ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Thursday, May 26, 2016

ಈ ಪ್ರೀತಿ ಅನ್ನೋದೇ ಹೀಗೆ

ಈ ಪ್ರೀತಿ ಅನ್ನೋದೇ ಹೀಗೆ
ಒಂಥರಾ ಸಾಂಕ್ರಾಮಿಕ ಜ್ವರದ ಹಾಗೆ.
ಮೊದಮೊದಲು ಕೆಮ್ಮು
ಆಮೇಲಾಮೇಲೆ ಮೈಕೈ ನೋವು
ಬಿಸಿಬಿಸಿ ಕೆಂಡದ ಹಾಗೆ ದೇಹ
ವಾರವಿಡೀ ಕೆಟ್ಟ ಕನಸುಗಳು.
ಇಷ್ಟಾದರೂ ಮರೆವು ನಮ್ಮನ್ನು ಬದುಕಿಸಿಬಿಡುತ್ತದೆ.

ಈ ಪ್ರೀತಿ ಅನ್ನೋದೇ ಹೀಗೆ
ಒಂಥರಾ ಸಿಡುಬಿನ ಹಾಗೆ.
ಒಡೆಯುವುದು ಚಳಿಯೋ, ಹಣ್ಣೋ, ಬೀಜವೋ
ಏನೂ ತಿಳಿಯದೆ ಆತಂಕಕ್ಕೊಳಗಾಗುತ್ತೇವೆ
ಪ್ರೀತಿಯ ತಾಪದಲ್ಲಿ ಸುಟ್ಟು
ಕೆಂಪುಗಟ್ಟಿ ಹಣ್ಣಾಗುತ್ತದೆ ಒಡಲು.
ಹೇಗೋ ಬದುಕಿಕೊಳ್ಳುತ್ತೇವೆ ನಾವು.
ಆದರೆ ಸಂಕಟಗಳು ಒಳಗೇ ಉಳಿದುಬಿಡುತ್ತವೆ
ಜೀವನಪರ್ಯಂತ ಕಾಡುತ್ತವೆ
ನಾವು ಸಹಿಸಿಕೊಳ್ಳುತ್ತೇವೆ.

ಈ ಪ್ರೀತಿ ಅನ್ನೋದೇ ಹೀಗೆ
ಕ್ಯಾನ್ಸರ್ ರೋಗದ ಹಾಗೆ.
ಮೊದಮೊದಲು ತಿಳಿಯುವುದೇ ಇಲ್ಲ
ನೋವು ಶುರುವಾಗುವಷ್ಟರಲ್ಲಿ
ಕಾಲ ಮಿಂಚಿಹೋಗಿರುತ್ತದೆ
ಅವಳು ಮತ್ತೊಬ್ಬನ ತೋಳಲ್ಲಿರುತ್ತಾಳೆ
ಸುಮ್ಮನೇ ಬೆಳೆಯುವ ಪ್ರಣಯಕೋಶಗಳಿಗಿರುವ ಔಷಧಿಗಳು
ಹಿಂಡಿ ಹಿಪ್ಪೆ ಮಾಡುತ್ತವೆ ನಮ್ಮನ್ನು.
ಮತ್ತೆ ಮತ್ತೆ ಕಾಡಿದರೆ
ಕತ್ತಿಯೊಂದು ಬೇಕಾಗಬಹುದು
ಆಮೇಲೆ ಅಂಗವೊಂದನ್ನು ಕಳಕೊಂಡವರ ಹಾಗೆ
ನರಳುತ್ತಾ ಬದುಕುತ್ತೇವೆ
ಮತ್ತೂ ಅದು ಆವರಿಸಿದಾಗ
ಮರದ ಕೊಂಬೆಯಲ್ಲೋ, ನದಿಯಲ್ಲೋ
ಮನೆಯ ಬಾಲ್ಕನಿಯ ಮೇಲಿಂದಲೋ
ಒಂದು ಸಣ್ಣ ಸೀಸೆಯೊಳಗಿಂದಲೋ
ಸಾವು ಕೃಪೆ ತೋರುತ್ತದೆ.
ಹೀಗಿದ್ದಾಗ್ಯೂ ಹೇಗೋ ಬದುಕಿಕೊಳ್ಳುತ್ತೇವೆ ನಾವು.

ಕೆಲವು ಪ್ರಣಯಗಳೇ ಹೀಗೆ
ಹುಚ್ಚು ಹಿಡಿದ ಹಾಗೆ.
ಬರೀ ಭಾವನೆಗಳ ಪ್ರಪಂಚದಲ್ಲೇ ಮಗ್ನ
ಮತ್ತೊಬ್ಬರಿಗೆ ಅದು ಗೊತ್ತಾಗುವುದಿಲ್ಲ.
ಮೆತ್ತಗೆ ಮಾತನಾಡುತ್ತೇವೆ, ಹಾಡುತ್ತೇವೆ
ಒಬ್ಬೊಬ್ಬರೇ ನಗುತ್ತೇವೆ, ಕೋಪಗೊಳ್ಳುತ್ತೇವೆ
ಸುಮ್ಮನೆ ಸುತ್ತಾಡುತ್ತೇವೆ.
ಸರಪಳಿಯಿಂದ, ಶಾಕ್ ಟ್ರೀಟ್ಮೆಂಟಿನಿಂದ
ಗುಣಪಡಿಸಲಾಗುವುದಿಲ್ಲ ಅದನ್ನು.
ಏಕೆಂದರೆ ಅದು ರೋಗವೇ ಅಲ್ಲ
ಅದೊಂದು ಕನಸಿನ ಲೋಕ
ತಾರೆಗಳ ಲೋಕ.

ಒಮ್ಮೆಯೂ ಸಾಕ್ಷಾತ್ಕರಿಸಲಾಗದ ಪ್ರೀತಿಯೇ
ನಿಜವಾದ ಪ್ರೀತಿ
ಅದು ಅಳಿಯುವುದಿಲ್ಲ
ರಾಧೆಯೊಂದಿಗಿನ ಪ್ರೇಮದ ಹಾಗೆ.
*

ಮಲಯಾಳಂ ಮೂಲ- ಕೆ. ಸಚ್ಚಿದಾನಂದನ್

ಕನ್ನಡಕ್ಕೆ- ಕಾಜೂರು ಸತೀಶ್

Wednesday, May 25, 2016

ಮುಖಾಮುಖಿ

ಸಾಲು ಸಾಲು ಗಾಳಿಮರಗಳಿರುವ ಬೆಟ್ಟದ ತುದಿ.
ಮರದ ಕೊಂಬೆಯಲ್ಲಿ ಕುಳಿತು
ಅವನು ಹೇಳಲಾರಂಭಿಸಿದ:

'ಸತ್ಯವನ್ನೇ ನುಡಿಯಲು ಕಲಿಸಿದ ಚಾಮಯ್ಯ ಮೇಷ್ಟ್ರೇ,
ಸಮಸ್ಯೆಗಳ ಹಿಮ್ಮೆಟ್ಟಿಸಲು ಕಲಿಸಿದ ತಂದೆಯೇ,
ಭರವಸೆಯ ಬೆಳಕಾದ ತಂಗಿಯೇ,
ಹಂಚಿಕೊಂಡು ಬದುಕಲು ಕಲಿಸಿದ ತಮ್ಮನೇ,
ಕರುಣೆಯ ಕಡಲಾದ ಅವ್ವಾ..

