ನಮ್ಮ ಸಾಹಿತ್ಯದ ಎಲ್ಲ ಪರಂಪರೆಗಳಲ್ಲೂ ಸೃಜನಶೀಲವಾದ ಹಾಗೂ ತಾತ್ತ್ವಿಕವಾದ ಬಂಡಾಯದ ಚಹರೆಗಳಿವೆ. ಸುತ್ತಲಿನ ಆತಂಕಗಳಿಗೆ ಸ್ಪಂದಿಸುವ, ಪ್ರತಿಕ್ರಿಯಿಸುವ ಪ್ರಕ್ರಿಯೆಯು ಇಂದೂ ಕೂಡ ವ್ಯಾಪಕತೆಯನ್ನು ಪಡೆದುಕೊಳ್ಳುತ್ತಾ, ಶೋಷಿತರ-ದಮನಿತರ ಪರವಾದ ‘ಸೃಜನಶೀಲ ಬಂಡಾಯ’ ವೊಂದು ಧಾರೆಯಾಗಿ ಹರಿಯುತ್ತಿದೆ.
ಕನ್ನಡ ಸಾಹಿತ್ಯ ಪರಂಪರೆಯನ್ನು ಗಮನಿಸಿದಾಗ- ಸುಮಾರು ಹತ್ತನೇ ಶತಮಾನದಲ್ಲೇ ಜಾತಿಪದ್ಧತಿಯನ್ನು ನಿರಾಕರಿಸುವ, ‘ಮನುಷ್ಯ ಜಾತಿ ತಾನೊಂದೆ ವಲಂ’ ಎಂದು ಪರಿಭಾವಿಸುವ ಧೋರಣೆಗಳು ಪಂಪನ ‘ವಿಕ್ರಮಾರ್ಜುನ ವಿಜಯ’ದಲ್ಲಿ ವ್ಯಕ್ತಗೊಂಡಿವೆ. ಆ ನಂತರದ ಎಲ್ಲ ಹರಿವುಗಳೂ ಜಾತಿಸಮಾನತೆ, ವ್ಯಕ್ತಿಘನತೆ, ಲಿಂಗತಾರತಮ್ಯದ ನಿರಾಕರಣೆ, ಕಾಯಕದ ಅಗತ್ಯತೆಗಳನ್ನು ತಾತ್ತ್ವಿಕ ನೆಲೆಗಳಿಂದ ಶೋಧಿಸಿ ಹೇಳುತ್ತಾ ಜನಸಾಮಾನ್ಯರ ಏದುಸಿರುಗಳಿಗೆ ಸಾಂತ್ವನದ ಬೀಜಗಳನ್ನು ಬಿತ್ತಿಹೋಗಿವೆ.
‘ಜಾತಿ'ಯೆಂಬ ಶೂಲಕ್ಕೆ ಸಿಕ್ಕು ಅಸ್ಪೃಶ್ಯತೆಯ ನೋವುಣ್ಣುತ್ತಿದ್ದ ದಲಿತರು ಅಕ್ಷರದ ಅಂಗಳಕ್ಕಿಳಿದು ತಮ್ಮ ಒಳಗುದಿಗಳಿಗೆ ಭಾಷೆಯ ಆಕಾರ ನೀಡಿದ್ದು ಸಾಹಿತ್ಯ ಪರಂಪರೆಯ ಒಂದು ಮಹತ್ಕ್ರಾಂತಿಯೇ ಸರಿ. ಹೊಸಗನ್ನಡದಲ್ಲಿ ದೇವನೂರು ಮಹಾದೇವ, ಸಿದ್ದಲಿಂಗಯ್ಯರಿಂದ ಮೊದಲುಗೊಂಡ ಈ ವೈಚಾರಿಕ ಸಂಘರ್ಷ, ಈಗ- ಜಾಗತೀಕರಣ ಒಡ್ಡುತ್ತಿರುವ ಸಂಕೋಲೆಗಳಿಂದ ಬಿಡುಗಡೆ ಹೊಂದಲು- ಅನೇಕ ಗೊಂದಲಗಳ ನಡುವೆಯೂ (ಒಳಜಾತಿಗಳ ಉಗಮ, ಸೀಮಿತ ದಲಿತಾನುಭವ ಇತ್ಯಾದಿ) ವಿಭಿನ್ನ ಸಾಧ್ಯತೆಗಳನ್ನು ಸೃಷ್ಟಿಸುತ್ತಾ ಮುನ್ನಡಿಯಿಟ್ಟಿದೆ.
‘ದಲಿತ ಸಂವೇದನೆ’ಯು ಇಂದು ದಲಿತೇತರ ಬರಹಗಾರರ ಚಿಂತನಾಕ್ರಮವಾಗಿಯೂ ರೂಪುಗೊಂಡಿದೆ. ಕನ್ನಡ ಕಥನ ಪರಂಪರೆಯಲ್ಲಿ ಚದುರಂಗ, ಚಿತ್ತಾಲ, ನಿರಂಜನ, ಕುವೆಂಪು, ಕಾರಂತ, ಕಟ್ಟೀಮನಿ , ಲಂಕೇಶ್, ತೇಜಸ್ವಿ, ಅನಂತಮೂರ್ತಿ, ಕುಂ.ವೀ., ಗೀತಾ ನಾಗಭೂಷಣ, ವೈದೇಹಿ ಮುಂತಾದವರ ಭಾವನಾತ್ಮಕ ಅಭಿವ್ಯಕ್ತಿಯಲ್ಲಿ ದಲಿತ ಸಂವೇದನೆಯು ಸುಳಿದುಹೋಗಿದೆ. ಈ ಧಾರೆ ಇಂದಿಗೂ ಪ್ರವಹಿಸುತ್ತಿದೆ; ಹೊಸ ತಲೆಮಾರಿನ ಇಂತಹ ಮಾದರಿಗಳಂತೂ ನವೀನ ತಂತ್ರಗಳಲ್ಲಿ ಸುತ್ತ ಉರಿಯುತ್ತಿರುವ ಪುರೋಹಿತಶಾಹಿ, ಯಾಜಮಾನಿಕೆ, ಜಮೀನ್ದಾರಿಕೆ, ಅಧಿಕಾರಶಾಹಿತ್ವಗಳ ಮೇಲೆ ತಣ್ಣನೆಯ ನೀರು ಚೆಲ್ಲಿ ನಂದಿಸುತ್ತಿದೆ. ಎಂಬತ್ತು-ತೊಂಬತ್ತರ ದಶಕದಷ್ಟು ಚಳುವಳಿಗಳ ಕಾವಿಲ್ಲದ ಸದ್ಯದ ಕಾಲಘಟ್ಟದಲ್ಲಿ ಜಾತಿ, ಭಾಷೆ, ಪ್ರಾದೇಶಿಕತೆ, ಸಂಸ್ಕೃತಿ ಮುಂತಾದ ಅಸ್ಮಿತೆಗಳು ಸಶಕ್ತವಾಗಿ ರೂಪುಪಡೆಯುತ್ತಾ ‘ಸಾಮಾಜಿಕ ನ್ಯಾಯ’ದ ಹೊರಳುಗಳಿಗೆ ಸಿದ್ಧಗೊಳ್ಳುತ್ತಿದೆ. ಮಹಿಳಾ ಹಾಗೂ ಮುಸ್ಲಿಂ ಧಾರೆಯೂ ದಲಿತಪ್ರಜ್ಞೆಯ ಭಾಗವೆಂಬಂತೆ ಹರಿದುಬರುತ್ತಿದೆ.
