ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Saturday, December 31, 2022

ಹಬ್ಬ



ಅಬ್ಬರಿಸುವ ಹಬ್ಬವನ್ನು ಪ್ರತೀ ವರ್ಷ ಆಚರಿಸಲಾಗುತ್ತಿತ್ತು. ಹೆಚ್ಚು ಅಬ್ಬರಿಸುವವರ ಧ್ವನಿಪೆಟ್ಟಿಗೆ ಒಡೆದು, ಧ್ವನಿ ಕೀರಲಾಗಿ, ಧ್ವನಿ ಕಳೆದುಕೊಂಡು ನರಳುವವರ ಸಂಖ್ಯೆ ಎಂದಿನಂತೆ ಇದ್ದೇ ಇರುತ್ತಿತ್ತು .

ರಾತ್ರಿ ಅಬ್ಬರಿಸುವಂತಿಲ್ಲ ಎಂದು ಆದೇಶ ಹೊರಡಿಸಿದರೂ ರಾತ್ರಿಯೇ ಹೆಚ್ಚು ಜನರು ಅಬ್ಬರಿಸುತ್ತಿದ್ದರು.

ಧ್ವನಿ ಕಳೆದುಕೊಳ್ಳುವವರಿಗೆ ತುರ್ತು ಚಿಕಿತ್ಸಾ ಕೇಂದ್ರಗಳನ್ನು ತೆರೆಯಲಾಗಿತ್ತು.

*

ಹಬ್ಬದ ಎರಡು ದಿನಗಳ ಮೊದಲು ಕವಿಗಳು, ಕಲಾವಿದರಿಗಾಗಿ ದಟ್ಟ ಕಾಡಿನಲ್ಲಿ ವಾಸದ ವ್ಯವಸ್ಥೆಯನ್ನು ಮಾಡಿದ್ದರು.

*
ಕಾಜೂರು ಸತೀಶ್

ತಾರ್ತೂಫ್

Molière ಬರೆದ Tartuffe (1664)ನಾಟಕದಲ್ಲಿ(satire) ಕಪಟಿಯಾದ tartuffeನನ್ನು ಯಜಮಾನನು ಮನೆಗೆ ಕರೆದು ಅಲ್ಲೇ ಉಳಿಸಿಕೊಂಡು ಆರಾಧಿಸುವ ಕತೆಯಿದೆ. ಕಡೆಗೆ ಅವನ ನಿಜರೂಪ ಬಯಲಾಗುವ ಹೊತ್ತಿನಲ್ಲಿ ಮನೆಯನ್ನೇ ಕಬಳಿಸುವ ಮಟ್ಟಕ್ಕೆ ಬೆಳೆದುಬಿಡುತ್ತಾನೆ Tartuffe. ಆ ಕಾಲದ ಧಾರ್ಮಿಕ ಮೌಢ್ಯವನ್ನೂ ಸಾಮಾಜಿಕ ತರತಮಗಳನ್ನೂ ವೈನೋದಿಕವಾಗಿ ಬರೆದ Molièreನು ಈ ಎಲ್ಲಾ ಸಂಗತಿಗಳನ್ನು ಸೊಗಸಾಗಿ ವಿಶ್ಲೇಷಿಸುವ ಕಾರ್ಯವನ್ನು ಮನೆಯ ಸೇವಕಿ Dorine ಬಳಿ ಮಾಡಿಸುತ್ತಾನೆ. ಎಲ್ಲಾ ಕಾಲದ political satire ಆಗಿಯೂ ಇದು ಓದಿಸಿಕೊಳ್ಳುತ್ತದೆ.

*

ಕಾಜೂರು ಸತೀಶ್

ಕಾಫ್ಕ

Kafkaನ The Metamorphosis, The Castle, The Trial- ಕೃತಿಗಳು fragmentary ಎನಿಸುತ್ತವೆ. 'ಇಡಿ'ಯನ್ನು ಹುಡುಕಲಾಗದ ಆದರೆ ಬಿಡಿಯಲ್ಲಿ ಬೆಚ್ಚಿಬೀಳಿಸುವ ಭಯಾನಕ ವಾಸ್ತವವನ್ನು ಕಟ್ಟಿಕೊಡುತ್ತಾನೆ Kafka. The castle ಹೆಚ್ಚು symbolic ಆಗಿ ಕಂಡರೆ, The trialನ ನ್ಯಾಯದ ಪರಿಕಲ್ಪನೆ ವಿಚಿತ್ರ ಸತ್ಯವಾಗಿ ಕಾಣುತ್ತದೆ. Camusನಿಗಿಂತ ತೀವ್ರವಾಗಿ Absurdity ಮತ್ತು Existentialismಗಳನ್ನು ಹೊರತರುತ್ತಾನೆ Kafka.

40ಕ್ಕೆ ತೀರಿಕೊಂಡ ಅವನ ಕೃತಿಗಳು ಅಪೂರ್ಣವಾಗಿಯೇ ಪ್ರಕಟಗೊಂಡವು. ನಾನು ಸತ್ತಮೇಲೆ ಇವುಗಳನ್ನು ಸುಟ್ಟಬಿಡಿ ಎಂದು ಬರೆದಿದ್ದ. ಆದರೆ,thanks, ಅವನ ಗೆಳೆಯ ಹಾಗೆ ಮಾಡಲಿಲ್ಲ!
*
ಕಾಜೂರು ಸತೀಶ್

ಮ್ಯಾಕ್ರೋ ಛಾಯಾಗ್ರಹಣ- ಆಳ ,ಅಗಲಗಳು


ಮಹಾಭಾರತದ ಒಂದು ಸನ್ನಿವೇಶ: ದ್ರೋಣಾಚಾರ್ಯರು ಅರ್ಜುನನಿಗೆ ಒಂದು ಹಕ್ಕಿ ಕುಳಿತ ಮರವನ್ನು ತೋರಿಸಿ 'ಏನು ಕಾಣಿಸುತ್ತಿದೆ' ಎಂದಾಗ ಅವನು 'ಹಕ್ಕಿಯ ಕಣ್ಣು ಕಾಣಿಸುತ್ತಿದೆ' ಎಂದನಂತೆ .

ಮ್ಯಾಕ್ರೋ ಫೋಟೋಗ್ರಫಿ ಅಥವಾ ಸ್ಥೂಲ ಛಾಯಾಗ್ರಹಣದ ಬಗೆಯೂ ಹೀಗೆ. ಪಕ್ಷಿಯನ್ನು ಕಂಡಾಗ ಅದರ ಕಣ್ಣು ಅಥವಾ ಇತರೆ ನಿರ್ದಿಷ್ಟ ಭಾಗಗಳ ಮೇಲೆ ಕೇಂದ್ರೀಕರಿಸುವ ಬಗೆಯದು. ಅಥವಾ ಇಡೀ ಹಕ್ಕಿಯ ಸಮೀಪದ ನೋಟವನ್ನು ಒದಗಿಸುವ ಛಾಯಾಗ್ರಹಣ. ಅದರ ಪಯಣ ಇಡಿಯಿಂದ ಬಿಡಿಯ ಕಡೆಗೆ.

ಸಣ್ಣ ವಸ್ತು ಅಥವಾ ಆಕೃತಿಗಳನ್ನು ಅವು ಇರುವ ಹಾಗೆ ಅಥವಾ ಇರುವುದಕ್ಕಿಂತ ಹೆಚ್ಚಿನ ಆಕಾರ ಮತ್ತು ಗಾತ್ರದಲ್ಲಿ ಕಾಣುವಂತೆ ಕ್ಲಿಕ್ಕಿಸುವುದೇ ಮ್ಯಾಕ್ರೋ ಛಾಯಾಗ್ರಹಣ . ನಮ್ಮ ಕಣ್ಣೆದುರೇ ಇರುವ ಹೂವು, ಎಲೆ, ಕೀಟ, ನೀರಹನಿ, ಆಹಾರವಸ್ತುಗಳು, ಪ್ರಾಣಿ-ಪಕ್ಷಿ, ಕಲ್ಲು ಕಡ್ಡಿಗಳಿಂದ ಮೊದಲ್ಗೊಂಡು ನಮ್ಮ ಬರಿಗಣ್ಣು ಸವಿಯದ ಸಮೀಪದ ನೋಟವನ್ನು ಮ್ಯಾಕ್ರೊ ಛಾಯಾಗ್ರಹಣವು ನಮಗೆ ನೀಡುತ್ತದೆ.

ನಮ್ಮ ಮನೆಯ ಗೋಡೆಯ ಮೇಲೆ ಲೊಚಗುಡುವ ಹಲ್ಲಿಯ ಕಣ್ಣು ,ಅದರ ಮೈಯ ರಚನೆ; ಕಾಲಿನ ಪಕ್ಕದಲ್ಲೇ ಮಲಗಿರುವ ಬೆಕ್ಕಿನ ಕಣ್ಣು ; ಪುಟ್ಟ ಮಗುವಿನ ಭಾವಚಿತ್ರ, ಅದರ ಕೂದಲು, ಕಣ್ಣು ,ಕಿವಿ, ಅಡುಗೆಮನೆಯ ತರಕಾರಿ, ಆಹಾರವಸ್ತುಗಳು ಇವೂ ಮ್ಯಾಕ್ರೋ ಛಾಯಾಗ್ರಹಣದ ವಸ್ತು.ಹಾಗೆಯೇ, ಮಾರುಕಟ್ಟೆಯ ಉತ್ಪನ್ನಗಳು ,ಪುಸ್ತಕದ ರಕ್ಷಾಪುಟ, ಎಲೆಕ್ಟ್ರಾನಿಕ್ ಉತ್ಪನ್ನಗಳು , ಆಭರಣಗಳು.. ಹೀಗೆ ಮನೆಯ ಒಳಗೇ ಆರಂಭಿಸಬಹುದಾದ ಮ್ಯಾಕ್ರೊ ಛಾಯಾಗ್ರಹಣವು ದಟ್ಟ ಅರಣ್ಯದ ವಿಶಿಷ್ಟ ಕೀಟ ಹಾಗೂ ಸಸ್ಯ ಪ್ರಭೇದಗಳವರೆಗೂ ಚಾಚಿಕೊಳ್ಳುತ್ತದೆ.

ಇನ್ನೂ ಸ್ಪಷ್ಟವಾಗಬೇಕಾದರೆ : ನಿಮ್ಮ ಮನೆಯ ಗೋಡೆಯ ಮೇಲೆ ಒಂದು ಹಲ್ಲಿಯೋ ಅಥವಾ ಜೇಡವೋ ಇದೆ ಎಂದಿಟ್ಟುಕೊಳ್ಳಿ. ನೀವು ನಿಮ್ಮ ಮೊಬೈಲಿನಲ್ಲಿ ಅದನ್ನು ಕ್ಲಿಕ್ಕಿಸುತ್ತೀರಿ. ಈಗ ಅದೊಂದು ಸಾಮಾನ್ಯ ಚಿತ್ರವಷ್ಟೇ. ಕೆಲವರು ಅದನ್ನು ನೋಡಿದರೆ ಭಯಪಡುವುದೂ ಉಂಟು. ಅದೇ ಜೀವಿಯ ಸುಂದರ ಕಣ್ಣು ಅಥವಾ ರೇಖಾಗಣಿತದ ಆಕೃತಿಯಂತಹ ಅದರ ದೇಹದ ವಿನ್ಯಾಸದ ಮೇಲೆ ಕೇಂದ್ರೀಕರಿಸಿದ ಚಿತ್ರ ಎಂಥವರನ್ನೂ ಸೆಳೆಯುತ್ತದೆ. ವಿಜ್ಞಾನದ ವಿದ್ಯಾರ್ಥಿಗೆ ಅದೊಂದು ಅಧ್ಯಯನದ ವಸ್ತು. ಕಲೋಪಾಸಕನಿಗೆ ಅದೊಂದು ಅದ್ಭುತ ಕಲೆ. ಹೀಗೆ, ಒಂದು ಅಲಕ್ಷಿತ ಸಂಗತಿಯನ್ನೂ ಚಿತ್ರವಾಗಿಸುವ ಈ ಬಗೆಯ ಛಾಯಾಗ್ರಹಣವೇ ಮ್ಯಾಕ್ರೋ ಛಾಯಾಗ್ರಹಣ
*
ಮ್ಯಾಕ್ರೋ ಛಾಯಾಗ್ರಹಣಕ್ಕೆ ಬೇಕಿರುವ ಮುಖ್ಯ ಸಾಧನಗಳು: 👉DSLR ಕ್ಯಾಮರಾ ಅಥವಾ Mirrorless ಕ್ಯಾಮರಾ ಅಥವಾ ಸ್ಮಾರ್ಟ್ ಫೋನ್
👉ಮ್ಯಾಕ್ರೋ ಮಸೂರ ಅಥವಾ ಮ್ಯಾಕ್ರೋ ಲೆನ್ಸ್
👉ಫ್ಲ್ಯಾಷ್
👉ಬೆಳಕಿನ ಚದುರುವಿಕೆಗಾಗಿ ಡಿಫ್ಯೂಸರ್
👉 ಕ್ಯಾಮರಾವನ್ನು ನಿಲ್ಲಿಸುವ ಟ್ರೈಪಾಡ್
👉ಸಾಮಾನ್ಯ ಲೆನ್ಸುಗಳನ್ನು ಮ್ಯಾಕ್ರೋ ಆಗಿ ಪರಿವರ್ತಿಸಲು ಅಂದರೆ ಲೆನ್ಸನ್ನು  ತಿರುಗಿಸಿ  ಹಾಕಲು  ರಿವರ್ಸ್ ರಿಂಗ್
👉 ಸನಿಹದಿಂದ ಫೋಕಸ್ ಮಾಡಲು ಕ್ಲೋಸ್ ಅಪ್ ಫಿಲ್ಟರ್ ಅಥವಾ ಶೋಧಕ
  👉ಲೆನ್ಸನ್ನು ವಿಸ್ತರಿಸಲು ವಿಸ್ತರಣಾ ಕೊಳವೆ ಅಥವಾ Extension Tube
*
ಮ್ಯಾಕ್ರೋ ಛಾಯಾಗ್ರಹಣದ ಇತಿಹಾಸ

ಮ್ಯಾಕ್ರೋ ಛಾಯಾಗ್ರಹಣವು ಆರಂಭವಾದದ್ದು ಇಪ್ಪತ್ತನೆಯ ಶತಮಾನದ ಆದಿಯಲ್ಲಿ. ಫ್ರ್ಯಾಂಕ್ ಪರ್ಸಿ ಸ್ಮಿತ್ ಎಂಬ ಬ್ರಿಟನ್ನಿನ ಛಾಯಾಗ್ರಾಹಕ ಈಗ ನಾವು ಬಳಸುತ್ತಿರುವ ಮಾದರಿಯ ವಿಸ್ತರಣಾ ಕೊಳವೆ ಅಥವಾ extension tubeಗಳ ಸಹಾಯದಿಂದ ಕೀಟಗಳ ಚಿತ್ರಗಳನ್ನು  ಮೊದಲು ಸೆರೆಹಿಡಿದರು. ಶೈಕ್ಷಣಿಕ ಹಾಗೂ ಸಂಶೋಧನಾ ದೃಷ್ಟಿಯಿಂದ ಆಗಿನ ಮ್ಯಾಕ್ರೋ ಛಾಯಾಗ್ರಹಣವು ನಡೆಯುತ್ತಿತ್ತು. ಈಗಿನ ಹಾಗೆ ಚಿತ್ರವನ್ನು ಸೆರೆಹಿಡಿಯುವಾಗ ವಸ್ತುವಿನ ವಿನ್ಯಾಸವನ್ನು  ಕ್ಯಾಮರಾದ Viewfinderನಲ್ಲಿ ನೋಡಿ ಅನುಭವಿಸುವ ಮತ್ತು  ಚಿತ್ರಕ್ಕೆ ಚೌಕಟ್ಟನ್ನು ರೂಪಿಸುವ ಅವಕಾಶ ಆಗ ಇರಲಿಲ್ಲ.  ಅಥವಾ, ಇಂದಿನ ಮೊಬೈಲ್ ಫೋನ್ ಮತ್ತು  mirrorless ಕ್ಯಾಮರಾಗಳ ಹಾಗೆ ನಾವು ಕ್ಲಿಕ್ಕಿಸಬೇಕಾದ ವಸ್ತುಗಳನ್ನು  ಪರದೆಯಲ್ಲಿ ನೋಡಿಕೊಂಡೇ ಚಿತ್ರಿಸುವ ಅವಕಾಶವೂ ಆಗ ಇರಲಿಲ್ಲ.  1950ರಲ್ಲಿ SLR ಅಥವಾ single lens reflexನ ಆವಿಷ್ಕಾರದ ಅನಂತರ ಮ್ಯಾಕ್ರೋ ಛಾಯಾಗ್ರಹಣಕ್ಕೆ ವಿಶೇಷ ಅವಕಾಶಗಳು ದೊರೆತವು. ಇಂದು ಛಾಯಾಗ್ರಹಣ  ಜಗತ್ತಿನ ಬಹುಮುಖ್ಯ ಸಂಗತಿಗಳಲ್ಲಿ ಮ್ಯಾಕ್ರೋ ಛಾಯಾಗ್ರಹಣವೂ ಒಂದು.
*
ಮ್ಯಾಕ್ರೋ ಲೆನ್ಸ್ ಅಥವಾ ಮ್ಯಾಕ್ರೋ ಮಸೂರವನ್ನು ಮೂರು ಬಗೆಯಲ್ಲಿ ವಿಂಗಡಿಸಬಹುದು:
  👉 60 ಮಿ.ಮೀ.ಗಿಂತ ಕಡಿಮೆ ನಾಭಿದೂರ ಅಥವಾ focal length ಹೊಂದಿರುವ ಕಿರು ಮ್ಯಾಕ್ರೋ ಮಸೂರ

👉 ಸುಮಾರು 90ರಿಂದ 105ಮಿ.ಮೀ. ನಡುವಿನ ನಾಭಿದೂರ ಹೊಂದಿರುವ ಮಧ್ಯಮ ಮ್ಯಾಕ್ರೋ  ಮಸೂರ

ಮತ್ತು
👉ಸುಮಾರು 150ರಿಂದದ 200 ಮಿ.ಮೀ. ನಾಭಿದೂರ ಹೊಂದಿರುವ ಉದ್ದನೆಯ ಮ್ಯಾಕ್ರೋ ಮಸೂರ.

ಕಿರು ಮ್ಯಾಕ್ರೋ ಮಸೂರದಲ್ಲಿ ವಸ್ತುವಿನ ಸಮೀಪಕ್ಕೆ ಹೋಗಿ ಚಿತ್ರವನ್ನು ತೆಗೆಯಬೇಕು. ಉದ್ದನೆಯ ಮ್ಯಾಕ್ರೋ ಮಸೂರದಲ್ಲಿ ಸ್ವಲ್ಪ ಅಂತರವನ್ನು ಕಾಯ್ದುಕೊಂಡು ಚಿತ್ರವನ್ನು ಸೆರೆಹಿಡಿಯಬಹುದು.  ಕೆಲವು ಸೂಕ್ಷ್ಮ ಸ್ವಭಾವದ ಅಂದರೆ ಕ್ಯಾಮರಾಗಳಿಗೆ ಸುಲಭವಾಗಿ ಸಿಗದ ಜೀವಿಗಳನ್ನು ಚಿತ್ರಿಸಲು ಹಾಗೂ ವಸ್ತುಗಳನ್ನು ಭಯಪಡಿಸದೆ ಚಿತ್ರೀಕರಿಸಲು ಇವು ಸಹಕಾರಿಯಾಗಿದೆ.

ಮ್ಯಾಕ್ರೋದಲ್ಲಿ ಚಿತ್ರದ ಸಂಯೋಜನೆ, ಹಿನ್ನೆಲೆ , ಬೆಳಕು,  ಬಹಳ ಮುಖ್ಯ. ನಿಸರ್ಗದ ಸಹಜ ಬಣ್ಣ, ಬೆಳಕು, ಹಿನ್ನೆಲೆ ಸಿಕ್ಕಿದರಂತೂ ಛಾಯಾಗ್ರಾಹಕರಿಗೆ ಹಬ್ಬ. ಚಿತ್ರವನ್ನು ಕ್ಲಿಕ್ಕಿಸಿದ ಅನಂತರದ processing ಅಥವಾ ಸಂಸ್ಕರಣೆಯು  ಬೇಕಿರುವ ತಿದ್ದುಪಡಿಗೆ ಸಹಕಾರಿ. ಅದಕ್ಕಾಗಿ ವಿವಿಧ softwareಗಳು ಇಂದು ಲಭ್ಯವಿವೆ.

ಚಿತ್ರಕ್ಕೊಂದು ಚೌಕಟ್ಟಿದೆಯೇ? ಅದು ಏನನ್ನೋ ಹೇಳುತ್ತಿದೆಯೇ? ಬೆಳಕು ಯಾವುದರ ಮೇಲೆ ಬಿದ್ದಿದೆ? ಕೇಂದ್ರೀಕರಿಸಿದ ಚಿತ್ರ ಮತ್ತು ಹಿನ್ನೆಲೆ ಒಂದೇ ಬಣ್ಣದಲ್ಲಿದೆಯೇ ಅಥವಾ ಪ್ರಧಾನ ಭಾಗವೇ ಮಸುಕಾಗಿದೆಯೇ? ನೆರಳು ಬೆಳಕಿನ ಸಂಯೋಜನೆ ಇದೆಯೇ? 3D ಅಥವಾ ಮೂರು ಆಯಾಮಗಳಿವೆಯೇ? ಈ ಎಲ್ಲ ಪ್ರಶ್ನೆಗಳು ಮ್ಯಾಕ್ರೋ  'ಚಿತ್ರದ ಪರಿಣಾಮ'ದ ಮಹತ್ವವನ್ನು ತಿಳಿಸುತ್ತವೆ. ಇವೆಲ್ಲವುಗಳ ಜೊತೆಗೆ ಛಾಯಾಗ್ರಾಹಕರ ತಂತ್ರಗಾರಿಕೆಯ ಪಾಲೂ ಬೇಕಾಗುತ್ತದೆ.
*

ಸ್ಮಾರ್ಟ್ ಫೋನಿನಲ್ಲಿ ಮ್ಯಾಕ್ರೋ ಛಾಯಾಗ್ರಹಣ

ಕ್ಯಾಮೆರಾ ಹಾಗೂ ಕ್ಯಾಮರಾ ಸಂಬಂಧಿ ಉಪಕರಣಗಳನ್ನು  ಕೊಳ್ಳಲು ಸಾಮರ್ಥ್ಯವಿರುವವರು ಮಾತ್ರವೇ ಮಾಡುತ್ತಿದ್ದ ಛಾಯಾಗ್ರಹಣವು ಸ್ಮಾರ್ಟ್ ಫೋನುಗಳು ಬಂದಾಗಿನಿಂದ ಹಲವು ಮಂದಿಯ ಆಸಕ್ತಿಯ ಕ್ಷೇತ್ರವಾಗಿದೆ. ಇದು ಮತ್ತೆ ಒಂದು ಹೆಜ್ಜೆ ಮುಂದೆ ಸಾಗಿ,  ಮ್ಯಾಕ್ರೋ ಲೆನ್ಸುಗಳನ್ನು ಕೊಂಡುಕೊಂಡು ಮ್ಯಾಕ್ರೋ ಛಾಯಾಗ್ರಹಣವನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ. ಕೆಲವು ಸ್ಮಾರ್ಟ್ ಫೋನುಗಳಿಗೆ ಹೊಂದಿಕೊಳ್ಳುವ ಈ ಕ್ಲಿಪ್ ಲೆನ್ಸುಗಳು ಇಂದು ಮಾರುಕಟ್ಟೆಯಲ್ಲಿ ಕಡಿಮೆ ದರದಲ್ಲಿ ಲಭ್ಯವಾಗುತ್ತಿವೆ . ಹಾಗೆಯೇ, ಬೆಳಕಿಗಾಗಿ ಅಗತ್ಯವಿರುವ ಡಿಫ್ಯೂಸರುಗಳೂ ಲಭ್ಯವಿವೆ. ತೆಗೆದ ಚಿತ್ರವನ್ನು playstoreನಲ್ಲಿ ಲಭ್ಯವಿರುವ ಕೆಲವು appಗಳಲ್ಲಿ ಸಂಸ್ಕರಣೆ ಅಥವಾ ಪ್ರೊಸೆಸಿಂಗ್ ಮಾಡಿ ಬೆಳಕು-ಬಣ್ಣಗಳ ತಿದ್ದುಪಡಿಗಳನ್ನೂ ಮಾಡಿಕೊಳ್ಳಬಹುದು.

ಸ್ಮಾರ್ಟ್ ಫೋನುಗಳಲ್ಲಿ ಬಳಸುವ ಲೆನ್ಸುಗಳು ಒಂದು ಸಾವಿರ ರೂಪಾಯಿಗೂ ಲಭ್ಯವಿದೆ. ಹಾಗೆಯೇ, dslrಗೆ ಅಗತ್ಯವಾದ  ಲಕ್ಷಾಂತರ ಮೌಲ್ಯದ ಮ್ಯಾಕ್ರೋ ಲೆನ್ಸುಗಳೂ ಮಾರುಕಟ್ಟೆಯಲ್ಲಿ ಲಭ್ಯವಿವೆ.

ಛಾಯಾಗ್ರಹಣದಲ್ಲಿ ಒಲವಿರುವ ಆದರೆ dslr ಕ್ಯಾಮರಾವನ್ನು ಕೊಳ್ಳಲು ಸಾಧ್ಯವಾಗದ ಗೃಹಿಣಿಯರಿಗೆ
ಮ್ಯಾಕ್ರೋ ಛಾಯಾಗ್ರಹಣ ಉತ್ತಮ ವೇದಿಕೆ. 'ಇಷ್ಟು ಕಾಲ ಇವೆಲ್ಲಾ ಎಲ್ಲಿದ್ದವು' ಎಂದು  ಹುಬ್ಬೇರಿಸುವಂತೆ ಮಾಡುವ ಬಗೆಬಗೆಯ ಕೀಟಗಳ  ದರ್ಶನವಾಗುತ್ತದೆ. ಮನೆಯ ಹೂದೋಟದಲ್ಲಿ ಹೂವಿನೊಂದಿಗೆ ಹೂವಿನ ಹಾಗೇ ಕಾಣುವ ಚಿಟ್ಟೆಗಳು, ಬಳುಕುತ್ತಾ ಸಾಗುವ ಬಗೆಬಗೆಯ  ಹುಳುಹುಪ್ಪಟೆಗಳು, ಧ್ಯಾನಸ್ಥ ಸ್ಥಿತಿಯಲ್ಲಿರುವ ಜೇಡದ ಬೆರಗಿನ ಬಣ್ಣ- ಅದರ ಮೈಮೇಲಿನ ಕೂದಲು, ಕೀಟಗಳ ಮಿಲನ, ಚಲನೆ ... ಹೀಗೆ ಛಾಯಾಗ್ರಹಣ ನೀಡುವ ದಿವ್ಯ ಸುಖವನ್ನು ಅವರೂ ಅನುಭವಿಸಬಹುದು. ಕ್ರಮೇಣ, ಕ್ರಿಮಿ-ಕೀಟಗಳ ಮೇಲಿನ ಭಯ ಹೊರಟುಹೋಗಿ ಅವುಗಳ ಬೆನ್ನುಹತ್ತುವಂತೆ ಮಾಡುತ್ತವೆ.

