ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Thursday, January 30, 2025

ನಡು

ಸುಡುವ ಒಂದು ರಾತ್ರಿ ಬುದ್ಧ ಯಾರಿಗೂ ಹೇಳದೆ ಮೊಬೈಲ್ ಸ್ವಿಚ್ ಆಫ್ ಮಾಡಿ ಕಾಡಿಗೆ ತೆರಳಿದ.

ಕಾಡಿನಲ್ಲಿ ತೇಗದ ಮರಗಳನ್ನು ಮಾತ್ರ ನೆಡಲಾಗಿತ್ತು.

ಧ್ಯಾನಕ್ಕೆ ಒಂದು ಮರವೂ ಸಿಗದಿದ್ದಾಗ ಬುದ್ಧ ಯೋಚಿಸಿದ : ಪ್ರಗತಿಪರರು ಮರ, ಪ್ರಾಣಿ ಎಂದರೆ ಉರಿದು ಬೀಳುತ್ತಾರೆ. 'ಮನುಷ್ಯರು ಅಷ್ಟೇ' ಎನ್ನುತ್ತಾರೆ. ಅವರ ವಿರೋಧಿಗಳು 'ದೇವರು ಅಷ್ಟೇ' ಎನ್ನುತ್ತಾರೆ. ಇವರಿಬ್ಬರೂ ಬದುಕಬೇಕಾದರೆ ನೆರಳು ಕೊಡುವ ಮರ ಬೇಕು ಎಂದು ನಾನು ಹೇಳಿದರೆ ನಡುವಿನಲ್ಲಿ ನನ್ನನ್ನು ನಿಲ್ಲಿಸಿ ಕಲ್ಲು ತೂರುತ್ತಾರೆ.

ಹೀಗೆ ಹೇಳಿ ಒಂದು ಅರಳೀ ಗಿಡವನ್ನು ನೆಟ್ಟು ಮತ್ತೆ ಅರಮನೆಗೆ ಹಿಂತಿರುಗಿದ.

ಎಲ್ಲಿಗೆ ಹೋಗಿದ್ದೆ ಎಂದು ಯಾರೂ ಕೇಳಲಿಲ್ಲ.
*
ಕಾಜೂರು ಸತೀಶ್

ಎಚ್ಚರ

ಬುದ್ಧ ಮಧ್ಯರಾತ್ರಿ ಎದ್ದ.

ರಾಹುಲ ದೀಪ ಆರಿಸಿ ಕಂಬಳಿ ಹೊದ್ದು ಅದರ ಒಳಗಿಂದ ಮೊಬೈಲ್ ನೋಡುತ್ತಾ ಮಲಗಿದ್ದ.

ಯಶೋಧರೆ ಹೊರಗಿನ ಡಿಜೆ ಸದ್ದು ತಡೆಯಲಾಗದೆ ಕಿವಿಗೆ ಹತ್ತಿ ಹಾಕಿ ಮಲಗಿದ್ದಳು.

ಬುದ್ಧ ಮತ್ತೆ ಮಲಗಿದ.
*
ಕಾಜೂರು ಸತೀಶ್

Tuesday, January 28, 2025

ಪರೀಕ್ಷೆ

ಪರೀಕ್ಷೆಯಲ್ಲಿ ತಿಮ್ಮ ಅಪಾರವಾಗಿ ಓದಿದ್ದ. ಆದರೆ, ಪ್ರಶ್ನೆಗಳು ಇಂತಿದ್ದವು :
👉ರಾಜನ ಮೊದಲ ಮಗ ಹುಟ್ಟಿದ್ದೆಲ್ಲಿ?
👉ರಾಜನ ಕೊನೆಯ ಮಗನಿಗೆ ಪಟ್ಟಾಭಿಷೇಕ ಮಾಡಿದ ವರ್ಷ?

ತಿಮ್ಮ ಈ ರಾಜನ ಬಗ್ಗೆ ದಿನಗಟ್ಟಲೆ ಮಾತನಾಡುವ ಸಾಮರ್ಥ್ಯ ಪಡೆದಿದ್ದ. ಅವನಲ್ಲಿ ರಾಜನ ಆಳ್ವಿಕೆಯ ಕುರಿತ ವಿಭಿನ್ನ ಒಳನೋಟಗಳಿದ್ದವು. ಆದರೆ, ದಿನಾಂಕ ಮತ್ತು ಹುಟ್ಟೂರಿನ ಹೆಸರನ್ನು ಅವನು ತಲೆಗೆ ಹಾಕಿಕೊಂಡಿರಲಿಲ್ಲ.
*
✍️ಕಾಜೂರು ಸತೀಶ್

Monday, January 27, 2025

ಶಿಕ್ಷಣ

ಹಳ್ಳಿ ಮೇಷ್ಟ್ರು ಎಷ್ಟು ಕೇಳಿಕೊಂಡರೂ ಪೋಷಕರು ಶಾಲೆಗೆ ಬರುತ್ತಿರಲಿಲ್ಲ.

ಒಂದು ದಿನ ಮೇಷ್ಟ್ರು ರಾಜಕಾರಣಿಯೊಬ್ಬರನ್ನು ಶಾಲೆಗೆ ಆಹ್ವಾನಿಸುವುದಾಗಿಯೂ, ಆ ದಿನ ತಪ್ಪದೆ ಬರಬೇಕೆಂದೂ ಮನೆಮನೆಗೆ ಹೋಗಿ ಪೋಷಕರಿಗೆ ಹೇಳಿಬಂದರು.

ಕಾರ್ಯಕ್ರಮದ ದಿನ ಬಹುತೇಕ ಪೋಷಕರು ಬಂದಿದ್ದರು. ಮೇಷ್ಟ್ರುಒಂದು ಹಾಳೆ ಕೊಟ್ಟು 'ನಿಮ್ಮ ಹೆಸರು ಮತ್ತು ನಿಮ್ಮ ಮಕ್ಕಳು ಓದುತ್ತಿರುವ ತರಗತಿಯನ್ನು ಬರೆಯಿರಿ' ಎಂದರು.

ಕೆಲವರು ಅವರ ಮಕ್ಕಳು ಓದುತ್ತಿರುವ ತರಗತಿಯನ್ನು ಸರಿಯಾಗಿಯೇ ಬರೆದಿದ್ದರು!
*
ಕಾಜೂರು ಸತೀಶ್

Sunday, January 26, 2025

ಅವಧಿ

ಶಿಕ್ಷಕರೆಲ್ಲರನ್ನೂ ಕರೆಸಿ ಒಂದು ಹಾಳೆ ನೀಡಿ ಶಾಲೆಯ 8 ಅವಧಿಗಳು ಮತ್ತು ಅದರ ಸಮಯವನ್ನು ಬರೆಯಲು ತಿಳಿಸಲಾಯಿತು.