ಡಾ.ಕವಿತಾ ರೈ
- ಈ ತಲೆಮಾರಿನ, ಬರಹವನ್ನು ಗಂಭೀರವಾಗಿ ಪರಿಗಣಿಸಿಕೊಂಡಿರುವ ಬರಹಗಾರ್ತಿ. ಹಕ್ಕಿಹರಿವ ನೀರು, ನೀರ ತೇರು, ನೀರ ತೇಜಿಯನೇರಿ, ಲೋಕಾಮುದ್ರಾ
ಮುಂತಾದ ನೀರಿನ ಹರಿವುಳ್ಳ ಕೃತಿಗಳನ್ನು ಸಾರಸ್ವತ ಲೋಕಕ್ಕೆ ನೀಡಿರುವ ಇವರು, ಕಾವ್ಯ, ಕತೆ, ನಾಟಕ, ವಿಮರ್ಶೆ, ಸಂಪಾದನೆ ಮುಂತಾದ ಪ್ರಕಾರಗಳಲ್ಲಿ ಅನನ್ಯ ಒಳನೋಟಗಳನ್ನು ಬಿತ್ತಿದವರು. ವಿಭಿನ್ನ ಪ್ರಾದೇಶೀಕತೆ, ಸ್ಥಾಪಿತ ವ್ಯವಸ್ಥೆಯ ವಿರುದ್ಧದ ತಾತ್ವಿಕ ಪ್ರತಿರೋಧ(ಸ್ತ್ರೀತ್ವದ ಹಿನ್ನೆಲೆಯಲ್ಲಿ) ಇವರ ಬರಹ ಮಾದರಿಗಳ ಪ್ರಮುಖ ಲಕ್ಷಣಗಳು.
ನಾಟಿ ಓಟ
- ಕವಿತಾ ರೈಯವರ ಮಹತ್ವದ ಕತೆಗಳಲ್ಲೊಂದು. ಅದು 2010ರ ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆ ಯಲ್ಲಿ ಪ್ರಥಮ ಬಹುಮಾನ ಪಡೆದ ಕತೆ. ಸಾಮಾಜಿಕ-ಸಾಂಸ್ಕೃತಿಕ ಪಟ್ಟಭದ್ರರ ಕೈಯ್ಯಾಳುಗಳಾಗಿ ದುಡಿಯುತ್ತಾ ಎಲ್ಲ ಅ ಪಮಾನಗಳನ್ನು ಕರುಳಿನೊಳಗೆ ಹೂತಿಟ್ಟುಕೊಂಡು ಬದುಕಿಕೊಳ್ಳುತ್ತಿರುವ ದಲಿತರ; ದಲಿತ ವಿಧವೆಯೊಬ್ಬಳ ದೇಹ ಮತ್ತು ಶ್ರಮಶಕ್ತಿ ಪುರುಷ ಯಾಜಮಾನಿಕೆಯ ಭೋಗವ್ಯವಸ್ಥೆಗೆ ಬಲಿಯಾಗುವ ಮತ್ತು ಆಕೆ ಅದರಿಂದ ಸ್ವಯಂ ಬಿಡುಗಡೆಗೊಳ್ಳುವ ವಸ್ತುವನ್ನೊಳಗೊಂಡ ಕತೆ ಅದು. ಬದುಕುವುದೇ ಮುಖ್ಯ
ಎಂದಷ್ಟೇ ಪರಿಭಾವಿಸುವ ಆಕೆಯು ಹಣ ಮತ್ತು ಹೆಂಡದ ಮೇಲಿನ ಮೋಹಕ್ಕಾಗಿ ಪ್ರತೀಬಾರಿ ಆಂತರಿಕವಾಗಿ ಪ್ರತಿಭಟಿಸಿಕೊಂಡರೂ,ಅದನ್ನು ಬಹಿರಂಗಗೊಳಿಸಲಾಗದಷ್ಟು ನಿರ್ವಾತಗೊಂಡು ಲೈಂಗಿಕ ಅತ್ಯಾಚಾರಗಳನ್ನು ಸಹಿಸಿಕೊಳ್ಳುತ್ತಾಳೆ, ಬಿಡುಗಡೆಯ ಹಂಬಲವೊಂದು ಅವಳ ಆಂತರ್ಯದಲ್ಲಿ ದಟ್ಟೈಸಿ ಜೀವನದ ಹೊಸ ದಿಕ್ಕಿಗೆ ಮಗ್ಗಲು ಬದಲಾಯಿಸುತ್ತಾಳೆ – ಇದು ಈ ಕತೆಯ ಹಂದರ.
