ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Saturday, December 31, 2022

ಬರೆದಂತೆ ಬದುಕಿದ ಟಾಲ್ಸ್ಟಾಯ್

ಲಿಯೋ ಟಾಲ್ಸ್ಟಾಯ್ ಬದುಕು ಮತ್ತು ಸಾಹಿತ್ಯ
ಬರೆದಂತೆ ಬದುಕಿದ ಲಿಯೋ ಟಾಲ್ಸ್ಟಾಯ್

ಜಗತ್ತಿನ ಹೆಸರಾಂತ ಲೇಖಕರ ಸಾಲಿನಲ್ಲಿ ಎದ್ದುಕಾಣುವ ಪ್ರತಿಭೆ ಕೌಂಟ್ ಲಿಯೋ ಟಾಲ್ಸ್ಟಾಯ್.
ಟಾಲ್ಸ್ಟಾಯ್ ಹುಟ್ಟಿದ್ದು ರಷ್ಯಾದ ಯಸ್ನಾಯ ಪೊಲ್ಯಾನ ಎಂಬ ಹಳ್ಳಿಯಲ್ಲಿ, 28 ಆಗಸ್ಟ್ 1828ರಂದು. ರಷ್ಯಾದ ಅಗರ್ಭ ಶ್ರೀಮಂತರ ಪಟ್ಟಿಯಲ್ಲಿ ಇವರ ಕುಟುಂಬವೂ ಒಂದು.

ಒಂಬತ್ತು ವರ್ಷಕ್ಕೇ ತಂದೆ-ತಾಯಿಯನ್ನು ಕಳೆದುಕೊಂಡ ಟಾಲ್ಸ್ಟಾಯ್ ಶಿಕ್ಷಣದಲ್ಲಿ ಅಷ್ಟೇನೂ ಆಸಕ್ತಿ ತೋರದಿದ್ದರೂ ಸ್ವತಂತ್ರವಾದ ಬೌದ್ಧಿಕತೆಯನ್ನು ರೂಪಿಸಿಕೊಂಡರು.

ಲಿಯೋ ಟಾಲ್ಸ್ಟಾಯ್ ಎಂದಾಗ ಜಗತ್ತಿಗೆ ನೆನಪಾಗುವುದು ಮಹಾಕಾವ್ಯದಂತಹ ಅವರ ಅನಾ ಕರೆನಿನಾ ಮತ್ತು ವಾರ್ ಅಂಡ್ ಪೀಸ್ ಕಾದಂಬರಿಗಳು. ಜಗತ್ತಿನ ಹಲವು ದೇಶ-ಭಾಷೆಗಳಿಗೆ ಅನುವಾದಗೊಂಡ ಹಿರಿಮೆ ಈ ಕೃತಿಗಳದು. ಅನಾ ಕರೆನಿನಾ ಉನ್ನತ ಪ್ರೇಮದ ದುರಂತ ಕತೆಯಾದರೆ, ವಾರ್ ಅಂಡ್ ಪೀಸ್ ಅಥವಾ ಯುದ್ಧ ಮತ್ತು ಶಾಂತಿ ಕಾದಂಬರಿಯು ದ್ವೇಷದಿಂದ ಪ್ರೀತಿಯ ಹಾಗೂ ಮನುಷ್ಯತ್ವದ ಕಡೆಗೆ ಸಾಗುವ ಕಥಾನಕ.

ತನ್ನ ಬದುಕಿನ ಪೂರ್ವಾರ್ಧದಲ್ಲಿ ಹಣ, ಹೆಣ್ಣು, ಜೂಜು, ಸುತ್ತಾಟ, ಯುದ್ಧ, ಇವುಗಳ ಜೊತೆಜೊತೆಗೆ ಸಾಹಿತ್ಯದಲ್ಲಿ ಕಳೆದುಹೋದ ಟಾಲ್ಸ್ಟಾಯ್ ಆ ಹೊತ್ತಿಗಾಗಲೇ ಹೆಸರುವಾಸಿಯಾಗಿದ್ದರು.
ವಿಲಾಸಿ ಜೀವನದಲ್ಲಿ ಮುಳುಗಿಹೋಗಿ ಜೂಜಿನಲ್ಲಿ ಹಣಕಳೆದುಕೊಂಡ ಮೇಲೆ ಸೈನ್ಯಕ್ಕೆ ಸೇರಿದರು. ಆದಿಕವಿ ಪಂಪನ ಯುದ್ಧ ವರ್ಣನೆಗೆ ಅವರ ಕಲಿತನದ ಅನುಭವ ನೆರವಾದಂತೆ, ಯುದ್ಧದ ಸೂಕ್ಷ್ಮ ಅನುಭವಗಳು ಟಾಲ್ಸ್ಟಾಯ್ ಅವರ ಕತೆ ಕಾದಂಬರಿಗಳಲ್ಲಿ ಹೇರಳವಾಗಿ ಸಿಗುತ್ತವೆ.

