ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Thursday, July 30, 2020

ಮಳೆಗಾಲ



ಮಳೆಗಾಲದ ಒಂದು ರಾತ್ರಿ.

ರೈತ ಎಂದಿನಂತೆ ತನ್ನ ಮನೆಯ ಹೊರಗೆ ಬಂದು ಆಕಾಶವನ್ನು ನೋಡಿದ.

ನಕ್ಷತ್ರಗಳು ನಗುತ್ತಿದ್ದವು.
*


ಕಾಜೂರು ಸತೀಶ್

Wednesday, July 29, 2020

ವೇಗ



ಸದಸ್ಯರೊಬ್ಬರು Whatsapp ಗುಂಪಿನಲ್ಲಿ, ಆ ಗುಂಪಿನಲ್ಲಿದ್ದ ಯುವಕನ ಭಾವಚಿತ್ರವನ್ನು ಹಂಚಿಕೊಂಡು ಜನ್ಮದಿನದ ಶುಭಾಶಯವನ್ನು ಕೋರಿದರು.

ಮರುಕ್ಷಣವೇ ಮತ್ತೊಬ್ಬ ಸದಸ್ಯರು- ವ್ಯಕ್ತಿಯೊಬ್ಬರು ತೀರಿಕೊಂಡ ಸುದ್ದಿಯನ್ನು ಹಂಚಿಕೊಂಡರು.

ಕಣ್ಮುಚ್ಚಿ ತೆಗೆಯುವುದರೊಳಗೆ ಆ ಯುವಕನ ಚಿತ್ರಕ್ಕೆ ಆ ಗುಂಪಿನ ಸದಸ್ಯರೊಬ್ಬರು 'ಭಾವಪೂರ್ಣ ಶ್ರದ್ಧಾಂಜಲಿ' ಹೇಳಿದ್ದರು. 

ಪ್ರತಿಯಾಗಿ ಯುವಕನೂ 'ಧನ್ಯವಾದಗಳು' ಎಂದು ಟೈಪಿಸಿದ್ದ.

ಐದು ನಿಮಿಷಗಳ ನಂತರ ಅವೆರಡೂ delete ಆಗಿದ್ದವು.
*


ಕಾಜೂರು ಸತೀಶ್

ಸ್ವಾತಂತ್ರ್ಯ



ಅವನು ಕಾಡಿನೊಳಗೆ ಕೃಷಿ ಮಾಡಿ ಬದುಕುತ್ತಿದ್ದ. ಮೊಬೈಲ್ ಇದ್ದರೂ , ರೇಡಿಯೋ ಇದ್ದರೂ ಸಿಗ್ನಲ್ ಸಿಗುತ್ತಿರಲಿಲ್ಲ. ಓದು ಬರೆಹ ತಿಳಿದಿರಲಿಲ್ಲ. ಅಗತ್ಯವಿದ್ದಾಗ ಮಾತ್ರ ಯಾವಾಗಲಾದರೊಮ್ಮೆ ಪಟ್ಟಣಕ್ಕೆ ಹೋಗಿಬರುತ್ತಿದ್ದ.

ಯುವಕರ ತಂಡವೊಂದು ಬಂದು 'ಸ್ವಾತಂತ್ರ್ಯ ದಿನಾಚರಣೆಗೆ ಪಟ್ಟಣಕ್ಕೆ ಬರಲೇಬೇಕು' ಎಂದರು.

ಆ ದಿನ ಬಂತು. ತನ್ನ ಕೆಲಸದಲ್ಲಿ ನಿರತನಾಗಿದ್ದ ಅವನು ಆ ದಿನವನ್ನೂ ಎಂದಿನಂತೆ ಕಳೆದ.

