ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Monday, October 27, 2025

ಕಾಜೂರು ಸತೀಶ್ ಅವರ ಕಾಡಿನ ಕವಿತೆಗಳ ಜಾಡು ಹಿಡಿದು...



✍️ಡಾ. ಮಹಾಂತೇಶ ಪಾಟೀಲ, ಕನ್ನಡ ಅಧ್ಯಯನ ವಿಭಾಗ, ದಾವಣಗೆರೆ ವಿಶ್ವವಿದ್ಯಾನಿಲಯ


ಕೃಪೆ- Alliance University

'ಕಾಡುಗಳಿದ್ದವು ಕವಿತೆಯಲ್ಲಿ' ಎನ್ನುವ ಕೊಡಗಿನ ಕಾಜೂರು ಸತೀಶ್‌, ಹೊಸ ತಲೆಮಾರಿನ ವಿಶಿಷ್ಟ ಸಂವೇದನೆಯ ಬರಹಗಾರ. ಒಳ್ಳೆಯ ಕಾವ್ಯ ಮತ್ತು ಕಾಡು ಕಡಿಮೆಯಾಗುತ್ತಿರುವ ವರ್ತಮಾನದಲ್ಲಿ ಅವರ ಬರಹಗಳು ಗಮನ ಸೆಳೆಯುತ್ತವೆ. ಚಾರಣ, ಹಾಡುಗಾರಿಕೆ, ಚಿತ್ರಕಲೆ ಮತ್ತು ಪೋಟೊಗ್ರಫಿಯಂತಹ ಬಹುಬಗೆಯ ಅಭಿವ್ಯಕ್ತಿಗಳಲ್ಲಿ ತೊಡಗಿಸಿಕೊಂಡಿರುವ ಕವಿಯ ನೋಟಕ್ರಮವು ಕವಿತೆಗಳಲ್ಲಿಯೂ ಮೈದಾಳಿದೆ. ಅವರ ಸಂವೇದನೆಗಳಿಗೆ ಅನೇಕ ಮುಖಗಳಿವೆ. ಅವುಗಳ ಹಿಂದಿರುವ ಮೂಲ ಚಾಲನಾಶಕ್ತಿ ಎಂದರೆ ಕಾಡು, ಮತ್ತದರ ಅನಂತತೆ, ಅನಿಕೇತನತೆ. ಕುವೆಂಪುರವರ ಸೌಂದರ್ಯ ವರ್ಣನಾ ದೃಷ್ಟಿ, ದ.ರಾ ಬೇಂದ್ರೆಯವರ ನಾದದ ನೆಲೆಗಳಿಗಿಂತ ವಿಭಿನ್ನವಾಗಿ ಪ್ರಕೃತಿಯ ಸಂವೇದನೆಯನ್ನು ಕಾಜೂರು ಸತೀಶರ ಕವನ ಸಂಕಲನಗಳಲ್ಲಿ (ಗಾಯದ ಹೂವುಗಳು-೨೦೧೫, ಕಡಲ ಕರೆ-೨೦೧೭) ಕಾಣುತ್ತೇವೆ. ಪ್ರಸ್ತುತ ಲೇಖನವು 'ಕಣ್ಣಲ್ಲಿಳಿದ ಮಳೆಹನಿ'(೨೦೨೧) ಸಂಕಲನದ ಕವಿತೆಗಳ ವಿವೇಚನೆಗೆ ಮಾತ್ರ ಸೀಮಿತಗೊಳಿಸಲಾಗಿದೆ.

ಇಲ್ಲಿನ ಸಂವೇದನೆಯು ಕಾಡು, ಕಾವ್ಯ, ಸಮಾಜ ಮತ್ತು ಸಾವು; ನಾಲ್ಕು ಕವಲುಗಳಾಗಿ ಸಂಕಲನದಲ್ಲಿ ಹರಿದು ಓದುಗರನ್ನು ಸೇರುತ್ತವೆ. ಈ ನಾಲ್ಕು ಆಯಾಮಗಳಲ್ಲಿ ಕಾಡಿನ ನೆಲೆಯು ಮಹಾನದಿಯಂತಿದೆ. ಇಲ್ಲಿನ ಕಾಡು ಜೀವ, ಜೀವನ ಮತ್ತು ಲೋಕದ ಜೊತೆಗೆ ಸಾತತ್ಯತೆಯನ್ನು ಬೆಳಿಸಿದೆ. ಹಾಗಾಗಿ ಕವಿತೆ, ಸಾವು, ಸಮಾಜದ ಬಗ್ಗೆ ಬರೆಯುವಾಗಲೂ ಕಾಡೇ ಮುಂಚೂಣಿಯಾಗಿ ಬರುತ್ತದೆ. ಅದೆಲ್ಲವನ್ನು ಗಮನಿಸಿದಾಗ ಕವಿಗೆ ಕಾಡೇ ಏಕಾಂತ, ಲೋಕಾಂತವೆಲ್ಲ ಆಗಿರುವುದು ಅನುಭವಕ್ಕೆ ಬರುತ್ತದೆ.


-1-
ಕಾಡು, ಮರ, ಎಲೆ, ಮಳೆ, ಝರಿಯ ವಿವಿಧ ರೂಪಗಳು ಕಾಜೂರು ಸತೀಶರ ಕವಿತೆಗಳಲ್ಲಿ ಮತ್ತೆ ಮತ್ತೆ ಕಾಣಿಸಿಕೊಂಡರೂ, ಪ್ರತಿ ಸಲ ಹೊಸದಾಗಿಯೇ ತೋರುತ್ತವೆ. ಇಲ್ಲಿನ ಕೆಲವು ಕವಿತೆಗಳು ಕಾಡನ್ನು ಮಾತ್ರ ಒಳಗೊಂಡರೆ, ಇನ್ನೂ ಕೆಲವು ಕವಿತೆಗಳು ಕಾಡು ಮತ್ತು ಕಾಂಕ್ರಿಟ್ ಕಲ್ಚರ್ ಅನ್ನು ಮುಖಾಮುಖಿಯಾಗಿಸುತ್ತವೆ. ಪ್ರಕೃತಿಯ ಸೌಂದರ್ಯಕ್ಕಿಂತ ಅದರ ಅನುಭವದ ಅನುಭೂತಿಯ ಕಡೆಗೆ ಕವಿಯ ಗಮನವಿದೆ. 'ಚಿಕ್ಕವನಿದ್ದಾಗ ಈ ಮರ ನನ್ನದಾಗಿತ್ತು' ಎಂದು ಶುರುವಾಗುವ 'ಮರ ಯಾರದು?' ರಚನೆಯು ಮರ ಬೆಳೆದಂತೆ ಕವಿತೆಯು ಬೆಳೆಯುತ್ತ 'ನನ್ನದಲ್ಲ' ಎನಿಸಿಬಿಡುತ್ತದೆ. ಪಂಚಭೂತಗಳು, ಚರಾಚರಗಳು ಸೇರಿಕೊಂಡು ಪರಿಸರವಾದಿ ಹೆನ್ರಿ ಡೆವಿಡ್ ಥರೋ ಹೇಳುವ 'ಅತೀಂದ್ರತೆ(ಟ್ರಾನ್ಸೆನ್ಡೆಂಟಾಲಿಸ್ಮ್)ಯನ್ನು ಮಂಡಿಸುತ್ತದೆ. 'ಎಲೆ' ಕವಿತೆಯಲ್ಲಿ ಎಲೆಯ ಜೀವನಕ್ರಮದ ವಿದ್ಯಮಾನಗಳನ್ನು ಮಾನವರ ಬದುಕಿನೊಟ್ಟಿಗೆ ಸಮೀಕರಿಸಲಾಗಿದೆ. ಮರದಿಂದ ಹಣ್ಣೆಲೆ ಅಗಲಿ ಭೂಮಿ ಸೇರುವುದನ್ನು 'ಹೆಣ್ಣು ತವರು ಸೇರುವುದ'ರ ಜೊತೆಗೆ ಸಮೀಕರಿಲಾಗಿದೆ.

