ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Sunday, November 22, 2020

ಕೊರೋನಾ ಕಾಲದ ಸಾಮಾಜಿಕ ಸಂಕಟಗಳ ನಡುವೆ

ಕೊರೋನಾ ಬಂದು ಶ್ರಮಿಕ ವರ್ಗದ ನಿದ್ದೆ ಕಸಿಯಿತು. ಮಧ್ಯಮ ವರ್ಗಕ್ಕೆ , ಶ್ರೀಮಂತ ವರ್ಗಕ್ಕೆ ಅದರಿಂದ ಹೇಳಿಕೊಳ್ಳುವ ತೊಂದರೆಯೇನೂ ಆಗಲಿಲ್ಲ.

ಮನೆಗೆ ಹಿಂತಿರುಗಬೇಕೆಂಬ ಶ್ರಮಿಕವರ್ಗದ ನರಳುವಿಕೆ, ಕೆಲಸ ಕಳೆದುಕೊಂಡವರ ಬವಣೆಗಳು, ಪೊಲೀಸರ ಆರ್ಭಟಗಳು.. ಇವೆಲ್ಲಾ ಖಿನ್ನತೆಯನ್ನು ತಂದೊಡ್ಡುತ್ತಿತ್ತಾದರೂ- ವೈಯಕ್ತಿಕವಾಗಿ ಕೊರೋನಾ ಕಾಲದಿಂದಾಗಿ ನಾನು ಹೆಚ್ಚು ಸುಖವಾಗಿದ್ದೆ. ಅದರಲ್ಲೂ ಲಾಕ್ಡೌನ್-೧ರಲ್ಲಿ ನನಗೆ ರಜೆ ಸಿಕ್ಕಿತ್ತು. ಪಂಜರದಿಂದ ತಪ್ಪಿಸಿಕೊಂಡ ಹಕ್ಕಿಯಂತಾಗಿದ್ದೆ. ಹಿಂಸಿಸುವ ಬಂದೂಕು/ಬಾಣಗಳೆಲ್ಲ ತಮ್ಮ ತಮ್ಮ ಕೆಲಸಗಳನ್ನು ಮಾಡಿಕೊಂಡು ಬಿದ್ದುಕೊಂಡಿದ್ದವು.

ಒಂದಾದರೊಂದರಂತೆ ಬರುವ ನೆಂಟರ ಹಾವಳಿಯಿಲ್ಲ. ಅದು/ಇದು ಎಂದು ಬೇಡಿಕೆ ಪಟ್ಟಿ ಸಲ್ಲಿಸುವವರ ಸುಳಿವಿಲ್ಲ. ಕೊರೆದೂ ಕೊರೆದೂ ತಲೆಯನ್ನೆಲ್ಲಾ ತಿಂದು ಕರುಳಿಗೂ ಬಾಯಿಹಾಕುವವರ ಪತ್ತೆಯಿಲ್ಲ. ಕಿವಿ-ಕಣ್ಣುಗಳನ್ನು ತಿಂದು ಬದುಕುವ ಮೊಬೈಲುಗಳ ಸದ್ದಿಲ್ಲ. ಜೀವಹಿಂಡುವ ಮದುವೆ/ನಾಮಕರಣ/ಗೃಹಪ್ರವೇಶಗಳ ಹಿಂಸೆಯಿಲ್ಲ. ಸಣ್ಣಪುಟ್ಟ ಕಾಯಿಲೆಗಳ ಸುಳಿವಿಲ್ಲ. ನಾಲಗೆಗೆ ಅದು ಬೇಕು ಇದು ಬೇಕೆಂಬ ಚಪಲವಿಲ್ಲ...

ಲಾಕ್ಡೌನ್ -೧ ಸಡಿಲವಾಗುತ್ತಿದ್ದಂತೆಯೇ ಈ ಸ್ವಾತಂತ್ರ್ಯವೂ ಸಡಿಲಗೊಳ್ಳತೊಡಗಿತು. ಆದರೆ, ಆ ಪರಮಸುಖವು ನನ್ನ ಒಂದಷ್ಟು ದಿನಗಳ ಆಯುಷ್ಯವನ್ನು ಹೆಚ್ಚಿಸಿತು.
*



ಕಾಜೂರು ಸತೀಶ್ 

ಮದುವೆ ಎಂಬ ಖಾಸಗಿ ಕಾರ್ಯಕ್ರಮ

ಆ ಮೇಷ್ಟ್ರು ಮದುವೆಯಾದರು. ಸಹೋದ್ಯೋಗಿಗಳಿಗೂ ಹೇಳಲಿಲ್ಲ. (ಮದುವೆಯಾದ ಕಾಲದಲ್ಲಿ 'ಕೊರೋನಾ' , 'ಲಾಕ್ಡೌನ್ ' ಎಂಬ ಪದಗಳನ್ನೇ ಜನ ಕೇಳಿರಲಿಲ್ಲ) ಅದನ್ನು ಕೇಳಿ ಜನ ನಗುತ್ತಿದ್ದರು. ನಾನು ಅಲ್ಲಿದ್ದವರೆದುರು ಮೇಷ್ಟ್ರ ನಡೆಯನ್ನು ಮೆಚ್ಚಿಕೊಂಡು ಭೇಷ್ ಎಂದೆ.
*
ಆ ಕಾಡಿನ ಒಳಗೆ ಬದುಕುತ್ತಿದ್ದ ಯುವಕ-ಯುವತಿಯರು ತಮಗಿಷ್ಟವಾದವರ ಜೊತೆಗೆ 'ಸ್ವಯಂಘೋಷಿತ' ಮದುವೆ ಮಾಡಿಕೊಳ್ಳುತ್ತಾರೆ. ಹದಿನೆಂಟು ಮುಗಿದು ಹತ್ತೊಂಬತ್ತು ಬರುವ ಮೊದಲೇ ಹೆಣ್ಣುಮಕ್ಕಳ ಮಡಿಲಲ್ಲಿ ಮಗುವೊಂದು ಇಸ್ಸೀ ಮಾಡಿಕೊಂಡು ಮಲಗಿರುತ್ತದೆ. ಮಗುವನ್ನು ಸೊಂಟಕ್ಕೆ ಸಿಕ್ಕಿಸಿ ನಾಲ್ಕೈದು ಕಿಲೋಮೀಟರ್ ನಡೆದುಹೋಗುವಾಗ ಎದುರಾದರೆ 'ಮದುವೆ ಆಯ್ತು ಸಾರ್' ಎಂದು ಕೇಳುವ ಮೊದಲೇ ಹೇಳಿಬಿಡುತ್ತಾರೆ. ಆಗ ಇತ್ತಲಿಂದ 'ಒಳ್ಳೆಯದಾಗಲಿ' ಎಂಬ ಶುದ್ಧ ಶುಭಹಾರೈಕೆ ಅವರ ಹೆಗಲಿಗೇರುತ್ತದೆ.
*



ಮದುವೆ ಎನ್ನುವುದು ತೀರಾ ಖಾಸಗಿ ಕಾರ್ಯಕ್ರಮ. ತಿನ್ನುವ/ಮೋಜು ಮಾಡುವ ಕಾರ್ಯಕ್ರಮವಲ್ಲ ಅಥವಾ ಹಣಮಾಡುವ/ಕಳೆದುಕೊಳ್ಳುವ ವಾಣಿಜ್ಯ ವ್ಯವಹಾರವಲ್ಲ. ಕ್ಯಾಮೆರಾಗಳ ಲೈಟುಗಳ ಮೇಕಪ್ಪುಗಳ ನಗುಗಳ ಶುಭಾಶಯಗಳ ಕೃತಕ ನಾಟಕವಲ್ಲ.