ಆ ರಾತ್ರಿ - ಎಷ್ಟೋ ದಿನಗಳಿಂದ ಇದ್ದಲ್ಲೇ ಇದ್ದ, ಎಲ್ಲಿಂದಲೋ   ಬಂದ ಕಲ್ಲೊಂದು ಆಕಾಶದಲ್ಲಿ ಕುಣಿದು ಕುಪ್ಪಳಿಸುತ್ತಾ, ಗಾಳಿಯೊಂದಿಗೆ ಚಕ್ಕಂದವಾಡುತ್ತಾ, ಮುತ್ತಿಕ್ಕುತ್ತಾ, ಪ್ರೇಮಕತೆಗಳನ್ನು ಹೇಳುತ್ತಾ , ಸಂಭೋಗಿಸುತ್ತಾ ಅವನ ಮನೆಯ ಮೇಲೆ ದೊಪ್ಪನೆ ಬಿದ್ದು ಪ್ರಾಣಬಿಟ್ಟಿತು.
*


ಕಾಜೂರು ಸತೀಶ್

Monday, July 27, 2020

ಗಡಿಪಾರು



ದಿನಕಳೆದಂತೆ ರಾಜನು ಕವಿತೆಗಳನ್ನು ಅರ್ಥೈಸಿಕೊಳ್ಳುವಲ್ಲಿ ಕಷ್ಟಪಡುತ್ತಿದ್ದ. ಮೊದಮೊದಲು ಹಾಡುಕಟ್ಟುತ್ತಿದ್ದ ಈ ಕವಿಗಳು ಈಗ ಏನೇನೋ ಬರೆಯುತ್ತಿದ್ದಾರೆ. ಅದು ಬೈಗುಳವೋ ಹೊಗಳಿಕೆಯೋ ತಿಳಿಯದೆ ದ್ವಂದ್ವದಲ್ಲಿದ್ದ ರಾಜ ಕೃಶವಾಗುತ್ತಾ ಹೋದ.

ಮಂತ್ರಿ ಹೇಳಿದ 'ಕವಿಗಳನ್ನು ಗಡಿಪಾರು ಮಾಡಿ ಅವರ ಸ್ಥಾನಕ್ಕೆ ಭಾಷಣಕಾರರನ್ನು ನೇಮಿಸೋಣ'.

ರಾಜನ ಮುಖದಲ್ಲಿ ಗೆಲುವು ಕಾಣಿಸಿತು.
*


ಕಾಜೂರು ಸತೀಶ್

ನೇಮಕಾತಿ

ರಾಜನಿಗೆ ಕವಿಗಳ ಬಗ್ಗೆ ಅಸಮಾಧಾನ. 'ಕವಿಗಳು ಒಳಗೊಂದು ಅರ್ಥ/ಭಾವವನ್ನಿಟ್ಟುಕೊಂಡು ಬರೆಯುತ್ತಾರೆ. ಮೇಲುನೋಟಕ್ಕೆ ಹೊಗಳಿದಂತೆ ಕಂಡರೂ ಅದರ ಒಳ ಅರ್ಥ ಬೇರೆಯೇ ಆಗಿರುತ್ತದೆ' ಎಂದು ಮಂತ್ರಿಗಳು ಹೇಳಿದ ಮೇಲೆ ಎಲ್ಲ ಕವಿಗಳನ್ನು ಗಡಿಪಾರು ಮಾಡಲು ರಾಜ ನಿರ್ಧರಿಸಿದ.

'ಹಾಗಾದರೆ ಇನ್ನು ನನ್ನ ಹೊಗಳುವವರಾರು?' ಕೇಳಿದ ರಾಜ.

'ಭಾಷಣಕಾರರನ್ನು ನೇಮಿಸೋಣ' ಹೇಳಿದ ಮಂತ್ರಿ .
*


ಕಾಜೂರು ಸತೀಶ್ 

Sunday, July 26, 2020

ಮಾತು

ಅವರು ಪರಸ್ಪರ ಕೈಕೈ ಹಿಡಿದುಕೊಂಡು ದಿನವಿಡೀ ಸುತ್ತಾಡಿದರು. ಬೆಟ್ಟಗಳನ್ನೇರಿದರು, ಜಲಪಾತಗಳಲ್ಲಿ ಮಿಂದರು, ಕೋಟೆಗಳ ಒಳಹೊಕ್ಕರು, ಸಿನಿಮಾ ವೀಕ್ಷಿಸಿದರು...