ಸ್ಮಾರ್ಟ್ ಫೋನುಗಳಲ್ಲಿ ಸ್ಥೂಲ ಛಾಯಾಗ್ರಹಣ ಮಾಡುವಾಗ ವಸ್ತುವಿನ ತೀರಾ ಸನಿಹಕ್ಕೆ ನಾವು ತೆರಳಬೇಕಾಗುತ್ತದೆ. ಕಡಿಮೆ ನಾಭಿದೂರದ dslr ಮ್ಯಾಕ್ರೋ ಲೆನ್ಸುಗಳನ್ನು ಬಳಸುವಾಗಲೂ ಹೀಗೆಯೇ ಆಗುತ್ತದೆ. ಅದು ಎಷ್ಟರಮಟ್ಟಿಗೆ ಎಂದರೆ ಕೆಲವೊಮ್ಮೆ ಈ ಲೆನ್ಸುಗಳು ವಸ್ತುವನ್ನು ಸ್ಪರ್ಶಿಸಿಯೇಬಿಡುತ್ತವೆ. ಈ ಎಚ್ಚರ ಛಾಯಾಗ್ರಾಹಕರಿಗೆ ಇರಬೇಕಾಗುತ್ತದೆ.
*
ಛಾಯಾಗ್ರಹಣವು ಒಂದು ಧ್ಯಾನಸ್ಥ ಪ್ರಕ್ರಿಯೆ. ಕೆಲವೊಮ್ಮೆ ಒಂದು ಚಿತ್ರಕ್ಕಾಗಿ ದಿನವಿಡೀ ಕಾದು ಕೂರಬೇಕು. ಅವುಗಳು ಕಣ್ಣಿಗೆ ಕಂಡರೂ ಚಿತ್ರವನ್ನು ತೆಗೆಯುವ ಸಂದರ್ಭದಲ್ಲಿ ಅವು ಸ್ಥಾನ ಬದಲಿಸಿ ನಮ್ಮ ಕಣ್ಣುತಪ್ಪಿಸಿರುತ್ತವೆ. ನಿಸರ್ಗದ ಬಣ್ಣದೊಂದಿಗೆ ರಾಜಿಮಾಡಿಕೊಳ್ಳುವ ಇವು ನಮ್ಮ ಕಣ್ಣಿಗೆ ಬೀಳಬೇಕೆಂದರೆ ನಮಗೆ ತಾಳ್ಮೆ ಬೇಕಾಗುತ್ತದೆ ; ಅನುಭವ ಬೇಕಾಗುತ್ತದೆ.
*
ಸಾಮಾನ್ಯವಾಗಿ ವಸ್ತು/ಕೀಟಗಳನ್ನು ಸ್ಥಳಾಂತರಗೊಳಿಸಿ, ನಮಗೆ ಬೇಕಾದ ಸ್ಥಳದಲ್ಲಿ ಕೂರಿಸಿ ಮ್ಯಾಕ್ರೋ ಛಾಯಾಗ್ರಹಣವನ್ನು ಮಾಡುವುದಿದೆ. ಆದರೆ, ಅವುಗಳನ್ನು ಒಕ್ಕಲೆಬ್ಬಿಸಿ  ಅವುಗಳ ಸ್ವಾತಂತ್ರ್ಯಕ್ಕೆ ಧಕ್ಕೆ ತರುವುದು ಸರಿಯಲ್ಲ. ಅವುಗಳ ಸಹಜ ಇರುವಿಕೆಯನ್ನೇ ಚಿತ್ರವಾಗಿಸುವ ಖುಷಿ ಹಾಗೂ ಸಾರ್ಥಕತೆಯೇ ಬೇರೆ.
*
ಕಾಂಕ್ರೀಟು ಕಾಡುಗಳು ಮಣ್ಣಿನಲ್ಲಿ ಬದುಕುವ ಅಸಂಖ್ಯ ಜೀವಿಸಮೂಹವನ್ನು ನಾಶಪಡಿಸುತ್ತವೆ. ಮನುಷ್ಯನ ಕುತೂಹಲಗಳಿಗೆ ಜೀವ ಬರುವುದೇ ನಿಸರ್ಗದ ಸಣ್ಣಸಣ್ಣ ಸಂಗತಿಗಳ ಹುಡುಕಾಟದಿಂದ. ಈ ಹುಡುಕಾಟವು ನಿಸರ್ಗದ ಮೇಲೆ ಪ್ರೀತಿಯನ್ನೂ, ಮನಸ್ಸಿಗೆ ಸಂತೋಷವನ್ನೂ ಹುಟ್ಟಿಸುತ್ತದೆ. ಬರಿಗಣ್ಣು ಗ್ರಹಿಸದ ಸಂಗತಿಗಳನ್ನು ಕಲಾತ್ಮಕವಾಗಿ ಚಿತ್ರಿಸುವ ಕ್ರಮವು ನಮ್ಮ ನೋಡುವ ಕ್ರಮವನ್ನೇ ಬದಲಿಸುತ್ತದೆ ಹಾಗೂ ಸೃಜನಶೀಲತೆಯನ್ನು ಹೆಚ್ಚಿಸುತ್ತದೆ.

ಪ್ರಕೃತಿಯನ್ನು ಪ್ರೀತಿಸುವ, ಅರ್ಥಮಾಡಿಕೊಳ್ಳುವ ಮಾರ್ಗಗಳಲ್ಲಿ ಮ್ಯಾಕ್ರೋ ಫೋಟೋಗ್ರಫಿಯೂ ಒಂದು. ಬದಲಾದ ಕಾಲಕ್ಕನುಗುಣವಾಗಿ ನವನವೀನ ಕ್ಯಾಮರಾಗಳ ಆವಿಷ್ಕಾರಗಳಾಗಿವೆ. ಹೆಚ್ಚಿನ ಮಂದಿ ಛಾಯಾಗ್ರಹಣದ ಕಡೆಗೆ ಆಸಕ್ತಿ ಬೆಳೆಸಿಕೊಂಡಿದ್ದಾರೆ. ಕೇವಲ ಪರಿಸರ ಅಧ್ಯಯನಕಾರರಷ್ಟೇ ತೊಡಗಿಸಿಕೊಳ್ಳುತ್ತಿದ್ದ ಈ ಕ್ಷೇತ್ರಕ್ಕೆ ಬೇರೆಬೇರೆ ವಲಯಗಳ ಜನರು ಪ್ರವೇಶಿಸುತ್ತಿದ್ದಾರೆ. ಜನಸಾಮಾನ್ಯರ ಪ್ರವೇಶವೇ ಅದರ ಹೆಚ್ಚುಗಾರಿಕೆ. ಅವರ ಅಧ್ಯಯನಕ್ಕಾಗಿ ಅಂತರ್ಜಾಲದ ನೆರವಿದೆ. ಸ್ವಂತ ಆಸಕ್ತಿಯ ಬೆಂಬಲವಿದೆ.

ಇಡೀ ಪ್ರಕೃತಿ ರೂಪುಗೊಂಡಿರುವುದು ಮತ್ತು ಅದು ಪೂರ್ಣಗೊಳ್ಳುವುದು ನಾವು ಅಲಕ್ಷಿಸುವ ಹುಳುಹುಪ್ಪಟೆಗಳಿಂದ ಎಂಬ ಅರಿವನ್ನು ನಮಗೆ ಮ್ಯಾಕ್ರೋ ಛಾಯಾಗ್ರಹಣವು ನೀಡುತ್ತದೆ. ಅಂತಹ ಅರಿವು ನಮಗೆ ಬಂದಲ್ಲಿ ನಾವು ಪ್ರಕೃತಿಯನ್ನು  ಪ್ರೀತಿಸಲು ತೊಡಗುತ್ತೇವೆ,  ಕಾಳಜಿ ತೋರುತ್ತೇವೆ.
ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಅವರ ಸಾಲುಗಳಂತೆ,

ಪ್ರೀತಿ ಇಲ್ಲದ ಮೇಲೆ -
ಹೂವು ಅರಳೀತು ಹೇಗೆ ?
ಮೋಡ ಕಟ್ಟೀತು ಹೇಗೆ ?
ಹನಿಯೊಡೆದು ಕೆಳಗಿಳಿದು
ನೆಲಕ್ಕೆ ಹಸಿರು ಮೂಡೀತು ಹೇಗೆ?
*



ಕಾಜೂರು ಸತೀಶ್ 

ಬರೆದಂತೆ ಬದುಕಿದ ಟಾಲ್ಸ್ಟಾಯ್

ಲಿಯೋ ಟಾಲ್ಸ್ಟಾಯ್ ಬದುಕು ಮತ್ತು ಸಾಹಿತ್ಯ
ಬರೆದಂತೆ ಬದುಕಿದ ಲಿಯೋ ಟಾಲ್ಸ್ಟಾಯ್

ಜಗತ್ತಿನ ಹೆಸರಾಂತ ಲೇಖಕರ ಸಾಲಿನಲ್ಲಿ ಎದ್ದುಕಾಣುವ ಪ್ರತಿಭೆ ಕೌಂಟ್ ಲಿಯೋ ಟಾಲ್ಸ್ಟಾಯ್.
ಟಾಲ್ಸ್ಟಾಯ್ ಹುಟ್ಟಿದ್ದು ರಷ್ಯಾದ ಯಸ್ನಾಯ ಪೊಲ್ಯಾನ ಎಂಬ ಹಳ್ಳಿಯಲ್ಲಿ, 28 ಆಗಸ್ಟ್ 1828ರಂದು. ರಷ್ಯಾದ ಅಗರ್ಭ ಶ್ರೀಮಂತರ ಪಟ್ಟಿಯಲ್ಲಿ ಇವರ ಕುಟುಂಬವೂ ಒಂದು.

ಒಂಬತ್ತು ವರ್ಷಕ್ಕೇ ತಂದೆ-ತಾಯಿಯನ್ನು ಕಳೆದುಕೊಂಡ ಟಾಲ್ಸ್ಟಾಯ್ ಶಿಕ್ಷಣದಲ್ಲಿ ಅಷ್ಟೇನೂ ಆಸಕ್ತಿ ತೋರದಿದ್ದರೂ ಸ್ವತಂತ್ರವಾದ ಬೌದ್ಧಿಕತೆಯನ್ನು ರೂಪಿಸಿಕೊಂಡರು.

ಲಿಯೋ ಟಾಲ್ಸ್ಟಾಯ್ ಎಂದಾಗ ಜಗತ್ತಿಗೆ ನೆನಪಾಗುವುದು ಮಹಾಕಾವ್ಯದಂತಹ ಅವರ ಅನಾ ಕರೆನಿನಾ ಮತ್ತು ವಾರ್ ಅಂಡ್ ಪೀಸ್ ಕಾದಂಬರಿಗಳು. ಜಗತ್ತಿನ ಹಲವು ದೇಶ-ಭಾಷೆಗಳಿಗೆ ಅನುವಾದಗೊಂಡ ಹಿರಿಮೆ ಈ ಕೃತಿಗಳದು. ಅನಾ ಕರೆನಿನಾ ಉನ್ನತ ಪ್ರೇಮದ ದುರಂತ ಕತೆಯಾದರೆ, ವಾರ್ ಅಂಡ್ ಪೀಸ್ ಅಥವಾ ಯುದ್ಧ ಮತ್ತು ಶಾಂತಿ ಕಾದಂಬರಿಯು ದ್ವೇಷದಿಂದ ಪ್ರೀತಿಯ ಹಾಗೂ ಮನುಷ್ಯತ್ವದ ಕಡೆಗೆ ಸಾಗುವ ಕಥಾನಕ.

ತನ್ನ ಬದುಕಿನ ಪೂರ್ವಾರ್ಧದಲ್ಲಿ ಹಣ, ಹೆಣ್ಣು, ಜೂಜು, ಸುತ್ತಾಟ, ಯುದ್ಧ, ಇವುಗಳ ಜೊತೆಜೊತೆಗೆ ಸಾಹಿತ್ಯದಲ್ಲಿ ಕಳೆದುಹೋದ ಟಾಲ್ಸ್ಟಾಯ್ ಆ ಹೊತ್ತಿಗಾಗಲೇ ಹೆಸರುವಾಸಿಯಾಗಿದ್ದರು.
ವಿಲಾಸಿ ಜೀವನದಲ್ಲಿ ಮುಳುಗಿಹೋಗಿ ಜೂಜಿನಲ್ಲಿ ಹಣಕಳೆದುಕೊಂಡ ಮೇಲೆ ಸೈನ್ಯಕ್ಕೆ ಸೇರಿದರು. ಆದಿಕವಿ ಪಂಪನ ಯುದ್ಧ ವರ್ಣನೆಗೆ ಅವರ ಕಲಿತನದ ಅನುಭವ ನೆರವಾದಂತೆ, ಯುದ್ಧದ ಸೂಕ್ಷ್ಮ ಅನುಭವಗಳು ಟಾಲ್ಸ್ಟಾಯ್ ಅವರ ಕತೆ ಕಾದಂಬರಿಗಳಲ್ಲಿ ಹೇರಳವಾಗಿ ಸಿಗುತ್ತವೆ.

ಟಾಲ್ಸ್ಟಾಯ್ ಅವರ ಮೊದಲ ಕೃತಿ ರಷ್ಯನ್ ಜಮೀನ್ದಾರ (A Russian Land Lord) ಕಾದಂಬರಿಯ ನಾಯಕ ರಾಜಕುಮಾರ ನೆಕ್ಲುದೋವ್ ಶಿಕ್ಷಣವನ್ನು ಬಿಟ್ಟು, ರೈತರ ಉದ್ಧಾರಕ್ಕಾಗಿ ಹಳ್ಳಿಗೆ ಬರುತ್ತಾನೆ. ಆದರೆ ಶೋಷಣೆಯ ವಾತಾವರಣದಲ್ಲಿ ಬೆಳೆದ ಆ ರೈತರಿಗೆ ಮಾನವೀಯತೆಯ ಪರಿಚಯವಿರವೇ ಇರುವುದಿಲ್ಲ. ಹೀಗಾಗಿ ನೆಕ್ಲುದೇವನ ನಡವಳಿಕೆಯನ್ನೇ ಅವರು ಅನುಮಾನಿಸುತ್ತಾರೆ. ಹೀಗೆ ಟಾಲ್ಸ್ಟಾಯ್ನ ಆರಂಭಿಕ ಒಳತುಡಿತಗಳು ಮೊದಲ ಕೃತಿಯಲ್ಲಿಯೇ ವ್ಯಕ್ತವಾಗಿದೆ. ಇದೇ 'ನೆಕ್ಲುದೋವ್ ' ಕೊನೆಯ ಕಾದಂಬರಿ ಪುನರುತ್ಥಾನ( The Resurrection)ದಲ್ಲಿ ತಂದೆಯಿಂದ ಬಂದ ಸಾವಿರಾರು ಎಕರೆ ಭೂಮಿಯನ್ನು ರೈತರಿಗೆ ಹಂಚಿರುವವನು, ತಾಯಿಯ ಆಸ್ತಿಯನ್ನೂ ರೈತರಿಗೆ ಹಂಚಲಿರುವವನು.


ಲೇಖಕನೊಬ್ಬ ತಾನು ಬರೆಯುವುದು ಮತ್ತು ಹಾಗೆ ಬದುಕುವುದು ಒಂದೇ ಇರಬೇಕೇ ಎಂಬ ಜಿಜ್ಞಾಸೆ ಎಲ್ಲ ಕಾಲಗಳಲ್ಲೂ ನಡೆದಿದೆ. ಈ ನೆಲೆಯಲ್ಲಿ ನೋಡಿದರೆ, ಟಾಲ್ಸ್ಟಾಯ್ ಅವರು ಕೇವಲ ಸಾಹಿತ್ಯಿಕ ಕಾರಣಗಳಿಗಾಗಿ ಮುಖ್ಯರಾಗುವುದಿಲ್ಲ. ಅನಾ ಕರೆನಿನಾ ರಚಿಸಿದ ಅನಂತರದ ಕಾಲಘಟ್ಟ, ಅಂದರೆ , 1880ರ ಅನಂತರ ಅವರ ಬದುಕು ಮತ್ತು ಚಿಂತನೆಯ ಕ್ರಮದಲ್ಲಿ ಗಮನಾರ್ಹ ಪಲ್ಲಟಗಳು ನಡೆದವು. ಅದುವರೆಗಿನ ತನ್ನ ಮಹಾನ್ ಕಾದಂಬರಿಗಳನ್ನೇ 'ಉಪಯೋಗಕ್ಕೆ ಬಾರದ್ದು; ಅವೆಲ್ಲಾ ಅರ್ಥಹೀನ ರಚನೆಗಳು, ಯಾರು ಬೇಕಾದರೂ ಅದನ್ನು ಬರೆಯಬಹುದು' ಎಂದರು. ತಾವು ಬದುಕಿದ ವಿಲಾಸದ ರೀತಿಗೆ ಮರುಗಿದರು. ಪಶ್ಚಾತ್ತಾಪಪಟ್ಟರು. ಯುದ್ಧದ ಸಾವು- ನೋವುಗಳು ಸಾಮ್ರಾಟ ಅಶೋಕನನ್ನು ಕಾಡಿದಂತೆ ಅವರನ್ನು ಕಾಡಿದವು. 1879ರಲ್ಲಿ ಬರೆದ A Confession ಅಥವಾ ತಪ್ಪೊಪ್ಪಿಗೆಯಲ್ಲಿ ಆತ್ಮವಿಮರ್ಶೆಯ ಸ್ಪಷ್ಟ ಧಾಟಿಗಳಿವೆ.

ತಮ್ಮ ಬಾಳ ಸಂಗಾತಿ ಸೋಫಿಯಾಳೊಂದಿಗೆ 50 ವರ್ಷಗಳ ದಾಂಪತ್ಯವನ್ನು ನಡೆಸಿದರು. ಪ್ರೇರಕ ಶಕ್ತಿಯಂತಿದ್ದ ಸೋಫಿಯಾ, ಹಸ್ತಪ್ರತಿ , ಕರಡು ತಿದ್ದುಪಡಿ ಕಾರ್ಯವನ್ನು ನಿರ್ವಹಿಸುತ್ತಿದ್ದರು. ಸಹನೆಯ ಮೂರ್ತಿಯಂತಿದ್ದ ಸೋಫಿಯಾ ಅವರಿಗೆ ಟಾಲ್‌ಸ್ಟಾಯ್ ಅವರ ಸಾಮಾಜಿಕ ಕಾಳಜಿ ಸಹಿಸಲಾರದ ಸಂಗತಿಯಾಯಿತು.

ಹೀಗಾಗಿ , ಎಲ್ಲ ಬಗೆಯ ಲೌಕಿಕ ಸಂಬಂಧಗಳನ್ನು ಕಡಿದುಕೊಂಡು ಬದುಕನ್ನು  ಅನುಭಾವದ ನೆಲೆಯಲ್ಲಿ ಬದುಕಿದರು ಟಾಲ್ಸ್ಟಾಯ್.

ಉತ್ತರಾರ್ಧಘಟ್ಟದ ಟಾಲ್ಸ್ಟಾಯ್ ಅವರ ಸೃಷ್ಟಿಗಳಲ್ಲಿ ಕಾಣಸಿಗುವುದು ನೀತಿಬೋಧಕ ಮಾರ್ಗಗಳು; ಆತ್ಮವಿಮರ್ಶೆಯ ದಾಖಲೆ. ಬದುಕಿನ ಅರ್ಥವಂತಿಕೆಯ ಬಗೆಗಿನ ಚಿಂತನ-ಮಂಥನ. ಅವರದೇ ಅನುಭವ ಕಥನಗಳಂತಿರುವ ಈ ಬರೆಹಗಳು ಜನಪದ ಲಯಕ್ಕೆ ಹತ್ತಿರವಾದವುಗಳು. ಮಕ್ಕಳಿಂದ ಆದಿಯಾಗಿ ಎಲ್ಲರಿಗೂ ಅರ್ಥವಾಗುವ ಸರಳ ನಿರೂಪಣೆ ಅವುಗಳ ಶಕ್ತಿ.

ಈ ನಡುವೆ ನಗರದಿಂದ ಹಳ್ಳಿಗೆ ಬಂದರು. ತನ್ನ ರೈತರ ಕುಟುಂಬಕ್ಕೆ ಶಿಕ್ಷಣ ನೀಡಲು ಶಾಲೆಯನ್ನು ತೆರೆದರು.ಪಠ್ಯಕ್ರಮವನ್ನು ರೂಪಿಸಿದರು. ರೈತರಂತೆ ಬಟ್ಟೆ ಧರಿಸಿದರು. ಚಪ್ಪಲಿಗಳನ್ನು ತಾವೇ ಹೊಲಿದು ಧರಿಸಿದರು.   ಶ್ರಮದ ತತ್ತ್ವವನ್ನು ಬಿತ್ತಿದರು. ತನ್ನ ರೈತರಿಗೆ ಭೂಮಿಯನ್ನು ಹಂಚಿದರು. ಜೀತದಾಳುಗಳನ್ನು ಬಿಡುಗಡೆಗೊಳಿಸಿದರು. ತನ್ನ ಕೃತಿಗಳ ಮೇಲಿನ ಗ್ರಂಥಸ್ವಾಮ್ಯವನ್ನೂ ಪ್ರಕಾಶಕರಿಗೆ ಕೊಡುವ ಪ್ರಯತ್ನ ಮಾಡಿದರು.

ಅವರ ಕಥೆಯೊಂದಿದೆ- 'ಮನುಷ್ಯರಿಗೆಷ್ಟು ಭೂಮಿ ಬೇಕು?'. ರೈತನೊಬ್ಬ ಅಗತ್ಯಕ್ಕಿಂತ ಹೆಚ್ಚು ಜಮೀನಿಗೆ ಆಸೆಪಟ್ಟು ಬಲಿಯಾಗುವ ಕತೆಯದು. ಮನುಷ್ಯನ ದುರಾಸೆಗೂ ಪ್ರಕೃತಿಯ ಸಂಪನ್ಮೂಲಗಳಿಗೂ ಇರುವ ಅಂತರವನ್ನು ಕಲಾತ್ಮಕವಾಗಿ ಹೇಳುತ್ತಾರೆ ಟಾಲ್ಸ್ಟಾಯ್. 'ಅವನ ತಲೆಯಿಂದ ಕಾಲಿನವರೆಗೆ ಬೇಕಾಗಿದ್ದು 6 ಅಡಿ ನೆಲ, ಅಷ್ಟೇ' ಎಂಬ ವಾಕ್ಯದೊಂದಿಗೆ ಕತೆ ಮುಕ್ತಾಯವಾಗುತ್ತದೆ. ಸುಖೀ ಜೀವನಕ್ಕೆ ಅಗತ್ಯವೇನು ಎನ್ನುವುದನ್ನು ತಿಳಿಸುವ ಈ ಕತೆಯನ್ನು  ಟಾಲ್ಸ್ಟಾಯ್ ಬರೆದ ಹೊತ್ತಲ್ಲಿ ಅವರು ತಮ್ಮ ಭೂಮಿಯನ್ನು ರೈತರಿಗೆ ಬಿಟ್ಟುಕೊಟ್ಟಿದ್ದರು!

ಮತ್ತೊಂದು ಕಥೆಯ  ಶೀರ್ಷಿಕೆ 'ಮನುಷ್ಯರು ಬದುಕುವುದು ಎಂದರೆ..'. ಚಮ್ಮಾರನಾದ ಸೈಮನ್ನನ ಬಳಿ ಆಜಾನುಬಾಹು ವ್ಯಕ್ತಿಯೊಬ್ಬ ಬಂದು ಬೂಟು ಹೊಲಿಯಲು ದುಬಾರಿ ಬೆಲೆಯ ಚರ್ಮವನ್ನು ನೀಡಿದ. ಸರಿಯಾಗಿ ಹೊಲಿಯದಿದ್ದರೆ ಸೆರೆಮನೆಗೆ ಹಾಕಿಸುವೆನೆಂದ.
ಸಹಾಯಕ ಮಿಖಾಯಲ್ ಬೂಟು ಹೊಲಿಯುವ ಬದಲು ಚಪ್ಪಲಿ ಹೊಲಿದಿದ್ದ. ಭಯ ಹಾಗೂ ಸಿಟ್ಟಿನಿಂದ ಮಿಖಾಯಲ್ನನ್ನು ಸೈಮನ್ನನು ಗದರುತ್ತಿರುವಾಗ  ಬಾಗಿಲು ತಟ್ಟಿದ ವ್ಯಕ್ತಿ ಆ ಆಜಾನುಬಾಹು ಯಜಮಾನ ತೀರಿಕೊಂಡಿದ್ದಾನೆಂದೂ, ಬೂಟಿನ ಬದಲಿಗೆ ಚಪ್ಪಲಿ ಮಾಡಿಕೊಡಬೇಕೆಂದೂ ಹೇಳಿದ.

ಮನುಷ್ಯನ ಅಹಮ್ಮಿಕೆ ಮತ್ತು ತಪ್ಪಿಸಿಕೊಳ್ಳಲಾಗಲಾರದ ಸಾವಿನ ಕುರಿತ ಅನನ್ಯ ನೋಟ ಈ ಕತೆಯಲ್ಲಿದೆ.

ಟಾಲ್ಸ್ಟಾಯ್ ಅವರ ಕೇಂದ್ರ ರಷ್ಯಾದ ಸಾಮಾನ್ಯ ಜನರು. ಬದುಕಿನ ಮೂಲಭೂತ ಸಂಗತಿಗಳ ಕುರಿತ ಶೋಧ ಮತ್ತು ಚಿಂತನೆ, ಮನುಷ್ಯನ ದೌರ್ಬಲ್ಯ ಮತ್ತು ಕೆಡುಕುಗಳು, ಅದರಿಂದ  ಕಲಿಯಬೇಕಾದ ಪಾಠಗಳು, ತುರ್ತುಪರಿಸ್ಥಿತಿಯಲ್ಲಿ ಅವನ ವರ್ತನೆಗಳು -ಇಂತಹ ಸಂಗತಿಗಳ ಮೇಲೆ ಅವರ ಗಮನಹರಿಯುತ್ತದೆ.

ವಿಜ್ಞಾನ ಮತ್ತು ಕಲೆ ಸಾಮಾನ್ಯರ ಸ್ವತ್ತು. ಅದು ಪಂಡಿತವರ್ಗದ ಪಾಲಾದರೆ ಅದು ಕಲೆಯೇ ಅಲ್ಲ, ವಿಜ್ಞಾನವೇ ಅಲ್ಲ ಎಂದ ಟಾಲ್ಸ್ಟಾಯ್ , ಸಹಜ ಮತ್ತು ಸಾಮಾನ್ಯ ಗುಣಗಳಿಂದಲೇ ಸಾಹಿತ್ಯವು ಜನಸಾಮಾನ್ಯರ ಹೃದಯಕ್ಕೆ ನಾಟಬೇಕೆಂದರು. ಅದನ್ನೇ ಪಾಲಿಸಿದರು.

ಕೀರ್ತಿ , ಸಿರಿವಂತಿಕೆ, ಪದವಿ, ಗೌರವ.. ಕಡೆಗೆ ಪ್ರಾಣ - ಇವೆಲ್ಲವನ್ನೂ ಜನಸಾಮಾನ್ಯರ ಸೇವೆಗೆ ಮುಡಿಪಾಗಿಡಲು ಮನಸ್ಸುಮಾಡಿದ ಟಾಲ್ಸ್ಟಾಯ್ ಮೌಢ್ಯದ ವಿರುದ್ಧ ಹೋರಾಡಿದರು. ದಬ್ಬಾಳಿಕೆಯನ್ನು ಪ್ರತಿಭಟಿಸಿದರು. ಪ್ರಭುತ್ವದ ದ್ವೇಷ ಕಟ್ಟಿಕೊಂಡರು.

ತಪ್ಪುಗಳನ್ನು ತಿದ್ದಿಕೊಳ್ಳುವ ಹಂಬಲ ಅವರನ್ನು ಪ್ರವಾದಿಯಾಗಿಸಿತು, ದಾರ್ಶನಿಕನನ್ನಾಗಿಸಿತು. ಭಾರತೀಯತೆಯ ನೆಲೆಯಲ್ಲಿ ಹೇಳುವುದಾದರೆ ಮಹರ್ಷಿಯಾಗಿಸಿತು.

ಎಲ್ಲರೂ ತಮ್ಮ ತಮ್ಮ ತಪ್ಪುಗಳ ವಿರುದ್ಧ ತಾವೇ ಹೋರಾಡುವಂತಾದರೆ ಅಲ್ಲಿ ಯುದ್ಧಕ್ಕೆ ಅವಕಾಶವೇ ಇರುವುದಿಲ್ಲ.
ಯಾರೊಂದಿಗೂ ದ್ವೇಷ ಬೇಡ , ಹಿಂಸೆಗೆ ಅವಕಾಶ ಕೊಡುವುದು ಬೇಡ. ಪ್ರೀತಿ ಮತ್ತು ಕ್ಷಮೆಯ ಅಳವಡಿಕೆಯೊಂದಿಗೆ ನಮ್ಮ ವ್ಯಕ್ತಿತ್ವದಲ್ಲಿ ಬದಲಾವಣೆಯನ್ನು ಕಂಡುಕೊಳ್ಳುವುದು ಉದಾತ್ತವಾದ ಮಾರ್ಗ ಎಂದರು ಟಾಲ್ಸ್ಟಾಯ್.  ಅವರದು ವಿಶ್ವಶಾಂತಿಯ, ವಿಶ್ವಮಾನವ ಪ್ರೇಮದ ಪರಿಕಲ್ಪನೆ. ಸತ್ಯಶೋಧನವನ್ನೇ ಬದಲಾವಣೆಯ ದಾರಿಯಾಗಿ ಕಂಡುಕೊಂಡವರವರು.

ಹೀಗೆ ನೈತಿಕ ನಿಲುವುಗಳನ್ನು ರೂಪಿಸಿಕೊಂಡ ರೂಢಿಸಿಕೊಂಡ ಟಾಲ್ಸ್ಟಾಯ್ ಅವರ ಪ್ರಭಾವ  ಜಗತ್ತಿನಾದ್ಯಂತ ಹಬ್ಬಿದೆ. ಮಹಾತ್ಮಾ ಗಾಂಧಿ, ಕುವೆಂಪು , ಮಾಸ್ತಿ, ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಮುಂತಾದ ಗಣ್ಯರು ಇವರ ಪ್ರಭಾವಳಿಗೆ ಸಿಲುಕಿದವರು. ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರು ಅವರೊಂದಿಗೆ ಪತ್ರವ್ಯವಹಾರ ನಡೆಸುತ್ತಿದ್ದರು. ಗ್ರಾಮ ಸ್ವರಾಜ್ಯದ ಪರಿಕಲ್ಪನೆ , ಅಹಿಂಸಾ ಮಾರ್ಗದ ಚಳುವಳಿ, ಆಶ್ರಮದ ಪರಿಕಲ್ಪನೆ, ಮದ್ಯ-ಮಾಂಸಾಹಾರ ವರ್ಜಿಸುವಿಕೆ ಮುಂತಾದ ಆಲೋಚನೆಗಳ ಹಿಂದೆ ಟಾಲ್ಸ್ಟಾಯ್ ಅವರ ತತ್ತ್ವ ಚಿಂತನೆಯ ಪ್ರಭಾವವಿದೆ.

