ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Sunday, July 1, 2018

ಒಂದು ಕವಿತೆಯ ಚರಮಗೀತೆ

ನನ್ನ ಕವಿತೆ ತೀರಿಕೊಂಡ ದಿನ
ಮಳೆ, ಕಣ್ಣು, ನದಿ, ಹೆಂಚು, ಮರ...
ಮತ್ತ್ಯಾರನ್ನೂ ಅಳಲು ಬಿಡಲಿಲ್ಲ 
ಶಬ್ದಕೋಶದ ಅವರ ಪದಗಳ ರಾಶಿ ಹಾಕಿ
ಮೈಕುಸದ್ದನ್ನು ಸುರಿದು ಬೆಂಕಿಹಚ್ಚಿದೆ


ನನ್ನ ಪ್ರೀತಿಯ ಮಳೆ ತೊಟ್ಟಿಕ್ಕತೊಡಗಿದೆ-
ಎಷ್ಟು ಅದುಮಿಟ್ಟುಕೊಂಡರೂ ಗಾಳಿಯ ಕಣ್ಣುಗಳಿಂದ.
ಇನ್ನೂ ಅರ್ಧ ಬೆಂದಿದ್ದಷ್ಟೆ
ಹೊಗೆಯಾಡುತ್ತಿದೆ
ತಲೆ ಸಿಡಿಯಿತೋ ಏನೋ
ಹಾಗೇ ಬಿಟ್ಟರೆ ತೋಳಗಳು ಎಳೆದೊಯ್ಯುತ್ತವೆ


ನಿದ್ದೆಗೆಟ್ಟು ಕಾಯುತ್ತಿದ್ದೇನೆ.

ಈ ತಡರಾತ್ರಿಯಲ್ಲಿ ಕತ್ತಲಿನ ಒಳಗೆ ಹಗಲು ನುಸುಳದ ಹಾಗೆ
ಯಾವುದೋ ನಾಯಿಯೊಂದು ಬೊಗಳುತ್ತಾ ಕಾಯುತ್ತಿದೆ
ವಿದ್ಯುತ್ತು - ಕಂಬಗಳ ಕಂಬಿಗಳಲ್ಲಿ ಬಾವಲಿಯೊಂದಿಗೆ ಜೋತಾಡುತ್ತಾ ಮಲಗಿದೆ

ಹಾಡುತ್ತಿರುವ ಮತ್ತದೇ ಮಿಡತೆಯನ್ನು ಕರೆದು
ಕವಿತೆ ಸತ್ತ ನೆನಪನ್ನು ಮರುಕಳಿಸಿಕೊಳ್ಳಲು ಇಷ್ಟವಿಲ್ಲ ನನಗೆ.

ಈ ಪದಕ್ಕೆ ಪೌಡರ್ ಬಳಿಯಬೇಕಿತ್ತು
ಈ ವಾಕ್ಯಕ್ಕೆ ಕೋಟು ಇದ್ದಿದ್ದರೆ ಚೆನ್ನಿತ್ತು
ಇದರ ಹಿಂದೆ ಮುಂದೆ ಇನ್ನೊಂದಿಷ್ಟು ಉಬ್ಬಿಕೊಂಡಿರಬೇಕಿತ್ತು
ಎಂದೆಲ್ಲಾ ನುಡಿದವರ ಎಂಜಲು ಬತ್ತಿದೆ
ಅಲ್ಲೀಗ ಒಂದು ಕ್ಯಾಕ್ಟಸ್ಸು ಕೂಡ ಬೆಳೆಯುತ್ತಿಲ್ಲ.

ತಪ್ಪಿತಸ್ಥರ ಮೊದಲ ಸಾಲಿನಲ್ಲಿರುವ ನನ್ನ ಹೆಸರು
ಈಗಾಗಲೇ ನೇಣುಬಿಗಿದುಕೊಂಡಿದೆ ಡೆತ್ ನೋಟ್ ಕೂಡ ಬರೆದಿಡದೆ
*

ಸತ್ತುಹೋದ, ಅರ್ಧಬೆಂದ ಕವಿತೆಯಲ್ಲೊಂದು ಗಿಡಹುಟ್ಟಿದೆ
ನನ್ನ ಕಣ್ಣಗುಡ್ಡೆಗಳಂಥಾ ಎರಡು ಕಪ್ಪು ಹೂವುಗಳು ಅದರ ಮುಖದಲ್ಲಿ.

ನಾನೀಗ ಹೂವಿನ ಕಣ್ಣುಗಳಲ್ಲಿ ನೋಡುತ್ತಿದ್ದೇನೆ ಅದನ್ನು.
*

ಕಾಜೂರು ಸತೀಶ್

No comments:

Post a Comment