ಇಂದು ಸಾವು ಕೂಡ ಕುಡಿದು ಮೋಜುಮಾಡುವ ಕಾರ್ಯಕ್ರಮವಾಗುತ್ತಿದೆ. ಹೀಗೆ ಖಾಸಗಿ ಕಾರ್ಯಕ್ರಮಗಳು ಸಾರ್ವಜನಿಕವಾಗುವ, ಸಾರ್ವಜನಿಕ ಕಾರ್ಯಕ್ರಮಗಳು ಖಾಸಗೀ ಕಾರ್ಯಕ್ರಮಗಳಾಗುತ್ತಿರುವ ವಿಚಿತ್ರ ನಡೆ ನಮ್ಮನ್ನು ಪೂರ್ಣ ಕುರುಡರನ್ನಾಗಿಸುತ್ತಿದೆ.

*


ಕಾಜೂರು ಸತೀಶ್

Monday, November 16, 2020

ಬಿಸಿಲ ಹೂವು



ಬಿಸಿಲ ಮರಿಗಳಿಗೇ ಮೊಮ್ಮಕ್ಕಳಾಗಿದ್ದ ನಿಗಿನಿಗಿ ನೆಲದಲ್ಲಿ ಇವನೊಬ್ಬ ಚಿತ್ರ ಕಲಾವಿದ. ಗಿಡಮರಗಳೆಲ್ಲ ಸಹಗಮನಕ್ಕೆ ಕಾದಿದ್ದವು. ಇವನಿಗೋ- ಹೂವುಗಳೆಂದರೆ ಬಲುಇಷ್ಟ.

ಅಲ್ಲೊಬ್ಬಳು ಹುಡುಗಿ.ಆ ಬಿಸಿಲಲ್ಲೂ ದುಂಡಗೆ ಕೆಂಪುಕೆಂಪಾಗಿ. ಹೂಗಳಿಂದ ಅಲಂಕೃತಗೊಂಡ ಉಡುಪನ್ನು ದಿನಕ್ಕೊಂದರಂತೆ ಧರಿಸಿ ಆ ದಾರಿಯಲ್ಲಿ ನಡೆದುಬರುತ್ತಿದ್ದಳು.

ಅವಳ ಬಟ್ಟೆಯಲ್ಲರಳಿದ್ದ ಹೂವುಗಳಿಗಾಗಿ ಇವನು ಚಿಟ್ಟೆಯ ಹಾಗೆ ಕಾದು ಕೂರುತ್ತಿದ್ದ. ಇವನ ಕೈಯ್ಯಲ್ಲೊಂದು ಹಾಳೆ ಮತ್ತು ಅದೇನೇನನ್ನೋ ಹಿಂಡಿ ತಯಾರಿಸಿದ ಬಣ್ಣಗಳು. ಹೂವುಗಳನ್ನು ಬಿಡಿಸುತ್ತಿದ್ದ. ಅವನ ಕಣ್ಣ ಒಳಗಿನ ನೀರನ್ನು ಹೀರಿಕೊಂಡು ಬೆಳೆದ ಹಾಗೆ ಅವು ಹಾಳೆಯಲ್ಲಿ ಅರಳಿದವು.ಅವುಗಳನ್ನು ಒಂದರ ಮೇಲೊಂದರಂತೆ ಜೋಡಿಸುತ್ತಾ ಹೋದ. ಬಿಸಿಲ ತಾಕಿಸದೆ ಬೆಳೆಸಿದ, ಉಳಿಸಿದ.

'ಹೂಗಳು ಬಾಡಬಾರದು' ಅವನು ಆಗಾಗ ಹೇಳುತ್ತಿದ್ದ.

ಅವಳು ನೋಡಿಯೇ ನೋಡಿದಳು. ಒಂದು ದಿನ 'ಅದೇನು ಜೊಲ್ಲು ಸುರುಸ್ಕೊಂಡ್ ನೋಡ್ತೀಯ ದಿನಾ... ನಾಳೆಯಿಂದ ಇಲ್ಲಿ ಕಂಡ್ರೆ ಹಲ್ಲು ಉದುರಿಸ್ಬುಡ್ತೀನಿ' ಅಂದಳು. ಗಾಬರಿಯಿಂದ ಇವನು ಅಲ್ಲಿಂದ ಕಾಲ್ಕಿತ್ತ.

'ಇನ್ನು ಇವನ ಸುಳಿವಿರಲಿಕ್ಕಿಲ್ಲ', ಅವಳು ಎಣಿಸಿದಳು.

ಆದರೆ, ಮರುದಿನ ಅವಳು ಬರುವ ದಾರಿಯಲ್ಲಿ ಎಂದಿನಂತೆ ಇವನೂ ಇದ್ದ. ಅಷ್ಟು ದಿನ ತಾನು ಬಿಡಿಸಿದ ಚಿತ್ರಗಳನ್ನು ಅವಳಿಗೆ ನೀಡಿ 'Thanks' ಎಂದ.

ಅಂದಿನಿಂದ ಇವನು ಆ ರಸ್ತೆಯತ್ತ ಮುಖಮಾಡಲಿಲ್ಲ. ಆ ಹುಡುಗಿಯೇ ಇವನ ಗುಡಿಸಲಿನ ಮುಂದೆ ಹಾದುಹೋಗಿದ್ದ ರಸ್ತೆಯಲ್ಲಿ ಸಾಗತೊಡಗಿದಳು.

ಅವನು ಚಿತ್ರಬಿಡಿಸುವುದನ್ನು ನಿಲ್ಲಿಸಿದ್ದ.

'ಹಸಿವು ಎಲ್ಲಕ್ಕಿಂತ ದೊಡ್ಡದು' ಅವನು ಆಗಾಗ ಹೇಳುತ್ತಿದ್ದ.
*


ಕಾಜೂರು ಸತೀಶ್

Sunday, November 15, 2020

ಭಾರದ್ವಾಜ ಕೆ ಆನಂದತೀರ್ಥರ ಸಂದಾಯಿ ಕಾದಂಬರಿಯ ಕುರಿತು

ಬಹುಕಾಲ ಪತ್ರಕರ್ತರಾಗಿ ಕೆಲಸ ಮಾಡಿ ಅನುಭವವಿರುವ ಭಾರದ್ವಾಜ ಕೆ ಆನಂದತೀರ್ಥ ಅವರು ತಮ್ಮ ವೃತ್ತಿಜೀವನದಲ್ಲಿ ಸಾಮಾಜಿಕ , ರಾಜಕೀಯ ಜನಜೀವನದ ಆಳ ಅಗಲಗಳನ್ನು ಅರಿತಿರುವವರು ಮತ್ತು ಆ ಕುರಿತು ಹೆಚ್ಚು ಹೆಚ್ಚು ಬರೆದವರು. ಅದರ ಜೊತೆಜೊತೆಗೆ ಸೃಜನಶೀಲವಾಗಿಯೂ ತಮ್ಮನ್ನು ದುಡಿಸಿಕೊಂಡವರು. ಕತೆ, ಕವಿತೆ, ಕಾದಂಬರಿ, ಜೀವನ ಚರಿತ್ರೆ, ಪ್ರಬಂಧ ಮುಂತಾದ ಪ್ರಕಾರಗಳಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡವರು; ಸಂಚಲನ ಮೂಡಿಸಿದವರು.