ಕೆಲವರು ಸರಿಯಾಗಿ ಬರೆದಿದ್ದರು. ಆದರೆ ಕಡೆಯ ಅವಧಿ ಪೂರ್ಣಗೊಳ್ಳುವ ಸಮಯವನ್ನು ಯಾರೂ ತಪ್ಪಾಗಿ ಬರೆದಿರಲಿಲ್ಲ.
*
ಕಾಜೂರು ಸತೀಶ್


Wednesday, January 22, 2025

ಬಯಕೆ




ಒಂದು ಸಟ್ಟುಗ ಹಿಡಿದು
ಆಕಾಶವನ್ನು ತಿರುವಿಹಾಕುತ್ತೇನೆ
ತಳಹಿಡಿದು ಕಪ್ಪಾದ ಹಗಲನ್ನು
ರಾತ್ರಿಯೆಂದು ಹೆಸರಿಟ್ಟು ಬಡಿಸುತ್ತೇನೆ

ಬೆಳದಿಂಗಳನ್ನು
ತೆಂಗಿನ ಚಟ್ನಿಯ ಹಾಗೆ
ಮೇಲೆ ಹರಡುತ್ತೇನೆ

ಖಾರ ಚಟ್ನಿ ತಿನ್ನುವ ಆಸೆಯಾಗುತಿದೆ
ಸಮುದ್ರದಲ್ಲಿ ಬೆರಳನ್ನದ್ದಿ 
ಮುಳುಗುವ ಸೂರ್ಯನನ್ನು 
ಮೇಲಕ್ಕೆತ್ತಿ ಕರಕರ ತಿನ್ನುತ್ತೇನೆ 

ಹಾ! ಖಾರವಾಗಿ 
 ಕಣ್ಣಿಂದ ನೀರಿಳಿಯುತ್ತಿದೆ 
ನನ್ನ ಹೊಟ್ಟೆಯಲ್ಲಿ 
ಕಾಡು ಮೇಡು ಬೆಟ್ಟ ಗುಡ್ಡ 
ಸುಮುದ್ರಗಳೆಲ್ಲ ಬೆಳಕು ಬೆಳಕೆಂದು 
ಚೀರಾಡುತ್ತಿದೆ 

ಈ ರಾತ್ರಿ 
ಪ್ರಪಂಚ ನನ್ನ ಹೊಟ್ಟೆಯಲ್ಲಿ 
ತಣ್ಣಗೆ ಮಲಗಿರಲಿ 
*


ಮಲಯಾಳಂ ಮೂಲ- ಸ್ಮಿತಾ ಶೈಲೇಶ್ 

ಕನ್ನಡಕ್ಕೆ - ಕಾಜೂರು ಸತೀಶ್ 

Tuesday, January 21, 2025

ಕೆಕೆಜಿ ಸರ್ ಗೆ ಅಶ್ರುತರ್ಪಣ

2006ರಲ್ಲಿ ಕಾಜೂರು ಶಾಲೆಯ ಸುವರ್ಣ ಮಹೋತ್ಸವವಿತ್ತು. ಅದರ ಅಂಗವಾಗಿ ಶಾಲೆಯಲ್ಲಿ ಓದಿದ ಆಯ್ದ ಹಿರಿಯ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವಿತ್ತು. ಪಟ್ಟಿಯಲ್ಲಿ ಕೆ ಕೆ ಗಂಗಾಧರನ್ ಸರ್ ಅವರ ಹೆಸರನ್ನು ನೋಡಿದ ನನಗೆ ಖುಷಿಯೋ ಖುಷಿ (ಅದುವರೆಗೆ ಅವರನ್ನು ನೋಡಿರಲಿಲ್ಲ, ಆ ಸಂದರ್ಭದಲ್ಲಾದರೂ ನೋಡಬಹುದಲ್ಲಾ ಎಂಬ ಖುಷಿ ). ಆ ದಿನ ಅವರನ್ನು ನೋಡಿದೆ. ಅವರ ಹಸ್ತಾಕ್ಷರ ಇರುವ ಪರಿಚಯ ಪತ್ರವನ್ನು ಪಡೆದೆ
(ಮಾತನಾಡಿಸಲಿಲ್ಲ!).







ಆದರೆ ಕೆಕೆಜಿ ಸರ್ ಗೆ ನನ್ನ ಪರಿಚಯವಿರಲಿಲ್ಲ. 2007ರಿಂದ ನಿರಂತರವಾಗಿ 'ತುಷಾರ' ಮಾಸಪತ್ರಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದ ನನ್ನ ಹೆಸರು ನೋಡಿ, ಅವರ ಸಂಬಂಧಿ(ಅನು ಅಕ್ಕ )ಯೊಬ್ಬರಿಗೆ ಕರೆ ಮಾಡಿ ನನ್ನ ಬಗ್ಗೆ ವಿಚಾರಿಸಿಕೊಂಡರಂತೆ. ಅವರ ಪರಿಚಯವನ್ನು 'ಗಡಿನಾಡ ಸಂಚಾರಿ' ಪತ್ರಿಕೆಯಲ್ಲಿ ಬರೆದ ಮೇಲೆ ಆಗಿಂದಾಗ್ಗೆ ನನಗೆ ಕರೆ ಮಾಡುತ್ತಿದ್ದರು. ನಾನು ನಿರಂತರವಾಗಿ ಅವರಿಗೆ sms ಕಳಿಸುತ್ತಿದ್ದೆ. ದಿನದ ಮೊದಲ ರಿಪ್ಲೈ ಅವರದೇ ಆಗಿರುತ್ತಿತ್ತು. English ಭಾಷೆಯಲ್ಲಿ ಉತ್ತಮ ಹಿಡಿತ ಅವರಿಗಿತ್ತು. ಬೆಳಿಗ್ಗೆ ನಾಲ್ಕರ ಹೊತ್ತಿನಲ್ಲೆಲ್ಲಾ ಅವರ ಅನುವಾದ ಕಾರ್ಯವು ಆರಂಭವಾಗುತ್ತಿತ್ತು.