‘ನಾಟಿ ಓಟ’ ಕತೆಯ ನಾಯಕಿ ದೇವಣಿ ಯ ಮೂಲಕ ಕೊಡಗಿನ ಸಾಂಸ್ಕೃತಿಕ ಪರಿಸರದಲ್ಲಿ ಕೆಂಬಟ್ಟಿ ಜನಾಂಗದ ಬದುಕಿನ ಸಂಕಷ್ಟವನ್ನು ಬಯಲಿಗೆಳೆಯುತ್ತಾರೆ ಲೇಖಕಿ. “ಕೊಡಗಿನ ಮೂಲನಿವಾಸಿಗಳೆಂದರೆ ಕೊಡವರು, ಕುಡಿಯರು ಮತ್ತು ಕೆಂಬಟ್ಟಿ ಹೊಲೆಯರು” ಎನ್ನುತ್ತದೆ ನಡಿಕೇರಿಯಂಡ ಚಿಣ್ಣಪ್ಪ ವಿರಚಿತ ಪಟ್ಟೋಳೆ ಪಳಮೆ . ಕೊಡವರ ಪ್ರವೇಶದ ಮುನ್ನವೇ ಈ ಜನಾಂಗಗಳು ಇಲ್ಲಿ ನೆಲೆಯೂರಿದ್ದವು ಎಂಬುದು ಈ ಜನಾಂಗದ ಹಿರಿಯರ ಅಭಿಮತ.
ಕೆಂಬಟ್ಟಿ, ಎರವ, ಕುರುಬ ಮುಂತಾದ ಬುಡಕಟ್ಟು ಜನಾಂಗಗಳ ಪರಿಮಿತವಾದ ಜನಸಂಖ್ಯೆಯಿಂದಾಗಿ ಅವು ರಾಜಕೀಯ ವ್ಯವಸ್ಥೆಯ ಕಣ್ಣುಕುಕ್ಕಿಲ್ಲ. ಅವರ ಬಡತನ ಮತ್ತು ಸಂಖ್ಯಾತ್ಮಕ ಮಿತಿಯಿಂದಾಗಿ ಸಾಮಾಜಿಕ ಹಾಗೂ ಸಾಂಸ್ಕೃತಿಕ ಐಡೆಂಟಿಟಿಯೂ ಸಿಗದೆ ಮುಖ್ಯವಾಹಿನಿಯಿಂದ ದೂರವೇ ಉಳಿದುಹೋಗಿವೆ.
ವಾಟೆಬಿದಿರು, ಬೆತ್ತಗಳಿಂದ ಬುಟ್ಟಿ ನೇಯುವುದು, ವಾಲೆಗರಿಯಿಂದ ಚಾಪೆ ಹೆಣೆಯುವುದು ಕೆಂಬಟ್ಟಿಗರ ಮೂಲ ಕಸುಬುಗಳು. ಇಂದಿಗೂ ಅದನ್ನು ರೂಢಿಸಿಕೊಂಡು ಹೋಗುತ್ತಿದ್ದರೂ ಅದು ಪೂರ್ಣಕಾಲಿಕವಲ್ಲ. ಸರ್ಕಾರದ ಅನೇಕ ಕಾಯ್ದೆಗಳಿಂದ ಅ ವರು ಕಾಡಿನಿಂದಾಚೆಯೇ ಉಳಿದು ತಮ್ಮ ‘ಕುಮೆರಿ’ ಮಾದರಿಯ ಬೇಸಾಯ ಕ್ರಮವನ್ನೂ, ಮೂಲ ಸಂಸ್ಕೃತಿಯನ್ನೂ ಮರೆತು ಶ್ರೀಮಂತ ಕೊಡವ ಕುಟುಂಬಗಳ ಗದ್ದೆ ತೋಟಗಳಲ್ಲಿ ಕೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ತಮ್ಮ ಭೌಗೋಳಿಕ ಪರಿಸರದ ಆಸುಪಾಸಿನಲ್ಲಿರುವ ಕೊಡವರನ್ನೇ ಆದರ್ಶಪ್ರಾಯರನ್ನಾಗಿಸಿ, ಅವರನ್ನು ಅನುಕರಿಸುತ್ತಾ ,ಅನುಸರಿಸುತ್ತಾ ಬದುಕಿಕೊಳ್ಳುತ್ತಿದ್ದಾರೆ.
ಒಂದು ಸಂಸ್ಕೃತಿಯ ವಿನಾಶ; ಅದರಲ್ಲೂ ದಲಿತ ಸಂಸ್ಕೃತಿಯೊಂದು ತನ್ನ ಮೂಲ ನೆಲೆಯನ್ನು ಕಳೆದುಕೊಂಡು ಪರಕೀಯತೆಯೊಂದಿಗೆ ವಿಲೀನಗೊಳ್ಳುವ ಸಂಗತಿ ಘೋರವಾದದ್ದು. ಈ ಕತೆಯಲ್ಲಿ ಬರುವ ಎರವ, ಕುರುಬ ಜನಾಂಗಗಳೂ ಇದಕ್ಕೆ ಹೊರತಾಗಿಲ್ಲ.
ದುಡಿದು ಜೋಮುಗಟ್ಟಿದ ಕೀಲುಗಳನ್ನು ಬಿಡಿಸಿಕೊಂಡು ಸೀಳೊಡೆದು ಮಸಿತುಂಬಿ ದೊರಗುಗಟ್ಟಿದ ಅಂಗೈಗಳ
ದೇವಣಿಗೆ ಗಟ್ಟಿ ತೇಗದ ಮರದಂತಹ ರಟ್ಟೆ, ತೋಳು, ತೊಡೆ, ಕೈಕಾಲುಗಳೇ ಆಸ್ತಿ
. ಕೊಡವ ಕುಟುಂಬದ ಮುಕ್ಕಾಟಿರ ಕರುಂಬಯ್ಯ-ಗೌರವ್ವ ದಂಪತಿಗಳ ಗದ್ದೆಗೆ ಮುಂಜಾನೆ ಕೆಲಸಕ್ಕೆ ಹೋಗುವ ಮುನ್ನ ರೈಟರ್ ಅಚ್ಚಣ್ಣ ನ ವಿಕೃತ ಕಣ್ಣುಗಳಿಂದ ತಪ್ಪಿಸಿಕೊಳ್ಳುವುದು ಅವಳ ನಿತ್ಯ ಕಾಯಕ. ಸನ್ನು, ಚಂದ್ರ ರೆಂಬ ಇಬ್ಬರು ಮಕ್ಕಳ ತಾಯಿ. ಪತಿ ಕುಟ್ಟಡ ತಿಮ್ಮ ನೆನಪು ಮಾತ್ರ.