ಈ ಲೋಕದಲ್ಲಿ
ಯಾರ ಎದುರೂ
ತಲೆತಗ್ಗಿಸದೆ ನಿಲ್ಲಬೇಕು ನನಗೆ'.

ಹೀಗೆನ್ನುತ್ತಾ ಕೊರಳಿಗೆ ಹಗ್ಗ ಬಿಗಿದು
ಕೆಳಕ್ಕೆ ಹಾರಿದ

ಮತ್ತು
ತಲೆ ತಗ್ಗಿಸದೇ ನಿಂತ!
*

ಮಲಯಾಳಂ ಮೂಲ- ಡಾ. ಸಂತೋಷ್ ಅಲೆಕ್ಸ್

ಕನ್ನಡಕ್ಕೆ- ಕಾಜೂರು ಸತೀಶ್

Saturday, May 21, 2016

ಜೊತೆಯಾಟ

ಬಿರುಬೇಸಿಗೆಯಿದ್ದರೂ
ಮಳೆ ಸುರಿಯುತಿದೆ
ಮಳೆಯಿದ್ದರೂ
ಬಿಸಿಲು ತಣಿಯುತ್ತಿಲ್ಲ.

ಬಿಸಿಲೂ ಮಳೆಯೂ ಕೂಡಿದರೂ
ನರಿಗಳು ಮದುವೆ ಮಂಟಪದಿಂದ ಇಳಿಯುತ್ತಿಲ್ಲ.

ಬಾರೀ ಮಳೆ
ಎಲ್ಲೆಲ್ಲೂ ಪ್ರಳಯ ಜಲ
ಒಂದೇ ಒಂದು ಬಿಸಿಲಿಗೆ
ನೀರೆಲ್ಲ ಬತ್ತಿಹೋಗಿದೆ.

ಸುಟ್ಟು ಕರಕಲಾಗಲು
ಇನ್ನೇನೂ ಉಳಿದಿಲ್ಲವಾದರೂ
ಬಿಸಿಲು ಇಳಿಯುತ್ತಿಲ್ಲ
ಮಳೆ ನಿಲ್ಲುತ್ತಿಲ್ಲವಾದರೂ
ಹನಿ ನೀರೂ ಉಳಿದಿಲ್ಲ.

ಮಣ್ಣಲ್ಲಿ ಸತ್ವವಿಲ್ಲದಿದ್ದರೂ
ಕೆದಕಿ ತಿನ್ನಲಿಕ್ಕೆಂದು
ಕೋಳಿಗಳು ಬರಲಾರಂಭಿಸಿವೆ.

ಮಳೆಯೂ ಬಿಸಿಲೂ
ಒಟ್ಟೊಟ್ಟಿಗೆ ಆಟವಾಡುವಾಗ
ನರಿಗಳು ಕೋಳಿಗಳನ್ನು
ಮದುವೆಯಾಗುತ್ತಿವೆ.
*

ಮಲಯಾಳಂ ಮೂಲ- ರಾಧಾಕೃಷ್ಣನ್ ಪೆರುಂಬಳ

ಕನ್ನಡಕ್ಕೆ- ಕಾಜೂರು ಸತೀಶ್

ಡಾ.ಸಾಗರ್ ಕುಮಾರ್,ಎಂ.ಆರ್.ಸಿ.ಪಿ. , ಗ್ರೀಷ್ಮಸದನ್, ನಿಮ್ಹ್ಯಾನ್ಸ್, ಬೆಂಗಳೂರು

ಹುಚ್ಚು ವಾಸಿಯಾಗಿ ಮನೆಗೆ ಹಿಂತಿರುಗಿದಾಗ
ಸಂಭ್ರಮಿಸಲು ನೀನು ನನ್ನನ್ನು ಕಡಲ ತೀರಕ್ಕೆ ಕರೆದೊಯ್ದೆ.
ಅವತ್ತು ನಾನು ನಿನ್ನ ಮಡಿಲಲ್ಲಿಟ್ಟ ಶಂಖ ಪ್ರಣಯದ ನಾದ ಹೊಮ್ಮಿಸಿತು.
ಆಗಷ್ಟೇ ಕ್ಷೌರಮಾಡಿದ ನನ್ನ ನುಣುಪುಗೆನ್ನೆಯ ಮೇಲೆ
ನೀನು ನಿನ್ನ ಸುಡುವ ತುಟಿಗಳನ್ನೊತ್ತಿದೆ.
ಬಿರುಬೇಸಿಗೆ. ತೀರಕ್ಕೂ, ತೆರೆಗಳಿಗೂ ತೀರದ ದಣಿವು.
ಜನ ಅದರ ಬಗ್ಗೆ ಅಷ್ಟೇನು ತಲೆಕೆಡಿಸಿಕೊಳ್ಳಲಿಲ್ಲ.
ನೀನು ನನ್ನ ಅಪ್ಪಿಕೊಳ್ಳುವುದರಲ್ಲಿ, ಬಿಸಿಯೇರಿಸುವುದರಲ್ಲಿ ನಿರತಳಾಗಿದ್ದೆ.
ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಕಪ್ಪೆಚಿಪ್ಪುಗಳ ಬಾಚಿ ನಿನ್ನ ಕುಪ್ಪಸದೊಳಗಿಳಿಸಿದೆ.
ಮನೆಗೆ ತಲುಪಿದ ಮೇಲೆ ನಾನದನ್ನು ತೆಗೆದುಕೊಡಬೇಕೆಂದು ಹಠಹಿಡಿದೆ.
ಮೂರು ವರ್ಷ ಹುಚ್ಚಿನ ಹಬೆಯಲ್ಲಿ ಬೆಂದ ನನ್ನನ್ನೂ,
ತಂಪಾದ ಹಾಸಿಗೆಯಲ್ಲಿ ಮಲಗಿ ಒದ್ದೆಯಾದ ನಿನ್ನನ್ನೂ
ಸಮುದ್ರಕ್ಕೆ ಚೆನ್ನಾಗಿ ಗೊತ್ತು.
ಆದರೂ ಶಂಖವನ್ನೆತ್ತಿ ಎಸೆದು
ಜೋರಾಗಿ ಕಿರುಚಿಕೊಂಡು ನನ್ನ ಹುಚ್ಚಿನ ಲೋಕಕ್ಕೆ ಹಿಂತಿರುಗಿದೆ.

ಮನೋರೋಗತಜ್ಞ ಹಿಡಿದರೂ ಸಿಗದ
ಉಬ್ಬರವಿಳಿತಗಳ ಮೆದುಳಾಗಿ
ನಮ್ಮಿಬ್ಬರ ನಡುವಿನ ಕಡಲು ಕೈಕೈ ಹಿಸುಕಿತು.
ತೆರೆಯ ನೊರೆಗಳು
ರಕ್ಕಸನ ಬಾಯಿಂದುಕ್ಕುವ ಹಾಗೆ ಆರ್ಭಟಿಸತೊಡಗಿತು.
ತೆರೆಯಲ್ಲಿ ಮುದುರಿಬಿದ್ದ ಸೀರೆಯ ಕೆಳಗೆ
ಕಪ್ಪೆಚಿಪ್ಪುಗಳಿಗೆ ಸಿಡುಬು ಆವರಿಸಿತು.

ಮನೋರೋಗತಜ್ಞ ಮತ್ತು ನಾಯಿಗೆ
ಅಲೆಗಳ ಲಕ್ಷೋಪಲಕ್ಷ ನೊರೆಗಳ ಕಂಡು
ಒಳಗೊಳಗೇ ನಗು.

