ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Tuesday, January 21, 2025

ಕೆಕೆಜಿ ಸರ್ ಗೆ ಅಶ್ರುತರ್ಪಣ

2006ರಲ್ಲಿ ಕಾಜೂರು ಶಾಲೆಯ ಸುವರ್ಣ ಮಹೋತ್ಸವವಿತ್ತು. ಅದರ ಅಂಗವಾಗಿ ಶಾಲೆಯಲ್ಲಿ ಓದಿದ ಆಯ್ದ ಹಿರಿಯ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವಿತ್ತು. ಪಟ್ಟಿಯಲ್ಲಿ ಕೆ ಕೆ ಗಂಗಾಧರನ್ ಸರ್ ಅವರ ಹೆಸರನ್ನು ನೋಡಿದ ನನಗೆ ಖುಷಿಯೋ ಖುಷಿ (ಅದುವರೆಗೆ ಅವರನ್ನು ನೋಡಿರಲಿಲ್ಲ, ಆ ಸಂದರ್ಭದಲ್ಲಾದರೂ ನೋಡಬಹುದಲ್ಲಾ ಎಂಬ ಖುಷಿ ). ಆ ದಿನ ಅವರನ್ನು ನೋಡಿದೆ. ಅವರ ಹಸ್ತಾಕ್ಷರ ಇರುವ ಪರಿಚಯ ಪತ್ರವನ್ನು ಪಡೆದೆ
(ಮಾತನಾಡಿಸಲಿಲ್ಲ!).







ಆದರೆ ಕೆಕೆಜಿ ಸರ್ ಗೆ ನನ್ನ ಪರಿಚಯವಿರಲಿಲ್ಲ. 2007ರಿಂದ ನಿರಂತರವಾಗಿ 'ತುಷಾರ' ಮಾಸಪತ್ರಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದ ನನ್ನ ಹೆಸರು ನೋಡಿ, ಅವರ ಸಂಬಂಧಿ(ಅನು ಅಕ್ಕ )ಯೊಬ್ಬರಿಗೆ ಕರೆ ಮಾಡಿ ನನ್ನ ಬಗ್ಗೆ ವಿಚಾರಿಸಿಕೊಂಡರಂತೆ. ಅವರ ಪರಿಚಯವನ್ನು 'ಗಡಿನಾಡ ಸಂಚಾರಿ' ಪತ್ರಿಕೆಯಲ್ಲಿ ಬರೆದ ಮೇಲೆ ಆಗಿಂದಾಗ್ಗೆ ನನಗೆ ಕರೆ ಮಾಡುತ್ತಿದ್ದರು. ನಾನು ನಿರಂತರವಾಗಿ ಅವರಿಗೆ sms ಕಳಿಸುತ್ತಿದ್ದೆ. ದಿನದ ಮೊದಲ ರಿಪ್ಲೈ ಅವರದೇ ಆಗಿರುತ್ತಿತ್ತು. English ಭಾಷೆಯಲ್ಲಿ ಉತ್ತಮ ಹಿಡಿತ ಅವರಿಗಿತ್ತು. ಬೆಳಿಗ್ಗೆ ನಾಲ್ಕರ ಹೊತ್ತಿನಲ್ಲೆಲ್ಲಾ ಅವರ ಅನುವಾದ ಕಾರ್ಯವು ಆರಂಭವಾಗುತ್ತಿತ್ತು.