ವಾರಕ್ಕೊಮ್ಮೆ ಸಂತೆಗೆ ಹೋಗಿ ಚಾಪೆ ಮತ್ತು ಬುಟ್ಟಿ ( ಕುಳಿಯ, ಬರಿಪೊಡ, ಕೂರಿ, ಮಕ್ಕರಿ, ಬತ್ತದ ತಡಿಕೆ
) ಗಳನ್ನು ಮಾರುವ ಕಾಯಕವನ್ನು ದೇವಣಿ ಚರಿತ್ರೆಯ ಪಳಯುಳಿಕೆಯಾಗಿ ಉಳಿಸಿಕೊಂಡಿದ್ದಾಳೆ. ಜಾಗತೀಕರಣದ ಹಸ್ತ ಸಂತೆಕಟ್ಟೆಯನ್ನು ತನ್ನ ಬೆರಳ ಸಂದುಗಳಲ್ಲಿ ಬಿಗಿಯಾಗಿ ಸಿಕ್ಕಿಸುತ್ತಿರು ವ ಈ ಹೊತ್ತಲ್ಲಿ ಅವಳ ಗುಡಿಕೈಗಾರಿಕೆಯ ಉತ್ಪನ್ನಗಳು ರೂ.75ನ್ನು ಮೀರುವುದಿಲ್ಲ.
ಆಪವಂಗೆ ಆಕು ಆಕಪಣಿ
(ಬಲ್ಲವನೇ ಬಲ್ಲ ಗದ್ದೆಯ ಕೆಲಸ) ಎಂಬ ನಾಣ್ಣುಡಿಯಂತೆ ‘ ನೇರವಿಟ್ಟುಕೊಳ್ಳದ ಕಣ್ಣೋಟವು ಕೈಯ ಕೌಶಲದಿಂದಲೇ ಬಿರುಸಿನಿಂದ ಮೂರುನುಲಿಯಂತೆ ಬರಬರನೆ ಊರುವ’ ಸಾಮರ್ಥ್ಯವನ್ನು ದೇವಣಿ ದಕ್ಕಿಸಿಕೊಂಡಿದ್ದಳು.
ರೈಟರ್ ಅಚ್ಚಣ್ಣ ದಲಿತರ ಶೋಷಕನಾಗಿ, ಅವಕಾಶವಾದಿಯಾಗಿ, ಭೂತ-ವರ್ತಮಾನಗಳ ಆಳುವ ಪ್ರತಿನಿಧಿಯಾಗಿ ಕಾಣಿಸಿಕೊಳ್ಳುತ್ತಾನೆ. ಬಡಪಾಯಿ ಕೆಂಬಟ್ಟಿ, ಎರವ, ಕುರುಬ ಆಳುಗಳ ಜುಟ್ಟುಬಿಡಿಸಿ ನಯಗೊಳಿಸುವ
, ನೋಟದಲ್ಲೇ ಹೆಣ್ಣಾಳುಗಳನ್ನು ಮರಗಟ್ಟುವಂತೆ ಮಾಡುವ
ಯಾಜಮಾನಿಕೆ ಅವನದು.
ನಾಟಿಮಾಡುವ ಮಧ್ಯಾಹ್ನ ಭರ್ಜರಿ ಊಟಕ್ಕೆಂದು ಒಡೆಯನ ಮನೆಗೆ ತೆರಳುತ್ತಿದ್ದಾಗ ಅ ಚ್ಚಣ್ಣನ ಕಾಲಿಗೆ ಚುಚ್ಚಿದ ಮುಳ್ಳು ತೆಗೆಯಲು ದೇವಣಿ ಒಲ್ಲೆನೆಂಬ ಸೂಚನೆಕೊಟ್ಟಾಗ, ಗುಬ್ಬಿ ವಿಧಿಯಿಲ್ಲದೆ ಆ ಕೆಲಸಕ್ಕಿಳಿದು ವಿಫಲಳಾಗುತ್ತಾಳೆ. ಮುಳ್ಳುತೆಗೆಯುವಾಗ ಆತನ ಭಾರವನ್ನೆಲ್ಲ ಅವಳ ಪುಟ್ಟ ದೇಹದ ಮೇಲಿಳಿಸಿ ‘ಹಲ್ಕಟ್ ರಂಡೆ’, ‘ಮೋಟು ಶನಿ’ ಎಂದೆಲ್ಲ ಬೈಗುಳಗಳ ಭಾರವನ್ನೂ ಹೊರಿಸುತ್ತಾನೆ. ಮುಳ್ಳಿಟ್ಟವರನ್ನು ಪತ್ತೆಹಚ್ಚಲು ಸಂಶಯದ ಅವನ ನೋಟ ಎಲ್ಲ ದಲಿತರನ್ನು ಹೊಕ್ಕುತ್ತದೆ.
ಮೂರ್ನಾಡಿನ ಸಂತೆಯಲ್ಲಿ ಅಚ್ಚಣ್ಣ ನೀಡಿದ 50ರ ನೋಟುಗಳು ದೇವಣಿಯನ್ನು ತಬ್ಬಿಬ್ಬು ಮಾಡಿ ಅವನ್ನು ಸ್ವೀಕರಿಸುವಂತೆ ಮಾಡುತ್ತವೆ. ಸಂತೆಯಿಂದ ಹಿಂತಿರುಗುವಾಗ ಕುಡಿದು ಮತ್ತಿನಲ್ಲಿದ್ದ ದೇವಣಿಯನ್ನು ಬಲವಂತವಾಗಿ ಕೂಡುತ್ತಾನೆ ಅಚ್ಚಣ್ಣ. ಆಮೇಲೆ ‘ಮರೆಗಳಿರಲಿಲ್ಲ ಪೊದೆಗಳಿರಲಿಲ್ಲ’ ಎಂಬಂತೆ ಅವರು ಕೂಡತೊಡಗುತ್ತಾರೆ.