ಟಾಲ್ಸ್ಟಾಯ್ ಅವರ ಮೊದಲ ಕೃತಿ ರಷ್ಯನ್ ಜಮೀನ್ದಾರ (A Russian Land Lord) ಕಾದಂಬರಿಯ ನಾಯಕ ರಾಜಕುಮಾರ ನೆಕ್ಲುದೋವ್ ಶಿಕ್ಷಣವನ್ನು ಬಿಟ್ಟು, ರೈತರ ಉದ್ಧಾರಕ್ಕಾಗಿ ಹಳ್ಳಿಗೆ ಬರುತ್ತಾನೆ. ಆದರೆ ಶೋಷಣೆಯ ವಾತಾವರಣದಲ್ಲಿ ಬೆಳೆದ ಆ ರೈತರಿಗೆ ಮಾನವೀಯತೆಯ ಪರಿಚಯವಿರವೇ ಇರುವುದಿಲ್ಲ. ಹೀಗಾಗಿ ನೆಕ್ಲುದೇವನ ನಡವಳಿಕೆಯನ್ನೇ ಅವರು ಅನುಮಾನಿಸುತ್ತಾರೆ. ಹೀಗೆ ಟಾಲ್ಸ್ಟಾಯ್ನ ಆರಂಭಿಕ ಒಳತುಡಿತಗಳು ಮೊದಲ ಕೃತಿಯಲ್ಲಿಯೇ ವ್ಯಕ್ತವಾಗಿದೆ. ಇದೇ 'ನೆಕ್ಲುದೋವ್ ' ಕೊನೆಯ ಕಾದಂಬರಿ ಪುನರುತ್ಥಾನ( The Resurrection)ದಲ್ಲಿ ತಂದೆಯಿಂದ ಬಂದ ಸಾವಿರಾರು ಎಕರೆ ಭೂಮಿಯನ್ನು ರೈತರಿಗೆ ಹಂಚಿರುವವನು, ತಾಯಿಯ ಆಸ್ತಿಯನ್ನೂ ರೈತರಿಗೆ ಹಂಚಲಿರುವವನು.


ಲೇಖಕನೊಬ್ಬ ತಾನು ಬರೆಯುವುದು ಮತ್ತು ಹಾಗೆ ಬದುಕುವುದು ಒಂದೇ ಇರಬೇಕೇ ಎಂಬ ಜಿಜ್ಞಾಸೆ ಎಲ್ಲ ಕಾಲಗಳಲ್ಲೂ ನಡೆದಿದೆ. ಈ ನೆಲೆಯಲ್ಲಿ ನೋಡಿದರೆ, ಟಾಲ್ಸ್ಟಾಯ್ ಅವರು ಕೇವಲ ಸಾಹಿತ್ಯಿಕ ಕಾರಣಗಳಿಗಾಗಿ ಮುಖ್ಯರಾಗುವುದಿಲ್ಲ. ಅನಾ ಕರೆನಿನಾ ರಚಿಸಿದ ಅನಂತರದ ಕಾಲಘಟ್ಟ, ಅಂದರೆ , 1880ರ ಅನಂತರ ಅವರ ಬದುಕು ಮತ್ತು ಚಿಂತನೆಯ ಕ್ರಮದಲ್ಲಿ ಗಮನಾರ್ಹ ಪಲ್ಲಟಗಳು ನಡೆದವು. ಅದುವರೆಗಿನ ತನ್ನ ಮಹಾನ್ ಕಾದಂಬರಿಗಳನ್ನೇ 'ಉಪಯೋಗಕ್ಕೆ ಬಾರದ್ದು; ಅವೆಲ್ಲಾ ಅರ್ಥಹೀನ ರಚನೆಗಳು, ಯಾರು ಬೇಕಾದರೂ ಅದನ್ನು ಬರೆಯಬಹುದು' ಎಂದರು. ತಾವು ಬದುಕಿದ ವಿಲಾಸದ ರೀತಿಗೆ ಮರುಗಿದರು. ಪಶ್ಚಾತ್ತಾಪಪಟ್ಟರು. ಯುದ್ಧದ ಸಾವು- ನೋವುಗಳು ಸಾಮ್ರಾಟ ಅಶೋಕನನ್ನು ಕಾಡಿದಂತೆ ಅವರನ್ನು ಕಾಡಿದವು. 1879ರಲ್ಲಿ ಬರೆದ A Confession ಅಥವಾ ತಪ್ಪೊಪ್ಪಿಗೆಯಲ್ಲಿ ಆತ್ಮವಿಮರ್ಶೆಯ ಸ್ಪಷ್ಟ ಧಾಟಿಗಳಿವೆ.

