ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Sunday, July 10, 2022

ಅವನು ಹೊರಟುಹೋದ!

ಅವನು ಈ ಸಂಜೆ ಹೋಗಿಬಿಟ್ಟ.

ತುಸು ಮೊದಲು ನನ್ನ ಮುಖವನ್ನೇ ನೋಡುತ್ತಿದ್ದ. ಬೈಯ್ಯುತ್ತಾರೆಂದು ಹೆದರಿ ಔಷಧಿ ಕುಡಿದ. 'ನೀರು ಬೇಕಾ?' ಎಂದಾಗ ಮತ್ತೆ ಮುಖವನ್ನೇ ನೋಡಿದ. ಹೊಟ್ಟೆತುಂಬುವಷ್ಟು ಕುಡಿದ.

ಆ ತಿಂಡಿ ಎಂದರೆ ಅಷ್ಟು ಇಷ್ಟ ಅವನಿಗೆ. ಅಡುಗೆ ಮನೆಯಿಂದ ವಾಸನೆ ಬಂದರೆ ಕೇಳಿ ತಿನ್ನುತ್ತಿದ್ದ. ಈ ಸಂಜೆಯೂ ಅದೇ ತಿಂಡಿ ಮಾಡಿದ್ದರು ಅಮ್ಮ. ಅವನು ಕೇಳಲಿಲ್ಲ. ಒಂದೆರಡು ಸಣ್ಣ ತುಂಡುಗಳನ್ನು ತಿಂದು ಮತ್ತೆ ಬೇಡವೆಂದ.

ಕೆಲವು ದಿನಗಳಿಂದ ಅವನ ಧ್ವನಿ ಹೊರಟುಹೋಗಿತ್ತು. ವೈದ್ಯರನ್ನು ಕರೆಸಿದಾಗ ಅವರನ್ನೇ ಗದರಿಸಿ ಕಳುಹಿಸಿದ್ದ.

ನಿಧಾನಕ್ಕೆ ಊಟಬಿಟ್ಟ. ಮೂರು ಹೊತ್ತು ನಾನ್ವೆಜ್ ಇಲ್ಲದೆ ಏನೂ ತಿನ್ನುವವನಲ್ಲ . ಅದೂ ಬೇಡವೆಂದ.

ಇಡೀ ದಿನ ಮಲಗಿದ್ದಲ್ಲೇ ಇದ್ದ. ಹಾಗೆಂದು ಒಂದು ಎರಡು ಅಲ್ಲೇ ಮಾಡಿಕೊಳ್ಳುವವನಲ್ಲ. ಅದನ್ನೆಲ್ಲ ತಡೆದುಕೊಂಡೇ ಇದ್ದ. ಅಥವಾ ಮಧ್ಯರಾತ್ರಿ ಯಾರಿಗೂ ತಿಳಿಯದಂತೆ ಹೋಗಿಬರುತ್ತಿದ್ದನೋ ಗೊತ್ತಿಲ್ಲ.

ಈ ಸಂಜೆ ಅವನು ಏನೂ ಮಾತನಾಡದೆ ನನ್ನ ಮುಖವನ್ನೇ ದಿಟ್ಟಿಸುತ್ತಿದ್ದಾಗ ನನ್ನ ಹೃದಯ ಕರಗುತ್ತಿರುವಂತೆ ಅನಿಸುತ್ತಿತ್ತು. 'ಸ್ವಲ್ಪ ಬಿಸಿಲು ಬಂದರೆ ಸರಿಯಾಗುತ್ತಾನೆ' ಅಮ್ಮ ಹೇಳುತ್ತಿದ್ದರು.

ನಿಜಕ್ಕೂ ಅವನು ಹೋದನೇ? ನಂಬಲಾಗುತ್ತಿಲ್ಲ ನನಗೆ.
*
೨೦೧೩ರಲ್ಲಿ ಅಪ್ಪ ಇದೇ ಊರಿನಿಂದ ಅವನನ್ನು ತಂದಿದ್ದರು. ಇಷ್ಟೇ ಇಷ್ಟಿದ್ದ ಅವನನ್ನು ನೋಡಿ 'ಇವನನ್ಯಾಕೆ ತಂದ್ರಿ!?' ಎಂದಿದ್ದೆ. ಆಮೇಲೆ ಅವನ ದುರ್ಬಲ ಕಾಲುಗಳನ್ನು ನೋಡಿ 'ಅಯ್ಯೋ.. ಬೇರೆ ಸಿಗ್ಲಿಲ್ವಾ' ಎಂದು ಕೇಳಿದ್ದೆ.