ದೇವಣಿಯ ಕನಸುಗಳಿಗೆ, ಚಿಂತನೆಗಳಿಗೆ ನಾಟಿ ಮುಗಿದ ಮೇಲಿನ ನಾಟಿ ಓಟದ ಸಂದರ್ಭ ರೆಕ್ಕೆ ಮೂಡುತ್ತದೆ. ತೀರಿಹೋದ ತನ್ನ ಗಂಡ ತಿಮ್ಮನ ಜಿಂಕೆಯ ಓಟ ಕಣ್ಣೊಳಗೆ ಓಡತೊಡಗುತ್ತದೆ. ಮನೆಗೆ ಹಿಂತಿರುಗುವಾಗ ಸಿಕ್ಕ ಕೊಕ್ಕರ್ಚಿ ಮುಳ್ಳಿನ ಗೆಲ್ಲನ್ನು ಒಲೆಯಲ್ಲಿಟ್ಟು ಸುಡುತ್ತಾಳೆ. ಮಗ ಚಂದ್ರ ಹೆಗಲಿಗೆ ಜೋತುಬಿದ್ದಿರುತ್ತಾನೆ.
‘ನಾಟಿ ಓಟ’ದ ಸ್ತ್ರೀಕೇಂದ್ರಿತ ದಲಿತಪ್ರಜ್ಞೆ ಕೇವಲ ಜಾತಿ, ಶೋಷಣೆಗಳ ಸಂವೇದನೆಗಳನ್ನಲ್ಲದೆ ಅದರಾಚೆಗೂ ವಿಸ್ತರಣೆಗೊಂಡು ಪ್ರಕಟಣೆಗೊಂಡಿದೆ:
ಪ್ರತಿಭಟನಾ ನೆಲೆ :
ಇಲ್ಲಿನ ಪ್ರತಿಭಟನಾ ಸ್ವರೂಪವು ತಣ್ಣಗೆ ಹೊಗೆಯಾಡುತ್ತಲೇ ಕಡೆಗೆ ಒಮ್ಮೆಲೇ ಹೊತ್ತಿಕೊಳ್ಳುತ್ತದೆ. ಅದೊಂದು ಸ್ತ್ರೀಬಂಡಾಯ. ಸಾಂಸ್ಕೃತಿಕ ಪಲ್ಲಟವೊಂದರ ಮುನ್ನುಡಿ. ದಲಿತ ವಿಧವೆಯೊಬ್ಬಳ ಪ್ರತಿಭಟನೆ ಒಳಮುಖಿಯಾಗಿ, ಶಾಂತಸ್ವರೂಪಿಯಾಗಿ ಸಾಗಿದರೂ ಅದರ ಕಾವು ಮಾತ್ರ ಪ್ರಕರವಾದದ್ದು. ಅಲ್ಲಿ ಕಥನಗಾರಿಕೆಯ ಏರುಸ್ವರವಿಲ್ಲ; ಹುಸಿಕ್ರಾಂತಿಯಿಲ್ಲ. ಲೇಖಕಿಯು ದಲಿತ ವರ್ಗದ ಮೂಢ ಹಾಗೂ ಶೋಷಣಾಯುಕ್ತ ಜೀವನವನ್ನು, ಸಂಸ್ಕೃತಿಯ ಇಂಚಿಂಚಿನ ಸೂಕ್ಷ್ಮತೆಗಳನ್ನು ಮೈಕ್ರೋಸ್ಕೋಪಿಕ್ ಕಣ್ಣುಗಳಲ್ಲಿ ಸೆರೆಹಿಡಿಯುವ ಪ್ರಯತ್ನವನ್ನು ಮಾಡುತ್ತಾರೆ.
ದೇವಣಿಯ ಪ್ರತಿಭಟನೆಯು ಅಚ್ಚಣ್ಣನ ಕಾಲಿಗೆ ಚುಚ್ಚಿದ್ದ ಕೊಕ್ಕರ್ಚಿ ಮುಳ್ಳ ನ್ನು ತೆಗೆಯಲು ಕರೆದಾಗ ಅ ದಕ್ಕೆ ಸ್ಪಂದಿಸದೆ ಮುನ್ನುಗ್ಗುವ ಮೂಲಕ ಮೊದಲ್ಗೊಳ್ಳುತ್ತದೆ. ಅವನ ಕಾಲಿಗೆ ಹೊಕ್ಕುವುದು ಅ ವಳ ಆಕ್ರೋಶದ ಮುಳ್ಳು. ವಿಧವೆಯೊಬ್ಬಳು ಪರಪುರುಷನೊಂದಿಗೆ ‘ ಕಳ್ಳಸಂಬಂಧ ’ವನ್ನು ಗಟ್ಟಿಯಾಗಿಯೇ ಧೃಢೀಕರಿಸುವುದೂ ಕೂಡ ಬಂಡಾಯವೇ.
ಬೇಕಿದ್ರೆ ಹೇಳಿ, ರೈಟ್ರಯ್ಯನಿಗೆ ನಿಮ್ಮ ಪೊರೆಗೆ ಬರೋದಕ್ಕೆ ಹೇಳ್ತೇನೆ ಎಂಬ ಮಾತು ಉಳಿದ ಹೆಂಗಸರ ಗಂಟಲು ಕಟ್ಟಿಸುತ್ತದೆ. ಕಾರಣ, ಅವಳ ಒಪ್ಪಿಗೆಯಿಲ್ಲದೆ ಮಾಡುವ ಆಕ್ರಮಣ ಅದು. ಅಂತಹ ಸಂದರ್ಭದಲ್ಲಿ ‘ ಸಿಟ್ಟಿನಿಂದ ಅವನ ಕೈಯನ್ನು ಕಚ್ಚಲು, ಕಾಲುಗಳನ್ನು ಒದೆಯಲು ’ ಯತ್ನಿಸುತ್ತಾಳೆ.
ಸಿಟ್ಟು, ವಿವಶತೆ, ದ್ವೇಷ, ನೋವು, ಅವಮಾನ ಎಲ್ಲವನ್ನೂ ಚೀರಬೇಕೆನಿಸುತ್ತದೆ . ಹೀಗಾಗಿ
ಮೂಕ ಪಶುವಿನ ಮೇಲೆ ಎರಗುವ ಆತನ ಲಜ್ಜೆಗೇಡಿತನದ ಅವಮಾನಕ್ಕೆ ಮದ್ದೆರೆಯಲು ಸರಿಯಾದ ಸಮಯಕ್ಕೆ ಕಾಯುತ್ತಾಳೆ.
