ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Sunday, July 1, 2018

Hotel

ಊಟಕ್ಕೆಂದು ಹೋಟೆಲಿನ ಬಳಿಬಂದೆ
ಬಾಗಿಲು ಹಾಕಿ ಎಲ್ಲೋ ಹೊರಟುಹೋಗಿದೆ!

ಎಲ್ಲಿ ಹೋಗಿರಬಹುದು ಅದು
ಬೆವರಲ್ಲಿ ತೋಯ್ದ ತನ್ನ ಅಂಗಿಯ ಕಳಚಿಟ್ಟು?

ಮುತ್ತುತ್ತಿರಬಹುದು ಈಗಲೂ
ಆ ಅನಾಮಿಕ ನೊಣಗಳು
ಅದನ್ನೇ ಹಿಂಬಾಲಿಸಿಕೊಂಡು.

ಪಿಚಕ್ಕೆಂದು ಉಗುಳುತ್ತಿದ್ದ ವಾಶ್ ಬೇಸಿನ್
ಯಾವ ಬರಗಾಲದ ಧ್ಯಾನದಲ್ಲಿರಬಹುದು ಈಗ?

ಪಾಪ, ಉಸಿರಾಡಿ-ಬಿಡಲು ಒಂದು 'ಧಮ್ಮು' ಹೊಗೆಯೂ ಸಿಕ್ಕಿರಲಿಕ್ಕಿಲ್ಲ

ಹೋಗಿರಬಹುದು ಮುದ್ದಾಡಿಬರಲು
ಟವಲಿನ ಬೆವರು ಸೂರ್ಯನನ್ನು!

ತಿಂದಿದ್ದು ಹೆಚ್ಚಾಗಿ 'ಅರ್ಜೆಂಟಾ'ಯಿತೇ?
ಅಥವಾ ಊರಿನ ಉಸಾಬರಿ ಇದಕೂ ಅಂಟಿತೇ?

ಆ ಒಲೆಗೆ ಇಂದು ಊಟವಿರಲಿಕ್ಕಿಲ್ಲ!
ನನಗಾದರೋ ಉಪವಾಸ ಇದ್ದೂ ಇದ್ದೂ ಅಭ್ಯಾಸವಿದೆ!
*

ಕಾಜೂರು ಸತೀಶ್

(ಕಳೆದ ಸೋಮವಾರ. ಗ್ಯಾಸ್ ಮುಗಿದಿತ್ತು. ಅಂಗಡಿಗಳೆಲ್ಲ ಮುಚ್ಚಿದ್ದವು. ಹೋಟೆಲಿಗೆ ಹೋದರೆ ಅದೂ ಕೂಡ ಬಾಗಿಲು ಹಾಕಿ ಎಲ್ಲೋ ಹೊರಟುಹೋಗಿತ್ತು!)

No comments:

Post a Comment