ತಮ್ಮ ಬಾಳ ಸಂಗಾತಿ ಸೋಫಿಯಾಳೊಂದಿಗೆ 50 ವರ್ಷಗಳ ದಾಂಪತ್ಯವನ್ನು ನಡೆಸಿದರು. ಪ್ರೇರಕ ಶಕ್ತಿಯಂತಿದ್ದ ಸೋಫಿಯಾ, ಹಸ್ತಪ್ರತಿ , ಕರಡು ತಿದ್ದುಪಡಿ ಕಾರ್ಯವನ್ನು ನಿರ್ವಹಿಸುತ್ತಿದ್ದರು. ಸಹನೆಯ ಮೂರ್ತಿಯಂತಿದ್ದ ಸೋಫಿಯಾ ಅವರಿಗೆ ಟಾಲ್‌ಸ್ಟಾಯ್ ಅವರ ಸಾಮಾಜಿಕ ಕಾಳಜಿ ಸಹಿಸಲಾರದ ಸಂಗತಿಯಾಯಿತು.

ಹೀಗಾಗಿ , ಎಲ್ಲ ಬಗೆಯ ಲೌಕಿಕ ಸಂಬಂಧಗಳನ್ನು ಕಡಿದುಕೊಂಡು ಬದುಕನ್ನು  ಅನುಭಾವದ ನೆಲೆಯಲ್ಲಿ ಬದುಕಿದರು ಟಾಲ್ಸ್ಟಾಯ್.

ಉತ್ತರಾರ್ಧಘಟ್ಟದ ಟಾಲ್ಸ್ಟಾಯ್ ಅವರ ಸೃಷ್ಟಿಗಳಲ್ಲಿ ಕಾಣಸಿಗುವುದು ನೀತಿಬೋಧಕ ಮಾರ್ಗಗಳು; ಆತ್ಮವಿಮರ್ಶೆಯ ದಾಖಲೆ. ಬದುಕಿನ ಅರ್ಥವಂತಿಕೆಯ ಬಗೆಗಿನ ಚಿಂತನ-ಮಂಥನ. ಅವರದೇ ಅನುಭವ ಕಥನಗಳಂತಿರುವ ಈ ಬರೆಹಗಳು ಜನಪದ ಲಯಕ್ಕೆ ಹತ್ತಿರವಾದವುಗಳು. ಮಕ್ಕಳಿಂದ ಆದಿಯಾಗಿ ಎಲ್ಲರಿಗೂ ಅರ್ಥವಾಗುವ ಸರಳ ನಿರೂಪಣೆ ಅವುಗಳ ಶಕ್ತಿ.

ಈ ನಡುವೆ ನಗರದಿಂದ ಹಳ್ಳಿಗೆ ಬಂದರು. ತನ್ನ ರೈತರ ಕುಟುಂಬಕ್ಕೆ ಶಿಕ್ಷಣ ನೀಡಲು ಶಾಲೆಯನ್ನು ತೆರೆದರು.ಪಠ್ಯಕ್ರಮವನ್ನು ರೂಪಿಸಿದರು. ರೈತರಂತೆ ಬಟ್ಟೆ ಧರಿಸಿದರು. ಚಪ್ಪಲಿಗಳನ್ನು ತಾವೇ ಹೊಲಿದು ಧರಿಸಿದರು.   ಶ್ರಮದ ತತ್ತ್ವವನ್ನು ಬಿತ್ತಿದರು. ತನ್ನ ರೈತರಿಗೆ ಭೂಮಿಯನ್ನು ಹಂಚಿದರು. ಜೀತದಾಳುಗಳನ್ನು ಬಿಡುಗಡೆಗೊಳಿಸಿದರು. ತನ್ನ ಕೃತಿಗಳ ಮೇಲಿನ ಗ್ರಂಥಸ್ವಾಮ್ಯವನ್ನೂ ಪ್ರಕಾಶಕರಿಗೆ ಕೊಡುವ ಪ್ರಯತ್ನ ಮಾಡಿದರು.