ಕನ್ನಡದ ಪ್ರಜ್ಞೆಯಲ್ಲಿ ಟಾಲ್ಸ್ಟಾಯ್ ಸಾಕಷ್ಟು  ಹರಿದಿದ್ದಾರೆ. ಜಿ.ಪಿ.ರಾಜರತ್ನಂ , ಗೊರೂರು ರಾಮಸ್ವಾಮಿ ಅಯ್ಯಂಗಾರ್, ಸಿಂಪಿ ಲಿಂಗಣ್ಣ, ದೇ.ಜವರೇಗೌಡ ಮೊದಲಾಗಿ ಈಗಲೂ ಅನುವಾದವು  ಸೃಜನಶೀಲವಾಗಿ ನಡೆಯುತ್ತಿದೆ.  ಮತ್ತೆಮತ್ತೆ ಕನ್ನಡಕ್ಕೆ ಮರಳುತ್ತಿರುವ ಲೇಖಕರವರು. ನೈತಿಕ ಚರ್ಚೆಯಿಂದ, ಬದುಕನ್ನೇ ಪ್ರಯೋಗಕ್ಕೊಡ್ಡಿದ ಲೇಖಕರಾದ್ದರಿಂದ ಟಾಲ್ಸ್ಟಾಯ್ ನಮಗೆ ಅಗತ್ಯವೆನಿಸುತ್ತಾರೆ; ಅನುವಾದಕ್ಕೂ ಒಗ್ಗುತ್ತಾರೆ.

1910ರ ಅಕ್ಟೋಬರ್ 28ರಂದು ತನ್ನ 82ನೆ ವಯಸ್ಸಿನಲ್ಲಿ ಮನೆಬಿಟ್ಟು  ಬಂದು ಬುದ್ಧನಂತಾದರು  .  1910ನೇ ನವೆಂಬರ್ 10ರಂದು   ಟಾಲ್‌ಸ್ಟಾಯ್ ಕೊನೆಯುಸಿರೆಳೆದರು.  ಆದರೆ ಅವರು ಬದುಕಿದ ಪರಿಗೆ ಜಗತ್ತು ಬೆರಗಾಗಿದೆ. ಬರೆಯುವುದು ಸುಲಭ, ಆದರೆ ಬರೆದಂತೆ ಬದುಕಿ ತೋರಿಸಿದವರು ಟಾಲ್ಸ್ಟಾಯ್.  ಟಾಲ್ಸ್ಟಾಯರ ಮರುಓದಿಗೆ ಕಲಾತ್ಮಕತೆಯಷ್ಟೇ ಈ ಗುಣವೂ ಮುಖ್ಯವಾಗಿದೆ.

*


-ಕಾಜೂರು ಸತೀಶ್ 


Thursday, December 22, 2022

ಸಿದ್ದೇಶಿ ಸರ್ ಎಂಬ ಪ್ರೇರಕ ಶಕ್ತಿ

28-11-2014. ಜಿಲ್ಲಾ ಮಟ್ಟದ ಶಿಕ್ಷಕರ ಸಹಪಠ್ಯ ಚಟುವಟಿಕೆಯ ಸ್ಪರ್ಧೆಗೆ ಹೋಗಿದ್ದೆ. ಅದು ನಡೆಯುತ್ತಿದ್ದ ಶೂನ್ಯ ವೇಳೆಯಲ್ಲಿ ಮುಂದೆ ಬಂದ ಯುವ ಉಪನ್ಯಾಸಕರೊಬ್ಬರು ಅಲ್ಲಿದ್ದವರನ್ನು ಉದ್ದೇಶಿಸಿ 'ರಂಗಣ್ಣನ ಕನಸಿನ ದಿನಗಳು ಗೊತ್ತಾ?' ಎಂದರು.

ಮೂಲೆಯಲ್ಲಿ ನಿಂತಿದ್ದ ನಾನು 'ಇದ್ಯಾರು ಸಾಹಿತ್ಯ ಕೃತಿಯ ಕುರಿತು ಹೇಳುತ್ತಿರುವರಲ್ಲಾ' (ಅದೂ ಮಡಿಕೇರಿಯಲ್ಲಿ!)  ಎಂದುಕೊಂಡೆ ಬೆರಗಿನಿಂದ.
*



ಎಂ.ಆರ್. ಶ್ರೀನಿವಾಸಮೂರ್ತಿಯವರ ರಂಗಣ್ಣನ ಕನಸಿನ ದಿನಗಳು ಕಾದಂಬರಿಯಲ್ಲಿ ನಾಯಕ ರಂಗಣ್ಣ ಶಿಕ್ಷಕನಾಗಿ, ಅಧಿಕಾರಿಯಾಗಿ ಕಂಡು ಅನುಭವಿಸಿದ ಶಿಕ್ಷಣ ವ್ಯವಸ್ಥೆಯ ಕುರಿತ ಅನನ್ಯ ಒಳನೋಟಗಳಿರುವ ಕಾದಂಬರಿ. ರಂಗಣ್ಣನ ಕಾಳಜಿ, ಸೇವಾತತ್ಪರತೆಯೇ ವ್ಯವಸ್ಥೆಯ ಒಳಗಿಳಿದು ವಸ್ತುಸ್ಥಿತಿಯನ್ನು ವಿವೇಚಿಸಲು ಪ್ರೇರಣೆ.
*
ಮತ್ತೆ ಮಡಿಕೇರಿಯ ಟೋಲ್ ಗೇಟಿನಲ್ಲಿ ಒಂದು ಬ್ಯಾಗು ನೇತುಹಾಕಿಕೊಂಡು ಬಸ್ ಹತ್ತುವ/ಇಳಿಯುವ ಅವರನ್ನು ದೂರದಿಂದ ಗಮನಿಸುತ್ತಿದ್ದೆ. ಆಗ ಅವರು ಅಕ್ಷರ ದಾಸೋಹದ ಸಹಾಯಕ ನಿರ್ದೇಶಕರಾಗಿದ್ದರು.

ಅದೇ ಸಮಯದಲ್ಲಿ ನಾನಿದ್ದ ಶಾಲೆಗೆ ಬಂದಿದ್ದರು. ನನ್ನ ಪರಿಚಯವೂ ಆಯಿತು.
*
ಎಂಟು ವರ್ಷಗಳು ಸಂದಿವೆ. ಆ ಕಾದಂಬರಿಯ ಕುರಿತು ಪ್ರಸ್ತಾಪಿಸಿದ ಸಿದ್ದೇಶಿ ಸರ್ ಚಿತ್ರದುರ್ಗಕ್ಕೆ ಹಿಂತಿರುಗಿದರೂ ನನಗೀಗ ರಂಗಣ್ಣನಂತೆ ಅಪಾರ ಕನಸುಗಳನ್ನು ಹೊತ್ತ ಜೀವದ ಹಾಗೆ ಕಾಣಿಸುತ್ತಿದ್ದಾರೆ.



*



ನಾವಿಬ್ಬರು ಭೇಟಿಯಾದಾಗಲೆಲ್ಲಾ ನಮ್ಮನಮ್ಮ ಕನಸುಗಳ ಬಗ್ಗೆ ಚರ್ಚಿಸಿದ್ದೇವೆ: ಚಿತ್ರದುರ್ಗದ ನಿಜಲಿಂಗಪ್ಪ ಸಮಾಧಿಯ ಬಳಿ, ದೊಡ್ಡಮಳ್ತೆಯ ಹೊನ್ನಮ್ಮನಕೆರೆ ಗುಡ್ಡದಲ್ಲಿ, ಡಯಟ್ ಗೋಡೆ-ಗೋಡೆಗಳಾಚೆ. ಪಠ್ಯಪುಸ್ತಕಗಳನ್ನು ಮೀರಿದ , ಸಿದ್ಧಮಾದರಿಗಳನ್ನು ಮುರಿಯುವ ಆಲೋಚನೆಗಳೇ ಅವು; ಜೀವಪರ ಚಿಂತನೆಗಳು.



ಅವರಿರುವಲ್ಲಿ ಧನಾತ್ಮಕ ಶಕ್ತಿ ಪ್ರವಹಿಸುತ್ತಿರುತ್ತದೆ. ಪರಿಣಾಮದ ಬಗ್ಗೆ ಆಲೋಚಿಸದೆ, ತಮ್ಮ ನಿಲುವುಗಳನ್ನು ನೇರವಾಗಿ ಹೇಳಿಬಿಡುವ ಜಾಯಮಾನ ಅವರದು. ಜಿಲ್ಲೆಯ ಹಲವು ಶಿಕ್ಷಕರು ಅವರ ಪ್ರೋತ್ಸಾಹದ ಮಾತಿಗೆ ದುಡಿಯುವ ಕಸುವನ್ನು ಹೆಚ್ಚಿಸಿಕೊಂಡಿದ್ದಾರೆ, ಹೊಸತನವನ್ನು ಮೈದುಂಬಿಕೊಂಡಿದ್ದಾರೆ.



ಮಾತನಾಡುವಾಗ ಕೇಳುಗ/ನೋಡುಗರನ್ನು ಗಮನದಲ್ಲಿಟ್ಟುಕೊಂಡು , ಅವರನ್ನು ಮಾತಿಗೆಳೆಯುತ್ತಾ ಮುಂದುವರಿಯುವ , ಹಲವು ವಾಸ್ತವ ಅನುಭವಗಳನ್ನು ಮಾತಿನ ಕೇಂದ್ರಕ್ಕೆ ಲಿಂಕ್ ಮಾಡುವ ಬಗೆ ಇವರದು.



(ಯಾವತ್ತೂ ನಿದ್ರಿಸುವ ನನ್ನ ಮೊಬೈಲಿನ ಬಗ್ಗೆ ಅವರಿಗೆ ಬೇಸರ/ಸಿಟ್ಟು. ಹಲವು ಭೇಟಿಗಳಿಂದ ತಪ್ಪಿಸಿಕೊಳ್ಳುವ ನನ್ನ ನಿಲುವುಗಳ ಬಗ್ಗೆಯೂ).



ಸಿದ್ದೇಶಿ ಸರ್ ಸುಮಾರು ಒಂದು ದಶಕವನ್ನು ಇಲ್ಲಿ ಬಾಳಿದ್ದಾರೆ. ಹಲವು ಶಿಕ್ಷಕ/ವಿದ್ಯಾರ್ಥಿಗಳ ಪ್ರೀತಿಯನ್ನು ಸಂಪಾದಿಸಿದ್ದಾರೆ.
ಈ ಅನುಭವಗಳು ಅವರನ್ನು ಆಯುಷ್ಯವಿಡೀ ಬೆಚ್ಚಗಿರಿಸುತ್ತವೆ!

*

ಕಾಜೂರು ಸತೀಶ್

Tuesday, October 11, 2022

ಮಾಯೆ

ಮನಮೋಹಕ 'ದುರ್ಗಾ ಜಲಪಾತ'ದ ಬಳಿ ಇವರ ಮನೆ ಇತ್ತು. ನೂರಾರು ಪ್ರವಾಸಿಗರು ಬಂದು ಹೋಗುತ್ತಿದ್ದರು. ಅವರಲ್ಲಿ ಉದ್ಯಮಿಗಳು, ವಿದೇಶೀಯರು, ರಾಜಕಾರಣಿಗಳು , ಕವಿಗಳು, ಪತ್ರಕರ್ತರು, ಶಿಕ್ಷಕರು, ವಿದ್ಯಾರ್ಥಿಗಳು... ಹೀಗೆ ಎಲ್ಲ ವರ್ಗದವರೂ ಇದ್ದರು.

ಮೊದಮೊದಲು ಜಲಪಾತದ ಭಂಗಿಗಳನ್ನು ಸೆರೆಹಿಡಿದು whatsapp facebookಗಳಲ್ಲಿ ಹಂಚಿಕೊಳ್ಳತೊಡಗಿದ ಇವರು, ಅದರ ಕುರಿತ ಒಂದೆರಡು ಸಾಲುಗಳನ್ನೂ ಗೀಚುತ್ತಿದ್ದರು. ಇವರ Facebook ಸ್ನೇಹಿತರ ಪಟ್ಟಿಯಲ್ಲಿ ಸಾಹಿತಿಗಳ ಸಂಖ್ಯೆ ಹೆಚ್ಚತೊಡಗಿತು.

ಜಲಪಾತವನ್ನು ನೋಡಲು ಬರುವ ಸಾಹಿತಿಗಳು ಪತ್ರಕರ್ತರು ಇವರ ಮನೆಯ ಊಟವನ್ನೂ ಸವಿದು ಹೋಗುತ್ತಿದ್ದರು.

ಕ್ರಮೇಣ ಇವರ ಬರೆಹಗಳು ಪತ್ರಿಕೆಯಲ್ಲಿ ಪ್ರಕಟವಾಗಲಾರಂಭಿಸಿದವು. 'ಸ್ಪರ್ಧೆಗಳಿಗೆ ಬರೆಯಿರಿ' ಎಂದು ಹೇಳಿ ಒತ್ತಾಯಿಸಿ ಬರೆಸುತ್ತಿದ್ದರು. ದೀಪಾವಳಿ, ಸಂಕ್ರಾಂತಿ ಸ್ಪರ್ಧೆಗಳಲ್ಲಿ ಇವರಿಗೆ ಒಂದು ಬಹುಮಾನ ನಿಶ್ಚಿತವಾಗಿತ್ತು. ಹಲವು ಕೃತಿಗಳು ಪ್ರಕಟಗೊಂಡವು. ಹಲವು ಪ್ರಶಸ್ತಿಗಳೂ ಬಂದವು.

ಯಾವ ಕೋನದಿಂದ ಚಿತ್ರಿಸಿದರೂ, ಆ ಜಲಪಾತದ ಚಿತ್ರ ಮತ್ತೆ ಮತ್ತೆ ನೋಡುವಂತೆಯೂ, ಎಷ್ಟೋ ಬಾರಿ ಕವಿತೆಯಂತೆಯೂ, ಕತೆಯಂತೆಯೂ, ನಾಟಕದಂತೆಯೂ, ಕಾದಂಬರಿಯಂತೆಯೂ, ತತ್ತ್ವಶಾಸ್ತ್ರದಂತೆಯೂ ಕಾಣುತ್ತಿತ್ತು. ಕಲಾವಿದರಿಗೂ, ಛಾಯಾಗ್ರಾಹಕರಿಗೂ, ಕವಿಗಳಿಗೂ, ಪತ್ರಕರ್ತರಿಗೂ ಬಿಡಿಸಲಾಗದ ಮಾಯೆಯಂತೆ ಅದು ಕಾಡುತ್ತಿತ್ತು.
*

- ಕಾಜೂರು ಸತೀಶ್ 

ನೀರ ಹರಿವಲ್ಲಿ ನೀರೆಯರ ಚರಿತೆ


ಇಂದಿನ ಮಹಿಳಾ ಕನ್ನಡ ಕಾವ್ಯ ಪ್ರಪಂಚದಲ್ಲಿ ತಟ್ಟನೆ ನೆನಪಿಗೆ ಬರುವ ಕವಯಿತ್ರಿ ಡಾ. ಕವಿತಾ ರೈ. ಪ್ರತಿಭಾ ನಂದಕುಮಾರ್, ಸವಿತಾ ನಾಗಭೂಷಣ, ಸ.ಉಷಾ, ಎಂ.ಆರ್. ಕಮಲ, ಡಾ.ಎಚ್.ಎಸ್. ಅನುಪಮಾ, ಲಲಿತಾ ಸಿದ್ಧಬಸವಯ್ಯ, ವೈದೇಹಿ, ಡಾ.ವಿನಯಾ ಒಕ್ಕುಂದ, ವಿಜಯಶ್ರೀ ಹಾಲಾಡಿ, ಎಚ್.ಆರ್.ಸುಜಾತ ಮುಂತಾದ ಪ್ರಮುಖ, ಸ್ತ್ರೀಸಂವೇದನೆಯ ಗಟ್ಟಿ ದನಿಗಳ ನಡುವೆ ಭಿನ್ನ ಭಾವ ಮತ್ತು ಅಭಿವ್ಯಕ್ತಿ ಕ್ರಮಗಳನ್ನು ರೂಪಿಸಿಕೊಂಡವರು ಕವಿತಾ ರೈ.


ಹಕ್ಕಿ ಹರಿವ ನೀರು, ನೀರ ತೇರು, ನೀರ ತೇಜಿಯನೇರಿ, ನೀರುಮಾಡು- ಈ ಎಲ್ಲ ಸಂಕಲನಗಳಲ್ಲೂ ನೀರು ಮತ್ತು ನೀರೆ ಕೇಂದ್ರ ಪ್ರತಿಮೆ. ಒಂದು ಚಿತ್ರ ಮತ್ತು ಚಲನೆ ಒಟ್ಟೊಟ್ಟಿಗೆ ಸಂಭವಿಸುವ ಕ್ರಮ ಇಲ್ಲಿದೆ. ಇಲ್ಲಿಯ ನೀರು ಸ್ತ್ರೀರೂಪಕ. ಸ್ಥಾವರ ಎಂದುಕೊಂಡ ಸಿದ್ಧಮಾದರಿಯನ್ನು ಮುರಿದು ಜಂಗಮವಾಗಿಸಿ ಕಟ್ಟಿ ಬೆಳೆಸುವ ಪರಿ. ನೀರಿನ ಪ್ರತಿಮೆಯ ಮೂಲಕ ಹೆಣ್ಣಿನ ಬದುಕಿನ ನೋವು ನಲಿವುಗಳನ್ನು, ಅಲೌಕಿಕತೆಯನ್ನು ಕಟ್ಟಿಕೊಡುತ್ತಾರೆ ಕವಿತಾ ರೈ.

ಅವರ ಲೋಕಾಮುದ್ರಾ ನಾಟಕದಲ್ಲೊಂದು ಮಾತಿದೆ: “ಪುರುಷ ಸಂಕಲ್ಪಕ್ಕೆ ತಿಳಿದಿದೆ ಹೆಣ್ಣು ನೀರಿನಂಶ ಎಂಬುದು. ಯಾವ ಪಾತ್ರೆಗೆ ತುಂಬಿದರೂ ಅದೇ ಆಕಾರ ಅದೇ ರೂಪ.” ನಾಟಕದಲ್ಲಿ ನೀರಹನಿಗಳು ರಂಗಕ್ಕೇರುತ್ತವೆ, ತೆರೆಗಳು ಮಾತನಾಡುತ್ತವೆ. ಹತಾಶೆಯನ್ನು, ಆಕ್ರೋಶವನ್ನು, ಹೊಗೆಯಾಡುತ್ತಲೇ ಮೀರುವ ದಾರಿಯನ್ನು ಕಂಡುಕೊಳ್ಳುತ್ತದೆ ಕವಿತಾ ರೈಯವರ ಕಾವ್ಯ ಮಾರ್ಗ. 


ಕವಿತಾ ರೈಯವರ ಸ್ತ್ರೀವಾದಿ/ ಸ್ತ್ರೀನಿಷ್ಠ ನಿಲುವು ಪುರುಷಲೋಕವನ್ನು ತಿರಸ್ಕರಿಸುವಂಥದ್ದಲ್ಲ; ಪುರುಷ ಯಾಜಮಾನಿಕೆಯನ್ನು ತಿರಸ್ಕರಿಸುವಂಥದ್ದು. ಕೊಡಗಿನಲ್ಲಿ ‘ನೀರು’ ಎಂದರೆ ದೇವತೆ. ಕಾವೇರಿಯೇ ಇಲ್ಲಿನ ಕುಲದೇವತೆ. ನೀರು ಇಲ್ಲಿನ ಕವಿತೆಗಳ ಸಂಸ್ಕೃತಿಯೇ ಆಗಿದೆ. ಹಾಗಾಗಿ ಬದುಕನ್ನು ನಿರ್ವಚಿಸಿಕೊಂಡ ‘ಜೀವನ ಮೀಮಾಂಸೆ’ಯೇ ಅವರ ಒಟ್ಟು ಕವಿತೆಗಳ ಅಂತಃಸ್ರೋತ.  ಅಗಸ್ತ್ಯನ ಕಮಂಡಲದೊಳಗೆ ಬಂಧಿಯಾದ ಲೋಪಾಮುದ್ರ ಸ್ತ್ರೀಗೆ ವಿಧಿಸಲಾದ ನಿರ್ಬಂಧಗಳ ಸಂಕೇತ; ಅದನ್ನು ದಾಟಿ ಲೋಕ ಕಲ್ಯಾಣಕ್ಕೆ ಹರಿವ ಕಾವೇರಿ ಬಿಡುಗಡೆಯ ಸಂಕೇತ. ಕನ್ನಡ ಸಂಸ್ಕೃತಿಯಲ್ಲಿ ಮಹಾದೇವಿ ಅಕ್ಕ ಹೇಗೋ , ಹಾಗೆ ಕೊಡಗಿನ ಅನನ್ಯ ಸಂಸ್ಕೃತಿಯಲ್ಲಿ ಹೆಣ್ಣಿನ ಆತ್ಮವಿಶ್ವಾಸದ, ಚೈತನ್ಯದ ಸಂಕೇತವಾದ ಕಾವೇರಿ. ಒಬ್ಬಳು ಅಗಸ್ತ್ಯನನ್ನು ತೊರೆದರೆ, ಮತ್ತೊಬ್ಬಳು ಕೌಶಿಕನನ್ನು ತೊರೆದವಳು. ಒಂದು ಪೌರಾಣಿಕ, ಮತ್ತೊಂದು ಚಾರಿತ್ರಿಕ. ಇಬ್ಬರಲ್ಲೂ ಹರಿವಿನ ಹರವು. ಹೀಗಾಗಿಯೇ ನೀರ ಪ್ರತಿಮೆಗಳು ಜೀವಸಂಚಲನದ, ಅನುಭವಗಳ, ಅನುಭಾವದ ಹರಿವುಗಳಾಗಿ ರೂಪುಪಡೆದಿವೆ. ಪ್ರಾದೇಶಿಕತೆ ಇವರ ಕವಿತೆಗಳು ಮುಖಾಮುಖಿಯಾಗುವ ಬಹುಮುಖ್ಯ ಸಂಗತಿ(ಅವರ ಗದ್ಯ ಬರವಣಿಗೆಯಲ್ಲಿ ಪ್ರಾದೇಶಿಕತೆಯು ಖಚಿತವಾದ ನೆಲೆಯನ್ನು ಮುಟ್ಟುತ್ತದೆ).

ನನಗೆ ಕಾವ್ಯ ಬೇಕು ಉಪನ್ಯಾಸವಲ್ಲ” ಎಂಬ ಸಾಲು ಅವರ ಲೋಕಾಮುದ್ರಾ ನಾಟಕದಲ್ಲಿದೆ. ಗದ್ಯದ ಒಳಗೂ ಪದ್ಯದ ಧ್ಯಾನವಿದೆ . ಅವರ ಅನುಭವಗಳು ನೀರಿಗೆ ಭಾಷಾಂತರಗೊಳ್ಳುತ್ತವೆ. ಪರಿಸರದ ಅನುಭವಗಳು ಸಾಂಸ್ಥಿಕ ಸಂರಚನೆಗಳನ್ನು ಮುರಿದು ಕಟ್ಟುವಲ್ಲಿ, ಒಂದುಗೂಡಿಸುವಲ್ಲಿ ಪ್ರೇರಕ ಶಕ್ತಿಯಾಗಿವೆ.


ಪ್ರಕೃತಿಯು ಹೆಣ್ಣಿನ ನಂಬಿಕೆ-ವಿಶ್ವಾಸ ಮತ್ತು ಜೀವನಕ್ರಮಗಳ ಮೇಲೆ ತೀವ್ರವಾದ ಪ್ರಭಾವವನ್ನು ಬೀರುತ್ತದೆ. ಹೆಣ್ಣೆಂದರೆ ಪ್ರಕೃತಿಯ ಪಡಿಯಚ್ಚು. ಕವಿತಾ ರೈಯವರು ಅದನ್ನು ಶುದ್ಧವಾಗಿ ಗ್ರಹಿಸುವುದಿಲ್ಲ; ಬದಲಾಗಿ ಸ್ತ್ರೀಲೋಕವನ್ನು ಪ್ರಕೃತಿಯೊಂದಿಗೆ ತಾದಾತ್ಮ್ಯೀಕರಿಸುತ್ತಾರೆ:

ಹೆಣ್ಣ ಕನಸೆಂದರೆ ಮಣ್ಣಿನ ಶಿಶುವಿಹಾರ
ಬೇರು ಬೇರಿಗೂ ಗೊತ್ತು ಜೀವ ನಳ
ನಳಿಸುವ ಸದ್ದು.(ಹೆಣ್ಣ ಕನಸು)

ಗಿಡ ಮಣ್ಣಾಟವಾಡುತ್ತಿತ್ತು
............................
ಗಿಡ ಕೆಸರ ಕಲಸುತ್ತಿತ್ತು
.............................
ಗಿಡದ ಕರುಳ ಕೂಗು
ಬೇರಿಗೆ ಕೇಳುತ್ತಿತ್ತು (ಕವಿತೆ)

ಹಕ್ಕಿ ಹರಿವ ನೀರಲ್ಲಿ 
ಮೀನು ಅದರುದ್ದಕ್ಕೂ ಬಾನು
ಲೆಕ್ಕವಿಲ್ಲದ ಛಾಯೆ (ಕಣ್ಣೀರಿದೆ ಅದರೊಳಗೆ)

 ಭಾರತೀಯ ಜನಪದದಲ್ಲಿ, ಕನ್ನಡ ವಚನ ಪರಂಪರೆಯಲ್ಲಿ ನೀರು ಪ್ರಧಾನ ಸಂಗತಿಗಳಲ್ಲೊಂದು. ನೀರನೀಜುವನ ದೇಹ ಬಳಲುವುದಲ್ಲದೆ ನೀರು ಬಳಲುವುದೆ? ಎನ್ನುತ್ತಾರೆ ಅಲ್ಲಮ. ಜಾಗತಿಕವಾಗಿಯೂ ಕೂಡ:There are tides in the body ಎನ್ನುತ್ತಾರೆ ವರ್ಜೀನಿಯಾ ವೂಲ್ಫ್.   ಕವಿತಾ ರೈಯವರ ‘ಪರಿಸರ ಸ್ತ್ರೀವಾದ’(Eco feminism) ಮತ್ತೂ ಖಚಿತವಾಗಿ  Hydro feminismನ ನೆಲೆಗಳನ್ನು ಮುಟ್ಟುತ್ತದೆ;ಅಂಥದ್ದೊಂದು ಜ್ಞಾನಶಾಖೆಯನ್ನು ಮತ್ತಷ್ಟೂ ವಿಸ್ತಾರಗೊಳಿಸುತ್ತದೆ.

ನೀರ ತೇಜಿಯನೇರಿದ ಪಯಣ ಗೆಳೆಯ
ನಾನೆಂಬ ಹಂಗೂ ಉಳಿದಿಲ್ಲ(ಹೊರಟ ದಾರಿಯಲ್ಲಿ)

ಹರಿವ ನದಿಯೊಳಗೆ
ಅಂತರಂಗದ ಗಾಯ ಮಾಗಿ
ದಡದಲ್ಲಿ ಕಿವಿ ಹಚ್ಚಿ ಆಲಿಸಿದರೆ
ಆದಿಮ ಕಂಪನವಿನ್ನೂ ಹಾಗೇ ಉಳಿದಿತ್ತು (ಕೇಳಿ ಕೇಳದ ಸದ್ದು)

ಹರಿವಿನ ಮೂಲಕ ಅಂತರಂಗದ ಗಾಯ ಮಾಗಿಸುವ ನೀರ ದಡದಲ್ಲಿ ಇನ್ನೂ ಬೀಡುಬಿಟ್ಟಿರುವ ಆದಿಮ ಕಂಪನದ ಕುರಿತ ಮರುಕವಿದೆ ಕವಿಗೆ. ಕಾವೇರಿ, ಸೀತೆ, ದ್ರೌಪದಿ, ಅಹಲ್ಯೆ, ಕುಂತಿ... ಇವರೆಲ್ಲ ತಮ್ಮದಲ್ಲದ ತಪ್ಪಿಗಾಗಿ ನೊಂದು ಬೆಂದವರು. ಆದರೂ ಇವರೆಲ್ಲ ಪುರುಷ ಸಮಾಜ ಎಳೆದ ಲಕ್ಷ್ಮಣ ರೇಖೆಗಳಾಚೆ ಹರಿದು ತಮಗಾದ ಗಾಯಗಳನ್ನು ಮಾಯಿಸಿಕೊಂಡವರು. ಇಂದಿಗೂ ಶೋಷಣೆಯ ಕಂಪನ ಹಾಗೇ ಉಳಿದಿದೆ, ಮುಂದುವರಿಯುತ್ತಿದೆ. ಈ ಚಕ್ರಗತಿಯ ಚಲನೆ ಪರಂಪರೆಯಿಂದ ಪರಂಪರೆಗೆ ಹಬ್ಬಿಕೊಳ್ಳುತ್ತಿದೆ.