ಕಾಜೂರನ್ನು ಎದೆಯೊಳಗೆ ಹೊತ್ತು ಅಲೆಯುವ ಕೆಕೆಜಿ ಸರ್ ಇಲ್ಲಿನ ಹಲವು ಸಂಗತಿಗಳ ಬಗ್ಗೆ ನನಗೆ ಹೇಳಿದ್ದರು. ಅವು ಪುನರಾವರ್ತನೆ ಆಗುತ್ತಿದ್ದರೂ ಹೊಸತೆಂಬಂತೆ ಅದನ್ನು ವಿವರಿಸುತ್ತಿದ್ದರು. ಕೆಲವು ಸಂಗತಿಗಳನ್ನು ಬಹಿರಂಗಗೊಳಿಸಲು ಆಗುವುದಿಲ್ಲ ಎನ್ನುತ್ತಲೇ ಅವುಗಳನ್ನು ನನಗೆ ಹೇಳುತ್ತಿದ್ದರು. ಶಾಲೆಗೆ ಹೋಗುವಾಗ ಗೆಳೆಯರಿಗೆ ತಾವು ಮುಂದೆ ಹೋಗಿರುವುದನ್ನು ತಿಳಿಸಲು ದೊಡ್ಡ ಕಲ್ಲಿಗೆ ಮೂತ್ರ ವಿಸರ್ಜನೆ ಮಾಡುತ್ತಿದ್ದ ಪ್ರಸಂಗದ ಬಗ್ಗೆ ಹೇಳಿದ್ದರು!( ಆ ಕಲ್ಲು ಈಗ ಏನಾಗಿದೆ ಎನ್ನುವ ವಿವರವನ್ನು ಇಲ್ಲಿ ಪ್ರಸ್ತಾಪಿಸಲಾರೆ!)



ಅನ್ಯಭಾಷಿಗರಾಗಿ ಇಲ್ಲಿ ಅನುಭವಿಸಿದ ಶೋಷಣೆಗಳು ಅವರ ಎದೆಯೊಳಗೆ ಹಾಗೇ ಬೀಡುಬಿಟ್ಟಿದ್ದವು. ಅದನ್ನು ಎದುರಿಸಲು ಅವರು ಬಳಸಿದ ಅಸ್ತ್ರವೇ ಬರೆಹ. ಪತ್ರಕರ್ತನಾಗುವ ಅವಕಾಶ ತಪ್ಪಿದ ಮೇಲೆ ಕೊಥಾರಿ ಕಾಫಿ ಸಂಸ್ಥೆಯಲ್ಲಿ ವೃತ್ತಿಬದುಕನ್ನು ಆರಂಭಿಸಿ , ರೈಲ್ವೇ ಮೇಲ್ ಸರ್ವೀಸ್ ನಲ್ಲಿ ಬದುಕನ್ನು ಗಟ್ಟಿಗೊಳಿಸಿದ ಕೆಕೆಜಿ ಸರ್, ವೃತ್ತಿಯನ್ನು ಮಾಡುತ್ತಲೇ ಅನುವಾದವನ್ನು ಶ್ರದ್ಧೆಯಿಂದ ರೂಢಿಸಿಕೊಂಡರು . ಜನಪ್ರಿಯ ಸಾಹಿತ್ಯಕ್ಕೂ ಕೈಹಾಕಿ ಮತ್ತೊಂದು ಬಗೆಯ ಓದುಗ ವಲಯವನ್ನೂ ತಲುಪಿದರು(ಈ ಬಗ್ಗೆ ಹಲವರು ನನ್ನೊಂದಿಗೆ ತಕರಾರನ್ನು ಹಂಚಿಕೊಂಡಿದ್ದರು- ಮುಖ್ಯವಾಗಿ ಏಟುಮಾನೂರ್   ಶಿವಕುಮಾರ್‌ ಅವರ 'ಅಷ್ಟಮಂಗಲ'ದ ಬಗ್ಗೆ )


ಕೆಕೆಜಿ ಸರ್ ಅವರನ್ನು ನಾನು ನೋಡಿರುವುದು ಮೂರು ಬಾರಿ. 2006ರ ಫೆಬ್ರವರಿ 20 , 2015ರ ಡಿಸೆಂಬರ್ ತಿಂಗಳಿನಲ್ಲಿ ಮತ್ತು 2018ರ ಜುಲೈ 26ರಂದು. ಅವರನ್ನು ಮುಖಾಮುಖಿಯಾಗಿ ಮಾತನಾಡಿಸಿದ್ದು ಮೂರನೇ ಬಾರಿ- 2018ರ ಜುಲೈ 26, ಆಲೂರು ಸಿದ್ದಾಪುರ ಮೊರಾರ್ಜಿ ಶಾಲೆಯಲ್ಲಿ ನಡೆದ ಸಾಹಿತ್ಯ ತಾಲೂಕು ಸಮ್ಮೇಳನದಲ್ಲಿ!


ಕೆಕೆಜಿ ಸರ್ ಅಧ್ಯಯನ ನಿರತರಾಗಿದ್ದರಿಂದ ವೈಚಾರಿಕವಾಗಿ ಖಚಿತ ನಿಲುವನ್ನು ಹೊಂದಿದ್ದರು. ಮೌಢ್ಯವನ್ನು ವಿರೋಧಿಸುತ್ತಿದ್ದರು. ಶೋಷಣೆಗೆ ಒಳಗಾದ ಜೀವವು ಜೀವಪರವಾಗಿರುತ್ತದೆ- ಕೆಕೆಜಿ ಸರ್ ಅಂಥವರು. ಶ್ರೀಮಂತರೊಬ್ಬರ ಮನೆಯ ಅಂಗಳವನ್ನು ಪ್ರವೇಶ ಮಾಡಿದ್ದಕ್ಕೆ ಅಲ್ಲಿಂದ ಬೈದು, ಬಂದೂಕು ತೋರಿಸಿ ಓಡಿಸಿದ್ದು, ಮೇಷ್ಟ್ರು -ಹರಿದ ಚಡ್ಡಿಯ ಮೇಲೆ ಹೊಡೆದದ್ದು, ಅದು ಮತ್ತಷ್ಟೂ ಹರಿದದ್ದು , ಶ್ರೀಮಂತ ವ್ಯಕ್ತಿಯೊಬ್ಬರು ಊರಿನವರ ಹಣ ನುಂಗಿದ್ದಕ್ಕೆ ಪತ್ರಿಕೆಯಲ್ಲಿ ( ಬೇರೆಯವರ ಹೆಸರಿನಲ್ಲಿ) ಬರೆದು ಪ್ರತಿಭಟನೆಯ ಸಂಚಲನ ಮೂಡಿಸಿದ್ದು...ಎಲ್ಲವೂ ಅವರನ್ನು ಇನ್ನಿಲ್ಲದ ಹಾಗೆ ಕಾಡುತ್ತಿದ್ದವು.


