ಮಹಾಭಾರತದ ಒಂದು ಸನ್ನಿವೇಶ: ದ್ರೋಣಾಚಾರ್ಯರು ಅರ್ಜುನನಿಗೆ ಒಂದು ಹಕ್ಕಿ ಕುಳಿತ ಮರವನ್ನು ತೋರಿಸಿ 'ಏನು ಕಾಣಿಸುತ್ತಿದೆ' ಎಂದಾಗ ಅವನು 'ಹಕ್ಕಿಯ ಕಣ್ಣು ಕಾಣಿಸುತ್ತಿದೆ' ಎಂದನಂತೆ .
ಮ್ಯಾಕ್ರೋ ಫೋಟೋಗ್ರಫಿ ಅಥವಾ ಸ್ಥೂಲ ಛಾಯಾಗ್ರಹಣದ ಬಗೆಯೂ ಹೀಗೆ. ಪಕ್ಷಿಯನ್ನು ಕಂಡಾಗ ಅದರ ಕಣ್ಣು ಅಥವಾ ಇತರೆ ನಿರ್ದಿಷ್ಟ ಭಾಗಗಳ ಮೇಲೆ ಕೇಂದ್ರೀಕರಿಸುವ ಬಗೆಯದು. ಅಥವಾ ಇಡೀ ಹಕ್ಕಿಯ ಸಮೀಪದ ನೋಟವನ್ನು ಒದಗಿಸುವ ಛಾಯಾಗ್ರಹಣ. ಅದರ ಪಯಣ ಇಡಿಯಿಂದ ಬಿಡಿಯ ಕಡೆಗೆ.
ಸಣ್ಣ ವಸ್ತು ಅಥವಾ ಆಕೃತಿಗಳನ್ನು ಅವು ಇರುವ ಹಾಗೆ ಅಥವಾ ಇರುವುದಕ್ಕಿಂತ ಹೆಚ್ಚಿನ ಆಕಾರ ಮತ್ತು ಗಾತ್ರದಲ್ಲಿ ಕಾಣುವಂತೆ ಕ್ಲಿಕ್ಕಿಸುವುದೇ ಮ್ಯಾಕ್ರೋ ಛಾಯಾಗ್ರಹಣ . ನಮ್ಮ ಕಣ್ಣೆದುರೇ ಇರುವ ಹೂವು, ಎಲೆ, ಕೀಟ, ನೀರಹನಿ, ಆಹಾರವಸ್ತುಗಳು, ಪ್ರಾಣಿ-ಪಕ್ಷಿ, ಕಲ್ಲು ಕಡ್ಡಿಗಳಿಂದ ಮೊದಲ್ಗೊಂಡು ನಮ್ಮ ಬರಿಗಣ್ಣು ಸವಿಯದ ಸಮೀಪದ ನೋಟವನ್ನು ಮ್ಯಾಕ್ರೊ ಛಾಯಾಗ್ರಹಣವು ನಮಗೆ ನೀಡುತ್ತದೆ.
ನಮ್ಮ ಮನೆಯ ಗೋಡೆಯ ಮೇಲೆ ಲೊಚಗುಡುವ ಹಲ್ಲಿಯ ಕಣ್ಣು ,ಅದರ ಮೈಯ ರಚನೆ; ಕಾಲಿನ ಪಕ್ಕದಲ್ಲೇ ಮಲಗಿರುವ ಬೆಕ್ಕಿನ ಕಣ್ಣು ; ಪುಟ್ಟ ಮಗುವಿನ ಭಾವಚಿತ್ರ, ಅದರ ಕೂದಲು, ಕಣ್ಣು ,ಕಿವಿ, ಅಡುಗೆಮನೆಯ ತರಕಾರಿ, ಆಹಾರವಸ್ತುಗಳು ಇವೂ ಮ್ಯಾಕ್ರೋ ಛಾಯಾಗ್ರಹಣದ ವಸ್ತು.ಹಾಗೆಯೇ, ಮಾರುಕಟ್ಟೆಯ ಉತ್ಪನ್ನಗಳು ,ಪುಸ್ತಕದ ರಕ್ಷಾಪುಟ, ಎಲೆಕ್ಟ್ರಾನಿಕ್ ಉತ್ಪನ್ನಗಳು , ಆಭರಣಗಳು.. ಹೀಗೆ ಮನೆಯ ಒಳಗೇ ಆರಂಭಿಸಬಹುದಾದ ಮ್ಯಾಕ್ರೊ ಛಾಯಾಗ್ರಹಣವು ದಟ್ಟ ಅರಣ್ಯದ ವಿಶಿಷ್ಟ ಕೀಟ ಹಾಗೂ ಸಸ್ಯ ಪ್ರಭೇದಗಳವರೆಗೂ ಚಾಚಿಕೊಳ್ಳುತ್ತದೆ.