ಕಾಜೂರನ್ನು ಎದೆಯೊಳಗೆ ಹೊತ್ತು ಅಲೆಯುವ ಕೆಕೆಜಿ ಸರ್ ಇಲ್ಲಿನ ಹಲವು ಸಂಗತಿಗಳ ಬಗ್ಗೆ ನನಗೆ ಹೇಳಿದ್ದರು. ಅವು ಪುನರಾವರ್ತನೆ ಆಗುತ್ತಿದ್ದರೂ ಹೊಸತೆಂಬಂತೆ ಅದನ್ನು ವಿವರಿಸುತ್ತಿದ್ದರು. ಕೆಲವು ಸಂಗತಿಗಳನ್ನು ಬಹಿರಂಗಗೊಳಿಸಲು ಆಗುವುದಿಲ್ಲ ಎನ್ನುತ್ತಲೇ ಅವುಗಳನ್ನು ನನಗೆ ಹೇಳುತ್ತಿದ್ದರು. ಶಾಲೆಗೆ ಹೋಗುವಾಗ ಗೆಳೆಯರಿಗೆ ತಾವು ಮುಂದೆ ಹೋಗಿರುವುದನ್ನು ತಿಳಿಸಲು ದೊಡ್ಡ ಕಲ್ಲಿಗೆ ಮೂತ್ರ ವಿಸರ್ಜನೆ ಮಾಡುತ್ತಿದ್ದ ಪ್ರಸಂಗದ ಬಗ್ಗೆ ಹೇಳಿದ್ದರು!( ಆ ಕಲ್ಲು ಈಗ ಏನಾಗಿದೆ ಎನ್ನುವ ವಿವರವನ್ನು ಇಲ್ಲಿ ಪ್ರಸ್ತಾಪಿಸಲಾರೆ!)



ಅನ್ಯಭಾಷಿಗರಾಗಿ ಇಲ್ಲಿ ಅನುಭವಿಸಿದ ಶೋಷಣೆಗಳು ಅವರ ಎದೆಯೊಳಗೆ ಹಾಗೇ ಬೀಡುಬಿಟ್ಟಿದ್ದವು. ಅದನ್ನು ಎದುರಿಸಲು ಅವರು ಬಳಸಿದ ಅಸ್ತ್ರವೇ ಬರೆಹ. ಪತ್ರಕರ್ತನಾಗುವ ಅವಕಾಶ ತಪ್ಪಿದ ಮೇಲೆ ಕೊಥಾರಿ ಕಾಫಿ ಸಂಸ್ಥೆಯಲ್ಲಿ ವೃತ್ತಿಬದುಕನ್ನು ಆರಂಭಿಸಿ , ರೈಲ್ವೇ ಮೇಲ್ ಸರ್ವೀಸ್ ನಲ್ಲಿ ಬದುಕನ್ನು ಗಟ್ಟಿಗೊಳಿಸಿದ ಕೆಕೆಜಿ ಸರ್, ವೃತ್ತಿಯನ್ನು ಮಾಡುತ್ತಲೇ ಅನುವಾದವನ್ನು ಶ್ರದ್ಧೆಯಿಂದ ರೂಢಿಸಿಕೊಂಡರು . ಜನಪ್ರಿಯ ಸಾಹಿತ್ಯಕ್ಕೂ ಕೈಹಾಕಿ ಮತ್ತೊಂದು ಬಗೆಯ ಓದುಗ ವಲಯವನ್ನೂ ತಲುಪಿದರು(ಈ ಬಗ್ಗೆ ಹಲವರು ನನ್ನೊಂದಿಗೆ ತಕರಾರನ್ನು ಹಂಚಿಕೊಂಡಿದ್ದರು- ಮುಖ್ಯವಾಗಿ ಏಟುಮಾನೂರ್   ಶಿವಕುಮಾರ್‌ ಅವರ 'ಅಷ್ಟಮಂಗಲ'ದ ಬಗ್ಗೆ )


ಕೆಕೆಜಿ ಸರ್ ಅವರನ್ನು ನಾನು ನೋಡಿರುವುದು ಮೂರು ಬಾರಿ. 2006ರ ಫೆಬ್ರವರಿ 20 , 2015ರ ಡಿಸೆಂಬರ್ ತಿಂಗಳಿನಲ್ಲಿ ಮತ್ತು 2018ರ ಜುಲೈ 26ರಂದು. ಅವರನ್ನು ಮುಖಾಮುಖಿಯಾಗಿ ಮಾತನಾಡಿಸಿದ್ದು ಮೂರನೇ ಬಾರಿ- 2018ರ ಜುಲೈ 26, ಆಲೂರು ಸಿದ್ದಾಪುರ ಮೊರಾರ್ಜಿ ಶಾಲೆಯಲ್ಲಿ ನಡೆದ ಸಾಹಿತ್ಯ ತಾಲೂಕು ಸಮ್ಮೇಳನದಲ್ಲಿ!