'ಒಂದಾದರೂ ಬರಬಾರದೇ?' ದಲ್ಲಿ ಹಕ್ಕಿ ಮತ್ತು ಮೊಬೈಲ್‌ನ್ನು ಎದುರುಬದುರು ಮಾಡಲಾಗಿದೆ. ಈ ಎದುರಾಟದಲ್ಲಿ 'ಭೋಗ ಸಂಸ್ಕೃತಿ' ಎದುರು ಪ್ರಕೃತಿಯನ್ನು ಪರ್ಯಾಯವಾಗಿ ಸ್ಥಾಪಿಸಲಾಗಿದೆ. ಬರಡು ನೆಲ ಕಾಡಾಗಬೇಕು, ಬರದ ಹೃದಯಗಳು ಹಸಿರಾಗಬೇಕೆಂಬ ಅಭೀಷ್ಟೆಯು ಕವಿತೆಯ ಕೊನೆಯಲ್ಲಿ ಒಡಮೂಡುತ್ತದೆ. ಕಾಡು ಮತ್ತು ನಾಯಿಯ ಆಕೃತಿಗಳು ಕಾಣಿಸುವ 'ನಡುರಾತ್ರಿ ನಾಯಿ ಬೊಗಳುತ್ತಿದೆ ಎಂದರೆ' ರಚನೆಯಲ್ಲಿ ನಾಯಿ ಎಂಬುದು ಕಾಡುಗಳ್ಳ ಮನುಷ್ಯರು ಎನ್ನುವುದನ್ನು ಧ್ವನಿಸುತ್ತದೆ. ಗರಗಸ, ಧಣಿ- ಎಂಬ ಪದಬಳಕೆಯು ಮೇಲ್ವರ್ಗದವರೇ ಆ ಕಾಡುಗಳ್ಳರೆಂಬುವುದನ್ನು ಕವಿತೆಯು ಬೊಟ್ಟುಮಾಡಿ ತೋರಿಸುತ್ತದೆ.

'ನಡುರಾತ್ರಿ ನಾಯಿ ಬೊಗಳುತ್ತದೆ ಎಂದರೆ
ಎಲ್ಲ ಕಳೆದುಕೊಂಡ ಕಾಡು ನಡೆದು ಬಂದಿರಬಹುದು ಕಂಬಗಾಲುಗಳಲ್ಲಿ
ಹೆಜ್ಜೆ ಎತ್ತಿಟ್ಟಲ್ಲೆಲ್ಲ ಲದ್ದಿಹಾಕಿ
ಹಿಂತಿರುಗುತ್ತಿರಬಹುದು ಯಾರೋ ಮರೆತು ಬಂದ ಗರಗಸವನ್ನು' (ಪು-೩೦)

ಕವಿತೆಯಲ್ಲಿ ವ್ಯಂಗ್ಯದ ಧ್ವನಿಯಿದೆ. 'ಝರಿ'ಯಲ್ಲಿ ನಿಸರ್ಗದ ಚಲನವಲನ, ವಿದ್ಯಮಾನ, ಸಂಗತಿಗಳು ಕವಿತೆಯ ಅವಯವಗಳಾಗಿವೆ. ಸಂಕಲನದ ಪರಿಪೂರ್ಣ ಕವಿತೆಯೆಂದರೆ 'ಕಾಡುಗಳಿದ್ದವು ಕವಿತೆಗಳಲ್ಲಿ'. ಪರೋಕ್ಷವಾಗಿ ಕಾಜೂರು ಸತೀಶರು ಈಗ ಕವಿತೆಗಳಲ್ಲಿ ಕಾಡು ಇಲ್ಲ ಎನ್ನುತ್ತಾರೆ. ಆದರೆ ಕವಿಗೆ ಕಾಡು ಮತ್ತು ಕವಿತೆಯು ಏಕದೇಹಿಗಳು. ಕೊನೆಯಲ್ಲಿ

'ಕಾಡುಗಳಿಲ್ಲ ಕವಿತೆಗಳಲ್ಲಿ
ಮೃಗಾಲಯವಿದೆ' (ಪು-೬೬)

ಎಂಬ ಸಾಲು ವರ್ತಮಾನ ಲೋಕವು ಮಾನವಕೇಂದ್ರಿತ (ಎಂತ್ರಪೋಸೆಂಟ್ರಿಕ್) ಆಗಿರುವುದನ್ನು ಹೇಳುತ್ತದೆ. ಜೊತೆಗೆ ಪರಿಸರ ಕೇಂದ್ರಿತ (ಇಕೋಸೆಂಟ್ರಿಕ್) ಆಗಬೇಕಾದ ಅನಿವಾರ್ಯತೆಯನ್ನು ಸೂಚಿಸುತ್ತದೆ. ಅದನ್ನು ಪರಿಸರವಾದಿ ವಿಮರ್ಶೆಯು 'ಪ್ರಕೃತೀಕರಣ' (ವೈಲ್ಡರ್‌ನೆಸ್) ಎಂದು ಕರೆಯುತ್ತದೆ. ಅಂತಹ ಕವಿತೆಗಳು ವರ್ಡ್ಸ್ ವರ್ಥ್, ಕುವೆಂಪುರವರ ನಿಸರ್ಗ ಕವಿತೆಗಳ ಮುಂದುವರಿಕೆಯೆನಿಸದೆ, ವಿಭಿನ್ನ ಮತ್ತು ವಿಶಿಷ್ಟ ಅಭಿವ್ಯಕ್ತಿಗಳೆನಿಸುತ್ತವೆ.

-2-
ಕವಿತೆಯ ಕ್ರಿಯಾತ್ಮಕ ಕುಶರಿಯ ಕುರಿತು, ಮತ್ತದರ ಅರ್ಥ-ಶಬ್ದಲೋಕಗಳ ಬಗೆಗೆ ಕವಿಗಳು 'ಕಾವ್ಯ' ಕಟ್ಟುವುದು ಸಹಜ. ಕಾವ್ಯ ಕ್ರಿಯೆಯನ್ನು ಹೊಸದಾಗಿ ಮಂಡಿಸುವ ಕ್ರಮದಿಂದ ಪ್ರಸ್ತುತ ಸಂಕಲನವು ಬೇರೆಯಾಗಿ ನಿಲ್ಲುವುದು. ಅಂತಹ ವಿಕ್ರಮವನ್ನು ಕಾಜೂರು ಸತೀಶರವರ ಕಾವ್ಯಗಳಲ್ಲಿ ಗಮನಿಸುತ್ತೇವೆ. ಹೊಸ ತಲೆಮಾರಿನಲ್ಲಿ ಸಖಿ, ಸಖನಾಗಿ ಕಾಣಿಸುವ ಕವಿತೆಗಳು; ಇಲ್ಲಿನ ರಚನೆಗಳಲ್ಲಿ ಕಾವ್ಯವು ಕಾಡಾಗಿ, ಮರವಾಗಿ, ಲೋಕವಾಗಿ ಮತ್ತು ಮನುಷ್ಯರಾಗಿಯೂ ಮೈದಾಳಿದೆ.

'ಕಾಡುಗವಿತೆ'ಯು ಆನೆಯ ಹಾದಿಯನ್ನು ಸೂಕ್ಷ್ಮ ದೃಷ್ಟಿಯಿಂದ ನೋಡುತ್ತಾ ಇರುವೆಯ ದಾರಿಗಳನ್ನು ಕಾಣಿಸುತ್ತದೆ. 'ಮ್ಯಾನ್ಹೋಲಿನಲ್ಲಿ ಸತ್ತ ಕವಿತೆ'ಯು ಶುದ್ಧ ಸಮಾಜವಾದಿ ನಿಲುವಿನದು. ಮಲದ ಗುಂಡಿ, ಚರಂಡಿಯನ್ನು ಸ್ವಚ್ಛಗೊಳಿಸುವವರ ಪ್ರತಿನಿಧಿ. ದುರಂತವೆಂದರೆ ಬಾಯಿಬಡುಕು ಮಾಧ್ಯಮಗಳ ಮತ್ತು ವೈಟ್‌ಕಾಲರ್ ಕವಿಗಳ ಕಣ್ಣಿಗೆ ಅಂತಹ ಕವಿತೆಯು ಕಾಣಿಸದು:

'ಮ್ಯಾನ್ಹೋಲಿನಲ್ಲ ಉಸಿರುಗಟ್ಟಿ ಸತ್ತ ಕವಿತೆಯ ಶವ
ಕವಿಗೂ ಸಿಗಲಿಲ್ಲ, ಟಿವಿಗೂ ಸಿಗಲಿಲ್ಲ.' (ಪು-90)

ಕವಿಯು 'ಕಾವ್ಯಮೀಮಾಂಸೆ'ಯಲ್ಲಿ 'ನೀರಿಲ್ಲದೆ ಸ್ನಾನ ಮುಗಿಸಿದೆ' ಎನ್ನುತ್ತಾನೆ. ಕವಿತೆಗಾಗಿ ಧ್ಯಾನಿಸುತ್ತ ಮೌನವಾಗಿ ಕುಳಿತವರೆದುರು ಹಲ್ಲಿಯು ಲೊಚಗುಟ್ಟಿ ಮೌನಭಂಗಗೊಳಿಸುತ್ತದೆ. ಅಪಶಕುನವೆಂದು ಭಾವಿಸುವ ಕವಿ ಮಹೋದರರು ನಮ್ಮ ನಡುವಿದ್ದಾರೆ. ಅಂತವರ ಕಾವ್ಯದ ಮಡಿವಂತಿಕೆಯನ್ನು 'ನೀರಿಲ್ಲದ ಸ್ನಾನ'ವೆಂದು ಕವಿಯು ವ್ಯಂಗ್ಯವಾಡುತ್ತಾನೆ. 'ಬಂಧಿ' ಕವಿತೆಯಲ್ಲಿ ಮಗು, ಹೂವು, ನೀರು, ಸಾವು- ಅನುಕ್ರಮವಾಗಿ ಕಾಣಿಸುತ್ತ ಜೀವ ಮತ್ತು ಜೀವನಗಳ ಒಂದಾಗಿಸುತ್ತದೆ. ಅದೇ ಕಾವ್ಯ ಬಂಧುರತೆ.