' ಸತೀಶ್, ನೀವು ಬರೆಯುತ್ತಿರುವ ವಿಷಯ ನಿಮ್ಮ ಪಕ್ಕದ ಮನೆಯವರಿಗೆ ಗೊತ್ತಾ?' ಎನ್ನುತ್ತಿದ್ದರು. ಇಲ್ಲಿನ ಪರಿಸ್ಥಿತಿ ಅಷ್ಟು ಸೂಕ್ಷ್ಮವಾಗಿ ಅವರಿಗೆ ಅರಿವಿತ್ತು. ಕಲೆಯನ್ನು ಹಣದಿಂದ ತೂಗಿ ನೋಡುವ ಊರು ಎನ್ನುತ್ತಿದ್ದರು. ಇಲ್ಲಿನ ಹಲವರ ಬಗ್ಗೆ ಮಾತನಾಡುತ್ತಿದ್ದರು. 'ಸ್ಮಿತಾ, ಸುನೀತಾ, ಸಹನಾ, ಸಂಗೀತಾ, ರಮ್ಯಾ,ಮೋಹನ್ ದಾಸ್, ಉಳ್ಳಿಯಡ ಪೂವಯ್ಯ, ರೇವತಿ ಪೂವಯ್ಯ, ಟಿ ಪಿ ರಮೇಶ್, ಲೋಕೇಶ್ ಸಾಗರ್, ಹಾತಿ, ಮಣಿ, ಪಪ್ಪನ್, ಮಾಧವನ್, ದೀಪಕ್, ರಾಘವನ್, ಬಾಲಕೃಷ್ಣ' ಇವರನ್ನೆಲ್ಲಾ ವಿಚಾರಿಸುತ್ತಿದ್ದರು. ಇವರ ಬದುಕಿನ/ಬರೆಹದ ಹಲವು ಆಯಾಮಗಳನ್ನು ವಿಶ್ಲೇಷಿಸುತ್ತಿದ್ದರು-ಅವೆಲ್ಲವೂ ಪ್ರಾಮಾಣಿಕವಾಗಿರುತ್ತಿದ್ದವು.


ಡಾ.ಅಶೋಕ್ ಕುಮಾರ್ (ನಾನು ತುಂಬಾ ಗೌರವಿಸುವ ವ್ಯಕ್ತಿ ), ಕೆ ಕೆ ನಾಯರ್, ಕೋವರ್ಕೊಲ್ಲಿ ಕರುಣಾಕರ, ನಾದಾ, ಮೋಹನ್ ಕುಂಟಾರ್, ಪಾರ್ವತಿ ಐತಾಳ್, ಸಿ ರಾಘವನ್, ತೇರಳಿ ಶೇಖರ್ , ಕೆ ವಿ ಕುಮಾರನ್, ಪಯ್ಯನ್ನೂರು ಕುಂಞಿರಾಮನ್‌, ಬಿ ಕೆ ತಿಮ್ಮಪ್ಪ, ಸುಷ್ಮಾ ಶಂಕರ್ ಮೊದಲಾದ ಅನುವಾದಕರ ಬಗ್ಗೆ ನನ್ನೊಂದಿಗೆ ಚರ್ಚಿಸುತ್ತಿದ್ದರು.


'ಪ್ರಜಾವಾಣಿ' ಬಳಗದ ಮೇಲೆ ಅವರಿಗೆ ಅಭಿಮಾನವಿತ್ತು(ನನಗದು ಪೂರ್ವಗ್ರಹದ ಹಾಗೆ ಅನಿಸುತ್ತಿತ್ತು . ನಾನು ಆ ಕುರಿತು ಅವರೊಂದಿಗೆ ಚರ್ಚಿಸಲಿಲ್ಲ). ದಶಕದ ಹಿಂದೆ ವಿಜಯ ಕರ್ನಾಟಕಕ್ಕೂ ನನ್ನಿಂದ ಬರೆಸಿದರು. ಸಂಕ್ರಮಣ ದಲ್ಲಿ ಪ್ರಕಟಗೊಂಡ ಕವಿತೆಯ ಸಾಲಗಳನ್ನು ಅವರು ನೆನಪಿಟ್ಟುಕೊಂಡು ಉಲ್ಲೇಖಸುತ್ತಿದ್ದರು (ನನ್ನ ಮೇಲೆ ಅಷ್ಟು ಪ್ರೀತಿ ಇತ್ತು ಅವರಿಗೆ).


ಸಾಹಿತಿ/ಸಾಹಿತ್ಯದ ಮೇಲೆ ಇರುವ ಪತ್ರಿಕಾ ರಾಜಕಾರಣದ ಸೂಕ್ಷ್ಮ ಅನುಭವಿರುವ ನನಗೆ ಪತ್ರಿಕೆಗಳಿಗೆ ಬರೆಯುವುದು 'ಮಾರಿಕೊಳ್ಳುವುದು' ಎಂದೇ ಅನಿಸಿಬಿಟ್ಟಿತ್ತು ! ಅವರು ಎಷ್ಟು ಹೇಳಿದರೂ ನಾನು ನನ್ನ ಪಾಡಿಗೆ ಏನೇನೋ ಗೀಚುತ್ತಾ ಓದುತ್ತಾ ಇರತೊಡಗಿದೆ(ಅವರಿಗೆ ಬೇಸರ ಬರಿಸುವಷ್ಟು ಬದಲಾಗದೆ ಉಳಿದೆ ). ನಿಮ್ಮ ಹಾಗೆ ಇದ್ದರೆ ಸಾಹಿತ್ಯ ಲೋಕದಲ್ಲಿ ಯಾರೂ ಗಮನಿಸುವುದಿಲ್ಲ ಎನ್ನುತ್ತಿದ್ದರು.