ಅವರ ಕಥೆಯೊಂದಿದೆ- 'ಮನುಷ್ಯರಿಗೆಷ್ಟು ಭೂಮಿ ಬೇಕು?'. ರೈತನೊಬ್ಬ ಅಗತ್ಯಕ್ಕಿಂತ ಹೆಚ್ಚು ಜಮೀನಿಗೆ ಆಸೆಪಟ್ಟು ಬಲಿಯಾಗುವ ಕತೆಯದು. ಮನುಷ್ಯನ ದುರಾಸೆಗೂ ಪ್ರಕೃತಿಯ ಸಂಪನ್ಮೂಲಗಳಿಗೂ ಇರುವ ಅಂತರವನ್ನು ಕಲಾತ್ಮಕವಾಗಿ ಹೇಳುತ್ತಾರೆ ಟಾಲ್ಸ್ಟಾಯ್. 'ಅವನ ತಲೆಯಿಂದ ಕಾಲಿನವರೆಗೆ ಬೇಕಾಗಿದ್ದು 6 ಅಡಿ ನೆಲ, ಅಷ್ಟೇ' ಎಂಬ ವಾಕ್ಯದೊಂದಿಗೆ ಕತೆ ಮುಕ್ತಾಯವಾಗುತ್ತದೆ. ಸುಖೀ ಜೀವನಕ್ಕೆ ಅಗತ್ಯವೇನು ಎನ್ನುವುದನ್ನು ತಿಳಿಸುವ ಈ ಕತೆಯನ್ನು  ಟಾಲ್ಸ್ಟಾಯ್ ಬರೆದ ಹೊತ್ತಲ್ಲಿ ಅವರು ತಮ್ಮ ಭೂಮಿಯನ್ನು ರೈತರಿಗೆ ಬಿಟ್ಟುಕೊಟ್ಟಿದ್ದರು!

ಮತ್ತೊಂದು ಕಥೆಯ  ಶೀರ್ಷಿಕೆ 'ಮನುಷ್ಯರು ಬದುಕುವುದು ಎಂದರೆ..'. ಚಮ್ಮಾರನಾದ ಸೈಮನ್ನನ ಬಳಿ ಆಜಾನುಬಾಹು ವ್ಯಕ್ತಿಯೊಬ್ಬ ಬಂದು ಬೂಟು ಹೊಲಿಯಲು ದುಬಾರಿ ಬೆಲೆಯ ಚರ್ಮವನ್ನು ನೀಡಿದ. ಸರಿಯಾಗಿ ಹೊಲಿಯದಿದ್ದರೆ ಸೆರೆಮನೆಗೆ ಹಾಕಿಸುವೆನೆಂದ.
ಸಹಾಯಕ ಮಿಖಾಯಲ್ ಬೂಟು ಹೊಲಿಯುವ ಬದಲು ಚಪ್ಪಲಿ ಹೊಲಿದಿದ್ದ. ಭಯ ಹಾಗೂ ಸಿಟ್ಟಿನಿಂದ ಮಿಖಾಯಲ್ನನ್ನು ಸೈಮನ್ನನು ಗದರುತ್ತಿರುವಾಗ  ಬಾಗಿಲು ತಟ್ಟಿದ ವ್ಯಕ್ತಿ ಆ ಆಜಾನುಬಾಹು ಯಜಮಾನ ತೀರಿಕೊಂಡಿದ್ದಾನೆಂದೂ, ಬೂಟಿನ ಬದಲಿಗೆ ಚಪ್ಪಲಿ ಮಾಡಿಕೊಡಬೇಕೆಂದೂ ಹೇಳಿದ.

ಮನುಷ್ಯನ ಅಹಮ್ಮಿಕೆ ಮತ್ತು ತಪ್ಪಿಸಿಕೊಳ್ಳಲಾಗಲಾರದ ಸಾವಿನ ಕುರಿತ ಅನನ್ಯ ನೋಟ ಈ ಕತೆಯಲ್ಲಿದೆ.

ಟಾಲ್ಸ್ಟಾಯ್ ಅವರ ಕೇಂದ್ರ ರಷ್ಯಾದ ಸಾಮಾನ್ಯ ಜನರು. ಬದುಕಿನ ಮೂಲಭೂತ ಸಂಗತಿಗಳ ಕುರಿತ ಶೋಧ ಮತ್ತು ಚಿಂತನೆ, ಮನುಷ್ಯನ ದೌರ್ಬಲ್ಯ ಮತ್ತು ಕೆಡುಕುಗಳು, ಅದರಿಂದ  ಕಲಿಯಬೇಕಾದ ಪಾಠಗಳು, ತುರ್ತುಪರಿಸ್ಥಿತಿಯಲ್ಲಿ ಅವನ ವರ್ತನೆಗಳು -ಇಂತಹ ಸಂಗತಿಗಳ ಮೇಲೆ ಅವರ ಗಮನಹರಿಯುತ್ತದೆ.

ವಿಜ್ಞಾನ ಮತ್ತು ಕಲೆ ಸಾಮಾನ್ಯರ ಸ್ವತ್ತು. ಅದು ಪಂಡಿತವರ್ಗದ ಪಾಲಾದರೆ ಅದು ಕಲೆಯೇ ಅಲ್ಲ, ವಿಜ್ಞಾನವೇ ಅಲ್ಲ ಎಂದ ಟಾಲ್ಸ್ಟಾಯ್ , ಸಹಜ ಮತ್ತು ಸಾಮಾನ್ಯ ಗುಣಗಳಿಂದಲೇ ಸಾಹಿತ್ಯವು ಜನಸಾಮಾನ್ಯರ ಹೃದಯಕ್ಕೆ ನಾಟಬೇಕೆಂದರು. ಅದನ್ನೇ ಪಾಲಿಸಿದರು.

ಕೀರ್ತಿ , ಸಿರಿವಂತಿಕೆ, ಪದವಿ, ಗೌರವ.. ಕಡೆಗೆ ಪ್ರಾಣ - ಇವೆಲ್ಲವನ್ನೂ ಜನಸಾಮಾನ್ಯರ ಸೇವೆಗೆ ಮುಡಿಪಾಗಿಡಲು ಮನಸ್ಸುಮಾಡಿದ ಟಾಲ್ಸ್ಟಾಯ್ ಮೌಢ್ಯದ ವಿರುದ್ಧ ಹೋರಾಡಿದರು. ದಬ್ಬಾಳಿಕೆಯನ್ನು ಪ್ರತಿಭಟಿಸಿದರು. ಪ್ರಭುತ್ವದ ದ್ವೇಷ ಕಟ್ಟಿಕೊಂಡರು.

ತಪ್ಪುಗಳನ್ನು ತಿದ್ದಿಕೊಳ್ಳುವ ಹಂಬಲ ಅವರನ್ನು ಪ್ರವಾದಿಯಾಗಿಸಿತು, ದಾರ್ಶನಿಕನನ್ನಾಗಿಸಿತು. ಭಾರತೀಯತೆಯ ನೆಲೆಯಲ್ಲಿ ಹೇಳುವುದಾದರೆ ಮಹರ್ಷಿಯಾಗಿಸಿತು.

ಎಲ್ಲರೂ ತಮ್ಮ ತಮ್ಮ ತಪ್ಪುಗಳ ವಿರುದ್ಧ ತಾವೇ ಹೋರಾಡುವಂತಾದರೆ ಅಲ್ಲಿ ಯುದ್ಧಕ್ಕೆ ಅವಕಾಶವೇ ಇರುವುದಿಲ್ಲ.
ಯಾರೊಂದಿಗೂ ದ್ವೇಷ ಬೇಡ , ಹಿಂಸೆಗೆ ಅವಕಾಶ ಕೊಡುವುದು ಬೇಡ. ಪ್ರೀತಿ ಮತ್ತು ಕ್ಷಮೆಯ ಅಳವಡಿಕೆಯೊಂದಿಗೆ ನಮ್ಮ ವ್ಯಕ್ತಿತ್ವದಲ್ಲಿ ಬದಲಾವಣೆಯನ್ನು ಕಂಡುಕೊಳ್ಳುವುದು ಉದಾತ್ತವಾದ ಮಾರ್ಗ ಎಂದರು ಟಾಲ್ಸ್ಟಾಯ್.  ಅವರದು ವಿಶ್ವಶಾಂತಿಯ, ವಿಶ್ವಮಾನವ ಪ್ರೇಮದ ಪರಿಕಲ್ಪನೆ. ಸತ್ಯಶೋಧನವನ್ನೇ ಬದಲಾವಣೆಯ ದಾರಿಯಾಗಿ ಕಂಡುಕೊಂಡವರವರು.

