ಪ್ರತೀ ಮನೆಯಲ್ಲಿರುವ ಕೋಣೆಗಳ ಸಂಖ್ಯೆ, ಜನರ ಸಂಖ್ಯೆ, ಅವರ ಬಣ್ಣ, ಎತ್ತರ, ತೂಕ, ಕೂಡಿಟ್ಟಿರುವ ಆಭರಣಗಳು, ಶಸ್ತ್ರಾಸ್ತ್ರ, ಪಡೆದ ವಿದ್ಯೆ, ಕುದುರೆಗಳ ಸಂಖ್ಯೆ, ಭಾಗಿಯಾಗಿರುವ ಯುದ್ಧಗಳ ಸಂಖ್ಯೆ, ರಾಜನಿಂದ ಬಂದಿರುವ ಆಸ್ತಿ, ಬೆಳೆದ ಬೆಳೆಗಳು, ರಾಜನಿಗೆ ಪಾವತಿಸಿದ ಕಂದಾಯ... ಹೀಗೆ ತಾವೇ ಎಲೆಗಳನ್ನು ಸಂಗ್ರಹಿಸಿ ಅದರಲ್ಲಿ ದಾಖಲಿಸಲು ರಾಜ ಆಜ್ಞೆ ಮಾಡಿದನು. 'ಒಂದು ಮನೆಗೆ ಒಂದು ಚೊಂಬು' ಎಂಬ ಆಸೆಯನ್ನು ಮಂತ್ರಿಗಳಲ್ಲಿ ಹುಟ್ಟಿಸಿದನು.
ಚೊಂಬಿನ ಆಸೆಗಾಗಿ ಕೆಲವು ಮಂತ್ರಿಗಳು ತಮಗೆ ಸಿಕ್ಕಿದ ಮನೆಗಳಿಗೆ ನುಗ್ಗಿ ಮಾಹಿತಿ ಬರೆದುಕೊಂಡರು. "ಚೊಂಬು ಸಿಗದಿದ್ದರೂ ಸರಿ ನಮಗೆ ಈ ಕೆಲಸ ಬೇಕಿರಲಿಲ್ಲ" ಎಂದು ಹಲವು ಮಂತ್ರಿಗಳು ಅಂದುಕೊಂಡರು. ಆದರೂ ಮರಣದಂಡನೆಯ ಭಯದಿಂದ ಕೆಲಸದಲ್ಲಿ ನಿರತರಾದರು.
ಸುದ್ದಿ ತಿಳಿದ ಮನೆಮಂದಿಯವರು ತಮ್ಮ ಆಭರಣ-ಶಸ್ತ್ರಾಸ್ತ್ರಗಳನ್ನೆಲ್ಲ ಅಡಗಿಸಿಟ್ಟರು. ತಮ್ಮ ಬಳಿ ಇರುವ ಕುದುರೆಗಳನ್ನು ಯಾರ ಕಣ್ಣಿಗೂ ಬೀಳದಂತೆ ನೋಡಿಕೊಂಡರು. ಹೇಗೋ, ಬಂದ ಮಂತ್ರಿಗಳಿಗೆ ಅಲ್ಪ ಸ್ವಲ್ಪ ಮಾಹಿತಿ ಕೊಟ್ಟು ಕಳುಹಿಸಿದರು. ಬಾಯಿಗೆ ಬಂದಂತೆ ಮಂತ್ರಿಗಳನ್ನು ನಿಂದಿಸಿದರು.
ಗುಪ್ತಚರರು ಮರದ ಕೆಳಗೆ ಕುಳಿತು ಕತ್ತಲಾದ ಮೇಲೆ ಮನೆಗೆ ತೆರಳಿದರು
ಹೋದ ಮನೆಗೇ ಹತ್ತಾರು ಮಂತ್ರಿಗಳು ಹೋದರು. ಮೊದಲು ಹೋದವರಿಗೆ ಅದೃಷ್ಟ. ಕೆಲವರು "ಈಗಷ್ಟೇ ಬಂದು ಹೋದರು" ಎಂದು ಸುಳ್ಳು ಹೇಳಿದರು.
ಹೀಗೆ ತಿಂಗಳು ಕಳೆದರೂ ಎಲ್ಲಾ ಮನೆಗಳಿಗೆ ಭೇಟಿ ನೀಡಲು ಸಾಧ್ಯವಾಗದೆ ಇರುವುದರಿಂದ ಕೆಂಡಾಮಂಡಲನಾದ ರಾಜನು ಕೆಲವು ಮಂತ್ರಿಗಳನ್ನು ಕೆಲಸದಿಂದ ವಜಾ ಮಾಡಿದನು. ಕೆಲವರಿಗೆ ಗಲ್ಲುಶಿಕ್ಷೆ ವಿಧಿಸಿದನು. ಬಿಟ್ಟುಹೋದ ಮನೆಗಳನ್ನು ಹುಡುಕಿ ಮಾಹಿತಿ ಕಲೆಹಾಕಲು ಮತ್ತೆ ಆಜ್ಞಾಪಿಸಿದನು.