ಸಂದಾಯಿ’ಯನ್ನು ಮೊದಲ ಓದುಗನಾಗಿ ಒಳಗೊಳ್ಳುವ ಮೊದಲು ‘ಕಳೆದುಕೊಂಡವರು’ ಮತ್ತು ‘ಕ್ರಮಣ’ ಕಾದಂಬರಿಗಳನ್ನು ಓದಿದ್ದೆ. ಅವು ಎತ್ತುವ ವೈಚಾರಿಕ ಮತ್ತು ಜೀವಪರ ನಿಲುವುಗಳೆದುರು ಬೆರಗಾಗಿದ್ದೆ. ಸಂದಾಯಿಯನ್ನು ಇದ್ದಕ್ಕಿದ್ದಂತೆ ಎದುರುಗೊಳ್ಳುವುದಕ್ಕಿಂತ ಆ ಎರಡು ಕಾದಂಬರಿಗಳ ಓದಿನ ಬಲದಲ್ಲಿ ನೋಡುವುದು ನನಗೆ ಮುಖ್ಯವೆನಿಸಿತು. ವಸ್ತು, ವಿಚಾರ ಮತ್ತು ಭಾಷಿಕ ಕ್ರಮಗಳನ್ನು ಪರಸ್ಪರ ತೌಲನಿಕವಾಗಿಯೂ ಅದರಿಂದ ನೋಡಲು ಸಹಕಾರಿಯಾಯಿತು.
**
ಸಂದಾಯಿಯನ್ನು ಅದು ನಿರೂಪಿಸುವ ಕಥೆಯ ಸ್ವರೂಪವನ್ನಾಧರಿಸಿ ಮೂರು ಭಾಗಗಳನ್ನಾಗಿ ವಿಂಗಡಿಸಬಹುದು : ಕೌಟುಂಬಿಕ, ರಾಜಕೀಯ ಮತ್ತು ಧಾರ್ಮಿಕ. ಕುಬೇರನ ನಿರೂಪಣೆಯಲ್ಲಿ ಮೊದಲ್ಗೊಳ್ಳುವ ಕಾದಂಬರಿಯು ಅವನ ಕೌಟುಂಬಿಕ ಜೀವನದ ನೋವು ನಲಿವುಗಳನ್ನು ವ್ಯಕ್ತಪಡಿಸುತ್ತಾ ಸಾಗುತ್ತದೆ. ತಂದೆ ಭದ್ರಯ್ಯನ ನಿರ್ಲಿಪ್ತತೆ, ತಾಯಿ ಸುಬ್ಬಮ್ಮಳ ಉಳಿವಿಗಾಗಿನ ಹೋರಾಟ, ಬದುಕಿಗೆ ಸಂಬಂಧವೇ ಇಲ್ಲದ ತಾನು ಪಡೆದ ಶಿಕ್ಷಣ, ಗ್ರಾಮೀಣ ಮುಗ್ಧ ಬದುಕು ಮತ್ತು ಅವರ ಪ್ರಾಮಾಣಿಕತೆ- ಇವು ಮೊದಲ ಭಾಗದ ಕಥಾ ವಸ್ತು. ಅಪಘಾತದಿಂದ ಮೂರ್ಛೆಹೋದವನನ್ನು ಆಸ್ಪತ್ರೆಗೆ ಸಾಗಿಸಿದ್ದಲ್ಲದೆ ಅವರ ಹಣವನ್ನು ಹಿಂತಿರುಗಿಸುವಲ್ಲಿ ಕಾದಂಬರಿಗೆ ತಿರುವು ಲಭಿಸುತ್ತದೆ.

ಎರಡನೆಯ ಭಾಗದಲ್ಲಿ ಕುಬೇರನ ಅಸ್ತಿತ್ವ ಗಟ್ಟಿಗೊಳ್ಳುತ್ತಾ ಹೋಗುವುದರೊಂದಿಗೆ ತನ್ನ ಒಡೆಯ ಸದಾಶಿವ ಅವರ ರಾಜಕೀಯ ಬದುಕು ಹಸನಾಗುವುದು, ಕುಬೇರನ ಸಖ್ಯದಲ್ಲಿ ಸದಾಶಿವ ಅವರ ತಂದೆ ವೆಂಕಟಪ್ಪ ಅವರ ಬದುಕಲ್ಲಿ ಗೆಲುವು ಕಾಣುವುದು, ವಿಜಯದ ಮೆಟ್ಟಿಲುಗಳ ಹಿಂದಿರುವ ತಂತ್ರ, ಕುತಂತ್ರ, ಕುಟಿಲತೆಗಳ ವಿವರಗಳಿವೆ.
ಮೂರನೇ ಭಾಗವು ಸದಾಶಿವ- ಭವಾನಿಯವರ ಪುತ್ರಿ ದಿವ್ಯ ಮತ್ತು ಆಜಂ ಖಾನ್‍ರ ನಡುವಿನ ಪ್ರೀತಿಯ ಸುತ್ತ ಹಬ್ಬಿಕೊಳ್ಳುವ ಪ್ರತಿಷ್ಠೆ ಮತ್ತು ಧರ್ಮದ ಕುರಿತಾದದ್ದು.
**
ಇದೊಂದು ‘ರಾಜಕೀಯ’ ಕಾದಂಬರಿ ಎಂದು ಸಂಕುಚಿತಾರ್ಥದಲ್ಲಿ ಬಳಸಬಹುದಾದರೂ ಅದರ ಆಚೆಗೂ ಸರಿಯಬಹುದಾದ ಅವಕಾಶವಾದವೇ ಇದರ ಜೀವದ್ರವ್ಯ. ಒಂದೊಂದು ಪಾತ್ರವೂ ಅವಕಾಶದ ಬೆನ್ನುಬಿದ್ದು ಈಡೇರಿಸಿಕೊಳ್ಳಲು ಹವಣಿಸುತ್ತದೆ. ಅದಕ್ಕಾಗಿ ಪ್ರಾಮಾಣಿಕತೆಯನ್ನೂ, ಅಪ್ರಾಮಾಣಿಕತೆಯನ್ನೂ ಬಂಡವಾಳವಾಗಿಸಿಕೊಳ್ಳುತ್ತದೆ. ಈ ಎರಡರ ಮುಖಾಮುಖಿ ಮತ್ತು ತಾಕಲಾಟಗಳು ಪ್ರತಿಯೊಬ್ಬರ ಒಳಗೂ ನಡೆಯುತ್ತವೆ. ದಿವ್ಯಾಳಿಂದ ಆಜಂಖಾನ್‍ನನ್ನು ಪ್ರತ್ಯೇಕಿಸುವ(ಕೊಲೆ ಮಾಡಿಸಬೇಕಾದ) ಸಂದರ್ಭದಲ್ಲಿ ಕುಬೇರನ ಒಳಗೆ ನಡೆಯುವ ಮೌಲ್ಯಾತ್ಮಕ ಸಂಘರ್ಷಗಳು ಕಾಡುವಂತಹದ್ದು. ಆದರೆ, ಇಲ್ಲಿ ಬರುವ ಕುಬೇರನ ತಂದೆ ಭದ್ರಯ್ಯ ಮತ್ತು ಸದಾಶಿವನ ಉಪ ಪತ್ನಿ ಮೇಘ ಎಂಬ ಎರಡು ಪಾತ್ರಗಳು ‘ಸ್ವ’ವನ್ನು ವಿಸರ್ಜಿಸಿ ‘ಪರ’ದ ಪರ ನಿಂತು ಉದಾತ್ತ ಪಾತ್ರಗಳಾಗಿ ಚಿತ್ರಿತವಾಗಿವೆ.
**
ವರ್ತಮಾನದ ಶಿಕ್ಷಣದ ಮಾದರಿ, ಚುನಾವಣಾ ಮಾದರಿ ಹಾಗೂ ಜನಪ್ರತಿನಿಧಿಗಳ ಬದುಕಿನ ಮಾದರಿಯನ್ನು ಈ ಕಾದಂಬರಿ ಹೇಳುತ್ತದೆ. ಎಲ್ಲರೂ ಒಪ್ಪಿಕೊಳ್ಳುವ ಡೆಮಾಕ್ರಸಿ ಮತ್ತು ಎಲ್ಲರೂ ಪ್ರಶ್ನಾತೀತವಾಗಿ ನೋಡುವ ರಾಜಕಾರಣ- ಇದು ನಮ್ಮಲ್ಲಿ ಇಂದು ಕಾಣುತ್ತಿರುವ ಆಡಳಿತದ ವಿರೋಧಾಭಾಸ. ಈ ನೆಲೆಯೇ ನಮ್ಮ ಹಿನ್ನಡೆಗೆ ಮೂಲ. ಹಣ, ಹೆಣ್ಣು, ಮಣ್ಣು, ಹೆಂಡ,ಜಾತಿ,ಧರ್ಮ.. ಹೀಗೆ ಒಡೆದು ಆಳುವ, ಕೊಟ್ಟು ಪಡೆಯುವ ರಾಜಕಾರಣದ ಅನಿಷ್ಠ ನಡೆಯನ್ನು ಕಾದಂಬರಿಯು ನಿರೂಪಿಸುತ್ತಾ ಹೋಗುತ್ತದೆ. ಈ ನಡೆಯನ್ನು ಒಪ್ಪಿಕೊಂಡಿರುವ ನಾವು ಇದರಿಂದ ಹೊರಬರುವ ದಾರಿಯ ಕುರಿತು ಆಲೋಚಿಸಲು ಪ್ರೇರೇಪಿಸುತ್ತದೆ. ಅದರೊಂದಿಗೆ ಪ್ರತಿಷ್ಠೆಯ ಬೆನ್ನುಬಿದ್ದಾಗ ದಾಂಪತ್ಯ ಜೀವನವು ಹೇಗೆ ಕಡಿದುಕೊಳ್ಳುತ್ತದೆಂಬ ಬಗೆಯನ್ನು ಕಾದಂಬರಿಯು ತಿಳಿಸುತ್ತದೆ.
**
ಸಂದಾಯಿಯು ಒಂದೇ ಉಸಿರಿನಲ್ಲಿ ಓದಿಸಿಕೊಳ್ಳುತ್ತದೆ. ಆದರೆ, ಕಾದಂಬರಿಯಲ್ಲಿ ಕಥನಗಾರಿಕೆಯೇ ಮುಖ್ಯವಾದಾಗ ವಸ್ತುವನ್ನು ಸೂಕ್ಷ್ಮವಾಗಿ ಗ್ರಹಿಸುವಲ್ಲಿ ಹಿನ್ನಡೆಯಾಗುತ್ತದೆ. ಸಲೀಸಾಗಿ ಓದಿಸಿಕೊಂಡರೂ ತಾಂತ್ರಿಕವಾಗಿ ಸೊರಗುತ್ತದೆ. ಕೆಲವೊಂದು ಅಪ್ರಧಾನ ಸಂಗತಿಗಳು ಪುನರಪಿ ಬಳಕೆ(ಉದಾಹರಣೆಗೆ- ಚಹಾ)ಯಾದಾಗ ಅಭಿವ್ಯಕ್ತಿ ವಾಚ್ಯವಾಗುತ್ತದೆ. ‘ಸಂದಾಯಿ’ ಕಾದಂಬರಿಯು ಒಬ್ಬ ವ್ಯಕ್ತಿಯು ಮತ್ತೊಬ್ಬ ವ್ಯಕ್ತಿಗೆ ಮೌಖಿಕವಾಗಿ ಕಥೆ ಹೇಳುವಂತೆ ಸಾಗುತ್ತದೆ. ಜನಪ್ರಿಯ ಮಾದರಿ ಅದು(ಮ್ಯಾಕ್ರೋ ಮಾದರಿ). ಮೈಕ್ರೋಕಾಸಂ ದಾರಿಯಲ್ಲಿ ಸಾಗಿದ್ದಲ್ಲಿ ಅದು ಹೆಚ್ಚು ಸೆನ್ಸಿಬಿಲಿಟಿಯನ್ನು ಗಳಿಸಿಕೊಳ್ಳುತ್ತದೆ. ಈ ಕಾದಂಬರಿಯಲ್ಲಿ ನನಗೆ ಕಾಣಿಸಿದ ಕೊರತೆಯಿದು.
**