ಹೀಗೆ ನೈತಿಕ ನಿಲುವುಗಳನ್ನು ರೂಪಿಸಿಕೊಂಡ ರೂಢಿಸಿಕೊಂಡ ಟಾಲ್ಸ್ಟಾಯ್ ಅವರ ಪ್ರಭಾವ  ಜಗತ್ತಿನಾದ್ಯಂತ ಹಬ್ಬಿದೆ. ಮಹಾತ್ಮಾ ಗಾಂಧಿ, ಕುವೆಂಪು , ಮಾಸ್ತಿ, ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಮುಂತಾದ ಗಣ್ಯರು ಇವರ ಪ್ರಭಾವಳಿಗೆ ಸಿಲುಕಿದವರು. ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರು ಅವರೊಂದಿಗೆ ಪತ್ರವ್ಯವಹಾರ ನಡೆಸುತ್ತಿದ್ದರು. ಗ್ರಾಮ ಸ್ವರಾಜ್ಯದ ಪರಿಕಲ್ಪನೆ , ಅಹಿಂಸಾ ಮಾರ್ಗದ ಚಳುವಳಿ, ಆಶ್ರಮದ ಪರಿಕಲ್ಪನೆ, ಮದ್ಯ-ಮಾಂಸಾಹಾರ ವರ್ಜಿಸುವಿಕೆ ಮುಂತಾದ ಆಲೋಚನೆಗಳ ಹಿಂದೆ ಟಾಲ್ಸ್ಟಾಯ್ ಅವರ ತತ್ತ್ವ ಚಿಂತನೆಯ ಪ್ರಭಾವವಿದೆ.

ಕನ್ನಡದ ಪ್ರಜ್ಞೆಯಲ್ಲಿ ಟಾಲ್ಸ್ಟಾಯ್ ಸಾಕಷ್ಟು  ಹರಿದಿದ್ದಾರೆ. ಜಿ.ಪಿ.ರಾಜರತ್ನಂ , ಗೊರೂರು ರಾಮಸ್ವಾಮಿ ಅಯ್ಯಂಗಾರ್, ಸಿಂಪಿ ಲಿಂಗಣ್ಣ, ದೇ.ಜವರೇಗೌಡ ಮೊದಲಾಗಿ ಈಗಲೂ ಅನುವಾದವು  ಸೃಜನಶೀಲವಾಗಿ ನಡೆಯುತ್ತಿದೆ.  ಮತ್ತೆಮತ್ತೆ ಕನ್ನಡಕ್ಕೆ ಮರಳುತ್ತಿರುವ ಲೇಖಕರವರು. ನೈತಿಕ ಚರ್ಚೆಯಿಂದ, ಬದುಕನ್ನೇ ಪ್ರಯೋಗಕ್ಕೊಡ್ಡಿದ ಲೇಖಕರಾದ್ದರಿಂದ ಟಾಲ್ಸ್ಟಾಯ್ ನಮಗೆ ಅಗತ್ಯವೆನಿಸುತ್ತಾರೆ; ಅನುವಾದಕ್ಕೂ ಒಗ್ಗುತ್ತಾರೆ.

1910ರ ಅಕ್ಟೋಬರ್ 28ರಂದು ತನ್ನ 82ನೆ ವಯಸ್ಸಿನಲ್ಲಿ ಮನೆಬಿಟ್ಟು  ಬಂದು ಬುದ್ಧನಂತಾದರು  .  1910ನೇ ನವೆಂಬರ್ 10ರಂದು   ಟಾಲ್‌ಸ್ಟಾಯ್ ಕೊನೆಯುಸಿರೆಳೆದರು.  ಆದರೆ ಅವರು ಬದುಕಿದ ಪರಿಗೆ ಜಗತ್ತು ಬೆರಗಾಗಿದೆ. ಬರೆಯುವುದು ಸುಲಭ, ಆದರೆ ಬರೆದಂತೆ ಬದುಕಿ ತೋರಿಸಿದವರು ಟಾಲ್ಸ್ಟಾಯ್.  ಟಾಲ್ಸ್ಟಾಯರ ಮರುಓದಿಗೆ ಕಲಾತ್ಮಕತೆಯಷ್ಟೇ ಈ ಗುಣವೂ ಮುಖ್ಯವಾಗಿದೆ.

*


-ಕಾಜೂರು ಸತೀಶ್ 


No comments:

Post a Comment