*
"ಸತೀಶ್ ನಿಮಗೆ ___ ಗೊತ್ತಾ?
ಗೊತ್ತು ಸರ್. ತುಂಬಾ ಚೆನ್ನಾಗಿ ಬರೀತಾರೆ ಸರ್.
ನಿಮಗೆ ಒಂದು ಸನ್ಮಾನ ಇದೆ ಬನ್ನಿ ಸರ್ ಅಂತ ಕರೆದ್ರು. ಸನ್ಮಾನಕ್ಕೆ ಹಣ ಕೊಡ್ಬೇಕಂತೆ!
ಸರ್ ಅವ್ರು ಕೇಳಿದ್ದಾ?
ಹೌದು
ಹಾಗೆ ಬರೆಯುವವರು ಹೀಗೆಲ್ಲಾ ಕೇಳ್ತಾರಾ ಸರ್?
ನಿಮಗೆ ಇದೆಲ್ಲಾ ಗೊತ್ತಾಗಲ್ಲ ಸತೀಶ್..."
*


ಕಳೆದ ಒಂದೆರಡು ವರ್ಷಗಳಿಂದ ಮೊಬೈಲ್ ಕರೆಗಳು ನರಕದ ಹಾಗೆ ಅನ್ನಿಸಿ ಅದರಿಂದ ದೂರ ಉಳಿದಿದ್ದೆ. ಹಲವು ಮಂದಿ ಕರೆಮಾಡಿ ನಿರಾಶರಾಗಿದ್ದವರ ಪಟ್ಟಿಯಲ್ಲಿ ಕೆಕೆಜಿ ಸರ್ ಕೂಡ ಒಬ್ಬರಾಗಿದ್ದರು(ಸತೀಶ್ ಫೋನಿಗೆ ಸಿಗುವುದೇ ಇಲ್ಲ ಎಂದು ಹೇಳಿದ್ದರಂತೆ).
ಕಡೆಯ ಬಾರಿ ಕರೆಮಾಡಿದಾಗ ಅವರ ಧ್ವನಿ ಕ್ಷೀಣಿಸಿತ್ತು. ನಾನು ಬರೆಯುವುದನ್ನೂ ಓದುವುದನ್ನೂ ಬಿಟ್ಟುಬಿಟ್ಟೆ ಸತೀಶ್ ಎಂದರು. ತಮ್ಮ ಅನಾರೋಗ್ಯದ ಬಗ್ಗೆ ಹೇಳಿಕೊಂಡರು. ದುಃಖವಾಯಿತು. ಗಂಟೆಗಟ್ಟಲೆ ಮಾತನಾಡುತ್ತಿದ್ದ ಕೆಕೆಜಿ ಸರ್ ಹತ್ತು ನಿಮಿಷಕ್ಕೇ ಫೋನಿಟ್ಟರು! 'ಆಥರ್ಸ್ ಕಾಪಿ' ಅನುವಾದದ ಬಗ್ಗೆ ಹೇಳಬೇಕೆಂದುಕೊಂಡದ್ದು ನನ್ನೊಳಗೇ ಉಳಿಯಿತು.


ಕೆಕೆಜಿ ಸರ್ ಬಾಡಿಗೆ ಮನೆಯಲ್ಲಿಯೇ ಇದ್ದರು.ಇಷ್ಟು ವರ್ಷ ಕೆಲಸ ಮಾಡಿ ಇನ್ನೂ ಈ ಪುಟ್ಟ ಬಾಡಿಗೆ ಮನೆಯಲ್ಲೇ ಇದ್ದೇನೆ ಸತೀಶ್ ಎಂದು ಆಗ ಅವರಿಗಿದ್ದ ಹಣ ಮಾಡಬಹುದಾದ ಅವಕಾಶದ ಬಗ್ಗೆ ಹೇಳಿದ್ದರು. ಕಡೆಗೆ ತಾವು ವೃತ್ತಿಯಲ್ಲಿದ್ದಾಗ ರೆಜಿಸ್ಟರ್ ಮಾಡಿಸಿದ್ದ ಹೌಸಿಂಗ್ ಬೋರ್ಡ್ ಸೈಟಿನಲ್ಲಿ ಮನೆಕಟ್ಟಿಸಿ ಆಮಂತ್ರಣ ಕಳಿಸಿದ್ದರು. ಮಗನ ಮದುವೆಗೂ ಆಮಂತ್ರಣವಿತ್ತು. ಇಲ್ಲಿನ ಪರಿಸ್ಥಿತಿಯ ಅರಿವಿರುವ ಅವರು ಬರಲಿಲ್ಲವೆಂದು ಬೇಸರಿಸಿಕೊಳ್ಳಲಿಲ್ಲ. ಅವರ ಮೊದಲ ಕೃತಿ ಪ್ರಕಟಗೊಂಡಿದ್ದು 2009ರಲ್ಲಿ, ನಿವೃತ್ತಿಯ ಅನಂತರ!

ಜನಸಾಮಾನ್ಯರಿಗೆ ಅರ್ಥವಾಗುವ ಹಾಗೆ ಅನುವಾದಿಸಬೇಕು ಸತೀಶ್. ಮೂಲ ಪದವನ್ನೇ ಇಡುವುದು, ಅಡಿ ಟಿಪ್ಪಣಿ ಕೊಡುವುದು- ಇವು ಓದುಗನಿಗೆ ರಸಭಂಗ ಉಂಟು ಮಾಡುತ್ತದೆ ಎನ್ನುತ್ತಿದ್ದರು. ತಾವು ಮೊದಮೊದಲು ಮಾಡುತ್ತಿದ್ದ ತಪ್ಪುಗಳನ್ನು ಹೇಳುತ್ತಿದ್ದರು. ಕಮಲಾದಾಸ್, ಲಂಕೇಶ್, ವಾಸುದೇವನ್ ನಾಯರ್ ಮೊದಲಾದ ಲೇಖಕರ ಒಡನಾಟವನ್ನು ಹೇಳಿಕೊಳ್ಳುತ್ತಿದ್ದರು.
*


ಮೊನ್ನೆ, ಜನವರಿ 19ಕ್ಕೆ ಕೆಕೆಜಿ ಸರ್ ನಮ್ಮೆಲ್ಲರಿಗೆ ವಿದಾಯ ಹೇಳಿ ಹೊರಟರು. ಅವರು ಬರೆದು ಅಮರರಾದರು. ಅವರ ಅನುಭವಗಳನ್ನೆಲ್ಲ ಮೊಗೆಮೊಗೆದು ನಮ್ಮೊಳಗೆ ತುಂಬಿ ಹೊರಟರು -ಅಮರರಾದರು.