ಓರ್ವ ಪತ್ರಕರ್ತರಾಗಿ ವೆಂಕಟಪ್ಪ, ಸದಾಶಿವರಂತಹ ಹಲವು ರಾಜಕಾರಣಿಗಳನ್ನು, ಕುಬೇರನಂತಹ ಒಡೆಯನಿಗೆ ನಿಷ್ಠನಾದ ಸಹಾಯಕರನ್ನು ಹತ್ತಿರದಿಂದ ಗಮನಿಸಿರುವ ಭಾರದ್ವಾಜರಲ್ಲಿ ಕಥೆ ಹೇಳುವುದರಲ್ಲಿರುವ ಆಸ್ಥೆಯ ಜೊತೆಗೆ ಸಾಮಾಜಿಕ ಬದ್ಧತೆಯೂ ಇದೆ. ಯಾವುದನ್ನು ನಿರ್ಣಯಿಸಬೇಕು ಮತ್ತು ಯಾವುದನ್ನು ಓದುಗರಲ್ಲಿ ಬೆಳೆಸಬೇಕು ಎಂಬ ಪ್ರಜ್ಞೆ ಇದೆ. ಇವರ ಎಲ್ಲ ಕಾದಂಬರಿಗಳ ಶಕ್ತಿ ಕೂಡ ಇದೇ ಆಗಿದೆ.
*


ಕಾಜೂರು ಸತೀಶ್

ಹಸಿರು



ಪ್ರಖ್ಯಾತ ಕವಿ ಮತ್ತು ಕತೆಗಾರ. ಕೆಲಸದ ನಿಮಿತ್ತ ಬೆಂಗಳೂರಿಗೆ ಹೋದವರು ಅಲ್ಲಿಯೇ ಮನೆಕಟ್ಟಿ ಬದುಕಿಕೊಂಡಿದ್ದರು.

ಅವರನ್ನು ಜನ 'ಹಸಿರು ಕವಿ' ಎಂದೇ ಕರೆಯುತ್ತಿದ್ದರು . ಪರಿಸರದ ಕುರಿತ ಕಾಳಜಿಗಳು ಅವರ ಕೃತಿಗಳಲ್ಲಿ ತುಂಬಿತುಳುಕುತ್ತಿದ್ದವು.

ಮರಗಳ ರಕ್ಷಣೆಗೆ ಸಂಬಂಧಿಸಿದ, ಕಾಡಿನ ಕುರಿತು ಬರೆದ ಅವರ ಕೃತಿಗಳು ದಾಖಲೆಯ ಪ್ರಮಾಣದಲ್ಲಿ ಮರುಮುದ್ರಣವಾಗುತ್ತಲೇ ಹೋದವು.