ಪ್ರೀತಿ-ದ್ವೇಷಗಳ ಹಳೆಯ ಕೋಟೆಯೊಳಗೆ
ನಗರದ ಎಲ್ಲ ಮೆದುಳುಗಳನ್ನೂ ಅವರು ಆಹ್ವಾನಿಸಿದರು
ಡ್ರಾಕುಲದ ಹಾಗೆ.
*

ಮಲಯಾಳಂ ಮೂಲ- ಎಂ.ಎಸ್. ಬನೇಶ್

ಕನ್ನಡಕ್ಕೆ- ಕಾಜೂರು ಸತೀಶ್

Wednesday, May 18, 2016

ಪರೀಕ್ಷೆಗಳು

ಮಳೆರಜೆಯ ಮೊದಲು
ನಂದಿಬಟ್ಟಲು, ನೆಲದಾವರೆ
ಸೇವಂತಿಗೆ, ಕನಕಾಂಬರಗಳು
ಅಂಗಳದಲ್ಲರಳಿ ನಗುವಾಗ
ಹೂಬಿಡಲೂ ಕೂಡ ಪುರುಸೊತ್ತಿಲ್ಲದ
ಬೆಳಗಿನ ಜಾವದಲ್ಲಿ
ಬಣ್ಣ ಬಣ್ಣದ ಹೂಗಳಿರುವ ಲಂಗತೊಟ್ಟು
ಆಟವಾಡಲು ಕರೆಯಿತೊಂದು
ಹೊಟ್ಟೆಕಿಚ್ಚುಳ್ಳ ಕಿರು ಪರೀಕ್ಷೆ.

ಬೇಕೋ ಬೇಡವೋ ಎಂದು ಬೇಗನೆ ಎದ್ದು
ಅಮ್ಮ ಕೊಟ್ಟ ಕರಿಕಾಫಿ ಕುಡಿದು
ತೂಕಡಿಸಿ ಪುಸ್ತಕದ ಮೇಲೆ ಬಿದ್ದು
ಮತ್ತೆ ತಲೆಕೊಡವಿ ಎದ್ದು
ಅಯ್ಯಪ್ಪನ ಶರಣಂ ಕೇಳುವಾಗ
ಚರ್ಚಿನಿಂದ ಕ್ರಿಸ್ಮಸ್ ಹಾಡು ಕೇಳಲು ದಿನಗಳಿರುವಾಗ
ಚಳಿಗೆ ಗಡಗಡ ನಡುಗುತ್ತಾ
ಬಂತೊಂದು ಅರ್ಧವಾರ್ಷಿಕ ಪರೀಕ್ಷೆ.

ಮಾವಿನಮಿಡಿ ಉದುರುವ,
ಬೇಸಿಗೆಯ ಮಳೆಗರಳಿದ ಮಲ್ಲಿಗೆಯಲ್ಲಿ
ವಸಂತವಿಡೀ ಪರಿಮಳವನ್ನು ಕಾಪಿಟ್ಟ ಮೊಗ್ಗುಗಳುದುರುವ,
ಬೆಳಿಗ್ಗೆ ಬೇಗ ಎದ್ದು ಕೋಗಿಲೆಗಳು ಹಾಡುವ
ಗ್ರೀಷ್ಮ ಋತುವಿನಲ್ಲಿ
ಬೆವರಿ ಓಡಿಬಂದು
ಅಪ್ಪಿಕೊಂಡಿತೊಂದು ವಾರ್ಷಿಕ ಪರೀಕ್ಷೆ.

ಮಳೆರಜೆ-ಚಳಿ-ಕೋಗಿಲೆ
ಮೂವರೂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಲಿಯಲು ಹೊರಟಾಗ
ಆಟವಾಡಲು, ಆಟವಾಡಿಸಲು ಯಾರೂ ಸಿಗದೆ
ಊರುಬಿಟ್ಟು ಓಡಿಹೋದವು ಪರೀಕ್ಷೆಗಳು.
ಬದಲಿಗೆ ಬಂತು Examಗಳು.
ಟೈ-ಕೋಟು-ಬೂಟು ಹಾಕಿ
ಕಣ್ಣು ಅಗಲಿಸಿ
ದುರುಗುಟ್ಟಿ ನೋಡಿ
ನಾಲಗೆ ಚಾಚಿ
ಮಕ್ಕಳ ಹೆದರಿಸತೊಡಗಿದವು.
*

ಮಲಯಾಳಂ ಮೂಲ- ಡಾ. ಸಂಧ್ಯ ಇ.

ಕನ್ನಡಕ್ಕೆ- ಕಾಜೂರು ಸತೀಶ್

Tuesday, May 17, 2016

ಮಧ್ಯವಯಸ್ಸಿನಲ್ಲಿ ಕವಿತೆ ಬರೆದದ್ದು

ಎರಡು ದಶಕಗಳ ದೀರ್ಘ ಅಂತರದ ನಂತರ
ನೆನ್ನೆ ಸಂಜೆ
ನಾನೊಂದು ಕವಿತೆ ಬರೆಯಲು ಕುಳಿತೆ.
ಎರಡನೇ ಸಾಲು ತಲುಪುವಷ್ಟರಲ್ಲಿ
ಉತ್ಪ್ರೇಕ್ಷೆಯ ಏರುದಾರಿಯಲ್ಲಿ ಎಡವಿ
ಜೋರಾಗಿ ಬಿದ್ದುಬಿಟ್ಟೆ.

ಗೆಳೆಯರು ನನ್ನನ್ನು ಸೇರಿಸಿದ್ದು
ವ್ಯಾಕರಣದ ಸರ್ಕಾರಿ ಆಸ್ಪತ್ರೆಗೆ.

ಎಷ್ಟೊಂದು ಕಾಯಿಲೆಗಳು!
ಪ್ರೀತಿಗೆ ಕಾಮಾಲೆ
ಕ್ರಾಂತಿಗೆ ರಕ್ತದೊತ್ತಡ
ಆತ್ಮವಿಶ್ವಾಸಕ್ಕೆ ಬೊಜ್ಜು
ಕನಸಿಗೆ ಖಿನ್ನತೆ.

ವ್ಯಾಯಾಮ ಕಡ್ಡಾಯ ಪ್ರತೀ ದಿನ.

ಹಾಗಾಗಿ
ಗದ್ದೆ ಉತ್ತು
ಹೂದೋಟದಲ್ಲಿ ಅಗೆದು
ಭತ್ತದ ಹೊರೆ ಹೊತ್ತು
ತೆಂಗಿನ ಮರ ಹತ್ತಿ
ಬೆವರಲ್ಲಿ ಸ್ನಾನ ಮಾಡಿದ ನನ್ನ ಕವಿತೆ
ಪ್ರತೀ ದಿನ ಬೆಳ್ಳಂಬೆಳಿಗ್ಗೆ
ಟ್ರ್ಯಾಕ್ ಸ್ಯೂಟ್ ಹಾಕಿ
ಜಾಗಿಂಗ್ ಹೊರಡುತ್ತದೆ.
*

ಮಲಯಾಳಂ ಮೂಲ- ನಿರಂಜನ್ ಟಿ.ಜಿ.