ಬಿಡುಗಡೆಯ ಹಂಬಲ :
ಬಿಡುಗಡೆಯೆಂಬುದು ದಲಿತ ಸಮಾಜದ ಸದಾಕಾಲದ ಹಂಬಲ. ಇಲ್ಲಿ ಅದು ದೇವಣಿಯೊಳಗೆ ಕಾವುಗೊಂಡು ಪೊರೆಹರಿದು ಹೊರಬರುತ್ತದೆ. ಚರಿತ್ರೆಯ ದಾರಿದ್ರ್ಯತೆ ಇಲ್ಲಿ ತೆರೆದುಕೊಳ್ಳುತ್ತದೆ. ಹಸಿವು, ದುಡಿತ, ರಕ್ತಹೀನತೆ, ಗಂಡನ ಜ್ವರ, ಸಾವು, ಮತ್ತು ಅವೆಲ್ಲವುಗಳನ್ನು ಮೀರಿಸಿದ ಅಚ್ಚಣ್ಣ ನೆಂಬ ನಿರಂಕುಶವಾದಿಯ ಭಯ . ತನ್ನ, ತನ್ನವರ ಕೊಕ್ಕರ್ಚಿ( ಕಾಲನ್ನೇ ಕೊಳೆಯಿಸುವ) ಮುಳ್ಳಿನಂತಹ ‘ಅಜ್ಜನ ಕಾಲದ’ ಚರಿತ್ರೆಯ ಹಿಂಸೆಯನ್ನು ‘ಒಲೆ’ಯ ವ್ಯಕ್ತಿಗತವಾದ ಹಾಗೂ ಆಂತರಂಗಿಕ ನೆಲೆಯಲ್ಲಿ ಸುಟ್ಟು ಹೊಸಯುಗವೊಂದಕ್ಕೆ ಯುಗಪಲ್ಲಟಗೊಳ್ಳುತ್ತಾಳೆ; ಮಕ್ಕಳಿಬ್ಬರ ಭಾರವನ್ನು ಹೆಗಲಿಗೇರಿಸಿಕೊಳ್ಳುತ್ತಾ ಬಿಡುಗಡೆಗೊಳ್ಳುತ್ತಾಳೆ.
ಆಯ್ಕೆಯ ಸ್ವಾತಂತ್ರ್ಯ :
ದಲಿತ ಸ್ತ್ರೀಯರಿಗೆ ಆಯ್ಕೆಯ ಸ್ವಾತಂತ್ರ್ಯವಿಲ್ಲ. ವಿಧವೆಯಾಗಿ ಬೇರೊಬ್ಬ ಗಂಡಿನ ಮರದ ತೋಳುಗಳಿಂದ ಬಿಡಿಸಿಕೊಳ್ಳುವ ಸ್ವಾತಂತ್ರ್ಯವಿಲ್ಲ. ಅ ವರು ಶೋಷಣೆಯ ಭಾರವನ್ನು ಹೊರಬೇಕು; ಹೊರುತ್ತಲೇ ಅವರ ಕಾಲಿಗೆ ಹೊಕ್ಕಿರುವ ಇ ವರದೇ ದ್ವೇಷದ ಮುಳ್ಳನ್ನು ಕಿತ್ತುಕೊಡಬೇಕು. ದೇವಣಿಯ ಗೆಳತಿ ಗುಬ್ಬಿಯ ಪುಟ್ಟ ದೇಹದ ಮೇಲೆ ಭಾರವನ್ನು ಹೊರಿಸಿ ಮುಳ್ಳುಸಿಗದಿದ್ದಾಗ ಅಚ್ಚಣ್ಣನ ಬಾಯಿಂದ ಹೊರಬರುವ ‘ಹಲ್ಕಟ್ ರಂಡೆ’, ‘ಮೋಟು ಶನಿ’ ಎಂಬ ಶಬ್ದಗಳು ದಲಿತ ಲೋಕದ ಸ್ವಾತಂತ್ರ್ಯಹರಣದ ಸಂಕೇತಗಳು.
ದೇವಣಿಯು
ಕಳ್ಳಿನ ಹದ ಮಧುರದ ನೆನಪನ್ನು ಮೀರಿಸುವಂತೆ ನಕ್ಕು ಅಚ್ಚಣ್ಣ ನೀಡಿದ 50ರ ನೋಟುಗಳನ್ನು ಸ್ವೀಕರಿಸಿದ್ದು ಸೋಜಿಗವೆನಿಸುತ್ತದೆ. ಅವಳ ಆಯ್ಕೆ ,ಒಳಸಂಘರ್ಷಗಳು ಇದ್ದಕ್ಕಿದ್ದಂತೆ ಕುಸಿದು ಸಮಾಧಿಸ್ಥಿತಿಗೆ ತಲುಪುವುದು ಪ್ರಶ್ನಾರ್ಹವಾದರೂ, ಅಜ್ಞಾನದ ಕೂಪದೊಳಗಿನ ಅವಳ ಸಮುದಾಯದ ಪ್ರತಿಭಟನೆಗಳಿಗೆ ಯಾವುದೇ ತಾತ್ತ್ವಿಕವಾದ ರೂಪುರೇಷೆಗಳಿಲ್ಲದಿರುವುದರಿಂದ ಮತ್ತದೇ ಎಡವುವಿಕೆ ನಡೆದುಬಿಡುತ್ತದೆ.
ನಿಷ್ಠೆ ಮತ್ತು ಮುಗ್ಧತೆಯ ಅನಾವರಣ :
ಬುಟ್ಟಿ ಚಾಪೆಗಳನ್ನು ನೇಯುವ ಕಥಾನಾಯಕಿ ತನ್ನ ಒಡೆಯನಿಗೆ ಕಟ್ಟಿಕೊಡುವುದು ‘ಗಟ್ಟಿಕುಕ್ಕೆ’ಯನ್ನು. ಅವಳ ನಿಷ್ಠೆ ಮತ್ತು ದಲಿತ ಲೋಕದ ‘ಮಗುತನ’ವನ್ನು ಇದು ನೆನಪಿಗೆ ತರುತ್ತದೆ. ಅದು ಆಳುವ ವರ್ಗದ ದಂಡನೆಗಳಿಂದ ಇನ್ನೂ ಹೊರತಾಗದ ಅ ಸ್ತಿತ್ವದ ಪ್ರಶ್ನೆಯೂ ಹೌದು. ಕಾಸು ಎಣಿಸುವ ಆ ಸೆಗೆ ಬಿದ್ದ ದೇವಣಿಯ ಅಂಗೈಯಲ್ಲಿ ‘ಬಿದಿರ ಮುಳ್ಳಿನ ಗಾಯದ ಗೀರುಗಳು’ ಮಾಸುವುದಿಲ್ಲ. ಅಂತಹ ನೋವಿನ ಗೀರುಗಳನ್ನು ಸಹಿಸುತ್ತಾ ಬದುಕು ಕಟ್ಟಿಕೊಳ್ಳಲು ಕನಸು ಕಾಣುವ ಭೂಮಿಯ ಗುಣದವಳು ಆಕೆ.