ಅಶ್ರುತರ್ಪಣ ಸರ್🙏
*

✍️ಕಾಜೂರು ಸತೀಶ್








Sunday, January 19, 2025

ಶ್ರೀಮಂತರು

ಜೋರು ಮಳೆಗೆ ಎಲ್ಲವೂ ಕೊಚ್ಚಿಕೊಂಡು ಹೋಯಿತು.

ರೈತರು, ಕೂಲಿ ಕಾರ್ಮಿಕರು ನಿರಾಶ್ರಿತರ ಶಿಬಿರವನ್ನು ಸೇರಿದರು.

ಶ್ರೀಮಂತರನ್ನು ಅವರ ನೆಂಟರು ಬಂದು ತಮ್ಮ ಮನೆಗೆ ಕರೆದುಕೊಂಡು ಹೋದರು.
*
ಕಾಜೂರು ಸತೀಶ್

ಮೀಸಲಾತಿ

"ಮೀಸಲಾತಿ ಎಂದರೇನು?" ಕೇಳಿದ ವಿದ್ಯಾರ್ಥಿ.

"ಅವರೆಲ್ಲಾ ಬೆಂಚಿನಲ್ಲಿ ಕುಳಿತು ಪಾಠಕೇಳುವಾಗ ಇವನೊಬ್ಬ ಮೂಲೆಯಲ್ಲಿ ಗೋಣಿಚೀಲ ಹಾಸಿ ಪಾಠಕೇಳುತ್ತಿದ್ದನು"
ಗುರುಗಳು ಹೇಳಿ ಮುಗಿಸಿದರು.
*
ಕಾಜೂರು ಸತೀಶ್

ಪ್ರೀತಿ

ಇವಳು ಬಾಲ್ಯದ ಗೆಳೆಯನನ್ನು ಪ್ರೀತಿಸುತ್ತಿದ್ದಳು.

ಅವನು ಬಾಲ್ಯದ ಗೆಳತಿಯನ್ನು ಪ್ರೀತಿಸುತ್ತಿದ್ದನು.

ಇಬ್ಬರಿಗೂ ಮದುವೆಯಾಗಿ ಎರೆಡೆರಡು ಮಕ್ಕಳಿದ್ದರು.
*
ಕಾಜೂರು ಸತೀಶ್ 

ಮಳೆ

ಮಳೆ ಸುರಿಯಲಾರಂಭಿಸಿತು.

ಭೂಮಿ ಹೇಳಿತು : "ನೀನೇನೋ ಸುರಿಸಿ ಹೊರಟುಬಿಡುತ್ತೀಯಾ. ಆಮೇಲೆ ಹೊತ್ತು ಹೆರಬೇಕಾದವಳು ನಾನು. ಬಿಸಿಲಲ್ಲಿ ಬೆಂದು, ಚಳಿಯಲ್ಲಿ ನೊಂದು ನರಳಬೇಕಾದವಳು ನಾನು. ಹೀಗೆ ಊರು ಬಿಟ್ಟು ಹೋಗಿ ಯಾವಾಗಲೋ ಬಂದು 'ನಾನು ಅಪ್ಪ' ಎಂದರೆ ಯಾರು ಬೆಲೆ ಕೊಡುತ್ತಾರೆ?"
*
ಕಾಜೂರು ಸತೀಶ್

Saturday, January 18, 2025

ಮಹಡಿ

ಹಣಕಾಸು ಸಚಿವರ ಮನೆಯು 30ನೇ ಮಹಡಿಯಲ್ಲಿತ್ತು. ಅವರ ಹುಟ್ಟುಹಬ್ಬದ ಕೇಕ್ ಚೂರೊಂದು ಅವರ ಆ ಮನೆಯಲ್ಲಿ ಬಿದ್ದಿತ್ತು.

ಇರುವೆಗಳ ಸಾಲೊಂದು ಅಲ್ಲಿಗೆ ತೆರಳಿ ಅದನ್ನು ತಿಂದು ಖಾಲಿ ಮಾಡಿದವು.
*

ಕಾಜೂರು ಸತೀಶ್

Thursday, January 16, 2025

ಏಕಲವ್ಯ

ಗುರುಗಳು ಏಕಲವ್ಯನನ್ನು ಮರಕ್ಕೆ ಕಟ್ಟಿಹಾಕಿ ಶಿಷ್ಯಂದಿರಲ್ಲಿ ''ನಿಮಗೇನು ಕಾಣಿಸುತ್ತಿದೆ ಮಕ್ಕಳೇ'' ಕೇಳಿದರು.

ಮಂತ್ರಿಯ ಮಗ ಹೇಳಿದ "ನನಗೆ ಅವನ ಕಿಡ್ನಿ ಕಾಣಿಸುತ್ತಿದೆ ಗುರುಗಳೇ"

"ಭೇಷ್" ಗುರುಗಳೆಂದರು.

"ನನಗವನ ಬಿಲ್ಲು ಕಾಣಿಸುತ್ತಿದೆ ಗುರುಗಳೇ", ಅಧಿಕಾರಿಯ ಮಗ ಹೇಳಿದ.

ಭೇಷ್" ಗುರುಗಳೆಂದರು.

"ನನಗವನ ಎರಡು ಹೆಬ್ಬೆರಳುಗಳಲ್ಲಿ ಒಂದು ಮಾತ್ರ ಕಾಣಿಸುತ್ತಿದೆ ಗುರುಗಳೇ" ಕೂಲಿಕಾರ್ಮಿಕನ ಮಗ ಹೇಳಿದ.

ಗುರುಗಳು ಕೆಂಡಾಮಂಡಲರಾದರು!
*
ಕಾಜೂರು ಸತೀಶ್

ಮಾತು

ಮಳೆಗಾಲ. ಜೋರು ಮಳೆ.

ಬಾವಲಿಗಳೆರಡು ಎಲ್ಲಿ ಜೋತು ಹಾಕಿಕೊಳ್ಳುವುದೆಂದು ಯೋಚಿಸಿದವು.

ಕಡಿಮೆ ಮಾತನಾಡುವ ಜನರಿರುವ ಊರನ್ನು ಪತ್ತೆ ಹಚ್ಚಿ ಅಲ್ಲಿನ ವಿದ್ಯುತ್ ತಂತಿಯ ಮೇಲೆ ಜೋತಾಡಲು ನಿರ್ಧರಿಸಿದವು.
*
ಕಾಜೂರು ಸತೀಶ್

ಕಪ್ಪು

ತಿಮ್ಮ ಬೆಳದಿಂಗಳ ರಾತ್ರಿಯಲ್ಲಿ ಕಪ್ಪು ವಸ್ತ್ರ ಧರಿಸಿ ನಡೆಯಲಾರಂಭಿಸಿದ.