ಬೆಳಿಗ್ಗೆ 
ಧೂಳೊರೆಸುವ ಅಮ್ಮನಿಗೆ
ಅಟ್ಟದಲ್ಲಿಟ್ಟ
ತೊಟ್ಟಿಲ ನೆನಪು (ಬದುಕಿನ ಬಾಗಿಲಿಗೆ)

ಅಡುಗೆ ಮನೆಯ ಕೇಂದ್ರ ಒಲೆ
ಅಜ್ಜಿ  ಅಮ್ಮ ಈಗ ಸರದಿಯಲ್ಲಿ ನಾನು
.....................................................
ಒಲೆ ಬದಲಾದರೇನು ಉರಿ ಬದಲಾಗಿದೆಯೇ? (ಒಲೆ)


ಕವಿತಾ ರೈಯವರ ಕವಿತೆಗಳಿಗೆ ಧ್ಯಾನಸ್ಥ ಸ್ಥಿತಿ ಇದೆ. ಅನೇಕ ಕವಿತೆಗಳಿಗೆ  ವಚನದ ಪರಿಭಾಷೆ ಇದೆ. ಗಂಡಿನೊಡಗಿನ ಸಂಘರ್ಷ ಮತ್ತು ಒಡನಾಟಗಳು ಒಗ್ಗೂಡಿ ಚಲಿಸಬೇಕೆಂಬ ಹಂಬಲ ಅವರಿಗಿದೆ. ಈ ಬಗೆಯ ಸಂಬಂಧಕ್ಕೆ metaphysical ಛಾಯೆ ಇದೆ. ಅಲ್ಲಿ ಅಹಂಕಾರವಿಲ್ಲ; ಒಮ್ಮತವಿದೆ:

ನಮ್ಮೊಳಗೆ ಸರಿವ ಹೆಜ್ಜೆಯನು
ನದಿಯ ಜಾಡನು
ದಾಟೋಣ ಅನುಗೂಡಿ
ಬೀಸುವ ಬಯಲ ಗಾಳಿಯಲಿ
ಹರಿಯಲಿ ಜೋಡಿ ನೆರಳು(ಜೋಡಿ ನೆರಳು)

ಹುಟ್ಟು ಸಾವ ಮೀರುವ ಉತ್ಕಟತೆಯಲಿ
ಪ್ರವಾದಿನಿಯೋ ಹುತಾತ್ಮಳೋ
ಆಗುವ ನೆಣ ನನ್ನಲ್ಲಿ ಇರುತ್ತಿದ್ದರೆ
ದೇವರೇ ಈ ಜಗತ್ತನ್ನು ಇರುವ ಹಾಗೆ
ಪ್ರೀತಿಸುತ್ತಿದ್ದೆ.(ಪ್ರೀತಿಸುತ್ತಿದ್ದೆ)

ಅಹಂಕಾರದ ಮೈದಾನ ಮರೆತು
ನೀರ ತೇಜಿಯನೇರಿ ಹೊರಟ
ನಮ್ಮಿಬ್ಬರ ನಡುವೆ ಗೆಳೆಯಾ
ಕ್ಯಾ ಲೇನಾದೇನಾ
ಶುದ್ಧ ಪ್ರೇಮದ ತೋಂಡಿ ಪಯಣ(ನೀರ ತೇಜಿಯನೇರಿ)

ಹಾಗಾಗಿ ಕವಿತಾ ಅವರ ಕಾವ್ಯ ಮೀಮಾಂಸೆಯು ದೇಹ ಮೀಮಾಂಸೆಗಿಂತ ಆತ್ಮ ಮೀಮಾಂಸೆಯಲ್ಲಿಯೇ ಹೆಚ್ಚು ಸ್ಥಾಯಿಯಾಗುಳಿಯುತ್ತದೆ. ಅವರು ತಮ್ಮ ಕಾವ್ಯ ಮೀಮಾಂಸೆಯನ್ನು ಹೀಗೆ ವ್ಯಾಖ್ಯಾನಿಸಿಕೊಳ್ಳುತ್ತಾರೆ:

ನನ್ನ ಆತ್ಮಕತೆ 
ಹೆಂಡತಿಯಾದ 
ಗೃಹಿಣಿಯಾದ
ತಾಯಿಯಾದ
ತೋರದ ಸರಿತೆ
ಆತ್ಮ ಪ್ರತ್ಯಯದ ಹುಡುಕಾಟಕ್ಕೆ
 ಬಿದ್ದ ಕವಿತೆ(ಸ್ತ್ರೀಯೋ ಹಿ ಮೂಲಂ ಸಕಲಸ್ಯ ಪುಂ ಸಃ)

ಆಧುನಿಕ ಸ್ತ್ರೀವಾದ ಎರಡು ಪ್ರಮುಖ ಅಂಶಗಳನ್ನು ಒಳಗೊಂಡಿದೆ. ಒಂದು: ಸ್ತ್ರೀ-ಪುರುಷ ಸಮಾನತೆಗೆ ಹೋರಾಡುವುದು. ಮತ್ತೊಂದು: ಸ್ತ್ರೀಯೇ ಪುರುಷನಿಗಿಂತ ಸ್ಪಂದನೆ ಮತ್ತು ಪ್ರಜ್ಞೆಯಲ್ಲಿ ಭಿನ್ನಳು; ಅದೇ ಅವಳ ವಿಶಿಷ್ಟ ಶಕ್ತಿ ಎಂದು ಗ್ರಹಿಸುವುದು. ಕವಿತಾ ರೈಯವರು ಇದನ್ನು ಪ್ರತಿರೋಧದ ಮತ್ತು ಬಿಡುಗಡೆಯ ಮಾದರಿಯಾಗಿ ಗ್ರಹಿಸುತ್ತಾರೆ.


ಕವಿತಾ ರೈ ಅವರ ಭಾಷಿಕ ಲಯ ತಮ್ಮ ಸರೀಕರಿಗಿಂತ ಭಿನ್ನವಾಗಿ ಹೊಸತನಕ್ಕೆ ಹಠತೊಟ್ಟಂತೆ ಕಟ್ಟಲ್ಪಟ್ಟಿದೆ. ಕವಿತೆಯಿಂದ ಕವಿತೆಗೆ, ಸಂಕಲನದಿಂದ ಸಂಕಲನಕ್ಕೆ ಬದಲಾಗುತ್ತಾ, ಮಾಗುತ್ತಾ ಹೋಗುತ್ತಾರೆ. ನವೋದಯ, ನವ್ಯ, ದಲಿತ ಬಂಡಾಯಗಳಿಂದ ಬಿಡಿಸಿಕೊಂಡ ದಾರಿ ಅವರದ್ದು. ಅವರ ಬೇರೆ ಬೇರೆ  ಕಾವ್ಯಮಾದರಿಗಳ ಹುಡುಕಾಟವನ್ನು ಹೀಗೆ ಗುರುತಿಸಬಹುದು:

~ ಚಿತ್ರವೊಂದನ್ನು ನೀಡಿ ಶಬ್ದವನ್ನು ನಮ್ಮಿಂದಲೇ ಆಲಿಸುವಂತೆ ಮಾಡುವುದು. ಉದಾಹರಣೆಗೆ:

ದಫ್ ಅಂತ ಶಬ್ದ
ಕೇಳಿದಿರೇನು?
ಮೀನು ಮೇಲೆ
ಚಿಮ್ಮಿ ಜಿಗಿದು
ಬಿದ್ದ ಸಪ್ಪಳವ
ಕೆರೆಯಷ್ಟೇ ಕೇಳಿಸಿಕೊಂಡಂತೆ. (ಕೇಳಿ)

ಹೊರನೋಡು
ಮಳೆ ಬಾನನ್ನು 
ಬುವಿಯನ್ನು ಸೇರಿಸಿ
ಹೊಲಿಯುತ್ತಿದೆ (ಮಾಯೆ)

ಹಕ್ಕಿ ಹರಿವ ನೀರಲ್ಲಿ 
ಮೀನು ಅದರುದ್ದಕ್ಕೂ ಬಾನು
ಲೆಕ್ಕವಿಲ್ಲದ ಛಾಯೆ (ಕಣ್ಣೀರಿದೆ ಅದರೊಳಗೆ)

~ನೀರಿನ ಹಾಗೆ ಲಯದಲ್ಲಿ ಹರಿದಾಡುವ, ನುಡಿಯ ಬೆಡಗಿನ ಕವಿತೆಗಳು; ಲಾಲಿತ್ಯಪೂರ್ಣ ಕವಿತೆಗಳು:

ಗತಿಯಿರದ ಧೃತಿಯಿರದ ಶೃತಿಮತಿಗಳಿರದ
ನೀರತೇಜಿಯನೇರಿ ಬೇರೊಂದು ಏಕಾಂತಕೆ ಸಾರಿ
ಮುಂದೆ ಅರಸಿ ಹಿಂದಿಲ್ಲ ಹಿಂದೆ ಅರಸಿ ಮುಂದಿಲ್ಲ
ಆನು ನೀನೆಂದ ಬಳಿಕ ಮೂಲ ಮಂತ್ರದ ಮೂರ್ತಿ
ಒಮ್ಮೆ ನನ್ನ ಸರದಿ ಒಮ್ಮೊಮ್ಮೆ ನಿನ್ನ ಸರದಿ (ಏಕಾಂತಕೆ ಸಾರಿ)

~ಪ್ರತಿರೋಧದ ದನಿಗಳುಳ್ಳ, ಸಾಮಾಜಿಕ, ಜಾತ್ಯತೀತ, ರಾಜಕೀಯ ಆವರಣವಿರುವ ಕವಿತೆಗಳು. ಇವುಗಳಿಗೆ ನಿರ್ದಿಷ್ಟವಾದ ಭಾಷಿಕ ಸಂರಚನೆಗಳಿಲ್ಲ. ಬಹುತೇಕ ಕವಿತೆಗಳು ಕೇಂದ್ರ ಪ್ರತಿಮೆಯಿಂದ ಆಚೆ ನಿಂತು ಮಾತನಾಡುವವು:

ಗೈಯ್ಯುವ ಕೈಗಳಿಗೆ ನಡೆಯೋದ ಕಲಿಸ್ಯಾನ
ಕಾಲೆಂಬ ಕಬರನ್ನೇ ಅಳಾ ಅಳಿಸಿ ಹಾಕ್ಯಾನ
ಅದಿರೆಂಬ ಹೆಸರಲ್ಲಿ ನೆಲವನ್ನೇ ನುಂಗ್ಯಾನ
ಕೊಬ್ಬೀದ ಬಾಡೀನ ನೆಣವನ್ನೆ ಸವರ್ಯಾನ (ಝಣ ಝಣ ಜನಕ)

ಭಾಷೆಯ ವೀರ್ಯದಿಂದಲೇ
ಆತ ಪಡೆದದ್ದು ಗರ್ಭದ ಸಂಯೋಗ
ಆನಂದದ ಶೃಂಗಸುಖ
ಈಯುವ ಬೇನೆಯ ಅದೇ ಜಾಡಲ್ಲೇ
ಚರಿತ್ರೆ ಧರ್ಮ ಶಾಸ್ತ್ರ ತತ್ವ ತರ್ಕ
ರಾಜಕೀಯ ಸಾಹಿತ್ಯ ವಿಜ್ಞಾನದ ಹೆರಿಗೆ
ಹೀಗಾಗಿಯೇ ಗಂಡು 
ಸಹಜ ಪ್ರಸವದ ಸೂಲಿಗ (ಸಾಲಂಕೃತ ಗುಲಾಮಿ)

ಮನೆಮಳಿಗೆ ಬಿಕ್ಕಳಿಸಿ ಹೇಳಿದ ಕಥೆಯೊಳಗೆ
ಧರ್ಮದ ಪಯಣ ಸಾಗಿಯೇ ಇತ್ತು
ಶಾಂತಿ ಅರಸಿ ಹೊರಟು ಆಕಾಶದೆತ್ತರ
ಪುಟ್ಟ ಪಾರಿವಾಳ ಬೆಪ್ಪುಗಟ್ಟಿ
ತಾನೆ ಮರೆತು ತನಗೆ ತಾನೆ
ಧಿಕ್ಕಾರ ಧಿಕ್ಕಾರ ಹಾಕಿತು (ಧರ್ಮದ ಪಯಣ)


ಹೀಗೆ ಒಂದೇ ಕೇಂದ್ರದ ಏಕತಾನತೆಯಿಂದ ಪಾರಾಗಲು ಹೇಳುವ ವಿಧಾನವನ್ನೇ ಮತ್ತೆ ಮತ್ತೆ ಪರೀಕ್ಷಣಕ್ಕೊಳಪಡಿಸುತ್ತಾರೆ. ಕವಿತೆಗಳ ಭಾಷಿಕ ವಿನ್ಯಾಸಗಳು  ಒಂದಕ್ಕಿಂತ ಒಂದು ಭಿನ್ನ. ಒಂದು ಕವಿತೆ ಇನ್ನೊಂದರ ಆದಿಯಾಗುತ್ತದೆ. ಕವಿತೆಗಳ ಪ್ರವೇಶ ಸಾಹಿತ್ಯದ ಗಂಭೀರ ಅಭ್ಯಾಸಿಗಷ್ಟೇ ಸಾಧ್ಯವಾಗುವಂತಹ ಸಾಧ್ಯತೆಯೂ ಇದೆ. 

ಬಾವಿ ಕಟ್ಟೆ, ಒಲೆ, ಕುಟ್ಟಾಣಿ ಮತ್ತು ಕೆಂಪು ಬೊಟ್ಟಿನ ಸೀರೆ ಮುಂತಾದ ಮಹತ್ವದ ಕವಿತೆಗಳನ್ನು ಎರಡು ದಶಕಗಳ ಹಿಂದೆ ಕನ್ನಡಕ್ಕೆ ಕೊಟ್ಟು ಕಾವ್ಯಲೋಕಕ್ಕೆ ಪ್ರವೇಶಿಸಿದ  ಕವಿತಾ ರೈಯವರು ‘ಕವಿತಾ ಹಾದಿ’ಯಲ್ಲಿ ತುಂಬಾ ಕ್ರಮಿಸಿದ್ದಾರೆ. ಅವರ ಮುಂದಿನ ನಡಿಗೆ ಕುತೂಹಲಕಾರಿಯಾದುದು.
*


-ಕಾಜೂರು ಸತೀಶ್

Tuesday, August 9, 2022

'ನೆನಪುಗಳು ಮಾಸುವ ಮುನ್ನ' ಎಂಸಿಎನ್

ಓರ್ವ ವ್ಯಕ್ತಿಯನ್ನು ಕೇಂದ್ರವಾಗಿಟ್ಟುಕೊಳ್ಳುವ ಕೃತಿಗಳು ಸಾಮಾನ್ಯವಾಗಿ ಆರಾಧನೆಯ ನೆಲೆಯದ್ದಾಗಿರುತ್ತವೆ. ಅದರಲ್ಲೂ ರಾಜಕೀಯ ರಂಗದ ವ್ಯಕ್ತಿಯ ಕುರಿತ ಚಿತ್ರಣಗಳು ಕೃತಿಯ ಪ್ರವೇಶಕ್ಕೂ ಮುನ್ನವೇ ಋಣಾತ್ಮಕ ಪೂರ್ವಗ್ರಹವನ್ನು ಓದುಗರಲ್ಲಿ ಸೃಷ್ಟಿಸಿಬಿಡುತ್ತವೆ.

 ಎಂದರೆ:

೧. ಇವರು ಈ ಪಕ್ಷಕ್ಕೆ ಸೇರಿದವರು. ನನಗೂ ಈ ಪಕ್ಷದ ಮೇಲೆ ಒಲವಿದೆ. ಹಾಗಾಗಿಯೇ ಕೃತಿಯನ್ನು ಪ್ರೀತಿಯಿಂದ ಓದಬೇಕು.

೨. ಇವರು ನಾನು ಇಷ್ಟಪಡುವ ಪಕ್ಷದವರಲ್ಲ, ಆದ್ದರಿಂದ ಇದರಲ್ಲಿ ಏನಿದೆ ಎಂಬ ಕುತೂಹಲವಿದೆ .ಅಥವಾ ಇದರಲ್ಲಿ ಏನೂ ಇರಲಿಕ್ಕಿಲ್ಲ.

೩. ನನಗೆ ಯಾವ ಪಕ್ಷದ ಸಿದ್ಧಾಂತಗಳ ಮೇಲೆ ಒಲವಿಲ್ಲ. ಇವರ ನಿಜವಾದ ಸೈದ್ಧಾಂತಿಕ ಆಯ್ಕೆಯ ಕೇಂದ್ರ ಯಾವುದಿರಬಹುದು?

ಹೀಗೆ.

****

ಸಾರ್ವಜನಿಕ ಕ್ಷೇತ್ರದ(ಅದರಲ್ಲೂ ರಾಜಕೀಯ) ವ್ಯಕ್ತಿಯ ಕುರಿತ ಮಾಹಿತಿಯನ್ನು ಕಲೆಹಾಕುವಾಗ ವಿವರಗಳು ಸುಲಭವಾಗಿ ದಕ್ಕುತ್ತವೆ. ರಾಜಕೀಯದಲ್ಲಿದ್ದುಕೊಂಡೇ ಭಿನ್ನ ದಾರಿಯಲ್ಲಿ ಸಾಗುವ ವ್ಯಕ್ತಿಗಳ ಮೇಲೆ ಸಮಾಜಕ್ಕೆ ವಿಶೇಷವಾದ ಆಸ್ಥೆ ಇರುತ್ತದೆ. ಇಂಥವರ ಮೇಲೆ ಪತ್ರಕರ್ತರಾದವರ ನೋಟಕ್ರಮವು ಮತ್ತೂ ಒಂದು ಹೆಜ್ಜೆ ಮುಂದೆ ಇರುತ್ತದೆ.
*


'ರಾಜಕೀಯ ವಿಶ್ಲೇಷಣೆ ನನ್ನ ಮೆಚ್ಚಿನ ಕ್ಷೇತ್ರ' ಎನ್ನುವ ಕಣಿವೆ ಭಾರದ್ವಾಜ ಅವರ ಸರಳವಾದ ನಿರೂಪಣೆಯಲ್ಲಿ  'ನೆನಪುಗಳು ಮಾಸುವ ಮುನ್ನ' ಕೃತಿ ಚಿತ್ರಿತವಾಗಿದೆ. ಎಂ ಸಿ ನಾಣಯ್ಯ ಅವರ ರಾಜಕೀಯ ಬದುಕನ್ನು ಸಮಗ್ರವಾಗಿ ಕಟ್ಟಿಕೊಡುವ ಕೃತಿಯಿದು.


Fact ಮತ್ತು fictionಗಳೆರಡರ genreಗಳಲ್ಲೂ ಭಾರದ್ವಾಜರದು ಒಂದೇ ಭಾಷಾ ಕ್ರಮ. 'ಪತ್ರಿಕಾ ಭಾಷೆ' ಅಷ್ಟು ಅವರನ್ನು ಆವರಿಸಿದೆ:

"....ಅಲ್ಲಿ ಊಟದ ವ್ಯವಸ್ಥೆಯನ್ನು ಸಹ ಮಾಡಲಾಗಿತ್ತು. ನಾಣಯ್ಯರನ್ನು ಭೇಟಿಮಾಡಲು ಬಂದ ಕಾರ್ಯಕರ್ತರು ಕೂಡ ಅಲ್ಲೇ ಊಟಮಾಡಿದರು. ಇದನ್ನು ಅಲ್ಲಿಯ ಇಂಜಿನಿಯರ್ ವ್ಯವಸ್ಥೆಗೊಳಿಸಿರುವ ವಿಷಯವನ್ನು ತಿಳಿದೊಡನೆ ಅವರು, ಅಧಿಕಾರಿಗಳು ಹಾಕಿದ ಊಟ ತಿಂದು ತಾವು ಎಷ್ಟರಮಟ್ಟಿಗೆ ಅವರ ಕಳಪೆ ಕಾಮಗಾರಿಗಳನ್ನು ನೋಡಬಹುದು ಎಂದು ತಮ್ಮೊಂದಿಗಿದ್ದ ಕಾರ್ಯಕರ್ತರಿಗೆ ಹೇಳಿ , ಸುಮಾರು 25 ಜನರ ಊಟದ ವೆಚ್ಚವನ್ನು ಇವರೇ ಸದರಿ ಅಧಿಕಾರಿಗೆ ಪಾವತಿ ಮಾಡಿ ಬಂದರು".



ಲೇಖಕರು ಎಂಸಿಎನ್ ಅವರ ನಡೆ-ನುಡಿಗಳನ್ನು ಇಷ್ಟಪಟ್ಟಿದ್ದರಿಂದಲೇ ಈ ಕೃತಿಯು ಒಡಮೂಡಲು ಕಾರಣ (ಹಾಗೆಂದು ಇದು ಅಷ್ಟಾದಶ ವರ್ಣನೆಯಲ್ಲ). ಎಂಸಿಎನ್ ಅವರ ಆದರ್ಶಪ್ರಾಯವಾದ ಬದುಕನ್ನು ಕಟ್ಟಿಕೊಡುವುದಷ್ಟೇ ಲೇಖಕರ ಕೆಲಸ. ಸುಮಾರು ೨೯ ವರ್ಷಗಳ ಕಾಲ ರಾಜಕೀಯ ರಂಗದಲ್ಲಿದ್ದ ಅವರನ್ನು ಗ್ರಹಿಸಲು ಲೇಖಕರೂ ಒಂದೆರಡು ದಶಕಗಳನ್ನು ಸವೆಸಿರಲೇಬೇಕು. ಹಾಗಾಗಿ fiction ಮಾದರಿಯಂತೆ ಧುತ್ತೆಂದು ಒಡಮೂಡಿದ ಕೃತಿ ಇದಲ್ಲ. ಅವ್ಯಕ್ತ ರೂಪದಲ್ಲಿ ಹಿಂದೆಯೇ ಮೊಳಕೆಯೊಡೆದಿರಬಹುದಾದ ಈ ಕೃತಿಗೆ ಅವರ ಹಲವು ವರ್ಷಗಳ ಮಾನಸಿಕ ಸಿದ್ಧತೆಯೂ ಕಾರಣವಾಗಿರಬಹುದು.

ಭಾರದ್ವಾಜರು ಹೇಳುವಂತೆ " ಸತತ ಮೂರು ತಿಂಗಳ ಪ್ರಯತ್ನದ ನಂತರ ಅವರ ಒಪ್ಪಿಗೆ ಪಡೆಯಲು ಯಶಸ್ವಿಯಾದೆ. ಆರಂಭದಲ್ಲಿ ತೀರಾ ಬಿಗಿಯಾದ ನಿಲುವು ಹೊಂದಿದ್ದ ಅವರು ಅಂತಿಮವಾಗಿ ಒಪ್ಪಿಗೆ ಸೂಚಿಸಿದರು."
*


ನಾಣಯ್ಯ ಅವರ ಕುಟುಂಬ, ಬಾಲ್ಯ, ಶಿಕ್ಷಣದಿಂದ ಮೊದಲ್ಗೊಂಡು; ವಿದ್ಯಾರ್ಥಿ ಸಂಘ, ವಕೀಲ ವೃತ್ತಿ(1962-78) , ಏಲಕ್ಕಿ ಸೊಸೈಟಿ, ಪುರಸಭೆ, ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್, ಕಾಫಿ ಬೆಳೆಗಾರರ ಸೊಸೈಟಿ, ವಿಧಾನ ಸಭೆ ಚುನಾವಣೆ, ಎಂ ಎಲ್ ಸಿ, ಮಂತ್ರಿ, ವಿರೋಧ ಪಕ್ಷದ ನಾಯಕತ್ವ, ಪಕ್ಷದ ಉಪಾಧ್ಯಕ್ಷ ಸ್ಥಾನ.. ಹೀಗೆ ಹಲವು ರಾಜಕೀಯ ಬದುಕಿನ ಘಟ್ಟಗಳನ್ನು ಚಿತ್ರಿಸಲಾಗಿದೆ. ಇಡೀ ಕೃತಿಯೇ ಸ್ವಾನುಭವದ, ಹಲವರೊಂದಿಗಿನ ಮಾತುಕತೆಯ ಫಲಿತವಾದರೂ, ಪ್ರಾತಿನಿಧಿಕವಾಗಿಯೂ 'ಮಾತುಕತೆ'ಯ ಭಾಗವೊಂದು ಇಲ್ಲಿ ಅಡಕವಾಗಿದೆ. ಎಂಸಿಎನ್ ಅವರು ಕಂಡ ಅಪರೂಪದ ಅಧಿಕಾರಿಗಳ, ರಾಜಕಾರಣಿಗಳ , ಸ್ನೇಹಿತರ ವ್ಯಕ್ತಿಚಿತ್ರಗಳಿವೆ. ಅವರನ್ನು ಹತ್ತಿರದಿಂದ ಬಲ್ಲ ಕುಟುಂಬದವರ, ಸ್ನೇಹಿತರ, ಒಡನಾಡಿಗಳ ಅಭಿಪ್ರಾಯಗಳಿವೆ. ಪತ್ರಿಕೆಗಳು ಬರೆದ ರಾಜಕೀಯ ನಡೆಗಳ ವರದಿಗಳಿವೆ(ಅವರ ಶ್ರೀಮತಿಯವರು ಕತ್ತರಿಸಿಟ್ಟಿದ್ದು). ಅವಿಸ್ಮರಣೀಯ ಭಾವಚಿತ್ರಗಳಿವೆ.


ಉತ್ತಮ ಪುರುಷ ಹಾಗೂ ಪ್ರಥಮ ಪುರುಷದಲ್ಲಿ ಕೃತಿಯ ನಿರೂಪಣೆ ಸಾಗುತ್ತದೆ.


*
ವೈಯಕ್ತಿಕ ನಿಂದನೆ, ಸುಳ್ಳನ್ನೇ ಸತ್ಯವಾಗಿಸುವುದು, ಧರ್ಮಾಧಾರಿತ/ಜಾತ್ಯಾಧಾರಿತ ರಾಜಕೀಯ, ಕುಟುಂಬ ರಾಜಕಾರಣ, ಭ್ರಷ್ಟಾಚಾರ - ಇಂತಹವುಗಳನ್ನೇ 'ರಾಜಕೀಯ' ಎಂದು ನಂಬಿ ಬದುಕಬೇಕಾದ ಕಾಲದಲ್ಲಿ ಎಂಸಿಎನ್  ಗಮನಾರ್ಹರಾಗುತ್ತಾರೆ:

* ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನೇ ಪಡೆಯದ, ಆ ಪಕ್ಷದ ಸಿದ್ಧಾಂತಗಳನ್ನು ವಿರೋಧಿಸುವ ವ್ಯಕ್ತಿಗೆ ಚುನಾವಣೆಯ ಉಮೇದುವಾರಿಕೆ ಲಭಿಸಿ, ಗೆದ್ದು ಶಾಸಕನಾಗುವುದು, ಮಂತ್ರಿಯಾಗುವುದು ಕೌತುಕವಲ್ಲದೆ ಮತ್ತೇನು!

* ತಮಗೆ ಅಷ್ಟಾಗಿ ಪರಿಚಯವಿರದಿದ್ದ ಜಿಲ್ಲಾಧಿಕಾರಿ ವಿದ್ಯಾಶಂಕರ್ ಅವರನ್ನು ಪ್ರಾಮಾಣಿಕ ಅಧಿಕಾರಿ ಎಂಬ ಕಾರಣದಿಂದ ಇಲ್ಲಿ ನೆನಪಿಸಿಕೊಂಡಿದ್ದಾರೆ.

* ಎ.ಕೆ. ಸುಬ್ಬಯ್ಯ ಅವರ ಪಕ್ಷದ ವಿರೋಧಿಯಾಗಿದ್ದರೂ, ವ್ಯಕ್ತಿಗತ ನೆಲೆಯಲ್ಲಿ ಅವರನ್ನು ಚುನಾವಣೆಯ ಸಂದರ್ಭದಲ್ಲಿ ಬೆಂಬಲಿಸುತ್ತಾರೆ.


* ಜನರಲ್ ತಿಮ್ಮಯ್ಯ ಪ್ರತಿಮೆ ನಿರ್ಮಾಣದ ರೂವಾರಿಯಾದರೂ ಶಿಲೆಯಲ್ಲಿ ತಮ್ಮ ಹೆಸರು ಬರದಂತೆ ನೋಡಿಕೊಳ್ಳುತ್ತಾರೆ.
(ಮತ್ತು ಆ ದಿನ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರು ಗೈರುಹಾಜರಾದ ಕುರಿತು ತಲೆಕೆಡಿಸಿಕೊಳ್ಳುತ್ತಾರೆ)

* ನಿಷ್ಠಾವಂತ IAS ಅಧಿಕಾರಿ ವಾಸುದೇವ್ ಅವರಿಗೆ ನ್ಯಾಯಾಂಗ ನಿಂದನೆಯ ಆರೋಪದಲ್ಲಿ ಒಂದು ತಿಂಗಳ ಸೆರೆವಾಸವಾದ ಕುರಿತು ನೊಂದುಕೊಳ್ಳುತ್ತಾರೆ:

"ನ್ಯಾಯಾಂಗಗಳಲ್ಲಿ, ಉನ್ನತ ಸ್ಥಾನದಲ್ಲಿ ಕುಳಿತಿರುವ ಹಲವು ನ್ಯಾಯಾಧೀಶರು ಕಾನೂನಿಗಿಂತಲೂ ತಮ್ಮ ವೈಯಕ್ತಿಕ ವಿಚಾರಗಳಿಗೆ ಹೆಚ್ಚು ಮಹತ್ವ ನೀಡುತ್ತಾರೆ. ಇವರ ವೈಯಕ್ತಿಕ ವಿಚಾರಗಳು ಕಾನೂನಿನ ಮೇಲೆ ಸವಾರಿ ಮಾಡುತ್ತವೆ.."