ನಿಸರ್ಗ, ಮರ, ಹಕ್ಕಿ, ನೆಲ, ಮುಗಿಲಿನ ಅನಂತ ರೂಪಗಳನ್ನು ಕವಿತೆಯ ಅವತಾರವಾಗಿಸುವ ಪ್ರಯೋಗಶೀಲತೆಯನ್ನು 'ಎಷ್ಟು ಸುಖಿ ನೀನು ಕವಿತೆಯೇ?' ದಲ್ಲಿ ಕಾಣುತ್ತೇವೆ. 'ಒಂದು ಕವಿತೆ ಹುಟ್ಟುವುದರಲ್ಲಿತ್ತು' ಕಾಡಿನ ಕುರಿತು ಕವಿತೆಗಳಿರುವಂತೆಯೇ, ಕವಿತೆಯೇ ಕಾಡಾಗುವ, ಜೀವನದ ಪಾಡಾಗುವ ಕ್ರಮವನ್ನು ನೋಡುತ್ತೇವೆ. ಕವಿತೆಯೆಂದರೆ ಏಕಾಂತ ಮತ್ತು ಲೋಕಾಂತ. ಆದರೆ ಅವೆರಡು ಸಾವಯವ ರೂಪಗಳಾದರೆ ಕವಿತೆಯ ರಚನೆಯು ಕಷ್ಟಸಾಧ್ಯ. ಈ ಕಾಲಕ್ಕೆ ಕಾವ್ಯ ವಿಘ್ನಗಳಾಗಿರುವ ಟಿ.ವಿ, ಮೊಬೈಲ್, ಬೈಕು, ಕತ್ತಿಗಳಂತಹ ನಾಗರಿಕ ಸಮಾಜದ ಸಾಧನಗಳನ್ನು ಕವಿತೆಯು ಪ್ರತಿರೋಧಿಸುತ್ತದೆ. ಕವಿತೆ ಆಗುವಿಕೆ ಮಾಗುವಿಕೆಯಲ್ಲಿನ ಪಲ್ಲಟಗಳನ್ನು ಕಾಜೂರು ಸತೀಶರವರು ಹಿಡಿದಿಡುವ ಯತ್ನವನ್ನು ಮಾಡಿದ್ದಾರೆ.


-3-
ಕಾವ್ಯವು ಸಮಾಜದ ಭಾಗವಾಗಿ ಕಾಣಿಸುವಿಕೆಯು ಕಡಿಮೆಯಾಗುತ್ತಿರುವ ವರ್ತಮಾನದಲ್ಲಿ ಕಾಡಿನಷ್ಟೇ ಗಾಢವಾಗಿ ಸಮಾಜವನ್ನು ಚಿತ್ರಿಸುವ ಮನೋಭಾವವು ಕಾಜೂರು ಸತೀಶರ ಕಾವ್ಯದಲ್ಲಿದೆ. ಜಾತಿ ಮತ್ತು ಲಿಂಗನಿಷ್ಠ ಸಮಾಜಕ್ಕಿಂತ ವರ್ಗನಿಷ್ಠ ಸಮಾಜದ ರಚನೆಯನ್ನು ಮುಖಾಮುಖಿಯಾಗುತ್ತಾರೆ. 'ಗುಡಿಸಲು'ದಲ್ಲಿ ಬಡತನದ, ಹಸಿವಿನ ಸಾಂಕೇತಿಕತೆಗಿಂತ ಅದೊಂದು ತಪ್ತ ಧ್ಯಾನಸ್ಥ ಹೃದಯವಂತಿಕೆಯ ರೂಪ ಮತ್ತು ರೂಪಕವಾಗಿದೆ. ಒಳಗೊಳ್ಳುವಿಕೆ ಮತ್ತು ಮಮತೆಯ ಒಡಲಾಗಿ ಒಡಮೂಡಿದೆ.

'ಗುಡಿಸಲಿನ ಹೊಟ್ಟೆಗೆ ಒಂದು ಮಗು ಗೇರುಬೀಜದ ಹಾಗೆ ಅಂಟಿಕೊಂಡು ' (೨೧)

ಈ ಕವಿತೆಯ ಆರಂಭವು ಸಾಮಾನ್ಯವಾಗಿದ್ದರೂ ಅಂತಿಮವಾಗಿ ಅದು ಪಡೆದುಕೊಳ್ಳುವ ತಿರುವು ಕವಿತೆಗೆ ಚೈತನ್ಯವನ್ನು ಒದಗಿಸುತ್ತವೆ. 'ನನ್ನೊಳಗೆ ಇಳಿಯುವಾಗ'ದಲ್ಲಿ ಆಗಂತುಕರ ಆಹ್ವಾನವಿದೆ. ಅದು ವ್ಯಂಗ್ಯವಾಗಿರುವ ಕಾರಣದಿಂದ ಪರಿಣಾಮಕಾರಿ ಅನಿಸುತ್ತದೆ. ಇಲ್ಲಿ ಹೃದಯಹೀನರನ್ನು ಹೃದಯಕ್ಕೆ ಕರೆಯುವ ಬಗೆಯಿಂದಲೇ ಕವಿತೆ ಗೆಲ್ಲುತ್ತದೆ.

'ಕರೆಗಂಟೆ ಇಲ್ಲದ ಮನೆ ನನ್ನದು
ನನ್ನ ಪಕ್ಕೆಲುಬುಗಳ ತಟ್ಟಿದರೆ ಸಾಕು
ಬಾಗಿಲು ತೆರೆಯುವೆ' (ಪು-೨೮)

ಕವಿಯು ಮನೆಯನ್ನು ತನ್ನ ದೇಹಕ್ಕೆ, ಕಾಡಿಗೆ ಮತ್ತು ಮಣ್ಣಿನ ಜೊತೆಗೆ ಸಮೀಕರಿಸುತ್ತಾನೆ. ಹಾಗಾಗಿ ಏಕತ್ವದಿಂದ ಶುರುವಾಗುವ ಕವಿತೆಯು ಬಹುತ್ವದೆಡೆಗೆ ಜಿಗಿಯುತ್ತದೆ. ಅದನ್ನು ನಾವು ಕೊನೆಯ ಸಾಲು: 'ಮಣ್ಣೇ ನನ್ನ ಮನೆ'ಯು ಸರಿಯಾಗಿ ಧ್ವನಿಸುತ್ತದೆ. ಕಾಡಿನ ಸಂಕೀರ್ಣತೆ ಮತ್ತು ಸೊಬಗುಗಳು ಕವಿತೆಯಲ್ಲಿವೆ. ವೈಯಕ್ತಿಕತೆಯಿಂದ ಆರಂಭವಾಗಿ ಸಾರ್ವತ್ರಿಕತೆಯಡೆಗೆ ಸಾಗುತ್ತದೆ. ಹೀಗೆ ಕವಿತೆಯಲ್ಲಿ ಭಾವ ಮತ್ತು ಅನುಭಾವದ ಚಲನೆಯನ್ನು 'ಎದೆಯ ದನಿಯಿದು', 'ಶೃಂಗಾರ ಕಾವ್ಯವಲ್ಲ' ರಚನೆಯಲ್ಲೂ ಗಮನಿಸುತ್ತೇವೆ. ನನ್ನ(ಗಂಡು), ನಿನ್ನ(ಹೆಣ್ಣು) ಎನ್ನುವ ಸರ್ವನಾಮಗಳಿಗೆ ನಿರ್ದಿಷ್ಟತೆಯಿದೆ.