ಜನ ಕೇಳಿದರು 'ನಿನಗೆ ಕತ್ತಲೆ ಎಂದರೆ ಇಷ್ಟವೇ?'

'ಇಲ್ಲ ನನಗೆ ಬೆಳಕೆಂದರೆ ಇಷ್ಟ. ನಿಮಗದು ತಿಳಿಯಲಿ ಎಂದೇ ಕಪ್ಪು ವಸ್ತ್ರ ತೊಟ್ಟಿದ್ದೇನೆ' ಅವನೆಂದ.
*
ಕಾಜೂರು ಸತೀಶ್

ಬೆಳಕು

ನಗರಕ್ಕೆ ವಿದ್ಯುತ್ ಸರಬರಾಜು ಸ್ಥಗಿತಗೊಂಡಿತು. ಒಂದು ತಿಂಗಳಾದರೂ ಬರಲೇ ಇಲ್ಲ.

ಜನರು ಹಳ್ಳಿಗೆ ಬಂದರು.

ಅಲ್ಲಿ ವಿದ್ಯುತ್ ಸ್ಥಗಿತಗೊಂಡು ಒಂದು ವರ್ಷವಾಗಿತ್ತು. ಜನ ಅರಳಿ ಕಟ್ಟೆಯನ್ನು ಸೃಷ್ಟಿ ಮಾಡುತ್ತಿದ್ದರು ಅರೆವ ಕಲ್ಲಿಗೆ ಮುಳ್ಳು ಹಾಕಿಸುತ್ತಿದ್ದರು ಕೆಲವರು ರೇಡಿಯೋ ಕೇಳುತ್ತಿದ್ದರು 'ಕಥೆ ಹೇಳಪ್ಪಾ' ಮಗು ಕೇಳುತ್ತಿತ್ತು.
*
ಕಾಜೂರು ಸತೀಶ್

ಧ್ಯಾನ

ನಗರದಲ್ಲಿ ಧ್ಯಾನಿಸುತ್ತಾ ಕವಿ ನಡೆದ.
ಯಾರೂ ಅವನ ಧ್ಯಾನವನ್ನು ಕೆಡಿಸಲಿಲ್ಲ.

ಕವಿ ಹಳ್ಳಿಯ ಜನನಿಬಿಡ ಪ್ರದೇಶದಲ್ಲಿ ನಡೆಯತೊಡಗಿದ.
ನೂರು ಕಣ್ಣುಗಳು ಅವನ ಮೇಲೆರಗಿ ಅವನ ಧ್ಯಾನಕ್ಕೆ ಭಂಗವಾಯಿತು.

ಕವಿ ದಿನಚರಿಯಲ್ಲಿ ಹೀಗೆ ಬರೆದ: 'ಧಾವಂತ ಇಲ್ಲದಿದ್ದಾಗ ಜನ ತಮ್ಮನ್ನು ಮರೆಯುತ್ತಾರೆ, ಪರರ ಬಗ್ಗೆ ಚಿಂತಿಸುತ್ತಾರೆ'.
*
ಕಾಜೂರು ಸತೀಶ್

ಇಲ್ಲ


'ಊರಿಗೆ ನೀರಿಲ್ಲ' ಎಂದರು ಜನ.
'ಹೋರಾಡಿ' ಎಂದಿತು ಅಶರೀರವಾಣಿ.

'ವಿದ್ಯುತ್ ಇಲ್ಲದೆ ತಿಂಗಳಾಯಿತು' ಎಂದರು ಜನ.
'ಹೋರಾಡಿ' ಎಂದಿತು ಅಶರೀರವಾಣಿ.

'ರಸ್ತೆಯಲ್ಲಿ ಹೊಂಡಗಳಿವೆ' ಎಂದರು ಜನ.
'ಹೋರಾಡಿ' ಎಂದಿತು ಅಶರೀರವಾಣಿ.

'ಕಚೇರಿಯ ಈ ಕಡತ ವರ್ಷಗಳಿಂದ ಬಾಕಿ ಇದೆ' ಎಂದರು ಜನ. 'ಹೋರಾಡಿ' ಎಂದಿತು ಅಶರೀರವಾಣಿ.
*
ಮಗುವೊಂದು ಸುಮ್ಮನೆ ಮಲಗಿತ್ತು. ಅದಕ್ಕೆ ಹಸಿದಿತ್ತು.ಅದು ಅಳಲಿಲ್ಲ.
ಸತ್ತು ಹೋಯಿತು!
*
ಕಾಜೂರು ಸತೀಶ್ 

ಕತೆಗಾರ


ಕತೆಗಾರ ಪತ್ರಿಕೆಗಳಿಗೆ ಬರೆಯುವುದನ್ನು ನಿಲ್ಲಿಸಿದ. ಸಾಹಿತ್ಯ ಕಾರ್ಯಕ್ರಮಗಳಿಗೆ ಭಾಗಿಯಾಗುವುದನ್ನು ನಿಲ್ಲಿಸಿದ.

ಅಂದಿನಿಂದ ಸಾಹಿತಿಗಳೆಲ್ಲ ಸೇರಿ ಅವನನ್ನು ಕತೆಗಾರನ ಪಟ್ಟದಿಂದ ಕೆಳಗಿಳಿಸಿದರು.
*
ಕಾಜೂರು ಸತೀಶ್ 

Tuesday, January 14, 2025

ಸೈನಿಕ

ಆ ಊರಿನಲ್ಲಿ ತಿಮ್ಮನೂ ಸೇರಿದಂತೆ ಹಲವು ಮಂದಿ ಸೈನ್ಯದಲ್ಲಿ ಕೆಲಸ ಮಾಡುತ್ತಿದ್ದರು.

ಒಬ್ಬರು ಗಡಿಯಲ್ಲಿ ಸತ್ತಾಗ ಮನೆಯ ಬಳಿ ಸುಮಾರು ಹತ್ತು ಸಾವಿರ ಮಂದಿ ಸೇರಿದರು.

ಒಬ್ಬರು ಹೃದಯಾಘಾತವಾಗಿ ತೀರಿಕೊಂಡಾಗ ಸುಮಾರು ಎರಡು ಸಾವಿರ ಮಂದಿ ಸೇರಿದರು.

