಯೊಡೆಯಿತು. ಅದು ಮರವಾಯಿತು. ಅದು ಹಣ್ಣುಕೊಟ್ಟಿತು...

'ಗಡಿಸಮಸ್ಯೆ'ಯ ಬಗ್ಗೆ ಚರ್ಚೆ ಸಾಗಿತ್ತು.
*

✍️ಕಾಜೂರು ಸತೀಶ್

ಚಿಂತಕ



ಜೀವಪರ ಚಿಂತಕರೊಬ್ಬರು ತೀರಿಕೊಂಡರು.

ಅವರ ಹೆಸರಿನಲ್ಲಿ ಹಗ್ಗಜಗ್ಗಾಟ ಸ್ಪರ್ಧೆ ನಡೆಯಿತು. ಎಡಭಾಗದಲ್ಲಿದ್ದವರು ಹೆಸರಿನ ಅರ್ಧಭಾಗವನ್ನೂ ಬಲಭಾಗದಲ್ಲಿದ್ದವರು ಇನ್ನರ್ಧ ಭಾಗವನ್ನೂ ಹಂಚಿಕೊಂಡರು .

ಸೀಟಿ ಊದಿ ತೀರ್ಪುನೀಡಿದ ನಿರ್ಣಾಯಕನಿಗೆ ಸ್ವಲ್ಪ ನಡುವಿನ ಭಾಗ ಸಿಕ್ಕಿತು.
*
✍️ಕಾಜೂರು ಸತೀಶ್ 

ಮೌನ



ಯುವಕ ಯುವತಿಯರು ಹುಚ್ಚೆದ್ದು ಕುಣಿಯುತ್ತಿದ್ದರು. ಡಿಜೆ ಸದ್ದಿಗೆ ವಯಸ್ಕರೊಬ್ಬರು ಎದೆಯೊಡೆದು ಸತ್ತರು.

ಮೃತರಿಗೆ ಒಂದು ನಿಮಿಷದ ಮೌನಾಚರಣೆ ಮಾಡಲಾಯಿತು. ಆ ಒಂದು ನಿಮಿಷದ ಮೌನವನ್ನು ಅನುಭವಿಸಲಾಗದೆ ಹಲವು ಯುವಕ ಯುವತಿಯರು ಕುಸಿದುಬಿದ್ದರು.

ಡಿಜೆಯ ಸದ್ದಿಗೆ ಮತ್ತೆ ಎಚ್ಚರವಾದರು.
*

✍️ಕಾಜೂರು ಸತೀಶ್ 

ಸಮಾನತೆ



ಸಮಾನತೆಯ ಬಗ್ಗೆ ಉಪನ್ಯಾಸವಿತ್ತು. ಜನ ನಿದ್ದೆ ಮಾಡತೊಡಗಿದರು.

ಗುದ್ದಲಿ ಹಿಡಿದು ಆ ದಾರಿಯಲ್ಲಿ ಹೊರಟಿದ್ದ ತಿಮ್ಮ ಅವರನ್ನೆಲ್ಲ ನೋಡಿ ತನ್ನಲ್ಲೇ ಹೇಳಿಕೊಂಡ: 'ನಿದ್ದೆಯಲ್ಲಿ ಎಲ್ಲರೂ ಸಮಾನರೇ!'
*
✍️ಕಾಜೂರು ಸತೀಶ್ 

Tuesday, August 26, 2025

ಭಾಷೆ ಮತ್ತು ನಾಗರಿಕ ಸೇವೆ

ಮೊನ್ನೆ ಮೊನ್ನೆ ಜಿಲ್ಲೆಯೊಂದರ ನಾಗರಿಕ ಸೇವಾ ಅಧಿಕಾರಿಯೊಬ್ಬರು ಸರ್ಕಾರಿ ಶಾಲೆಯೊಂದಕ್ಕೆ ಭೇಟಿ ನೀಡಿ ಅದರ ಕಾರ್ಯವೈಖರಿಯನ್ನು ಮೆಚ್ಚಿ ಪ್ರಶಂಸನಾ ಅಭಿಪ್ರಾಯವನ್ನು ಶಾಲಾ ದಾಖಲೆಯಲ್ಲಿ ಬರೆದಿದ್ದರು. ಸರ್ಕಾರಿ ಶಾಲೆಗೆ ಭೇಟಿ ನೀಡುವ, ಅಲ್ಲಿನ ಹಲವು ಸವಾಲುಗಳ ನಡುವೆ ಅದನ್ನು ಮೆಚ್ಚುವ ಈ ಬಗೆಯ ಅಧಿಕಾರಿಗಳು ಹಾಗೂ ಮೆಚ್ಚಿಸಿಕೊಳ್ಳುವ ಶಾಲೆಗಳು ವಿರಳ. ಅದಕ್ಕಾಗಿ ಆ ಅಧಿಕಾರಿ ಹಾಗೂ ಶಾಲೆಯ ಶಿಕ್ಷಕರು ಅಭಿನಂದನಾರ್ಹರು.

ಆದರೆ, ಆಂಗ್ಲ ಭಾಷೆಯಲ್ಲಿ ಬರೆಯಲಾಗಿದ್ದ ಆ ಅಭಿಪ್ರಾಯವನ್ನು ಓದಿದ ಮೇಲೆ ಹಲವು ಸಂಗತಿಗಳು ನನ್ನ ಬಳಿ ಸುಳಿದುಹೋದವು:

1.ಹಲವು ವ್ಯಾಕರಣ ದೋಷಗಳು!

2.ಕನ್ನಡ ತಿಳಿದಿದ್ದರೂ ಅದನ್ನು ಬಳಸದಿರುವುದು (ಅಥವಾ ಅದೂ ಸ್ಪಷ್ಟವಾಗಿ ದಕ್ಕದಿರುವುದು!)

3.ನಾಗರಿಕ ಸೇವೆಗಳು ಮತ್ತು ಆಂಗ್ಲ ಭಾಷೆಯ ಅಗತ್ಯತೆ.

4.ನಮಗೆ ತಿಳಿದ ಭಾಷೆಯ ಮೇಲಿನ ಅವಜ್ಞೆ ಮತ್ತು ಅನ್ಯದ ಮೇಲಿನ ಒಲವು.

5.ನಾಗರಿಕ ಸೇವೆ ಮತ್ತು ಭಾಷೆಯ(ಭಾಷೆಗಳ) ಅರಿವಿನ ಅಗತ್ಯತೆ/ ಅನಿವಾರ್ಯತೆ.

6.ಓದಿ ಪಡೆಯುವ ಹುದ್ದೆಗಳು, ಅದನ್ನು ಗಿಟ್ಟಿಸಿದ ಮೇಲಿನ ಓದಲಾಗದ ಸ್ಥಿತಿ; ಜ್ಞಾನದ ನಿಲುಗಡೆ.

7.ಶಿಕ್ಷಣ ಪದ್ಧತಿ ಮತ್ತು ಬಾಯಿಪಾಠವನ್ನು ಪುರಸ್ಕರಿಸುವ ಮೌಲ್ಯಮಾಪನ ಕ್ರಮಗಳು; ಅಂಕ ಕೇಂದ್ರಿತ ನೇಮಕಾತಿ.

8.ನಾಗರಿಕ ಸೇವಾ ಹುದ್ದೆಗಳ ಆಯ್ಕೆ ಪ್ರಕ್ರಿಯೆ.

9.ಭ್ರಷ್ಟ ವ್ಯವಸ್ಥೆ.

10.ಇತ್ಯಾದಿ!

Sunday, August 24, 2025

ಆಕಾಶ ನದಿ ಬಯಲು- ಮೇರಿ ಆಲಿವರ್ ಕವಿತೆಗಳು

‌1. ಪುಲಿಟ್ಜರ್ ಪ್ರಶಸ್ತಿ ಬಂದಾಗ ಟಿವಿ ಚಾನಲ್ ನಿಂದ 'ನಿಮ್ಮ ಸಂದರ್ಶನ ಮಾಡಲು ನಾವು ಬರಬಹುದೇ?'ಎಂದಾಗ ಹೆಂಚು ಜೋಡಿಸುತ್ತಿದ್ದ ಲೇಖಕಿಯು 'ದಯವಿಟ್ಟು ಬೇಡ' ಎನ್ನುತ್ತಾರೆ!

2. ನೆರೆಮನೆಯ ಒಬ್ಬರು ಬಂದು ' ನಿಮ್ಮನ್ನು ಟಿವಿಯಲ್ಲಿ ನೋಡಿದ ಹಾಗೆ ಅನ್ನಿಸ್ತು.. ನೀವೇನಾ ಅದು?' ಎಂದು ಪ್ರಶ್ನೆ ಎಸೆದುಹೋಗುತ್ತಾರೆ.


ಕಾಡಿನ ದಟ್ಟ ಮೌನವನ್ನು ಮೆಲ್ಲುತ್ತಾ ಕವಿತೆಗಳನ್ನೇ ಬಾಳಿದ ಮೇರಿ ಆಲಿವರ್ (1935-2019) ಕುರಿತ ಮಾತುಗಳಿವು. ಚಿಕ್ಕ ಪ್ರಾಯದಲ್ಲೇ ಲೈಂಗಿಕ ದೌರ್ಜನ್ಯಕ್ಕೊಳಗಾದ ಮೇರಿಗೆ ನಿಸರ್ಗದ ಒಡನಾಟವು ತಾನು ಕಳೆದುಕೊಂಡ ಬದುಕಿನ ಚೈತನ್ಯವನ್ನು ಮರುಪೂರಣಗೊಳಿಸಿಕೊಳ್ಳಲು ಸಹಕರಿಸಿತು. ಅದರ ಧ್ಯಾನದ ಫಲ ಈ ಕವಿತೆಗಳು.


Small is beautiful ಎಂಬ ತತ್ವದಲ್ಲಿ ನಂಬಿಕೆಯಿರಿಸಿದ್ದ ಮೇರಿ ಆಲಿವರ್ ಅವರ ಇಂಗ್ಲಿಷ್ ಕವಿತೆಗಳನ್ನು 'ಆಕಾಶ ನದಿ ಬಯಲು' ಎಂಬ ಶೀರ್ಷಿಕೆಯಲ್ಲಿ ಚೈತ್ರಾ ಶಿವಯೋಗಿಮಠ ಅವರು ಅನುವಾದಿಸಿದ್ದಾರೆ. ಹಲಸಂಗಿಯ ಸುಗಮ ಪುಸ್ತಕ ಇದನ್ನು ಪ್ರಕಟಿಸಿದೆ. "ನಾನು ಸಮಾಧಾನ ಕೊಡುವ, ಮನಸ್ಸಿಗೆ ಆಹ್ಲಾದವನ್ನು ನೀಡುವಂತಹ ಪದ್ಯಗಳನ್ನು ಬರೆಯುತ್ತೇನೆ.." ಎನ್ನುವ ಮೇರಿ ಆಲಿವರ್ ಅವರ ಕವಿತೆಗಳನ್ನು ತಮ್ಮದಾಗಿಸಿಕೊಂಡು ಚೈತ್ರಾ ಶಿವಯೋಗಿಮಠ ಕನ್ನಡದಲ್ಲಿ ಸೃಷ್ಟಿಸಿದ್ದಾರೆ.


ನಿಸರ್ಗದ ಸಣ್ಣ ಸಣ್ಣ ಸಂಗತಿಗಳು ಇಲ್ಲಿ ಹಾಡಾಗಿವೆ. ಭತ್ತ, ಮೆಣಸಿನ ಗಿಡ, ಗುಮ್ಮ, ಕೇರೆ ಹಾವು, ನಾಯಿ, ಮಿಡತೆ, ಬೆಟ್ಟ, ಹೆಬ್ಬಾತು, ಎಲೆ, ಮರ, ಕಡಲು, ಹಂಸ, ಹಕ್ಕಿ, ಮಿಂಚುಳ್ಳಿ, ಹೂವು, ಮೀನು, ಕಾಡು - ಇವೆಲ್ಲಾ ಮೇರಿಯ ಕಾವ್ಯ ವಸ್ತುಗಳು. ಅವೇ ಅವಳ ನಿಜ ಜೀವನದ ಪ್ರಪಂಚವೂ ಹೌದು.


ಇವು ನಿಸರ್ಗದ ಕಡೆಗಿನ ಪಯಣ. ಹುಟ್ಟಿದ ಮಗುವಿಗೆ ನಿಸರ್ಗ ಬೆರಗಿನಂತೆ ಕಂಡು ಅದು ನಮ್ಮನ್ನು ಪ್ರಶ್ನಿಸುವ ರೀತಿಯಲ್ಲಿಯೇ ಮೇರಿ ಆಲಿವರ್ ಅದನ್ನು ಕಾವ್ಯಾತ್ಮಕವಾಗಿ ಪ್ರಶ್ನಿಸುತ್ತಾ ನಿಸರ್ಗಕ್ಕೇ ಪ್ರಶ್ನೆ ಎಸೆಯುತ್ತಾರೆ. ಈ ನಡಿಗೆ ಒಂಟಿ ನಡಿಗೆ ಅಲ್ಲ; ಅದೊಂದು ಪ್ರಾರ್ಥನೆ; ಧನ್ಯತೆ.


ಮೇರಿಯ ಕವಿತೆಗಳ ಮತ್ತು ಚೈತ್ರಾ ಅವರ ಅನುವಾದದ ಮಾದರಿ ಇಲ್ಲಿದೆ:

ಪ್ರಾರ್ಥನೆಯ ಪ್ರಾರ್ಥನೆ ತಿಳಿಯದ ನನಗೆ
ಗೊತ್ತಿರುವುದಿಷ್ಟೇ- ಗಮನಿಸೋದು
ಹುಲ್ಲಿನ ಮೇಲೆ ಮೈಕೊಡವಿ
ಉರುಳಿ, ಮಂಡಿಯೂರಿ
ಸುಮ್ಮನಿದ್ದು ಧನ್ಯಳಾಗುವುದು ( ಬೇಸಿಗೆಯ ಒಂದು ದಿನ)

ಯಾರೂ ನೋಡಬಾರದು ನಾನು
ಮಾರ್ಜಾಲ ಹಕ್ಕಿಗಳೊಂದಿಗೆ ಮಾತಿಗಿಳಿಯುವುದನ್ನು
ಪುರಾತನ ಆಲದಮರ ತಬ್ಬಿಕೊಳ್ಳುವುದನ್ನು
ಪ್ರಾರ್ಥನೆಗೆ ನನ್ನದೇ ರೀತಿ ಇದೆ
ನಿನಗೆ ನಿನ್ನದು ಇರುವಂತೆ ( ಕಾಡು ಸುತ್ತುವಾಗ )
*

✍️ಕಾಜೂರು ಸತೀಶ್


Monday, August 18, 2025

ರಂಗಧಾಮಪ್ಪ ಸರ್ ಅವರ ಕುರಿತು

ಕೊಡಗು ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ರಂಗಧಾಮಪ್ಪ ಸರ್ ಇಂದು ವರ್ಗಾವಣೆಗೊಂಡು ಜಿಲ್ಲೆಯನ್ನು ತೊರೆದಿದ್ದಾರೆ. "ಎರಡು ವರ್ಷಗಳ ಇಲ್ಲಿನ ಸೇವಾವಧಿಯಲ್ಲಿ ಒಮ್ಮೆಯೂ ಜ್ವರ ಶೀತದಿಂದ ಬಳಲಲಿಲ್ಲ, ಅದಕ್ಕೆ ಇಲ್ಲಿನ ಶುದ್ಧ ಪರಿಸರವೇ ಕಾರಣ" ಎನ್ನುತ್ತಾ ತೊರೆಯಲು ಅಸಾಧ್ಯವಾದ ನೆನಪುಗಳನ್ನು ಕೊಂಡೊಯ್ದಿದ್ದಾರೆ.