'ನನ್ನ ಎದೆಯ ದಾರಿಗಳು ಬೃಹತ್ ವಾಹನಗಳು ಸಂಚರಿಸಿ ದುರಸ್ತಿಯಲ್ಲಿವೆ
ನಮ್ಮಿಬ್ಬರ ನಡುವಿನ ಅವರು ಕಾಮಗಾರಿ ಕೈಗೆತ್ತಿಕೊಂಡಿದ್ದಾರೆ' (ಪು-೩೯)

ಇಲ್ಲಿ ಸಂಗಮಿಸಿರುವ ಪ್ರೇಮಿಗಳು ತಮ್ಮ 'ಖಾಸಗಿ ರಸನಿಮಿಷಗಳ' ನಿವೇದನೆ, ವೇದನೆಯಲ್ಲಿ ತಲ್ಲೀನವಾಗಲಾರರು. ಅವರು ಶುದ್ಧ ಸಾಮಾಜಿಕರು ಮತ್ತು ಸಮಾಜವಾದಿಗಳು ಕೂಡ. ಮರ್ಯಾದೆಗೇಡು ಹತ್ಯೆಗೈವ ಜನರಿಗೆ ಗೂಡು ಕಟ್ಟಿ, ಮೊಟ್ಟೆಗೆ ಕಾವು ಕೊಟ್ಟು, ಅವರು ಕೋಗಿಲೆ ಮರಿಯಾಗಿ ಹೊರಬಂದು ಕುಹೂ ಕುಹೂ ಹಾಡಿಕೊಳ್ಳಲಿ ಎನ್ನುತ್ತಾನೆ ಕವಿ. ಈ ಸಂಕಲನದ ಕೆಲವು ಕವಿತೆಗಳಲ್ಲಿ ಆಹ್ವಾನದ ಕರೆ, ಹಾರೈಕೆಯ ಧಾಟಿಯಿದೆ. ಅದು ವ್ಯಂಗ್ಯ, ಮೊನಚಾದ ಶೈಲಿಯಲ್ಲಿ ಇರುವುದರಿಂದ ಕವಿತೆಗಳು ಧ್ವನಿಪೂರ್ಣ ಅನಿಸುತ್ತವೆ. 'ಅಪ್ಪ ಮತ್ತು ಮಳೆ'ಯಲ್ಲೂ ನೀರಿದೆ, ನೆರೆಯಿದೆ. ಆದರೆ ಕುಡಿಯುವ ನೀರಿಲ್ಲ ಎಂಬಲ್ಲಿ ಅದೇ ವ್ಯಂಗ್ಯದ ವಿಕ್ರಮವಿದೆ. 'ಬುಡ್ಡಿ ದೀಪದ ಬುಡ' ರಚನೆಯು ಹಸಿವು ಮತ್ತು ಅದನ್ನು ಅರಸಿ ಬರುವವರ ಆಹುತಿಯನ್ನು ದಾಖಲಿಸುತ್ತದೆ. ಬೆಳಕನ್ನು ಅರಸಿ ಬರುವ ಕೀಟಗಳು, ಅದರಿಂದಲೇ ಕೊನೆಯಾಗುವಂತೆ ಹಸಿದವರೇ ಹಸಿವಿಗೆ ಆಹಾರವಾಗುವ ಸಾಮಾಜಿಕ ದುರಂತಕ್ಕೆ ಕನ್ನಡಿ ಹಿಡಿಯುತ್ತದೆ. ಹಸಿವು-ಕೀಟ, ಬೆಳಕು-ಭ್ರಮೆಗಳನ್ನು ಸಾಮಾಜೀಕರಣಗೊಳಿಸಲಾಗಿದೆ. ಪರದೆ, ಹೋಟೆಲು, ಕ್ಷಮಿಸು- ಕವಿತೆಗಳು ವೈಯಕ್ತಿಕ ಅಥವಾ ಸ್ವ-ದ ನಿಲುವುಗಳನ್ನು ಸಾಮಾಜಿಕ ನೆಲೆಯಲ್ಲಿಟ್ಟು ಮಂಡಿಸುತ್ತವೆ.

-4-
ಸಂಕಲನದಲ್ಲಿ ಕೆಲವಷ್ಟು ಸಾವಿನ ಬಗೆಗಿನ ಕವಿತೆಗಳಿವೆ. ಇಲ್ಲಿ ಸಾವನ್ನು ಸುಖವಾಗಿ, ಮರುಹುಟ್ಟಾಗಿ, ಬಿಡುಗಡೆಯ ದಾರಿಯಾಗಿ ನೋಡಲಾಗಿದೆ. ಪರಿಸರದ ಭಾಗವಾಗಿ ಬರೆಯುವ ಕಾಜೂರು ಸತೀಶರಿಗೆ 'ಸಾವು ಸಾಮಾಜಿಕತೆಗಿಂತ ಪ್ರಾಕೃತಿಕ ಸ್ಥಿತಿಯಾಗಿ ಕಂಡಿದ್ದೇ ಹೆಚ್ಚು. ಹಣ್ಣಾದ ಎಲೆಯು ಮರದಿಂದ ಉದುರಿ, ಗಾಳಿಯಲ್ಲಿ ತೇಲಿ ತೇಲಿ ಮಣ್ಣಿಗೆ ಬಿದ್ದು ಮಣ್ಣಾಗುವುದನ್ನು ಕವಿಯು 'ಸಾಯ್ವ ಸುಖ' ಎಂದು ವ್ಯಾಖ್ಯಾನಿಸುತ್ತಾನೆ. ಮನುಷ್ಯರ ಕೊನೆಯ ಪಯಣದ ಸಾಂಕೇತಿಕತೆಯನ್ನು 'ಕುರ್ಚಿ'ಯು ನಿವೇದಿಸುತ್ತದೆ. ಅದರ ಎರಡು ಕಾಲುಗಳು ಮನುಷ್ಯರನ್ನು, ನಾಲ್ಕು ಕಾಲುಗಳು ಪ್ರಾಣಿಯನ್ನು ಹೋಲುತ್ತವೆ. ಕವಿತೆಯ ಮೊದಲರ್ಧ ಭಾಗವು ಮನುಷ್ಯ ಮತ್ತು ಕುರ್ಚಿಯನ್ನು ವಿವರಿಸುವಂತೆ ಕಂಡರೂ, ಕೊನೆಯಲ್ಲಿನ 'ನಾಲ್ಕೇ ನಾಲ್ಕು ಕಾಲು/ ಮುಂದೆ ಇಬ್ಬರು, ಹಿಂದೆ ಇಬ್ಬರು' ಎಂಬ ಸಾಲು ಹೊಸ ತಿರುವನ್ನು ಕೊಡುತ್ತದೆ.

'ನನ್ನ ಶವಸಂಸ್ಕಾರದ ದಿನ'ವು ಕವಿಗೆ ಬದುಕಿನಲ್ಲಿ ಹೇಗೋ ಹಾಗೆ ಸಾವಿನಲ್ಲೂ 'ಪ್ರಕೃತಿ'ಯ ಸಾಂಗತ್ಯವನ್ನು ಬಯಸುತ್ತಾನೆ. ಹುಟ್ಟು, ಯೌವನ, ಜೀವನ, ಸಾವು: ಈ ಎಲ್ಲೆಡೆಯಲ್ಲೂ ಕವಿಗೆ ಧ್ಯಾನವೊಂದೇ: ಕಾಡು. ಇಲ್ಲಿ ಸಾವು, ವಿಷಾದತೆ, ಭಯ-ಆತಂಕವಾಗಿ ಕಾಣಿಸದೇ, ಅದೊಂದು ನಿಸರ್ಗದ ಸಹಜ ವಿದ್ಯಮಾನವಾಗಿ ತೋರುತ್ತದೆ. 'ನಾನು ಸತ್ತ ಮೇಲೆ' ಎಂಬ ಗಜಲ್ ವ್ಯಕ್ತಿನಿರಪೇಕ್ಷವಾಗಿ ಸಾವನ್ನು ಮಂಡಿಸುತ್ತದೆ.