* ಕಾಂಗ್ರೆಸ್ ಸಿದ್ಧಾಂತಗಳಿಗೆ ವಿರೋಧಿಯಾಗಿ ಅರಸು ಕಾಂಗ್ರೆಸ್ ಅನ್ನು ಮಾತ್ರ ಬೆಂಬಲಿಸುತ್ತಾರೆ. ತಮ್ಮ ತತ್ತ್ವ ಸಿದ್ಧಾಂತಗಳಿಗೆ ಬದ್ಧರಾಗುತ್ತಾರೆ.

* ಜಾತ್ಯತೀತ ನಿಲುವು, ಸಮಾಜವಾದಿ ಚಿಂತನೆ, ಕಮ್ಯೂನಿಸ್ಟ್ ವಿಚಾರಧಾರೆಗಳ ಮೇಲೆ ಒಲವು- ಹೀಗೆ ವಿಚಾರಗಳ ಬಲವಿರುವ ರಾಜಕಾರಣಿಯಾಗುತ್ತಾರೆ. ಜನಸಂಘದ ವಿರೋಧಿಯಾದರೂ ಉತ್ತಮಾಂಶಗಳನ್ನೂ ಗುರುತಿಸುತ್ತಾರೆ (ಬದಲಾಯಿಸಿಕೊಳ್ಳಬೇಕಾದದ್ದನ್ನೂ).

* ಅಪರಿಚಿತ ವ್ಯಕ್ತಿಯ ಪತ್ರಕ್ಕೂ ಸ್ಪಂದಿಸಿ ನ್ಯಾಯಕೊಡಿಸುತ್ತಾರೆ.

* ಅರಣ್ಯ ಹಾಗೂ ಕಾನೂನು ಮಂತ್ರಿಯಾಗಿದ್ದಾಗ ಅವರು ಮಾಡಿದ ಸುಧಾರಣಾ ಕ್ರಮಗಳು.

ಏಳು ಮುಖ್ಯಮಂತ್ರಿಗಳನ್ನು ಕಂಡಿರುವ ನಾಣಯ್ಯ ಅವರು, ಅವರೆಲ್ಲರ  ಕುರಿತು ಹೇಳುವಾಗ ಗ್ರಹೀತರಾಗುವುದಿಲ್ಲ; ಮುಚ್ಚಿಡುವುದಿಲ್ಲ. 

ಇನ್ನೂ ಹತ್ತು ಹಲವು.
*
ಎಂಸಿಎನ್ ಬಗೆಗಿನ ಈ ಕೃತಿಯ ವಿವರಗಳು ಅವರೊಬ್ಬರದೇ ಆಗಿರದೇ ಮೂರು ದಶಕಗಳ ಕರ್ನಾಟಕದ ರಾಜಕೀಯ ಇತಿಹಾಸದ ಚಿತ್ರಣವಾಗಿದೆ. ಪ್ರಸ್ತುತ ರಾಜಕೀಯ ಸ್ಥಿತಿಗತಿಗಳೆದುರು ಇಟ್ಟು ಅಳೆದು ನೋಡಲು ಈ ಕೃತಿ ನೆರವಾಗುತ್ತದೆ . ಹಾರ ತುರಾಯಿಗಳನ್ನು ಹಾಕಿಸಿಕೊಳ್ಳದೆ, ಹಿಂಬಾಲಕರೊಂದಿಗೆ ತೆರಳದೆ, ದ್ವೇಷವನ್ನು ಬಿತ್ತದೆ ಬೆಳೆದ ಎಂಸಿಎನ್,   ನಮ್ಮ ತಲೆಮಾರಿಗೆ ನಿಜದ ರಾಜಕಾರಣದ-ರಾಜಕಾರಣಿಗಳ ಅಗತ್ಯತೆಯನ್ನು ನೆನಪಿಸುತ್ತಾರೆ.


ಭಾರದ್ವಾಜರ ಕೃತಿಗಳ ಪೈಕಿ ಹೆಚ್ಚು ಶ್ರಮವಹಿಸಿ ತಂದಿರುವ ಕೃತಿಯಿದು. ಓದಿಗೆ ಮುದ್ರಣ ದೋಷದ ತೊಡಕುಗಳಿಲ್ಲ. ಎಂಸಿಎನ್ ಅವರ ಆದರ್ಶಗುಣಗಳ ಅನುಸರಣೆ ಯುವ ರಾಜಕಾರಣಿಗಳು ಮಾಡಬೇಕಿದೆ. ಪೂರ್ವಗ್ರಹಗಳಿಲ್ಲದೆ ಎಲ್ಲರೂ ಈ ಕೃತಿಯನ್ನು ಓದಬೇಕಿದೆ.
*
ಕಾಜೂರು ಸತೀಶ್

Saturday, August 6, 2022

'ಹನಿ'ಗಳ ಮುತ್ತಿನಹಾರ

ಮೇಜರ್ ಡಾ| ಕುಶ್ವಂತ್ ಕೋಳಿಬೈಲು ಅವರ 'ಮುತ್ತಿನಹಾರ' ಹನಿಗವನಗಳ ಸಂಕಲನವು ಪ್ರತಿಕ್ರಿಯಾತ್ಮಕ ಮಾದರಿಯದು. 'ಆ ಕ್ಷಣದ ವರ್ತಮಾನ'ದಲ್ಲಿ ಸೃಷ್ಟಿಯಾದ ಹನಿಗವನಗಳವು.


ಎಂ ಜಿ ರೋಡಿನಲ್ಲಿ
ಟ್ರಾಫಿಕ್ ಜಾಮಿದೆ
ಗಾಂಧಿ ತೋರಿಸಿದ ಹಾದಿ
ಇಂದಿಗೂ ಖಾಲಿಯಿದೆ
*
ದೇವರು
ಸ್ವರ್ಗದಲ್ಲಿ ಆರಾಮದಲ್ಲಿದ್ದಾನೆ
ಮನುಷ್ಯ ಭೂಮಿಯನ್ನು
ನರಕ ಮಾಡುತ್ತಿದ್ದಾನೆ
*
ಹೊಸಾ ದೇವರುಗಳು
ಧರ್ಮ ಸಂದೇಶಗಳು ಇನ್ನು ಬೇಡ
ಕೊಲ್ಲಲು ಜನರೇ ಉಳಿದಿಲ್ಲ
ಪ್ರಪಂಚಕ್ಕೆ ಬೆಂಕಿ
ಹಾಕಿದ ನಂತರವೂ
ಹೃದಯದೊಳಗೆ ಬೆಳಕು ಏಕಿಲ್ಲ?!
*
ಪಾಸು ಬೇಕೆಂದು ಜನರು
ಬಹಳ ಸರ್ಕಸ್ ಮಾಡಿದ್ದಾರೆ
ಟೋಲ್ಗೇಟಿನಲ್ಲಿ ನೋಡಿದೆ
ತಿಮ್ಮಯ್ಯಜ್ಜನನ್ನೂ ಹೊರಗೆ ನಿಲ್ಲಿಸಿದ್ದಾರೆ.


ಇಂತಹ ಸಾರ್ವಕಾಲಿಕ ಸ್ವರೂಪವುಳ್ಳ ಹನಿಗಳೊಂದಿಗೆ ಒಂದು ನಿರ್ದಿಷ್ಟ ಕಾಲಮಾನದ ಕುರಿತ ಪ್ರತಿಕ್ರಿಯೆಯ ಹನಿಗಳೂ ಈ ಸಂಕಲನದಲ್ಲಿವೆ:

ಟೊಮೆಟೋ
ಜಾಸ್ತಿ ಬೀಗಬೇಡ
ಆಲೂಗಡ್ಡೆಯ ಮೇಲೆ ರೇಗಬೇಡ!
*
ಏಬಿಡಿಗೆ ಒಂದು ಬಿರಿಯಾನಿ
ಉಳಿದವರಿಗೆ ಹೇಳಿ ಕುಷ್ಕಾ
ಆರ್ಸಿಬಿ ಪಂದ್ಯ ಗೆಲ್ಲುವುದಿಲ್ಲ
ನೋಡಲು ಬಂದರೆ ಅನುಷ್ಕಾ!
*
ರಾಖಿ ಸಾವಂತ್
ರಾಖಿ ಕಟ್ಟುವುದಿಲ್ಲ
ಅವಳಿಗೆ ಹುಡುಗರ
ಶಾಪ ತಟ್ಟುವುದಿಲ್ಲ!
*

ಈ ಹನಿಗಳಲ್ಲಿ pun, funಗಳಿವೆ; Punchಗಳಿವೆ; ಒಳನೋಟಗಳಿವೆ. ವರ್ತಮಾನವನ್ನು ಪದ್ಯಕ್ಕೊಳಪಡಿಸುವ ತುರ್ತಿನಲ್ಲಿ ಇವು ಹುಟ್ಟಿವೆ.

ಹಾಗೆಯೇ, ನಿರ್ದಿಷ್ಟ ಘಟನೆ/ ಕಾಲಘಟ್ಟದ ಬಗೆಗಿನ ಪ್ರತಿಕ್ರಿಯೆಯು 'ಸದಾ ಸಮಕಾಲೀನ' ಅಥವಾ ಸಾರ್ವಕಾಲಿಕ ಲಕ್ಷಣವನ್ನು ಪಡೆದುಕೊಳ್ಳಬೇಕಿದೆ.
*
ಕಾಜೂರು ಸತೀಶ್ 

Tuesday, July 26, 2022

ನಮ್ಮೊಳಗೆ ಉಳಿದ ರಂಜನ್ ಸರ್

ಒಂದು ದೀರ್ಘಾವಧಿಯ(ಹೆಚ್ಚು ನೆನಪಲ್ಲುಳಿದಿರುವುದರಿಂದ ಅದು ದೀರ್ಘವಾದ ಬದುಕೆನಿಸಿರುವುದು) ನನ್ನ ಬದುಕಿನಲ್ಲಿ 'ಕಚೇರಿ' ಎಂಬ ಪದವು corruptionನ ಅವತಾರವಾಗಿಯೇ ಉಳಿದಿದೆ. 
*

ಅದಕ್ಕೆ ಅಪವಾದವಾದವೊಂದು ನನ್ನ ಅನುಭವಕ್ಕೆ ಬಂದಿರುವುದು ನನ್ನ ಭಾಗ್ಯ.
ಕಳೆದೆರಡು ವರ್ಷಗಳಲ್ಲಿ ಸೋಮವಾರಪೇಟೆ ಬಿಇಓ ಕಚೇರಿಯಲ್ಲಿ ಕಚೇರಿ ಸಹಾಯಕರಾಗಿ ಸೇವೆ ಸಲ್ಲಿಸಿ ಪ್ರಾಮಾಣಿಕತೆಯ ಉತ್ತುಂಗದಲ್ಲಿರುವಾಗಲೇ ವರ್ಗಾವಣೆಗೊಂಡು ನಮ್ಮೊಳಗೆ ಉಳಿದ ರಂಜನ್ ಸರ್ ಅವರ ಕುರಿತ ಮಾತುಗಳಿವು.


'ತಮ್ಮ ಪಾಡಿಗೆ ತಾವು' ಇದ್ದುಕೊಳ್ಳುತ್ತಲೇ ಮಾಡಬೇಕಾದ ಕೆಲಸಗಳನ್ನು ನಮ್ಮ ಅರಿವಿಗೆ ಬಾರದಂತೆ ಮುಗಿಸಿ ಅದನ್ನು ಮುಗಿಸಿರುವ ಕುರಿತೂ ಮಾತನಾಡದ ಅವರ ಮುಗ್ಧತೆಗೆ ಹಲವಾರು ಬಾರಿ ಮನಸ್ಸಿನಲ್ಲೇ ಬೆನ್ನುತಟ್ಟಿದ್ದೇನೆ. ಅವರು ಇಲ್ಲಿರುವಾಗಲೇ ಅದನ್ನು ಬರೆಯಬೇಕು ಎಂದುಕೊಂಡಿದ್ದೆ. ಅಷ್ಟರಲ್ಲೇ ಅವರು ವರ್ಗಾವಣೆಗೊಂಡರು!


ಈ ಅಲ್ಪ ಬದುಕನ್ನು ಸಾರ್ಥಕ ಪಡಿಸಿಕೊಳ್ಳುವುದು ಹೀಗೇ ಅಲ್ಲವೇ?
*
ಕಾಜೂರು ಸತೀಶ್

Sunday, July 17, 2022

ಈ ಕೊರಳನುಳಿಸು ಪ್ರಭುವೇ..



ಕಳೆದ ತಿಂಗಳು. ಹತ್ತಾರು ಬಾರಿ ಕರೆ ಪ್ರಯತ್ನಿಸಿದ ಒಂದು ಸಂಖ್ಯೆಯಿಂದ 'ನಿಮಗೆ ಒಂದು ಪ್ರಶಸ್ತಿ ಬಂದಿದೆ, ದಯವಿಟ್ಟು ಕರೆ ಮಾಡಿ' ಎಂಬ ಸಂದೇಶ ಬಂದಿತ್ತು.

 'ಯಾವ ಪ್ರಶಸ್ತಿ' ಮರುಪ್ರಶ್ನೆ.

 "......................"

ಮೊದಲನೆಯದಾಗಿ -ನನಗೆ ಕಿರಿಕಿರಿ ಉಂಟುಮಾಡಿದ ಕ್ಷೇತ್ರವದು. ಅಲ್ಲಿ 'ಸಾರಥಿ'ಯಾಗಲಾರೆ. 

ಎರಡನೆಯದಾಗಿ - ಕೊರಳಿಗೆ ಹಾರ, ಹೆಗಲಿಗೆ ಬಟ್ಟೆ, ಮನಸ್ಸಿಗೆ ಪ್ರಾಣಸಂಕಟ!

ಎಂದಿನಂತೆ ಮುಲಾಜಿಲ್ಲದೆ 'ಬೇಡ' ಎಂದೆ.
*****

ಮತ್ತೊಂದು ಆಮಂತ್ರಣ. 

ಹೋಗಿದ್ದರೆ ಕೊರಳಿಗೆ ಹಾರ ಹೆಗಲಿಗೆ ಬಟ್ಟೆ ಖಾತ್ರಿ. 

ತಪ್ಪಿಸಿಕೊಂಡೆ.
****



(ಚಿತ್ರಕೃಪೆ- ಅಂತರ್ಜಾಲ)
                                 ****

ಮಗದೊಂದು! 

ಬದುಕಿದ್ದಾಗ ಸರಿಯಾಗಿ ನೋಡಿಕೊಳ್ಳದವರು ತೀರಿಕೊಂಡ ಮೇಲೆ ಅದ್ದೂರಿ ತಿಥಿ ಮಾಡುತ್ತಾರೆ. 

ಹಾಗೆಯೇ ಒಂದು ಸಮಾರಂಭ! 

ಬೇಕೆಂದೇ ಹೋಗಲಿಲ್ಲ! ಹೋಗಿದ್ದರೆ ಎಷ್ಟೋ ದಿನಗಳು ನಿದ್ದೆಯಿರುತ್ತಿರಲಿಲ್ಲ.
*

ಕಪಟ ಗೌರವಗಳಿಂದ  ಈ ಕೊರಳನುಳಿಸು ಪ್ರಭುವೇ



Friday, July 15, 2022

ಕಣ್ಣಲ್ಲಿಳಿದ ಮಳೆಹನಿಗಳ ಕುರಿತು


'ಕಣ್ಣಲ್ಲಿಳಿದ ಮಳೆಹನಿ' ಕವನ ಸಂಕಲನ
ನಿಮ್ಮದೇ ಅಲ್ವಾ. ತಿಳಿದು ತುಂಬಾ ಖುಷಿಯಾಯ್ತು.
ನಿಮ್ಮ ಕವನಗಳು ತುಂಬಾ ನೈಜವಾಗಿವೆ, ಎಲ್ಲೂ ದೊಡ್ಡ ದೊಡ್ಡ ಪದಗಳ ಪ್ರದರ್ಶನ ಮಾಡದೆ ನೈಜ ಅನ್ನಿಸೊ ಹಾಗಿದೆ ನಿಮ್ಮ ಬರಹ. ಕವನಗಳಲ್ಲಿ Mild satirical nature(ರೊಟ್ಟಿ..ಮ್ಯಾನ್ಹೋಲಿನಲ್ಲಿ ಸತ್ತ ಕವಿತೆ etc..) ಇದೆ ಅದು ತುಂಬಾ ಚೆನ್ನಾಗಿ ಮೂಡಿ ಬಂದಿದೆ.

ನಿಮ್ಮ ಈ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಬಂದಿದ್ದೆ.
ನಿಮ್ಮನ್ನ ನೋಡಿದ ನೆನಪು ಈಗ ಬಂತು.
ನಿಮ್ಮ ಬರಹಗಳಿಗೆ ಒಳ್ಳೆಯದಾಗಲಿ. ಇನ್ನಷ್ಟು ಬರಹಗಳು ಹೀಗೆ ಬರಲಿ.
ಶುಭಾಶಯ ನಿಮಗೆ💐💐
*
ಸುವರ್ಣ ಚೆಳ್ಳೂರು

ಕೂರ್ಗ್ ರೆಜಿಮೆಂಟ್ - ಬಂದೂಕು ಹಿಡಿದವರ ನಾಡಿಮಿಡಿತ


ಮೇಜರ್ ಡಾ| ಕುಶ್ವಂತ್ ಕೋಳಿಬೈಲು , ಇವರು ಕೊಡಗಿನ ಭಾಗಮಂಡಲದವರು. ಸೇನೆಯಲ್ಲಿ ಮೇಜರ್ ಆದ ಬಳಿಕ ನಿವೃತ್ತಿ ಪಡೆದು ಈಗ ಮಡಿಕೇರಿಯ Kodagu Institute of Medical Scienceನಲ್ಲಿ ಮಕ್ಕಳ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆಸಲ್ಲಿಸುತ್ತಿರುವವರು. ಕೂರ್ಗ್ ರೆಜಿಮೆಂಟ್ , ಕಾವೇರಿ ತೀರದ ಕಥೆಗಳು, ಮುತ್ತಿನಹಾರ - ಇವರ ಪ್ರಕಟಿತ ಕೃತಿಗಳು.


'ಕೂರ್ಗ್ ರೆಜಿಮೆಂಟ್', ಮೇಜರ್ ಡಾ| ಕುಶ್ವಂತ್ ಕೋಳಿಬೈಲು ಅವರ ಪುಟ್ಟಪುಟ್ಟ 12 ಕತೆಗಳಿರುವ ಮೊದಲ ಕಥಾಸಂಕಲನ.
*
ಮುಖ್ಯವಾಗಿ ಎರಡು ಕಥಾಮಾದರಿಗಳು ನಮ್ಮ ಎದುರಿಗಿವೆ: ೧. ಹೇಳುವ ಮೂಲಕ ಮತ್ತೊಂದು ಅರ್ಥದ ನೆಲೆಗೆ ಜಿಗಿಯುವ, ಬೆಳೆಯುವ ಕತೆಗಳು; ಅಧ್ಯಯನಕಾರರಿಗಷ್ಟೇ ಅರ್ಥವಾಗುವ ಕತೆಗಳು.
೨. ಸ್ವಾರಸ್ಯಕರವಾಗಿ ಕೇಳಿಸಿಕೊಳ್ಳುವ, ಯಾರಿಗೂ ಅರ್ಥವಾಗುವ, 'ಕಥಾಂತ್ಯ'ವಿರುವ ಕತೆಗಳು; ಜನಪ್ರಿಯ ಮಾದರಿಯ ಕತೆಗಳು.

'ಕೂರ್ಗ್ ರೆಜಿಮೆಂಟ್', ಎರಡನೆಯ ಮಾದರಿಯವು




ಸೈನ್ಯ , ನಿವೃತ್ತಿಯ ಬದುಕು, ಸೈನಿಕರ ವೃದ್ಧ ತಂದೆ-ತಾಯಿಯರ ಬದುಕು, ಯುವ ಸೈನಿಕರ ಪ್ರೇಮ ಪ್ರಸಂಗಗಳು, ಸೈನಿಕರ ಪತ್ನಿಯರ ಬದುಕು, ನಿವೃತ್ತಿಯ ನಂತರದ ಕೃಷಿಕ ಬದುಕು, ಬೇಟೆಯ ಪ್ರಸಂಗಗಳು- ಇವುಗಳ ಸುತ್ತ ಸಾಗುವ ಕತೆಗಳಿವು.

ಸೈನಿಕರ ಬದುಕಿನಲ್ಲಿ ಎರಡು ಬಗೆಯ alien ಆದ ಭಾವಗಳಿರುತ್ತವೆ. ೧. ನಿವೃತ್ತಿ ಹೊಂದಿ ಮನೆಗೆ ಮರಳುವ ತವಕ, ೨. ಮನೆಗೆ ಹಿಂತಿರುಗಿದ ನಂತರ ಕಾಡುವ ಸೈನ್ಯದ ನೆನಪುಗಳು. ಇದು ಜಗತ್ತಿನ ಎಲ್ಲಾ ಸೈನಿಕರು ಎದುರಿಸುವ ಸಾಮಾನ್ಯ ಸಂಗತಿಗಳು. ಆದರೆ, ಸೈನಿಕನೊಬ್ಬನ ಸಾಂಸ್ಕೃತಿಕ ಬದುಕು ಇವುಗಳನ್ನು ಅನುಭವಿಸುವ ಕ್ರಮದಲ್ಲಿ ಭಿನ್ನತೆಗಳನ್ನು ತರುತ್ತವೆ. ಕೊಡಗಿನ ಕೊಡವ/ಅರೆಭಾಷಿಕ ನಿವೃತ್ತ ಸೈನಿಕನ ಅನುಭವವು ಅಲ್ಲಿಯೇ ಇರುವ ಕೃಷಿಕನಲ್ಲದ ಸೈನಿಕನ ಬದುಕಿಗಿಂತ ಭಿನ್ನವಾಗಿರುತ್ತದೆ.


ಈ ಕತೆಗಳು ಕೂರ್ಗ್ ಜನಪದವನ್ನು ನೆನಪಿಗೆ ತರುತ್ತವೆ( ದಕ್ಷಿಣ ಕೊಡಗಿನ ಜನಪದ!)(ಸಮಕಾಲೀನ ಕನ್ನಡದ ಕವಿತಾ ರೈ ಅವರ ಕತೆಗಳಲ್ಲಿ ಕೂರ್ಗ್ ಜನಪದವನ್ನು ಗುರುತಿಸಬಹುದು). ಅದರಲ್ಲೂ ಭಾಗಮಂಡಲವೆಂಬ 'ಕೇಂದ್ರ'ದ'ದ ಮೇಲಿನ ಸಾಂಸ್ಕೃತಿಕ ಕಾಳಜಿ ಕತೆಗಾರರಿಗೆ ತುಂಬಾ ಇದ್ದಂತಿದೆ. ಈ ನೆಲದ ನೈಸರ್ಗಿಕ ಚೆಲುವಿನ ವರ್ಣನೆ ಎಲ್ಲೂ ಕಾಣುವುದಿಲ್ಲ. ಬದಲಿಗೆ ಪ್ರಾದೇಶಿಕ ಅನನ್ಯತೆ, ಜೀವನ ವಿಧಾನದ ಮೇಲೆ ಪಾತ್ರಗಳು ಆಸ್ಥೆವಹಿಸುತ್ತವೆ.

ಕತೆಹೇಳುವುದರಲ್ಲಿಯೇ ಸಂಭ್ರಮಿಸುವ ಕತೆಗಾರರಿಗೆ ಸಾಹಿತ್ಯದ ಗಂಭೀರ ವಲಯವು ಬಯಸುವ ಫಿಲಾಸಾಫಿಕಲ್ ಥಿಯರಿ/ಸಂಗತಿಗಳನ್ನು ತಂದೊಡ್ಡುವ ಆಕಾಂಕ್ಷೆಗಳಿಲ್ಲ. ಎಲ್ಲಕ್ಕೂ ಮಿಗಿಲಾಗಿ,ಇವು ಸೈನಿಕರ ಜೀವನದ ವೈಭವೀಕರಣವಾಗಿಯಷ್ಟೇ ಉಳಿಯದೆ ಒಪ್ಪಿಕೊಳ್ಳುವ ಕಥಾವಾಸ್ತವವನ್ನು ಆಗುಮಾಡಿಕೊಳ್ಳುತ್ತವೆ. ಸ್ವಿಫ್ಟ್ ತನ್ನ ಗಲಿವರ್ಸ್ ಟ್ರಾವಲ್ಸ್ ಕತೆಯನ್ನು ಪುಟ್ಟ ಮಕ್ಕಳಿಂದ ಆದಿಯಾಗಿ ಗಂಭೀರ ಓದುಗರಿಂದಲೂ ಓದಿಸಿಕೊಳ್ಳುತ್ತಾರೆ. ಹಾಗೆ ಯಾರು ಬೇಕಾದರೂ ಓದಬಹುದಾದ ಮತ್ತು ಕೇಳಿಸಿಕೊಳ್ಳಬಹುದಾದ ಕತೆಗಳಿವು.
*

                    ಕಾಜೂರು ಸತೀಶ್

Sunday, July 10, 2022

ಅವನು ಹೊರಟುಹೋದ!

ಅವನು ಈ ಸಂಜೆ ಹೋಗಿಬಿಟ್ಟ.

ತುಸು ಮೊದಲು ನನ್ನ ಮುಖವನ್ನೇ ನೋಡುತ್ತಿದ್ದ. ಬೈಯ್ಯುತ್ತಾರೆಂದು ಹೆದರಿ ಔಷಧಿ ಕುಡಿದ. 'ನೀರು ಬೇಕಾ?' ಎಂದಾಗ ಮತ್ತೆ ಮುಖವನ್ನೇ ನೋಡಿದ. ಹೊಟ್ಟೆತುಂಬುವಷ್ಟು ಕುಡಿದ.

ಆ ತಿಂಡಿ ಎಂದರೆ ಅಷ್ಟು ಇಷ್ಟ ಅವನಿಗೆ. ಅಡುಗೆ ಮನೆಯಿಂದ ವಾಸನೆ ಬಂದರೆ ಕೇಳಿ ತಿನ್ನುತ್ತಿದ್ದ. ಈ ಸಂಜೆಯೂ ಅದೇ ತಿಂಡಿ ಮಾಡಿದ್ದರು ಅಮ್ಮ. ಅವನು ಕೇಳಲಿಲ್ಲ. ಒಂದೆರಡು ಸಣ್ಣ ತುಂಡುಗಳನ್ನು ತಿಂದು ಮತ್ತೆ ಬೇಡವೆಂದ.

ಕೆಲವು ದಿನಗಳಿಂದ ಅವನ ಧ್ವನಿ ಹೊರಟುಹೋಗಿತ್ತು. ವೈದ್ಯರನ್ನು ಕರೆಸಿದಾಗ ಅವರನ್ನೇ ಗದರಿಸಿ ಕಳುಹಿಸಿದ್ದ.

ನಿಧಾನಕ್ಕೆ ಊಟಬಿಟ್ಟ. ಮೂರು ಹೊತ್ತು ನಾನ್ವೆಜ್ ಇಲ್ಲದೆ ಏನೂ ತಿನ್ನುವವನಲ್ಲ . ಅದೂ ಬೇಡವೆಂದ.

ಇಡೀ ದಿನ ಮಲಗಿದ್ದಲ್ಲೇ ಇದ್ದ. ಹಾಗೆಂದು ಒಂದು ಎರಡು ಅಲ್ಲೇ ಮಾಡಿಕೊಳ್ಳುವವನಲ್ಲ. ಅದನ್ನೆಲ್ಲ ತಡೆದುಕೊಂಡೇ ಇದ್ದ. ಅಥವಾ ಮಧ್ಯರಾತ್ರಿ ಯಾರಿಗೂ ತಿಳಿಯದಂತೆ ಹೋಗಿಬರುತ್ತಿದ್ದನೋ ಗೊತ್ತಿಲ್ಲ.

ಈ ಸಂಜೆ ಅವನು ಏನೂ ಮಾತನಾಡದೆ ನನ್ನ ಮುಖವನ್ನೇ ದಿಟ್ಟಿಸುತ್ತಿದ್ದಾಗ ನನ್ನ ಹೃದಯ ಕರಗುತ್ತಿರುವಂತೆ ಅನಿಸುತ್ತಿತ್ತು. 'ಸ್ವಲ್ಪ ಬಿಸಿಲು ಬಂದರೆ ಸರಿಯಾಗುತ್ತಾನೆ' ಅಮ್ಮ ಹೇಳುತ್ತಿದ್ದರು.