ಕನ್ನಡಕ್ಕೆ- ಕಾಜೂರು ಸತೀಶ್

Monday, May 16, 2016

ಮುದ್ದಿಸಿ ಮುದ್ದಿಸಿ ದಣಿಯುತ್ತೇನೆ

ನಾನು ನನ್ನನ್ನೇ ಮುದ್ದಿಸಿ ಮುದ್ದಿಸಿ ದಣಿದು
ನನ್ನನ್ನೇ ತಿರಸ್ಕರಿಸಬೇಕೆಂದುಕೊಳ್ಳುತ್ತೇನೆ.

'ತಿರಸ್ಕರಿಸ್ತೀಯಾ?' ಅಂತ
ನನ್ನನ್ನೇ ಕೇಳಿಕೊಳ್ಳುತ್ತೇನೆ.

'ತಿರಸ್ಕರಿಸದೆ ಇರಲು ಸಾಧ್ಯವಿಲ್ವಾ?' ಅಂತ
ಕೇಳುತ್ತೇನೆ.

ಕೇಳಿ ಕೇಳಿ ಮುದ್ದಿಸುತ್ತೇನೆ
ಮುದ್ದಿಸಿ ಮುದ್ದಿಸಿ ದಣಿಯುತ್ತೇನೆ.

ಈಗಲೇ ತಿರಸ್ಕರಿಸಿಬಿಡೋಣ ಅಂತ
ಅಂದುಕೊಳ್ಳುತ್ತೇನೆ.

'ಈಗ್ಲೇನಾ?' ಅಂತ ಕೇಳುತ್ತೇನೆ.

'ಸ್ವಲ್ಪ ಹೊತ್ತಾದ ಮೇಲೆ ಆಗಲ್ವಾ?' ಅಂತ ಕೇಳುತ್ತೇನೆ.

ಕೇಳಿ ಕೇಳಿ ಮುದ್ದಿಸುತ್ತೇನೆ
ಮುದ್ದಿಸಿ ಮುದ್ದಿಸಿ ದಣಿಯುತ್ತೇನೆ.
*

ಮಲಯಾಳಂ ಮೂಲ- ವಿಷ್ಣು ಪ್ರಸಾದ್

ಕನ್ನಡಕ್ಕೆ- ಕಾಜೂರು ಸತೀಶ್

ಅರಸೀಕೆರೆಯ ಹಳೆಯ ಉಗಿಬಂಡಿ


ಮೊನ್ನೆ ಮಲಯಾಳಂ ಕವನ ಸಂಕಲನವೊಂದು ಕೈ ಸೇರಿತು. ಎರ್ಣಾಕುಳಂನಿಂದ ಡಾ. ವಿಶಾಖ್ ವರ್ಮ ಅವರು ಪ್ರೀತಿಯಿಂದ ಕಳುಹಿಸಿಕೊಟ್ಟಿದ್ದರು.

ಅದರ ಶೀರ್ಷಿಕೆಯೇನು ಗೊತ್ತೇ? 'അ൪ശിക്കരെയിലെ പഴയ കരിഎഞ്ചി൯'(ಅರಸೀಕೆರೆಯ ಹಳೆಯ ಉಗಿಬಂಡಿ)!

ಸ್ವಂತ ಪರಿಶ್ರಮದಿಂದ ಕನ್ನಡವನ್ನು ಓದಲು, ಬರೆಯಲು ಕಲಿತ ಈ ಪ್ರೊಫೆಸರ್, ಈ ನೆಲದ ಬಗ್ಗೆ ಅಪಾರ ಪ್ರೀತಿಯನ್ನಿಟ್ಟುಕೊಂಡವರು. ಸಂಕಲನದ ಅನೇಕ ಕವಿತೆಗಳು ಮಂಗಳೂರು, ಕೊಡಗು, ದಾವಣಗೆರೆ, ಅರಸೀಕೆರೆ ಮುಂತಾಗಿ ಇಡೀ ಕರ್ನಾಟಕವನ್ನೇ ಧ್ಯಾನಿಸಿವೆ.

ಕನ್ನಡ ನೆಲದ ಜೊತೆಗಿನ ತಮ್ಮ ಒಡನಾಟವನ್ನು 'Kannada Connections' ಎಂಬ ಶೀರ್ಷಿಕೆಯನ್ನಿತ್ತು ಪುಸ್ತಕರೂಪದಲ್ಲಿ ದಾಖಲಿಸಲು ಹೊರಟಿದ್ದಾರೆ.  ಅದರ ಎರಡು ಅಧ್ಯಾಯಗಳನ್ನು ಓದಿ, ಅವರ ಅನುಭವ ಪ್ರಾಮಾಣಿಕತೆಗೆ ತಲೆಬಾಗಿದ್ದೇನೆ.


Thursday, May 12, 2016

ಲಿಂಗದ ಹಸಿವು


'ಸ್ವಲ್ಪ ಕೊಡ್ತೀಯ' ಎಂದು
ಅವಳ ಬಳಿ ಕೇಳಲಾಗದ್ದಕ್ಕೆ
ಆಗುತ್ತಿರುವ ದುಃಖ ಅಷ್ಟಿಷ್ಟಲ್ಲ.

ಒಂದು ವೇಳೆ ಕೇಳಿದ್ದಿದ್ದರೆ?

ಅವಳ ಜೊತೆಯಷ್ಟೇ ಅಲ್ಲ
ಎಷ್ಟೋ ಸ್ತ್ರೀಯರ ಬಳಿ
ಹೀಗೇ ಕೇಳಬೇಕೆನಿಸಿದೆ.

ಮನಸ್ಸಿನಲ್ಲಿ ಮಲಗಿಸಿ
ನಿಲ್ಲಿಸಿ
ಕೂರಿಸಿ
ಕಾಮಸೂತ್ರದ ಎಲ್ಲ ಭಂಗಿಗಳನ್ನೂ
ಪ್ರಯೋಗ ಮಾಡಿದ್ದಾಗಿದೆ.

ಆದರೂ..
ಒಮ್ಮೆಯೂ ಕೇಳಲಿಲ್ಲ ಹಾಗೆ.


ಹೀಗೆ ಬಹಿರಂಗಪಡಿಸುವುದರ ಮೂಲಕ
ಅವಮಾನದ ಕೂಪಕ್ಕೆ ತಳ್ಳಿಬಿಡುತ್ತಾರೊ ಎಂಬ ಭಯದಲ್ಲಿ
ಸ್ವತಃ ಲಿಂಗವನ್ನು, ಅದರ ಅನಾದಿ ಹಸಿವನ್ನು ನಿಗ್ರಹಿಸಿ
ಅಂತಹದ್ದೊಂದು ಜೀವಿ ಇಲ್ಲಿ ಬದುಕುತ್ತಿಲ್ಲವೆಂದು
ಎಲ್ಲರ ಹಾಗೆ
ನಾನೂ ಒಂದು ಬೋರ್ಡು ಅಂಟಿಸಿದ್ದೇನೆ.

ಸ್ವಲ್ಪ ಯಾಮಾರಿದರೂ
ಅಪರಿಚಿತರೊಂದಿಗೆ ಸಂಗ ಬಯಸುವ
ಪಾಪಿ ನಾನು.

ಗೆಳೆಯಾ,
ವೀರ್ಯ ಬಿದ್ದು
ಹರಿದುಹೋಗುವ
ನಮ್ಮ ಒಳವಸ್ತ್ರ
ಎಂದೂ ಸುಳ್ಳುಹೇಳುವುದಿಲ್ಲ.