ರಂಗಧಾಮಪ್ಪ ಸರ್ ಅವರಿಗೆ ನನ್ನ ಪರಿಚಯವಿಲ್ಲ. ಆದರೆ, 'ಆ ದಿನದ ಒಂದು ಫೋನ್ ಕಾಲ್' ಅವರ ಕುರಿತು ಬರೆಯುವಂತೆ ಮಾಡಿದೆ. ಜೂನ್ 28 2024. ನನ್ನ ಸುಡುವ ದನಿಗೆ ಅತ್ತಲಿಂದ ಬುದ್ಧನಂಥ ಉತ್ತರ. ಆಮೇಲೆ ನಾನು ಅಕ್ಷರಗಳಿಂದ ಇಲ್ಲಿನ ಅವ್ಯವಸ್ಥೆಯ ಕುರಿತು ಖಾರಿಕೊಂಡೆ. ಅವರಿಂದ ಮೌನದ ಸಾಥ್ ಸಿಕ್ಕಿತು. ನನ್ನ ಪರಿಚಯವಿಲ್ಲವೆಂದುಕೊಂಡು ಅವರು ಸುಮ್ಮನೆ ಇರಬಹುದಿತ್ತು. ಆದರೆ ' ಇದು ಯಾಕೆ ಹೀಗಾಗುತ್ತಿದೆ? ನೀವು ನನಗೆ ಉತ್ತರಿಸಿ' ಎಂದು ಸಮಸ್ಯೆಯ ಬುಡಕ್ಕೆ ತಮ್ಮ ಮೌನದಂಥ ಮಾತಿನ ಚಾಟಿಯನ್ನು ಬೀಸಿದ್ದರು. ವಿಚಾರವಂತರೂ, ನೀತಿವಂತರೂ ಆದ ಮನುಷ್ಯರಿಂದ ಮಾತ್ರ ಇದು ಸಾಧ್ಯ ಎಂದು ಆ ದಿನ ಅವರನ್ನು ನನ್ನೊಳಗೆ ಚಿತ್ರಿಸಿಕೊಂಡೆ.


ಮೊದಲ ಬಾರಿಗೆ ಅವರ ಮಾತುಗಳನ್ನು ಕೇಳಿಸಿಕೊಂಡಿದ್ದು ಡಿಸೆಂಬರ್ 6, 2024ರಂದು. ಒಂದೊಂದು ಶಬ್ದದಲ್ಲೂ ಓದಿನ ಬಲವಿತ್ತು. ಮತ್ತೆ ಮೆಚ್ಚಿಕೊಂಡೆ!

ಆಮೇಲೆ ಹಲವು ಬಾರಿ ಅವರನ್ನು ನೋಡಿದೆ. ಮೊನ್ನೆ ಕೂಡ. ಆದರೆ ಮಾತನಾಡಬೇಕು ಎನಿಸಲಿಲ್ಲ.
*
ಪ್ರಾಮಾಣಿಕರನ್ನು ವರ್ಗಾಯಿಸಲಾಗುತ್ತದೆ. ಇವರನ್ನೂ ಈಗ ವರ್ಗಾಯಿಸಲಾಗಿದೆ. ಕೆಲಸ ಮಾಡುವವರಿಗೆ ಯಾವ ಊರಾದರೇನು? ಆದರೂ ನನ್ನೊಳಗಿನ ಒಂದುಕ್ಷಣದ ಬೆಳಗುವ ಬಯಕೆಗೆ ಅವರ ನೆನಪಿನ ಬತ್ತಿಯಿದೆ...
*

✍️ಕಾಜೂರು ಸತೀಶ್

Saturday, July 19, 2025

ಒಂದು ಗಸಗಸೆ ಮರದ ಸುತ್ತ...

ಹರಗ ಶಾಲೆಗೆ ಹೋಗಿದ್ದಾಗ ಫ್ಲವರ್ ಪೆಕರ್ ಹಕ್ಕಿಗಳನ್ನು ಗಸಗಸೆ ಮರದಲ್ಲಿ ಗಮನಿಸಿದ್ದೆ. ನನ್ನ ಮನೆಯ ಸುತ್ತ ಇವು ತೀರಾ ಅಪರೂಪ. ಮರದಲ್ಲಿ ಪರೋಪ ಸಸ್ಯವಾಗಿ ಬೆಳೆದುಕೊಳ್ಳುವ ಬಂದಣಿಕೆ/ಬದನಿಕೆ ಹೂವನ್ನು ಹುಡುಕಿಕೊಂಡು ಬರುವ ಫ್ಲವರ್ ಪೆಕರನ್ನು ಗಮನಿಸಿದ್ದೆ. ಆ ಬಂದಣಿಕೆಯು ಮೂಲ ಮರವನ್ನೇ ಸಾಯಿಸಿದ ಮೇಲೆ ಈ ಹಕ್ಕಿಯ ಅನುಪಸ್ಥಿತಿ ನನ್ನನ್ನು ಕಾಡುತ್ತಿತ್ತು.






ವಿಚಿತ್ರವೆಂದರೆ ಈ ಹಕ್ಕಿಗೂ ಕನ್ನಡದಲ್ಲಿ ಬದನಿಕೆ ಹಕ್ಕಿ ಎಂದೇ ನಾಮಕರಣ ಮಾಡಿದ್ದಾರೆ!


*

ಅರಣ್ಯ ಇಲಾಖೆಯ ವತಿಯಿಂದ ದಿನಾಂಕ 29-12-2022ರಂದು ಸೋಮವಾರಪೇಟೆ ತಾಲೂಕಿನ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಆ ಕಾರ್ಯಕ್ರಮದ ಹೊಣೆಯನ್ನು ಹೆಗಲಲ್ಲಿಟ್ಟುಕೊಂಡಿದ್ದವರು ವಲಯ ಅರಣ್ಯಾಧಿಕಾರಿ ಗಾನಶ್ರೀ ಮೇಡಂ.


ಕಾರ್ಯಕ್ರಮ ಮುಗಿದು ವರ್ಷ ಕಳೆದ ಮೇಲೆ ಈ ಗಿಡವನ್ನು ಅವರ ಬಳಿಯೇ ಕೇಳುವುದೊಳಿತು ಎಂದು 'ಕೇಳಿದೆ'. ಅವರು ಸಸ್ಯಕ್ಷೇತ್ರದಲ್ಲಿ ಪಡೆದುಕೊಳ್ಳಿ ಎಂದರು. 30-08-2023ರಂದು ಐದು ಗಿಡಗಳನ್ನು ಪಡೆದು ಅದರಲ್ಲಿ ಮೂರನ್ನು ಬೆಟ್ಟದಳ್ಳಿ ಶಾಲೆಯಲ್ಲೂ ಎರಡನ್ನು ಮನೆಯಲ್ಲೂ ನೆಟ್ಟೆ. ಅಧಿಕ ಮಳೆಬೀಳುವ ತಾಣ ಬೆಟ್ಟದಳ್ಳಿ. ನಾನು ದಸರಾ ರಜೆಮುಗಿಸಿ ತೆರಳಿದಾಗ ಅವು ಬುಡಕೊಳೆತು ಕಪ್ಪಾಗಿ ಅಂತ್ಯಕಂಡಿದ್ದವು!


ಆದರೆ ಮನೆಯಂಗಳದಲ್ಲಿ ನೆಟ್ಟಿದ್ದ ಎರಡು ಗಿಡಗಳಲ್ಲಿ ಕಾಯಿಗಳು ಹುಟ್ಟಿ ಅದನ್ನು ಹುಡುಕಿಕೊಂಡು ಬರುವ ಬದನಿಕೆ ಹಕ್ಕಿಯನ್ನೂ, ಅದರ ಹಸಿವನ್ನು ಹಿಂಗಿಸುತ್ತಿರುವ ಆ ಮರದ ತಾಯ್ತನವನ್ನೂ, ಅದು ಜೀವಪಡೆಯಲು ಕಾರಣಕರ್ತರಾದ ಸಸ್ಯಕ್ಷೇತ್ರದ ಆ ಅನಾಮಿಕ ಮನುಷ್ಯನನ್ನೂ, ಅದನ್ನು ನನಗೆ ಕರುಣಿಸಿದ ಗಾನಶ್ರೀ ಮೇಡಂ ಅವರನ್ನೂ, ಈ ಮಣ್ಣನ್ನೂ, ಹಸಿರೆಂಬೋ ವಿಸ್ಮಯವನ್ನೂ ಒಟ್ಟೊಟ್ಟಿಗೆ ಸ್ಮೃತಿಯ ಬುಟ್ಟಿಯೊಳಗಿಟ್ಟು ಕಾಪಿಟ್ಟುಕೊಳ್ಳುವಂತೆ ಮಾಡಿದೆ.


ಎಲ್ಲಿಯೋ ಇರುವ ಆ ಹಕ್ಕಿಗೆ ಇಲ್ಲಿ ಈ ಗಿಡ ಇದೆಯೆಂದು ಯಾರು ಹೇಳಿಕೊಟ್ಟರೋ ನಾನರಿಯೆ.
*
✍️ಕಾಜೂರು ಸತೀಶ್

Saturday, July 5, 2025

ಆಕಾಶವಾಣಿಯ ಮೇಷ್ಟ್ರು



ಪ್ರತಿಭಾವಂತರನ್ನು ಕಂಡಾಗಲೆಲ್ಲ ಅವರ ಕಡಲಿನಂತಹ ಸಾಮರ್ಥ್ಯವನ್ನು ಈ ವ್ಯವಸ್ಥೆಯು ನದಿಗೋ ಕೆರೆಗೋ ಮಿತಿಗೊಳಿಸಿರುವುದನ್ನು ನೋಡಿ ನೊಂದಿದ್ದೇನೆ. ಮಡಿಕೇರಿ ಆಕಾಶವಾಣಿಯ ಉದ್ಘೋಷಕರಾಗಿದ್ದ ಸುಬ್ರಾಯ ಸಂಪಾಜೆಯವರ ಮಾತುಗಳನ್ನು ಆಲಿಸಿದಾಗಲೆಲ್ಲ ನನಗೆ ಹಾಗೆ ಅನ್ನಿಸುತ್ತಿತ್ತು. ಭಾಷೆ, ಸಾಹಿತ್ಯ, ಪುರಾಣ, ಜನಪದ, ಭಾಷಾಶಾಸ್ತ್ರ, ಯಕ್ಷಗಾನ, ಗಮಕ( ಇವೆಲ್ಲಾ ಒಂದಕ್ಕೊಂದು ಪೂರಕವಾಗಿಯೂ, ಒಂದರೊಳಗೊಂದು ಬೆರೆತವೂ ಆಗಿರುವ ಸಂಗತಿಗಳಾದರೂ..) ತುಳು,ಅರೆಭಾಷೆ, ಸಂಸ್ಕೃತ... ಹೀಗೆ ಹಲವು ಜ್ಞಾನಶಿಸ್ತುಗಳನ್ನು ಸಂಪಾದಿಸಿರುವ ಸಂಪಾಜೆಯವರದು ಬಹುಮುಖ ಪ್ರತಿಭೆ.



ಅವರ ಆಳ ಅಧ್ಯಯನವು ಕೊಟ್ಟ ಜ್ಞಾನ,ತಿಳಿವಳಿಕೆಗಳನ್ನೂ, ಕಲಾರಂಗದ ಆಸಕ್ತಿ ಮತ್ತು ಅನುಭವಗಳನ್ನೂ ತಮ್ಮ ವೃತ್ತಿಯಲ್ಲಿ ತಂದು ಲಕ್ಷಾಂತರ ಅಭಿಮಾನಿಗಳನ್ನು ಪಡೆದವರು. ಶಿಸ್ತು ಮತ್ತು ಸೇವಾ ಬದ್ಧತೆಗೆ ಮತ್ತೊಂದು ಹೆಸರೇ ಸುಬ್ರಾಯ ಸಂಪಾಜೆ.



 ಆಕಾಶವಾಣಿ ಮಡಿಕೇರಿಯನ್ನು ಕಟ್ಟಿ ಬೆಳೆಸಿದ ಸುಬ್ರಾಯ ಸಂಪಾಜೆಯವರು ಈಗ ನಿವೃತ್ತಿ ಹೊಂದಿದ್ದಾರೆ. ಶಾರದಾ ನಂಜಪ್ಪ ಅವರು ನಿವೃತ್ತರಾಗಿ ವರ್ಷ ಕಳೆದ ಹೊತ್ತಲ್ಲಿ ಇವರೂ ನಿವೃತ್ತರಾಗಿದ್ದಾರೆ. ಆಕಾಶವಾಣಿಯ ಅಸಂಖ್ಯ ಕೇಳುಗರ ಪಾಲಿಗೆ ಇದು ತುಂಬಲಾರದ ನಷ್ಟ.
*
✍️ಕಾಜೂರು ಸತೀಶ್

Saturday, May 31, 2025

ರೇಷ್ಮೆಯ ಹಾದಿ

ರೇಷ್ಮೆ ಇಲಾಖೆಯಲ್ಲಿ ಹತ್ತು ವರ್ಷಗಳ ಕಾಲಮಿತಿ ಬಡ್ತಿಯನ್ನು ಪಡೆದ ವ್ಯಕ್ತಿಗೆ ಪ್ರೊಮೋಷನ್ ನಿರೀಕ್ಷೆ ಇರುತ್ತದೆ . ಅದೇ ವ್ಯಕ್ತಿ ಆ ಹತ್ತು ಮುಗಿದು ಮತ್ತೆ ಮೂರು ವರ್ಷಗಳು ಜಾರಿದ ಮೇಲೆ 'ಈ ಕೆಲಸ ನನ್ನಂಥವರಿಗಲ್ಲ' ಅನ್ನಿಸಿದರೆ ಹೇಗಿರುತ್ತದೆ? ಅದೂ ಮದುವೆ ಆಗಿ ಮಗು ಹುಟ್ಟಿದ ಮೇಲೆ ಇಂಥದ್ದೊಂದು ಬಂದು ಮನಸ್ಸನ್ನಾಕ್ರಮಿಸಿಬಿಟ್ಟರೆ!

ಹಾಗೆ ಆದರೆ ಮತ್ತೇನಿಲ್ಲ: ಪದವಿ ಮುಗಿಸುತ್ತಾರೆ, ಬಿ.ಇಡಿ ಮುಗಿಸುತ್ತಾರೆ, KES ಪಾಸುಮಾಡುತ್ತಾರೆ, 'ಹಸಿರು ಸಹಿ' ಮಾಡುವ ಪ್ರೌಢಶಾಲಾ ಮುಖ್ಯೋಪಾಧ್ಯಾಯರಾಗುತ್ತಾರೆ, ಮತ್ತೆ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ ಹಿರಿಯ ಉಪನ್ಯಾಸಕರಾಗುತ್ತಾರೆ, ಪ್ರಭಾರ ಪ್ರಾಂಶುಪಾಲರ ಹುದ್ದೆಯನ್ನೂ ನಿರ್ವಹಿಸುತ್ತಾರೆ!

ಇನ್ನೇನು ನಿವೃತ್ತಿ ಎನ್ನುವಾಗ ಈಗಷ್ಟೇ ಕೆಲಸಕ್ಕೆ ಸೇರಿದ ಹುಡುಗರೊಂದಿಗೆ ಓಟ ಓಡಿ ಜಯಿಸಿ ರಾಜ್ಯಮಟ್ಟದಲ್ಲೂ ಅದೇ ಹುರುಪನ್ನು ತೋರುತ್ತಾರೆ! ತಮ್ಮ ಮಗ ಕ್ರಿಕೆಟ್ ಆಟಗಾರನಾದರೂ ಆಗಲಿ ಎಂದು ಪ್ಯಾಡು ಕಟ್ಟಿ ಹೆಲ್ಮೆಟ್ ಧರಿಸಿ ಕ್ರಿಕೆಟ್ ಆಡುತ್ತಾರೆ, ಸತತವಾಗಿ ಮೂರ್ನಾಲ್ಕು ಗಂಟೆಗಳ ಕಾಲ ಬೌಲಿಂಗ್ ಮಾಡುತ್ತಾರೆ.