ಅಪ್ಪನ ಏಟು ತಿಂದು ಭಯದ ವಾತಾವರಣದಲ್ಲೇ ಬೆಳೆದ. ಕೂರು ಎಂದರೆ ಕೂರಬೇಕು, ನಿಲ್ಲು ಎಂದರೆ ನಿಲ್ಲಬೇಕು! ಹೊರಗೆ ಹೋಗಬೇಕೆಂದಿದ್ದರೆ ಒಂದೆರಡು ನಿಮಿಷಗಳಲ್ಲಿ ಹಿಂತಿರುಗಬೇಕು! ಅವನ ಧ್ವನಿಯೋ ಒಂದು ಶಬ್ದಕ್ಕೆ ಕಿವಿಯೇ ಒಡೆದುಹೋಗುವಷ್ಟು!


ಗಾಳಿಯಲ್ಲಿ ಎಸೆದ ಬಿಸ್ಕತ್ತನ್ನು ಬಾಯಲ್ಲಿ ಹಿಡಿಯುವುದು, ನೆಗೆಯುವುದು, ಬೇಟೆಯಾಡುವುದು, ಬಂದ ಅಪರಿಚಿತರನ್ನು ಗದರಿಸಿ ಓಡಿಸುವುದು, ಕಾಡಿಗೆ ತೆರಳುವಾಗ ಸಂಭ್ರಮದಿಂದ ಬರುವುದು, ಹಾವು,ಮೊಲಗಳನ್ನು ಅಟ್ಟಾಡಿಸುವುದು.. ಹೀಗೆ ಅವನು ಬೆಳೆದು ದೊಡ್ಡವನಾಗುತ್ತಿರುವಾಗಲೇ ಅಪ್ಪ ಹೊರಟುಹೋದರು.


ಅವನ ಜೊತೆಗಾರನೂ ಹೊರಟುಹೋದ. ತರುವಾಯ ಮತ್ತೊಬ್ಬನೂ.


ಇವನು ಅಮ್ಮನ ಜೊತೆಗಿದ್ದ. ಅವನೊಡನೆ ಮಾತನಾಡುತ್ತಾ ಅವನ ತುಂಟತನಗಳನ್ನು ಸಹಿಸುತ್ತಾ ಅವನು 'ಅಮ್ಮಾ' ಎನ್ನುವುದನ್ನು ಕೇಳಿ ಸಂಭ್ರಮಿಸುತ್ತಾ ಅಮ್ಮ ಇರುತ್ತಿದ್ದಳು.


ಒಂದು ಬೈಗುಳಕ್ಕೆ ಅವನು ಎಷ್ಟು ಹೆದರುತ್ತಿದ್ದ! ಅವನಿಗೆ ಎಷ್ಟು ಚೆನ್ನಾಗಿ ಭಾಷೆ ಬರುತ್ತಿತ್ತು. ಬೆಳಿಗ್ಗೆ ಏಳುವುದು ತಡವಾದರೆ ಕರೆಯುತ್ತಿದ್ದ. ಹಾವು ಬಂದರೆ ತಿಳಿಸುತ್ತಿದ್ದ. ಟ್ಯಾಪಿನಲ್ಲಿ ನೀರು ವ್ಯಯವಾಗುತ್ತಿದ್ದರೆ ಸೂಚನೆ ಕೊಡುತ್ತಿದ್ದ. ಆನೆ ಬಂದರೆ ಸದ್ದು ಮಾಡದೆ ಹೋಗಿ ಮಲಗಿಬಿಡುತ್ತಿದ್ದ. ಪಟಾಕಿಯ ಸದ್ದು ಕೇಳಿದರಂತೂ ನಾಪತ್ತೆ.



 ಒಂದು ಎಲೆ ಬಿದ್ದರೂ ಎಚ್ಚರಿಸುತ್ತಿದ್ದ. ಹಸಿವಾದರೆ, ನೀರಡಿಕೆಯಾದರೆ, ಬಿಸಿಲು ಹೆಚ್ಚಾದರೆ, ಮಳೆಯಾದರೆ, ಚಳಿಯಾದರೆ, ಮನೆಯಲ್ಲಿ ಜೋರಾಗಿ ಮಾತಾಡಿದರೆ ಅವನು ಸಿಗ್ನಲ್ ಕೊಡುತ್ತಿದ್ದ. ಅವನು ಇದ್ದಾಗ ಅಪರಿಚಿತರಿಗೆ ಪ್ರವೇಶವಿರಲಿಲ್ಲ.

ಮಗುವಿನಂತಿದ್ದ. 'ಡ್ಯಾನ್ಸ್ ಮಾಡು ಬಾ' ಎಂದರೆ ಉರುಳಾಡಿ ಕುಣಿಯುತ್ತಿದ್ದ.

ಅವನು ಹೋಗಿಬಿಟ್ಟ. ಎಷ್ಟು ಸುಖವಾಗಿ ಬಾಳಿದ! ಇನ್ನುಮುಂದೆ ಅದಕ್ಕೂ ಹೆಚ್ಚಿನ ಸುಖ ಅವನಿಗೆ!!


No comments:

Post a Comment