ನಿಜಕ್ಕೂ ಅವನು ಹೋದನೇ? ನಂಬಲಾಗುತ್ತಿಲ್ಲ ನನಗೆ.
*
೨೦೧೩ರಲ್ಲಿ ಅಪ್ಪ ಇದೇ ಊರಿನಿಂದ ಅವನನ್ನು ತಂದಿದ್ದರು. ಇಷ್ಟೇ ಇಷ್ಟಿದ್ದ ಅವನನ್ನು ನೋಡಿ 'ಇವನನ್ಯಾಕೆ ತಂದ್ರಿ!?' ಎಂದಿದ್ದೆ. ಆಮೇಲೆ ಅವನ ದುರ್ಬಲ ಕಾಲುಗಳನ್ನು ನೋಡಿ 'ಅಯ್ಯೋ.. ಬೇರೆ ಸಿಗ್ಲಿಲ್ವಾ' ಎಂದು ಕೇಳಿದ್ದೆ.


ಅಪ್ಪನ ಏಟು ತಿಂದು ಭಯದ ವಾತಾವರಣದಲ್ಲೇ ಬೆಳೆದ. ಕೂರು ಎಂದರೆ ಕೂರಬೇಕು, ನಿಲ್ಲು ಎಂದರೆ ನಿಲ್ಲಬೇಕು! ಹೊರಗೆ ಹೋಗಬೇಕೆಂದಿದ್ದರೆ ಒಂದೆರಡು ನಿಮಿಷಗಳಲ್ಲಿ ಹಿಂತಿರುಗಬೇಕು! ಅವನ ಧ್ವನಿಯೋ ಒಂದು ಶಬ್ದಕ್ಕೆ ಕಿವಿಯೇ ಒಡೆದುಹೋಗುವಷ್ಟು!


ಗಾಳಿಯಲ್ಲಿ ಎಸೆದ ಬಿಸ್ಕತ್ತನ್ನು ಬಾಯಲ್ಲಿ ಹಿಡಿಯುವುದು, ನೆಗೆಯುವುದು, ಬೇಟೆಯಾಡುವುದು, ಬಂದ ಅಪರಿಚಿತರನ್ನು ಗದರಿಸಿ ಓಡಿಸುವುದು, ಕಾಡಿಗೆ ತೆರಳುವಾಗ ಸಂಭ್ರಮದಿಂದ ಬರುವುದು, ಹಾವು,ಮೊಲಗಳನ್ನು ಅಟ್ಟಾಡಿಸುವುದು.. ಹೀಗೆ ಅವನು ಬೆಳೆದು ದೊಡ್ಡವನಾಗುತ್ತಿರುವಾಗಲೇ ಅಪ್ಪ ಹೊರಟುಹೋದರು.


ಅವನ ಜೊತೆಗಾರನೂ ಹೊರಟುಹೋದ. ತರುವಾಯ ಮತ್ತೊಬ್ಬನೂ.


ಇವನು ಅಮ್ಮನ ಜೊತೆಗಿದ್ದ. ಅವನೊಡನೆ ಮಾತನಾಡುತ್ತಾ ಅವನ ತುಂಟತನಗಳನ್ನು ಸಹಿಸುತ್ತಾ ಅವನು 'ಅಮ್ಮಾ' ಎನ್ನುವುದನ್ನು ಕೇಳಿ ಸಂಭ್ರಮಿಸುತ್ತಾ ಅಮ್ಮ ಇರುತ್ತಿದ್ದಳು.


ಒಂದು ಬೈಗುಳಕ್ಕೆ ಅವನು ಎಷ್ಟು ಹೆದರುತ್ತಿದ್ದ! ಅವನಿಗೆ ಎಷ್ಟು ಚೆನ್ನಾಗಿ ಭಾಷೆ ಬರುತ್ತಿತ್ತು. ಬೆಳಿಗ್ಗೆ ಏಳುವುದು ತಡವಾದರೆ ಕರೆಯುತ್ತಿದ್ದ. ಹಾವು ಬಂದರೆ ತಿಳಿಸುತ್ತಿದ್ದ. ಟ್ಯಾಪಿನಲ್ಲಿ ನೀರು ವ್ಯಯವಾಗುತ್ತಿದ್ದರೆ ಸೂಚನೆ ಕೊಡುತ್ತಿದ್ದ. ಆನೆ ಬಂದರೆ ಸದ್ದು ಮಾಡದೆ ಹೋಗಿ ಮಲಗಿಬಿಡುತ್ತಿದ್ದ. ಪಟಾಕಿಯ ಸದ್ದು ಕೇಳಿದರಂತೂ ನಾಪತ್ತೆ.



 ಒಂದು ಎಲೆ ಬಿದ್ದರೂ ಎಚ್ಚರಿಸುತ್ತಿದ್ದ. ಹಸಿವಾದರೆ, ನೀರಡಿಕೆಯಾದರೆ, ಬಿಸಿಲು ಹೆಚ್ಚಾದರೆ, ಮಳೆಯಾದರೆ, ಚಳಿಯಾದರೆ, ಮನೆಯಲ್ಲಿ ಜೋರಾಗಿ ಮಾತಾಡಿದರೆ ಅವನು ಸಿಗ್ನಲ್ ಕೊಡುತ್ತಿದ್ದ. ಅವನು ಇದ್ದಾಗ ಅಪರಿಚಿತರಿಗೆ ಪ್ರವೇಶವಿರಲಿಲ್ಲ.

ಮಗುವಿನಂತಿದ್ದ. 'ಡ್ಯಾನ್ಸ್ ಮಾಡು ಬಾ' ಎಂದರೆ ಉರುಳಾಡಿ ಕುಣಿಯುತ್ತಿದ್ದ.

ಅವನು ಹೋಗಿಬಿಟ್ಟ. ಎಷ್ಟು ಸುಖವಾಗಿ ಬಾಳಿದ! ಇನ್ನುಮುಂದೆ ಅದಕ್ಕೂ ಹೆಚ್ಚಿನ ಸುಖ ಅವನಿಗೆ!!


Thursday, July 7, 2022

ದುರುಳನೊಬ್ಬನನ್ನು ವಂಚಿಸಿದ ಕಥೆ!

ಕೆಲವು ವರ್ಷಗಳ ಹಿಂದಿನ ಘಟನೆ. ಅವನ ಕುರಿತಾದದ್ದು.

ಅವನು( ಮನುಷ್ಯತ್ವವೇ ಇಲ್ಲದವನಾದ್ದರಿಂದ ಈ ಸಂಬೋಧನೆ) ಯಾವುದೇ ಸಭೆ ಸಮಾರಂಭಗಳಲ್ಲಿ ಶಿಕ್ಷಕರನ್ನುದ್ದೇಶಿಸಿ ಹೇಳುತ್ತಿದ್ದಿದ್ದಿಷ್ಟೇ: " ನಿಮಗೆ ನಾವು ಸಂಬಳ ಕೊಡುವುದು ಯಾಕೆ ಗೊತ್ತಾ...?!"

ಮೂಲತಃ ಶಿಕ್ಷಕನಾಗಿದ್ದ ಆತ ಕೆಲಸ ಕಷ್ಟವೆಂದು ಕಚೇರಿಯಲ್ಲಿ ಬೀಡುಬಿಟ್ಟಿದ್ದ. ಎಲ್ಲರೂ ಅವನನ್ನು ಅಧಿಕಾರಿ ಎಂದೇ ಅಂದುಕೊಂಡಿದ್ದರು. ಹಣ ಮಾಡುವುದರಲ್ಲೂ ನಿಸ್ಸೀಮ!

ಆ ದಿನ ಸಂಜೆ ನಾಲ್ಕರ ವೇಳೆ ಒಂದು ಶಾಲೆಗೆ ಹೋಗಿದ್ದ. ಮುಖ್ಯಶಿಕ್ಷಕರು ಪುರುಷನಾದ ಕಾರಣ ಉಳಿದ ಮಹಿಳಾ ಶಿಕ್ಷಕರನ್ನು ಮನೆಗೆ ಕಳುಹಿಸಿದ. 'ಆ ವಹಿ ಕೊಡಿ ಈ ವಹಿ ಕೊಡಿ' ಎನ್ನುತ್ತಾ ಸಂಜೆ ಆರೂವರೆ ಆಯಿತು. ಇವನು ಇವತ್ತು ನನ್ನನ್ನು ಬಿಡುವುದಿಲ್ಲ ಎಂದುಕೊಂಡ ಆ ಮುಖ್ಯ ಶಿಕ್ಷಕರು 'ಈಗ ಬಂದೆ ಸರ್' ಎಂದು ಕಿರುಬೆರಳನ್ನೆತ್ತಿ ತೋರಿಸಿ ಹೊರಹೋದವರೇ main switch ಆಫ್ ಮಾಡಿ ಒಳಗೆ ಬಂದರು. ಒಳಗೆ ಕತ್ತಲಿದ್ದ ಕಾರಣ 'ಕ್ಯಾಂಡಲ್ ಕೊಡಿ' ಎಂದ. ಇಲ್ಲ ಎಂದಿದ್ದಕ್ಕೆ ನಿಧಾನಕ್ಕೆ ಕಚೇರಿಯಿಂದ ಹೊರಬಂದ!

ಆ ಸಮಯಕ್ಕೆ ಬಸ್ ಇಲ್ಲದ್ದರಿಂದ ಮುಖ್ಯ ಶಿಕ್ಷಕರು ಆಟೋವನ್ನೂ ಕರೆಸದೆ ನಾಲ್ಕು ಕಿಲೋಮೀಟರ್ ನಡೆಸಿಕೊಂಡು ಹೋದರು! ಅವನ ಗುಡಾಣ ಹೊಟ್ಟೆಯನ್ನು ಸ್ವಲ್ಪಮಟ್ಟಿಗೆ ಕರಗಿಸಿದ ಈ ಸ್ವಾರಸ್ಯವನ್ನು ಅವರೇ ನನಗೆ ಹೇಳಿದ್ದು.
*
ಒಂದೆರಡು ವರ್ಷಗಳ ನಂತರ ಕಚೇರಿಯ ಗೂಟ ಕಳಚಿ ಶಾಲೆಗೆ ಹೋಗಬೇಕಾದಾಗ ನೊಂದುಕೊಂಡರೂ, ಅಲ್ಲೂ ಅಧಿಕಾರಿಯಂತೆ ವರ್ತಿಸತೊಡಗಿದನಂತೆ! ಯಾರೂ ಅವನ ಮಾತು ಕೇಳದಿದ್ದಾಗ ಒಮ್ಮೆ ಬೇಗ ನಿವೃತ್ತಿ ಆಗಿದ್ದರೆ ಸಾಕು ಎಂದು ದೇವರಲ್ಲಿ ಬೇಡುತ್ತಿದ್ದನಂತೆ!
*
ಈಚೆಗೆ whatsapp ನೋಡುತ್ತಿದ್ದಾಗ ಯಾರೋ ಒಬ್ಬರು ಹಂಚಿಕೊಂಡಿದ್ದ statusನ ಪಟದಲ್ಲಿ ಹಾರ ಹಾಕಿಸಿಕೊಳ್ಳುತ್ತಿದ್ದವರ ಪೈಕಿ ಇವನೂ ಇದ್ದ.

ಜಗತ್ತಿನ ಚಿತ್ರ ಎಂದುಕೊಂಡೆ.
*
ಕಾಜೂರು ಸತೀಶ್

ಇಂಗ್ಲಿಷ್ ಎಂಬ ಅವಮಾನ ಮತ್ತು ವ್ಯಾಮೋಹ

ಯಾರಾದರೂ ಆಂಗ್ಲ ಭಾಷೆಯಲ್ಲಿ ಮಾತನಾಡುತ್ತಿದ್ದರೆ 'ಆಽ' ಎಂದು ಬಾಯಗಲಿಸಿ ನೋಡುತ್ತಿದ್ದೆವು. ಶಾಲೆಯಲ್ಲಿ ಆಂಗ್ಲ ಭಾಷೆಯನ್ನು ಕನ್ನಡದಲ್ಲೇ ಹೇಳಿಕೊಡುತ್ತಿದ್ದುದರಿಂದ ಇಂಗ್ಲಿಷ್ ನಮಗೆ ಅಪರೂಪದ ಭಾಷೆಯಾಗಿತ್ತು.

ಮನೆಯಲ್ಲೂ ಹಾಗೆಯೇ- ರೇಡಿಯೋದಲ್ಲಿ English News ಬಂತೆಂದರೆ ಆಫ್ ಮಾಡಬೇಕಿತ್ತು! 'ಏನದು ಕೊಂಯ್ಕೊಂಯ್, ಆಫ್ ಮಾಡು' ಎನ್ನುತ್ತಿದ್ದರು!

ಭಾಷೆಯನ್ನು ಸ್ವಯಂ ಕಲಿಯುವ ಪ್ರಕ್ರಿಯೆ(ನನ್ನೊಂದಿಗೆ ನಾನೇ ಮಾತಾಡಿಕೊಂಡು) ಬಾಲಿಶವೂ ಅಮಾನವೀಯವೂ ಆದದ್ದು. ಆದರೂ , ಅವಮಾನವನ್ನು ಮೀರಲು, ತುಸು ಆತ್ಮವಿಶ್ವಾಸವನ್ನು ಗಳಿಸಲು ನಾವು ಸ್ವಲ್ಪವಾದರೂ English ಕಲಿಯಬೇಕಿತ್ತು.
*
ನನ್ನ ಅದೃಷ್ಟವೋ ಏನೋ- ನಾನು ಒಂದನೇ ತರಗತಿಯಲ್ಲಿದ್ದಾಗ ಐದನೇ ತರಗತಿಯ ಇಂಗ್ಲೀಷ್ ಪಠ್ಯಪುಸ್ತಕದ ಪರಿಚಯವಾಯಿತು. ಹಾಗಾಗಿ , ಐದನೇ ತರಗತಿಗೆ ಹೋದಾಗ ತುಂಬಾ ಹೊಡೆಯುವ ಟೀಚರೊಬ್ಬರು ಇಂಗ್ಲೀಷ್ ಪಾಠ ಮಾಡಲು ಬಂದಾಗ ನನಗೆ ನಿಜಕ್ಕೂ ಖುಷಿ ಆಗಿತ್ತು!

ಆರನೆಯ ಇಯತ್ತೆಯ ಇಂಗ್ಲೀಷ್ ಪಾಠದಲ್ಲಿ ಒಂದು ಮಜಾ ಇರುತ್ತಿತ್ತು . ಮಧ್ಯಾಹ್ನದ ಅನಂತರದ ಮೊದಲ ಅವಧಿಯದು. ಹೋಟೆಲಿನಲ್ಲಿ ಊಟಮಾಡಿ ಒಂದು ಪ್ಯಾಕೆಟ್ ಏರಿಸಿಕೊಂಡು ಎಲೆ- ಅಡಿಕೆ ಜಗಿದು ಕಣ್ಣು ಕೆಂಪಗೆ ಮಾಡಿಕೊಂಡು ಬರುವಾಗ ಪಾಠಗಳನ್ನು ಮೊದಲೇ ಓದಿ ಡೈಜೆಸ್ಟಿನಲ್ಲಿ ಅರ್ಥ ತಿಳಿದುಕೊಂಡಿರುತ್ತಿದ್ದ ನನಗೆ ಖುಷಿಯೋ ಖುಷಿ. 'ಕತ್ತೆಗಳಾ, ದರ್ವೇಸಿಗಳಾ, ಬ್ಯಾವರ್ಸಿಗಳ ತಂದು ನಿಮ್ಮ..' ಎಂದು ಬೈಯ್ಯುತ್ತಾ ಉದ್ದ ಬೆತ್ತದಲ್ಲಿ ಬೀಳುವ ಏಟು ಇಂಗ್ಲೀಷ್ ಓದಲು ಬಾರದವರಿಗೆ ನರಕವಾಗಿತ್ತು.

ಏಳನೆಯ ಇಯತ್ತೆಯಲ್ಲಿ ಐದನೇ ತರಗತಿಯ ಅದೇ ಟೀಚರು ಇಂಗ್ಲೀಷ್ ಪಾಠಕ್ಕೆ. ಒಂದು ಪಾಠ ಒಂದು ಪದ್ಯ ಮುಗಿಸಿ ಕಿರು ಪರೀಕ್ಷೆ ಮಾಡಿ ಇಪ್ಪತ್ತಕ್ಕೆ ಹದಿನೈದು ಬಂದಿದ್ದರಿಂದ ಬಿಸಿಬಿಸಿ ಕಜ್ಜಾಯ ಕೂಡ ಕೊಟ್ಟ ಅವರಿಗೆ ಮರುದಿನವೇ ವರ್ಗಾವಣೆಯಾದಾಗ ಖುಷಿಪಟ್ಟಿದ್ದೆವು! ಆ ವರ್ಷ ಇಂಗ್ಲೀಷ್ ಪಾಠ ಮಾಡುವವರಿಲ್ಲದೆ ಡೈಜೆಸ್ಟೇ ನಮ್ಮ ಇಂಗ್ಲೀಷ್ ಮೇಷ್ಟ್ರಾಯಿತು. ಇನ್ನೇನು ಪಬ್ಲಿಕ್ ಪರೀಕ್ಷೆ ಬರಬೇಕು ಎನ್ನುವಾಗ ಆ ವಿಷಯವನ್ನು ಹಂಚಿಕೊಂಡಿದ್ದ ಮುಖ್ಯ ಶಿಕ್ಷಕರು ಬಂದು ವ್ಯಾಕರಣ ಪುಸ್ತಕದಲ್ಲಿದ್ದ Degrees of comparison ಬರೆಸಿ ಹೋಗಿದ್ದರು. ನಾವದನ್ನು ಉರುಹೊಡೆದುಕೊಂಡಿದ್ದೆವು!

ಎಂಟನೇ ತರಗತಿಗೆ ಬಂದಾಗ 'ಇಂಗ್ಲೀಷ್ ಪುಸ್ತಕ ತಕೊಂಡ್ಬಾ' ಎಂದು ಮೇಷ್ಟ್ರು ಹೇಳಿದಾಗ ಕಚೇರಿಯಲ್ಲಿದ್ದ ಅವರ ಪುಸ್ತಕವನ್ನು ತರುವಾಗ ಮೆಲ್ಲಗೆ ತೆರೆದು ನೋಡಿದ್ದೆ. ಅದರ ತುಂಬ ಪೆನ್ಸಿಲಿನಲ್ಲಿ ಬರೆದಿದ್ದ ಕನ್ನಡ ಅರ್ಥಗಳು! 'ಪಾಪ! ಮೇಷ್ಟ್ರಿಗೆ ಇಂಗ್ಲೀಷ್ ಬರುವುದಿಲ್ಲ' ಲೆಕ್ಕಹಾಕಿದೆ.
*
ಹೀಗೆ ಮುಂದುವರಿದ ನನ್ನ ಇಂಗ್ಲೀಷ್ ಕಲಿಕೆ ಕಡೆಗೂ ಗುರಿಮುಟ್ಟಲಿಲ್ಲ. ಯಾರಾದರೂ ಏನಾದರೂ ಕೇಳಿದರೆ ಉತ್ತರಿಸುವ ಹಿಂಸೆಗೆ ,ಅವಮಾನಕ್ಕೆ ಆ ರಾತ್ರಿಯ ನಿದ್ದೆಯೂ ಇಂಗ್ಲೀಷ್ ಪಾಲಾಗುತ್ತಿತ್ತು!

ತುಂಬಾ ಅವಮಾನವಾದ ಆ ದಿನವೊಂದಿದೆ. ಅವರು- "Did you get it?" ಎಂದರು. ನಾನು ತಲೆಯಾಡಿಸಿದರೆ ಒಳ್ಳೆಯದಿತ್ತು, ಬದಲಿಗೆ "I didn't got" ಎಂದೆ!! ಅವರು "Oh, you didn't get?!" ಎಂದರು.
ನನಗೆ ನನ್ನ ತಪ್ಪಿನ ಅರಿವಾಯಿತು!

ಅಂದಿನಿಂದ ಓದಿದೆ. ನನ್ನೊಡನೆ ಮಾತನಾಡಿಕೊಂಡೆ. ಸಾಹಿತ್ಯ , ತತ್ತ್ವಶಾಸ್ತ್ರ, ಎಲ್ಲವೂ ಇಂಗ್ಲೀಷಿನಲ್ಲಿ! ವ್ಯಾವಹಾರಿಕ ಇಂಗ್ಲೀಷ್ ಮಂಕಾದರೂ ದೊಡ್ಡ ದೊಡ್ಡ ಪದಗಳೂ, ವಿಚಾರಗಳೂ ಬರತೊಡಗಿದವು. ಮುಂದೆ ಇಂಗ್ಲೀಷ್ ಮೇಷ್ಟ್ರಾದೆ!


ಈಗ ಯಾವ ದೇಶದಲ್ಲಾದರೂ ಸರಿ, ಬದುಕಿ ಬರುವೆ!

*

ಕಾಜೂರು ಸತೀಶ್

Monday, July 4, 2022

ಶಿಕ್ಷೆ

'ಒಂದು ವೇಳೆ ನಾನು 'ಮರ ಬಿದ್ದು' ಸತ್ತರೆ ನನ್ನ ಕುಟುಂಬಕ್ಕೆ ಒಂದು ಬಿಡಿಗಾಸೂ ಸಿಗುವುದಿಲ್ಲ. ನನ್ನವ್ವನಿಗೆ ಲಂಚ ಕೊಟ್ಟು ಅವರನ್ನೆಲ್ಲಾ ಸಾಕುವ ಕಸುವಿಲ್ಲ'.

ಹೀಗೆ ಬರೆದು ಫೇಸ್ಬುಕ್ಕಿನಲ್ಲಿ ಹಂಚಿಕೊಂಡ ಆ ನೌಕರ . ಅವನನ್ನು ನಿಯಮಬಾಹಿರವಾಗಿ ಬೇರೆಡೆಗೆ ವರ್ಗಾಯಿಸಿದ್ದರು.

ಮರುದಿನ ಅವನನ್ನು ಬಂಧಿಸಲಾಯಿತು; ಮರಣದಂಡನೆ ಶಿಕ್ಷೆ ವಿಧಿಸಲಾಯಿತು
*

ಕಾಜೂರು ಸತೀಶ್ 

Thursday, June 30, 2022

ತಿಂದು ಬದುಕುವ ವೈಖರಿ

ಯಾಕೋ ಗೊತ್ತಿಲ್ಲ, ಫೋನ್ ಕಾಲ್ ಗಳೆಂದರೆ ನನಗಾಗುವ ಅಲರ್ಜಿ ಅಷ್ಟಿಷ್ಟಲ್ಲ.

ನನ್ನ ಫೋನ್ ಆನ್ ಆಗಿದೆಯೆಂದಿಟ್ಟುಕೊಳ್ಳಿ. ಬರುವ ಮೊದಲ ಕರೆ ಹಣದ ಬೇಡಿಕೆಯಾಗಿರುತ್ತದೆ. ಎರಡನೆಯ ಕರೆ ಅವರ ವೈಯಕ್ತಿಕ (ಅವರೇ ಮಾಡಬಹುದಾದ )ಕೆಲಸವನ್ನು ಮಾಡಿಕೊಡಿ ಎಂದಾಗಿರುತ್ತದೆ... ಮೂರನೆಯದು ತಮ್ಮ ಸಾಧನೆಯನ್ನು ಹೇಳಿಕೊಳ್ಳಲು ಕೊರೆಯುವವರಾಗಿರುತ್ತಾರೆ(ಅವೆಲ್ಲವನ್ನೂ ಕೇಳಿ ಕೇಳಿ ನನಗೆ ಬಾಯಿಪಾಠ ಆಗಿದ್ದರೂ ಮತ್ತೆ ಹೊಸದೆಂಬಂತೆ ಕೇಳಿಸಿಕೊಳ್ಳಬೇಕಾದ ದುಸ್ಥಿತಿ!)

ಹಣ ಪಡೆದುಕೊಳ್ಳುವವರು ಹಿಂತಿರುಗಿಸುವುದಿಲ್ಲ . ಆದರೆ ತಮಾಷೆ ಹಾಗೂ ಭಯಾನಕವಾದ ಸಂಗತಿಯೆಂದರೆ ಅವರನ್ನು ಕಂಡಾಗ ನಾವೇ ತಲೆಮರೆಸಿ ಹೋಗಬೇಕಾದ ಪರಿಸ್ಥಿತಿ. ಮತ್ತೆ ಬೇಡಿಕೆಯಿಟ್ಟರೆ?!

ಹಾಗೆ ಹಣಪಡೆದುಕೊಂಡವನೊಬ್ಬ ಮುಖವನ್ನು ಆಚೆ ತಿರುಗಿಸಿ ಹೋಗುತ್ತಿದ್ದ. ಇನ್ನು ಅವನು ಹಣ ಹಿಂತಿರುಗಿಸುವುದಿರಲಿ, ನನ್ನೊಂದಿಗೆ ಮಾತನಾಡುವುದೂ ಸಂದೇಹ!

ಅಕ್ಷರ ಕಲಿತು ಉದ್ಯೋಗ ಗಿಟ್ಟಿಸಿಕೊಂಡ ವ್ಯಕ್ತಿಗಳು 'ನನಗೊಂದು ಕವನ/ಕತೆ/ಪ್ರಬಂಧ/ಭಾಷಣ ಬರೆದುಕೊಡಿ' ಎಂದು ನಿರ್ಲಿಪ್ತವಾಗಿ ಹೇಳುವಾಗ ಮೊಬೈಲಿನಲ್ಲಿ block option ಸೃಷ್ಟಿಸಿದವನ ಪಾದದ ಛಾಯಾಪ್ರತಿ ಇಟ್ಟು ಪೂಜಿಸಬೇಕೆನಿಸುತ್ತದೆ!

ಫೋನ್ ಆಫ್ ಮಾಡಿಟ್ಟುಕೊಂಡರೆ ಸ್ನೇಹಿತರು ದೂರವಾಗುತ್ತಾರೆ!

*




ಕಾಜೂರು ಸತೀಶ್ 

Tuesday, April 19, 2022

ಕಣ್ಣಲ್ಲಿಳಿದ ಮಳೆಹನಿ- ವಿಜಯ ಕರ್ನಾಟಕ - ಪರಿಚಯ

ವಿಜಯ ಕರ್ನಾಟಕ ಪತ್ರಿಕೆಯು ಪ್ರಕಟಿಸಿದ ಕಣ್ಣಲ್ಲಿಳಿದ ಮಳೆಹನಿ ಸಂಕಲನದ ಪರಿಚಯ

Friday, March 18, 2022

ಬಾಲ್ಯದ ಉಡದಾರ

ಯುವ ಕತೆಗಾರ ಶರಣಬಸವ ಕೆ ಗುಡದಿನ್ನಿ ಅವರ ಉಡದಾರ ಓದಿದೆ. Nostalgic ಅನುಭವಗಳನ್ನು ಹತ್ತು ಪುಟ್ಟ-ಪುಟ್ಟ ಪ್ರಬಂಧದಲ್ಲಿ ರಮ್ಯವಾಗಿ ಕಟ್ಟಿರುವ ಸಂಕಲನವಿದು. ಕೆಲವು ಪಾತ್ರಗಳು, ಸಂಗತಿಗಳು ಅವರ ಕಥಾ ಸಂಕಲನ ದಣೇರ ಬಾವಿಯಲ್ಲಿ ಎದುರುಗೊಂಡಿದ್ದವು.


ಹಳ್ಳಿಯ ಮುಗ್ಧ ಬದುಕು, ಬಡತನ ತಂದೊಡ್ಡುವ ಭಿನ್ನ ಅನುಭವಗಳು.. ಹೀಗೆ ಸ್ವ-ಅನುಭವಗಳು ಪ್ರಬಂಧಗಳಾಗಿವೆ. ಮೊಬೈಲ್ ಪೂರ್ವ ಕಾಲದ ಬಾಲ್ಯದ ದಟ್ಟವಾದ ಚಿತ್ರಣಗಳಿವು: ಉಡದಾರ,ಲಾಡಿ, ಗಡಿಯಾರ ಚೌಕ, ನಾಯಿ, ಕರ್ಚಿಕಾಯಿ, ಅವ್ವ, ಜಾತ್ರೆ, ಬಯಲಾಟ, ಬಸ್ಸು, ಕಟಿಂಗ್ ಶಾಪು. ಈ ಚಿತ್ರಗಳಲ್ಲಿ ಧರ್ಮ-ಜಾತಿ ಮುಂತಾದ ಬದುಕಿನ ಸಾಮರಸ್ಯದ ನೆಲೆಗಳಿವೆ; ಎಲ್ಲವನ್ನೂ ಮಗನಿಗಾಗಿ ಮುಡಿಪಿಡುವ ತಾಯಿಯ ಪಾತ್ರವಿದೆ;

ಇದು- ಕಾಲವೊಂದು ಆಗಿಹೋಗಿರುವ ಕುರಿತ ಇತಿಹಾಸವೂ ಆಗಿದೆ. ಮುಂದಿನ ತಲೆಮಾರು 'ಹೀಗೂ ಒಂದು ಬದುಕಿತ್ತೇ' ಎಂದು ಮೂಗುಮುರಿದು ನೋಡುವ ಚಿತ್ರಣಗಳಿವೆ.