1975 ರಿಂದ 1996/1999ರವರೆಗೂ ಕ್ರಿಕೆಟ್ ದಿಗ್ಗಜರ ಕುರಿತು ಗಂಟೆಗಟ್ಟಲೆ ಮಾತನಾಡುವ ಸಾಮರ್ಥ್ಯವುಳ್ಳವರು(ವಿವ್ ರಿಚರ್ಡ್ಸನ ಕುರಿತ ಅವರ ಮಾತು ಕೇಳಿ youtubeನಲ್ಲಿ ಹುಡುಕಿ ಹುಡುಕಿ ನೋಡಿದ್ದೇನೆ).

ಅಡುಗೆಯಲ್ಲೂ ಅದೇ ಹುರುಪು!

ಡಾ.ರಾಜ್ ಕುಮಾರ್ ಅವರ ಎಲ್ಲಾ ಚಿತ್ರಗಳನ್ನು ತಲ್ಲೀನರಾಗಿ ನೋಡುತ್ತಾರೆ ;ಎದೆಗಿಳಿಸಿಕೊಂಡು ಬದುಕುತ್ತಾರೆ. ಪಿ.ಬಿ.ಶ್ರೀನಿವಾಸ್ ಹಾಡುಗಳೆಂದರೆ ಜೀವ. ಎಷ್ಟೆಷ್ಟೋ ಗಾಯಕರ/ಸಂಗೀತ ಸಂಯೋಜಕರ ಕುರಿತ ವಿಶಿಷ್ಟ ಗ್ರಹಿಕೆಗಳು ಅವರೊಳಗಿವೆ.
'ಹಾಡಿ ಸರ್' ಎಂದರೆ ತಮಾಷೆಯ ಒಂದು ಮುನ್ನುಡಿಯೊಂದಿಗೆ 'ಚಂದ' ಹಾಡುತ್ತಾರೆ.


ಓದುವುದೆಂದರೆ ಅಷ್ಟು ಪ್ರೀತಿ. ಅದಕ್ಕಾಗಿಯೇ ನಾಲ್ಕು ಜನರ ನಡುವೆ ನಿಂತಾಗ, ತರಬೇತಿ-ಸಭೆ-ಸಮಾರಂಭಗಳಲ್ಲಿ ಕುಳಿತಾಗ ತುಸು ಎತ್ತರ! (ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಂದು ವೇದಿಕೆಯಲ್ಲಿದ್ದ ಅಷ್ಟು ಜನರ ಪೈಕಿ ನಮ್ಮ ಪೋಷಕರೊಬ್ಬರು 'ಅವರು ಯಾರು? ಏನು ಕೆಲಸ ಮಾಡೋದು? ತುಂಬಾ ವಿಷಯ ಇದೆ ಅವರ್ಹತ್ರ' ಎಂದು ಅವರ ಬಗ್ಗೆ 'ಮಾತ್ರ' ವಿಚಾರಿಸಿದ್ದರು!).


ಸಾಹಿತ್ಯ ಮಾಸಿಕವೊಂದನ್ನು ಮೂರು(?) ದಶಕಗಳಿಂದ ಸತತವಾಗಿ ಓದುತ್ತಾ ಅವುಗಳನ್ನು ಸಂಗ್ರಹಿಸಿಟ್ಟುಕೊಳ್ಳುವಷ್ಟು ತಾಳ್ಮೆ ಮತ್ತು ಶ್ರದ್ಧೆಯುಳ್ಳವರು. ಪರ್ಸು ನೋಡುವವರ, ತುಂಬಿಸಿಕೊಳ್ಳುವವರ ನಡುವೆ ಗ್ರಂಥಾಲಯದ ಪುಸ್ತಕಗಳನ್ನು ತಡಕಾಡಿ ತಲೆತುಂಬಾ ತುಂಬಿಸಿಕೊಳ್ಳುವವರು.



ತೀರ್ಥಯಾತ್ರೆ ಎಂದರೂ ಅಷ್ಟೇ ಪ್ರೀತಿ; ಭಕ್ತಿ.

ಅನ್ನ ನೀರು ಬಿಟ್ಟು ದಿನಗಟ್ಟಲೆ ನಿಲ್ಲಬಲ್ಲ ಕಠಿಣ ಮನಸ್ಸು( ಕೆಲವು ಹೂವುಗಳು ಎಷ್ಟೋ ದಿನಗಳವರೆಗೆ ಬಾಡದೆ ಇರಬಲ್ಲದು, ಈ👇 ಹೂವನ್ನೇ ಗಮನಿಸಿ!)


*
ಕಾಯಕವೇ ಕೈ'ಲಾಸ್'

-೧-
ಬನ್ನಿ ಊಟಮಾಡೋಣ.
ಸರಿ ಸರ್
ಆದ್ರೆ ಒಂದು ಕಂಡೀಷನ್. ಒಪ್ಕೊಂಡ್ರೆ ಸರಿ ಇಲ್ದಿದ್ರೆ ಬೇಡ.
ಏನು ಸರ್
ನಾನು ಹಣ ಕೊಡ್ತೇನೆ..


-೨-
ಮೈಸೂರಿನಿಂದ ಕೆ ಆರ್ ನಗರ ಹೋಗಿ ಬಂದೆ
ಅದ್ಯಾಕೆ ಅಲ್ಲಿಗೆ ಹೋದ್ರಿ ಸರ್
'___' ಅವ್ರನ್ನು ಪಿಕ್ ಅಪ್ ಮಾಡ್ಬೇಕಿತ್ತು...
**

ದಾಖಲೆ ಭೇಟಿ

ನಾನು ಕಂಡಂತೆ ,ಕೊಡಗಿಗೆ ಬಂದಿದ್ದು 2019ರಲ್ಲಿ. ಅನೇಕ ಕೆಲಸಗಳ ನಡುವೆಯೂ ಇವರು ಕಾಲಿಡದ ಶಾಲೆಗಳಿಲ್ಲ; ಇದ್ದರೂ ವಿರಳ. ಡಯಟ್ ಹಿರಿಯ ಉಪನ್ಯಾಸಕರೊಬ್ಬರು ಇಷ್ಟು ಶಾಲಾ ಭೇಟಿ ಮಾಡಿರುವುದು ಒಂದು ದಾಖಲೆಯೇ ಸರಿ.


*
ಇಷ್ಟು ಹೊತ್ತು ಅಭಿಮಾನದಿಂದ ನೆನಪಿಸಿಕೊಳ್ಳುತ್ತಿರುವ ಶಿವಕುಮಾರ್ ಸರ್ ಅವರಿಗೆ ಇಲಾಖೆಯ ಯಾವ ಕೆಲಸದಲ್ಲೂ ನನ್ನಿಂದ ನೆರವಾಗಲಿಲ್ಲ. ಯಾವ ತರಬೇತಿಗೂ ಅವರೊಂದಿಗೆ ಭಾಗಿಯಾಗಲಿಲ್ಲ. ನನ್ನ ಮೌನ ಅವರನ್ನು ಕಾಡಿದೆ. ಹಾಗಾಗಿ ಅವರು ನನ್ನನ್ನು ಒತ್ತಾಯಿಸಲಿಲ್ಲ(ಸಹಿಸಿಕೊಂಡರು!).


ಒಮ್ಮೆ ನಾನು ಕೇಳಿದ್ದೆ: ಸರ್ ಒಂದು ವೇಳೆ '_'ಕೆಲಸಕ್ಕೆ ನಿಮ್ಮನ್ನು ನೇಮಿಸಿದರೆ ಏನು ಮಾಡುತ್ತೀರಿ?'
'ನಾನು ಮಾಡುವುದಿಲ್ಲ. ಮಾಡಲೇಬೇಕು ಎಂದಾದರೆ ನಾನು ರಾಜೀನಾಮೆ ಕೊಡುತ್ತೇನೆ'.

ಇದು ತಪ್ಪಿಸಿಕೊಳ್ಳುವಿಕೆ ಅಲ್ಲ, ತಮ್ಮ ಎದೆಯ ದನಿಯಂತೆ ಬದುಕಲು ಅವರು ಮನಸ್ಸಿನಲ್ಲೇ ಮಾಡಿಟ್ಟುಕೊಂಡಿದ್ದ ಪೂರ್ವನಿರ್ಧಾರ.

ಸದ್ಯ ಅವರು ಆ ಕೆಲಸಕ್ಕೆ ಇಳಿಯಲಿಲ್ಲ. ತಮ್ಮ ಶುದ್ಧತೆಯನ್ನು ಕಾಪಾಡಿಕೊಂಡೇ ನಿವೃತ್ತರಾದರು. 40 ವರ್ಷಗಳ ದೀರ್ಘ ದುಡಿಮೆ ಇದು.


ಪ್ರಿಯ ಶಿವಕುಮಾರ್ ಸರ್, ಏನು ಹೇಳಬೇಕೋ ತಿಳಿಯುತ್ತಿಲ್ಲ...🙏💐
*

✍️ಕಾಜೂರು ಸತೀಶ್

Tuesday, May 20, 2025

Sound of Silence!

Every day on my way to work, I see a man who never fails to greet me with a raised hand and a warm smile. This silent gesture has been part of my mornings for the past three years!

Yesterday,he came by as I was riding my bike.Curious,I stopped and asked where he was headed. He didn’t reply. I asked again-still no answer. That’s when I realized: the man couldn’t speak!
*
I heard the sound of silence-a silent greeting that had spoken volumes all these years.A quiet connection, wordless yet powerful.
*
✍️ Kajooru Sathish 

Thursday, May 15, 2025

ಯಾವ ಒಲುಮೆ

ಯಾವ ಒಲುಮೆ ನನ್ನ ನಿನ್ನ ಸೆಳೆಯುವಂತೆ ಇಲ್ಲಿ ಸುಳಿದು
ಮರದ ಬಳ್ಳಿಯಂತೆ ಸೆಳೆದು ಬೆಳೆಯುತಿರುವುದು
ಯಾವ ಮೋಹ ಜಗವನೆಲ್ಲ ನೆರಳಿನಂತೆ ಸುತ್ತಿ ಹಿಡಿದು
ಜೀವ ಜೀವದೊಡನೆ ಬಂಧ ಬೆಸೆಯುತಿರುವುದು||ಯಾವ||

ಬಾನ ಒಲುಮೆಯೊಂದು ಬಂದು ಹನಿಗಳಾಗಿ ಬುವಿಗೆ ಉದುರಿ
ನೆಲದ ತುಂಬ ಹಸಿರ ಕುಡಿಗಳೆದ್ದು ನಗುವವು
ಹಸಿರ ಒಡಲಿನಿಂದ ಬಂದ ಹಕ್ಕಿಯದರ ಹಾಡನುಲಿದು
ನಭಕೆ ಮತ್ತೆ ನೆನಪನೆಲ್ಲ ಕಳಿಸುತಿರುವುದು||ಯಾವ||

ಕಡಲ ನಡುವಲೆಲ್ಲೋ ಅಲೆವ ದೋಣಿಗೆಷ್ಟು ಅಲೆಯ ಮೋಹ
ಕುಣಿದು ನಲಿದು ಮೈಯ್ಯನೆಲ್ಲ ನುಲಿಯುತಿರುವುದು
ತೀರದಂಥ ಮೈಯ್ಯ ಮೋಹ ಮತ್ತೆ ತೀರದತ್ತ ಚಾಚಿ
ನೆಲದ ಸಖ್ಯಕ್ಕಾಗಿ ಹಂಬಲಿಸುತಿರುವುದು||ಯಾವ||

ಬಾನು ನೆಲದಿ ಹುಟ್ಟಲೆಳಸಿ ಜಾರುತಿರುವುದು
ನೆಲವು ಮೈಯ್ಯ ಕಳಚಿ ನಭಕೆ ಹಾರುತಿರುವುದು
ಒಲುಮೆ ಚಕ್ರದಂತೆ ಜಗವ ಸುತ್ತುತಿರುವುದು
ಹುಟ್ಟು ಸಾವ ನಾಣ್ಯ ಚಿಮ್ಮಿ ಬೀಳುತಿರುವುದು||ಯಾವ||
*

✍️ಕಾಜೂರು ಸತೀಶ್

ನೀನು -ನಾನು



ಮೋಡಗಟ್ಟಿದ ಬಾನು ನೀನು
ಸುಡುಜ್ವರದ ನೆಲವು ನಾನು


ಕಣ್ಣ ತುಂಬಿಸಿ ನಿಂತೆ ನೀನು
ಬತ್ತಿದೆದೆನದಿ ಇಲ್ಲಿ ನಾನು


ಮಿಂಚನು ಹೊತ್ತಿಸಿಬಿಟ್ಟೆ ನೀನು
ಸಿಡಿಲು ಗುಡುಗು ಇಲ್ಲಿ ನಾನು


ಜಾರಿಸಿದ ಹನಿಯ ತಂಪು ನೀನು
ನೆನ್ನೆದೆಯ ಸೋಂಕಲು ನೀನೇ ನಾನು


ನೀನಿಲ್ಲದ ನಾನಿಲ್ಲದ ನಾವೇ ನಾವು
ನಾವೂ ಅಲ್ಲದ ಹಸಿರೇ ನಾವು
*

✍️ಕಾಜೂರು ಸತೀಶ್






Wednesday, April 30, 2025

ಒಂಟಿ ಕಡಲು



ಒಂಟಿ ಕಡಲಿನ ಒಡಲ ಒಳಗೆ
ನೂರು ನದಿಗಳ ಹಾಡಿದೆ
ನೂರು ಊರಿನ ಕತೆಯಿದೆ

ಆಳ ಮೌನದ ಮೇಲೆ ಮೇಲೆ
ನೂರು ತೆರೆಗಳ ಮಾತಿದೆ
ಪಾದ ಸೋಕುವ ಸುಖವಿದೆ

ತುಳಿದ ತೀರದ ಹೆಜ್ಜೆಹಚ್ಚೆಗೆ
ಉಳಿವ ನೆನಪಿನ ಕಲೆಯಿದೆ
ಉಳಿವ ಹಳೆಯ ಮರೆವಿದೆ

ನೋವ ಶವಗಳ ಇಟ್ಟುಕೊಳ್ಳದ
ಶುದ್ಧ ಮನಸಿನ ಕೈಯಿದೆ
ತೀರಕ್ಕೆಸೆಯುವ ಸುಖವಿದೆ

ತೆರೆದ ಹೃದಯದ ಬಾಗಿಲೊಳಗೆ
ಜಗದ ಮೈಯ ಬೆವರಿದೆ
ಕಣ್ಣು ಹರಿಸಿದ ಕತೆಯಿದೆ
*


ಕಾಜೂರು ಸತೀಶ್

Tuesday, April 22, 2025

ಮದುವೆ



ಮದುವೆ ಕಾಗದ
ಶಾಲೆಗೆ ತರೋದು ಅಂದ್ರೆ
ಅವಳಿಗೆ ಒಂಥರಾ ನಾಚಿಕೆ

ಶಿಕ್ಷಕರ್ಯಾರೂ ಬಂದಿರದ
ಒಂದು ಫ್ರೀ ಪೀರಿಯಡ್ನಲ್ಲಿ
ಪುಸ್ತಕದ ಒಳಗೆ ಜೋಪಾನವಾಗಿರಿಸಿದ್ದ
ಕಂದು ಬಣ್ಣದ ಮದುವೆ ಕಾಗದವನ್ನು
ಹೊರತೆಗೆದಳು ಅವಳು

ಕರಿಹಲಗೆಯ ಎರಡಾಗಿ ಸೀಳುವ ಜಾಗದಲ್ಲಿ ನಿಂತು
"...ಮತ್ತೆ ...ನನ್ನ ಮದ್ವೆ ಬರುವ ಇಪ್ಪತ್ತಾರಕ್ಕೆ...
ಎಲ್ಲ ಬರಬೇಕು ಆಯ್ತಾ..."
ಅವಳ ಮೌನದಂಥ ಮಾತುಗಳನ್ನು ಕೇಳಿ
ದನಿಯನ್ನು ಹೆಕ್ಕುವ ಸ್ಪರ್ಧೆಗೆ ನಿಂತಂತಿರುವ
ತರಗತಿಗೆ ಮೌನ!

"ಹುಡುಗ ಏನ್ ಕೆಲಸ ಮಾಡ್ತಾನೆ?"
ಯಾರೋ ಕೇಳಿದಾಗ
"ಸೌದಿಯಲ್ಲಿ" ಎಂದಳಾಕೆ

ನಮ್ಮ ಪಿಯುಸಿ ತರಗತಿಯ
ಮೊದಲ ಮದುವೆಯಿದು 
ಕಾತರ ಎಲ್ಲರಿಗೂ 
ಎಲ್ಲರೂ ಸೇರಬೇಕು 
ಯಾವ ಡ್ರೆಸ್ ಹಾಕೋದು?
ಒಟ್ಟಿಗೆ ಹೋಗೋಣ 
ಯಾವ ಬಸ್ ಸ್ಟಾಪಿನಲ್ಲಿ ಕಾಯುವುದು?
ಒಂದಷ್ಟು ದಿನ ಅದೇ ಚರ್ಚೆ

ಅವಳು ಮಾತ್ರ 
ಇಂಥ ಮಾತುಗಳಿಂದ ಇಳಿದು
ಹೊರಟು ಹೋದಳು
ಓದುವುದು, ನೋಟ್ಸ್-ರೆಕಾರ್ಡ್ ಬರೆಯುವುದು...
ಪುಸ್ತಕದೊಳಗೇ ಬದುಕಿದಳು ಅವಳು

ಮದುವೆಯ ಹಿಂದಿನ ದಿನವೂ
ಅವಳು ಕಾಲೇಜಿಗೆ ಬಂದಿದ್ದಳು
"ಏ ಬರ್ಬೇಕು ಆಯ್ತಾ?"
ಪ್ರತೀ ಬೆಂಚಿನ ಪ್ರತಿಯೊಬ್ಬರನ್ನೂ
ಮತ್ತೆ ಮತ್ತೆ ಆಹ್ವಾನಿಸಿದಳು ಪ್ರೀತಿಯಿಂದ

ಪೇಟೆಯಿಂದ
ಎರಡು ಬಸ್ಸಿನಲ್ಲಿ ಕ್ರಮಿಸಿ
ಅವಳ ಮನೆ ತಲುಪಿದರೆ
ಅವಳು ಓಡಿಬಂದು ಕೈ ಹಿಡಿದುಕೊಂಡಳು
ಕೈಯ ಮದರಂಗಿಯ ಅಲಂಕಾರವನ್ನು ತೋರಿಸಿದಳು ಅವಳ ಬೆಚ್ಚಗಿನ ಆಲಿಂಗನದಲ್ಲಿ ಅವಳ ಮುಖ ಕೆಂಪಾಗಿ ಹೋಗಿತ್ತು

ಅವಳ ಉಮ್ಮ
ಕುಡಿಯಲು ತಂಪಾದ ಶರಬತ್ತು ಕೊಟ್ಟರು
ಅವಳ ಮದುವೆಯ ದಿನ ತಿಂದ ಬಿರಿಯಾನಿಯ
ರುಚಿ ಮತ್ತೆಂದೂ ಸಿಗಲೇ ಇಲ್ಲ

ಗಂಡ ಮರಳಿ ಸೌದಿಗೆ ಹೋಗುವವರೆಗೆ
ಅವಳು ಕಾಲೇಜಿಗೆ ಬರಲಿಲ್ಲ

ಒಮ್ಮೆ ಇಬ್ಬರೂ ಬಂದು
ಅತ್ತರಿನ ಪರಿಮಳವನ್ನೂ
ಒಂದು ಬಾಕ್ಸ್ ಮಿಠಾಯಿಯನ್ನೂ
ಹಂಚಿ ಹೋದರು

ನಾವೆಲ್ಲರೂ 
ಹೊಸ ಬಟ್ಟೆಯಲ್ಲಿ ಲಕಲಕ ಹೊಳೆಯುವ ಅವಳನ್ನು
ಬೆರೆಗಿನಿಂದ ನೋಡಿದೆವು 
ಅವಳು ನಮಗಿಂತಲೂ ಪ್ರಬುದ್ಧೆಯಂತೆ ಕಂಡಳು
ಅವಳ ಮಾತಲ್ಲಿ ಅವಳ ಅಜ್ಜಿಯಷ್ಟು ಅನುಭವವಿತ್ತು
"ಅವ್ಳು ಬದಲಾಗ್ಬಿಟ್ಳು ಅಲ್ವಾ..."
ಎಲ್ಲರೂ ಒಟ್ಟಿಗೆ ಅಂದೆವು

ಎಷ್ಟೋ ವರ್ಷಗಳ ಅನಂತರ
ಕಳೆದ ವಾರವಷ್ಟೇ ಅವಳನ್ನು ನೋಡಿದ್ದು
ಒಂದೇ ನೋಟಕ್ಕೆ ನನ್ನ ಗುರುತು ಸಿಕ್ಕಿ
ಹೆಸರು ಹಿಡಿದು ಕರೆದಳು
"ಪಿಯುಸಿ ಓದ್ವಾಗ ನನ್ನ ಮದುವೆಯಾಯ್ತು ನೆನ್ಪಿದೆಯಾ?" ಎಂದಾಗ ನನಗೆ ಅವಳ ನೆನಪಾಯಿತು
"ಮತ್ತೆ ಓದ್ಲಿಕ್ಕೆ ಆಗ್ಲಿಲ್ಲ ಕಣೇ...
ಮದುವೆ ಆಗ್ಲಿಕ್ಕೆ ಅವತ್ತೇನೂ ಇಷ್ಟ ಇರ್ಲಿಲ್ಲ
ನನ್ನ ಉಮ್ಮ ಮತ್ತೆ ಅಜ್ಜಿಗೂ 
ಆ ಕಾಲದಲ್ಲಿ ಇಷ್ಟ ಇರ್ಲಿಲ್ವಂತೆ"
ಅವಳ ಎದೆಯೊಳಗಿದ್ದ 
ಎಷ್ಟೋ ಹೆಣ್ಣು ಮಕ್ಕಳ ಮಾತುಗಳು,
ಪುಸ್ತಕದ ಹಾಳೆಗಳ ತಿರುವುವ ಸದ್ದು
ನನ್ನ ಕಿವಿಯ ಸದ್ದಡಗಿಸಿತು

 ಆಮೇಲೆ ಅವಳು ಏನು ಹೇಳಿದಳೋ
 ನನಗೇನೂ ಕೇಳಿಸಲಿಲ್ಲ!
*


ಮಲಯಾಳಂ ಮೂಲ- ರಗಿಲ ಸಜಿ

ಕನ್ನಡಕ್ಕೆ- ಕಾಜೂರು ಸತೀಶ್

ಅಮ್ಮನ ಪ್ರಿಯತಮ



ಅಮ್ಮ ತೀರಿಕೊಂಡು
ಮೂರು ತಿಂಗಳಾದ ಮೇಲೆ 
ನಾನವರನ್ನು ನೋಡಿದ್ದು

ಅಮ್ಮನಿಗೆ ಹತ್ತಿರ ಹತ್ತಿರ ಅರವತ್ತು,
ಅವರಿಗಾದರೋ ನಲವತ್ತು ನಲವತ್ತೈದರ ಪ್ರಾಯ
ಅವರನ್ನು ನೋಡಿದರೆ ಥೇಟ್ ಅಮ್ಮನ ಹಾಗೆ 
ಅಮ್ಮನ ಹಾಗೇ ಶಾಂತಚಿತ್ತ 
ಅಮ್ಮನದೇ ಕಣ್ಣುಗಳು
ಅಮ್ಮನದೇ ಪರಿಮಳ
ಅಮ್ಮನ ಗಾಢವಾಗಿ ಪ್ರೀತಿಸಿ
ಅಮ್ಮನೇ ಆದ ಹಾಗೆ

ಅವರ ಕೋಣೆಯ ತುಂಬೆಲ್ಲ 
ಅಮ್ಮನದೇ ಚಿತ್ರಗಳು
ಅಮ್ಮ ಇಷ್ಟು ಚೆನ್ನಾಗಿ ನಗುತ್ತಿದ್ದರಾ?
ಅವರಿಗಾಗಿ ಮಾತ್ರ ಉಟ್ಟ 
ಕೆಂಪಿನಲ್ಲಿ, ಹಸಿರಿನಲ್ಲಿ
ಗಾಢ ಬಣ್ಣಗಳಲ್ಲಿ
ಅಮ್ಮ ಹೀಗೆಲ್ಲಾ ತಯಾರಿ ಮಾಡಿಕೊಳ್ಳುತ್ತಿದ್ದರಾ?
ಇಷ್ಟು ಚೆನ್ನಾಗಿ ಕಾಣಿಸುತ್ತಿದ್ದರಾ?

ಬಣ್ಣ ಮಾಸಿದ, ಕೊಳೆ ತುಂಬಿದ ಮನೆಯ ಬಟ್ಟೆಗಳಲ್ಲಿ
ವಿಷಾದವೇ ತುಂಬಿದ್ದ ಕಣ್ಣುಗಳಲ್ಲಿ 
ಬಿಡುವಿಲ್ಲದ ದುಡಿಮೆಯಲ್ಲಿ
ಅಪ್ಪ, ಅಜ್ಜಿ, ನಾನು ಎಂಬೀ ವೃತ್ತದಲ್ಲಿ 
ಇಷ್ಟೆಲ್ಲದರ ನಡುವೆ 
ಯಾವಾಗ ಅಮ್ಮ ಅವರಿಗಾಗಿ ಹೀಗೆ ಬದುಕಿದ್ದು?

ಅವರಿಗಾಗಿ ಕಳುಹಿಸಿದ ಸಂದೇಶಗಳಲ್ಲಿ,
ಪತ್ರಗಳಲ್ಲಿ ಕವಿತೆಗಳದೇ ಕಾರುಬಾರು 
ಗಾಢ, ಆರ್ದ್ರ ಪ್ರೇಮ
ಅಮ್ಮನ ಕಲ್ಪನೆಗಳು 
ಅಮ್ಮನ ರಹಸ್ಯಗಳು
ಅಮ್ಮನ ಬಯಕೆಗಳು
ಅಮ್ಮನ ಕನಸುಗಳು

ಉಫ್... ಎಂಥಾ ಪ್ರೇಮಿ ಅವಳು!
ಯಾರೂ ತಿಳಿಯದ 
ಯಾರೂ ಗುರುತಿಸದ
ಅವರು ಮಾತ್ರ ತಿಳಿದಿದ್ದ 
ಆರಾಧಿಸಿದ್ದ
ಮುದ್ದಿಸಿದ್ದ
ದೇವತೆಯಾಗಿದ್ದವಳ ಎದೆಯೊಳಗಿಟ್ಟುಕೊಂಡು ನಡೆದ
ಅವರಿಗೆ ಮಾತ್ರ ತಿಳಿದಿದ್ದ ಅಮ್ಮ
ಅವಳು ಪೂರ್ಣತೆ ಪಡೆದ ಒಂದೇ ಒಂದು ತಾಣ 

ಅದು ಸಾಯುವವರೆಗೆ ಒಮ್ಮೆಯೂ ಪರಸ್ಪರ ನೋಡಿರದ ಆ ಇಬ್ಬರು 
ಹೇಗೆ ಇಷ್ಟು ಗಾಢವಾಗಿ ಪ್ರೀತಿಸಿದರು!
ತೀರಿಕೊಂಡರೂ ಮತ್ತೊಬ್ಬರ ಒಳಗೆ ಬದುಕುವ
ಅವ್ಯಕ್ತ ಅದೃಶ್ಯ ವೈಚಿತ್ರ್ಯ
ಜೀವಂತವಿರುವಾಗಲೇ ತೀರಿಕೊಳ್ಳುವ
ಎಷ್ಟೋ ಮನುಷ್ಯರನ್ನು ಬದುಕಿಸಿದ,ಬದುಕಿಸುವ
ಬದುಕಿಸುತ್ತಲೇ ಇರುವ ಅದೇ ವೈಚಿತ್ರ್ಯ!
*


ಮಲಯಾಳಂ: ಲಿಷಾ ಜಯನ್

ಕನ್ನಡಕ್ಕೆ - ಕಾಜೂರು ಸತೀಶ್ 

ಮಾನಿಷಾದ



ಪುಸ್ತಕಗಳಿಂದ ತುಂಬಿದ
ಕೋಣೆಯಲ್ಲಿ
ಸ್ನಾನಮಾಡಿಸಿ
ನನ್ನ ಮಲಗಿಸಬೇಕು
ಶವವಸ್ತ್ರ ಹೊದಿಸದೆ

 ನಾನು
 ಹುಟ್ಟುವ ಮುನ್ನವೇ
 ತೀರಿಕೊಂಡಿರುವೆ

ಸುವಾಸನೆ ಹಬ್ಬಿಸುವ 
ಏನೂ ಬೇಡ
ನನ್ನ ಸುತ್ತಮುತ್ತ

ಪುಸ್ತಕಗಳ 
ಪರಿಮಳ ಸಾಕು ನನಗೆ 

ಎದೆಯೊಡೆದು ಅತ್ತವರು
ನನ್ನ ಕುಟುಂಬಸ್ಥರು
ಬಂಧುಮಿತ್ರರು

ಅಳುವ ಯಾರೂ ಅಲ್ಲಿ
ಇರಬಾರದು ನನ್ನ ಸುತ್ತ

ಓದಿ ಅಡಿಗೆರೆ ಎಳೆದ
ಪುಸ್ತಕಗಳ ವಾಕ್ಯಗಳಿಗೂ
ಕಥಾ ಪಾತ್ರಗಳಿಗೂ 
ನನ್ನ ಚುಂಬಿಸಲು
ಅವಕಾಶ ನೀಡಿ

ನನ್ನ ಸುಡದಿರಿ
ಮಣ್ಣಲ್ಲಿ ಹೂತುಬಿಡದಿರಿ

ನಾನು 
ಅಸಹ್ಯದೆಡೆಗೆ 
ಹೊರಳುವುದಿಲ್ಲ 

ನಾನು
ನಡೆದು ಬಂದ
ಪುಸ್ತಕದ ಕಡೆಗೆ
ಯಾರ ಸಹಾಯವನ್ನೂ ಬೇಡದೆ
ಮರಳಿ ಹೋಗುತ್ತೇನೆ

ನಿಧನಾನಂತರದ 
ಯಾವ ಶಾಸ್ತ್ರಗಳೂ 
ನನಗೆ ಬೇಕಿಲ್ಲ

ಮಾನಿಷಾದ
ಹಾಡುವ 
ಮಕ್ಕಳ
ನೃತ್ಯವೊಂದರ
ಹೊರತು
*


ಮಲಯಾಳಂ ಮೂಲ: ಪವಿತ್ರನ್ ತೀಕ್ಕುನಿ

ಕನ್ನಡಕ್ಕೆ - ಕಾಜೂರು ಸತೀಶ್ 

Saturday, April 5, 2025

ಲೆಕ್ಕ ಪರೀಕ್ಷೆ

ಇವತ್ತು ಗಣಿತ ಪರೀಕ್ಷೆ
ಕ್ಯಾಲ್ಕುಲೇಟರ್ ತರ್ಲಿಲ್ಲ.
ಕೈಯಲ್ಲೇ ಲೆಕ್ಕ ಮಾಡ್ತಿರೋದು
ಕಮಲಾಕ್ಷಿ ಟೀಚರ್ ಕಣ್ಣಿಗೆ ಬಿತ್ತು

ಎಲ್ಲೋ ನಿನ್ನ ಕ್ಯಾಲ್ಕುಲೇಟರ್?
ಕೈಯಲ್ಲೇ ಲೆಕ್ಕ ಹಾಕ್ತೇನೆ ಮಿಸ್.
ಕೈಯಲ್ಲಿ ಎಣಿಸ್ಲಿಕ್ಕೆ ಆಗದೆ ಇರೋದು?
ಕಾಲಲ್ಲಿ ಎಣಿಸ್ತೇನೆ ಮಿಸ್
ಅಧಿಕ ಪ್ರಸಂಗಿ
ಜೊತೆಗೆ ಬೆನ್ನಿಗೊಂದು ಗುದ್ದು