'ಯಾರು ರಸ್ತೆ ದಾಟಿಸುತ್ತಾರೆ ನನ್ನ ಕವಿತೆಗಳನ್ನು ನಾನು ಸತ್ತ ಮೇಲೆ
ಯಾರು ಆಸ್ಪತ್ರೆಗೊಯ್ಯುತ್ತಾರೆ ಅವುಗಳನ್ನು ನಾನು ಸತ್ತ ಮೇಲೆ' (ಪು-೬೭)

ಮನುಷ್ಯರ ಜೀವನವು ಹಲವು ಅವಸ್ಥಾಂತರ, ಸಾಮಾಜಿಕ ನಡುವಳಿಕೆಯನ್ನು ದಾಟಿಕೊಂಡು ಸಾವನ್ನು ಸೇರುತ್ತದೆ. ಕವಿ ಸಾವಿನ ನಂತರ ಕವಿತೆಯು ಅನಾಥವಾಗುತ್ತದೆ, ಅಸಹಾಯಕವಾಗುತ್ತದೆ. ತನ್ನ ಗೈರಿನಲ್ಲಿ ಕವಿತೆಯನ್ನು ಕೈಹಿಡಿದು ಮುನ್ನಡಿಸುವವರಾರು? ಎಂಬ ಪ್ರಶ್ನೆಯನ್ನು ಎತ್ತುತ್ತದೆ. ಈ ಕವಿತೆಯು 'ಲೇಖಕನ ಸಾವು' (ಡೆತ್ ಆಫ್ ದಿ ಆಥರ್) ಎನ್ನುವ ರೋಲಾನ್ ಬಾರ್ತೃ ಹೇಳಿಕೆಯನ್ನು ಒಡೆದುಹಾಕುತ್ತದೆ. ಇಲ್ಲಿ ಕವಿತೆಯು ಕವಿಯಂತೆ ಒಂದು ಜೀವ. ತಬ್ಬಲಿಯಾದ ಮಗುವಿಗೆ ಮರುಗುವಂತೆ ಹಳಹಳಿಸುತ್ತಾನೆ. 'ಶವದ ಮನೆ ಮತ್ತು ನೊಣ' ಕವಿತೆಯಲ್ಲಿ ಶವದಿಂದ ದೂರವಾಗುವ ಮಾನವರು ಒಂದೆಡೆಗೆ, ಶವದ ಮೇಲೆ ಕೂತು ಮುತ್ತಿಡುವ ನ
ನೊಣ ಇನ್ನೊಂದೆಡಗೆ ಇದೆ. ಈ ಕವಿತೆಯು ಕವಿಯ ಸೂಕ್ಷ್ಮ ಲೋಕಗ್ರಹಿಕೆಗೆ ನಿಶಾನೆಯನ್ನು ಹಿಡಿದಂತಿದೆ. ಸಾವು ಹುಟ್ಟಿನಂತೆಯೇ ಒಂದು ಸಂಭ್ರಮದ ಸಂಗತಿಯಾಗಿ ಭಾವಿಸಲಾಗಿದೆ.

'ಮತ್ತೆ ಮತ್ತೆ ಹಸಿರು'(ಪು-೧೯), 'ನೋಡಲ್ಲಿ, ನೋಡೀ, ನೋಡು' (-೪೪), 'ಒಂಟೀ ಮರ ನಿಂತೂ ನಿಂತೂ (೫೬), 'ಕಾದೂ ಕಾದೂ ದಣಿದೆ' (-೫೮)- ಇಂತಹ ದ್ವಿರುಕ್ತಿಗಳು ಕವಿತೆಯ ಮೈಮೇಲೆ ಅಲ್ಲಲ್ಲಿ ಕಾಣಿಸುತ್ತವೆ. ಹೀಗೆ ಭಾಷೆಯನ್ನು ಬಳಸುವಲ್ಲಿ ಓದುಗರಿಗೆ ಸ್ಪಷ್ಟಪಡಿಸಲು, ವಿಷಯವನ್ನು ಒತ್ತುಕೊಟ್ಟು ಹೇಳುವ ಆಶಯವಿರುವಂತೆ ತೋರುತ್ತದೆ. ಇಡೀ ಸಂಕಲನದ ಕಾವ್ಯಭಾಷೆ, ವಸ್ತುವಿಷಯ, ಸಂವೇದನೆಯ ನಿವೇದನಾ ಕ್ರಮವು ಹೊಸತನದಿಂದ ಕೂಡಿದೆ. ಒಂದರ್ಥದಲ್ಲಿ ನಿರಾಭರಣ ಸುಂದರಿಯೇ ಸರಿ. ಇಲ್ಲಿನ ಕೆಲವು ಕವಿತೆಗಳು ಹೂ ಬಿಡದ, ಹಣ್ಣು ಕೊಡದ ಹಸಿರಾದ ಮರಗಳಂತಿವೆ. ಆ ಹಸಿರು ಕಾವ್ಯದಲ್ಲಿ (ಗ್ರಿನ್ ಪೊಯಟ್ರಿ) ಕಾಣಬಹುದಾದ ಮಿತಿಗಳಿಗೆ ಹೊದಿಸಿದ ಮುಂಜಾವಿನ ಮಂಜಿನಂತಿದೆ. ವಾಚ್ಯ ಮತ್ತು ಗದ್ಯಮಯ ವಿವರಣೆ, ರಾಜಕಾರಣಿಗಳ ಭಾಷಣ ಶೈಲಿ, ಪ್ರೇಮಸಂಕಲ್ಪದ ವಿಷಾದಮಯ ಹಳಹಳಿಕೆ, ಹೇಳಿಕೆ(ಸ್ಟೇಟ್‌ಮೆಂಟ್) ರೀತಿಯ ನಿರೂಪಣೆಯಿಂದ ಈ ಕವಿತೆಗಳು ಹೊರತಾಗಿವೆ. ಅದಕ್ಕೆ ಮುಖ್ಯ ಕಾರಣ 'ಹಚ್ಚ ಹಸಿರಿನ ಹೃದಯದ ಮನುಷ್ಯರ ನೋಡಬಹುದಿತ್ತು' ಎಂಬ ದಿವ್ಯ ಹಂಬಲವು ಕವಿಯದು, ಕವಿತೆಯದು ಆಗಿರುವುದು.
*


✍️ ಡಾ. ಮಹಾಂತೇಶ ಪಾಟೀಲ


Wednesday, October 22, 2025

ಪಟ

ರಜಾದಿನದಂದು ಹುಡುಗನೊಬ್ಬ ಬೀದಿಬದಿಯಲ್ಲಿ ವ್ಯಾಪಾರ ಮಾಡುತ್ತಿದ್ದ. ಮೇಷ್ಟ್ರು ಅವನ ಪಟ ತೆಗೆದು ಹಂಚಿಕೊಂಡಿದ್ದರು.

ಇದು 'ಮಾನವ ರಕ್ಷಣಾ ಸಂಘ'ದ ಕಣ್ಣಿಗೆ ಬಿತ್ತು. "ಇದು ಅತ್ಯಂತ ಹೇಯವಾದ ಪರಿಸ್ಥಿತಿ... ಹುಡುಗ ವ್ಯಾಪಾರ ಮಾಡುವುದು ತಪ್ಪು'' ಎನ್ನುತ್ತಾ ಆ ಹುಡುಗನನ್ನು ಅವನ ಮನೆಗೆ ಬಿಟ್ಟು, ಪಟ ತೆಗೆದು, ವಿಡಿಯೋ ಮಾಡಿ ಹೊರಟುಹೋದರು.

ಅಜ್ಜಿಯ ಪಿತ್ತ ನೆತ್ತಿಗೇರಿ ''ಅಷ್ಟು ಕಾಳಜಿ ಇದ್ರೆ ದುಡ್ಡು ಕೊಡ್ಬೇಕು, ದುಡಿಯೋದನ್ನ ನಿಲ್ಸೋದಲ್ಲ, ಬಡ್ಡಿ ಮಕ್ಳು'' ಮಲಗಿದ್ದಲ್ಲೇ ಕಿರುಚಲಾರಂಭಿಸಿದಳು.

 ಫೋಟೋದಲ್ಲಿರುವ ಅಪ್ಪ ಏನೂ ತಿಳಿಯದೆ ಸುಮ್ಮನೆ ನೋಡುತ್ತಿದ್ದರು.
*
✍️ ಕಾಜೂರು ಸತೀಶ್

ಸಿಡಿಲು

ಡಿಸೆಂಬರ್ ತಿಂಗಳು. ಇದ್ದಕ್ಕಿದ್ದಂತೆ ಮಳೆ ಸುರಿಯಲಾರಂಭಿಸಿತು.

ತಿಮ್ಮ ಬೈಕು ನಿಲ್ಲಿಸಿ ಮರದ ಕೆಳಗೆ ಬಂದು ನಿಂತ. ವಿಶಾಲವಾಗಿ ಬಾಹುಗಳನ್ನು ಚಾಚಿ ನಿಂತ ಮರ. ಈಗಾಗಲೇ ಇಬ್ಬರು ಅದನ್ನು ಆಶ್ರಯಿಸಿ ನಿಂತಿದ್ದರು.

"ಹೀಗೆ ಮಳೆ ಸುರಿಯುವಾಗ ಮರದ ಕೆಳಗೆ ನಿಲ್ಲಬಾರದು. ಸಿಡಿಲು ಬಡಿದರೆ ಅಪಾಯ ಕಟ್ಟಿಟ್ಟ ಬುತ್ತಿ" ತಾನು ಓದಿದ ಸಂಗತಿಗಳು ತಿಮ್ಮನಲ್ಲಿ ಮಾತಿಗಿಳಿದವು.