ಒಂದು ನಗು ಅಷ್ಟೇ ಅವರಿಬ್ಬರ ನಡುವೆ. ಉಳಿದದ್ದು ಮೌನ, ಜೊತೆಗೆ ಬೆರಳು- ಬೆರಳುಗಳ ಸ್ಪರ್ಶ.

ಮನೆಗೆ ತೆರಳಿದವರೇ ಮೊಬೈಲಿನಲ್ಲಿ chat ಮಾಡತೊಡಗಿದರು. ಅನಿಸಿದ್ದನ್ನೆಲ್ಲ ಹೇಳಿಕೊಳ್ಳತೊಡಗಿದರು.
*

ಕಾಜೂರು ಸತೀಶ್ 

ಕೊಂಬೆ


ರಾಜನಿಗೆ ಹಕ್ಕಿಗಳ ದನಿಯೆಂದರೆ ಇಷ್ಟವಾಗುತ್ತಿರಲಿಲ್ಲ. ತನ್ನ ಸುತ್ತಮುತ್ತಲಿನ ಹಕ್ಕಿಗಳನ್ನೆಲ್ಲ ಕೊಲ್ಲಿಸೋಣವೆಂದರೆ ಪ್ರಜೆಗಳ ವಿರೋಧವನ್ನು ಕಟ್ಟಿಕೊಳ್ಳಬೇಕಿತ್ತು.

ರಾಜ ಮಂತ್ರಿಗಳ ಮೊರೆಹೋದ. ಮಂತ್ರಿ ಸಲಹೆಯಿತ್ತ :'ಎಲ್ಲ ಕೊಂಬೆಗಳನ್ನು ಕಡಿಸಿಬಿಡೋಣ'.

ಬೆನ್ನು ತಟ್ಟಿದ ರಾಜ.
*


ಕಾಜೂರು ಸತೀಶ್

Saturday, July 25, 2020

ಗಾಳಿ


ಎರಡು ಗಂಟೆಗಳಾದವು ಜನರು ಕಾಯತೊಡಗಿ. ನಿಂತೂ ನಿಂತೂ ದಣಿದಿದ್ದರು ಅವರೆಲ್ಲ.

ಅಧಿಕಾರಿ ಬಂದರು. ಬಂದು ತಮ್ಮ ಕುರ್ಚಿಯಲ್ಲಿ ಕುಳಿತರು.

ಅದುವರೆಗೆ ಕುರ್ಚಿಯಲ್ಲಿ ಕುಳಿತಿದ್ದ ಗಾಳಿಯು ಎದ್ದು ಹೋಯಿತು ಕಿಟಕಿಯ ಮೂಲಕ!
*


ಕಾಜೂರು ಸತೀಶ್

ಪ್ರೀತಿ

ಗಂಡನನ್ನು ಹೊರಡಿಸಿಯಾಯಿತು. ಮೊಬೈಲ್ ತೆಗೆದು ನೆಟ್ ಆನ್ ಮಾಡಿದಳು. ಈಚೆಗೆ ಇವಳನ್ನು ಲವಲವಿಕೆಯಿಂದ ಇರಿಸುತ್ತಿದ್ದ ಹುಡುಗನ ಸಂದೇಶ ಬಂದಿದೆಯೇ ನೋಡಿದಳು. ಒಂದೆರಡು ಆಸನಗಳ ವೀಡಿಯೊ ಕಳಿಸಿದ್ದ. ಆ ದಿನದ 'ಹೊಸ ರುಚಿ' ಪತ್ರಿಕೆಯ ತುಣುಕನ್ನೂ ಕಳಿಸಿದ್ದ. 'ಮಧ್ಯಾಹ್ನದವರೆಗೆ ಸಭೆ ಇದೆ ಆಮೇಲೆ ಮಾತಾಡುವೆ' ಎಂದಿದ್ದ.