ಕೈಯಲ್ಲಿ ಎಣಿಸಿ ಮುಗಿದ ಮೇಲೆ
ಎಣಿಕೆಗೆ ಸಿಗದವುಗಳನ್ನೆಲ್ಲ
ಈಗ ಕಾಲಲ್ಲೆಲ್ಲ ಸರ್ಕಸ್ ಮಾಡುವುದಿಲ್ಲ
ಮರ್ಯಾದೆ ಪ್ರಶ್ನೆ
ಎಣಿಸಿದಷ್ಟೂ ಮುಗಿಯದ
ನಕ್ಷತ್ರಗಳನ್ನು ಕೂಡ

ಬದುಕು ಅಲ್ವಾ ಇದು
ಇದೇನು ಜ್ಯಾಮಿತಿ ಬಾಕ್ಸಿನೊಳಗಿನ
ಪೆನ್ಸಿಲ್ ಅಲ್ವಲ್ಲಾ

ಆದ್ರೂ ಲೆಕ್ಕ ತಪ್ಪುವಾಗ
ಬೆನ್ನ ಹಿಂದೆ ನಿಂತು
ನಮಗರಿಯದ ಹಾಗೆ ನೋಡುವ
ಒಬ್ಬರಿರ್ತಾರಲ್ವಾ

ಹಾಗೆ ನಿಂತು ನೋಡೋದು ಒಳ್ಳೇದೇ ಅನ್ಸುತ್ತೆ.
*


ಮಲಯಾಳಂ ಮೂಲ- ವಿಜಿಷಾ ವಿಜಯನ್

ಕನ್ನಡಕ್ಕೆ - ಕಾಜೂರು ಸತೀಶ್ 

Monday, March 3, 2025

1998

ಗುಂಡ ಶಿಕ್ಷಣಮಂತ್ರಿಯಾದ. 'ಶಿಕ್ಷಕರಿದ್ದರೆ ಮಾತ್ರ ಗುಣಾತ್ಮಕ ಶಿಕ್ಷಣ' ಎನ್ನುತ್ತಾ ಒಂದು ಲಕ್ಷ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಲು ನಿರ್ಧರಿಸಿದ. ತರಬೇತಿ ಪಡೆದು ಸರ್ಟಿಫಿಕೇಟುಗಳನ್ನು ಎಲ್ಲೆಲ್ಲೋ ಎಸೆದು ಬೇರೆ ಬೇರೆ ವೃತ್ತಿಗ ಳಲ್ಲಿ ತೊಡಗಿದವರೆಲ್ಲರೂ ಹೇಗೋ ಎಲ್ಲೋ ಹುಡುಕಿ ಅರ್ಜಿ ಸಲ್ಲಿಸಿದರು.ಹಲವರು ಪುಸ್ತಕ ಓದುವುದನ್ನೇ ನಿಲ್ಲಿಸಿ ಬಿಟ್ಟಿದ್ದರು. ಎಷ್ಟೋ ಮಂದಿಗೆ ಕಾಗುಣಿತವೇ ಮರೆತುಹೋಗಿತ್ತು.

ಅವರೆಲ್ಲರೂ ಮೇಷ್ಟ್ರಾದರು.

'ಗುಣಾತ್ಮಕ ಶಿಕ್ಷಣ ನಮ್ಮ ನಡೆ' ಎಂದು ಗುಂಡ ತನ್ನ ಕಾರಿನಲ್ಲಿ ಬರೆಸಿಕೊಂಡ.
*

✍️ ಕಾಜೂರು ಸತೀಶ್ 

ಕವಿತೆ

ತಿಮ್ಮ ದಾರಿಯಲ್ಲಿ ಹೋಗುತ್ತಿದ್ದಾಗ ಕಾರುಗಳು ಒಂದಾದ ಮೇಲೆ ಒಂದರಂತೆ ಹೋಗುತ್ತಿದ್ದವು. 

ಕೈ ತೋರಿಸಿ ಕಾರು ನಿಲ್ಲಿಸಿ ವಿಚಾರಿಸಿದ ತಿಮ್ಮ.

"ಎಲ್ಲಿಗೆ?"

"ಕವಿಗೋಷ್ಠಿಗೆ"

"ಅಲ್ಲಿ ಏನು ಮಾಡುವುದು?"

"ಕವಿತೆ ಓದುವುದು"

"ನಾನೂ ನೋಡಲು ಬರಲೇ?"

"ಬನ್ನಿ".


ಅಲ್ಲಿಂದ ಮರಳಿದ ಮೇಲೆ ತಿಮ್ಮ ಹೀಗೆ ಬರೆದ :
ನಾಲ್ಕು ಪದಗಳಿದ್ದರೆ ಒಂದು ಕವಿತೆ ಬರೆಯಬಹುದು - 'ಭಾವ, ಆತ್ಮ, ಮಧುಬಟ್ಟಲು ಮತ್ತು ಪ್ರೀತಿ'.

'ಅದರ ಜೊತೆಗೆ ಒಂದು ಮೊಬೈಲ್ ಇರಬೇಕು!'
*
✍️ಕಾಜೂರು ಸತೀಶ್

Sunday, February 23, 2025

ನಿಶ್ಚಲ ಬದುಕು


ಮಧ್ಯಾಹ್ನ ಊಟದ ಅನಂತರ 
ಅವಳು ನನ್ನ ತೊರೆದುಹೋದ ಮೇಲೆ 
ಕೆಲಕಾಲ ಓದುವುದರಲ್ಲಿ ಮಗ್ನನಾದೆ 
ಆದರೆ ಯಾಕೋ ಏನೋ ಅಲ್ಲೊಮ್ಮೆ ಕಣ್ಣಾಡಿಸಿದೆ 
ಅರ್ಧ ತಿಂದುಳಿಸಿದ 
ಸ್ಯಾಂಡ್ವಿಚ್,
ಬ್ರೆಡ್ಡು,
ಸಲಾಡ್ ಮತ್ತು ಸಲಾಮಿ 
ಎಲ್ಲದರಲ್ಲೂ ಅವಳ ಹಲ್ಲಿನ ಗುರುತಿತ್ತು.
*


ಇಂಗ್ಲೀಷ್ ಮೂಲ - ಎ ಕೆ ರಾಮಾನುಜನ್ 

ಕನ್ನಡಕ್ಕೆ - ಕಾಜೂರು ಸತೀಶ್

Tuesday, February 18, 2025

ಆರಿಹೋದ 'ಪ್ರಕಾಶ' ಮತ್ತು ಉಳಿಸಿಹೋದ ಬೆಳಕು - ಭಾಗ -1

ಕೊಡಗು ಜಿಲ್ಲಾ 10ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕೂಡಿಗೆಯಲ್ಲಿ ಆಯೋಜಿಸಲಾಗಿತ್ತು.

ವಿಚಾರಗೋಷ್ಠಿಯಲ್ಲಿ ಇಬ್ಬರು ವ್ಯಕ್ತಿಗಳು ನನ್ನ ಗಮನ ಸೆಳೆದರು. ಒಬ್ಬರು ನೆಲ್ಲಿಹುದಿಕೇರಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕರಾಗಿದ್ದ ರೋಹಿತ್ ಕೆ.ಮತ್ತೊಬ್ಬರು ಕೂಡಿಗೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕರಾಗಿದ್ದ ಡಾ. ಪ್ರಕಾಶ್ ಬಿ.


ಆ ದಿನ ರೋಹಿತ್ ಸರ್ ಅವರು ಜಿ ಟಿ ನಾರಾಯಣರಾವ್ ಅವರ ಕುರಿತು ಮಾತನಾಡಿದರೆ ಪ್ರಕಾಶ್ ಸರ್ ಅವರು ಕಟ್ಟೀಮನಿ ಅವರ ಕುರಿತು ಮಾತನಾಡಿದ್ದರು.

 ಇವರಿಬ್ಬರಲ್ಲಿ ನನಗೆ ಮೊದಲು ಪರಿಚಿತರಾದವರು ರೋಹಿತ್ ಸರ್. ಕೊಡ್ಲಿಪೇಟೆಯಲ್ಲಿ ನಡೆದ ತಾಲೂಕು ಸಾಹಿತ್ಯ ಸಮ್ಮೇಳನದ ವಿಚಾರಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದ್ದ ರೋಹಿತ್ ಸರ್, ಗೂಗಿಯ ಬಗ್ಗೆ ಪ್ರಸ್ತಾಪಿಸಿದಾಗ ಅವರ ಮಾತುಗಳಿಂದ ಪ್ರೇರಿತನಾಗಿ ಅವರನ್ನು ಮಾತನಾಡಿಸಿದ್ದೆ.

 ಆಮೇಲೆ 2013ರಲ್ಲಿ ಮಡಿಕೇರಿ ತಾಲೂಕು ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ್ದೆ. 'ಸಾಹಿತ್ಯ ಸಮ್ಮೇಳನಗಳಲ್ಲಿ ಇಷ್ಟು ಡೀಪ್ ಆಗಿ ಮಾತನಾಡಬಾರದು' ಎಂದು ನನ್ನ ಮಾತುಗಳ ಕೊರತೆಯನ್ನು ಅವರು ಬೊಟ್ಟು ಮಾಡಿ ತೋರಿಸಿದ್ದರು. ನನಗದು ಸರಿ ಎನ್ನಿಸಿ ಅವರ ಮೇಲಿನ ಅಭಿಮಾನ ಹೆಚ್ಚಾಗಿತ್ತು.

 ರೋಹಿತ್ ಸರ್ ಅವರು ಈ ಜಿಲ್ಲೆಯನ್ನು ಬಿಟ್ಟು ಹಾಸನಕ್ಕೆ ತೆರಳಿದಾಗ ವಿದ್ವತ್ಪೂರ್ಣ ಮಾತುಗಳಿಗಾಗಿ ಉಳಿದವರು ಡಾ. ಪ್ರಕಾಶ್ ಸರ್. ಸಾಹಿತ್ಯ ಸಮ್ಮೇಳನದ ವಿಚಾರಗೋಷ್ಠಿಗಳಲ್ಲಿ ಅವರ ಮಾತುಗಳನ್ನು ತಪ್ಪದೇ ಧ್ವನಿಮುದ್ರಿಸಿಕೊಳ್ಳುತ್ತಿದ್ದೆ.(ಕೇವಲ ಇಬ್ಬರ ಮಾತುಗಳನ್ನಷ್ಟೇ ಧ್ವನಿಮುದ್ರಿಸಿಕೊಳ್ಳುತ್ತಿದ್ದೆ-ಮತ್ತೊಬ್ಬರು ಬಾಲಸುಬ್ರಮಣ್ಯ ಕಂಜರ್ಪಣೆ). ಆದರೆ ಕಡೆಗೂ ಅವುಗಳನ್ನು ಉಳಿಸಿಕೊಳ್ಳಲು ನನಗೆ ಸಾಧ್ಯವಾಗಲಿಲ್ಲ. 


 ಹಲವು ಗೋಷ್ಠಿಗಳಲ್ಲಿ ಪ್ರಕಾಶ್ ಸರ್ ಅವರೊಂದಿಗೆ ಭಾಗವಹಿಸಿದ್ದೆ. ನಟರಾಜು ಬೂದಾಳು ಸರ್ ಅವರ ಶೈಲಿಯಂತೆಯೇ ಅನಿಸುತ್ತಿದ್ದ ಅವರ ಮಾತುಗಳು ನನಗೆ ಬೆರಗಿನ ಹಾಗೆ ತೋರುತ್ತಿದ್ದವು. ಅವರು ತರುಣ ಡಿ ಆರ್ ರಂತೆ ಕಾಣಿಸುತ್ತಿದ್ದರು. 

ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಕಥಾ ಕಮ್ಮಟದಲ್ಲಿ ಅವರ ಮಾತುಗಳನ್ನು ಜೀರ್ಣಿಸಿಕೊಳ್ಳಲು ಅಲ್ಲಿದ್ದ ವಿದ್ಯಾರ್ಥಿಗಳಿಗೆ ಸಾಧ್ಯವಾಗುತ್ತಿರಲಿಲ್ಲ. (ನನಗೇ ಅರ್ಥವಾಗಲಿಲ್ಲ ಎಂದು ಪಕ್ಕದಲ್ಲಿದ್ದ ಸಂಪನ್ಮೂಲ ವ್ಯಕ್ತಿಯೊಬ್ಬರು ಹೇಳಿದ್ದರು!). ಅಷ್ಟು ಆಳಕ್ಕಿಳಿದು ತಮ್ಮನ್ನು ತಾವು ಹುಡುಕುತ್ತಿದ್ದರು - ಕಳೆದುಕೊಳ್ಳುತ್ತಿದ್ದರು!


 ಪ್ರಕಾಶ್ ಸರ್ ಯಾವುದೇ ವಿಷಯದ ಆಳ-ಅಗಲಗಳನ್ನು ತಿಳಿದು ಮಾತನಾಡುವ ಪ್ರೌಢಿಮೆಯನ್ನು ಗಳಿಸಿಕೊಂಡಿದ್ದರು. ವಿಷಯವೊಂದರ ಋಣಾತ್ಮಕ ಆಯಾಮಗಳ ಬಗ್ಗೆ ಅವರು ಕಠೋರವಾಗಿ ಟೀಕಿಸುತ್ತಿರಲಿಲ್ಲ-ಮೌನವಾಗಿಬಿಡುತ್ತಿದ್ದರು. ವಿಶ್ವವಿದ್ಯಾನಿಲಯದ ವಿಚಾರಗೋಷ್ಠಿಯಲ್ಲಿ ನಾವಿಬ್ಬರು ಪ್ರತಿಕ್ರಿಯೆ ನೀಡಬೇಕಿತ್ತು. ಪ್ರಕಾಶ್ ಸರ್, ವಿಚಾರವನ್ನು ಮಂಡಿಸಿದವರ ತೀರಾ ತೆಳುವಾದ ಗ್ರಹಿಕೆಯನ್ನು ಮನಸಾರೆ ಖಂಡಿಸಿದರೂ ಎಲ್ಲೂ ಅದನ್ನು ಪ್ರಸ್ತಾಪಿಸದೆ ತಮ್ಮದೇ ಆದ ವಿಭಿನ್ನ ಒಳನೋಟಗಳನ್ನು ನೀಡಿದ್ದರು.


 ಪ್ರಕಾಶ್ ಸರ್ ಅವರು ಮೊಬೈಲ್ ಬಳಕೆಯಿಂದ ದೂರ ಉಳಿದಿದ್ದರು. ಏನಾದರೂ ಕಳಿಸುವುದಿದ್ದರೆ ಸ್ವಾಮಿ ಸರ್ ಅವರಿಗೆ ಕಳಿಸಿ ಎನ್ನುತ್ತಿದ್ದರು. ತೀರಾ ತಡವಾಗಿ ಫೇಸ್ಬುಕ್ಕಿಗೆ ಎಂಟ್ರಿ ಕೊಟ್ಟಿದ್ದರು. ಮಡಿಕೇರಿಗೆ ಬರುವಾಗಲೆಲ್ಲ ಮೊಹಿದ್ದೀನ್ ಸರ್, ಅವರ ಜೊತೆಯಾಗಿರುತ್ತಿದ್ದರು. ಕಣಿವೆಯ ಭಾರದ್ವಾಜ್ ಸರ್ ಅವರು, ಅವರ ವಿದ್ವತ್ ಶಕ್ತಿಗೆ ಬೆರಗಾಗಿದ್ದರು.