ದೇವಣಿ, ಗುಬ್ಬಿ, ಸಾಬ, ಐತಪ್ಪು, ಚೋಮಣಿ, ಅಕ್ಕಮ್ಮ ಮಾತು ಮರೆತವರಾಗಿ ನಾಟಿನೆಡುವ ಹುರುಪು ತೋರಿಸುವುದು ತಳವರ್ಗದವರ ಮುಗ್ಧ ಕರ್ತವ್ಯಪ್ರಜ್ಞೆಯನ್ನು ಬಿಂಬಿಸುತ್ತದೆ. ವಾಸ್ತವವಾಗಿ ಕೆಂಬಟ್ಟಿ, ಕುಡಿಯ ಜನಾಂಗಗಳಲ್ಲಿ ಪ್ರಚಲಿತವಿರುವ
ಉಪ್ಪದೇ ಬುಟ್ಟ್ ಞಂಡ್ ಪುಡಿಚ ( ಉಳುವುದ ಬಿಟ್ಟು ಏಡಿಹಿಡಿದಂತೆ),
ಕಾಲ್ಕ್ ಬುದ್ದವಂಡ ಎದೆ ಚವುಟತೆ (ಕಾಲಿಗೆ ಬಿದ್ದವನ ಎದೆಗೆ ತುಳಿಯದಿರು) ಮುಂತಾದ ಗಾದೆಮಾತುಗಳು ಅವರ ಜೀವನಕ್ರಮದಲ್ಲಿ ಅಂಟಿಕೊಂಡಿರುವ ಮುಗ್ಧತೆ ಮತ್ತು ಪ್ರಾಮಾಣಿಕತೆಯನ್ನು ಸಾರಿಹೇಳುತ್ತವೆ.
ಶ್ರಮ ಪರಿಹಾರ ಮಾರ್ಗ :
ಓಲೋಹೊಯ್ಯ ಹೋಹಯ್ಯ ಓವಯ್ಯ ಓಹೋವಯ್ಯಾ ಎಂಬ ನಾಟಿಪದ ಶುರುವಾದಂತೆ ಅವರ ಮೈನರಗಳಲ್ಲಿ ಉತ್ಸಾಹ ಪುಟಿಯುತ್ತದೆ. ದಣಿವಿನ ಮರೆವಿಗಾಗಿ ಇಸ್ಮಾಲಿ ಅಯ್ಯನ ಅರಬಿಪಾಟ್, ಎರಟ್ಟಿಪಾಟ್ಟ್ಗಳ ಮೊರೆಹೋಗುತ್ತಾರೆ.
‘ನಾಟಿ ಓಟ’ ಎನ್ನುವುದು ನಾಟಿಕೆಲಸವಾದ ನಂತರದ ಮನರಂಜನಾ ಸ್ಪರ್ಧೆಯಷ್ಟೇ ಅಲ್ಲ , ಅದು ಈ ನೆಲದ ಸಂಸ್ಕೃತಿ ; ಬದುಕು. ಅದೊಂದು ಶ್ರಮವಿಮೋಚನೆಯ ಮಾರ್ಗವೂ ಹೌದು.
ಪ್ರಾಂತೀಯ ನುಡಿವೈಶಿಷ್ಟ್ಯ :
ಅಕ್ಷರದ ಹೊಸ್ತಿಲು ತುಳಿಯದ ದಲಿತರ ಆಡುನುಡಿಯ ಬೆರಕೆಯೊಂದಿಗೆ ಪ್ರಾಂತೀಯ ಜೀವನಾನುಭವಗಳನ್ನು ಅತಿವಾಸ್ತವಿಕ ನೆಲೆಯಿಂದ ಲೇಖಕಿ ಕಟ್ಟಿಕೊಡುತ್ತಾರೆ. ಕೊಡವ ಸಾಂಸ್ಕೃತಿಕ ಪರಿಸರದಲ್ಲಿ ಮಿಳಿತಗೊಂಡು ಬದುಕುವ ಇವರ ಭಾಷೆಯು ಕನ್ನಡದಲ್ಲಿ ಅಭಿವ್ಯಕ್ತಗೊಳ್ಳುವಾಗಲೂ ಅದರದ್ದೇ ಆದ ಶಬ್ದಗಳನ್ನು ಒಳಗೊಳ್ಳುತ್ತದೆ:
ಆಪುಲೆ ಅವ್ವಯ್ಯಾ; ತುಪ್ಪಿದಳು; ತುಳಿಯ, ಬರಿಪೊಡ; ಮಂಡೆಪೊಡ, ಕುತ್ತುಂಬೊಳ್ಳ; ಕಾಕೋಟಜ್ಜ, ಇಗ್ಗುತಪ್ಪ, ಕಾವೇರಮ್ಮೆ, ಮುಕ್ಕಾಟಿರ, ಕುಟ್ಟಡ ಇತ್ಯಾದಿ.
ಹಸಿವು ಮತ್ತು ಆಹಾರ ಕ್ರಮ :
ಹಸಿವಿನ ಚಿತ್ರಣ ಕತೆಯಲ್ಲಿ ಕೆಲವೆಡೆ ತಣ್ಣಗೆ ಕಾಣಸಿಗುತ್ತವೆ. ಓಟಕ್ಕೆ ಮುನ್ನ ದೇವರಿಗೆ ‘ಮೀದಿ ಇಡು’ವಾಗಲೇ ಗದ್ದೆಯಲ್ಲಿದ್ದವರ ಹೊಟ್ಟೆ ಚುರುಗುಟ್ಟಿದ್ದು, ಐತಪ್ಪುವಿನ ಹೊಟ್ಟೆಯೊಟ್ಟಿಸಿಕೊಂಡ ನಾಯಿ ಏನೋ ನೋಡಿ ಬೊಗಳಿದ್ದು- ಇವು ಕೆಲವು ಮಾದರಿಗಳು.