ನೆಟ್ ಆಫ್ ಮಾಡಿ ಬಂದು ನೋಡಿದರೆ ಗಂಡ ಹೊರಟುಹೋಗಿದ್ದ.

'ಹೇಳಿ ಹೋಗಬಹುದಿತ್ತು' ಎಂದುಕೊಂಡಳು ಮನಸ್ಸಿನಲ್ಲಿಯೇ.
*


ಕಾಜೂರು ಸತೀಶ್

ವಾಸ್ತವ



ನೂರಾರು ಚಿತ್ರಗಳಲ್ಲಿ ನಟಿಸಿದ ಹಿರಿಯ ನಾಯಕ ನಟನ ಕುರಿತು ' ಇವರ ನಟನೆಯು ನಾಟಕದ ನಟನೆಯಂತಿರುತ್ತದೆ, ಅರ್ಥಾತ್ over actingನಿಂದ ಕೂಡಿರುತ್ತದೆ. ಸಿನಿಮಾದ ನಟನೆಗೂ ನಾಟಕದ ನಟನೆಗೂ ವ್ಯತ್ಯಾಸವಿದೆ' ಎಂದು ಪತ್ರಕರ್ತರೊಬ್ಬರು ಬರೆದಿದ್ದೇ ತಡ, ಅವರ ಅಭಿಮಾನಿಗಳೆಲ್ಲ ಬೀದಿಗಿಳಿದು ಪ್ರತಿಭಟಿಸಿದರು. ಮನೆ,ಬಸ್ಸುಗಳಿಗೆ ಬೆಂಕಿಹಚ್ಚಿದರು. ಎದುರಿಗೆ ಸಿಕ್ಕವರ ತಲೆಗೆ ಬಡಿದರು. ಪತ್ರಕರ್ತನ ಮನೆಗೆ ಕಲ್ಲುಬೀರಿದರು.

ಒಂದು ದಿನ ಕೊರೋನಾ ಬಂದು ಆ ನಾಯಕ ನಟ ತೀರಿಕೊಂಡ.

ಆ ದಿನ ಇರುವೆಗಳು ಹಾಯಾಗಿ ರಸ್ತೆ ದಾಟುತ್ತಿದ್ದವು!
*


ಕಾಜೂರು ಸತೀಶ್

ಹೊಸ ಬಟ್ಟೆ ಮತ್ತು ಹಳೇ ಚಡ್ಡಿ



ಹುಡುಗನ ಹುಟ್ಟಹಬ್ಬ. ವರ್ಷಗಳ ನಂತರ ಹೊಸ ಅಂಗಿ ಮತ್ತು ಪ್ಯಾಂಟು ಧರಿಸಿದ ಸಂಭ್ರಮ.

ಶಾಲೆಗೆ ಹೊರಟ; ಹೆಜ್ಜೆ ಹೆಜ್ಜೆಗೂ ಪುಳಕ.

ಮಧ್ಯಾಹ್ನದ ಆಟವಾಡತೊಡಗಿದರು. ಓಡುವ ಭರದಲ್ಲಿ ಪ್ಯಾಂಟು ಜಾರಿತು. ಒಳಗಿನ ಹರಿದ ಚಡ್ಡಿ ಕಂಡಿತು.