ಮಲಯಾಳಂ ಮೂಲ-
ವಿಷ್ಣು ಪ್ರಸಾದ್

ಕನ್ನಡಕ್ಕೆ-
ಕಾಜೂರು ಸತೀಶ್

Tuesday, May 10, 2016

ವಾಯು

ಹರಿದೂ ಹರಿದೂ ಸುಸ್ತಾಗಿ
ನದಿಯೊಂದು
ಹಳ್ಳ-ಕೊಳ್ಳಗಳಲ್ಲಿ ನಿಂತುಬಿಟ್ಟಿರಬಹುದು.

ಸ್ವಲ್ಪವೂ ಬಾಗದೆ ನಿಂತೂ ನಿಂತೂ ದಣಿದು
ಬೆಟ್ಟಗಳು
ಲಾರಿಗಳಲ್ಲಿ ಹತ್ತಿ ಹೊರಟುಹೋಗಿರಬಹುದು.

ಆಕಾಶವ ಹೊತ್ತೂ ಹೊತ್ತೂ ಸೊಂಟನೋವು ಬಂದು
ಮರಗಳು
ಮಿಲ್ಲಿನ ಕಡೆಗೆ ಹೊರಟುಹೋಗಿರಬಹುದು.

ಗಾಳಿಯೇ
ನಿನಗೇಕೆ ಸ್ವಲ್ಪವೂ ದಣಿವಿಲ್ಲ?
ಸ್ವಲ್ಪ ಯೋಚಿಸಿನೋಡು ನಿನ್ನ ಬಗ್ಗೆ
ಒಂದು ನೀರುಬಾಟಲಿಯಷ್ಟೂ ಬೆಲೆಯಿಲ್ಲ ನಿನಗೆ.

ಒಂದು ಬಾಟಲಿಯೊಳಗಾದರೂ ಹೋಗಿ ಕೂರಬಾರದೇ
ವಯಸ್ಸಾದ ಕಾಲದಲ್ಲಿ ?


ಮಲಯಾಳಂ ಮೂಲ- ವಿಷ್ಣು ಪ್ರಸಾದ್

ಕನ್ನಡಕ್ಕೆ- ಕಾಜೂರು ಸತೀಶ್


ಬಿಸಿಲು

ಬಿಸಿಲನ್ನು ಮಡಿಲಲ್ಲಿ ಕೂರಿಸಿ
ಹೇನು ನೋಡಿದವು ಎಲೆಗಳು.

ಬಿಸಿಲು ಕೊಸರಾಡಿ
ಎಲೆಗಳಿಂದ ಬಿಡಿಸಿಕೊಂಡು ಓಡಿತು.

ಹತ್ತು ಗಂಟೆಯಾದಾಗ
ಕೊಳದಲ್ಲಿ ಚಿತ್ರವೊಂದನ್ನು ಬಿಡಿಸಿತು.
'ಹುಚ್ಚು' ಅದು ಕೊಟ್ಟ ಚಿತ್ರದ ಶೀರ್ಷಿಕೆ.

ಜೋಡಿ ದುಂಬಿಗಳು ಬಂದು
ಚಿತ್ರದಲ್ಲಾಗಬೇಕಾದ ಬದಲಾವಣೆಗಳನ್ನು ಸೂಚಿಸಿ
ಹಾರಿಹೋದವು.
*

ಮಲಯಾಳಂ ಮೂಲ- ವಿಷ್ಣು ಪ್ರಸಾದ್

ಕನ್ನಡಕ್ಕೆ- ಕಾಜೂರು ಸತೀಶ್

ಈ ಚಳಿಗಾಲದಲ್ಲಿ

ಕಳೆದ ಚಳಿಗಾಲ ಎಷ್ಟು ಭೀಕರವಾಗಿತ್ತು!
ಈ ಚಳಿಗಾಲ ಅಷ್ಟು ಕಠೋರವಾಗಿರದಿದ್ದರೂ
ನೆನಪಿಸಿಕೊಂಡರೆ ನಡುಕ ಹುಟ್ಟುತ್ತಿದೆ

ಕಳೆದ ಚಳಿಗಾಲದಲ್ಲಿ ಅವ್ವ ತೀರಿಕೊಂಡಳು
ಜೋಪಾನವಾಗಿರಿಸಿದ್ದ ಪ್ರೇಮ ಪತ್ರ ಎಲ್ಲೋ ಕಳೆದುಹೋಯಿತು
ಇದ್ದ ಕೆಲಸವೂ ಹೋಯಿತು
ಆ ರಾತ್ರಿಗಳಲ್ಲಿ ಎಲ್ಲೆಲ್ಲಿ ಅಲೆದೆನೋ
ಯಾರ್ಯಾರಿಗೆ ಕರೆಮಾಡಿದೆನೋ ನೆನಪಿಲ್ಲ
ಇಟ್ಟ ವಸ್ತುಗಳೆಲ್ಲ ಬೀಳುತ್ತಿದ್ದವು ನನ್ನ ಮೇಲೇ.

ಈ ಚಳಿಗಾಲದಲ್ಲಿ
ಕಳೆದ ಚಳಿಗಾಲದಲ್ಲಿ ಧರಿಸಿದ ಬಟ್ಟೆಗಳನ್ನು
ಒಂದೊಂದಾಗಿ ತೆಗೆದು ನೋಡುತ್ತಿದ್ದೇನೆ
ಕಂಬಳಿ, ಟೊಪ್ಪಿ, ಸಾಕ್ಸ್, ಮಫ್ಲರ್,
ಮತ್ತೆ ಮತ್ತೆ ನೋಡುತ್ತಿದ್ದೇನೆ

ಮತ್ತೀಗ ಯೋಚಿಸುತ್ತಿದ್ದೇನೆ
ಈ ಚಳಿಗಾಲ ಯಾಕೆ ಅದರಂತೆ ಕಠೋರವಾಗಿರಬೇಕು
ಅದೆಲ್ಲ ಕಳೆದುಹೋದದ್ದಲ್ಲವೇ?!
**
ಹಿಂದಿ ಮೂಲ- ಮಂಗಲೇಶ್ ಡಬರಾಲ್

ಕನ್ನಡಕ್ಕೆ- ಕಾಜೂರು ಸತೀಶ್

Monday, May 9, 2016

ಅರಿಶಿಣ ಹಚ್ಚಿ ಸ್ನಾನ ಮಾಡುತ್ತಾಳೆ

ಅರಿಶಿಣ ಹಚ್ಚಿ ಸ್ನಾನ ಮಾಡುತ್ತಾಳೆ
ಹುಡುಗಿ
ಅರಿಶಿಣ ಹಚ್ಚಿ ಸ್ನಾನ ಮಾಡುತ್ತಾಳೆ

ಕಣ್ಣು ಕಾಣದ ಹುಡುಗಿ
ಅರಿಶಿಣ ಹಚ್ಚಿ ಸ್ನಾನ ಮಾಡುತ್ತಾಳೆ

ಕಚ್ಚಿ ಎಳೆಯುತ್ತವೆ ಅವಳ
ಬೆಳದಿಂಗಳ ಎಳೆಹಳದಿಯ ಕಣ್ಣುಗಳು

ಅವಳ ದೇಹ
ಹಳದಿ ಲೋಹ

ಅರಿಶಿಣದ ಘಮಘಮ
ಮೈಯ ತುಂಬ

ಹೊಕ್ಕುಳಲ್ಲೀಗ ಕಪ್ಪಾಗಿ ಬೆಳೆಯುತ್ತಿದೆ
ಒಂದು ಅರಿಶಿಣ ಗಿಡ.