ನಿಸರ್ಗದೊಂದಿಗೆ ಅವಿನಾಭಾವ ಸಂಬಂಧವನ್ನಿಟ್ಟುಕೊಂಡ ಕೆಂಬಟ್ಟಿ, ಎರವ, ಕುರುಬ ಮುಂತಾದ ಬುಡಕಟ್ಟು ಜನಾಂಗಗಳಿಗೆ ಅದರ ಉ ತ್ಪನ್ನಗಳೇ ಆಹಾರವಸ್ತುಗಳು.
ತಪಲೆಯಲ್ಲಿದ್ದ ತಂಗಳನ್ನಕ್ಕೆ ಅಕ್ಕಿಹಿಟ್ಟು ಕೂಡಿಸಿ ನಾದಿ, ರೊಟ್ಟಿ ಬೇಯಿಸುವಷ್ಟು ಆಧುನೀಕತೆಯನ್ನು ಗಳಿಸಿಕೊಳ್ಳುತ್ತಾರಾದರೂ, ಓಟೆಹುಳಿ, ಗಾಂದಾರಿ ಮೆಣಸಿನ ಚಟ್ನಿ, ಬೆಲ್ಲ ಹಾಕಿದ ಕಾಫಿಯನ್ನು ಮರೆತಿಲ್ಲ. ಹೊಗೆಸೊಪ್ಪು, ಹೆಂಡ(ಬೈನೆಕಳ್ಳು, ಬಟ್ಟಿ ಸಾರಾಯಿ, ಅರ್ಮಿಕ್ಯಾಂಟೀನಿನ ರಮ್ಮು) – ಇವು ನೋವಿನ ಪರಿಹಾರಕ್ಕಾಗಿ ಕಂಡುಕೊಂಡ ಮಾರ್ಗಗಳು. ನಾಟಿ ದಿನದ ‘ಗದ್ದಳ’ ಊಟದ ಸಂದರ್ಭ ಹಂಚಿ ಉಳಿದ ‘ಅರ್ಧಬಾಟ್ಲಿ’ ರಮ್ಮು ಮೊಣ್ಣನ ಚಡ್ಡಿಯೊಳಗಿನ ಸೊಂಟದ ಹಗ್ಗವನ್ನು ಸೇರುತ್ತದೆ. ದೇವಣಿಯ ಕಳ್ಳಿನ ಚಟದಿಂದ ಅಚ್ಚಣ್ಣ ಅವಳ ಬೆನ್ನುಬೀಳುತ್ತಾನೆ.
‘ಕಳ್ಳು’ ದಲಿತ ಜನಾಂಗದ ಹಿನ್ನಡೆಯ ಮೂಲವೂ ಆಗಿ ವ್ಯಕ್ತಗೊಂಡಿದೆ. ಮಳೆಗಾಲದಲ್ಲಾದರೆ ತೋಡುನೀರಿನ ‘ಕೊಯಿಲೆ, ಕಂಡಿ, ಐಮೀನು, ಕಳಚೆ, ಹಾವುಮೀನು, ಚಾಪಳೆ, ಗೆಂಡೆ, ಕಣ್ಣಿಮೀನು, ಏಡಿ’ ಮುಂತಾದವು ಅವರ ಆಹಾರವಸ್ತುಗಳು.ದೇವಣಿಗೆ ‘ಕೇಚಕ್ಕಿ ಮೀಂಗರಿ ಕೂಳು’ ಎಂದರೆ ಪ್ರಾಣ.
ಅವರ ಆಹಾರಕ್ರಮ ಮೋಜಿನ ಸ್ವರೂಪದಲ್ಲ; ಅದು ಕಳ್ಳೇ ಇರಲಿ, ಮೀಂಗರಿಯೇ ಇರಲಿ, ಅದು ಹಸಿವನ್ನು ನೀಗಿಸಿಕೊಳ್ಳುವ ಕ್ರಮವಷ್ಟೆ. ಕಲಬೆರಕೆಯಿಲ್ಲದ ನೆಲಮೂಲದ ಆಹಾರವೇ ದಲಿತ ಕುಲದ ಜೀವಾಳ.
**
‘ನಾಟಿ ಓಟ’ ಕತೆಯು ದಲಿತ ಜನಾಂಗದ ನೈಜಗ್ರಹಿಕೆ, ಸೂಕ್ಷ್ಮಜ್ಞತೆಯ ಫಲ. ಶತಮಾನದಿಂದಲೂ ಅಲಕ್ಷಿತವಾದ ಜಾತಿಪಂಗಡಗಳು ಕಾಲದ ಕಾಲ್ತುಳಿತಕ್ಕೆ ಕೆಸರುಗದ್ದೆಯಲ್ಲಿ ಹೂತುಹೋದರೂ, ಮತ್ತೆ ಎದ್ದೆದ್ದು ಓಡುವ ಓಟವಿದೆಯಲ್ಲಾ- ಅದು ಈ ಕಾಲದಲ್ಲಿ ಬದುಕಿಕೊಳ್ಳುತ್ತಿರುವ ಅಂತಹದ್ದೇ ಜನರಿಗೆ ಆತ್ಮವಿಶ್ವಾಸ ತುಂಬುವ ‘ಟಾನಿಕ್’. ಪತಿಯ ಸಾವಿನೊಂದಿಗೆ ಸ್ವಾತಂತ್ರ್ಯವೂ ಸಡಿಲಗೊಳ್ಳುವ , ಸಾಮಾಜಿಕ ಅಭದ್ರತೆಯಲ್ಲೇ ಕಾಲ ತಳ್ಳಬೇಕಾದ ದಯನೀಯ ಸ್ಥಿತಿ ದಲಿತ ಹೆಣ್ಣಿನದು. ಇಂತಹ ಪಾತ್ರವೊಂದನ್ನು ಕೇಂದ್ರವಾಗಿಸಿಕೊಂಡ ಕತೆಯ ಅಂತಿಮ ಹೊರಳುವಿಕೆ ದಲಿತರ ಉದ್ಧಾರದ ಮುನ್ನುಡಿಯಾಗುತ್ತದೆ; ಅದು ಸದ್ಯೋವರ್ತಮಾನದ ತುರ್ತೂ ಹೌದು.
*
ಕಾಜೂರು ಸತೀಶ್
(26/06/2012)