ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Monday, May 2, 2016

ಇವತ್ತಿನ ಕಾರ್ಯಕ್ರಮಗಳು

ಬೆಳಿಗ್ಗೆ
ಗರ್ಭದಲ್ಲೇ ಕೊಲೆಗೀಡಾದ ಮಗುವಿನ
ಶವಸಂಸ್ಕಾರಕ್ಕೆ ತೆರಳಬೇಕು.
'ಗಾಂಧಿ ನಗರ'ದಿಂದ ಹೊರಟ ಬುದ್ಧನನ್ನು
ಮನೆಗೆ ಕರೆದುಕೊಂಡು ಹೋಗಬೇಕು.

ಮಧ್ಯಾಹ್ನ
ಆಸ್ಪತ್ರೆಯಲ್ಲಿ ಮಲಗಿರುವ
ದ್ರೌಪದಿಯ ಆರನೇ ಗಂಡನನ್ನು ಭೇಟಿಯಾಗಬೇಕು.
ಊಟಕ್ಕೂ ಮುಂಚೆ
ವೇಶ್ಯೆಯ ಕೈಹಿಡಿದವನಿಗೆ
ಕನಿಷ್ಟ ಆರು ಪೆಗ್ಗನ್ನಾದರೂ ಕುಡಿಸಬೇಕು.

ಸಂಜೆ
ಬೆಳಿಗ್ಗೆ ಪಾರ್ಟಿ ಡೊನೇಷನ್
ರಾತ್ರಿ ದೇವಸ್ಥಾನದ ಡೊನೇಷನ್ನಿಗೆಂದು ಬರುವ
'ಮುತ್ತಪ್ಪ'ನ ಗ್ರಹಚಾರ ಬಿಡಿಸಲು
ಒಬ್ಬನನ್ನು ನೇಮಿಸಬೇಕು.
ಮೂರು ವರ್ಷಗಳಾದರೂ
ಒಂದು ಕವಿತೆಯನ್ನೂ ಪ್ರಕಟಿಸದ
'ಪ್ರಜಾಧಾರೆ'ಯ ಸಂಪಾದಕರನ್ನು
'ಚೆಂಬೇರಿ'ಯ ಸಾರ್ವಜನಿಕ ಶೌಚಾಲಯದಲ್ಲಿ
ಕೂಡಿಹಾಕಬೇಕು.

ರಾತ್ರಿ
ನಿದ್ರಿಸುವುದಕ್ಕೂ ಮುಂಚೆ
ಮನೆಯವಳ ಕಿವಿಯಲ್ಲಿ
ಒಂದಿಷ್ಟು ಸುಳ್ಳುಗಳನ್ನು ಮಸಾಲೆ ಬೆರೆಸಿ ಇಡಬೇಕು.
ಕನಸಿನ ಅರಮನೆಗೆ ಪ್ರವೇಶಿಸುವ ಮುನ್ನ
'ಸುಮತಿ'ಗೆ ತೆಗೆದುಕೊಡಬೇಕಿದ್ದ
ಸೀರೆಯ ಹಣ ಜೇಬಲ್ಲಿದೆಯೆಂದು ಖಾತ್ರಿಪಡಿಸಿಕೊಳ್ಳಬೇಕು.
*

ಮಲಯಾಳಂ ಮೂಲ- ಪವಿತ್ರನ್ ತೀಕ್ಕುನಿ

ಕನ್ನಡಕ್ಕೆ- ಕಾಜೂರು ಸತೀಶ್

No comments:

Post a Comment