ಮಲಯಾಳಂ ಮೂಲ-
ಚಿತ್ರ ಕೆ.ಪಿ.

ಕನ್ನಡಕ್ಕೆ-
ಕಾಜೂರು ಸತೀಶ್

Sunday, May 8, 2016

ബസൂ കവിതകൾ

കക്കൂസ്ക്കുഴിയില്‍ വീണ മനുഷ്യന്‍
മരിച്ചുപോയ ദിവസം
മുഖ്യമന്ത്രിയുടെ കോട്ട്
അത്തറും തേടി നടന്നു.
* *
എന്ത് ചെയ്യാന്‍ പറ്റും
എന്‍റെ മുറ്റം ഇത്രയല്ലേയുള്ളു;
നീ വരികയാണെങ്കില്‍
എന്‍റെ കാല്‍പ്പാടില്‍ തന്നെ
ചവിട്ടി വരണം.
* *

എന്നെപോലെ നിനക്കും
ഈ ലോകം 'സുന്ദര'മെന്നു കണ്ടാല്‍
വേറൊന്നുമില്ല
എനിക്കുള്ള അന്ധത നിനക്കുമുണ്ട്.
* *
വീശിയെറിഞ്ഞ കല്ല്
ചികഞ്ഞു തിന്നുന്ന കോഴിയുടെ കാലില്‍ കൊണ്ടു;
ഞൊണ്ടുന്ന കോഴി
കല്ലെറിഞ്ഞവന്‍റെ മുറ്റത്ത്
ഒരു മുട്ടയിട്ടു പോയി.
* *

കന്നട കവിത - ബസൂ

വിവ൪ത്തനം  - കാജൂരു സതീശ്

ಚೆಲ್ಲಾಪಿಲ್ಲಿ

ಹೊರಗಿಳಿಯುವಾಗ
ಹೊಸಿಲ ಬಳಿ
ಒಂದು ಪಾರಿವಾಳದ ಶವ.
ತಟ್ಟಿ ಆಟವಾಡುತ್ತಿತ್ತು ನಾಯಿ
ಕಚ್ಚಿ ಎಳೆದಾಡುತ್ತಿತ್ತು.

ಹಿಂತಿರುಗಿದಾಗ
ನಾಯಿ ಇರಲಿಲ್ಲ
ಪಾರಿವಾಳವೂ.

ಕೆಲವು ಗರಿಗಳು
ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು.

ತುಳಿಯದೆ
ಮನೆಯೊಳಗೆ ಹೋಗಿ
ಬಾಗಿಲು ಮುಚ್ಚಿದೆ.

ಒಳಗಿರೋದೆಲ್ಲ
ಚೆಲ್ಲಾಪಿಲ್ಲಿ !


ಮಲಯಾಳಂ ಮೂಲ-
ಚಿತ್ರ ಕೆ.ಪಿ.

ಕನ್ನಡಕ್ಕೆ-
ಕಾಜೂರು ಸತೀಶ್

Friday, May 6, 2016

ಬಿ.ಪಿ.ಎಲ್.

ಬೆಟ್ಟದ ಹಚ್ಚ ಹಸಿರ ಹುಲ್ಲು ಹಾಸಲ್ಲೊಬ್ಬಳು ತಾಯಿ.
ಪಾಪ, ಒಂಟಿ ಜೀವ.

ಒಂದು ದಿನ
ಅವಳನ್ನು ನೋಡಲೆಂದು
ನದಿ ದಾಟಿ ಹೊರಟೆ.

ಅವಳು
ಕಾಮಾಲೆಯಂಥ ಬಿರುಬಿಸಿಲ ಕೋಲು ಮುರಿದು
ಉತ್ತರದ ಇಳಿಜಾರಿನ
ತೆಳ್ಳಗಿನ, ಬೆಳ್ಳಗಿನ
ಮೋಡಗಳೆಂಬೊ ಮೇಕೆಗಳನ್ನು ಓಡಿಸುತ್ತಿದ್ದಳು.

ನನ್ನ ನೋಡಿದ್ದೇ ತಡ
'ಬೆಟ್ಟ ಹತ್ತಿ ಬಂದ ನನ್ನ ಮುದ್ದು ಮಗುವೇ,
ತಲೆಬಿಸಿ ಕಡಿಮೆ ಮಾಡ್ಲಿಕ್ಕೆ ಏನಾದ್ರೂ ಮಾಡ್ಬೇಕಲ್ಲಾ'
ಎನ್ನುತ್ತಾ
ದಕ್ಷಿಣದ ಇಳಿಜಾರಿನಿಂದಿಳಿದು
ಕಪ್ಪು ಮೋಡಗಳ ಹಾಲು ಕರೆದು ಬಂದಳು.

ಮೋಡದ ಹಾಲಲ್ಲಿ
ಮಸ್ತಕಾಭಿಷೇಕ ನಡೆಸಿದೆ.
ಇಲ್ಲದ ರೇಷನ್ ಕಾರ್ಡಿನಲ್ಲಿ
ಕಣ್ಣೀರು ಸುರಿಸುತ್ತಾ ಅವಳೆಂದಳು:
'ಫಲವತ್ತಾದ ಭೂಮಿಯಲ್ಲಿದ್ದೇನೆ ನಾನು
ನಿನಗೇನಾದ್ರೂ ಮಾಡ್ಲಿಕ್ಕೆ ಸಾಧ್ಯಾನಾ?'
*

ಮಲಯಾಳಂ ಮೂಲ- ಪ್ರಕಾಶನ್ ಮಡಿಕೈ

ಕನ್ನಡಕ್ಕೆ- ಕಾಜೂರು ಸತೀಶ್

Thursday, May 5, 2016

ಜೊಂಪು

ಬೀದಿಯಲ್ಲೊಂದು
ಮಗು ಮಲಗಿದೆ
ಜೊತೆಗೊಂದು
ನಾಯಿಮರಿಯೂ.

ಎಂಥಾ ಚಳಿ!
ಒಬ್ಬರನ್ನೊಬ್ಬರು ಅಪ್ಪಿಕೊಂಡು
ಮುದುರಿ ಮಲಗಿದ್ದಾರೆ.

ಎಷ್ಟು ಹಸಿವು!
ಇಬ್ಬರ ಹೊಟ್ಟೆಯೂ
ಬೆನ್ನಿಗಂಟಿದೆ.

ಅವರಿಬ್ಬರೂ ಕಾಣುವ ಕನಸಿಗೆ
ಸಮೀಪದ ಮನೆಯಲ್ಲಿ
ಹುರಿಯುತ್ತಿರುವ ಮೀನಿನ ವಾಸನೆ
ಲಗ್ಗೆಯಿಟ್ಟಿದೆ.

ಇಬ್ಬರೂ ಅದನ್ನು
ಹೊಟ್ಟೆ ತುಂಬ ಉಂಡಿದ್ದಾರೆ
ಹೊದ್ದು ಮಲಗಿದ್ದಾರೆ.

ಅವರು ಕಾಣುವ ಕನಸಿನ ಹೊರಗೆ
ಕನಸೇ ಕಾಣದ ಒಂದು ಲೋಕವಿದೆ.

ಕನಸು ಕಾಣದ ಲೋಕದ ನೆತ್ತಿಯಲ್ಲಿ
ಯಾವುದೋ ಒಂದು ಮಗು,
ಯಾವುದೋ ಒಂದು ನಾಯಿಮರಿ
ಬಿಸಿಲಲ್ಲಿ ಬೇಯುತ್ತಾ ನಿದ್ರಿಸುತ್ತಿವೆ.
*

ಮಲಯಾಳಂ ಮೂಲ- ಡಾ. ಚಿತ್ರ ಕೆ.ಪಿ.