"ಎಷ್ಟು ಚಂದದ ಮರ, ಒಂದು ಹನಿ ಕೂಡ ಬೀಳ್ತಿಲ್ಲ" ಆ ಇಬ್ಬರು ಮಾತನಾಡುತ್ತಿದ್ದರು.
"ಇಲ್ಲೇ ಮಲಗಿದ್ರೆ ಹೇಗೆ? " ಯೋಚಿಸುತ್ತಿದ್ದರು.

ಸ್ವಲ್ಪ ಹೊತ್ತಿನ ಅನಂತರ ಮಳೆ ನಿಂತಿತು.

"ಸದ್ಯ ಸಿಡಿಲು ಬಡಿಯಲಿಲ್ಲ'' ತಿಮ್ಮ ಹೇಳಿಕೊಂಡು ಅಲ್ಲಿಂದ ಹೊರಟ.

ಆ ಇಬ್ಬರು ಅಲ್ಲೇ ಕುಳಿತಿದ್ದರು. ಜಗತ್ತನ್ನೇ ಮರೆತ ಹಾಗೆ ಅವ್ಯಕ್ತವಾದ ಸುಖವನ್ನು ಅನುಭವಿಸುತ್ತಿದ್ದರು.

"ಸಿಡಿಲು ಅವರಿಗೆ ಬಡಿಯುವುದಿಲ್ಲ, ಅದೀಗ ನನ್ನ ಎದೆಯೊಳಗೇ ಇರುವ ಹಾಗೆ ಅನ್ನಿಸುತ್ತಿದೆ" ಹೇಳಿಕೊಂಡ ತಿಮ್ಮ.
*

✍️ಕಾಜೂರು ಸತೀಶ್


Sunday, October 19, 2025

ಹೂವು

ಗುಂಡ, ಗಿಡದ ಹೂವುಗಳನ್ನು ಕಿತ್ತು ಫೋಟೋಗಳನ್ನು ಅಲಂಕರಿಸಿದ.

'ಎಷ್ಟು ಚಂದದ ಅಲಂಕಾರ' ಎಂದರು ಬಂದು ಹೋದವರು.
*
ತಿಮ್ಮನ ಸರದಿ ಬಂದಾಗ ಅವನು ಹೂವುಗಳನ್ನು ಗಿಡದಲ್ಲೇ ಉಳಿಸಿದ.

ಹಕ್ಕಿಗಳು ಬಂದವು;ಕಣ್ಣು ತುಂಬಿಕೊಂಡ. ಹಕ್ಕಿಗಳು ಹಾಡಿದವು; ಕಿವಿ ತುಂಬಿಕೊಂಡ.

ಆಮೇಲೆ ಅವನು ಹೂವಾಗಿ ಬಿರಿದ. ಹಕ್ಕಿಯಾಗಿ ಹಾರಿದ. ಪರಿಮಳವಾದ.

'ಇವತ್ತು ಅಲಂಕಾರವೇ ಇಲ್ಲ' ಎಂದರು ಬಂದು ಹೋದವರು.
*
✍️ಕಾಜೂರು ಸತೀಶ್

Thursday, October 16, 2025

ಚೊಂಬು

ರಾಜನಿಗೆ ತನ್ನ ಪ್ರಜೆಗಳ ವಿವರವನ್ನು ತಿಳಿಯುವ ಕುತೂಹಲ ಉಂಟಾಗಿ ಮಂತ್ರಿಗಳಿಗೆ ಆ ಕಾರ್ಯವನ್ನು ವಹಿಸಿದನು. ಹೀಗೆ ಮಾಡುವುದರಿಂದ ಅವನ ವರ್ಚಸ್ಸು ಹೆಚ್ಚುವುದೆಂದು ಆಸ್ಥಾನದ ಪಂಡಿತರು ಹೇಳಿದ್ದರು.

ಪ್ರತೀ ಮನೆಯಲ್ಲಿರುವ ಕೋಣೆಗಳ ಸಂಖ್ಯೆ, ಜನರ ಸಂಖ್ಯೆ, ಅವರ ಬಣ್ಣ, ಎತ್ತರ, ತೂಕ, ಕೂಡಿಟ್ಟಿರುವ ಆಭರಣಗಳು, ಶಸ್ತ್ರಾಸ್ತ್ರ, ಪಡೆದ ವಿದ್ಯೆ, ಕುದುರೆಗಳ ಸಂಖ್ಯೆ, ಭಾಗಿಯಾಗಿರುವ ಯುದ್ಧಗಳ ಸಂಖ್ಯೆ, ರಾಜನಿಂದ ಬಂದಿರುವ ಆಸ್ತಿ, ಬೆಳೆದ ಬೆಳೆಗಳು, ರಾಜನಿಗೆ ಪಾವತಿಸಿದ ಕಂದಾಯ... ಹೀಗೆ ತಾವೇ ಎಲೆಗಳನ್ನು ಸಂಗ್ರಹಿಸಿ ಅದರಲ್ಲಿ ದಾಖಲಿಸಲು ರಾಜ ಆಜ್ಞೆ ಮಾಡಿದನು. 'ಒಂದು ಮನೆಗೆ ಒಂದು ಚೊಂಬು' ಎಂಬ ಆಸೆಯನ್ನು ಮಂತ್ರಿಗಳಲ್ಲಿ ಹುಟ್ಟಿಸಿದನು.

ಚೊಂಬಿನ ಆಸೆಗಾಗಿ ಕೆಲವು ಮಂತ್ರಿಗಳು ತಮಗೆ ಸಿಕ್ಕಿದ ಮನೆಗಳಿಗೆ ನುಗ್ಗಿ ಮಾಹಿತಿ ಬರೆದುಕೊಂಡರು. "ಚೊಂಬು ಸಿಗದಿದ್ದರೂ ಸರಿ ನಮಗೆ ಈ ಕೆಲಸ ಬೇಕಿರಲಿಲ್ಲ" ಎಂದು ಹಲವು ಮಂತ್ರಿಗಳು ಅಂದುಕೊಂಡರು. ಆದರೂ ಮರಣದಂಡನೆಯ ಭಯದಿಂದ ಕೆಲಸದಲ್ಲಿ ನಿರತರಾದರು.

ಸುದ್ದಿ ತಿಳಿದ ಮನೆಮಂದಿಯವರು ತಮ್ಮ ಆಭರಣ-ಶಸ್ತ್ರಾಸ್ತ್ರಗಳನ್ನೆಲ್ಲ ಅಡಗಿಸಿಟ್ಟರು. ತಮ್ಮ ಬಳಿ ಇರುವ ಕುದುರೆಗಳನ್ನು ಯಾರ ಕಣ್ಣಿಗೂ ಬೀಳದಂತೆ ನೋಡಿಕೊಂಡರು. ಹೇಗೋ, ಬಂದ ಮಂತ್ರಿಗಳಿಗೆ ಅಲ್ಪ ಸ್ವಲ್ಪ ಮಾಹಿತಿ ಕೊಟ್ಟು ಕಳುಹಿಸಿದರು. ಬಾಯಿಗೆ ಬಂದಂತೆ ಮಂತ್ರಿಗಳನ್ನು ನಿಂದಿಸಿದರು. 

ಗುಪ್ತಚರರು ಮರದ ಕೆಳಗೆ ಕುಳಿತು ಕತ್ತಲಾದ ಮೇಲೆ ಮನೆಗೆ ತೆರಳಿದರು

ಹೋದ ಮನೆಗೇ ಹತ್ತಾರು ಮಂತ್ರಿಗಳು ಹೋದರು. ಮೊದಲು ಹೋದವರಿಗೆ ಅದೃಷ್ಟ. ಕೆಲವರು "ಈಗಷ್ಟೇ ಬಂದು ಹೋದರು" ಎಂದು ಸುಳ್ಳು ಹೇಳಿದರು.

ಹೀಗೆ ತಿಂಗಳು ಕಳೆದರೂ ಎಲ್ಲಾ ಮನೆಗಳಿಗೆ ಭೇಟಿ ನೀಡಲು ಸಾಧ್ಯವಾಗದೆ ಇರುವುದರಿಂದ ಕೆಂಡಾಮಂಡಲನಾದ ರಾಜನು ಕೆಲವು ಮಂತ್ರಿಗಳನ್ನು ಕೆಲಸದಿಂದ ವಜಾ ಮಾಡಿದನು. ಕೆಲವರಿಗೆ ಗಲ್ಲುಶಿಕ್ಷೆ ವಿಧಿಸಿದನು. ಬಿಟ್ಟುಹೋದ ಮನೆಗಳನ್ನು ಹುಡುಕಿ ಮಾಹಿತಿ ಕಲೆಹಾಕಲು ಮತ್ತೆ ಆಜ್ಞಾಪಿಸಿದನು.

