ಮನದ ಬೇಗುದಿಗೆ
ಮುಲಾಮು ಹಚ್ಚಲು
ನನ್ನೀ ಲೇಖನಿಯೊಟ್ಟಿಗೆ ಹೊರಟಿರುವೆ
ಹೀಗೆ ತಮ್ಮ ಕವಿತೆಗಳ ಸ್ವರೂಪದ ಕುರಿತು ಹೇಳುತ್ತಾ ಸೌಮ್ಯ ಹೆಗ್ಗಡಹಳ್ಳಿ ಅವರು ಶ್ರಮಸಂಸ್ಕೃತಿಯ ಬೇರುಗಳನ್ನು ಅವ್ವ ಅಪ್ಪ ಆದಿಮ ಕೃಷಿಯ ರೂಪಕದೊಂದಿಗೆ ತಮ್ಮ ಕವಿತೆ ನಶೆಯ ಲೇಖನಿಯಲ್ಲಿ ನೋಡುತ್ತಾರೆ. ಶ್ರಮದ ಹಿಂದಿರುವ ಸಹಜ ಅಸಹಾಯಕತೆಗಷ್ಟೇ ಅದು ನಿಲ್ಲುವುದಿಲ್ಲ. ದುಃಖವನ್ನು ಹತಾಶೆಯನ್ನು ಮೀರುವ ಛಲವೂ ಈ ಕವಿತೆಗಳಿಗಿವೆ.
ನಿಗಿ ಕೆಂಡಕೆ ನೀರಟ್ಟಿದಂತೆ
ಕಾವುತಾಗಿಸಿ ಬಿಡಲೊಲ್ಲಳು ಅವ್ವ
ಹಣೆಯಲ್ಲಿ ಬೆವರುಟ್ಟುವ ತನಕ
(ಮೀಯುವುದೆಂದರೆ ಚೈತನ್ಯಗಳ ಹುಟ್ಟು)
ಕುದಿಯೊಳಗಿನ ಬೆಂದಕ್ಕಿಯು
ಎಡೆಗೆ ಅನ್ನವಾಗಿ
ಹಸಿವ ತಣಿಯುವಾಗ
ಮನದ ಬೇಗುದಿಗೆ
ಕಣ್ಣೀರಾಗುವುದೇಕೆ?
ನಿನ್ನೊಳಗಿನ ಛಲದ ಚಿಗುರಿಗೆ
ಚುಮುಕಿಸಿದ ನೀರಾಗಲಿ ಬಿಡು
( ನಿನ್ನೊಳಗಿನ ನೀನು)
ಈ ಶ್ರಮಸಂಸ್ಕೃತಿಯ ಛಲ ಹಠತ್ತಾಗಿ ಕುಸಿಯುವುದು ಸಾವಿನ ಮೂಲಕ:
ಅಪ್ಪ ಅಜ್ಜನಾಗಿ ತಲೆಗೊಂದು ಪೇಟಕಟ್ಟಿ
ಕೋಲಿಡಿದು ನಮ್ಮೊಟ್ಟಿಗೆ ಸುತ್ತಿ ಬರುವೆನೆಂದು ಕನಸ ಕಂಡಿದ್ದೆ
ಕೋಲಿನ ಹಿಡಿಕೆ ಸವೆಯಲ್ಲಿಲ್ಲ ನೆರಿಗೆ ಹತ್ತಲಿಲ್ಲ ಬಟ್ಟೆ ಹೀಗೆಂದು ಮಾತಿಲ್ಲದೆ ಸಾಗಿಬಿಟ್ಟ ಅಪ್ಪ
(ಅಪ್ಪನೆಂಬ ಅನಂತ)
ಹೀಗೆ ಸಮಾಜವು ಹುಟ್ಟುವ ಅಸಮಾನತೆಯ ಫಲಿತವಾದ ಅಸಹಾಯಕತೆಯನ್ನು ದಾಟುವ ಅದಮ್ಯ ಛಲ ಮತ್ತೆ ಮತ್ತೆ ಆವರ ಕವಿತೆಗಳಲ್ಲಿ ಮರಳುತ್ತದೆ.
ಎಂಜಲೆಲೆಗೆ ಕೈಯಿಟ್ಟು
ಹಸಿವ ತಣಿವ ಕೈಗಳಿರುವಾಗ
ಮೃಷ್ಟಾನ್ನದ ಬಯಕೆ
ನನಗೇಕೆ?
(ಛಲ)
'ಅಕ್ಷರ'ವೆಂಬ ಬೆಳಕು ಇಂತಹ ಅಸಮಾನತೆಗಳನ್ನು ದೂರಮಾಡುತ್ತದೆ ಎಂಬ ನಿಲುವು ಕವಿಯದು.
ತಗ್ಗಿದ ತಲೆಯೊಳಗೆ
ಹೊಕ್ಕಿದ ವಿಚಾರಗಳು
ತಲೆಯೆತ್ತಿ ನಡೆಯಲೇಬೇಕು
ಅದೊಮ್ಮೆ
ಅಕ್ಷರವಾಗಿ ಪುಟಿದು
ಓದುವ ಕೈಗಳಿಗೆ
ತಾಗಲೇಬೇಕು
(ಓದು)
ಬಡತನ, ಶೋಷಣೆ, ಹಸಿವು, ಅಸಮಾನತೆಗಳ ಮೇಲಿನ ಕಾವ್ಯವಿದು; ನೆಲಮೂಲದ ಕಾವ್ಯವಿದು. ಅಕ್ಷಯ ಪಾತ್ರೆಯಂತಹ ಇಂತಹ ಆಶಯಗಳು ಎಲ್ಲ ಕಾಲದಲ್ಲೂ ಹುಟ್ಟುವಂತವುಗಳು. ಇನ್ನಷ್ಟೂ ತೀವ್ರವಾಗಿ ಹಾಗೂ ಸೂಕ್ಷ್ಮವಾಗಿ ಅವುಗಳನ್ನು ಹೇಳಿದರೆ ಈ ಕವಿತೆಗಳಿಗೆ ಹೆಚ್ಚು ಪರಿಣಾಮ ದಕ್ಕಬಲ್ಲದು.
*
ಕಾಜೂರು ಸತೀಶ್
No comments:
Post a Comment