ಕನ್ನಡಕ್ಕೆ- ಕಾಜೂರು ಸತೀಶ್

Wednesday, May 4, 2016

ಒಣಗದ ಭಯದ ನೆರಳಿನಲ್ಲಿ..

ಮೈಮೇಲಿನ ಗೆರೆಗಳನ್ನು ಒಣಗಲು ಹಾಕಿ
ಸುತ್ತಾಡುವ ಹುಲಿಗಳನ್ನು
ಬೆಕ್ಕುಗಳೆಂದುಕೊಂಡು
ಮನೆಗೆ ಸೇರಿಸಿಕೊಳ್ಳುತ್ತೇವೆ.

ನಮ್ಮ ಮಕ್ಕಳನ್ನು
ಅವುಗಳ ಮರಿಗಳ ಹಾಗೇ ನಯವಾಗಿ ನೆಕ್ಕಿ
ಅಪ್ಪಿಕೊಳ್ಳುವಾಗ
ಪೂರ್ತಿ ನಂಬಿಬಿಡುತ್ತೇವೆ.

ಆದರೂ ಕೊಲೆಯಾಗುವ ಭಯ
ಇದ್ದೇ ಇರುತ್ತದೆ ಒಳಗೆ.

ಯಾರು, ಯಾವಾಗ, ಹೇಗೆ
ಎಂದೆಲ್ಲಾ ತಲೆಕೆಡಿಸಿಕೊಂಡು
'ಭಯ' ಎಂಬ ಸುರಕ್ಷಿತ ತಾಣದಲ್ಲಿ ಅಡಗಿಕೊಳ್ಳುವಾಗ
ಯಾರೂ ಕೊಲೆಗೈಯದಿದ್ದರೂ
ಎಷ್ಟೋ ಬಾರಿ ಸತ್ತುಬಿಟ್ಟಿರುತ್ತೇವೆ.

ನಮ್ಮ ಮಕ್ಕಳನ್ನು ಬಿಗಿದಪ್ಪಿ ಸುರಕ್ಷಿತರನ್ನಾಗಿಸಿ
ಗೆರೆಗಳ ಒಣಗಲು ಹಾಕಿ
ಅಂಡಲೆಯುವ ಹುಲಿಗಳಿಂದ
ರಕ್ಷಣೆ ನೀಡಲು ಶ್ರಮಿಸುತ್ತಾ
ಒಣಗದ ಭಯದ ನೆರಳಿನಲ್ಲಿ
ಒಣಗಿಯೇ ಹೋಗುತ್ತೇವೆ..
ಒಣಗಿಯೇ ಹೋಗುತ್ತೇವೆ..
*

ಮಲಯಾಳಂ ಮೂಲ- ಡೋನಾ ಮಯೂರ

ಕನ್ನಡಕ್ಕೆ- ಕಾಜೂರು ಸತೀಶ್

ಯಾರೋ ನನ್ನ ಕಿತ್ತೆಸೆದಂತೆನಿಸುತಿದೆ

ಹಸಿವು ನರ-ನಾಡಿಗಳಲ್ಲಿ ತಳತಳ ಬೇಯುತಿದೆ

ಹೃದಯದ ನಾಳಗಳಲಿ ಕಡಲು ಭೋರ್ಗರೆದು ತುಂಬುತಿದೆ
ದಯೆಯಿರದ ಧಗಧಗ ಕಾಳ್ಗಿಚ್ಚು ಮನೆಯೊಳಗೆ ನುಗ್ಗುತಿದೆ

ಬೆಳು ಬೆಳದಿಂಗಳಲಿ ಮಡಿಸದ ಯಂತ್ರದ ಕೈ
ನೆರಳ ಹಾದಿಯಲೇ ಹಿಂತಿರುಗಲು ಅಣಿಯಾಗುತಿದೆ

ಹುಳುವೊಂದರ ಜೊತೆ ಜೊತೆಗೆ ನಡೆಯತೊಡಗಿದರೆ
ಉಸಿರಿನ, ಸೂರ್ಯನ ನಡುವಿನ ಪಾದದ ಗುರುತು ಮಾಸಿಹೋಗುತಿದೆ

ಕಾಡುಗಳು ಪ್ರಳಯಗಳ ನುಂಗಲು ಹವಣಿಸುತಿದೆ
ಸರೋವರಗಳು ಬಾಗಿಲುಗಳ ಮುಳುಗಿಸಿ ಕೊಲ್ಲುತಿದೆ

ಕತ್ತಲ ಮೌನವು ಪ್ರೀತಿಯೊಡನೆ ಸರಸವಾಡುತಿದೆ
ಹುಲ್ಲಿನ ನಾಲಗೆಯಲಿ ಮಳೆಯು ಗುನುಗುನಿಸುತಿದೆ

ಆದಿ ಅನಾದಿ ಭೂತಾಯಿಯ ಒಡಲಿಂದ
ಯಾರೋ ನನ್ನ ಕಿತ್ತೆಸೆದಂತೆನಿಸುತಿದೆ.
*

ಮಲಯಾಳಂ ಮೂಲ- ಪಾಲಿ ವರ್ಗೀಸ್

ಕನ್ನಡಕ್ಕೆ- ಕಾಜೂರು ಸತೀಶ್

Tuesday, May 3, 2016

ಬಿಸಿಲ ತಿನ್ನುವ ಪಕ್ಷಿ

ಇಂಕು ಮುಗಿದ ದಿನವೇ
ನಾನು ಪೆನ್ನು ಹಿಡಿಯಲಾರಂಭಿಸಿದ್ದು.

ಮಾತು ಸತ್ತ ದಿನವೇ
ನಾನು ಬರೆಯಲು ತೊಡಗಿದ್ದು.

ಅದಕ್ಕಾಗಿಯೇ
ನಾನು
ಇವತ್ತಿನವರೆಗೂ
ಏನನ್ನೂ ಬರೆಯದೆ ಉಳಿದದ್ದು.
*

ಮಲಯಾಳಂ ಮೂಲ- ಎ. ಅಯ್ಯಪ್ಪನ್

ಕನ್ನಡಕ್ಕೆ- ಕಾಜೂರು ಸತೀಶ್

Monday, May 2, 2016

ಇವತ್ತಿನ ಕಾರ್ಯಕ್ರಮಗಳು

ಬೆಳಿಗ್ಗೆ
ಗರ್ಭದಲ್ಲೇ ಕೊಲೆಗೀಡಾದ ಮಗುವಿನ
ಶವಸಂಸ್ಕಾರಕ್ಕೆ ತೆರಳಬೇಕು.
'ಗಾಂಧಿ ನಗರ'ದಿಂದ ಹೊರಟ ಬುದ್ಧನನ್ನು
ಮನೆಗೆ ಕರೆದುಕೊಂಡು ಹೋಗಬೇಕು.

ಮಧ್ಯಾಹ್ನ
ಆಸ್ಪತ್ರೆಯಲ್ಲಿ ಮಲಗಿರುವ
ದ್ರೌಪದಿಯ ಆರನೇ ಗಂಡನನ್ನು ಭೇಟಿಯಾಗಬೇಕು.
ಊಟಕ್ಕೂ ಮುಂಚೆ
ವೇಶ್ಯೆಯ ಕೈಹಿಡಿದವನಿಗೆ
ಕನಿಷ್ಟ ಆರು ಪೆಗ್ಗನ್ನಾದರೂ ಕುಡಿಸಬೇಕು.