ಕೆಲವು ಮಂತ್ರಿಗಳು ಬಿದ್ದು ತಲೆಯೊಡೆದುಕೊಂಡರು. ಕೆಲವರು ಕೈ ಕಾಲು ಮುರಿದುಕೊಂಡರು, ಕೆಲವರನ್ನು ಕಾಡಾನೆ ಸಾಯಿಸಿತು. ಕೆಲವರು ಕೆರೆಗೆ ಹಾರಿ ಸತ್ತರು.

ಆದರೂ ಛಲಬಿಡದ ರಾಜ ಎಲ್ಲಾ ಮನೆಗೂ ಹೋಗಿ ವಿವರಗಳನ್ನು ಬರೆದು ತರಲು ಕಟ್ಟಪ್ಪಣೆ ವಿಧಿಸಿದನು.

ಒಂದು ಮನೆಯ ಪ್ರತೀ ಸದಸ್ಯರನ್ನು ಒಂದೊಂದು ಮನೆ ಎಂದು ಸುಳ್ಳು ವರದಿ ನೀಡಿ ಮನೆಗಳ ಸಂಖ್ಯೆಯನ್ನು ಹೆಚ್ಚಿಸಿಕೊಂಡ ಮಂತ್ರಿಗಳಿಗೆ ಬಡ್ತಿ ನೀಡಲಾಯಿತು.

ಅನ್ನ ನೀರು ಇಲ್ಲದೆ ನಿರಂತರವಾಗಿ ಸುತ್ತಿ ಸುತ್ತಿ ಬಸವಳಿದ ಮಂತ್ರಿಗಳು ನರಪೇತಲರಂತೆ ಕಾಣಿಸತೊಡಗಿದರು. ಕುಳ್ಳಗಿದ್ದ ಮಂತ್ರಿಯೊಬ್ಬನನ್ನು ಆಟಿಕೆ ಎಂದುಕೊಂಡ ಮಗುವೊಂದು ತನಗೆ "ಆಟಿಕೆ ಬೇಕೂ..ಊಊ.." ಎಂದು ರಚ್ಚೆ ಹಿಡಿಯಿತು.
*
ಇದೆಲ್ಲವನ್ನು ನೋಡುತ್ತಿದ್ದ ಅರಮನೆಯಲ್ಲಿ ಕಸಗುಡಿಸುವ ತಿಮ್ಮ ಯೋಚಿಸಿದ:" ಒಬ್ಬೊಬ್ಬರಿಗೆ ಒಂದೊಂದು ಊರು, ಒಂದು ಗಡಿ, ಮನೆಯ ಯಜಮಾನನ ಹೆಸರು ಕೊಟ್ಟು ಏನು ಮಾಡಬೇಕೆಂದು ಹೇಳಿ ಕಳಿಸಿಬಿಟ್ಟಿದ್ದರೆ ಒಂದು ವಾರದಲ್ಲಿ ಈ ಕೆಲಸ ಮುಗಿಯುತ್ತಿತ್ತು. "

ಆದರೆ, ಅವನು ಕಸಗುಡಿಸುವ ಕೆಲಸದವನಾದ್ದರಿಂದ ಹಾಗೆ ಜೋರಾಗಿ ಹೇಳುವ ಸ್ವಾತಂತ್ರ್ಯ ಅವನಿಗಿರಲಿಲ್ಲ.
*
✍️ಕಾಜೂರು ಸತೀಶ್


Wednesday, October 15, 2025

ನೆಲ

ಗುಂಡ ಓದಿನಲ್ಲಿ ದಡ್ಡ. ಎಷ್ಟು ಹೇಳಿದರೂ ಅವನಿಗೆ ಅರ್ಥವಾಗುತ್ತಿರಲಿಲ್ಲ.

ಅವನ ಅಕ್ಕ ತಿಮ್ಮಿ ಬುದ್ಧಿವಂತೆ. ಮನೆಯ ಕೆಲಸಗಳನ್ನು ಮಾಡುತ್ತಲೇ ತರಗತಿಯಲ್ಲಿ ಸದಾ ಮುಂದೆ ಇದ್ದಳು.

ತಿಮ್ಮಿಯನ್ನು ಕಾಲೇಜು ಬಿಡಿಸಿ ಕೂಲಿ ಕೆಲಸಕ್ಕೆ ಹಾಕಿದರು.

ಗುಂಡ ಹೇಗೋ ಓದಿ ಮುಂದೆ ನಾಗರಿಕ ಸೇವೆಯ ಹುದ್ದೆಯನ್ನು ಗಿಟ್ಟಿಸಿಕೊಂಡ. ಆಗಲೂ ತಪ್ಪಿಲ್ಲದೆ ಓದಲು, ಬರೆಯಲು ಅವನು ಕಲಿತಿರಲಿಲ್ಲ. ಅವನಿಗೆ ಏಸಿ ಕೊಠಡಿ ಅಷ್ಟಾಗಿ ಒಗ್ಗುತ್ತಿರಲಿಲ್ಲವಾದರೂ ಅಲ್ಲಿಯೇ ಹಲವು ಯೋಜನೆಗಳನ್ನು ರೂಪಿಸುತ್ತಿದ್ದ.

ತಿಮ್ಮಿ ಪುಸ್ತಕ ಓದುವುದನ್ನೇ ನಿಲ್ಲಿಸಿದಳು. ಕೂಲಿ ಕೆಲಸ ಮಾಡುತ್ತಲೇ ಸತ್ತುಹೋದಳು.

ಸಹಿ ಮಾಡಲು ಹಸಿರು ಪೆನ್ನನ್ನು ಬಳಸುವುದನ್ನು ಬಿಟ್ಟರೆ ಗುಂಡನೂ ಓದುವುದನ್ನು ನಿಲ್ಲಿಸಿದ.

ಹತ್ತು ಪದವಿಗಳನ್ನು ಪಡೆದಿದ್ದ ನೆರೆಮನೆಯ ತಿಮ್ಮ ವಿದೇಶದಲ್ಲಿ ಹೋಟೆಲ್ ಕೆಲಸಕ್ಕೆ ಸೇರಲು ಸಿದ್ಧತೆ ನಡೆಸುತ್ತಿದ್ದ.
*
✍️ ಕಾಜೂರು ಸತೀಶ್

Friday, October 10, 2025

ಹುಡುಗಿ ಮತ್ತು ಸನ್ಯಾಸಿ

ಸನ್ಯಾಸಿಗೆ ಹುಡುಗಿಯೊಬ್ಬಳು ಎದುರಾದಳು. ಅವಳು ಅಪಾರ ದುಃಖದಲ್ಲಿದ್ದಳು. ತನ್ನ ದುಃಖವನ್ನು ನಿತ್ಯ ಸನ್ಯಾಸಿಯಲ್ಲಿ ಹೇಳುತ್ತಾ ಹಗುರಾಗುತ್ತಿದ್ದಳು. ಸನ್ಯಾಸಿ ಧ್ಯಾನದಲ್ಲಿ ನಿರತನಾಗಿದ್ದಾಗಲೂ ಅವಳು ಬಂದು ತನ್ನ ದುಃಖವನ್ನು ನಿವೇದಿಸುತ್ತಿದ್ದಳು.

ತಾನು, "ದುಃಖಿತನಾದ ಕಾರಣದಿಂದಲೇ ಸನ್ಯಾಸಿಯಾಗಿದ್ದು"ಎಂದರೆ ''ನಿನಗೇನು ದುಃಖ'' ಎಂದು ತನ್ನ ದುಃಖವನ್ನು ಹೇಳಿಕೊಳ್ಳುತ್ತಿದ್ದಳು. ಅವನು ಧ್ಯಾನದಲ್ಲಿ ನಿರತನಾದರೆ ಇವಳು ಜೋರಾಗಿ ಅಳುತ್ತಿದ್ದಳು. 'ನಿಮಗೆಲ್ಲ ನಮ್ಮ ಕಷ್ಟ ಅರ್ಥವಾಗುವುದಿಲ್ಲ' ಎನ್ನುತ್ತಿದ್ದಳು.

ಧ್ಯಾನರಹಿತ ಸ್ಥಿತಿಯಿಂದಲೂ ಏಕಾಂತದ ಕೊರತೆಯಿಂದಲೂ ಸನ್ಯಾಸಿಯು ಮತ್ತಷ್ಟೂ ದುಃಖಿತನಾದ. ಆದರೆ ಸನ್ಯಾಸಿಯಾದ ಕಾರಣ ತನ್ನ ದುಃಖವನ್ನು ಯಾರೊಂದಿಗೂ ಹೇಳಿಕೊಳ್ಳಲಿಲ್ಲ.