ಇನ್ನೂ ಸ್ಪಷ್ಟವಾಗಬೇಕಾದರೆ : ನಿಮ್ಮ ಮನೆಯ ಗೋಡೆಯ ಮೇಲೆ ಒಂದು ಹಲ್ಲಿಯೋ ಅಥವಾ ಜೇಡವೋ ಇದೆ ಎಂದಿಟ್ಟುಕೊಳ್ಳಿ. ನೀವು ನಿಮ್ಮ ಮೊಬೈಲಿನಲ್ಲಿ ಅದನ್ನು ಕ್ಲಿಕ್ಕಿಸುತ್ತೀರಿ. ಈಗ ಅದೊಂದು ಸಾಮಾನ್ಯ ಚಿತ್ರವಷ್ಟೇ. ಕೆಲವರು ಅದನ್ನು ನೋಡಿದರೆ ಭಯಪಡುವುದೂ ಉಂಟು. ಅದೇ ಜೀವಿಯ ಸುಂದರ ಕಣ್ಣು ಅಥವಾ ರೇಖಾಗಣಿತದ ಆಕೃತಿಯಂತಹ ಅದರ ದೇಹದ ವಿನ್ಯಾಸದ ಮೇಲೆ ಕೇಂದ್ರೀಕರಿಸಿದ ಚಿತ್ರ ಎಂಥವರನ್ನೂ ಸೆಳೆಯುತ್ತದೆ. ವಿಜ್ಞಾನದ ವಿದ್ಯಾರ್ಥಿಗೆ ಅದೊಂದು ಅಧ್ಯಯನದ ವಸ್ತು. ಕಲೋಪಾಸಕನಿಗೆ ಅದೊಂದು ಅದ್ಭುತ ಕಲೆ. ಹೀಗೆ, ಒಂದು ಅಲಕ್ಷಿತ ಸಂಗತಿಯನ್ನೂ ಚಿತ್ರವಾಗಿಸುವ ಈ ಬಗೆಯ ಛಾಯಾಗ್ರಹಣವೇ ಮ್ಯಾಕ್ರೋ ಛಾಯಾಗ್ರಹಣ
*
ಮ್ಯಾಕ್ರೋ ಛಾಯಾಗ್ರಹಣಕ್ಕೆ ಬೇಕಿರುವ ಮುಖ್ಯ ಸಾಧನಗಳು: 👉DSLR ಕ್ಯಾಮರಾ ಅಥವಾ Mirrorless ಕ್ಯಾಮರಾ ಅಥವಾ ಸ್ಮಾರ್ಟ್ ಫೋನ್
👉ಮ್ಯಾಕ್ರೋ ಮಸೂರ ಅಥವಾ ಮ್ಯಾಕ್ರೋ ಲೆನ್ಸ್
👉ಫ್ಲ್ಯಾಷ್
👉ಬೆಳಕಿನ ಚದುರುವಿಕೆಗಾಗಿ ಡಿಫ್ಯೂಸರ್
👉 ಕ್ಯಾಮರಾವನ್ನು ನಿಲ್ಲಿಸುವ ಟ್ರೈಪಾಡ್
👉ಸಾಮಾನ್ಯ ಲೆನ್ಸುಗಳನ್ನು ಮ್ಯಾಕ್ರೋ ಆಗಿ ಪರಿವರ್ತಿಸಲು ಅಂದರೆ ಲೆನ್ಸನ್ನು ತಿರುಗಿಸಿ ಹಾಕಲು ರಿವರ್ಸ್ ರಿಂಗ್
👉 ಸನಿಹದಿಂದ ಫೋಕಸ್ ಮಾಡಲು ಕ್ಲೋಸ್ ಅಪ್ ಫಿಲ್ಟರ್ ಅಥವಾ ಶೋಧಕ
👉ಲೆನ್ಸನ್ನು ವಿಸ್ತರಿಸಲು ವಿಸ್ತರಣಾ ಕೊಳವೆ ಅಥವಾ Extension Tube
*
ಮ್ಯಾಕ್ರೋ ಛಾಯಾಗ್ರಹಣದ ಇತಿಹಾಸ
ಮ್ಯಾಕ್ರೋ ಛಾಯಾಗ್ರಹಣವು ಆರಂಭವಾದದ್ದು ಇಪ್ಪತ್ತನೆಯ ಶತಮಾನದ ಆದಿಯಲ್ಲಿ. ಫ್ರ್ಯಾಂಕ್ ಪರ್ಸಿ ಸ್ಮಿತ್ ಎಂಬ ಬ್ರಿಟನ್ನಿನ ಛಾಯಾಗ್ರಾಹಕ ಈಗ ನಾವು ಬಳಸುತ್ತಿರುವ ಮಾದರಿಯ ವಿಸ್ತರಣಾ ಕೊಳವೆ ಅಥವಾ extension tubeಗಳ ಸಹಾಯದಿಂದ ಕೀಟಗಳ ಚಿತ್ರಗಳನ್ನು ಮೊದಲು ಸೆರೆಹಿಡಿದರು. ಶೈಕ್ಷಣಿಕ ಹಾಗೂ ಸಂಶೋಧನಾ ದೃಷ್ಟಿಯಿಂದ ಆಗಿನ ಮ್ಯಾಕ್ರೋ ಛಾಯಾಗ್ರಹಣವು ನಡೆಯುತ್ತಿತ್ತು. ಈಗಿನ ಹಾಗೆ ಚಿತ್ರವನ್ನು ಸೆರೆಹಿಡಿಯುವಾಗ ವಸ್ತುವಿನ ವಿನ್ಯಾಸವನ್ನು ಕ್ಯಾಮರಾದ Viewfinderನಲ್ಲಿ ನೋಡಿ ಅನುಭವಿಸುವ ಮತ್ತು ಚಿತ್ರಕ್ಕೆ ಚೌಕಟ್ಟನ್ನು ರೂಪಿಸುವ ಅವಕಾಶ ಆಗ ಇರಲಿಲ್ಲ. ಅಥವಾ, ಇಂದಿನ ಮೊಬೈಲ್ ಫೋನ್ ಮತ್ತು mirrorless ಕ್ಯಾಮರಾಗಳ ಹಾಗೆ ನಾವು ಕ್ಲಿಕ್ಕಿಸಬೇಕಾದ ವಸ್ತುಗಳನ್ನು ಪರದೆಯಲ್ಲಿ ನೋಡಿಕೊಂಡೇ ಚಿತ್ರಿಸುವ ಅವಕಾಶವೂ ಆಗ ಇರಲಿಲ್ಲ. 1950ರಲ್ಲಿ SLR ಅಥವಾ single lens reflexನ ಆವಿಷ್ಕಾರದ ಅನಂತರ ಮ್ಯಾಕ್ರೋ ಛಾಯಾಗ್ರಹಣಕ್ಕೆ ವಿಶೇಷ ಅವಕಾಶಗಳು ದೊರೆತವು. ಇಂದು ಛಾಯಾಗ್ರಹಣ ಜಗತ್ತಿನ ಬಹುಮುಖ್ಯ ಸಂಗತಿಗಳಲ್ಲಿ ಮ್ಯಾಕ್ರೋ ಛಾಯಾಗ್ರಹಣವೂ ಒಂದು.
*
ಮ್ಯಾಕ್ರೋ ಲೆನ್ಸ್ ಅಥವಾ ಮ್ಯಾಕ್ರೋ ಮಸೂರವನ್ನು ಮೂರು ಬಗೆಯಲ್ಲಿ ವಿಂಗಡಿಸಬಹುದು:
👉 60 ಮಿ.ಮೀ.ಗಿಂತ ಕಡಿಮೆ ನಾಭಿದೂರ ಅಥವಾ focal length ಹೊಂದಿರುವ ಕಿರು ಮ್ಯಾಕ್ರೋ ಮಸೂರ
👉 ಸುಮಾರು 90ರಿಂದ 105ಮಿ.ಮೀ. ನಡುವಿನ ನಾಭಿದೂರ ಹೊಂದಿರುವ ಮಧ್ಯಮ ಮ್ಯಾಕ್ರೋ ಮಸೂರ
ಮತ್ತು
👉ಸುಮಾರು 150ರಿಂದದ 200 ಮಿ.ಮೀ. ನಾಭಿದೂರ ಹೊಂದಿರುವ ಉದ್ದನೆಯ ಮ್ಯಾಕ್ರೋ ಮಸೂರ.
ಕಿರು ಮ್ಯಾಕ್ರೋ ಮಸೂರದಲ್ಲಿ ವಸ್ತುವಿನ ಸಮೀಪಕ್ಕೆ ಹೋಗಿ ಚಿತ್ರವನ್ನು ತೆಗೆಯಬೇಕು. ಉದ್ದನೆಯ ಮ್ಯಾಕ್ರೋ ಮಸೂರದಲ್ಲಿ ಸ್ವಲ್ಪ ಅಂತರವನ್ನು ಕಾಯ್ದುಕೊಂಡು ಚಿತ್ರವನ್ನು ಸೆರೆಹಿಡಿಯಬಹುದು. ಕೆಲವು ಸೂಕ್ಷ್ಮ ಸ್ವಭಾವದ ಅಂದರೆ ಕ್ಯಾಮರಾಗಳಿಗೆ ಸುಲಭವಾಗಿ ಸಿಗದ ಜೀವಿಗಳನ್ನು ಚಿತ್ರಿಸಲು ಹಾಗೂ ವಸ್ತುಗಳನ್ನು ಭಯಪಡಿಸದೆ ಚಿತ್ರೀಕರಿಸಲು ಇವು ಸಹಕಾರಿಯಾಗಿದೆ.
ಮ್ಯಾಕ್ರೋದಲ್ಲಿ ಚಿತ್ರದ ಸಂಯೋಜನೆ, ಹಿನ್ನೆಲೆ , ಬೆಳಕು, ಬಹಳ ಮುಖ್ಯ. ನಿಸರ್ಗದ ಸಹಜ ಬಣ್ಣ, ಬೆಳಕು, ಹಿನ್ನೆಲೆ ಸಿಕ್ಕಿದರಂತೂ ಛಾಯಾಗ್ರಾಹಕರಿಗೆ ಹಬ್ಬ. ಚಿತ್ರವನ್ನು ಕ್ಲಿಕ್ಕಿಸಿದ ಅನಂತರದ processing ಅಥವಾ ಸಂಸ್ಕರಣೆಯು ಬೇಕಿರುವ ತಿದ್ದುಪಡಿಗೆ ಸಹಕಾರಿ. ಅದಕ್ಕಾಗಿ ವಿವಿಧ softwareಗಳು ಇಂದು ಲಭ್ಯವಿವೆ.
ಚಿತ್ರಕ್ಕೊಂದು ಚೌಕಟ್ಟಿದೆಯೇ? ಅದು ಏನನ್ನೋ ಹೇಳುತ್ತಿದೆಯೇ? ಬೆಳಕು ಯಾವುದರ ಮೇಲೆ ಬಿದ್ದಿದೆ? ಕೇಂದ್ರೀಕರಿಸಿದ ಚಿತ್ರ ಮತ್ತು ಹಿನ್ನೆಲೆ ಒಂದೇ ಬಣ್ಣದಲ್ಲಿದೆಯೇ ಅಥವಾ ಪ್ರಧಾನ ಭಾಗವೇ ಮಸುಕಾಗಿದೆಯೇ? ನೆರಳು ಬೆಳಕಿನ ಸಂಯೋಜನೆ ಇದೆಯೇ? 3D ಅಥವಾ ಮೂರು ಆಯಾಮಗಳಿವೆಯೇ? ಈ ಎಲ್ಲ ಪ್ರಶ್ನೆಗಳು ಮ್ಯಾಕ್ರೋ 'ಚಿತ್ರದ ಪರಿಣಾಮ'ದ ಮಹತ್ವವನ್ನು ತಿಳಿಸುತ್ತವೆ. ಇವೆಲ್ಲವುಗಳ ಜೊತೆಗೆ ಛಾಯಾಗ್ರಾಹಕರ ತಂತ್ರಗಾರಿಕೆಯ ಪಾಲೂ ಬೇಕಾಗುತ್ತದೆ.
*
ಸ್ಮಾರ್ಟ್ ಫೋನಿನಲ್ಲಿ ಮ್ಯಾಕ್ರೋ ಛಾಯಾಗ್ರಹಣ
ಕ್ಯಾಮೆರಾ ಹಾಗೂ ಕ್ಯಾಮರಾ ಸಂಬಂಧಿ ಉಪಕರಣಗಳನ್ನು ಕೊಳ್ಳಲು ಸಾಮರ್ಥ್ಯವಿರುವವರು ಮಾತ್ರವೇ ಮಾಡುತ್ತಿದ್ದ ಛಾಯಾಗ್ರಹಣವು ಸ್ಮಾರ್ಟ್ ಫೋನುಗಳು ಬಂದಾಗಿನಿಂದ ಹಲವು ಮಂದಿಯ ಆಸಕ್ತಿಯ ಕ್ಷೇತ್ರವಾಗಿದೆ. ಇದು ಮತ್ತೆ ಒಂದು ಹೆಜ್ಜೆ ಮುಂದೆ ಸಾಗಿ, ಮ್ಯಾಕ್ರೋ ಲೆನ್ಸುಗಳನ್ನು ಕೊಂಡುಕೊಂಡು ಮ್ಯಾಕ್ರೋ ಛಾಯಾಗ್ರಹಣವನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ. ಕೆಲವು ಸ್ಮಾರ್ಟ್ ಫೋನುಗಳಿಗೆ ಹೊಂದಿಕೊಳ್ಳುವ ಈ ಕ್ಲಿಪ್ ಲೆನ್ಸುಗಳು ಇಂದು ಮಾರುಕಟ್ಟೆಯಲ್ಲಿ ಕಡಿಮೆ ದರದಲ್ಲಿ ಲಭ್ಯವಾಗುತ್ತಿವೆ . ಹಾಗೆಯೇ, ಬೆಳಕಿಗಾಗಿ ಅಗತ್ಯವಿರುವ ಡಿಫ್ಯೂಸರುಗಳೂ ಲಭ್ಯವಿವೆ. ತೆಗೆದ ಚಿತ್ರವನ್ನು playstoreನಲ್ಲಿ ಲಭ್ಯವಿರುವ ಕೆಲವು appಗಳಲ್ಲಿ ಸಂಸ್ಕರಣೆ ಅಥವಾ ಪ್ರೊಸೆಸಿಂಗ್ ಮಾಡಿ ಬೆಳಕು-ಬಣ್ಣಗಳ ತಿದ್ದುಪಡಿಗಳನ್ನೂ ಮಾಡಿಕೊಳ್ಳಬಹುದು.
ಸ್ಮಾರ್ಟ್ ಫೋನುಗಳಲ್ಲಿ ಬಳಸುವ ಲೆನ್ಸುಗಳು ಒಂದು ಸಾವಿರ ರೂಪಾಯಿಗೂ ಲಭ್ಯವಿದೆ. ಹಾಗೆಯೇ, dslrಗೆ ಅಗತ್ಯವಾದ ಲಕ್ಷಾಂತರ ಮೌಲ್ಯದ ಮ್ಯಾಕ್ರೋ ಲೆನ್ಸುಗಳೂ ಮಾರುಕಟ್ಟೆಯಲ್ಲಿ ಲಭ್ಯವಿವೆ.
ಛಾಯಾಗ್ರಹಣದಲ್ಲಿ ಒಲವಿರುವ ಆದರೆ dslr ಕ್ಯಾಮರಾವನ್ನು ಕೊಳ್ಳಲು ಸಾಧ್ಯವಾಗದ ಗೃಹಿಣಿಯರಿಗೆ
ಮ್ಯಾಕ್ರೋ ಛಾಯಾಗ್ರಹಣ ಉತ್ತಮ ವೇದಿಕೆ. 'ಇಷ್ಟು ಕಾಲ ಇವೆಲ್ಲಾ ಎಲ್ಲಿದ್ದವು' ಎಂದು ಹುಬ್ಬೇರಿಸುವಂತೆ ಮಾಡುವ ಬಗೆಬಗೆಯ ಕೀಟಗಳ ದರ್ಶನವಾಗುತ್ತದೆ. ಮನೆಯ ಹೂದೋಟದಲ್ಲಿ ಹೂವಿನೊಂದಿಗೆ ಹೂವಿನ ಹಾಗೇ ಕಾಣುವ ಚಿಟ್ಟೆಗಳು, ಬಳುಕುತ್ತಾ ಸಾಗುವ ಬಗೆಬಗೆಯ ಹುಳುಹುಪ್ಪಟೆಗಳು, ಧ್ಯಾನಸ್ಥ ಸ್ಥಿತಿಯಲ್ಲಿರುವ ಜೇಡದ ಬೆರಗಿನ ಬಣ್ಣ- ಅದರ ಮೈಮೇಲಿನ ಕೂದಲು, ಕೀಟಗಳ ಮಿಲನ, ಚಲನೆ ... ಹೀಗೆ ಛಾಯಾಗ್ರಹಣ ನೀಡುವ ದಿವ್ಯ ಸುಖವನ್ನು ಅವರೂ ಅನುಭವಿಸಬಹುದು. ಕ್ರಮೇಣ, ಕ್ರಿಮಿ-ಕೀಟಗಳ ಮೇಲಿನ ಭಯ ಹೊರಟುಹೋಗಿ ಅವುಗಳ ಬೆನ್ನುಹತ್ತುವಂತೆ ಮಾಡುತ್ತವೆ.
ಸ್ಮಾರ್ಟ್ ಫೋನುಗಳಲ್ಲಿ ಸ್ಥೂಲ ಛಾಯಾಗ್ರಹಣ ಮಾಡುವಾಗ ವಸ್ತುವಿನ ತೀರಾ ಸನಿಹಕ್ಕೆ ನಾವು ತೆರಳಬೇಕಾಗುತ್ತದೆ. ಕಡಿಮೆ ನಾಭಿದೂರದ dslr ಮ್ಯಾಕ್ರೋ ಲೆನ್ಸುಗಳನ್ನು ಬಳಸುವಾಗಲೂ ಹೀಗೆಯೇ ಆಗುತ್ತದೆ. ಅದು ಎಷ್ಟರಮಟ್ಟಿಗೆ ಎಂದರೆ ಕೆಲವೊಮ್ಮೆ ಈ ಲೆನ್ಸುಗಳು ವಸ್ತುವನ್ನು ಸ್ಪರ್ಶಿಸಿಯೇಬಿಡುತ್ತವೆ. ಈ ಎಚ್ಚರ ಛಾಯಾಗ್ರಾಹಕರಿಗೆ ಇರಬೇಕಾಗುತ್ತದೆ.