ಕೆಕೆಜಿ ಸರ್ ಅಧ್ಯಯನ ನಿರತರಾಗಿದ್ದರಿಂದ ವೈಚಾರಿಕವಾಗಿ ಖಚಿತ ನಿಲುವನ್ನು ಹೊಂದಿದ್ದರು. ಮೌಢ್ಯವನ್ನು ವಿರೋಧಿಸುತ್ತಿದ್ದರು. ಶೋಷಣೆಗೆ ಒಳಗಾದ ಜೀವವು ಜೀವಪರವಾಗಿರುತ್ತದೆ- ಕೆಕೆಜಿ ಸರ್ ಅಂಥವರು. ಶ್ರೀಮಂತರೊಬ್ಬರ ಮನೆಯ ಅಂಗಳವನ್ನು ಪ್ರವೇಶ ಮಾಡಿದ್ದಕ್ಕೆ ಅಲ್ಲಿಂದ ಬೈದು, ಬಂದೂಕು ತೋರಿಸಿ ಓಡಿಸಿದ್ದು, ಮೇಷ್ಟ್ರು -ಹರಿದ ಚಡ್ಡಿಯ ಮೇಲೆ ಹೊಡೆದದ್ದು, ಅದು ಮತ್ತಷ್ಟೂ ಹರಿದದ್ದು , ಶ್ರೀಮಂತ ವ್ಯಕ್ತಿಯೊಬ್ಬರು ಊರಿನವರ ಹಣ ನುಂಗಿದ್ದಕ್ಕೆ ಪತ್ರಿಕೆಯಲ್ಲಿ ( ಬೇರೆಯವರ ಹೆಸರಿನಲ್ಲಿ) ಬರೆದು ಪ್ರತಿಭಟನೆಯ ಸಂಚಲನ ಮೂಡಿಸಿದ್ದು...ಎಲ್ಲವೂ ಅವರನ್ನು ಇನ್ನಿಲ್ಲದ ಹಾಗೆ ಕಾಡುತ್ತಿದ್ದವು.


' ಸತೀಶ್, ನೀವು ಬರೆಯುತ್ತಿರುವ ವಿಷಯ ನಿಮ್ಮ ಪಕ್ಕದ ಮನೆಯವರಿಗೆ ಗೊತ್ತಾ?' ಎನ್ನುತ್ತಿದ್ದರು. ಇಲ್ಲಿನ ಪರಿಸ್ಥಿತಿ ಅಷ್ಟು ಸೂಕ್ಷ್ಮವಾಗಿ ಅವರಿಗೆ ಅರಿವಿತ್ತು. ಕಲೆಯನ್ನು ಹಣದಿಂದ ತೂಗಿ ನೋಡುವ ಊರು ಎನ್ನುತ್ತಿದ್ದರು. ಇಲ್ಲಿನ ಹಲವರ ಬಗ್ಗೆ ಮಾತನಾಡುತ್ತಿದ್ದರು. 'ಸ್ಮಿತಾ, ಸುನೀತಾ, ಸಹನಾ, ಸಂಗೀತಾ, ರಮ್ಯಾ,ಮೋಹನ್ ದಾಸ್, ಉಳ್ಳಿಯಡ ಪೂವಯ್ಯ, ರೇವತಿ ಪೂವಯ್ಯ, ಟಿ ಪಿ ರಮೇಶ್, ಲೋಕೇಶ್ ಸಾಗರ್, ಹಾತಿ, ಮಣಿ, ಪಪ್ಪನ್, ಮಾಧವನ್, ದೀಪಕ್, ರಾಘವನ್, ಬಾಲಕೃಷ್ಣ' ಇವರನ್ನೆಲ್ಲಾ ವಿಚಾರಿಸುತ್ತಿದ್ದರು. ಇವರ ಬದುಕಿನ/ಬರೆಹದ ಹಲವು ಆಯಾಮಗಳನ್ನು ವಿಶ್ಲೇಷಿಸುತ್ತಿದ್ದರು-ಅವೆಲ್ಲವೂ ಪ್ರಾಮಾಣಿಕವಾಗಿರುತ್ತಿದ್ದವು.