ಸನ್ಯಾಸಿ ಸಿಕ್ಕ ಮೇಲೆ ಹುಡುಗಿ ಗೆಲುವಾದಳು.
*

✍️ಕಾಜೂರು ಸತೀಶ್

Thursday, October 9, 2025

ನನ್ನಲ್ಲಿ ಇರದ ಒಳ್ಳೆಯತನ...

ದಿನಾಂಕ 30/07/2025.
ನಮ್ಮೂರು ವಿದ್ಯುತ್ ಕಾಣದೆ ಎಂಟನೇ ದಿನದ ಸಂಭ್ರಮದಲ್ಲಿದ್ದಾಗ ಮೊಬೈಲ್ ಚಾರ್ಜ್ ಮಾಡಲೆಂದು ಕೂಡಿಗೆಗೆ ತೆರಳಿದ್ದೆ. ಚಾರ್ಜ್ ಮಾಡಿ ಹೊರಬಂದಾಗ ನನ್ನ ಕೈಜಾರಿದ ಚಾರ್ಜರ್ ರಸ್ತೆಯ ಕೆಸರಿನಲ್ಲಿ ಮುಳುಗಿತು. ಅದನ್ನು ಎತ್ತಿಕೊಳ್ಳುವುದನ್ನೇ ನೋಡುತ್ತಿದ್ದ ಆಟೋ ಡ್ರೈವರ್ ಒಬ್ಬರು ತಾವು ಕುಡಿಯಲು ಇಟ್ಟಿದ್ದ ನೀರನ್ನೇ ನೀಡಿ ಚಾರ್ಜರಿನ ಕೆಸರನ್ನು ತೊಳೆಯಲು ಸಹಕರಿಸಿದರು(ನನ್ನೊಳಗಿನ ಕೆಸರನ್ನೂ).
*
ಆ ಡ್ರೈವರಿನ ಜಾಗದಲ್ಲಿ ನಾನಿದ್ದಿದ್ದರೆ ಖಂಡಿತವಾಗಿಯೂ ಕುಡಿಯಲು ಇಟ್ಟಿದ್ದ ನೀರನ್ನು ಕೊಡುತ್ತಿರಲಿಲ್ಲ. ನಾನು 'ಬೇಡ' ಎಂದಾಗಲೂ ಮತ್ತೆ ಒತ್ತಾಯಿಸಿದ ಆ ಮುಖ ಈಗ ನನ್ನೊಳಗೆ save ಆಗಿದೆ. ಇನ್ನು ಆ ದಾರಿಯಲ್ಲಿ ಕ್ರಮಿಸುವಾಗಲೆಲ್ಲ ಅದೇ ಮುಖಕ್ಕಾಗಿ ಕಣ್ಣುಗಳು ಹುಡುಕತೊಡಗುತ್ತವೆ.
*
ಸಣ್ಣ ಸಣ್ಣ ಸಂಗತಿಗಳು ಹೇಗೆಲ್ಲಾ ಕಾಡುತ್ತವೆ, ಎಷ್ಟೆಲ್ಲಾ ಕಲಿಸುತ್ತವೆ, ಸದಾ ಡವಗುಟ್ಟುತ್ತಲೇ ಇರುವ ಈ ಪುಟ್ಟ ಹೃದಯದ ಭಾರವನ್ನು ಹೇಗೆಲ್ಲಾ ಹೆಚ್ಚಿಸುತ್ತಲೇ ಇರುತ್ತವೆ ಅಲ್ಲವೇ?
ಇದೊಂದು ಸೋಜಿಗ.
**

✍️ ಕಾಜೂರು ಸತೀಶ್

Wednesday, October 8, 2025

ಒಂದು ಕ್ರೌರ್ಯವನ್ನು ನೆನೆದು...

ಜಗತ್ತು ಎಷ್ಟು ಭಯಾನಕವಾಗಿದೆ ಎಂಬುದಕ್ಕೆ ಇಂದಿನ ಘಟನೆಯೂ ಸೇರ್ಪಡೆಗೊಂಡಿತು.

ಈ ಮಧ್ಯಾಹ್ನ ನನಗೊಂದು ಕರೆ ಬಂದಿತು. ವೃತ್ತಿ ಸಂಬಂಧಿತ ಕರೆ ಅದು. 'ಈಗ ಬರಬಹುದಾ?' ಎಂದಾಗ 'ನಾಳೆ' ಎಂದು ಮೊದಲು ಹೇಳಿದೆನಾದರೂ ಆಮೇಲೆ ಒಪ್ಪಿಕೊಂಡು ಹೊರಟೆ. ಹೊರಟುಹೋಗುತ್ತಿರುವಾಗಲೂ ಕರೆಮಾಡಿದೆ. 'ಊಟ ಮಾಡಿ ಬರುವೆ' ಎಂದಿತು.

ಸುಮಾರು ಮೂರು ಗಂಟೆಗಳಷ್ಟು ಕಾದೆ. ಈ ನಡುವೆ ಮೂರು ಬಾರಿ ಕರೆ ಮಾಡಲಾಗಿ ಅದರಲ್ಲಿ ಒಮ್ಮೆ ಕರೆ ಸ್ವೀಕೃತಗೊಂಡು 'ಇನ್ನೇನು ಬರುವೆ' ಎಂದಿತು! ಒಂದು ಸಂದೇಶವನ್ನೂ ಎಸೆದೆ; ಅದೂ 'ಅದರ' ಕಣ್ಣಿನ ಕಸದಬುಟ್ಟಿ ಸೇರಿತು.

ಆಮೇಲೆ 'ಅದು' ಬರಲಿಲ್ಲ. ನಾನು ಮನೆಗೆ ಹಿಂತಿರುಗಿದೆ.
*
ನಾನು ಹಿಂತಿರುಗಿ ಒಂದು ಗಂಟೆ ಕಳೆದರೂ ಅತ್ತಲಿಂದ ಒಂದು ಎಲೆಯಲುಗುವಷ್ಟಾದರೂ ಸದ್ದು ಕೇಳಿಸಲಿಲ್ಲ. 'ನನಗಾಗಿ ಕಾದವನು ಏನಾದ' ( ಅದು ನನ್ನ ಕೆಲಸ ಅಲ್ಲ ಎನ್ನುವುದು ಒತ್ತಟ್ಟಿಗಿರಲಿ! )ಎಂಬ ಕನಿಷ್ಟ ಮನುಷ್ಯಪ್ರಜ್ಞೆಯೂ ಅದಕ್ಕಿಲ್ಲವಲ್ಲ ಎಂಬ ಭಯಾನಕ ಸ್ಥಿತಿಯ ಬಗ್ಗೆ ನೆನೆದು ನಾನೀಗ ಮರುಗುತ್ತಿರುವೆ.
*
ಈಗ ಹೊರಗಡೆ ಗುಡುಗಿನ ಸದ್ದು ಕೇಳಿಸುತ್ತಿದೆ. ನನ್ನೊಳಗೂ ಅದೇ ಸದ್ದು! ಹೀಗೆ ಬರೆಯುತ್ತಿರುವ ಈ ಶಬ್ದಗಳಲ್ಲಿ ಗುಡುಗು ಅಡಗಿದೆಯೋ ನಾನರಿಯೆ..
*
✍️ಕಾಜೂರು ಸತೀಶ್

Saturday, October 4, 2025

ಗುಂಡಿ

ಗುಂಡ ರಸ್ತೆಯ ಗುಂಡಿಯಲ್ಲಿ ಹೂತುಹೋದ. ಅವನ ಸಹೋದರ ತಿಮ್ಮ "ನನ್ನ ತಮ್ಮನನ್ನು ಎತ್ತಲು ಸಹಕರಿಸಿ" ಎಂದು ಗೋಗರೆದ. ಯಾರೂ ಬರಲಿಲ್ಲವಾದ್ದರಿಂದ ಗುಂಡ ಸತ್ತುಹೋದ.

'ರಾಜನಿಗೆ ಇದು ಮುಜುಗರದ ವಿಷಯ' ಎಂದು ಹಲವರು ಮಾತನಾಡಿಕೊಂಡರು. ಇದು ರಾಜನ ಕಿವಿಗೂ ಬಿದ್ದ ಕಾರಣ ರಾಜ ಹೆಲಿಕಾಪ್ಟರ್ ನಲ್ಲಿ ಬಂದು ಘಟನಾ ಸ್ಥಳವನ್ನು ವೀಕ್ಷಿಸಿ ಹೋದ.
*
ಕಾಜೂರು ಸತೀಶ್