ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Wednesday, May 18, 2016

ಪರೀಕ್ಷೆಗಳು

ಮಳೆರಜೆಯ ಮೊದಲು
ನಂದಿಬಟ್ಟಲು, ನೆಲದಾವರೆ
ಸೇವಂತಿಗೆ, ಕನಕಾಂಬರಗಳು
ಅಂಗಳದಲ್ಲರಳಿ ನಗುವಾಗ
ಹೂಬಿಡಲೂ ಕೂಡ ಪುರುಸೊತ್ತಿಲ್ಲದ
ಬೆಳಗಿನ ಜಾವದಲ್ಲಿ
ಬಣ್ಣ ಬಣ್ಣದ ಹೂಗಳಿರುವ ಲಂಗತೊಟ್ಟು
ಆಟವಾಡಲು ಕರೆಯಿತೊಂದು
ಹೊಟ್ಟೆಕಿಚ್ಚುಳ್ಳ ಕಿರು ಪರೀಕ್ಷೆ.

ಬೇಕೋ ಬೇಡವೋ ಎಂದು ಬೇಗನೆ ಎದ್ದು
ಅಮ್ಮ ಕೊಟ್ಟ ಕರಿಕಾಫಿ ಕುಡಿದು
ತೂಕಡಿಸಿ ಪುಸ್ತಕದ ಮೇಲೆ ಬಿದ್ದು
ಮತ್ತೆ ತಲೆಕೊಡವಿ ಎದ್ದು
ಅಯ್ಯಪ್ಪನ ಶರಣಂ ಕೇಳುವಾಗ
ಚರ್ಚಿನಿಂದ ಕ್ರಿಸ್ಮಸ್ ಹಾಡು ಕೇಳಲು ದಿನಗಳಿರುವಾಗ
ಚಳಿಗೆ ಗಡಗಡ ನಡುಗುತ್ತಾ
ಬಂತೊಂದು ಅರ್ಧವಾರ್ಷಿಕ ಪರೀಕ್ಷೆ.

ಮಾವಿನಮಿಡಿ ಉದುರುವ,
ಬೇಸಿಗೆಯ ಮಳೆಗರಳಿದ ಮಲ್ಲಿಗೆಯಲ್ಲಿ
ವಸಂತವಿಡೀ ಪರಿಮಳವನ್ನು ಕಾಪಿಟ್ಟ ಮೊಗ್ಗುಗಳುದುರುವ,
ಬೆಳಿಗ್ಗೆ ಬೇಗ ಎದ್ದು ಕೋಗಿಲೆಗಳು ಹಾಡುವ
ಗ್ರೀಷ್ಮ ಋತುವಿನಲ್ಲಿ
ಬೆವರಿ ಓಡಿಬಂದು
ಅಪ್ಪಿಕೊಂಡಿತೊಂದು ವಾರ್ಷಿಕ ಪರೀಕ್ಷೆ.

ಮಳೆರಜೆ-ಚಳಿ-ಕೋಗಿಲೆ
ಮೂವರೂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಲಿಯಲು ಹೊರಟಾಗ
ಆಟವಾಡಲು, ಆಟವಾಡಿಸಲು ಯಾರೂ ಸಿಗದೆ
ಊರುಬಿಟ್ಟು ಓಡಿಹೋದವು ಪರೀಕ್ಷೆಗಳು.
ಬದಲಿಗೆ ಬಂತು Examಗಳು.
ಟೈ-ಕೋಟು-ಬೂಟು ಹಾಕಿ
ಕಣ್ಣು ಅಗಲಿಸಿ
ದುರುಗುಟ್ಟಿ ನೋಡಿ
ನಾಲಗೆ ಚಾಚಿ
ಮಕ್ಕಳ ಹೆದರಿಸತೊಡಗಿದವು.
*

ಮಲಯಾಳಂ ಮೂಲ- ಡಾ. ಸಂಧ್ಯ ಇ.

ಕನ್ನಡಕ್ಕೆ- ಕಾಜೂರು ಸತೀಶ್

1 comment: