ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Saturday, May 21, 2016

ಡಾ.ಸಾಗರ್ ಕುಮಾರ್,ಎಂ.ಆರ್.ಸಿ.ಪಿ. , ಗ್ರೀಷ್ಮಸದನ್, ನಿಮ್ಹ್ಯಾನ್ಸ್, ಬೆಂಗಳೂರು

ಹುಚ್ಚು ವಾಸಿಯಾಗಿ ಮನೆಗೆ ಹಿಂತಿರುಗಿದಾಗ
ಸಂಭ್ರಮಿಸಲು ನೀನು ನನ್ನನ್ನು ಕಡಲ ತೀರಕ್ಕೆ ಕರೆದೊಯ್ದೆ.
ಅವತ್ತು ನಾನು ನಿನ್ನ ಮಡಿಲಲ್ಲಿಟ್ಟ ಶಂಖ ಪ್ರಣಯದ ನಾದ ಹೊಮ್ಮಿಸಿತು.
ಆಗಷ್ಟೇ ಕ್ಷೌರಮಾಡಿದ ನನ್ನ ನುಣುಪುಗೆನ್ನೆಯ ಮೇಲೆ
ನೀನು ನಿನ್ನ ಸುಡುವ ತುಟಿಗಳನ್ನೊತ್ತಿದೆ.
ಬಿರುಬೇಸಿಗೆ. ತೀರಕ್ಕೂ, ತೆರೆಗಳಿಗೂ ತೀರದ ದಣಿವು.
ಜನ ಅದರ ಬಗ್ಗೆ ಅಷ್ಟೇನು ತಲೆಕೆಡಿಸಿಕೊಳ್ಳಲಿಲ್ಲ.
ನೀನು ನನ್ನ ಅಪ್ಪಿಕೊಳ್ಳುವುದರಲ್ಲಿ, ಬಿಸಿಯೇರಿಸುವುದರಲ್ಲಿ ನಿರತಳಾಗಿದ್ದೆ.
ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಕಪ್ಪೆಚಿಪ್ಪುಗಳ ಬಾಚಿ ನಿನ್ನ ಕುಪ್ಪಸದೊಳಗಿಳಿಸಿದೆ.
ಮನೆಗೆ ತಲುಪಿದ ಮೇಲೆ ನಾನದನ್ನು ತೆಗೆದುಕೊಡಬೇಕೆಂದು ಹಠಹಿಡಿದೆ.
ಮೂರು ವರ್ಷ ಹುಚ್ಚಿನ ಹಬೆಯಲ್ಲಿ ಬೆಂದ ನನ್ನನ್ನೂ,
ತಂಪಾದ ಹಾಸಿಗೆಯಲ್ಲಿ ಮಲಗಿ ಒದ್ದೆಯಾದ ನಿನ್ನನ್ನೂ
ಸಮುದ್ರಕ್ಕೆ ಚೆನ್ನಾಗಿ ಗೊತ್ತು.
ಆದರೂ ಶಂಖವನ್ನೆತ್ತಿ ಎಸೆದು
ಜೋರಾಗಿ ಕಿರುಚಿಕೊಂಡು ನನ್ನ ಹುಚ್ಚಿನ ಲೋಕಕ್ಕೆ ಹಿಂತಿರುಗಿದೆ.

ಮನೋರೋಗತಜ್ಞ ಹಿಡಿದರೂ ಸಿಗದ
ಉಬ್ಬರವಿಳಿತಗಳ ಮೆದುಳಾಗಿ
ನಮ್ಮಿಬ್ಬರ ನಡುವಿನ ಕಡಲು ಕೈಕೈ ಹಿಸುಕಿತು.
ತೆರೆಯ ನೊರೆಗಳು
ರಕ್ಕಸನ ಬಾಯಿಂದುಕ್ಕುವ ಹಾಗೆ ಆರ್ಭಟಿಸತೊಡಗಿತು.
ತೆರೆಯಲ್ಲಿ ಮುದುರಿಬಿದ್ದ ಸೀರೆಯ ಕೆಳಗೆ
ಕಪ್ಪೆಚಿಪ್ಪುಗಳಿಗೆ ಸಿಡುಬು ಆವರಿಸಿತು.

ಮನೋರೋಗತಜ್ಞ ಮತ್ತು ನಾಯಿಗೆ
ಅಲೆಗಳ ಲಕ್ಷೋಪಲಕ್ಷ ನೊರೆಗಳ ಕಂಡು
ಒಳಗೊಳಗೇ ನಗು.

ಪ್ರೀತಿ-ದ್ವೇಷಗಳ ಹಳೆಯ ಕೋಟೆಯೊಳಗೆ
ನಗರದ ಎಲ್ಲ ಮೆದುಳುಗಳನ್ನೂ ಅವರು ಆಹ್ವಾನಿಸಿದರು
ಡ್ರಾಕುಲದ ಹಾಗೆ.
*

ಮಲಯಾಳಂ ಮೂಲ- ಎಂ.ಎಸ್. ಬನೇಶ್

ಕನ್ನಡಕ್ಕೆ- ಕಾಜೂರು ಸತೀಶ್

No comments:

Post a Comment