ಕಡೆಗೆ ಕಾಡಾನೆಗಳು ಊರ ಕಡೆಗೆ ಧಾವಿಸಿದವು!
*


ಕಾಜೂರು ಸತೀಶ್

Saturday, November 14, 2020

ಇರುವೆಗಳು



ಇರುವೆಗಳು
ತಲೆಗೂದಲ ತುಂಬ
ಸಾಲು ಸಾಲಾಗಿ ಕಣ್ಣರೆಪ್ಪೆಯ ಮೇಲೆ

ಇರುವೆಗಳು
ಕಣ್ಣೊಳಗಿಳಿಯುತ್ತವೆ
ಕೆನ್ನೆಗಳ ಕಚ್ಚಿ ತೂಗಾಡುತ್ತವೆ
ಮೂಗಿನ ಹೊಳ್ಳೆಗಳೊಳಗೆ
ಕಿವಿಗಳ ಒಳಗೆ
ಗುಂಪುಗುಂಪಾಗಿ ನುಗ್ಗುತ್ತವೆ
ತುಟಿಗಳ ಕಿತ್ತು ತಿನ್ನುತ್ತವೆ

ರೋಮಗಳಲ್ಲೆಲ್ಲ ಇರುವೆಗಳು
ರೋಮದ ಪೊದೆಗಳಲ್ಲೆಲ್ಲ ಇರುವೆಗಳು

ಬಗೆಬಗೆಯ ಇರುವೆಗಳು 
ಕಚ್ಚುವ ಇರುವೆ
ಮೈಯ್ಯ ಮೇಲೆಲ್ಲಾ ಓಡಾಡುವ ಇರುವೆ
ಮುಂಭಾಗದಿಂದ ಕಚ್ಚುವ ಇರುವೆ
ಹಿಂಭಾಗದಿಂದ ಕಚ್ಚುವ ಇರುವೆ
ಕಾಲುಗಳ ಮೇಲೆ ಹತ್ತಿ
ಕಾಲುಗಳನ್ನಾವರಿಸುವ ಇರುವೆ

ಅಸಹಾಯಕತೆಯಲ್ಲೊಮ್ಮೆ ಕೊಡವಲು ಯತ್ನಿಸಿದೆ
ಕೆಡವಲು ಯತ್ನಿಸಿದೆ
ನೆಲದ ತುಂಬೆಲ್ಲಾ ಹೊರಳಾಡಿದೆ
ಕಿತ್ತೆಸೆದೆ
ತಲೆ ಕೆರೆದುಕೊಂಡೆ
ಕೂದಲ ಕತ್ತರಿಸಿದೆ
ಕಣ್ಣರೆಪ್ಪೆಗಳ ಸುಟ್ಟೆ
ಕಣ್ಣಲ್ಲಿ ಸೀಮೆಎಣ್ಣೆ ಸುರಿದೆ
ತುಟಿಗಳ ಕಚ್ಚಿ ತುಂಡರಿಸಿದೆ

ಆದರೂ
ಇರುವೆಗಳು...

ಹಾಸಿಗೆಯ ಮೇಲೆ
ಹೊದಪಿನ ಒಳಗೆ
ತಲೆದಿಂಬಿನ ಒಳಗೆ
ಮಂಚದ ಕೆಳಗೆ
ಹುತ್ತದಂಥ ಕೆಂಪು ಇರುವೆಗಳು 

ನಿರ್ಭಿಡೆಯಿಂದ
ಬಟ್ಟೆ ಬಿಚ್ಚಿ ಕೊಡವಿದೆ
ಇರುವೆಗಳನ್ನೆಲ್ಲ
ಗುಡಿಸಿ ಹೊರಕ್ಕೆಸೆದೆ

ಇರುವೆಗಳೀಗ ಸಾಗುತ್ತಿವೆ
ನನ್ನ ಕೋಣೆಗಳ ಸುತ್ತ
ಸಾಲುಸಾಲಾಗಿ ಮೂಸುತ್ತಾ..
*


ಮಲಯಾಳಂ ಮೂಲ - ವಿದ್ಯಾ ಪೂವಂಚೇರಿ


ಕನ್ನಡಕ್ಕೆ- ಕಾಜೂರು ಸತೀಶ್

ಹಸಿವು



ಹಸಿವು ಅವನನ್ನು ಘಾಸಿಗೊಳಿಸಿತ್ತು. ಅಂತಹ ಸಂದರ್ಭಗಳಲ್ಲಿ ಕಾಡುಹಣ್ಣುಗಳನ್ನು ತಿಂದು ನೀರು ಕುಡಿದು ಹೇಗೋ ಹಸಿವನ್ನು ನೀಗಿಸಿಕೊಳ್ಳುತ್ತಿದ್ದ.

ಒಂದಷ್ಟು ಓದಿಕೊಂಡಿದ್ದ. ಕೆಲಸ ಸಂಪಾದನೆಯೇ ಪರಮ ಗುರಿಯಾಗಿಸಿಕೊಂಡ. ಒಂದು ದಿನ ಅದನ್ನು ಸಾಧಿಸಿದ.

ಒಳ್ಳೆಯ ಸಂಬಳ. ಆದರೆ ಬಿಡುವಿರದ ಕೆಲಸ. ಮಧ್ಯಾಹ್ನದ ಊಟಕ್ಕೆ ಸಮಯವಿರುತ್ತಿರಲಿಲ್ಲ. ಬೆಳಿಗ್ಗೆ , ರಾತ್ರಿಯ ಊಟವೂ ನೆಮ್ಮದಿಯಿಂದ ಆಗುತ್ತಿರಲಿಲ್ಲ.

ಒಂದು ದಿನ ಹಸಿವು ತಾಳಲಾರದೆ ತೀರಿಕೊಂಡ.
*




ಕಾಜೂರು ಸತೀಶ್ 

ಗೋಪಾಲ್ ಹೊನ್ನಾಲಗೆರೆ : ಭಾರತೀಯ ಕಾವ್ಯದ ವಿಭಿನ್ನ ಧ್ವನಿ



ಭಾರತೀಯ ಸಾಹಿತ್ಯ ವಲಯದಲ್ಲಿ ಎಲೆಮರೆಯ ಕಾಯಿಯಂತೆ ಬಾಳಿದವರು ಕನ್ನಡಿಗ ಗೋಪಾಲ್ ಹೊನ್ನಾಲಗೆರೆ  . ಇಂಗ್ಲಿಷಿನಲ್ಲಿ ಕಾವ್ಯ ಕೃಷಿ ಮಾಡಿದ ಗೋಪಾಲ್ ಹುಟ್ಟಿದ್ದು 1942 ರಲ್ಲಿ. ಹುಟ್ಟೂರು ವಿಜಯಪುರ. ಚಿಕ್ಕವರಿದ್ದಾಗಲೇ ತಂದೆಯನ್ನು ಕಳೆದುಕೊಂಡ ಗೋಪಾಲ್ , ವೇದ ಪಂಡಿತರಾಗಿದ್ದ ಅಜ್ಜನ ಆಶ್ರಯದಲ್ಲಿ ಬೆಳೆದರು.

ಹೈದರಾಬಾದಿನ ಓಯಾಸಿಸ್ ಶಾಲೆಯಲ್ಲಿ ಓದುತ್ತಿರುವಾಗಲೇ ಸಾಹಿತ್ಯದ ಜೊತೆಗಿನ ಸಖ್ಯ. ಅಲ್ಲೇ ಕಲೆಯೊಂದಿಗೆ ಜೀವನ ಸಂಗಾತಿಯನ್ನೂ ಹುಡುಕಿಕೊಂಡರು. ಆ ನಂತರ ಇವರಿಬ್ಬರು ಪಂಚಾಗ್ನಿ, ವಿಜಯವಾಡ, ಪಂಜಾಬ್ ಮತ್ತಿತರ ಕಡೆಗಳಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಬರೆಹ, ಸುತ್ತಾಟಗಳೇ ಇವರ ಬದುಕಿನ ಬಹುಪಾಲನ್ನು ಆವರಿಸಿತ್ತು. ಇವರ ಇಬ್ಬರು ಮಕ್ಕಳಲ್ಲಿ ಒಬ್ಬ ಶಾಲೆಗೆ ತೆರಳುವ ಸಂದರ್ಭ ಅಪಘಾತದಲ್ಲಿ ತೀರಿಹೋದ. ಆ ನಂತರ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡಿತು.
ತಮ್ಮ ಕಡೆಗಾಲವನ್ನು ಗೋಪಾಲ್ ಅವರು ಬೆಂಗಳೂರಿನ ವೃದ್ಧಾಶ್ರಮವೊಂದರಲ್ಲಿ ಕಳೆದರು. ಆ ಹೊತ್ತಲ್ಲೇ ಅವರು ಕ್ಯಾನ್ಸರ್ ಪೀಡಿತರಾದರು . ಸಂಬಂಧಿಕರೊಬ್ಬರು ಅವರನ್ನು ದೆಹಲಿಗೆ ಕರೆದೊಯ್ದರು. 2003 ರಲ್ಲಿ ಗೋಪಾಲ್ ಅಲ್ಲೇ ತೀರಿಕೊಂಡರು .