*
ಛಾಯಾಗ್ರಹಣವು ಒಂದು ಧ್ಯಾನಸ್ಥ ಪ್ರಕ್ರಿಯೆ. ಕೆಲವೊಮ್ಮೆ ಒಂದು ಚಿತ್ರಕ್ಕಾಗಿ ದಿನವಿಡೀ ಕಾದು ಕೂರಬೇಕು. ಅವುಗಳು ಕಣ್ಣಿಗೆ ಕಂಡರೂ ಚಿತ್ರವನ್ನು ತೆಗೆಯುವ ಸಂದರ್ಭದಲ್ಲಿ ಅವು ಸ್ಥಾನ ಬದಲಿಸಿ ನಮ್ಮ ಕಣ್ಣುತಪ್ಪಿಸಿರುತ್ತವೆ. ನಿಸರ್ಗದ ಬಣ್ಣದೊಂದಿಗೆ ರಾಜಿಮಾಡಿಕೊಳ್ಳುವ ಇವು ನಮ್ಮ ಕಣ್ಣಿಗೆ ಬೀಳಬೇಕೆಂದರೆ ನಮಗೆ ತಾಳ್ಮೆ ಬೇಕಾಗುತ್ತದೆ ; ಅನುಭವ ಬೇಕಾಗುತ್ತದೆ.
*
ಸಾಮಾನ್ಯವಾಗಿ ವಸ್ತು/ಕೀಟಗಳನ್ನು ಸ್ಥಳಾಂತರಗೊಳಿಸಿ, ನಮಗೆ ಬೇಕಾದ ಸ್ಥಳದಲ್ಲಿ ಕೂರಿಸಿ ಮ್ಯಾಕ್ರೋ ಛಾಯಾಗ್ರಹಣವನ್ನು ಮಾಡುವುದಿದೆ. ಆದರೆ, ಅವುಗಳನ್ನು ಒಕ್ಕಲೆಬ್ಬಿಸಿ ಅವುಗಳ ಸ್ವಾತಂತ್ರ್ಯಕ್ಕೆ ಧಕ್ಕೆ ತರುವುದು ಸರಿಯಲ್ಲ. ಅವುಗಳ ಸಹಜ ಇರುವಿಕೆಯನ್ನೇ ಚಿತ್ರವಾಗಿಸುವ ಖುಷಿ ಹಾಗೂ ಸಾರ್ಥಕತೆಯೇ ಬೇರೆ.
*
ಕಾಂಕ್ರೀಟು ಕಾಡುಗಳು ಮಣ್ಣಿನಲ್ಲಿ ಬದುಕುವ ಅಸಂಖ್ಯ ಜೀವಿಸಮೂಹವನ್ನು ನಾಶಪಡಿಸುತ್ತವೆ. ಮನುಷ್ಯನ ಕುತೂಹಲಗಳಿಗೆ ಜೀವ ಬರುವುದೇ ನಿಸರ್ಗದ ಸಣ್ಣಸಣ್ಣ ಸಂಗತಿಗಳ ಹುಡುಕಾಟದಿಂದ. ಈ ಹುಡುಕಾಟವು ನಿಸರ್ಗದ ಮೇಲೆ ಪ್ರೀತಿಯನ್ನೂ, ಮನಸ್ಸಿಗೆ ಸಂತೋಷವನ್ನೂ ಹುಟ್ಟಿಸುತ್ತದೆ. ಬರಿಗಣ್ಣು ಗ್ರಹಿಸದ ಸಂಗತಿಗಳನ್ನು ಕಲಾತ್ಮಕವಾಗಿ ಚಿತ್ರಿಸುವ ಕ್ರಮವು ನಮ್ಮ ನೋಡುವ ಕ್ರಮವನ್ನೇ ಬದಲಿಸುತ್ತದೆ ಹಾಗೂ ಸೃಜನಶೀಲತೆಯನ್ನು ಹೆಚ್ಚಿಸುತ್ತದೆ.
