ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Thursday, January 11, 2018

ಮೃತರ ಮನೆಯ ಗಾನ

(ಒಂದು ಅಸಂಗತ ಪದ್ಯ)


ಅವಳ ಚಿಕ್ಕಮ್ಮ ತೀರಿದ ದಿನ
ಭೇಟಿಯಾದೆವು ನಾವು
ಶವದ ಆಚೆ-ಈಚೆ ಕುಳಿತು
ಸಿಕ್ಕಾಪಟ್ಟೆ ಅತ್ತೆವು
ಸಿಕ್ಕಾಪಟ್ಟೆ ನಕ್ಕೆವು
ಕಣ್ಣುಕಣ್ಣುಗಳ ಕಲೆಸಿದೆವು
ಎಲ್ಲೋ ದೂರ ಇದ್ದವಳವಳು
ಸುದ್ದಿ ತಿಳಿದು ಬಂದಳು
ನಾನು ಇಲ್ಲೇ ಊರಲ್ಲಿರುವೆ
ಕೆಲಸ-ಕೂಲಿಯಿಲ್ಲದ ಸುಖದಲಿ...
ಲಲ್ಲಲ್ಲಾ ಲಲ್ಲಲ್ಲಾ ಲಲ್ಲಲ್ಲಲ್ಲಲ್ಲಾ...

ಬಾವಿಯ ಬಳಿ ಚಿಕ್ಕಮ್ಮನಿಗೆ
ಬಿಳಿಬಟ್ಟೆಯ ಪರದೆಯ ಆಚೆ
ಸ್ನಾನ ಮಾಡಿಸಿ ಪೌಡರು ಬಳಿಯಲು
ಮರೆಯಲಿ ನಿಂತು ಮೂಲೆಯಲಿ ನಿಂತು
ಅವಳಿಗೆ ನಾನು ನನಗೆ ಅವಳು
ಗುಲಾಬಿಯನ್ನು ಕೊಟ್ಟುಕೊಂಡೆವು...
ಲಲ್ಲಲ್ಲಾ ಲಲ್ಲಲ್ಲಾ ಲಲ್ಲಲ್ಲಲ್ಲಲ್ಲಾ...

ಜನಜಂಗುಳಿಯಲಿ ಕಾಣದ ಹಾಗೆ
ಅವಳ ಕೈಯ ಬೆರಳನು ಹಿಡಿದು
ಚಿಕ್ಕಮ್ಮನ ಸುತ್ತು ಬಂದೆ
ತಾಳಿ ಕಟ್ಟಿ ಸುತ್ತಿದ ಹಾಗೆ...
ಲಲ್ಲಲ್ಲಾ ಲಲ್ಲಲ್ಲಾ ಲಲ್ಲಲ್ಲಲ್ಲಲ್ಲಾ...

ಶವಸಂಸ್ಕಾರ ಮುಗಿದೇ ಹೋಯಿತು
ಹದಿನಾರನೇ ದಿನ ಬರುವ ವೇಳೆಗೆ
ಅವಳಿಗೆ ಮುಡಿಸಲು ಹೂವೊಂದನ್ನು
ಶವದ ಮೇಲಿಂದ ಎತ್ತಿಟ್ಟಿರುವೆ...
ಲಲ್ಲಲ್ಲಾ ಲಲ್ಲಲ್ಲಾ ಲಲ್ಲಲ್ಲಲ್ಲಲ್ಲಾ...
ಲಾಲಲ್ಲಾ ಲಾಲಲ್ಲಾ ಲಾಲಲ್ಲಾಲಲ್ಲಾ...
*

ಮಲಯಾಳಂ ಮೂಲ: ಅಜೀಶ್ ದಾಸನ್

ಕನ್ನಡಕ್ಕೆ- ಕಾಜೂರು ಸತೀಶ್

No comments:

Post a Comment