ಡಾ.ಅಶೋಕ್ ಕುಮಾರ್ (ನಾನು ತುಂಬಾ ಗೌರವಿಸುವ ವ್ಯಕ್ತಿ ), ಕೆ ಕೆ ನಾಯರ್, ಕೋವರ್ಕೊಲ್ಲಿ ಕರುಣಾಕರ, ನಾದಾ, ಮೋಹನ್ ಕುಂಟಾರ್, ಪಾರ್ವತಿ ಐತಾಳ್, ಸಿ ರಾಘವನ್, ತೇರಳಿ ಶೇಖರ್ , ಕೆ ವಿ ಕುಮಾರನ್, ಪಯ್ಯನ್ನೂರು ಕುಂಞಿರಾಮನ್‌, ಬಿ ಕೆ ತಿಮ್ಮಪ್ಪ, ಸುಷ್ಮಾ ಶಂಕರ್ ಮೊದಲಾದ ಅನುವಾದಕರ ಬಗ್ಗೆ ನನ್ನೊಂದಿಗೆ ಚರ್ಚಿಸುತ್ತಿದ್ದರು.


'ಪ್ರಜಾವಾಣಿ' ಬಳಗದ ಮೇಲೆ ಅವರಿಗೆ ಅಭಿಮಾನವಿತ್ತು(ನನಗದು ಪೂರ್ವಗ್ರಹದ ಹಾಗೆ ಅನಿಸುತ್ತಿತ್ತು . ನಾನು ಆ ಕುರಿತು ಅವರೊಂದಿಗೆ ಚರ್ಚಿಸಲಿಲ್ಲ). ದಶಕದ ಹಿಂದೆ ವಿಜಯ ಕರ್ನಾಟಕಕ್ಕೂ ನನ್ನಿಂದ ಬರೆಸಿದರು. ಸಂಕ್ರಮಣ ದಲ್ಲಿ ಪ್ರಕಟಗೊಂಡ ಕವಿತೆಯ ಸಾಲಗಳನ್ನು ಅವರು ನೆನಪಿಟ್ಟುಕೊಂಡು ಉಲ್ಲೇಖಸುತ್ತಿದ್ದರು (ನನ್ನ ಮೇಲೆ ಅಷ್ಟು ಪ್ರೀತಿ ಇತ್ತು ಅವರಿಗೆ).


ಸಾಹಿತಿ/ಸಾಹಿತ್ಯದ ಮೇಲೆ ಇರುವ ಪತ್ರಿಕಾ ರಾಜಕಾರಣದ ಸೂಕ್ಷ್ಮ ಅನುಭವಿರುವ ನನಗೆ ಪತ್ರಿಕೆಗಳಿಗೆ ಬರೆಯುವುದು 'ಮಾರಿಕೊಳ್ಳುವುದು' ಎಂದೇ ಅನಿಸಿಬಿಟ್ಟಿತ್ತು ! ಅವರು ಎಷ್ಟು ಹೇಳಿದರೂ ನಾನು ನನ್ನ ಪಾಡಿಗೆ ಏನೇನೋ ಗೀಚುತ್ತಾ ಓದುತ್ತಾ ಇರತೊಡಗಿದೆ(ಅವರಿಗೆ ಬೇಸರ ಬರಿಸುವಷ್ಟು ಬದಲಾಗದೆ ಉಳಿದೆ ). ನಿಮ್ಮ ಹಾಗೆ ಇದ್ದರೆ ಸಾಹಿತ್ಯ ಲೋಕದಲ್ಲಿ ಯಾರೂ ಗಮನಿಸುವುದಿಲ್ಲ ಎನ್ನುತ್ತಿದ್ದರು.