'ಯಾವ ಕಾಲದ್ದೋ ನಿನ್ ಚಡ್ಡಿ?' ಕೇಳಿದರು ಗೆಳೆಯರು.
*


ಕಾಜೂರು ಸತೀಶ್

Wednesday, July 22, 2020

'ಗಾಯದ ಹೂವುಗಳು' ಕುರಿತು ರಾಜೇಂದ್ರ ಪ್ರಸಾದ್

ಕೃತಿ : ಗಾಯದ ಹೂವುಗಳು
ಕವಿ : ಕಾಜೂರು ಸತೀಶ್

ಪ್ರತಿಕ್ರಿಯೆ

ನನ್ನ ತಲೆಮಾರಿನ ಹಲವು ಕವಿಗಳಲ್ಲಿ ಗಮನಿಸಲೇಬೇಕಾದ ಕವಿ ಕಾಜೂರು ಸತೀಶ್. ಕಾಡಂಚಿನ ಶಾಲೆಯಲ್ಲಿ ಮಕ್ಕಳಿಗೆ ಪಾಠ ಮಾಡಿಕೊಂಡು ತನ್ನಷ್ಟಕ್ಕೆ ಸುತ್ತಾಡಿಕೊಂಡು ಒಳಗೊಳಗೇ ಬೆಂದರೂ ಹೊರಗೆ ನಗು ಮೊಗೆಯನ್ನು ತೋರುತ್ತಾ ಹೊಳೆಯಂಚಿನಲ್ಲಿ ಕಳೆದುಹೋದ ಹುಡುಗ. ಮಲೆಯಾಳಂನಿಂದ ಹಲವಾರು ಕವಿತೆಗಳನ್ನು ಕನ್ನಡದ್ದೇ ಎಂಬಷ್ಟು ತೀವ್ರವಾದ ಭಾಷೆಯಲ್ಲಿ ಅನುವಾದಿಸಿದ್ದಾರೆ. ಈಗಲೂ ಅನುವಾದ ನಡೆಯುತ್ತಲೇ ಇದೆ. ನಮಗೆ ಮತ್ತು ಮಲೆಯಾಳಂಗೆ ಒಳ್ಳೆಯ ಸೇತು ಆಗಬಲ್ಲವರು. ಸತೀಶ್ ಕವಿಗೋಷ್ಠಿ, ಕಾರ್ಯಕ್ರಮ ಯಾವುದಕ್ಕೂ ಹೆಚ್ಚು ಹೊರಗೆ ಕಾಣಿಸಿಕೊಳ್ಳದೆ ಒಳಗೇ ಅವಿತುಕೊಳ್ಳುವ ಸಂಕೋಚ ಸ್ವಭಾವದವರು.. ಕವಿತೆಗಳು ಹಾಗೆಯೇ, ಗಡಿನಾಡಿನ ಮಳೆನಾಡಿನ ಒಳ-ಹೊರಗೆ ಹುಟ್ಟಿ ಹರಿಯುತ್ತವೆ.


ಗಾಯದ ಹೂವುಗಳು ಪ್ರಕಟವಾಗಿದ್ದು ೨೦೧೫ ರಲ್ಲಿ. ಅದರ ಹಸ್ತಪ್ರತಿಗೆ “ಕಡೆಂಗೋಡ್ಲು ಶಂಕರಭಟ್ಟ ಕಾವ್ಯ ಪ್ರಶಸ್ತಿ” ಬಂದಿದೆ. ಇದು ಅವರ ಮೊದಲ ಸಂಕಲನ ಮತ್ತು ಇದರ ನಂತರ ಒಂದು ಮಲೆಯಾಳಂ ಅನುವಾದಿತ ಕವಿತೆಗಳ ಸಂಕಲನ ಭಾಷಾ ಭಾರತಿ ಪ್ರಾಧಿಕಾರದಿಂದ ಪ್ರಕಟವಾಗಿದೆ. ಸತೀಶರ ಕವಿತೆಗಳ ವೈಶಿಷ್ಟ್ಯ ಇರುವುದು ಪ್ರಕೃತಿಯ ಎಲ್ಲ ಚರಾಚರಗಳ ಜೊತೆಗೆ ನಡೆಸುವ ಸಂವಾದ, ಅನುಸಂಧಾನ ಮತ್ತು ಸ್ವಗತಗಳಲ್ಲಿ..