ಗೋಪಾಲ್ ಅವರ ಕವಿತೆಗಳು ಪ್ರಕಟಗೊಂಡಿದ್ದು ಎಪ್ಪತ್ತರ ದಶಕದ ನಂತರ .ಇವು ಅವರ ಪ್ರಕಟಿತ ಕೃತಿಗಳು: A Gesture of fleshless sound, Zen tree and the wild Innocents, Wad of poems, The fifth, The Nudist camp, Internodes.

ತಮ್ಮ ಜೀವಿತಾವಧಿಯಲ್ಲಿ ಯಾವ ಸನ್ಮಾನ ,ಪ್ರಚಾರಗಳ ಹಂಗಿಲ್ಲದೆ ಕವಿತೆಗಳನ್ನು ‘ ಬಾಳಿದವರು ’ ಗೋಪಾಲ್ ಹೊನ್ನಾಲಗೆರೆ  . ವಸಾಹತೋತ್ತರ ಭಾರತದ ಭಿನ್ನ ಕವಿಯಾಗಿ ಗುರುತಿಸಬಹುದಾದ ಹೊನ್ನಾಲ್ಗೆರೆಯವರ ಕವಿತೆಗಳಲ್ಲಿ ಹೆಚ್ಚಾಗಿ ತಮ್ಮ ಅಲೆಮಾರಿತನದ , ಧರ್ಮ - ತತ್ವಶಾಸ್ತ್ರಗಳ ಅಪಾರ ಜ್ಞಾನದ ಪಡಿಯಚ್ಚುಗಳಿವೆ. ಸಿದ್ಧಮಾದರಿಯನ್ನು ಮುರಿದು ವೈನೋದಿಕವಾದ, ಕಥನ ಮಾದರಿಯ ಶೈಲಿಯನ್ನು ಅಳವಡಿಸಿಕೊಂಡ ಚಹರೆಗಳಿವೆ . ಅವರ ಕವಿತೆಗಳನ್ನು ಅಧ್ಯಯನ ಮಾಡಬೇಕಾದ ತುರ್ತು ನಮ್ಮೆದುರಿಗಿದೆ.



ಗೋಪಾಲ್ ಹೊನ್ನಾಲಗೆರೆ  ಅವರ ಎರಡು ಕವಿತೆಗಳು

ಇರುವೆ
----------
ಆತ್ಮರತಿಯ ತಲೆಮಾರಿನವರೇ ,
ಕಟ್ಟಿರುವೆಗಳ ಗಬಗಬನೆ ತಿಂದು
ನಾಲಗೆಯಲ್ಲೇ ಅಡುಗೆ ಮಾಡುವವರೇ ,
ಕೇಳಿಸಿಕೊಳ್ಳಿ :

ನೀವು ರೊಟ್ಟಿಯ ಮೇಲೆ ಬೆಣ್ಣೆ ಲೇಪಿಸಿದಾಗ
ಒಂದು ಇರುವೆ ಬಿದ್ದಿತ್ತು ಅದರಲ್ಲಿ
ಬೆಂಕಿಕಡ್ಡಿಯಲ್ಲಿ ಅದ ಮೇಲೆತ್ತಿದೆ
ಇಷ್ಟೇ ಇಷ್ಟಿರುವ ಅದರ ಜೀವಕ್ಕೆ
ಇಷ್ಟೇ ಇಷ್ಟು ಸಹಾಯ ನನ್ನಿಂದಾಯಿತು.

ಈಗ ನಿಮಗಿಂತಲೂ ಸಂತೋಷ ನನಗಿದೆ
ನನಗಿಂತಲೂ ಸಂತೋಷ ಆ ಇರುವೆಗೆ.

ಆ ಇರುವೆಯ ನಡಿಗೆ ಅದರ ಅರಮನೆಗೆ.
ಬಾಯಲ್ಲಿ ಒಂದು ಸಕ್ಕರೆಯ ತುಣುಕು.
ಅದೇ ಹಾದಿಯಲ್ಲಿ ಸಾಲು ಸಾಲು ಇರುವೆಗಳು
ಕಿತ್ತಾಡದೆ, ದಿಕ್ಕು ತಪ್ಪದೆ
ಅಹೋರಾತ್ರಿ ದುಡಿಯುತ್ತಿವೆ ಬದುಕಿಗಾಗಿ
ಮಾರ್ಕ್ಸ್, ಮಾವೊ ಎಲ್ಲ ಹೇಗೆ ತಿಳಿಯಬೇಕು ಅವಕ್ಕೆ ?
***

ಸೇಬಿನ ಕಾಲದ ಸಾವು
-----------------------------

.. ಹಾಗೆ ಒಂದು ರಾತ್ರಿ
ಸಾವೆಂಬ ಪತಂಗ
ಹಸಿಸೇಬಿನ ಪ್ರೇಯಸಿಯ ಮೇಲೆ
ಒಂದು ಸುರಂಗ ಕೊರೆಯಿತು.
ಅದರ ಬೀಜಗಳನ್ನು ತಿಂದು
   ಎರಡು ಮೊಟ್ಟೆಯಿಟ್ಟು ಹಾರಿಹೋಯಿತು.

... ಹೀಗೆ ಆ ಆಡಮ್
    ಕೆಂಪಾದ ಸೇಬನ್ನು
    ಎರಡು ಭಾಗಗಳಾಗಿ ಕತ್ತರಿಸಿದಾಗ
    ಅವು ಪ್ರೀತಿಯ ಈವ್ಳ  ಕಣ್ಣುಗಳ ಹಾಗೆ ಕಪ್ಪಾಗಿ
    ಎರಡು ಪತಂಗಗಳು ಹಾರಿಹೋಗುವುದ ಕಂಡ.

ಬೆರಗಿನಿಂದ ಕೇಳಿದ:
ಸೇಬಿನ ಪ್ರೀತಿಯೊಳಗೆ ಪತಂಗಗಳ್ಹೇಗೆ ನುಸುಳಿತು
ಒಂದು ಸಣ್ಣ ತೂತನ್ನೂ ಮಾಡದೆ?