(ಪ್ರಬಂಧ ಎಂಬ ಸಿದ್ಧಪ್ರಕಾರದ ಆಚೆಗೆ ಇವುಗಳನ್ನು ನೋಡಬೇಕಿದೆ. )

ಶುಭಾಶಯಗಳು ಶರಣಬಸವ ಕೆ ಗುಡದಿನ್ನಿ ಅವರಿಗೆ.
*

ಕಾಜೂರು ಸತೀಶ್ 

Monday, February 14, 2022

ಏನು ಮಾಡಲಿ ಹೂಗಳು ಕೊಲೆಯಾದ ಕಾಲದಲ್ಲಿ?



ಜಗತ್ತು ಬಂದು ತಲುಪಿರುವ ಹತಾಶ ಹಂತವನ್ನು "ಕಣ್ಣಲ್ಲಿಳಿದ ಮಳೆಹನಿ"ಯ ಒಂದೊಂದು ಕವಿತೆಗಳೂ ಹೀಗೇ ಎದೆಗೆ ತಾಕಿಸುತ್ತವೆ. ಮನುಷ್ಯ-ಪ್ರಾಣಿ-ಪಕ್ಷಿ-ಗಿಡ-ಮರಗಳೆಲ್ಲವೂ ಕೊಲ್ಲಲ್ಪಟ್ಟವು. ಇದೀಗ ಎದೆ ದನಿಗಳ ಕವಿತೆಗಳೂ ಕೊಲೆಯಾಗುತ್ತಿರುವುದರ ನೋವು, ಸಂಕಟ, ಮನುಷ್ಯತ್ವ ಸತ್ತುಹೋದ ಹೊತ್ತಿನ ಸಂದಿಗ್ಧತೆಯನ್ನು ಕವಿ ತಣ್ಣಗೆ ಹೇಳುತ್ತಾರೆ. ಈ ನೆಲದೊಂದಿಗೆ, ಈ ಪರಿಸರದೊಂದಿಗೆ ಕವಿಯ ಅದಮ್ಯ ಒಡನಾಟವನ್ನು ಸಂಕಲನದಲ್ಲಿನ ಅನೇಕ ಕವಿತೆಗಳು ಉಸಿರಾಡುತ್ತವೆ. ಈ ಒಡನಾಟದಿಂದಲೇ ಪ್ರಕೃತಿಯ ಮೇಲಾಗುತ್ತಿರುವ ಅತ್ಯಾಚಾರವನ್ನು ಸೂಕ್ಷ್ಮವಾಗಿ ಗ್ರಹಿಸುತ್ತಾರೆ. 'ಎಲ್ಲಿ?' 'ಮರ ಯಾರದು?' 'ಕಾಡುಗವಿತೆ, 'ಕಾಡುಗಳಿದ್ದವು ಕವಿತೆಗಳಲ್ಲಿ' 'ನಡುರಾತ್ರಿ ನಾಯಿ ಬೊಗಳುತ್ತಿದೆ' ಯ ಸಾಲುಗಳು, ಕಣ್ಮರೆಯಾಗುತ್ತಿರುವ ಗಿಡ ಮರಗಳ ಹಸಿರು, ಅದನ್ನೇ ನಂಬಿಕೊಂಡಿರುವ ಅಸಂಖ್ಯಾತ ಜೀವಜಂತುಗಳು ಅನುಭವಿಸುತ್ತಿರುವ ಪಾಡನ್ನು ಕಣ್ಣಿಗೆ ಕಟ್ಟಿಕೊಡುತ್ತವೆ. 'ಒಂದು ಕವಿತೆ ಹುಟ್ಟುವುದರಲ್ಲಿತ್ತು' ಎಂದು ಹೇಳುವಾಗ ಕವಿ ಅನುಭವಿಸುತ್ತಿರುವ ತಲ್ಲಣ ತಿಳಿಯುತ್ತದೆ! ಕೊನೆಗೆ,
"ಯಾರು ಕೊಲ್ಲುತ್ತಾರೆ ನನ್ನ ಕವಿತೆಗಳನ್ನು ನಾನು ಸತ್ತ ಮೇಲೆ ಯಾರು ಬದುಕುತ್ತಾರೆ ನನ್ನ ಕವಿತೆಗಳನ್ನು ನಾನು ಸತ್ತ ಮೇಲೆ" ಎಂದು ಕೇಳುತ್ತಾ, ಕವಿತೆಗಳು ಉಳಿಯಬೇಕಾದ ತುರ್ತನ್ನು ಕಾಳಜಿ ಮಾಡುತ್ತಾರೆ.

ನೆಮ್ಮದಿಯ ಹುಡುಕಾಟಕ್ಕೆ ತೊಡಗುವ ಕವಿಯ ಎದೆಯಲ್ಲಿ ನೋವುಗಳೇ ನೇತಾಡುತ್ತಿವೆ. ಧಾರಾಳಿಯಾಗಿರುವ ಪ್ರಕೃತಿಯ ಮೇಲೆಯೇ ದಬ್ಬಾಳಿಕೆ ಮಾಡಿ, ಆಕ್ರಮಿಸಿಕೊಂಡು, ನನ್ನದೆನ್ನುವವರ ಕಡೆಗೆ ಕನಿಕರದ ನೋಟ ಬೀರುವ ಕವಿಯೊಬ್ಬ ನಿಜಮನುಷ್ಯ... ಯಾಂತ್ರಿಕತೆಗೆ ಒಡ್ಡಿಕೊಂಡಿರುವ ಈ ಸೃಷ್ಟಿಗೆ ಮರುಚೈತನ್ಯ ಬರುವುದಾದರೆ ಮರಕುಟುಕನನ್ನು ಕರೆದು, ಕುಕ್ಕಿ, ಕುಟುಕಿ ಹೊಸದಾರಿ ಮಾಡಲು ತನ್ನೆದೆಯನ್ನೇ ಒತ್ತೆಯಿಡ ಬಯಸುವ ಕವಿಯದು ಅದೆಂಥ ಜೀವಪ್ರೀತಿ! ಕೃತ್ರಿಮತೆಗೆ ನರಳಿದ ಹೃದಯ! "ಛೇ! ಎಷ್ಟೊಂದು ಹಕ್ಕಿಗಳಿವೆ ಇಲ್ಲಿ, ಒಂದಾದರೂ ಬರಬಾರದೇ?" ಹಕ್ಕಿಗಳೂ ಯಾಂತ್ರಿಕತೆಗೆ ಒಗ್ಗಿಕೊಂಡವೇ ಎಂಬ ದಿಗಿಲನ್ನೂ ಈ ಸಾಲು ಧ್ವನಿಸುತ್ತದೆ.


ಕವಿಗೆ ಯಾವುದೂ ಅಮುಖ್ಯವಲ್ಲ. ಎಲೆಯೊಂದು- ಪತಿಯ ಬೆರಳು ಬಿಡಿಸಿಕೊಂಡ ಹೆಣ್ಣಾಗಿ, ತವರ ಮಣ್ಣಾಗಿ, ಬೆಳಕಾಗಿ, ಹಕ್ಕಿಯೊಡನೆ ಏಕವಾಗಿ, ಉಸಿರು ಬೆರೆವ ಗೆರೆಯಿರದ ದಾರಿಯಾಗಿ; ಗಾಳಿ- ಸಮುದ್ರವಾಗಿ, 'ಉಳಿದ ನಮ್ಮ ನಾಳೆಗಳ' ಲೆಕ್ಕವಿಡುವ ಜ್ಞಾನಿಯಾಗಿ; ಅವ್ವನ ರೊಟ್ಟಿ- ಕವಿತೆಯಾಗಿ, ಯುದ್ಧವಿಲ್ಲದ ಭೂಪಟವಾಗಿ, ಮರುಭೂಮಿಯಾಗಿ ರೂಪಾಂತರಗೊಳ್ಳುವ ಬಗೆಯನ್ನು ಎಲೆ, ಗಾಳಿ, ಏಕ, ರೊಟ್ಟಿ ಕವಿತೆಗಳು ಬಿಚ್ಚಿಡುವ ರೀತಿಯೇ ವಿಸ್ಮಯ!

ಗುಡಿಸಲಿಗೆ ಆತುಕೊಂಡೇ ಅದರ ಭೀಕರತೆಯನ್ನು ಅನುಭವಿಸಿಕೊಂಡು ನೆನಪುಗಳನ್ನು ಒಳಗಿಳಿಸಿಕೊಂಡು ಸಹಜತೆಗಾಗಿ ಧ್ಯಾನಿಸುವ ಕವಿ,
"ಆಯುಧಗಳು ಇದ್ದೇ ಇರುತ್ತವೆ
ಬೆಳಕ ಹಚ್ಚುತ್ತೇನೆ
ಬೆಳಕಿನ ಕುರಿತೂ ಮಾತಾಡುವುದಿಲ್ಲ" ಎನ್ನುತ್ತಾರೆ.

ಸಾವು, ಮಹೋನ್ನತ ಆನಂದವನ್ನು ಅನುಭವಿಸಲು ಇರುವ ಭೂಮಿಕೆ ಎಂದು ತಿಳಿಯುತ್ತಾ, ಗಾಳಿಯಲ್ಲಿ ಅತ್ತಿಂದಿತ್ತ ತೂರಾಡಿ ಸುಖಿಸುವ ಎಲೆಯ ಆನಂದವೇ ಸಾವಿನಿಂದಲೂ ಸಿಗಬೇಕೆಂದು ಬಯಸುತ್ತಾರೆ.
"ಚಟ್ಟಕ್ಕೆ ಮೋಟುಬೀಡಿಯ ಕಿಡಿ ತಾಗಿ
ಚಟಪಟ ಉರಿದು ಹೋಗುವುದಾದರೆ
ಎಷ್ಟು ಚಂದ ಎಷ್ಟು ಚಂದ" ಎಂದು ಸಾವಿನ ದಿನದ ಒಣ ಆಚರಣೆಗಳನ್ನು ಧಿಕ್ಕರಿಸುತ್ತಾರೆ.

ಕಾವ್ಯಮೀಮಾಂಸೆ, ಹೊಟೇಲು, ಕ್ಷಮಿಸು, ಜಲವರ್ಣ ಮುಂತಾದ ಕವಿತೆಗಳೂ,
"ಮ್ಯಾನ್ಹೋಲಿನಲ್ಲಿ ಉಸಿರುಗಟ್ಟಿ ಸತ್ತ ಕವಿತೆಯ ಶವ
ಕವಿಗೂ ಸಿಗಲಿಲ್ಲ ಟಿವಿಗೂ ಸಿಗಲಿಲ್ಲ" ಎಂಬ ಸಾಲುಗಳು
ಸಿದ್ಧಾಂತಗಳಾಚೆಗೂ ಉಸಿರಾಡಬೇಕಾದ ಮಾನವತೆಯನ್ನು ಪ್ರತಿನಿಧಿಸುತ್ತವೆ.

ಅಪ್ಪನ ವಿಸ್ತಾರತೆಯನ್ನೂ, ಅವ್ವನ ಸೀರೆಯ ಅಗಾಧತೆಯನೂ, ಎದೆಯ ದನಿಯನ್ನು, ಪ್ರೇಮದ ಸರಳತೆಯನ್ನು ಧೇನಿಸುವ ಇವರ ಕವಿತೆಗಳಲ್ಲಿ ಅಪರೂಪದ ರೂಪಕಗಳಿವೆ, ಪ್ರತಿಮೆಗಳಿವೆ, ಪ್ರಾಮಾಣಿಕ ಅಭಿವ್ಯಕ್ತಿಯಿದೆ. ನಿಜ! ಇವರ ಕವಿತೆಗಳಲ್ಲಿ ತೀವ್ರವಾದ ಭಾವೋದ್ವೇಗಗಳಿಲ್ಲ, ಜಿದ್ದಿಗೆ ಬೀಳುವ ಬಿರುಸುಗಳಿಲ್ಲ... ಕಡು ತಣ್ಣಗಿನ ನೀರಿನ ಇರಿತವಿದೆ! ಬದುಕಿನ ಸಂದೇಶವನ್ನು ದಾಟಿಸುವ ನೋಟವಿದೆ. ನಮ್ಮ ಬಾಧ್ಯತೆಗಳನ್ನು ನೆನಪಿಸಿ, ಎಚ್ಚರಿಸುವ ಬದ್ಧತೆಯಿದೆ...

ಪ್ರೀತಿಯ ಕಾಜೂರು ಸತೀಶ್ ಸರ್... ನಿಮ್ಮ ಮತ್ತಷ್ಟು ಪ್ರಾಮಾಣಿಕ ಮಾತುಗಳಿಗಾಗಿ ಕಾಯುತ್ತಾ...


-ರಮ್ಯ ಕೆ ಜಿ, ಮೂರ್ನಾಡು.

Friday, February 11, 2022

ಕಣ್ಣಲ್ಲಿಳಿದ ಮಳೆಹನಿಯ ಕುರಿತು ನೂತನಾ ದೋಶೆಟ್ಟಿಯವರ ಅಭಿಪ್ರಾಯ

ಕೃಪೆ- ಸಂಗಾತಿ

ಕಣ್ಣಲ್ಲಿಳಿದ ಮಳೆಹನಿ – ಕಾಜೂರು ಸತೀಶ್ ಅವರ ಹೊಸ ಕವನ ಸಂಕಲನ.. ಚಿ. ಶ್ರೀನಿವಾಸ ರಾಜು ಕಾವ್ಯ ಪುರಸ್ಕಾರ ಪಡೆದ ಈ ಕೃತಿ ಸಂಗಾತ ಪುಸ್ತಕದಿಂದ ಪ್ರಕಟವಾಗಿದೆ. 40ಕವಿತೆಗಳ ಈ ಸಂಕಲನ ಸೊಗಸಾದ ಮುಖಪುಟದಿಂದ ಓದಲು ಹಿಡಿದಾಗಲೇ ಹತ್ತಿರವಾಗುತ್ತದೆ.


ಮೊದಲ ಕವಿತೆ – ಎಲ್ಲಿ- ಕಾಡು ನಾಡಾದ ಬಗೆಗಿನ ಈ ಪ್ರಶ್ನೆಯೊಂದಿಗೆ ಸಂಕಲನದ ಓದು ಆರಂಭ. ಪುಟ್ಟ ಪುಟ್ಟ ಶೀರ್ಷಿಕೆಯ ಇಲ್ಲಿನ ಪದ್ಯಗಳು ಆಳದಲ್ಲಿ ಅಪಾರ ಜಿಜ್ಞಾಸೆಯಿಂದ ಕೂಡಿವೆ.

ಮರ ಯಾರದು? ಕವಿತೆ , ಎಲ್ಲರದ್ದೂ ಆಗಬಹುದಾಗಿದ್ದ ಮರ ಈಗ ಯಾರಾದ್ದೂ ಅಲ್ಲದೆ ನೆನಪುಗಳ ಸಂತೆಯನ್ನು ಎದೆಯಲ್ಲಿ ನೆಟ್ಟು ಬಿಡುತ್ತದೆ.

ಎಲೆಯನ್ನು ಪತ್ನಿಯಾಗಿ ಕಾಣುವ ಈ ಕವಿ ತವರನ್ನು ನೆನೆನೆನೆದು ಪುಳಕಗೊಳ್ಳುವ ಅವಳಲ್ಲಿ. ಮತ್ತೆ ಮತ್ತೆ ಹಸಿರು/ ಮತ್ತೆ ಮತ್ತೆ ಬೆಳಕು/ ಕಂಡು ಈ ಸಾಲುಗಳಲ್ಲಿ ಎಷ್ಟು ಅರ್ಥಗಳ ಹೊಳಹಿಸಿದೆ.

ಮ್ಯಾನ್ ಹೋಲಿನಲ್ಲಿ ಸತ್ತ ಕವಿತೆ- ಒಂದು ಸಶಕ್ತ ವಿಡಂಬನೆ. ಇಲ್ಲಿ ಸಾಯುವುದು ಕವಿತೆಯೋ, ನಿಜ ಸಾಹಿತ್ಯವೋ, ಒಳ್ಳೆಯ ಸಂಸ್ಕಾರವೋ ಅಥವಾ ಮುಚ್ಚಳ ಮುಚ್ಚಿದ ಕವಿತೆ ಬರೆಯುವ ಕೈಗಳ ಹೊಲಸು ಯಾರ ಅರಿವಿಗೂ ಸಿಗದೆ ಅಡಗಿ ಹೋದಂತಿದೆಯೋ!

ಗುಡಿಸಲು- ಕವಿತೆಯಲ್ಲಿನ ರೂಪಕಗಳು, ಅದರೊಳಗಿನ ಬದುಕಿನಂತೆ, ಅದರ ಸುತ್ತಲಿನ ಸಮಾಜವನ್ನು ಚಿತ್ರಿಸುವ ಬಗೆ ಆಶ್ಚರ್ಯ ಹುಟ್ಟಿಸುತ್ತದೆ.

ಒಂದಾದರೂ ಬರಬಾರದೆ? ಕವಿತೆಯಲ್ಲಿ ಮರಕುಟಿಗ ಹಕ್ಕಿಯ ಮೂಲಕ ಆಧುನಿಕತೆಯ ಐಬುಗಳನ್ನೆಲ್ಲ ಬಗೆದು, “ಹಚ್ಚಹಸಿರು ಹೃದಯದ ಮನುಷ್ಯರ ನೋಡುವ ” ಹಂಬಲ ಕವಿಯದು.

ಕೊಲೆ, ಕವಿತೆ – ಸುಕೋಮಲ ಹೂಗಳನ್ನು ಕೊಲೆ ಮಾಡುವ. ಈ ದುರುಳ ಕಾಲದ ತಣ್ಣಗಿನ ಕ್ರೌರ್ಯನನ್ನು ಧ್ವನಿಸಿದರೆ , ರೊಟ್ಟಿ- ಕವಿತೆಯಲ್ಲಿ ರೊಟ್ಟಿ ಸುಡುತ್ತದೆ ನೆಲದ ಕಾವಲಿಯಲ್ಲಿ/ ನೇಗಿಲು ಸೌದೆ ಎಷ್ಟು ಚೆನ್ನಾಗಿ ಉರಿಯುತ್ತದೆ , ಎಂದು ಚುಚ್ಚುವ ವ್ಯಂಗ್ಯವಿದೆ.

ನನ್ನೊಳಗೆ ಇಳಿಯುವಾಗ – ಕವಿತೆಯಲ್ಲಿ ವಚನಗಳನ್ನು ನೆನಪಿಸುವ ಭಾವವಿದೆ. ದೇಹವೇ ದೇಗುಲ ಎಂಬಂತೆ ಪಕ್ಕೆಲುಬುಗಳ ತಟ್ಟಿದರೂ ಮನೆ- ಮನದ ಕದ ತೆರೆಯುತ್ತದೆ .

ಎದೆಯ ದನಿಯಿದು; ಶೃಂಗಾರ ಕಾವ್ಯವಲ್ಲ! ಕವಿತೆಯಲ್ಲಿ ಅಂಗೈ ಗೆರೆಗಳು ಸಲಾಕೆಯ ಹಿಡಿತಕ್ಕೆ ಸವೆಯುವುದಿಲ್ಲ. ಬದಲಾಗಿ ಅವು ನಿರ್ಮಿಸಿದ ಹಳಿಗಳು ಸವೆಯುತ್ತವೆ.. ಎದೆಗಳು ವಾಹನ ಸಂಚಾರದಿಂದ ದುರಸ್ತಿಯಲ್ಲಿವೆ. ಆ ಎದೆಯೊಳಗೆ ಮಲಗಲು ಹೊತ್ತಾಗಿರುವ ಮಗುವಿಗೆ ಹಾಲೂಡಿಸಲು ಕವಿ ಆ ತಾಯಿಯನ್ನು ಕರೆಯುವುದಾದರೂ ಹೇಗೆ? ನೇತು ಹಾಕಿರುವ ಕೆಂಬಟ್ಟೆಯ ತುಂಡೊಂದು ಧ್ವಜವಾಗಿ , ಆ ಧ್ವಜವನ್ನು ಇಳಿಸಿ, ಟಾರು ಕುದಿಯುವುದರೊಳಗೆ ಆಕೆ ಹಾಲು ಕುಡಿಸಬೇಕು. ಅವರಿಬ್ಬರೂ ಬೇರೊಬ್ಬರಿಗಾಗಿ ರಸ್ತೆ, ರೈಲು ಹಳಿ, ಮನೆಗಳನ್ನು ಕಟ್ಟುತ್ತಲೇ ಇರುತ್ತಾರೆ. ತಮಗೆ ನೆರಳೆಂಬ ಕಪ್ಪನ್ನು ಉಳಿಸಿಕೊಂಡು, ಅದನ್ನೇ ಹಾಸಿ ಹೊದೆಯುತ್ತಾರೆ. ಇಲ್ಲಿ ಜಗದ ಕಾರ್ಮಿಕ ವರ್ಗದ ನೋವು, ಸಂಕಟ ತಣ್ಣಗೆ ಕೊರೆಯುತ್ತದೆ.
ಬಂಧಿ, ಕವಿತೆ ಬದುಕಿನ ನಾಲ್ಕು ಮಜಲುಗಳು ಎದುರಿಸಬಹುದಾದ ಸಂದಿಗ್ಧ ಗಳನ್ನು ಧ್ವನಿಪೂರ್ಣವಾಗಿಸಿದೆ. ಅವುಗಳನ್ನು ಮೀರಿ ನಿಲ್ಲಲಾರದ್ದೂ ಒಂದು ಸಂದಿಗ್ಧವೆ. ಕಾಲಕಾಲಕ್ಕೆ ಎದುರಾಗುವ ಅವು ಹೇಗೆ ಒಂದಿಡೀ ಬದುಕನ್ನು ಇಷ್ಟಿಷ್ಟೇ ಮುಗಿಸಿಬಿಡಬಲ್ಲವು ಎಂಬುದನ್ನು ಬಹಳ ಮಾರ್ಮಿಕವಾಗಿ ಹೇಳಲಾಗಿದೆ.

ಬುಡ್ಡಿ ದೀಪದ ಬುಡ ಕವಿತೆಯಲ್ಲಿ ಬಿಸಿಲಿಗೂ, ಸಾವಿಗೂ ಲಾಲಿ ಹಾಡುತ್ತ ನಿಲ್ಲುವ ಪರಿಗೆ ಮನಸ್ಸು ಮೂಕವಾಗುತ್ತದೆ.

ಇಲ್ಲಿಯ ಕವಿತೆಗಳ ಮಳೆಯಲ್ಲಿ ಬೆಂಕಿ ಮಳೆಹನಿ ಉದುರುತ್ತದೆ. ಅನೇಕ ಕವಿತೆಗಳು ಕವಿತೆಯ ಕುರಿತಾಗಿಯೇ ಬರೆದುವಾಗಿದ್ದು ಕವಿತೆ ಬೇರೆ ಬೇರೆ ರೂಪಕಗಳಾಗಿ ಕಾಣುತ್ತದೆ. ಕೆಲವು ಬಾರಿ ಕವಿತೆ ಹಾಡಾದರೆ, ಕೆಲವು ಬಾರಿ ಅತ್ಯಂತ ಸುಖೀ ಜೀವವಾಗುತ್ತದೆ. ಕೆಲವೊಮ್ಮೆ ಕವಿತೆ ಅಂತರಂಗದ ನೋವಾಗಿ ಕವಿತೆಯನ್ನು ಕಬಳಿಸುವ ಟಿವಿ, ಮೊಬೈಲು, ಬೈಕು, ಕತ್ತಿ ಮೊದಲಾದ ಅಭೀಪ್ಸೆಗಳಾಗಿ ಕಾಣುತ್ತದೆ.

ಬೆಳಕಿನ ಕುರಿತು ಬರೀ ಮಾತಾಡುವ ಇಂದಿನ ದಿನಗಳಲ್ಲಿ ಬೆಳಕ ಕುರಿತು ಮಾತಾಡದೆ ಬೆಳಕು ಹಚ್ಚುತ್ತೇನೆ ಎಂಬ ಕವಿಯ ನಿರ್ಮಲ ಭಾವ ಹಾಗೂ ಸದಾಶಯ ಎಲ್ಲ ಕವಿತೆಗಳಲ್ಲೂ ಕಾಣುವುದೇ ಇವುಗಳ ಸೊಗಸು. ಅಮ್ಮನ ಸೀರೆಯಲ್ಲಿ ಬಿದ್ದಿರುವ ತೂತು ಹೊಟ್ಟೆ ತುಂಬಿದಾಗಲೆಲ್ಲ ಸುಡಲೆಂಬಂತೆ ಉಳಿದಿದೆ ಎಂದು ಈ ಕವಿಯಷ್ಟೇ ಹೇಳಬಲ್ಲರು.
*


ನೂತನಾ ದೋಶೆಟ್ಟಿ


ಗಾಢ ವಿಷಾದದ ನೆರಳಿನಂತಿರುವ ‘…. ಮಳೆಹನಿ’


ಪ್ರಕೃತಿ ಬದುಕು ಮತ್ತು ಕಾವ್ಯದ ನಡುವಿನ ಸಾವಯವ ಸಂಬಂಧದ ತಾತ್ವಿಕ ಜಿಜ್ಞಾಸೆ ಸಂಕಲನದುದ್ದಕ್ಕೂ ಕಾಣುತ್ತದೆ. ಕೆಲವೆಡೆ ಸರಳವೆನಿಸುವ ವಸ್ತು ಮತ್ತು ತಂತ್ರಗಳಿಂದ ಹುಟ್ಟುವ ಪ್ರತಿಮೆಗಳಲ್ಲಿ ಸಂಕೀರ್ಣವಾದ ವಿಷಯಗಳನ್ನು ದಾಟಿಸುವ ಶಕ್ತಿ ಇಲ್ಲಿಯ ಕವನಗಳಲ್ಲಿದೆ ಎನಿಸುತ್ತದೆ. ಭಾಷೆಯೆಂಬುದು ಪ್ರಾಣಘಾತುಕವೆಂಬ ಎಚ್ಚರ ಇಲ್ಲಿಯ ಕವಿತೆಗಳಲ್ಲಿ ಎದ್ದುಕಾಣುತ್ತದೆ. ಇದು ಭಾಷೆಗೆ ಒಂದು ಬಿಗುವು ತಂದಿದೆ.
ಕವಿ ಕಾಜೂರು ಸತೀಶ್ ರವರ “ಕಣ್ಣಲ್ಲಿಳಿದ ಮಳೆಹನಿ” ಕವನ ಸಂಕಲನದ ಕುರಿತು ಡಾ. ಸಿ.ಬಿ. ಐನಳ್ಳಿ ಬರಹ

ಒಂದು ವಿಶಿಷ್ಟವಾದ ವಸ್ತು ವಿಷಯ ಸಂವೇದನಾಕ್ರಮ ಮತ್ತು ಅಭಿವ್ಯಕ್ತಿಯನ್ನು ಈ ಸಂಕಲನದ ಕವಿತೆಗಳು ಪರಿಚಯಿಸುವಂತಿವೆ. ಆಧುನಿಕತೆಯ ಸಹವಾಸದಲ್ಲಿ ನಿಸರ್ಗದ ಸಾಂಗತ್ಯ ಮತ್ತು ಅದರ ಸೃಷ್ಟಿಶೀಲತೆ ಒಡಮೂಡಿಸುವ ಜೀವಧ್ವನಿಯನ್ನು ಅಕ್ಷರಶಃ ಕಳೆದುಕೊಂಡಿರುವ ಇಂದಿನ ಸ್ಥಿತಿಯ ಬಗೆಗಿನ ಆತಂಕ ಮತ್ತು ಅದರಿಂದ ಬಿಡುಗಡೆಗೊಳ್ಳುವ ಹಂಬಲ ಇಲ್ಲಿಯ ಬಹುತೇಕ ಕವಿತೆಗಳಲ್ಲಿ ತುಡಿಯುತ್ತದೆ. ನಿಸರ್ಗವನ್ನು ತನ್ನ ಸ್ವತ್ತಾಗಿ ವಶಪಡಿಸಿಕೊಳ್ಳಲು ಹವಣಿಸುವ ಮಾನವನ ಸಣ್ಣತನದ ವಿಡಂಬನೆ (ಮರ ಯಾರದು?, ಕಾಡುಗವಿತೆ) ಇಲ್ಲಿಯ ಕವಿತೆಗಳಲ್ಲಿದೆ. ನಿಸರ್ಗದ ನಾಶದ ಕುರಿತ (ಎಲ್ಲಿ, ನಡುರಾತ್ರಿ…, ಕಾಡುಗಳಿದ್ದವು ಕವಿತೆಗಳಲ್ಲಿ) ಗಾಢ ವಿಷಾದವಿದೆ. ಅಮೆರಿಕದ ಕವಿ ರಾಬರ್ಟ ಫ್ರಾಸ್ಟ್ ನ ಕವನಗಳಲ್ಲಾಗುವಂತೆ ನಿಸರ್ಗದಲ್ಲಿ ವ್ಯಕ್ತಿ ಕಾಣುವ ಸಾಮಾನ್ಯ ಚಿಕ್ಕಪುಟ್ಟ ದೃಶ್ಯಗಳು ಬದುಕಿನ ಮೀಮಾಂಸೆಯ ಕುರಿತ ಆಳವಾದ ಜಿಜ್ಞಾಸೆಗೆ ತೊಡಗಿಸುತ್ತವೆ. ಫ್ರಾಸ್ಟ್ ನನ್ನು ನೆನಪಿಸುವ ಇನ್ನೊಂದು ಮುಖ್ಯ ಗುಣವೆಂದರೆ ಈ ಕವನಗಳಿಗಿರುವ ಮುಕ್ತಅಂತ್ಯವುಳ್ಳ ಅರ್ಥ ಸಾಧ್ಯತೆಗಳು.