ಪ್ರಕೃತಿಯನ್ನು ಪ್ರೀತಿಸುವ, ಅರ್ಥಮಾಡಿಕೊಳ್ಳುವ ಮಾರ್ಗಗಳಲ್ಲಿ ಮ್ಯಾಕ್ರೋ ಫೋಟೋಗ್ರಫಿಯೂ ಒಂದು. ಬದಲಾದ ಕಾಲಕ್ಕನುಗುಣವಾಗಿ ನವನವೀನ ಕ್ಯಾಮರಾಗಳ ಆವಿಷ್ಕಾರಗಳಾಗಿವೆ. ಹೆಚ್ಚಿನ ಮಂದಿ ಛಾಯಾಗ್ರಹಣದ ಕಡೆಗೆ ಆಸಕ್ತಿ ಬೆಳೆಸಿಕೊಂಡಿದ್ದಾರೆ. ಕೇವಲ ಪರಿಸರ ಅಧ್ಯಯನಕಾರರಷ್ಟೇ ತೊಡಗಿಸಿಕೊಳ್ಳುತ್ತಿದ್ದ ಈ ಕ್ಷೇತ್ರಕ್ಕೆ ಬೇರೆಬೇರೆ ವಲಯಗಳ ಜನರು ಪ್ರವೇಶಿಸುತ್ತಿದ್ದಾರೆ. ಜನಸಾಮಾನ್ಯರ ಪ್ರವೇಶವೇ ಅದರ ಹೆಚ್ಚುಗಾರಿಕೆ. ಅವರ ಅಧ್ಯಯನಕ್ಕಾಗಿ ಅಂತರ್ಜಾಲದ ನೆರವಿದೆ. ಸ್ವಂತ ಆಸಕ್ತಿಯ ಬೆಂಬಲವಿದೆ.
ಇಡೀ ಪ್ರಕೃತಿ ರೂಪುಗೊಂಡಿರುವುದು ಮತ್ತು ಅದು ಪೂರ್ಣಗೊಳ್ಳುವುದು ನಾವು ಅಲಕ್ಷಿಸುವ ಹುಳುಹುಪ್ಪಟೆಗಳಿಂದ ಎಂಬ ಅರಿವನ್ನು ನಮಗೆ ಮ್ಯಾಕ್ರೋ ಛಾಯಾಗ್ರಹಣವು ನೀಡುತ್ತದೆ. ಅಂತಹ ಅರಿವು ನಮಗೆ ಬಂದಲ್ಲಿ ನಾವು ಪ್ರಕೃತಿಯನ್ನು ಪ್ರೀತಿಸಲು ತೊಡಗುತ್ತೇವೆ, ಕಾಳಜಿ ತೋರುತ್ತೇವೆ.
ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಅವರ ಸಾಲುಗಳಂತೆ,
ಪ್ರೀತಿ ಇಲ್ಲದ ಮೇಲೆ -
ಹೂವು ಅರಳೀತು ಹೇಗೆ ?
ಮೋಡ ಕಟ್ಟೀತು ಹೇಗೆ ?
ಹನಿಯೊಡೆದು ಕೆಳಗಿಳಿದು
ನೆಲಕ್ಕೆ ಹಸಿರು ಮೂಡೀತು ಹೇಗೆ?
*
ಕಾಜೂರು ಸತೀಶ್
No comments:
Post a Comment