ನಮ್ಮ ತಲೆಯಲ್ಲಿ
ತೂತು ಮಾಡದೆ ನುಸುಳುವ
ಚಿಂತನೆಗಳ ಹಾಗೆ.
**


ಅನುವಾದ- ಕಾಜೂರು ಸತೀಶ್

Friday, November 13, 2020

ಗಾಯದ ಹೂವುಗಳು ಕೃತಿಯ ಕುರಿತು ಕಾವ್ಯ ಎಸ್ ಅವರ ಅನಿಸಿಕೆ



"ಗಾಯದ ಹೂವುಗಳು " 2015 ರ ಕಡೆಂಗೋಡ್ಲು ಶಂಕರಭಟ್ಟ ಕಾವ್ಯ ಪ್ರಶಸ್ತಿ" ಪಡೆದ ಕೊಡಗಿನ ಯುವಕವಿ ಕಾಜೂರು ಸತೀಶ್ ರವರ ಮೊದಲ ಸಂಕಲನ ಎಂಬುದು ನಮ್ಮಲ್ಲರಿಗೂ ಹೆಮ್ಮೆಯ ವಿಷಯ. ಫಲ್ಗುಣಿ ಪ್ರಕಾಶನದಲ್ಲಿ ಪ್ರಕಟಣೆಗೊಂಡು ಖ್ಯಾತ ಕವಿಗಳಾದ ಶ್ರೀ ವಾಸುದೇವ ನಾಡಿಗ್ ರವರ ಮುನ್ನುಡಿ ಬರೆಸಿಕೊಂಡು ಶ್ರೀ ಪ್ರವೀಣ ಕುಮಾರ ದೈವಜ್ಞಾಚಾರ್ಯ ರವರ ಭರವಸೆಯ ಬೆನ್ನುಡಿ ಲೇಪಿಸಿಕೊಂಡಿರುವ ಕವನ ಹೊತ್ತಿಗೆ.
ಕವಿತೆಯೆಂದರೇನೆಂದೇ 
                                                             ತಿಳಿಯದ, 
                         ನನ್ನನ್ನೇ ಉಸಿರಾಡಿಕೂಳ್ಳುತ್ತಿರುವ
                                                   ಅಪ್ಪ -ಅಮ್ಮನಿಗೆ.         ಎಂಬ ಕವಿಯ ಅರ್ಪಣಾಭಾವದಿಂದ ಅರ್ಪಿಸಿಕೊಳ್ಳುತ್ತ ಹೋಗುತ್ತದೆ. 

"ಒಂದು ದಿನ ನನ್ನೊಳಗಿನ ಬೇಗುದಿಗಳಿಗೆ ಬೇರುಹುಟ್ಟಿ ಕಾಲ್ಬೆರಳ ತುದಿಯಿಂದ ನೆತ್ತಿಗೆ ಹಬ್ಬಿಕೊಳ್ಳತೊಡಗಿದಾಗ, ಕವಿತೆಯ ತೆಕ್ಕೆಯೊಳಗೆ ಬಿದ್ದೆ "ಎಂದು  ಮುನ್ನುಡಿ ಬರೆದು ಕೊಳ್ಳುವ ಕವಿ, ಕವಿತೆಗಳನ್ನು ಹೆರುವ ಪರಿಯೇ ವಿಭಿನ್ನ. 

 ಇರುವೆ, ಒಂಟಿ, ಊದುಕೊಳವೆ, ಖಾಲಿಡಬ್ಬ, ಚಪ್ಪಲಿಗಳು, ಮಾತು, ಮೌನ ಮತ್ತು ಕವಿತೆ, ಮರಣದ ಹಾಡು, ಹಾವು, ಮೈಲಿಗೆ, ಬೀದಿಯ ಕವಿತೆ, ಕಿಟಕಿ ತೆರೆದು ಕುಳಿತೆ, ಈ ಕವಿತೆಗಳೊಂದಿಗೆ ಯುದ್ಧ ಘೋಷಿಸಿದ್ದೇನೆ, ನೆಲವಿಲ್ಲದವನ ಉಯಿಲು, ಬೇಲಿ, ನದಿ, ಕಾಡು ಕವಿತೆ, ಮಿಕ್ಕವರಾರನ್ನೂ ಹೀರಕೂಡದು, ಒಂದು ಅರ್ಜಿ ಮತ್ತು ಹದಿನಾಲ್ಕು ತಿಂಗಳು, ನೀನು ಕೊಲೆಯಾದ ಮೇಲೆ ನಿನ್ನ ಅಂಗಿ ಧರಿಸಿ ಬರೆದದ್ದು, ಕಡಲಾಚೆಯ ಹುಡುಗಿಗೆ, ಈ ರಾತ್ರಿಗಳಲ್ಲಿ ನಿದ್ರಿಸಲಾರೆ, ನಾವಿಬ್ಬರು ತೀರಿಕೊಂಡ ಮೇಲೆ,ಒಲೆ ಮತ್ತು ಅವ್ವ, ಅರ್ಥವಾಗಿರಬಹುದು, ನೀನು ನನ್ನ  ಜೊತೆ ಬದುಕಿಕೊಳ್ಳಬಹುದು, ಬೋನ್ಸಾಯ್ ಸ್ವಗತ, ಭಿಕ್ಷುಕ ಕವಿಯ ಕವಿತೆಗಳಲ್ಲದ ಸಾಲುಗಳು, ಅಸ್ವಸ್ಥ ಕವಿತೆಗಳು, ನೋಟೀಸು, ಸಲಾಮು, ನನ್ನ ಕವಿತೆ, ಬಲಿ, ಆಕಾಶ ಧುಮ್ಮಿಕ್ಕುತ್ತಿದೆ ನೀರಾಗಿ, ಇರಲಿ, ಅಪ್ಪ ಮತ್ತವನ ಹತ್ಯಾರಗಳು, ಎಲ್ಲ ಅಮಾವಾಸ್ಯೆಗಳಲ್ಲೂ ಪದ್ಯವೊಂದಿರಲಿ ಬೆಳಕಿಗೆ, ಸಾವು, ಗಾಯದ ಹೂವುಗಳು, ಆಲ್ಬಮ್, ಯಾರದಿದು? ಇನ್ನೂ ಬದುಕಿರುವ ಕವಿತೆಗಳು, ಮೊದಲ ರಾತ್ರಿಯಂದು, ನನ್ನ ಮಿತ್ರರೆಲ್ಲಾ ಹಾಯಾಗಿದ್ದಾರೆ, ನಿನಗೆ, ಕೊಳದ ಬಳಿಯ ಮರ, ಹಸಿಮೀನು ಮತ್ತು ನನ್ನ ಕವಿತೆ, ಎಡ ಮತ್ತು ಬಲ, ಮಧ್ಯರಾತ್ರಿಯ ನಂತರದ ಮಳೆ, ಶಬ್ದ ಸಮರ, ಮರ, ಕಸದ ತೊಟ್ಟಿಯ ಕಾಗದದ ಲೋಟಗಳು, ಪರೀಕ್ಷೆ, ಉಯಿಲು. 

ಈ ಮೇಲಿನ 53 ಹೂವುಗಳಿರುವ ಹೂಗುಚ್ಛ "ಗಾಯದಹೂವುಗಳು".ಪ್ರತಿಯೊಂದು ಹೂವುಗಳೂ ಗಾಯದ ಹೂವುಗಳಾಗಿ ಅರಳಿ, ಸುತ್ತೆಲ್ಲಾ ಪರಿಮಳ ಸೂಸುತ್ತಾ ಎಲ್ಲರನ್ನು ಆಕರ್ಷಿಸಿ ಘಮಘಮಿಸುತ್ತಿರುವ ಪ್ರೀತಿಯ ಪಾರಿಜಾತಗಳಾಗಿವೆ.

ಕೇಳಿಸಿಕೊಳ್ಳಿ 
ಒಂದು ಇರುವೆ ಸತ್ತಿದೆ 
ನನ್ನ ಕಾಲ ಬುಡದಲ್ಲಿ 
        
      ಎನ್ನುವ ಕವಿಯು ಸಮಾಜದ ವ್ಯವಸ್ಥೆ, ಶ್ರೀಮಂತವರ್ಗ,ಹತಾಶೆಗಳನ್ನು ಕಡಿಮೆ ಪದಗಳಲ್ಲಿ ಅತಿಸೂಕ್ಷ್ಮವಾಗಿ ಶಬ್ಧ ಸಂವೇದನೆಯಿಂದ  ಪ್ರಸವಿಸಿದ್ದಾರೆ. 

 ಸತೀಶ್  ರವರ ಕವಿತಗಳನ್ನು ಓದುತ್ತಾ ಹೋದರೆ ಅವು ಬರಿ ಕವಿತೆಗಳಾಗಿ ಅಭಿವ್ಯಕ್ತವಾಗುವುದಿಲ್ಲ. ಅವುಗಳು ಅವರು ಬದುಕಿಕೊಳ್ಳಲು ಹಡೆದ ಮಕ್ಕಳಾಗಿವೆ. ಕವಿಗೆ ಕವಿತೆಗಳೇ ಬದುಕಿನ ಭರವಸೆಯ ಮೌಲ್ಯಗಳು. 