*
"ಸತೀಶ್ ನಿಮಗೆ ___ ಗೊತ್ತಾ?
ಗೊತ್ತು ಸರ್. ತುಂಬಾ ಚೆನ್ನಾಗಿ ಬರೀತಾರೆ ಸರ್.
ನಿಮಗೆ ಒಂದು ಸನ್ಮಾನ ಇದೆ ಬನ್ನಿ ಸರ್ ಅಂತ ಕರೆದ್ರು. ಸನ್ಮಾನಕ್ಕೆ ಹಣ ಕೊಡ್ಬೇಕಂತೆ!
ಸರ್ ಅವ್ರು ಕೇಳಿದ್ದಾ?
ಹೌದು
ಹಾಗೆ ಬರೆಯುವವರು ಹೀಗೆಲ್ಲಾ ಕೇಳ್ತಾರಾ ಸರ್?
ನಿಮಗೆ ಇದೆಲ್ಲಾ ಗೊತ್ತಾಗಲ್ಲ ಸತೀಶ್..."
*


ಕಳೆದ ಒಂದೆರಡು ವರ್ಷಗಳಿಂದ ಮೊಬೈಲ್ ಕರೆಗಳು ನರಕದ ಹಾಗೆ ಅನ್ನಿಸಿ ಅದರಿಂದ ದೂರ ಉಳಿದಿದ್ದೆ. ಹಲವು ಮಂದಿ ಕರೆಮಾಡಿ ನಿರಾಶರಾಗಿದ್ದವರ ಪಟ್ಟಿಯಲ್ಲಿ ಕೆಕೆಜಿ ಸರ್ ಕೂಡ ಒಬ್ಬರಾಗಿದ್ದರು(ಸತೀಶ್ ಫೋನಿಗೆ ಸಿಗುವುದೇ ಇಲ್ಲ ಎಂದು ಹೇಳಿದ್ದರಂತೆ).
ಕಡೆಯ ಬಾರಿ ಕರೆಮಾಡಿದಾಗ ಅವರ ಧ್ವನಿ ಕ್ಷೀಣಿಸಿತ್ತು. ನಾನು ಬರೆಯುವುದನ್ನೂ ಓದುವುದನ್ನೂ ಬಿಟ್ಟುಬಿಟ್ಟೆ ಸತೀಶ್ ಎಂದರು. ತಮ್ಮ ಅನಾರೋಗ್ಯದ ಬಗ್ಗೆ ಹೇಳಿಕೊಂಡರು. ದುಃಖವಾಯಿತು. ಗಂಟೆಗಟ್ಟಲೆ ಮಾತನಾಡುತ್ತಿದ್ದ ಕೆಕೆಜಿ ಸರ್ ಹತ್ತು ನಿಮಿಷಕ್ಕೇ ಫೋನಿಟ್ಟರು! 'ಆಥರ್ಸ್ ಕಾಪಿ' ಅನುವಾದದ ಬಗ್ಗೆ ಹೇಳಬೇಕೆಂದುಕೊಂಡದ್ದು ನನ್ನೊಳಗೇ ಉಳಿಯಿತು.


