ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Wednesday, May 4, 2016

ಒಣಗದ ಭಯದ ನೆರಳಿನಲ್ಲಿ..

ಮೈಮೇಲಿನ ಗೆರೆಗಳನ್ನು ಒಣಗಲು ಹಾಕಿ
ಸುತ್ತಾಡುವ ಹುಲಿಗಳನ್ನು
ಬೆಕ್ಕುಗಳೆಂದುಕೊಂಡು
ಮನೆಗೆ ಸೇರಿಸಿಕೊಳ್ಳುತ್ತೇವೆ.

ನಮ್ಮ ಮಕ್ಕಳನ್ನು
ಅವುಗಳ ಮರಿಗಳ ಹಾಗೇ ನಯವಾಗಿ ನೆಕ್ಕಿ
ಅಪ್ಪಿಕೊಳ್ಳುವಾಗ
ಪೂರ್ತಿ ನಂಬಿಬಿಡುತ್ತೇವೆ.

ಆದರೂ ಕೊಲೆಯಾಗುವ ಭಯ
ಇದ್ದೇ ಇರುತ್ತದೆ ಒಳಗೆ.

ಯಾರು, ಯಾವಾಗ, ಹೇಗೆ
ಎಂದೆಲ್ಲಾ ತಲೆಕೆಡಿಸಿಕೊಂಡು
'ಭಯ' ಎಂಬ ಸುರಕ್ಷಿತ ತಾಣದಲ್ಲಿ ಅಡಗಿಕೊಳ್ಳುವಾಗ
ಯಾರೂ ಕೊಲೆಗೈಯದಿದ್ದರೂ
ಎಷ್ಟೋ ಬಾರಿ ಸತ್ತುಬಿಟ್ಟಿರುತ್ತೇವೆ.

ನಮ್ಮ ಮಕ್ಕಳನ್ನು ಬಿಗಿದಪ್ಪಿ ಸುರಕ್ಷಿತರನ್ನಾಗಿಸಿ
ಗೆರೆಗಳ ಒಣಗಲು ಹಾಕಿ
ಅಂಡಲೆಯುವ ಹುಲಿಗಳಿಂದ
ರಕ್ಷಣೆ ನೀಡಲು ಶ್ರಮಿಸುತ್ತಾ
ಒಣಗದ ಭಯದ ನೆರಳಿನಲ್ಲಿ
ಒಣಗಿಯೇ ಹೋಗುತ್ತೇವೆ..
ಒಣಗಿಯೇ ಹೋಗುತ್ತೇವೆ..
*

ಮಲಯಾಳಂ ಮೂಲ- ಡೋನಾ ಮಯೂರ

ಕನ್ನಡಕ್ಕೆ- ಕಾಜೂರು ಸತೀಶ್

No comments:

Post a Comment