ದೈನಂದಿನ ಬದುಕಿನ ಸರಳ ಸಾಮಾನ್ಯ ವಸ್ತು ಮತ್ತು ಘಟನೆಗಳಲ್ಲಿ ಕವಿ ಕಾಣುವ ಆಳವಾದ ಕಾಣ್ಕೆ(ಏಕ, ಕಾವ್ಯಮೀಮಾಂಸೆ) ಎಪಿಫ್ಯಾನಿಕ್ ಎನಿಸುವಂಥ ಅಚ್ಚರಿಯನ್ನು ಮೂಡಿಸುತ್ತದೆ. ಬಯಲಿಗೆ ಅರ್ಥಗಳನ್ನು ಹಚ್ಚುವ (ಗಾಳಿ) ಮತ್ತು ಎಲ್ಲಾ ಅರ್ಥಗಳಲ್ಲಿ ಬಯಲನ್ನು ಕಾಣುವ (ನನ್ನೊಳಗೆ….) ಸಮಚಿತ್ತತೆ ಕವಿಗಿದೆ ಎನಿಸುತ್ತದೆ. ‘ಝರಿ ಮಾತನಾಡುವುದು ಬಿಟ್ಟರೆ/ ಮೌನ ಬಡಕಲಾಗಿ ಹುಟ್ಟಿ/ ಕವಿತೆ ಮುಖವಾಡವಾಗುವುದು ಲೋಕಕ್ಕೆ’ ಎಂಬುದು ನಾವು ಗಂಭೀರವಾಗಿ ತೆಗೆದುಕೊಳ್ಳಬೇಕಾದ ಎಚ್ಚರ. ನಿಸರ್ಗದ ಪ್ರತಿ ನಡೆಯ ಬಗೆಗಿನ ಬೆರಗುಗಣ್ಣು ಕವನಗಳಲ್ಲಿ ತೆರೆದೇ ಇದೆ. ಕೆಲವು ಕವನಗಳಲ್ಲಿ (ನನ್ನ ಶವಸಂಸ್ಕಾರದ ದಿನ, ಸಾಯ್ವ ಸುಖ, ಏಕ, ಇತ್ಯಾದಿ) ಸಾವು ನಿಸರ್ಗ ಸಹಜವಾದ ಪ್ರಕ್ರಿಯೆಯ ಭಾಗವೆಂಬಂತೆ ಸಂಭ್ರಮಿಸಲ್ಪಡುತ್ತದೆ ; ಆದರೂ, ವ್ಯಕ್ತಿಯ ವೈಯಕ್ತಿಕ ಬದುಕಿನ ಹೆಪ್ಪುಗಟ್ಟಿದ ವಿಷಾದ ಈ ಚಿತ್ರಣಗಳ ಮೂಲಕ ಬಿಡುಗಡೆಯನ್ನು ಬಯಸುತ್ತಿರುವಂತೆಯೂ ಕಾಣುತ್ತದೆ. ಮಾನವ, ಪ್ರಕೃತಿ, ಅನ್ಯಜೀವಿಗಳು, ಪ್ರಕೃತಿಯ ಭಾಗವಾದ ವಸ್ತುಗಳು ಎಲ್ಲವೂ ಅಂತರಾವಲಂಬನೆ ಮತ್ತು ಸಹಕಾರದಲ್ಲಿ ಬಾಳಬೇಕಿರುವ ಅಗತ್ಯತೆಯನ್ನು ಮಾನವೋತ್ತರವಾದದ (ಪೋಸ್ಟ್ ಹ್ಯುಮ್ಯಾನಿಜಂ) ಒಂದು ಕವಲು ಪ್ರತಿಪಾದಿಸುತ್ತಾ ಮಾನವಕೇಂದ್ರಿತ ಜಗತ್ತಿನ ಪರಿಕಲ್ಪನೆಯನ್ನು ನಿರಾಕರಿಸಿರುವುದು ತಿಳಿದಿದೆದೆಯಷ್ಟೆ. ಈ ಸಂಕಲನದ ಕವಿತೆಗಳಲ್ಲಿ ವ್ಯಕ್ತವಾಗುವ ಮುಖ್ಯ ಕಾಳಜಿಗಳು ಎಲ್ಲೋ ಒಂದು ಕಡೆ ಈ ದೃಷ್ಟಿಕೋನದ ವಿನ್ಯಾಸಕ್ಕೆ ಹೊಂದಿಕೊಳ್ಳುವಂತಿವೆಯೇನೋ ಎನಿಸುತ್ತದೆ. ಆದರೆ, ಇದು ಈ ಕವಿತೆಗಳನ್ನು ನೋಡಬಹುದಾದ ನೋಟಕ್ರಮಗಳಲ್ಲಿ ಒಂದು ಎನ್ನಬಹುದಷ್ಟೆ.

ಈ ಸಂಕಲನ ಕಾವ್ಯದ ಹುಟ್ಟು ಉದ್ದೇಶ ಮತ್ತು ಬಾಳಿಕೆಯ ಕುರಿತ ಜಿಜ್ಞಾಸೆಯೂ ಆಗಿದೆ. ಕಾವ್ಯಮೀಮಾಂಸೆ ಮತ್ತು ಜೀವನ ಮೀಮಾಂಸೆಯ ನಡುವೆ ಭೇದವೆಣಿಸದೆ ಸಾಹಿತಿಕ ಮತ್ತು ಸಾಂಸ್ಕೃತಿಕ ರಾಜಕಾರಣದ ಶುದ್ಧತೆ ಮತ್ತು ಶ್ರೇಷ್ಠತೆಯ ವ್ಯಸನವನ್ನೂ, ಈ ವ್ಯಸನದಿಂದ ಹುಟ್ಟಿದ ಕ್ರೌರ್ಯ ಮತ್ತು ಹಿಂಸೆಯನ್ನು (ಮ್ಯಾನ್ ಹೋಲಿನಲ್ಲಿ ಸತ್ತಕವಿತೆ) ಸೂಕ್ಷ್ಮವಾಗಿ ವಿಡಂಬಿಸುತ್ತದೆ. ಕಾವ್ಯಮೀಮಾಂಸೆಯ ಹೆಸರಲ್ಲಿ ಹೇರಲಾದ ರೂಪ-ವಿರೂಪಗಳ ಮಡಿ-ಮೈಲಿಗೆಯ ಹೇರಿಕೆಯ ಮೌಲ್ಯಗಳ ಮೀರುವಿಕೆಯೂ ಇಲ್ಲಿ (ಕಾವ್ಯಮೀಮಾಂಸೆ) ಕಾಣುತ್ತದೆ. ನಿಸರ್ಗ, ಮಾನವನ ಬದುಕು ಮತ್ತು ಕಾವ್ಯಗಳ ನಡುವೆ ಬೆಸೆದುಕೊಂಡಿರುವ ಅಂತರಸಂಬಂಧಗಳ ಬಗ್ಗೆ ಕವಿಗೆ ಗಾಢವಾದ ನಂಬಿಕೆಯಿರುವುದು ಇಲ್ಲಿಯ (ಎಷ್ಟುಸುಖಿ ನೀನು…) ಕವನಗಳಲ್ಲಿ ತಿಳಿಯುತ್ತದೆ. ಕವಿಗೆ ಪೆನ್ನು ಬೆಳಕು ಹಚ್ಚಬೇಕಾದ ಸಾಧನವಷ್ಟೇ ಅಲ್ಲ, ಹುಟ್ಟುವ ತವಕದಲ್ಲಿರುವ ಕವಿತೆಯ ಕತ್ತು ಹಿಸುಕುವ ಆಯುಧವೂ ಹೌದು. ಎದೆಯಲ್ಲಿ ಮೂಡಿದ ಸಂವೇದನೆಗಳೆಲ್ಲವನ್ನೂ ವ್ಯಕ್ತಪಡಿಸಲಾಗದ ಕವಿತೆ ‘ಬಂಧಿ’ಯಾಗಿರುವುದರ ತೊಳಲಾಟ ಒಂದೆಡೆಯಾದರೆ, ಇನ್ನೊಂದೆಡೆ ಕವಿತೆ ಎಂಬುದು ಸದಾ ಆಗುವಿಕೆಯ(ಕವಿತೆ ಹುಟ್ಟುವುದರಲ್ಲಿತ್ತು) ಪ್ರಕ್ರಿಯೆಯಲ್ಲಿರುವ ಅರಿವಿನ ಒರತೆ ಎಂಬ ನಿಲುವು ‘ಕೇಳಿರದ ಹಾಡುಗಳೇ ಹೆಚ್ಚು ಮಧುರ’ ಎಂಬ ಕೀಟ್ಸ್ ಕವಿಯ ಸಾಲನ್ನು ನೆನಪಿಸುತ್ತವೆ. ಈ ಕವಿತೆಗಳ ಅವಲೋಕನ ಕವಿತೆಯೆಂಬುದು ಕವಿಗೆ ನಿರಂತರವಾದ ಬದುಕಿನ ಜಿಜ್ಞಾಸೆ ಅಥವಾ ಶೋಧವಾಗಿದೆ ಎಂಬುದನ್ನು ಹೇಳುತ್ತದೆ (‘ಬೆಳಕ ಹಚ್ಚುತ್ತೇನೆ’ ಮತ್ತು ‘ಕವಿತೆ ಹುಟ್ಟುವುದರಲ್ಲಿತ್ತು’). ಇವು ಒಂದು ಸಲಕ್ಕೆ ಓದಿ ಮುಗಿಸುವ ಕವನಗಳಾಗಿರದೇ ಒಂದು ಮಟ್ಟಿನ ಧ್ಯಾನವನ್ನು ಬೇಡುತ್ತವೆ. ಇಲ್ಲಿಯ ಮೌನ ಮಾತನಾಡುತ್ತದೆ.



ಸಾವು ನಿಸರ್ಗ ಸಹಜವಾದ ಪ್ರಕ್ರಿಯೆಯ ಭಾಗವೆಂಬಂತೆ ಸಂಭ್ರಮಿಸಲ್ಪಡುತ್ತದೆ; ಆದರೂ, ವ್ಯಕ್ತಿಯ ವೈಯಕ್ತಿಕ ಬದುಕಿನ ಹೆಪ್ಪುಗಟ್ಟಿದ ವಿಷಾದ ಈ ಚಿತ್ರಣಗಳ ಮೂಲಕ ಬಿಡುಗಡೆಯನ್ನು ಬಯಸುತ್ತಿರುವಂತೆಯೂ ಕಾಣುತ್ತದೆ.
ಕೈಗೂಡದ ಪ್ರೇಮದ ನೋವು ಎದೆಯ ದನಿಯಾಗಿ (ಎದೆಯ ದನಿಯಿದು) ಇಲ್ಲಿ ಹಾಡಿಕೊಳ್ಳುತ್ತದೆ. ಭಗ್ನಗೊಳ್ಳುತ್ತಿರುವ ಪ್ರೇಮದ ಗಾಢ ವಿಷಾದವನ್ನು ಅದರ ಸುಡುವ ಮೌನದ ಸಮೇತ ಬರಹಕ್ಕೆ(ಬರೆಯಲಾರೆ) ಕವಿ ದಾಟಿಸಬಲ್ಲರು. ಎಲ್ಲೆಡೆ ಮಾನವಸಹಜ ಪ್ರೀತಿಯ ಬೇರುಗಳೇ ಮುರುಟುವಂತಾಗಿ, ಮೌಲ್ಯಗಳಿಗೆ ಗೆದ್ದಲು ಹಿಡಿಯುತ್ತಿರುವಾಗ ಹುಟ್ಟುವ ಹತಾಶೆ ಇಲ್ಲಿಯ (ಕೊಲೆ) ಕವನದಲ್ಲಿ ಕಾಣುತ್ತದೆ. ವರ್ತಮಾನದ ಸಾಂಸ್ಕೃತಿಕ ರಾಜಕಾರಣದ ವಿದ್ಯಮಾನಗಳು ಹುಟ್ಟಿಸಿದ ಜಿಗುಪ್ಸೆಯಿಂದ ವಿಮುಖವಾಗುವ ಪ್ರಯತ್ನವೆಂಬಂತೆ ಈ ಕವಿತೆಗಳು ಮೇಲ್ನೋಟಕ್ಕೆ ಕಂಡರೂ, ಅಂಥ ವಿದ್ಯಮಾನಗಳಿಗೆ ಅತ್ಯಂತ ಸೂಕ್ಷ್ಮ ಮತ್ತು ಪ್ರಬುದ್ಧವಾದ ಪ್ರತಿಭಟನೆಯನ್ನು ಅವು ದಾಖಲಿಸುತ್ತವೆ. ‘ಎಲ್ಲ ಹೃದಯಗಳ ಬಣ್ಣ ನನ್ನ ಮನೆಗೆ….. ಕರುಳ ಚಾಪೆ ಹಾಸುವೆ/ ಕೂತು ಸುಧಾರಿಸಿಕೊಳ್ಳಿ….. ಬೇಕಿದ್ದರೆ / ಮೆದುಳು ಹೃದಯ ರಕ್ತದ ಕೋಣೆಗಳ ಬಗ್ಗೆ /ಚರ್ಚೆ ನಡೆಸಿರಿ’ (ನನ್ನೊಳಗೆ ಇಳಿಯುವಾಗ) – ಈ ಸಾಲುಗಳು ಸೂಕ್ಷ್ಮ ಪ್ರತಿಭಟನೆಯ ಜೊತೆಗೆ, ಬೇಡದ ವಿಷಯಗಳ ಬಗೆಗಿನ ಮೌನವನ್ನೂ ಬಿತ್ತುತ್ತಿವೆ.


ಆಧುನಿಕೋತ್ತರ ಬದುಕಿನ ಅರ್ಥಹೀನತೆ ಸತ್ವಹೀನತೆಯ ವಿಡಂಬನೆ, ಅದರಿಂದ ಬಿಡುಗಡೆಯ ಬಯಕೆ (ಮರೆತುಬಿಟ್ಟೆ, ಒಂದಾದರೂ… ) ಇಲ್ಲಿದೆ. ಸತ್ಯ-ಮಿಥ್ಯಗಳ ನಡುವಿನ ಗೆರೆ ಅಳಿಸಿಕೊಂಡ ಬದುಕಿನ ಪೊಳ್ಳುತನದ ರೂಪಕಗಳೂ (ಪರದೆ) ಕಾಣುತ್ತವೆ. ‘ಹಚ್ಚಿಟ್ಟರೆ ಬುಡ್ಡಿ ದೀಪ / ಹಸಿದ ಕೀಟಕ್ಕೆ ಹಣ್ಣಾಗಿ ತೋರುವುದು,…. ಹಸಿದು ಸತ್ತವರಿಗೆ ಹೀಗೇ / ಒಂದು ಹಣ್ಣು ಕಂಡಿರಬಹುದು /ಬೆಳಕ ಭ್ರಮೆಯಲ್ಲಿ’ (ಬುಡ್ಡಿ ದೀಪದ ಬುಡ)- ಇವು ವರ್ತಮಾನದ ಅಭಿವೃದ್ಧಿ ಮಾದರಿಯ ಲೇವಡಿಯೂ ಆಗಬಹುದಾದ ಸಾಲುಗಳು. ಮುಖವಾಡಗಳಲಿ ನಡೆವ ಲೂಟಿ ಮತ್ತು ಸಣ್ಣಪುಟ್ಟ ಬೂಟಿಯ (ಕ್ಷಮಿಸು) ಲೇವಡಿಯೂ ಇದೆ. ಬೆವರ ಬದುಕಿನ ಬವಣೆಯ ಸಾಂಗತ್ಯ(ಹೋಟೆಲ್), ನಿರ್ಲಕ್ಷಕ್ಕೊಳಗಾದ ಹೆಣ್ಣಿನ ಚಿತ್ರಣಗಳೂ (ಅಮ್ಮನ ಸೀರೆ) ಪ್ರತಿಮಾತ್ಮಕವಾಗಿ ಕಾಣುತ್ತವೆ.

ಪ್ರಕೃತಿ ಬದುಕು ಮತ್ತು ಕಾವ್ಯದ ನಡುವಿನ ಸಾವಯವ ಸಂಬಂಧದ ತಾತ್ವಿಕ ಜಿಜ್ಞಾಸೆ ಸಂಕಲನದುದ್ದಕ್ಕೂ ಕಾಣುತ್ತದೆ. ಕೆಲವೆಡೆ ಸರಳವೆನಿಸುವ ವಸ್ತು ಮತ್ತು ತಂತ್ರಗಳಿಂದ ಹುಟ್ಟುವ ಪ್ರತಿಮೆಗಳಲ್ಲಿ ಸಂಕೀರ್ಣವಾದ ವಿಷಯಗಳನ್ನು ದಾಟಿಸುವ ಶಕ್ತಿ ಇಲ್ಲಿಯ ಕವನಗಳಲ್ಲಿದೆ ಎನಿಸುತ್ತದೆ. ಭಾಷೆಯೆಂಬುದು ಪ್ರಾಣಘಾತುಕವೆಂಬ ಎಚ್ಚರ ಇಲ್ಲಿಯ ಕವಿತೆಗಳಲ್ಲಿ ಎದ್ದುಕಾಣುತ್ತದೆ. ಇದು ಭಾಷೆಗೆ ಒಂದು ಬಿಗುವು ತಂದಿದೆ.



ಕವಿಯ ಅನುಭವ ಜಗತ್ತು ವಿಸ್ತಾರಗೊಳ್ಳಬೇಕಾದ ಅಗತ್ಯತೆಯನ್ನು ಹೇಳುತ್ತಾ, ಕನ್ನಡ ಸಾಹಿತ್ಯದಲ್ಲಿ ಸತೀಶರ ಕಾವ್ಯದ ಪಯಣದ ಸಾಧ್ಯತೆಗಳನ್ನು ಮುನ್ನುಡಿಯಲ್ಲಿ ಎಂ.ಡಿ.ಒಕ್ಕುಂದರವರು ಸರಿಯಾಗಿಯೇ ಗುರ್ತಿಸಿದ್ದಾರೆ. ಕನ್ನಡ ಸಾಹಿತ್ಯದಲ್ಲಿ ಹೊಸ ಪ್ರತಿಭೆಗಳು ಮೊಳಕೆಯೊಡೆಯಲು ಬೇಕಾದ ಸಾಂಸ್ಕೃತಿಕ ಪರಿಸರವನ್ನು ಕಟ್ಟಲು ನಿರಂತರ ಶ್ರಮ ವಹಿಸುತ್ತಿರುವ ಸಂಗಾತ ಪುಸ್ತಕ ಪ್ರಕಾಶನ ಈ ಕೃತಿಗೆ 2021ರ ಡಿಸೆಂಬರ್ ನಲ್ಲಿ ಚಿ. ಶ್ರೀನಿವಾಸರಾಜು ಕಾವ್ಯ ಪುರಸ್ಕಾರ ನೀಡಿ ಗೌರವಿಸಿದೆ. ಈ ಗೌರವಕ್ಕೆ ಪಾತ್ರರಾದ ಕವಿ ಸತೀಶರಿಗೆ ಮತ್ತು ಪ್ರಕಾಶಕರಿಗೆ ಇಬ್ಬರಿಗೂ ಅಭಿನಂದನೆಗಳು.

(ಕೃತಿ: ಕಣ್ಣಲ್ಲಿಳಿದ ಮಳೆಹನಿ (ಕವನ ಸಂಕಲನ), ಲೇಖಕರು : ಕಾಜೂರು ಸತೀಶ್, ಪ್ರಕಾಶನ : ಸಂಗಾತ ಪುಸ್ತಕ, ಧಾರವಾಡ, ಬೆಲೆ: 80/-)

                        ಡಾ. ಸಿ.ಬಿ.ಐನಳ್ಳಿ


ಧಾರವಾಡದ ಕರ್ನಾಟಕ ಕಲಾ ಮಹಾವಿದ್ಯಾಲಯಲ್ಲಿ ಇಂಗ್ಲಿಷ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಸಿ. ಬಿ. ಐನಳ್ಳಿಯವರು ಮೂಲತಃ ಬಳ್ಳಾರಿ ಜಿಲ್ಲೆಯವರು. ಇಂಡಿಯನ್-ಅಮೇರಿಕನ್ ಲೇಖಕಿ ‘ಜುಂಪಾ ಲಾಹಿರಿಯ ಕೃತಿಗಳಲ್ಲಿ ವಸ್ತು ಮತ್ತು ತಂತ್ರಗಳ ಅಧ್ಯಯನ’ಕ್ಕಾಗಿ ಕರ್ನಾಟಕ ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ಪಡೆದಿದ್ದಾರೆ.


Saturday, February 5, 2022

ಮುಟ್ಟದೆಯೇ ಮುತ್ತಿಡುವ ಮೋಹಕತೆ



ಮಂಜುಳಾ ಹುಲಿಕುಂಟೆ ಅವರ ದೀಪದುಳುವಿನ ಕಾತರ ಕವನ ಸಂಕಲನವನ್ನು ಈ ಬೆಳಿಗ್ಗೆ ಓದಿದೆ. ಮುಗ್ಧ ಹುಡುಗಿಯೊಬ್ಬಳ  ಪ್ರೇಮದ ಕುರಿತ ಭಾಷ್ಯ, ಲೋಕ ಗ್ರಹಿಕೆ, ದಿನಚರಿ, ಆತ್ಮಕಥಾನಕಗಳಿವು. ಪ್ರೇಮ-ವಿರಹ, ಹತಾಶೆ-ಜೀವಂತಿಕೆಗಳ ಮಿಶ್ರಣ, 
'ಮುಟ್ಟದೆಯೇ ಮುತ್ತಿಡುವ ಮೋಹಕತೆ'

ಹಾಡಿಕೊಳ್ಳಲು ಬಿಟ್ಟುಬಿಡಿ
ನನ್ನ ಪಾಲಿನ ಹಾಡುಗಳ
*

ಹಚ್ಚಿಟ್ಟ ಹಣತೆಯಲ್ಲಿ
ನನ್ನ ನಾನೇ ಸುಟ್ಟುಕೊಳ್ಳುವಾಗ
ಬೆಳಕೆಂದು ಭ್ರಮಿಸುವ ಅವನು
ಮುಗ್ಧನೋ ಕ್ರೂರಿಯೋ
ಅರಿವಾಗುವುದಿಲ್ಲ.
*


'ದೀಪದ ಹುಳು' ಹೆಣ್ಣಿನ ಕುರಿತ ಸಶಕ್ತ ಪ್ರತೀಕ . ದೀಪದ ಹುಳುವಿನ ಕನಸು ಬಗೆಬಗೆಯದಾದರೂ ಕಡೆಗೆ ಸುಟ್ಟು ಕರಕಲಾಗುವ ಹಿಂಸೆ. ಆದರೆ ಕರಕಲಾಗುವ ಮೊದಲಿನ ಕ್ಷಣಗಳ ಉತ್ಕಟ ಪ್ರೇಮದ ಧ್ಯಾನ ಈ ಕವಿತೆಗಳು.


ನನ್ನವ್ವ ನನ್ನ ಹೆರುವ ಮೊದಲೇ
ಸ್ವಾಭಿಮಾನವನ್ನು ಹೆತ್ತಿದ್ದಳು

ಪ್ರೇಮ
ಕೊರಳ ಮೇಲಿನ ಕುಣಿಕೆಯಾದಾಗಲೂ
ಸಾವ ಕ್ಷಣಕ್ಷಣವನ್ನು ಇನ್ನಿಲ್ಲದಂತೆ ಅಪ್ಪಿಕೊಂಡಿದ್ದೇನೆ.
*
ಇನ್ನೂ deep ಆಗಿ ಈ ಮುಗ್ಧ ಲೋಕದೊಳಗೆ ಇಳಿದಾಗ ಪದ್ಯಗಳು ಹೆಚ್ಚು ಕಾಡುತ್ತವೆ. ಮಂಜುಳಾ ಹುಲಿಕುಂಟೆ  ಅವರಿಗೆ ಶುಭಾಶಯಗಳು 

*
ಕಾಜೂರು ಸತೀಶ್ 



ಪ್ರೀತಿ ಮತ್ತು ಪ್ರಾಯಶ್ಚಿತ್ತ ಮತ್ತು ಉಲುಹಿನ ವೃಕ್ಷದ ನೆಳಲು


'ಸಂಕಥನ'ದ ಗೆಳೆಯ ರಾಜೇಂದ್ರ ಪ್ರಸಾದ್ ಅವರ 'ಪ್ರೀತಿ ಮತ್ತು ಪ್ರಾಯಶ್ಚಿತ್ತ' ಮತ್ತು 'ಉಲುಹಿನ ವೃಕ್ಷದ ನೆಳಲು' ಎಂಬ ಎರಡು ಕೃತಿಗಳನ್ನು ಓದಿದೆ. ಸಿದ್ಧಮಾದರಿಯ 'ಮುನ್ನುಡಿ ಬೆನ್ನುಡಿ'ಗಳ ಬದಲಿಗೆ ಕೃತಿಯ ಕೇಂದ್ರಪ್ರಜ್ಞೆಯ ಕುರಿತು ಮಾತುಗಳನ್ನು ತಾವೇ ಬರೆದುಕೊಂಡಿದ್ದಾರೆ. "ಉಲುಹಿನ ವೃಕ್ಷದ ನೆಳಲು' ಕೃತಿಯ ಬಗೆಗಿನ ಮಾತುಗಳು mature ಆಗಿವೆ. ಸೃಜನಶೀಲ ಅಭಿವ್ಯಕ್ತಿಯ ನಡುನಡುವೆ ವೈಚಾರಿಕ ನೆಲೆಗಳನ್ನು ಶೋಧಿಸಿ ಹೇಳುವ ಗದ್ಯಕ್ರಮವೂ ಈ ತಲೆಮಾರಿಗೆ ಬೇಕು. ರಾಜೇಂದ್ರ ಪ್ರಸಾದ್ ಮುಂದೆ ಇಂತಹ ಆಲೋಚನೆಗಳಿರುವ ಗದ್ಯಕೃತಿಗೆ ಮುಂದಾಗಲಿ.

Saturday, January 29, 2022

'ಕಣ್ಣಲ್ಲಿಳಿದ ಮಳೆಹನಿ' ಕುರಿತು ಮಣಜೂರುಶಿವಕುಮಾರ್

ಪ್ರೀತಿಯ ಸತೀಶ್ ಕಾಜೂರು ಸರ್ ರವರಿಗೆ,

ನಿಮ್ಮ ಹೊಸ ಕವನ ಸಂಕಲನ ಕಣ್ಣಲ್ಲಿಳಿದ ಮಳೆಹನಿ ಪುಸ್ತಕ ಓದಿದೆ. ನನಗನ್ನಿಸಿದ ನಾಲ್ಕು ಸಾಲುಗಳು.

ಒಕ್ಕುಂದ ಸರ್ ಬರೆದಿರುವ ಹಾಗೆ ನಿಮ್ಮ ಸಾಲುಗಳಲ್ಲಿ ಭಾವವೇಶವಿಲ್ಲ, ಆದರೆ ಅನುಕ್ರೋಶವಿದೆ. ವ್ಯಕ್ತವಾಗಿರುವ ಪ್ರಕೃತಿ ಮೇಲಿನ ಪ್ರೀತಿ, ವಿಕೃತಿ ಮೇಲಿನ ಸಿಟ್ಟು ಎರಡು ಸೊಗಸು. ಪರಿಸರದ ಮತ್ತು ಕಂಡ ಅತಿ ಸೂಕ್ಷ್ಮ ಸಂಗತಿಗಳ ದೊಡ್ಡ ಆಲೋಚನಾ ಅಭಿವ್ಯಕ್ತಿ. ಸೂಕ್ಷ್ಮ ಸಂವೇದನೆಗಳು ಮೊದಲ ಪುಟದಿಂದ ಕೊನೆಯ ಪುಟದ ತನಕವೂ ಅನುಸಂಧಾನವಾಗಿವೆ.

ನಿಮ್ಮ ಕವಿತೆಗಳ ಹೊಸ ಆಲೋಚನೆ ಒಂದು ಕಾವ್ಯಸೃಷ್ಟಿಯ ಹೊಸ ಸಾಧ್ಯತೆ. ಅದ್ಭುತ ಕವಿತೆಗಳ ಹೂರಣ. ಆಗಾಗ ಮತ್ತೆ ಮತ್ತೆ ಪುಟಗಳನ್ನು ತೆರೆದು ನಾನೊಬ್ಬನೇ, ನನ್ನವರ ಮುಂದೆ ಓದಲು ಹಾತೊರೆಯುವಂತೆ ಮಾಡುವ ಶಕ್ತಿ ನಿಮ್ಮ ಕವಿತೆಗಳಿಗಿದೆ.

ಹೊಸತು ಆಲೋಚಿಸುವ, ಹೊಸತು ಸೃಷ್ಟಿಸುವ, ಹೊಸ ಸಾಧ್ಯತೆಗಳನ್ನು ಅನ್ವೇಷಿಸುವ ನಿಮ್ಮ ಗುಣ ನಿರಂತರವಾಗಿರಲಿ.
ಶುಭಾಶಯಗಳು
*


ಶಿವಕುಮಾರ್ ಮಣಜೂರು