 2015ರ ಮಡಿಕೇರಿ ದಸರಾ ಕವಿಗೋಷ್ಠಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಕಾಶ್ ಸರ್ ಆಹ್ವಾನಿತರಾಗಿದ್ದರು. ಕುತೂಹಲದಿಂದ ಅವರ ಮಾತುಗಳನ್ನು ತುಂಬಿಕೊಂಡಿದ್ದೆ. ಆ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ನಾನು ವಹಿಸಿದ್ದೆ. ಪ್ರಕಾಶ್ ಸರ್ ಸ್ವಾಮಿ ಸರ್ ರವರೊಂದಿಗೆ ಆಗ ಆಗಮಿಸಿದ್ದರು. ಅವರಿಬ್ಬರೂ ಒಟ್ಟಿಗೆ ಕುಳಿತು ನನ್ನ ಭಾಷಣವನ್ನು ಕೇಳಿಸಿಕೊಳ್ಳುತ್ತಿದ್ದದ್ದು ಇನ್ನೂ ಕಣ್ಣಿಗೆ ಕಟ್ಟುವಂತಿದೆ.


 2017ರ ಕೊಡಗಿನ ಗೌರಮ್ಮ ಪುಸ್ತಕ ಬಹುಮಾನಕ್ಕೆ ನಾನು ಮತ್ತು ಅವರು ತೀರ್ಪುಗಾರರಾಗಿದ್ದೆವು(ಬಹುಮಾನ ವಿತರಣೆಯ ಸಂದರ್ಭದಲ್ಲಿ, ತೀರ್ಪುಗಾರರ ಅನಿಸಿಕೆ ಸಂದರ್ಭದಲ್ಲಿ ನನಗದು ತಿಳಿದದ್ದು ).ತೀರ್ಪುಗಾರರ ಅನಿಸಿಕೆಯ ಸಂದರ್ಭದಲ್ಲಿ ನಾವಿಬ್ಬರು ಮಾತನಾಡಿದ್ದೆವು. ಶಾಂತಿ ಅಪ್ಪಣ್ಣ ಅವರ ಕೃತಿಗೆ ಬಹುಮಾನ ಬಂದಿದ್ದನ್ನು ನಾವಿಬ್ಬರು ಸಂಭ್ರಮಿಸಿದ್ದೆವು.


ಆಮೇಲೆ ಪ್ರಕಾಶ್ ಸರ್ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಆಯ್ಕೆಯಾಗಿ ಕೊಣನೂರು ಸರ್ಕಾರಿ ಪದವಿ ಕಾಲೇಜಿಗೆ ತೆರಳಿದರು. ಆಗಲೂ 'ಇವರ ಜ್ಞಾನ ಭಂಡಾರದ ವಿಸ್ತಾರಕ್ಕೆ ಅದು ವೇದಿಕೆಯಲ್ಲ' ಎಂದು ಮನಸಾರೆ ಅಂದುಕೊಂಡಿದ್ದೆ. ಸಿಕ್ಕಾಗಲೆಲ್ಲ 'ನೀವೂ ಪರೀಕ್ಷೆ ಬರೆಯಬೇಕಿತ್ತು ಸತೀಶ್' ಎನ್ನುತ್ತಿದ್ದರು.

 ಪ್ರಕಾಶ್ ಸರ್ ಉಪನ್ಯಾಸಕ್ಕೆ ಬರುತ್ತಿದ್ದದ್ದು ಒಂದು ದೊಡ್ಡ ದಿನಚರಿಯನ್ನು ಕೈಯಲ್ಲಿ ಹಿಡಿದುಕೊಂಡು. ಅದರಲ್ಲಿ ಹಲವು ಉಪನ್ಯಾಸಗಳಿಗೆ ಮಾಡಿಕೊಂಡಿದ್ದ ಟಿಪ್ಪಣಿಗಳಿದ್ದವು. ಯಾವುದೇ ಉಪನ್ಯಾಸಕ್ಕೆ ಅವರು ಅದನ್ನು ತರುತ್ತಿದ್ದರು. ಉಪನ್ಯಾಸಕ್ಕೂ ಮುನ್ನ ಒಂದು ಸಿಗರೇಟ್ ಹಚ್ಚಿಬರುತ್ತಿದ್ದರು. 

 ಆ ದಿನ ಭಾರದ್ವಾಜ್ ಸರ್ ಅವರು ಕರೆ ಮಾಡಿ 'ಪ್ರಕಾಶ್ ಹೋಗ್ಬಿಟ್ರು' ಎಂದಾಗ 'ಯಾವ ಪ್ರಕಾಶ್?' ಎಂದು ಕೇಳಿದ್ದೆ. ಎಂಥಾ ಮೇರು ಪ್ರತಿಭೆಯೊಂದರ ನಿರ್ಗಮನವಾಯಿತು ಎಂದು ನರಳಿದ್ದೆ!

ಪ್ರಕಾಶ್ ಸರ್ ನಮ್ಮನ್ನು ಅಗಲಿದ್ದು ತುಂಬಲಾರದ ನಷ್ಟ. ಕುಶಾಲನಗರದ ಪದವಿ ಕಾಲೇಜಿನಲ್ಲಿ ನಡೆದ ಸೆಮಿನಾರಿನಲ್ಲಿ ಮಾಡಿಕೊಂಡಿದ್ದ ವಿಡಿಯೋ ತುಣುಕಿನಲ್ಲಿ ಪ್ರಕಾಶ್ ಸರ್ ಅವರ ಆಗಮನದ ದೃಶ್ಯವೊಂದಿದೆ. ಒಮ್ಮೊಮ್ಮೆ ಅದನ್ನು ನೋಡಿಕೊಳ್ಳುತ್ತೇನೆ.
**


 'ಸೋಮಾರಿ ಪ್ರಕಾಶ' ಎಂದೇ ನೆನಪಿಸಿಕೊಳ್ಳುವ ಡಾ. ಸುಕನ್ಯಾ ಅವರು ತಮ್ಮ ಪತಿಯ ಬದುಕು ಬರೆಹ ಮತ್ತು ಭಾಷಣಗಳನ್ನು 'ನುಡಿ ಸಂಕಥನ'ದಲ್ಲಿ ದಾಖಲಿಸಿದ್ದಾರೆ. ಪ್ರಕಾಶರ ಕುರಿತ ಬರೆವಣಿಗೆಯು ಬೆಳೆದಂತಲ್ಲ ಹೆಣ್ಣೊಬ್ಬಳ ಬದುಕಿನ ಸಂಕಟಗಳನ್ನು, ಅವಳು ಮಾಡಬೇಕಾದ /ಮಾಡಿರುವ ತ್ಯಾಗವನ್ನು ಬಿಚ್ಚಿಡುತ್ತಾರೆ. ಕಣ್ಣುಗಳನ್ನು ತೋಯಿಸುತ್ತವೆ ಅವು. ಅತ್ಯಂತ ಪ್ರಾಮಾಣಿಕ ಅನಿಸಿಕೆಗಳವು. ತಮ್ಮ ಅಧ್ಯಯನದ ಮಿತಿಗಳನ್ನು ಒಪ್ಪಿಕೊಳ್ಳುತ್ತಲೇ ಎರಡನೆಯ ಗುರುವಾದ ಪತಿಯ ಏಳಿಗೆಯನ್ನು ಬಯಸಿದವರು ಸುಕನ್ಯಾ . ಅದಕ್ಕಾಗಿ ಪತಿಯ ಸಿದ್ಧಾಂತಗಳನ್ನು ತಾವೂ ಪಾಲಿಸಿದವರು. ತಮ್ಮ ಆದ್ಯತೆ/ ಅಧ್ಯಯನವನ್ನೆಲ್ಲ ಬದಿಗಿಟ್ಟು ಗಂಡನ, ಮಕ್ಕಳ ಆರೈಕೆಯಲ್ಲೇ ಸುಖವನ್ನು ಕಾಣುವ, ಪತಿಯ ಅಧ್ಯಯನಕ್ಕೆ ಸಮಯವನ್ನು ಕಲ್ಪಿಸಿಕೊಡುವ , ಖಾಸಗಿ ವಾಹನವಿಲ್ಲದೆ ಬದುಕುವುದನ್ನು ಕಲಿಯುವ ಮುಂತಾದ ಹಲವು ತ್ಯಾಗಗಳನ್ನು ಮಾಡಿದವರು ಡಾ.ಸುಕನ್ಯಾ ಮೇಡಂ.  

ಗಂಡನೊಂದಿಗಿನ ಪ್ರೀತಿ, ಮುನಿಸು, ರೇಗಿಸುವಿಕೆ ರಾಜಿಗಳೊಂದಿಗೆ ಆದರ್ಶ ಬದುಕನ್ನು ಕಟ್ಟಿಕೊಳ್ಳಲು ಹವಣಿಸುವ ಹೆಣ್ಣಿನ ದಿನಚರಿಯು ಕೃತಿಯ ಪೂರ್ವಾರ್ಧದಲ್ಲಿದೆ. 

 ಎಲ್ಲರೂ ಕಾರು-ಬೈಕಿನಲ್ಲಿ ಸಂಚರಿಸುವಾಗ ತಾವು ಸಾರ್ವಜನಿಕ ವಾಹನಕ್ಕಾಗಿ ಕಾಯುವ, ಹಣ-ಆಸ್ತಿಗಳ ಹಿಂದೆ ಬೀಳುವವರ ನಡುವೆ ಬಾಡಿಗೆಮನೆಯಲ್ಲಿ ಸುಖ ಕಾಣುವ ಸಂಸಾರ ಇವರದಾಗಿತ್ತು . ತಾವು ನಂಬಿದ ಸಿದ್ಧಾಂತದಂತೆ ಬದುಕಲು ಹೊರಟ ಪ್ರಕಾಶರನ್ನು ಅನುಸರಿಸಿಕೊಂಡು ಹೋದವರು ಸುಕನ್ಯಾ. ಮದುವೆ ಮತ್ತಿತರ ಲೌಕಿಕ ಸಂಗತಿಗಳಿಂದ ವಿಮುಖರಾಗಿದ್ದ ಪ್ರಕಾಶರನ್ನು ಸೆಳೆದದ್ದು ಸುಕನ್ಯಾ ಅವರ ಪ್ರೀತಿ ಮತ್ತು ತ್ಯಾಗ . ಅದು ಇಷ್ಟು ಬೇಗ ಮುಗಿಯುತ್ತದೆ ಎನ್ನುವುದೇ ದುಃಖಕರ ಸಂಗತಿ.  

ವೈಚಾರಿಕವಾಗಿ ಪ್ರಕಾಶರಾಗಿದ್ದ ಪ್ರಕಾಶರ ಬದುಕನ್ನು ಪ್ರೊ. ರಹಮತ್ ತರೀಕೆರೆ, ಡಾ. ರಾಜಪ್ಪ ದಳವಾಯಿ ಅವರು ಬರೆದುಕೊಂಡಿದ್ದಾರೆ. ತಮ್ಮ ಶಿಷ್ಯನ ಅಧ್ಯಯನ, ಪ್ರೀತಿ, ಕಾಳಜಿಗಳ ಕುರಿತ ಅಪಾರ ಗೌರವ ಇವರಲ್ಲಿದೆ.

 ಡಾ. ಪ್ರಕಾಶ್ ಸರ್ ಬರೆದದ್ದು ತೀರಾ ಕಡಿಮೆ. ಪುಸ್ತಕಗಳಿಗೆ ಮುನ್ನುಡಿ/ ಬೆನ್ನುಡಿ/ಪ್ರತಿಕ್ರಿಯೆಯ ರೂಪದಲ್ಲಿ ಬರೆದ ಬರೆಹಗಳನ್ನು ಬಿಟ್ಟರೆ, ಅವರ ವಿದ್ವತ್ಪೂರ್ಣ ಭಾಷಣಗಳೆಲ್ಲ ರೆಕಾರ್ಡ್ ಆಗಲಿಲ್ಲ. ಆದರೆ ಅವರು ಮಾಡಿಟ್ಟ ಟಿಪ್ಪಣಿಗಳು ಇಲ್ಲಿ ಹಲವರಿಂದ ಬರೆಹ ರೂಪ ಪಡೆದುಕೊಂಡಿವೆ. ಭಾಗ ಎರಡರಲ್ಲಿ ಕಾಣಸಿಗುವ ಪ್ರಕಾಶರ ಬಹುಮುಖೀ ಅಧ್ಯಯನಗಳು, ಜೀವಪರ ಕಾಳಜಿಗಳು, ಶಿಸ್ತಿನ ಅಧ್ಯಯನಗಳು ನಮ್ಮನ್ನು ಗಾಢವಾಗಿ ತಟ್ಟುತ್ತವೆ. 
*
ಕಾಜೂರು ಸತೀಶ್ 

Sunday, February 16, 2025

ದಾರಿ

ತಿಮ್ಮ ಎಲ್ಲರೂ ನಡೆಯುವ ದಾರಿಯನ್ನು ತೊರೆದು ಕಲ್ಲು ಮುಳ್ಳುಗಳಿರುವ ದಾರಿಯಲ್ಲಿ ನಡೆಯತೊಡಗಿದ. ಕ್ರಮೇಣ ಅದು ಸವೆದು ಸವೆದು ನಡಿಗೆ ಸಲೀಸಾಯಿತು. ಹೀಗೆ ನಡೆದ ಅವನ ದಾರಿಯ ಗುರುತು ಕಂಡ ಜನರು ಅದೇ ದಾರಿಯಲ್ಲಿ ಸಾಗತೊಡಗಿದರು.
ತಿಮ್ಮ ತನ್ನ ಮೌನವು ಕಳೆದುಹೋದ ಬಗ್ಗೆ ಮರುಗಿದ.
'ಎಲ್ಲಿ, ಹೇಗೆ ನಡೆದರೂ ಜನರು ಸವೆದ ದಾರಿಯನ್ನೇ ಅನುಸರಿಸುತ್ತಾರೆ' ತನ್ನಲ್ಲೇ ಹೇಳಿಕೊಂಡ ತಿಮ್ಮ.
*

✍️ ಕಾಜೂರು ಸತೀಶ್ 

Monday, February 3, 2025

ನಗರ


ನಗರವನ್ನು ನೋಡಿದೆ
ಮುಗುಳ್ನಕ್ಕೆ

ಅಲ್ಲಿ ಯಾರು, ಹೇಗೆ ಬದುಕಬಹುದೆಂದು 
ತಿಳಿಯಲು ತೆರಳಿದ್ದೆ

ಮತ್ತೆ ಮರಳಲೇ ಇಲ್ಲ.
*


ಹಿಂದಿ ಮೂಲ - ಮಂಗಲೇಶ್ ದಬ್ರಾಲ್ 

ಕನ್ನಡಕ್ಕೆ - ಕಾಜೂರು ಸತೀಶ್ 

Sunday, February 2, 2025

ಕೆಂಪು ಹಸ್ತಗಳು



ಮೊದಲ ಬಾರಿಗೆ 
ನೋಡಿದೆ ನಾನು 
ಭ್ರಮರವೊಂದು 
ಕಮಲವಾಗುವುದನ್ನು 
ಕಮಲವು 
ನೀಲ ಕೊಳವಾಗುವುದನ್ನು 
ಮತ್ತೆ ಈ ನೀಲ ಕೊಳ 
ಅಸಂಖ್ಯ ಬಿಳಿಹಕ್ಕಿಗಳಾಗುವುದನ್ನು 
ಮತ್ತೆ ಬಿಳಿಹಕ್ಕಿಗಳೆಲ್ಲ 
ಕೆಂಪು ಆಗಸವಾಗುವುದನ್ನು 
ಆಮೇಲೆ ಆಗಸವು ಬದಲಾಗಿ 
ನಿನ್ನ ಕೆಂಪು ಕರಗಳಲ್ಲಿ ಹನಿಯುವುದನ್ನು 
ಮತ್ತು ಈ ನನ್ನ ಕಣ್ಣುಗಳನ್ನು ಮುಚ್ಚಿದಾಗ 
ಕಣ್ಣಹನಿಗಳೆಲ್ಲ ಕನಸಾಗಿ ಬದಲಾಗುವುದನ್ನು 

ನೋಡಿದೆ ನಾನು ಮೊದಲ ಬಾರಿ ನೋಡಿದೆ 
*


ಹಿಂದಿ ಮೂಲ -ಸರ್ವೇಶ್ವರ ದಯಾಳ್ ಸಕ್ಸೇನಾ 

ಕನ್ನಡಕ್ಕೆ - ಕಾಜೂರು ಸತೀಶ್ 


Thursday, January 30, 2025

ನಡು

ಸುಡುವ ಒಂದು ರಾತ್ರಿ ಬುದ್ಧ ಯಾರಿಗೂ ಹೇಳದೆ ಮೊಬೈಲ್ ಸ್ವಿಚ್ ಆಫ್ ಮಾಡಿ ಕಾಡಿಗೆ ತೆರಳಿದ.

ಕಾಡಿನಲ್ಲಿ ತೇಗದ ಮರಗಳನ್ನು ಮಾತ್ರ ನೆಡಲಾಗಿತ್ತು.

ಧ್ಯಾನಕ್ಕೆ ಒಂದು ಮರವೂ ಸಿಗದಿದ್ದಾಗ ಬುದ್ಧ ಯೋಚಿಸಿದ : ಪ್ರಗತಿಪರರು ಮರ, ಪ್ರಾಣಿ ಎಂದರೆ ಉರಿದು ಬೀಳುತ್ತಾರೆ. 'ಮನುಷ್ಯರು ಅಷ್ಟೇ' ಎನ್ನುತ್ತಾರೆ. ಅವರ ವಿರೋಧಿಗಳು 'ದೇವರು ಅಷ್ಟೇ' ಎನ್ನುತ್ತಾರೆ. ಇವರಿಬ್ಬರೂ ಬದುಕಬೇಕಾದರೆ ನೆರಳು ಕೊಡುವ ಮರ ಬೇಕು ಎಂದು ನಾನು ಹೇಳಿದರೆ ನಡುವಿನಲ್ಲಿ ನನ್ನನ್ನು ನಿಲ್ಲಿಸಿ ಕಲ್ಲು ತೂರುತ್ತಾರೆ.

ಹೀಗೆ ಹೇಳಿ ಒಂದು ಅರಳೀ ಗಿಡವನ್ನು ನೆಟ್ಟು ಮತ್ತೆ ಅರಮನೆಗೆ ಹಿಂತಿರುಗಿದ.

ಎಲ್ಲಿಗೆ ಹೋಗಿದ್ದೆ ಎಂದು ಯಾರೂ ಕೇಳಲಿಲ್ಲ.
*
ಕಾಜೂರು ಸತೀಶ್

ಎಚ್ಚರ

ಬುದ್ಧ ಮಧ್ಯರಾತ್ರಿ ಎದ್ದ.

ರಾಹುಲ ದೀಪ ಆರಿಸಿ ಕಂಬಳಿ ಹೊದ್ದು ಅದರ ಒಳಗಿಂದ ಮೊಬೈಲ್ ನೋಡುತ್ತಾ ಮಲಗಿದ್ದ.

ಯಶೋಧರೆ ಹೊರಗಿನ ಡಿಜೆ ಸದ್ದು ತಡೆಯಲಾಗದೆ ಕಿವಿಗೆ ಹತ್ತಿ ಹಾಕಿ ಮಲಗಿದ್ದಳು.

ಬುದ್ಧ ಮತ್ತೆ ಮಲಗಿದ.
*
ಕಾಜೂರು ಸತೀಶ್

Tuesday, January 28, 2025

ಪರೀಕ್ಷೆ

ಪರೀಕ್ಷೆಯಲ್ಲಿ ತಿಮ್ಮ ಅಪಾರವಾಗಿ ಓದಿದ್ದ. ಆದರೆ, ಪ್ರಶ್ನೆಗಳು ಇಂತಿದ್ದವು :
👉ರಾಜನ ಮೊದಲ ಮಗ ಹುಟ್ಟಿದ್ದೆಲ್ಲಿ?
👉ರಾಜನ ಕೊನೆಯ ಮಗನಿಗೆ ಪಟ್ಟಾಭಿಷೇಕ ಮಾಡಿದ ವರ್ಷ?

ತಿಮ್ಮ ಈ ರಾಜನ ಬಗ್ಗೆ ದಿನಗಟ್ಟಲೆ ಮಾತನಾಡುವ ಸಾಮರ್ಥ್ಯ ಪಡೆದಿದ್ದ. ಅವನಲ್ಲಿ ರಾಜನ ಆಳ್ವಿಕೆಯ ಕುರಿತ ವಿಭಿನ್ನ ಒಳನೋಟಗಳಿದ್ದವು. ಆದರೆ, ದಿನಾಂಕ ಮತ್ತು ಹುಟ್ಟೂರಿನ ಹೆಸರನ್ನು ಅವನು ತಲೆಗೆ ಹಾಕಿಕೊಂಡಿರಲಿಲ್ಲ.
*
✍️ಕಾಜೂರು ಸತೀಶ್

Monday, January 27, 2025

ಶಿಕ್ಷಣ

ಹಳ್ಳಿ ಮೇಷ್ಟ್ರು ಎಷ್ಟು ಕೇಳಿಕೊಂಡರೂ ಪೋಷಕರು ಶಾಲೆಗೆ ಬರುತ್ತಿರಲಿಲ್ಲ.

ಒಂದು ದಿನ ಮೇಷ್ಟ್ರು ರಾಜಕಾರಣಿಯೊಬ್ಬರನ್ನು ಶಾಲೆಗೆ ಆಹ್ವಾನಿಸುವುದಾಗಿಯೂ, ಆ ದಿನ ತಪ್ಪದೆ ಬರಬೇಕೆಂದೂ ಮನೆಮನೆಗೆ ಹೋಗಿ ಪೋಷಕರಿಗೆ ಹೇಳಿಬಂದರು.

ಕಾರ್ಯಕ್ರಮದ ದಿನ ಬಹುತೇಕ ಪೋಷಕರು ಬಂದಿದ್ದರು. ಮೇಷ್ಟ್ರುಒಂದು ಹಾಳೆ ಕೊಟ್ಟು 'ನಿಮ್ಮ ಹೆಸರು ಮತ್ತು ನಿಮ್ಮ ಮಕ್ಕಳು ಓದುತ್ತಿರುವ ತರಗತಿಯನ್ನು ಬರೆಯಿರಿ' ಎಂದರು.

ಕೆಲವರು ಅವರ ಮಕ್ಕಳು ಓದುತ್ತಿರುವ ತರಗತಿಯನ್ನು ಸರಿಯಾಗಿಯೇ ಬರೆದಿದ್ದರು!
*
ಕಾಜೂರು ಸತೀಶ್

Sunday, January 26, 2025

ಅವಧಿ

ಶಿಕ್ಷಕರೆಲ್ಲರನ್ನೂ ಕರೆಸಿ ಒಂದು ಹಾಳೆ ನೀಡಿ ಶಾಲೆಯ 8 ಅವಧಿಗಳು ಮತ್ತು ಅದರ ಸಮಯವನ್ನು ಬರೆಯಲು ತಿಳಿಸಲಾಯಿತು.

ಕೆಲವರು ಸರಿಯಾಗಿ ಬರೆದಿದ್ದರು. ಆದರೆ ಕಡೆಯ ಅವಧಿ ಪೂರ್ಣಗೊಳ್ಳುವ ಸಮಯವನ್ನು ಯಾರೂ ತಪ್ಪಾಗಿ ಬರೆದಿರಲಿಲ್ಲ.
*
ಕಾಜೂರು ಸತೀಶ್


Wednesday, January 22, 2025

ಬಯಕೆ




ಒಂದು ಸಟ್ಟುಗ ಹಿಡಿದು
ಆಕಾಶವನ್ನು ತಿರುವಿಹಾಕುತ್ತೇನೆ
ತಳಹಿಡಿದು ಕಪ್ಪಾದ ಹಗಲನ್ನು
ರಾತ್ರಿಯೆಂದು ಹೆಸರಿಟ್ಟು ಬಡಿಸುತ್ತೇನೆ

ಬೆಳದಿಂಗಳನ್ನು
ತೆಂಗಿನ ಚಟ್ನಿಯ ಹಾಗೆ
ಮೇಲೆ ಹರಡುತ್ತೇನೆ

ಖಾರ ಚಟ್ನಿ ತಿನ್ನುವ ಆಸೆಯಾಗುತಿದೆ
ಸಮುದ್ರದಲ್ಲಿ ಬೆರಳನ್ನದ್ದಿ 
ಮುಳುಗುವ ಸೂರ್ಯನನ್ನು 
ಮೇಲಕ್ಕೆತ್ತಿ ಕರಕರ ತಿನ್ನುತ್ತೇನೆ 

ಹಾ! ಖಾರವಾಗಿ 
 ಕಣ್ಣಿಂದ ನೀರಿಳಿಯುತ್ತಿದೆ 
ನನ್ನ ಹೊಟ್ಟೆಯಲ್ಲಿ 
ಕಾಡು ಮೇಡು ಬೆಟ್ಟ ಗುಡ್ಡ 
ಸುಮುದ್ರಗಳೆಲ್ಲ ಬೆಳಕು ಬೆಳಕೆಂದು 
ಚೀರಾಡುತ್ತಿದೆ 

ಈ ರಾತ್ರಿ 
ಪ್ರಪಂಚ ನನ್ನ ಹೊಟ್ಟೆಯಲ್ಲಿ 
ತಣ್ಣಗೆ ಮಲಗಿರಲಿ 
*


ಮಲಯಾಳಂ ಮೂಲ- ಸ್ಮಿತಾ ಶೈಲೇಶ್ 

ಕನ್ನಡಕ್ಕೆ - ಕಾಜೂರು ಸತೀಶ್ 

Tuesday, January 21, 2025

ಕೆಕೆಜಿ ಸರ್ ಗೆ ಅಶ್ರುತರ್ಪಣ

2006ರಲ್ಲಿ ಕಾಜೂರು ಶಾಲೆಯ ಸುವರ್ಣ ಮಹೋತ್ಸವವಿತ್ತು. ಅದರ ಅಂಗವಾಗಿ ಶಾಲೆಯಲ್ಲಿ ಓದಿದ ಆಯ್ದ ಹಿರಿಯ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವಿತ್ತು. ಪಟ್ಟಿಯಲ್ಲಿ ಕೆ ಕೆ ಗಂಗಾಧರನ್ ಸರ್ ಅವರ ಹೆಸರನ್ನು ನೋಡಿದ ನನಗೆ ಖುಷಿಯೋ ಖುಷಿ (ಅದುವರೆಗೆ ಅವರನ್ನು ನೋಡಿರಲಿಲ್ಲ, ಆ ಸಂದರ್ಭದಲ್ಲಾದರೂ ನೋಡಬಹುದಲ್ಲಾ ಎಂಬ ಖುಷಿ ). ಆ ದಿನ ಅವರನ್ನು ನೋಡಿದೆ. ಅವರ ಹಸ್ತಾಕ್ಷರ ಇರುವ ಪರಿಚಯ ಪತ್ರವನ್ನು ಪಡೆದೆ
(ಮಾತನಾಡಿಸಲಿಲ್ಲ!).







ಆದರೆ ಕೆಕೆಜಿ ಸರ್ ಗೆ ನನ್ನ ಪರಿಚಯವಿರಲಿಲ್ಲ. 2007ರಿಂದ ನಿರಂತರವಾಗಿ 'ತುಷಾರ' ಮಾಸಪತ್ರಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದ ನನ್ನ ಹೆಸರು ನೋಡಿ, ಅವರ ಸಂಬಂಧಿ(ಅನು ಅಕ್ಕ )ಯೊಬ್ಬರಿಗೆ ಕರೆ ಮಾಡಿ ನನ್ನ ಬಗ್ಗೆ ವಿಚಾರಿಸಿಕೊಂಡರಂತೆ. ಅವರ ಪರಿಚಯವನ್ನು 'ಗಡಿನಾಡ ಸಂಚಾರಿ' ಪತ್ರಿಕೆಯಲ್ಲಿ ಬರೆದ ಮೇಲೆ ಆಗಿಂದಾಗ್ಗೆ ನನಗೆ ಕರೆ ಮಾಡುತ್ತಿದ್ದರು. ನಾನು ನಿರಂತರವಾಗಿ ಅವರಿಗೆ sms ಕಳಿಸುತ್ತಿದ್ದೆ. ದಿನದ ಮೊದಲ ರಿಪ್ಲೈ ಅವರದೇ ಆಗಿರುತ್ತಿತ್ತು. English ಭಾಷೆಯಲ್ಲಿ ಉತ್ತಮ ಹಿಡಿತ ಅವರಿಗಿತ್ತು. ಬೆಳಿಗ್ಗೆ ನಾಲ್ಕರ ಹೊತ್ತಿನಲ್ಲೆಲ್ಲಾ ಅವರ ಅನುವಾದ ಕಾರ್ಯವು ಆರಂಭವಾಗುತ್ತಿತ್ತು.




ಕಾಜೂರನ್ನು ಎದೆಯೊಳಗೆ ಹೊತ್ತು ಅಲೆಯುವ ಕೆಕೆಜಿ ಸರ್ ಇಲ್ಲಿನ ಹಲವು ಸಂಗತಿಗಳ ಬಗ್ಗೆ ನನಗೆ ಹೇಳಿದ್ದರು. ಅವು ಪುನರಾವರ್ತನೆ ಆಗುತ್ತಿದ್ದರೂ ಹೊಸತೆಂಬಂತೆ ಅದನ್ನು ವಿವರಿಸುತ್ತಿದ್ದರು. ಕೆಲವು ಸಂಗತಿಗಳನ್ನು ಬಹಿರಂಗಗೊಳಿಸಲು ಆಗುವುದಿಲ್ಲ ಎನ್ನುತ್ತಲೇ ಅವುಗಳನ್ನು ನನಗೆ ಹೇಳುತ್ತಿದ್ದರು. ಶಾಲೆಗೆ ಹೋಗುವಾಗ ಗೆಳೆಯರಿಗೆ ತಾವು ಮುಂದೆ ಹೋಗಿರುವುದನ್ನು ತಿಳಿಸಲು ದೊಡ್ಡ ಕಲ್ಲಿಗೆ ಮೂತ್ರ ವಿಸರ್ಜನೆ ಮಾಡುತ್ತಿದ್ದ ಪ್ರಸಂಗದ ಬಗ್ಗೆ ಹೇಳಿದ್ದರು!( ಆ ಕಲ್ಲು ಈಗ ಏನಾಗಿದೆ ಎನ್ನುವ ವಿವರವನ್ನು ಇಲ್ಲಿ ಪ್ರಸ್ತಾಪಿಸಲಾರೆ!)