ಕೇಳಿಸಿಕೊಳ್ಳಿ
ಒಂದು ಇರುವೆ ಸತ್ತಿದೆ
ನನ್ನ ಕಾಲ ಬುಡದಲ್ಲಿ “ (ಮೊದಲ ಕವಿತೆ, ಪುಟ ೧೯ )

ಎನ್ನುವ ಕವಿತೆಯೊಂದಿಗೆ ಶುರುವಾಗುವ ಸಂಕಲನ ಉದ್ದಕ್ಕೂ ಇಷ್ಟೇ ಸೂಕ್ಷ್ಮವಾಗಿ ಪರಿಸರ, ಸಂಬಂಧ, ಮಾತುಕತೆ, ಸಂಕಟಗಳ ಜೊತೆಗೆ ಒಡನಾಡುತ್ತ ಮುಂದುವರಿಯುತ್ತದೆ.

“ಹಸಿದ ಜಿಗಣೆಯೇ
ಬಾ ಹೀರು ನನ್ನನ್ನು
ಸ್ವಲ್ಪದರಲ್ಲೇ ನೀನು
ದ್ರಾಕ್ಷಿಯಾಗಿ ಉದುರುತ್ತೀ
ನೀ ಹೆರುವ ಕೂಸಿಗೆ
ನನ್ನ ಹೆಸರಿಡುವುದ ಮರೆಯದಿರು
ಅಪ್ಪನಾಗುವ ಖುಷಿಯಿದೆ ನನಗೆ” (ಮಿಕ್ಕವರಾರನ್ನೂ ಹೀರಕೂಡದು ಪುಟ ೪೬ )

ಜಿಗಣೆ ಜೊತೆಗಿನ ಈ ಸಂವಾದ ಕಲ್ಪನೆ ಎಷ್ಟು ಅದ್ಭುತವಾಗಿದೆ. ರಕ್ತ ಕುಡಿಯುತ್ತಿದ್ದರೂ ಕವಿಯು ಅದರ ಕೂಸಿಗೆ ಅಪ್ಪನಾಗಲು ಬಯಸುತ್ತಿದ್ದಾನೆ. ಒಂದು ಕಡೆಯಿಂದ ಹತಾಶೆ, ಮತ್ತೊಂದು ಕಡೆಯಿಂದ ಅನುಭಾವ, ತನ್ಮಯದಿ ಕೂತು ಕಂಡರೆ ಸೃಷ್ಟಿ ಜೊತೆಗಿನ ಕಾಣ್ಕೆ ಎಂಬಂತೆ ಕವಿತೆ ಮತ್ತೆ ಮತ್ತೆ ನಮ್ಮ ಬುದ್ಧಿಯೊಳಕ್ಕೆ ಜಿಗಣೆಯಂತೆ ಅಂಟುತ್ತದೆ.

ಇದುವರೆಗೆ ಬರೆಸಿಕೊಂಡ ನನ್ನ ಕವಿತೆಗಳೆಲ್ಲವೂ 
ವೈದ್ಯನಿಗೆ ಕೊಡಲು ಕಾಸಿಲ್ಲದೆ 
ನರಳುತ್ತಲೇ ಇವೆ ಹಸಿನೆಲದ ಮೇಲೆ“ (ಅಸ್ವಸ್ಥ ಕವಿತೆಗಳು, ಪುಟ ೬೪ )
ಎದೆಯಾಳದ ಸಂಕಟಕೆ ಕವಿತೆಗಳು ಜೊತೆಯಾದ, ಮದ್ದಾದ ಪರಿ. ಅಥವಾ ಕವಿತೆಗಳೇ ನಿಜವಾಗಲು ಅಸ್ವಸ್ಥಗೊಂಡಿವೆಯೋ? ಆ ಹಸಿನೆಲವು ಕವಿಯ ಹೃದಯ, ಅದರ ಮೇಲೆ ಬಿದ್ದ ಅಸ್ವಸ್ಥ ಕವಿತೆ ಬದುಕಿನ ಹಲವು ಸಂಕಟ ಮತ್ತು ಸಮಾಜ. 