ಸಂಜೆ
ಬೆಳಿಗ್ಗೆ ಪಾರ್ಟಿ ಡೊನೇಷನ್
ರಾತ್ರಿ ದೇವಸ್ಥಾನದ ಡೊನೇಷನ್ನಿಗೆಂದು ಬರುವ
'ಮುತ್ತಪ್ಪ'ನ ಗ್ರಹಚಾರ ಬಿಡಿಸಲು
ಒಬ್ಬನನ್ನು ನೇಮಿಸಬೇಕು.
ಮೂರು ವರ್ಷಗಳಾದರೂ
ಒಂದು ಕವಿತೆಯನ್ನೂ ಪ್ರಕಟಿಸದ
'ಪ್ರಜಾಧಾರೆ'ಯ ಸಂಪಾದಕರನ್ನು
'ಚೆಂಬೇರಿ'ಯ ಸಾರ್ವಜನಿಕ ಶೌಚಾಲಯದಲ್ಲಿ
ಕೂಡಿಹಾಕಬೇಕು.

ರಾತ್ರಿ
ನಿದ್ರಿಸುವುದಕ್ಕೂ ಮುಂಚೆ
ಮನೆಯವಳ ಕಿವಿಯಲ್ಲಿ
ಒಂದಿಷ್ಟು ಸುಳ್ಳುಗಳನ್ನು ಮಸಾಲೆ ಬೆರೆಸಿ ಇಡಬೇಕು.
ಕನಸಿನ ಅರಮನೆಗೆ ಪ್ರವೇಶಿಸುವ ಮುನ್ನ
'ಸುಮತಿ'ಗೆ ತೆಗೆದುಕೊಡಬೇಕಿದ್ದ
ಸೀರೆಯ ಹಣ ಜೇಬಲ್ಲಿದೆಯೆಂದು ಖಾತ್ರಿಪಡಿಸಿಕೊಳ್ಳಬೇಕು.
*

ಮಲಯಾಳಂ ಮೂಲ- ಪವಿತ್ರನ್ ತೀಕ್ಕುನಿ

ಕನ್ನಡಕ್ಕೆ- ಕಾಜೂರು ಸತೀಶ್

ಒಂಟಿ

ಪಾದವೂರಲು ನೆಲ ನೀಡಿದೆ
ಉಸಿರಾಡಲು ಪ್ರೀತಿ ನೀಡಿದೆ
ನಿದ್ರೆಯಲ್ಲಿ ಅಪ್ಪಿಕೊಳ್ಳಲು ಕನಸ ನೀಡಿದೆ
ಅದಕ್ಕೇ ಇರಬಹುದು
ಮೈಯ ಸಂಜೆಗಳಿಂದ ಬಿಸಿಲ ಹಕ್ಕಿಗಳು
ಶಿಶಿರಕ್ಕೆ ಗುಂಪು ಗುಂಪಾಗಿ ಹಾರುವುದು.

ನಿನ್ನ ನೆರಳಿನಷ್ಟೇ ದೂರ
ಈ ಯಮುನೆಯ ಸೀಳಿ ದಾಟಲು
ಈ ಆಕಾಶ ಸುಮ್ಮನೆ ರೆಕ್ಕೆ ಬಿಚ್ಚಿದರೆ ಸಾಕು
ವಸಂತಕ್ಕೆ ಬೆರಳು ಚಾಚಲು

ನಿನ್ನನ್ನು ಹಾಸಿ ಮಲಗಲು
ನಾನಿನ್ನು ಆಕಾಶವ ನೇಯುತ್ತೇನೆ
ನಿನ್ನ ಉಸಿರನ್ನೂದಿ ಉಬ್ಬಿಸಿದ
ಭೂಮಿಯ ಮೇಲೆ.
*

ಮಲಯಾಳಂ ಮೂಲ- ಹನಿ ಭಾಸ್ಕರನ್

ಕನ್ನಡಕ್ಕೆ- ಕಾಜೂರು ಸತೀಶ್

ಪಿಕಳಾರ ಹಕ್ಕಿ

ಗೂಡು ಕಟ್ಟಿದೆ ಪಿಕಳಾರ ಹಕ್ಕಿ
ಅಂಗಳದ ಹೂಗಿಡದಲ್ಲಿ

ಆಗಾಗ ಇಣುಕಿ ತೋರಿಸುತ್ತದೆ
ಕಪ್ಪು ತುಟಿ
ನುಣುಪು ಕೂದಲು
ಹೊಂಬಣ್ಣದ ತಾಳಿ

ಬಾಲದಲ್ಲೊಂದು ಕುಂಕುಮ ಬೊಟ್ಟು
ಹೆಂಗಸರ ಕಣ್ಣಿಗದು ಥೇಟ್ ಋತುಸ್ರಾವ
ಅಜ್ಜಿಯ ಬಾಯಲ್ಲದು ಋತುಸ್ರಾವದ ಪಕ್ಷಿ
'ಸ್ನಾನ ಸ್ನಾನ ಸ್ನಾನ' ಎಂದು ಹಾಡುತ್ತದಂತೆ

ಬೆಂಕಿ ಆರಿದ ಒಲೆಯಲ್ಲಿ
ಕೊಬ್ಬಿದ ಗಂಡು ಬೆಕ್ಕೊಂದು
ನಿದ್ದೆಯಿಂದೇಳುವ ಮೊದಲು
ಬೆಳಿಗ್ಗೆ ಬೇಗನೆ ಎದ್ದು
ಇಣುಕಿ ನೋಡುತ್ತೇನೆ ಗೂಡಿನೊಳಗೆ
ಅಲ್ಲೆರಡು ಮೃದುವಾದ
ತೆಳುಗೆಂಪು ಚುಕ್ಕಿಗಳುಳ್ಳ ಮೊಟ್ಟೆಗಳು

ಆಮೇಲೆ
ಅವು ಬಿರಿದು ಕಣ್ತೆರೆದು
ಅಂಟಿದ ಕೊಕ್ಕು ಬಿಡಿಸಿ
ಚಿಗುರಿಸಿಕೊಂಡವು ರೆಕ್ಕೆಗಳ.

ಈಗ ಅಲ್ಲೊಂದು ಖಾಲಿ ಗೂಡು ಮಾತ್ರ
ರೆಕ್ಕೆ ಬಲಿತು ಹಾರಿದ್ದೋ
ಕೊಬ್ಬಿದ ಗಂಡು ಬೆಕ್ಕು ತಿಂದಿದ್ದೋ ಗೊತ್ತಿಲ್ಲ

ಪಕ್ಕದ ಮನೆಯ ಅವಳಿ ಹುಡುಗಿಯರು
ಒಟ್ಟಿಗೆ ಋತುಮತಿಯಾದದ್ದು ಈಗ ಸುದ್ದಿ

ಚೀಲದಲ್ಲಿ ಹಾಕಿ ಕಟ್ಟಿ
ದೂರದ ಹೊಳೆ ದಾಟಿಸಬೇಕು ಬೆಕ್ಕನ್ನು!
*

ಮಲಯಾಳಂ ಮೂಲ- ಶಿವಕುಮಾರ ಅಂಬಲಪುಜ಼

ಕನ್ನಡಕ್ಕೆ- ಕಾಜೂರು ಸತೀಶ್