ಅನ್ಯಭಾಷಿಗರಾಗಿ ಇಲ್ಲಿ ಅನುಭವಿಸಿದ ಶೋಷಣೆಗಳು ಅವರ ಎದೆಯೊಳಗೆ ಹಾಗೇ ಬೀಡುಬಿಟ್ಟಿದ್ದವು. ಅದನ್ನು ಎದುರಿಸಲು ಅವರು ಬಳಸಿದ ಅಸ್ತ್ರವೇ ಬರೆಹ. ಪತ್ರಕರ್ತನಾಗುವ ಅವಕಾಶ ತಪ್ಪಿದ ಮೇಲೆ ಕೊಥಾರಿ ಕಾಫಿ ಸಂಸ್ಥೆಯಲ್ಲಿ ವೃತ್ತಿಬದುಕನ್ನು ಆರಂಭಿಸಿ , ರೈಲ್ವೇ ಮೇಲ್ ಸರ್ವೀಸ್ ನಲ್ಲಿ ಬದುಕನ್ನು ಗಟ್ಟಿಗೊಳಿಸಿದ ಕೆಕೆಜಿ ಸರ್, ವೃತ್ತಿಯನ್ನು ಮಾಡುತ್ತಲೇ ಅನುವಾದವನ್ನು ಶ್ರದ್ಧೆಯಿಂದ ರೂಢಿಸಿಕೊಂಡರು . ಜನಪ್ರಿಯ ಸಾಹಿತ್ಯಕ್ಕೂ ಕೈಹಾಕಿ ಮತ್ತೊಂದು ಬಗೆಯ ಓದುಗ ವಲಯವನ್ನೂ ತಲುಪಿದರು(ಈ ಬಗ್ಗೆ ಹಲವರು ನನ್ನೊಂದಿಗೆ ತಕರಾರನ್ನು ಹಂಚಿಕೊಂಡಿದ್ದರು- ಮುಖ್ಯವಾಗಿ ಏಟುಮಾನೂರ್   ಶಿವಕುಮಾರ್‌ ಅವರ 'ಅಷ್ಟಮಂಗಲ'ದ ಬಗ್ಗೆ )


ಕೆಕೆಜಿ ಸರ್ ಅವರನ್ನು ನಾನು ನೋಡಿರುವುದು ಮೂರು ಬಾರಿ. 2006ರ ಫೆಬ್ರವರಿ 20 , 2015ರ ಡಿಸೆಂಬರ್ ತಿಂಗಳಿನಲ್ಲಿ ಮತ್ತು 2018ರ ಜುಲೈ 26ರಂದು. ಅವರನ್ನು ಮುಖಾಮುಖಿಯಾಗಿ ಮಾತನಾಡಿಸಿದ್ದು ಮೂರನೇ ಬಾರಿ- 2018ರ ಜುಲೈ 26, ಆಲೂರು ಸಿದ್ದಾಪುರ ಮೊರಾರ್ಜಿ ಶಾಲೆಯಲ್ಲಿ ನಡೆದ ಸಾಹಿತ್ಯ ತಾಲೂಕು ಸಮ್ಮೇಳನದಲ್ಲಿ!


ಕೆಕೆಜಿ ಸರ್ ಅಧ್ಯಯನ ನಿರತರಾಗಿದ್ದರಿಂದ ವೈಚಾರಿಕವಾಗಿ ಖಚಿತ ನಿಲುವನ್ನು ಹೊಂದಿದ್ದರು. ಮೌಢ್ಯವನ್ನು ವಿರೋಧಿಸುತ್ತಿದ್ದರು. ಶೋಷಣೆಗೆ ಒಳಗಾದ ಜೀವವು ಜೀವಪರವಾಗಿರುತ್ತದೆ- ಕೆಕೆಜಿ ಸರ್ ಅಂಥವರು. ಶ್ರೀಮಂತರೊಬ್ಬರ ಮನೆಯ ಅಂಗಳವನ್ನು ಪ್ರವೇಶ ಮಾಡಿದ್ದಕ್ಕೆ ಅಲ್ಲಿಂದ ಬೈದು, ಬಂದೂಕು ತೋರಿಸಿ ಓಡಿಸಿದ್ದು, ಮೇಷ್ಟ್ರು -ಹರಿದ ಚಡ್ಡಿಯ ಮೇಲೆ ಹೊಡೆದದ್ದು, ಅದು ಮತ್ತಷ್ಟೂ ಹರಿದದ್ದು , ಶ್ರೀಮಂತ ವ್ಯಕ್ತಿಯೊಬ್ಬರು ಊರಿನವರ ಹಣ ನುಂಗಿದ್ದಕ್ಕೆ ಪತ್ರಿಕೆಯಲ್ಲಿ ( ಬೇರೆಯವರ ಹೆಸರಿನಲ್ಲಿ) ಬರೆದು ಪ್ರತಿಭಟನೆಯ ಸಂಚಲನ ಮೂಡಿಸಿದ್ದು...ಎಲ್ಲವೂ ಅವರನ್ನು ಇನ್ನಿಲ್ಲದ ಹಾಗೆ ಕಾಡುತ್ತಿದ್ದವು.


' ಸತೀಶ್, ನೀವು ಬರೆಯುತ್ತಿರುವ ವಿಷಯ ನಿಮ್ಮ ಪಕ್ಕದ ಮನೆಯವರಿಗೆ ಗೊತ್ತಾ?' ಎನ್ನುತ್ತಿದ್ದರು. ಇಲ್ಲಿನ ಪರಿಸ್ಥಿತಿ ಅಷ್ಟು ಸೂಕ್ಷ್ಮವಾಗಿ ಅವರಿಗೆ ಅರಿವಿತ್ತು. ಕಲೆಯನ್ನು ಹಣದಿಂದ ತೂಗಿ ನೋಡುವ ಊರು ಎನ್ನುತ್ತಿದ್ದರು. ಇಲ್ಲಿನ ಹಲವರ ಬಗ್ಗೆ ಮಾತನಾಡುತ್ತಿದ್ದರು. 'ಸ್ಮಿತಾ, ಸುನೀತಾ, ಸಹನಾ, ಸಂಗೀತಾ, ರಮ್ಯಾ,ಮೋಹನ್ ದಾಸ್, ಉಳ್ಳಿಯಡ ಪೂವಯ್ಯ, ರೇವತಿ ಪೂವಯ್ಯ, ಟಿ ಪಿ ರಮೇಶ್, ಲೋಕೇಶ್ ಸಾಗರ್, ಹಾತಿ, ಮಣಿ, ಪಪ್ಪನ್, ಮಾಧವನ್, ದೀಪಕ್, ರಾಘವನ್, ಬಾಲಕೃಷ್ಣ' ಇವರನ್ನೆಲ್ಲಾ ವಿಚಾರಿಸುತ್ತಿದ್ದರು. ಇವರ ಬದುಕಿನ/ಬರೆಹದ ಹಲವು ಆಯಾಮಗಳನ್ನು ವಿಶ್ಲೇಷಿಸುತ್ತಿದ್ದರು-ಅವೆಲ್ಲವೂ ಪ್ರಾಮಾಣಿಕವಾಗಿರುತ್ತಿದ್ದವು.


ಡಾ.ಅಶೋಕ್ ಕುಮಾರ್ (ನಾನು ತುಂಬಾ ಗೌರವಿಸುವ ವ್ಯಕ್ತಿ ), ಕೆ ಕೆ ನಾಯರ್, ಕೋವರ್ಕೊಲ್ಲಿ ಕರುಣಾಕರ, ನಾದಾ, ಮೋಹನ್ ಕುಂಟಾರ್, ಪಾರ್ವತಿ ಐತಾಳ್, ಸಿ ರಾಘವನ್, ತೇರಳಿ ಶೇಖರ್ , ಕೆ ವಿ ಕುಮಾರನ್, ಪಯ್ಯನ್ನೂರು ಕುಂಞಿರಾಮನ್‌, ಬಿ ಕೆ ತಿಮ್ಮಪ್ಪ, ಸುಷ್ಮಾ ಶಂಕರ್ ಮೊದಲಾದ ಅನುವಾದಕರ ಬಗ್ಗೆ ನನ್ನೊಂದಿಗೆ ಚರ್ಚಿಸುತ್ತಿದ್ದರು.


'ಪ್ರಜಾವಾಣಿ' ಬಳಗದ ಮೇಲೆ ಅವರಿಗೆ ಅಭಿಮಾನವಿತ್ತು(ನನಗದು ಪೂರ್ವಗ್ರಹದ ಹಾಗೆ ಅನಿಸುತ್ತಿತ್ತು . ನಾನು ಆ ಕುರಿತು ಅವರೊಂದಿಗೆ ಚರ್ಚಿಸಲಿಲ್ಲ). ದಶಕದ ಹಿಂದೆ ವಿಜಯ ಕರ್ನಾಟಕಕ್ಕೂ ನನ್ನಿಂದ ಬರೆಸಿದರು. ಸಂಕ್ರಮಣ ದಲ್ಲಿ ಪ್ರಕಟಗೊಂಡ ಕವಿತೆಯ ಸಾಲಗಳನ್ನು ಅವರು ನೆನಪಿಟ್ಟುಕೊಂಡು ಉಲ್ಲೇಖಸುತ್ತಿದ್ದರು (ನನ್ನ ಮೇಲೆ ಅಷ್ಟು ಪ್ರೀತಿ ಇತ್ತು ಅವರಿಗೆ).


ಸಾಹಿತಿ/ಸಾಹಿತ್ಯದ ಮೇಲೆ ಇರುವ ಪತ್ರಿಕಾ ರಾಜಕಾರಣದ ಸೂಕ್ಷ್ಮ ಅನುಭವಿರುವ ನನಗೆ ಪತ್ರಿಕೆಗಳಿಗೆ ಬರೆಯುವುದು 'ಮಾರಿಕೊಳ್ಳುವುದು' ಎಂದೇ ಅನಿಸಿಬಿಟ್ಟಿತ್ತು ! ಅವರು ಎಷ್ಟು ಹೇಳಿದರೂ ನಾನು ನನ್ನ ಪಾಡಿಗೆ ಏನೇನೋ ಗೀಚುತ್ತಾ ಓದುತ್ತಾ ಇರತೊಡಗಿದೆ(ಅವರಿಗೆ ಬೇಸರ ಬರಿಸುವಷ್ಟು ಬದಲಾಗದೆ ಉಳಿದೆ ). ನಿಮ್ಮ ಹಾಗೆ ಇದ್ದರೆ ಸಾಹಿತ್ಯ ಲೋಕದಲ್ಲಿ ಯಾರೂ ಗಮನಿಸುವುದಿಲ್ಲ ಎನ್ನುತ್ತಿದ್ದರು.

*
"ಸತೀಶ್ ನಿಮಗೆ ___ ಗೊತ್ತಾ?
ಗೊತ್ತು ಸರ್. ತುಂಬಾ ಚೆನ್ನಾಗಿ ಬರೀತಾರೆ ಸರ್.
ನಿಮಗೆ ಒಂದು ಸನ್ಮಾನ ಇದೆ ಬನ್ನಿ ಸರ್ ಅಂತ ಕರೆದ್ರು. ಸನ್ಮಾನಕ್ಕೆ ಹಣ ಕೊಡ್ಬೇಕಂತೆ!
ಸರ್ ಅವ್ರು ಕೇಳಿದ್ದಾ?
ಹೌದು
ಹಾಗೆ ಬರೆಯುವವರು ಹೀಗೆಲ್ಲಾ ಕೇಳ್ತಾರಾ ಸರ್?
ನಿಮಗೆ ಇದೆಲ್ಲಾ ಗೊತ್ತಾಗಲ್ಲ ಸತೀಶ್..."
*


ಕಳೆದ ಒಂದೆರಡು ವರ್ಷಗಳಿಂದ ಮೊಬೈಲ್ ಕರೆಗಳು ನರಕದ ಹಾಗೆ ಅನ್ನಿಸಿ ಅದರಿಂದ ದೂರ ಉಳಿದಿದ್ದೆ. ಹಲವು ಮಂದಿ ಕರೆಮಾಡಿ ನಿರಾಶರಾಗಿದ್ದವರ ಪಟ್ಟಿಯಲ್ಲಿ ಕೆಕೆಜಿ ಸರ್ ಕೂಡ ಒಬ್ಬರಾಗಿದ್ದರು(ಸತೀಶ್ ಫೋನಿಗೆ ಸಿಗುವುದೇ ಇಲ್ಲ ಎಂದು ಹೇಳಿದ್ದರಂತೆ).
ಕಡೆಯ ಬಾರಿ ಕರೆಮಾಡಿದಾಗ ಅವರ ಧ್ವನಿ ಕ್ಷೀಣಿಸಿತ್ತು. ನಾನು ಬರೆಯುವುದನ್ನೂ ಓದುವುದನ್ನೂ ಬಿಟ್ಟುಬಿಟ್ಟೆ ಸತೀಶ್ ಎಂದರು. ತಮ್ಮ ಅನಾರೋಗ್ಯದ ಬಗ್ಗೆ ಹೇಳಿಕೊಂಡರು. ದುಃಖವಾಯಿತು. ಗಂಟೆಗಟ್ಟಲೆ ಮಾತನಾಡುತ್ತಿದ್ದ ಕೆಕೆಜಿ ಸರ್ ಹತ್ತು ನಿಮಿಷಕ್ಕೇ ಫೋನಿಟ್ಟರು! 'ಆಥರ್ಸ್ ಕಾಪಿ' ಅನುವಾದದ ಬಗ್ಗೆ ಹೇಳಬೇಕೆಂದುಕೊಂಡದ್ದು ನನ್ನೊಳಗೇ ಉಳಿಯಿತು.


ಕೆಕೆಜಿ ಸರ್ ಬಾಡಿಗೆ ಮನೆಯಲ್ಲಿಯೇ ಇದ್ದರು.ಇಷ್ಟು ವರ್ಷ ಕೆಲಸ ಮಾಡಿ ಇನ್ನೂ ಈ ಪುಟ್ಟ ಬಾಡಿಗೆ ಮನೆಯಲ್ಲೇ ಇದ್ದೇನೆ ಸತೀಶ್ ಎಂದು ಆಗ ಅವರಿಗಿದ್ದ ಹಣ ಮಾಡಬಹುದಾದ ಅವಕಾಶದ ಬಗ್ಗೆ ಹೇಳಿದ್ದರು. ಕಡೆಗೆ ತಾವು ವೃತ್ತಿಯಲ್ಲಿದ್ದಾಗ ರೆಜಿಸ್ಟರ್ ಮಾಡಿಸಿದ್ದ ಹೌಸಿಂಗ್ ಬೋರ್ಡ್ ಸೈಟಿನಲ್ಲಿ ಮನೆಕಟ್ಟಿಸಿ ಆಮಂತ್ರಣ ಕಳಿಸಿದ್ದರು. ಮಗನ ಮದುವೆಗೂ ಆಮಂತ್ರಣವಿತ್ತು. ಇಲ್ಲಿನ ಪರಿಸ್ಥಿತಿಯ ಅರಿವಿರುವ ಅವರು ಬರಲಿಲ್ಲವೆಂದು ಬೇಸರಿಸಿಕೊಳ್ಳಲಿಲ್ಲ. ಅವರ ಮೊದಲ ಕೃತಿ ಪ್ರಕಟಗೊಂಡಿದ್ದು 2009ರಲ್ಲಿ, ನಿವೃತ್ತಿಯ ಅನಂತರ!

ಜನಸಾಮಾನ್ಯರಿಗೆ ಅರ್ಥವಾಗುವ ಹಾಗೆ ಅನುವಾದಿಸಬೇಕು ಸತೀಶ್. ಮೂಲ ಪದವನ್ನೇ ಇಡುವುದು, ಅಡಿ ಟಿಪ್ಪಣಿ ಕೊಡುವುದು- ಇವು ಓದುಗನಿಗೆ ರಸಭಂಗ ಉಂಟು ಮಾಡುತ್ತದೆ ಎನ್ನುತ್ತಿದ್ದರು. ತಾವು ಮೊದಮೊದಲು ಮಾಡುತ್ತಿದ್ದ ತಪ್ಪುಗಳನ್ನು ಹೇಳುತ್ತಿದ್ದರು. ಕಮಲಾದಾಸ್, ಲಂಕೇಶ್, ವಾಸುದೇವನ್ ನಾಯರ್ ಮೊದಲಾದ ಲೇಖಕರ ಒಡನಾಟವನ್ನು ಹೇಳಿಕೊಳ್ಳುತ್ತಿದ್ದರು.
*


ಮೊನ್ನೆ, ಜನವರಿ 19ಕ್ಕೆ ಕೆಕೆಜಿ ಸರ್ ನಮ್ಮೆಲ್ಲರಿಗೆ ವಿದಾಯ ಹೇಳಿ ಹೊರಟರು. ಅವರು ಬರೆದು ಅಮರರಾದರು. ಅವರ ಅನುಭವಗಳನ್ನೆಲ್ಲ ಮೊಗೆಮೊಗೆದು ನಮ್ಮೊಳಗೆ ತುಂಬಿ ಹೊರಟರು -ಅಮರರಾದರು.

ಅಶ್ರುತರ್ಪಣ ಸರ್🙏
*

✍️ಕಾಜೂರು ಸತೀಶ್