ಈ ಸಂಕಲನದ ತುಂಬೆಲ್ಲ ಸಂಕಟ, ಏಕಾಂತ, ನೆನೆಪು, ವೃತ್ತಿಯ ತಕರಾರು- ತಳಮಳ, ಅಲ್ಲೆಲ್ಲೋ ಹೊಳೆಯ ನಡುವೆ ಕೂತ ದುಮ್ಮಾನದ ಹಾಡು ಬೇಕಾದಷ್ಟಿವೆ. ಮಾನುಷ ಜೀವನ ಇದಕ್ಕೆ ಹೊರತಾದುದೇನು? ಅಸಲಿಗೆ ಸಂತಸವು ಸೃಜನಶೀಲತೆಯನ್ನು ಹುಟ್ಟಿಸುವುದು ಕಡಿಮೆ.. ಆದರೆ ನೋವು ಅನ್ನುವುದರ ತಳದಲ್ಲೇ ಕಲೆಯ ನೆಲೆ ಇದೆ. ಅದಕೆ ಈ ಸಾಲು ಸಾಕ್ಷಿ..
ಗಾಯಗಳು ಹಾಡಬೇಕು ಕೆಂಪು ಹೂಗಳಾಗಿ 
ಒಸರುವ ಅಷ್ಟೂ ರಕ್ತವು ಹೂವಿಗೆ ಅಂದ ನೀಡಬೇಕು” 
(ಗಾಯದ ಹೂವುಗಳು, ಪುಟ ೭೯ )

ಕಡೆಗೆ ಕವಿಯೊಂದು ಉಯಿಲು ಬರೆದಿದ್ದಾನೆ.. ಅವನ ಕಾಲದ ನಂತರ ಅವನ್ನು ಏನು ಮಾಡಬೇಕೆಂದು.  ನಾವು ಮಾಡಬಲ್ಲೆವೇ? ಕಾಡುದಾರಿಯ ನಡುವೆ ಅವನ ಸಮಾಧಿ, ಅವನ ಬೆಳಕಿನ ತಂತಿಯ ವಿಸ್ತರಣೆ, ಬೋನ್ಸಾಯ್ ಗಿಡ, ಅಲ್ಲಿ ಹಕ್ಕಿಗಳ ಹಿಕ್ಕೆ ಕಡೆಗೆ 
ಮರೆತುಬಿಡಿ ನನ್ನ 
ನಿತ್ಯದ ನಿಮ್ಮ ವಿಸರ್ಜನೆಯ ಹಾಗೆ”    (ಉಯಿಲು, ಪುಟ ೯೬ )    
ಅಷ್ಟು ಸುಲಭಕ್ಕೆ ಕವಿ ಅಥವಾ ಕವಿತೆಯನ್ನು ನಾವು ಮರೆಯಲು ಅಥವಾ ವಿಸರ್ಜಿಸಲು ಸಾಧ್ಯವೇ ? ಅಂತಹ ಕಾರಣವೇ ಇದ್ದರೆ, ಅದು ಎಂದೂ ಮರೆಯದಂತೆ ಒಳಗೆ ಉಳಿದುಹೋಗುತ್ತದೆ, ನೆನೆಪಿನ ಪಡಸಾಲೆಯಲ್ಲಿ ಒಂದು ಫೋಟೋ ಖಾಯಂ. 