ಕೆಕೆಜಿ ಸರ್ ಬಾಡಿಗೆ ಮನೆಯಲ್ಲಿಯೇ ಇದ್ದರು.ಇಷ್ಟು ವರ್ಷ ಕೆಲಸ ಮಾಡಿ ಇನ್ನೂ ಈ ಪುಟ್ಟ ಬಾಡಿಗೆ ಮನೆಯಲ್ಲೇ ಇದ್ದೇನೆ ಸತೀಶ್ ಎಂದು ಆಗ ಅವರಿಗಿದ್ದ ಹಣ ಮಾಡಬಹುದಾದ ಅವಕಾಶದ ಬಗ್ಗೆ ಹೇಳಿದ್ದರು. ಕಡೆಗೆ ತಾವು ವೃತ್ತಿಯಲ್ಲಿದ್ದಾಗ ರೆಜಿಸ್ಟರ್ ಮಾಡಿಸಿದ್ದ ಹೌಸಿಂಗ್ ಬೋರ್ಡ್ ಸೈಟಿನಲ್ಲಿ ಮನೆಕಟ್ಟಿಸಿ ಆಮಂತ್ರಣ ಕಳಿಸಿದ್ದರು. ಮಗನ ಮದುವೆಗೂ ಆಮಂತ್ರಣವಿತ್ತು. ಇಲ್ಲಿನ ಪರಿಸ್ಥಿತಿಯ ಅರಿವಿರುವ ಅವರು ಬರಲಿಲ್ಲವೆಂದು ಬೇಸರಿಸಿಕೊಳ್ಳಲಿಲ್ಲ. ಅವರ ಮೊದಲ ಕೃತಿ ಪ್ರಕಟಗೊಂಡಿದ್ದು 2009ರಲ್ಲಿ, ನಿವೃತ್ತಿಯ ಅನಂತರ!

ಜನಸಾಮಾನ್ಯರಿಗೆ ಅರ್ಥವಾಗುವ ಹಾಗೆ ಅನುವಾದಿಸಬೇಕು ಸತೀಶ್. ಮೂಲ ಪದವನ್ನೇ ಇಡುವುದು, ಅಡಿ ಟಿಪ್ಪಣಿ ಕೊಡುವುದು- ಇವು ಓದುಗನಿಗೆ ರಸಭಂಗ ಉಂಟು ಮಾಡುತ್ತದೆ ಎನ್ನುತ್ತಿದ್ದರು. ತಾವು ಮೊದಮೊದಲು ಮಾಡುತ್ತಿದ್ದ ತಪ್ಪುಗಳನ್ನು ಹೇಳುತ್ತಿದ್ದರು. ಕಮಲಾದಾಸ್, ಲಂಕೇಶ್, ವಾಸುದೇವನ್ ನಾಯರ್ ಮೊದಲಾದ ಲೇಖಕರ ಒಡನಾಟವನ್ನು ಹೇಳಿಕೊಳ್ಳುತ್ತಿದ್ದರು.
*


ಮೊನ್ನೆ, ಜನವರಿ 19ಕ್ಕೆ ಕೆಕೆಜಿ ಸರ್ ನಮ್ಮೆಲ್ಲರಿಗೆ ವಿದಾಯ ಹೇಳಿ ಹೊರಟರು. ಅವರು ಬರೆದು ಅಮರರಾದರು. ಅವರ ಅನುಭವಗಳನ್ನೆಲ್ಲ ಮೊಗೆಮೊಗೆದು ನಮ್ಮೊಳಗೆ ತುಂಬಿ ಹೊರಟರು -ಅಮರರಾದರು.

ಅಶ್ರುತರ್ಪಣ ಸರ್🙏
*

✍️ಕಾಜೂರು ಸತೀಶ್








1 comment:

  1. ಅನುವಾದ ಸಾಹಿತ್ಯದ ಮರೆಯಲಾಗದ ಮಹಾನುಭಾವರು ಕೆ. ಕೆ. ಜಿ. ಸರ್ ರವರು...

    ReplyDelete