ನಿವೃತ್ತಿಹೊಂದಿದ ಒಬ್ಬರು ತೀರಿಕೊಂಡಾಗ ಸಾವಿರ ಮಂದಿ ಸೇರಿದರು.

ಇವರೆಲ್ಲರ ಅಪ್ಪ ಅಮ್ಮ ಹೆಂಡತಿ ಮಕ್ಕಳು ಮಾತ್ರ ಒಂದೇ ಸಮ ಕಣ್ಣೀರು ಹಾಕಿದರು.
*
ಕಾಜೂರು ಸತೀಶ್

Saturday, January 11, 2025

ರದ್ದಿ

'ಕವಿತೆ ಬರೆಯುವುದು ಹೇಗೆ?' ಹುಡುಗನೊಬ್ಬ ತಿಮ್ಮನ ಬಳಿ ಬಂದು ಕೇಳಿದ. ತಿಮ್ಮ ಕವಿತೆಯ ಕುರಿತು ಹಲವು ಸಂಗತಿಗಳನ್ನು ಬಿಚ್ಚಿಟ್ಟ.

ತಿಮ್ಮ ಹೇಳಿದ್ದು ಅವನಿಗೆ ಅರ್ಥವಾಗಲಿಲ್ಲವಾದರೂ ಪ್ರಾಸ ಎನ್ನುವುದು ಮಾತ್ರ ಸ್ಪಷ್ಟವಾಗಿ ಅರ್ಥವಾಗಿತ್ತು.

ಒಂದು ವಾರ ಕಳೆಯಿತು. ' ನನ್ನ ಕವನ ಸಂಕಲನ ಬಿಡುಗಡೆ ಕಾರ್ಯಕ್ರಮವಿದೆ ನೀವು ತಪ್ಪದೆ ಬರಬೇಕು' ಹುಡುಗ ಆಹ್ವಾನ ಪತ್ರ ನೀಡಿ 'ಬಾಯ್ ಸರ್' ಎಂದು ಹೇಳಿ ಹೊರಟುಹೋಗಿದ್ದ.
*
ಕಾಜೂರು ಸತೀಶ್

Friday, January 3, 2025

ಕಾಲ್ ಮಿ

' ಪ್ಲೀಸ್ ಕಾಲ್ ಮಿ ' ಎಂಬ ಸಂದೇಶ ಬಂದಿತ್ತು. ತಿಮ್ಮ ಕರೆ ಮಾಡುವ ಸ್ಥಿತಿಯಲ್ಲಿ ಇರಲಿಲ್ಲ. ಮಾಡಿದ್ದರೂ ಅರ್ಧ ಗಂಟೆ ಕರೆಯಲ್ಲಿ ನಿರತನಾಗಬೇಕಿತ್ತು.

ಅವರಿಗೆ ತನ್ನ ಸಹೋದರನ ದೂರವಾಣಿ ಸಂಖ್ಯೆ ತುರ್ತಾಗಿ ಬೇಕಿತ್ತು. ಅದಕ್ಕಾಗಿ ಅವರು ಹಲವರಿಗೆ ಕರೆ ಮಾಡಿದ್ದರು.

'ಪ್ಲೀಸ್ ಕಾಲ್ ಮಿ' ಯ ಬದಲು 'ಅಣ್ಣನ ಮೊಬೈಲ್ ಸಂಖ್ಯೆ ಕಳಿಸಿ' ಎಂಬ ಸಂದೇಶ ಬಂದಿದ್ದಿದ್ದರೆ ಇಬ್ಬರಿಗೂ ನೆಮ್ಮದಿ ಇರುತ್ತಿತ್ತು, ಕರೆ ಸ್ವೀಕರಿಸಿ ಇಲ್ಲ ಎಂದವರ ಸಮಯ ಕೂಡ ಉಳಿಯುತ್ತಿತ್ತು' ತಿಮ್ಮ ಯೋಚಿಸಿದ.

*
ಕಾಜೂರು ಸತೀಶ್


Wednesday, January 1, 2025

ಬೆಟ್ಟ

ಬೆಟ್ಟದ ತುದಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ತಿಮ್ಮ ತೀರ್ಮಾನಿಸಿದ. ಅಲ್ಲಿಗೆ ತಲುಪುವುದೇ ಸಾಹಸದ ಕೆಲಸವಾಗಿತ್ತು.ಆದರೆ ಶ್ರಮಿಕನಾದ ತಿಮ್ಮನಿಗೆ ಅದೊಂದು ಸಾಮಾನ್ಯ ಬೆಟ್ಟವಾಗಿತ್ತು.

ಬೆಟ್ಟದ ತುದಿ ತಲುಪಿದ. ದೂರದಲ್ಲಿ ಗುಂಪೊಂದು ಸಿಳ್ಳೆಹಾಕಿಕೊಂಡು ಬರುತ್ತಿತ್ತು. ವಾರಾಂತ್ಯದ ರಜೆಯಲ್ಲಿ ಬೆಟ್ಟ ಹತ್ತಲು ಬಂದ ಗುಂಪಾಗಿತ್ತು ಅದು.

ಕ್ರಮೇಣ ಧ್ವನಿ ಕ್ಷೀಣಿಸತೊಡಗಿತು. ಅವರೆಲ್ಲಾ ಬೆಟ್ಟ ಹತ್ತಲಾಗದೆ ಕುಸಿದು ಕುಳಿತಿದ್ದರು.

ಆ ಗುಂಪಿನಲ್ಲಿದ್ದ ಕೆಲವರು ಗುಡ್ಡದ ತುದಿಯಲ್ಲಿದ್ದ ತಿಮ್ಮನನ್ನು ಗುರುತಿಸಿದರು. 'ಅಷ್ಟು ಕಡಿದಾದ ಬೆಟ್ಟಕ್ಕೆ ಒಬ್ಬನೇ ಹತ್ತಿದ್ದಾನೆ ವಾವ್ ' ಎಂದು ಸಿಳ್ಳೆಹಾಕತೊಡಗಿದರು.

ಅದು ತಿಮ್ಮನಿಗೂ ಕೇಳಿಸಿತು( ಮುಂದೇನಾಯಿತು ಎಂಬುದು ತಿಮ್ಮನಿಗೂ ನೆನಪಿಲ್ಲ ).
*


ಕಾಜೂರು ಸತೀಶ್