ಕೆಲವು ಮಂತ್ರಿಗಳು ಬಿದ್ದು ತಲೆಯೊಡೆದುಕೊಂಡರು. ಕೆಲವರು ಕೈ ಕಾಲು ಮುರಿದುಕೊಂಡರು, ಕೆಲವರನ್ನು ಕಾಡಾನೆ ಸಾಯಿಸಿತು. ಕೆಲವರು ಕೆರೆಗೆ ಹಾರಿ ಸತ್ತರು.
ಆದರೂ ಛಲಬಿಡದ ರಾಜ ಎಲ್ಲಾ ಮನೆಗೂ ಹೋಗಿ ವಿವರಗಳನ್ನು ಬರೆದು ತರಲು ಕಟ್ಟಪ್ಪಣೆ ವಿಧಿಸಿದನು.
ಒಂದು ಮನೆಯ ಪ್ರತೀ ಸದಸ್ಯರನ್ನು ಒಂದೊಂದು ಮನೆ ಎಂದು ಸುಳ್ಳು ವರದಿ ನೀಡಿ ಮನೆಗಳ ಸಂಖ್ಯೆಯನ್ನು ಹೆಚ್ಚಿಸಿಕೊಂಡ ಮಂತ್ರಿಗಳಿಗೆ ಬಡ್ತಿ ನೀಡಲಾಯಿತು.
ಅನ್ನ ನೀರು ಇಲ್ಲದೆ ನಿರಂತರವಾಗಿ ಸುತ್ತಿ ಸುತ್ತಿ ಬಸವಳಿದ ಮಂತ್ರಿಗಳು ನರಪೇತಲರಂತೆ ಕಾಣಿಸತೊಡಗಿದರು. ಕುಳ್ಳಗಿದ್ದ ಮಂತ್ರಿಯೊಬ್ಬನನ್ನು ಆಟಿಕೆ ಎಂದುಕೊಂಡ ಮಗುವೊಂದು ತನಗೆ "ಆಟಿಕೆ ಬೇಕೂ..ಊಊ.." ಎಂದು ರಚ್ಚೆ ಹಿಡಿಯಿತು.
*
ಇದೆಲ್ಲವನ್ನು ನೋಡುತ್ತಿದ್ದ ಅರಮನೆಯಲ್ಲಿ ಕಸಗುಡಿಸುವ ತಿಮ್ಮ ಯೋಚಿಸಿದ:" ಒಬ್ಬೊಬ್ಬರಿಗೆ ಒಂದೊಂದು ಊರು, ಒಂದು ಗಡಿ, ಮನೆಯ ಯಜಮಾನನ ಹೆಸರು ಕೊಟ್ಟು ಏನು ಮಾಡಬೇಕೆಂದು ಹೇಳಿ ಕಳಿಸಿಬಿಟ್ಟಿದ್ದರೆ ಒಂದು ವಾರದಲ್ಲಿ ಈ ಕೆಲಸ ಮುಗಿಯುತ್ತಿತ್ತು. "
ಆದರೆ, ಅವನು ಕಸಗುಡಿಸುವ ಕೆಲಸದವನಾದ್ದರಿಂದ ಹಾಗೆ ಜೋರಾಗಿ ಹೇಳುವ ಸ್ವಾತಂತ್ರ್ಯ ಅವನಿಗಿರಲಿಲ್ಲ.
*
✍️ಕಾಜೂರು ಸತೀಶ್
ತಿಮ್ಮನ್ನ ರಾಜ ಮಾಡಿದ್ರೆ ಚೆನ್ನಾಗಿರೋದು ಸರ್ 😃💐💐
ReplyDeleteಆ ಮಂತ್ರಿಗಳ ಗುಂಪಿನಲ್ಲಿ ನಾನೊಬ್ಬಳಿರುವೆ ಸರ್. ಸಭ್ಯ ಪ್ರಜೆಯಾಗಿಯೇ ಉಳಿದಿದ್ದರೇ ಚೆಂದವಾಗಿರುತ್ತೇನೋ ಬಾಳು ಎಂದು ಯೋಚಿಸುತ್ತಿರುವೆ. ಈ ಮಂತ್ರಿ ಪದವಿಯ ಆಸೆ ಬೇಡವಾಗಿತ್ತೇನೋ....😀.
ReplyDelete"ಚೊಂಬು ಸಿಗುತ್ತೆ ಕಣ್ರೀ ಅವ್ರಿಗೆ.... " ಅಂತ ಅವಮಾನನೂ ಆಯಿತು.
ReplyDelete