ಚಪ್ಪಲಿಗಳು ನಾವು ಎಂದೆಂದೂ ಬಹಿಷ್ಕ್ರತರು 
ಮಸೀದಿ ಮಂದಿರ ಇಗರ್ಚಿಗಳಿಗೂ ಅಸ್ಪೃಶ್ಯರು 
ಇತಿಹಾಸದ ಚರ್ಮ ಸುಲಿದು ಒಣಗಿಸಿ ನಮ್ಮ ಸೃಷ್ಟಿ 
  
    ಈ ಕವಿತೆಯಲ್ಲಿ ಮೌಢ್ಯ, ಜಾತೀಯತೆ, ಮೇಲು -ಕೀಳು ಮನೋಧೋರಣೆ, ಅಸಹಾಯಕತೆ, ಬಡತನ, ಅಸ್ಪೃಶ್ಯತೆ, ಸಮಾಜದ ವ್ಯವಸ್ಥೆಯ ಬಗ್ಗೆ ಇರುವ ಅತೃಪ್ತಿಯನ್ನು ಚಪ್ಪಲಿಗಳು ಕವಿತೆಯ ಮೂಲಕ ಧನ್ಯತಾ ಭಾವದಲ್ಲಿ ಕವಿತೆಯಾಗಿ ಹಡೆದಿದ್ದಾರೆ. 

ಕಡಲಿನ ಆಚೆ ಬದಿಯಲ್ಲಿ 
ನಿನ್ನದೊಂದು ತೊಟ್ಟು ರಕ್ತ 
ಈಚೆಬದಿಯಲ್ಲಿ ನನ್ನದೊಂದು ತೊಟ್ಟು ರಕ್ತ 
ಚೆಲ್ಲಿ ಬಿಡೋಣ 
 
ಕವಿ ಕವಿತೆಗಳಲ್ಲಿ ಬಳಸಿರುವ ರೂಪಕಗಳು, ಪ್ರತಿಮೆ, ಸಾಂಕೇತಿಕ ಭಾಷೆ ಪ್ರತಿಯೊಂದು ಅವರು ಕವನ ಹೆರುವ ರೀತಿಗೆ ಉದಾಹರಣೆ. 

ಹಸಿದ ಜಿಗಣೆಯೇ 
ಬಾ ಹೀರು ನನ್ನನ್ನು 
ಸ್ವಲ್ಪದರಲ್ಲೇ ನೀನು 
ದ್ರಾಕ್ಷಿಯಾಗಿ ಉದುರುತ್ತೀ 

  ಕವಿಯ ಜಿಗಣೆಯೊಂದಿಗೆ ನಿಜಕ್ಕೂ ಸೋಜಿಗವೆನ್ನಿಸುತ್ತದೆ.ಮಿಕ್ಕವರಾರನ್ನೂ ಹೀರಕೂಡದು ಎಂದು ಹೇಳುವ ಪರಿ, ಕವಿಗೆ ಇತರರ ಮೇಲಿರುವ ಉದಾರತೆ, ಕಾಳಜಿ, ವಿಶಾಲ ಮನೋಭಾವವನ್ನು ಗೋಚರಿಸುತ್ತದೆ.

ಸತೀಶ್ ರವರ ಕವಿತೆಗಳು ಹಸಿವು, ಬಡತನ, ಸಮಾಜದ ಅವ್ಯವಸ್ಥೆ, ಮೋಸ, ವಂಚನೆ, ಭ್ರಷ್ಟಾಚಾರ, ಹತಾಶೆ, ಜಾತೀಯತೆ, ಅಸಮಾನತೆ, ಪ್ರೀತಿ -ಪ್ರೇಮ, ಪ್ರಕೃತಿಯ ಬಗ್ಗೆ ಕಾಳಜಿ, ಪ್ರಕೃತಿ ವಿನಾಶದ ಬಗ್ಗೆ ಅಸಮಾಧಾನ ಹೀಗೆ ಸುಗಂಧ ಬೀರುತ್ತಾ ಒಂದೊಂದು ಕವಿತೆಯು ಸೂಕ್ಷ್ಮ ಸಂವೇದನೆಯೊಂದಿಗೆ ಮೊಗ್ಗಾಗಿ ಜೀವನದ ಆಳವಾದ ಅನುಭವದೊಂದಿಗೆ ಅರಳುತ್ತಾ ಹೋಗಿವೆ. 

ಕವಿತೆಗಳು ರೋಷದಿಂದ ತಲ್ಲಣಿಸುವಂತೆ  ಭಾಸವಾದರೂ ಆರೋಗ್ಯಯುತ ಸಮಾಜ ರೂಪುಗೊಳ್ಳಲು ಬದಲಾವಣೆಗಳಿಗಾಗಿ ಮಿಡಿಯುವ ತುಮುಲವಿಸುತ್ತದೆ ನನಗೆ.

ಕವಿತೆಗಳನ್ನು ವ್ಯಾಖ್ಯಾನಿಸುವುದಕ್ಕಿಂತ  ಅವುಗಳನ್ನು ಸವಿದರೆ ಅವುಗಳಲ್ಲಿನ ಕವಿಯ ಸಾಹಿತ್ಯ ಅಭಿವ್ಯಕ್ತಿಯ ಪರಿಚಯವಾಗುತ್ತದೆ. 

ಮಲೆಯಾಳಂ,ಇಂಗ್ಲೀಷ್ ಭಾಷೆಗಳ ಸಾಹಿತ್ಯದ ರುಚಿವುಂಡು ಅನುವಾದಗಳಲ್ಲಿ  ತೊಡಗಿದ್ದರೂ(ಮಲಯಾಳಂ ಅನುವಾದಿತ ಕವಿತೆಗಳ ಸಂಕಲನ" ಕಡಲ ಕರೆ"ಕುವೆಂಪು ಭಾಷಾ ಭಾರತಿ ಪ್ರಾಧಿಕಾರದಿಂದ ಪ್ರಕಟವಾಗಿದೆ) ಕನ್ನಡವನ್ನು ಹೆಚ್ಚು ಪ್ರೀತಿಸಿ ಗುರುತಿಸಿಕೊಂಡಿರುವುದು ಸತೀಶ್ ರವರ ಹೆಚ್ಚುಗಾರಿಕೆ. 

  'ದೊಡ್ಡವರ ಶಿಫಾರಸ್ಸಿಲ್ಲದೆ ಬಹುಮಾನ ದಕ್ಕುವುದಿಲ್ಲ'
 ಎಂಬ ಕವಿಯ ನಿಲುವನ್ನು ಹುಸಿಯಾಗಿಸಿ ಅವರ ಕವಿತ್ವ ಜ್ಞಾನಕ್ಕೆ ಪ್ರಶಸ್ತಿಯನ್ನು ದಕ್ಕಿಸಿಕೊಂಡಿರುವುದು ನಿಜಕ್ಕೂ ಶ್ಲಾಘನೀಯ. ಹೀಗೆ ಅವರ ಸಾಹಿತ್ಯದ ತೇರು ಗಾಯದ ಹೂವುಗಳಿಂದ ಅರಳಿ ದೊಡ್ಡ ಹೆಮ್ಮರವಾಗಿ ಹಲವರಿಗೆ ಆಶ್ರಯವಾಗುವ ದೀವಿಗೆಯಾಗಲಿ ಎಂಬುದೇ ಸಾಮಾನ್ಯ ಓದುಗರಾಗಿ ನಮ್ಮೆಲರ ಹೃದಯತುಂಬಿದ ಹಾರೈಕೆ💐💐.
**

- ಕಾವ್ಯ ಎಸ್