ಇದು ಕವಿಯ ಮೊದಲ ಸಂಕಲನ. ಹಾಗಾಗಿ ಕಾವ್ಯ ಭಾಷೆಯ, ಪದೋಕ್ತಿಯ, ಸಂರಚನೆಯ ತೊಂದರೆಗಳು ಕಾಣಿಸುತ್ತವೆ. ಆದರೆ ಸೂತ್ರಕ್ಕೆ ಬಿಗಿದುಕೊಳ್ಳುವ ಕಲೆಯನ್ನು ನಾನು ಒಪ್ಪುವುದಿಲ್ಲ. ಕಳೆದ ಐದು ವರ್ಷಗಳಲ್ಲಿ ಸತೀಶ ಮೊದಲಿನಂತೆ ಬರೆಯುವುದು ಕಡಿಮೆ ಮಾಡಿದ್ದಾರಾದರೂ, ಅಸಲಿಗೆ ವಸ್ತು-ವಿಷಯವನ್ನು ಹರಳುಗಟ್ಟಿಸಿ ಹವಳಗಳಂತೆ ಬರೆಯುತ್ತಿದ್ದಾರೆ. ಈ ಅವಧಿಯಲ್ಲಿ ಅವರ ಬೇರೆ ಬೇರೆ ಅನುವಾದಿತ ಕವಿತೆಗಳು ಮತ್ತು ಸ್ವರಚಿತ ಕವಿತೆಗಳನ್ನು ನಾನು ಓದಿರುವುದರಿಂದ ಅವರ ಕಾವ್ಯದ ಈ ಬೆಳವಣಿಗೆಯನ್ನು ಚೆನ್ನಾಗಿ ಗುರುತಿಸಬಲ್ಲೆ. ಅವರು ದಿಕ್ಕು ತಪ್ಪದ ಹಾಗೆ ಅದೇ ದಾರಿಯಲ್ಲಿ ಮುಂದುವರಿಯಲಿ.. 
ನನ್ನ ಜೊತೆಯ ಕವಿಯು ಮತ್ತಷ್ಟು ಬರೆಯಲಿ, ಮತ್ತಷ್ಟು ಯಶಸ್ಸು ಸಿಕ್ಕಲಿ ಎಂದು ಹಾರೈಸುವೆ. 
*


~ ರಾಜೇಂದ್ರ ಪ್ರಸಾದ್ (ಆರ್ ಪಿ)

ವ್ಯವಸ್ಥೆ



ಮನೆಯ ಯಜಮಾನ ತನ್ನ ಮಗ(ಚಿಕ್ಕ ಯಜಮಾನ)ನಿಗೆ ಒಂದು ಕೆಲಸವನ್ನು ವಹಿಸಿದ. ಚಿಕ್ಕ ಯಜಮಾನನು ಆ ಕೆಲಸವನ್ನು ಮಾಡಲು ತನ್ನ ಸಹಾಯಕನಿಗೆ ತಿಳಿಸಿದ. ಸಹಾಯಕನು ಆ ಕೆಲಸವನ್ನು ನಿರ್ವಹಿಸಲು ಮನೆಯ ನಾಯಿಗೆ ಹೇಳಿದ. ನಾಯಿಯು ತನ್ನ ಕೆಲಸವನ್ನು ಅದರ ಬಾಲಕ್ಕೆ ವಹಿಸಿತು.

ನಾಯಿಯ ಬಾಲವು ಆ ಕೆಲಸವನ್ನು ಮಾಡತೊಡಗಿತು. ಅದಿನ್ನೂ ಅಪೂರ್ಣವಾಗಿರುವಾಗಲೇ, ಮತ್ತೊಂದು ಕೆಲಸ ಅದರ ಮೇಲೆ ಬಿದ್ದಿತು.

ಎರಡೂ ಕೆಲಸಗಳನ್ನು ಮಾಡತೊಡಗಿದ ಬಾಲಕ್ಕೆ ನಾಯಿಯು 'ಇನ್ನೂ ಆಗ್ಲಿಲ್ವಾ??ಇನ್ನೇನಾಗುತ್ತೆ ನಿಂಗೆ ಅಲ್ಲಾಡ್ಸೋದೊಂದ್ ಬಿಟ್ಟು' ಎಂದು ಬೈದಿತು.

ನಾಯಿಗೆ ಆ ಸಹಾಯಕನು 'ಮೂಸೋದು ಕಾಲೆತ್ತೋದು ಬಿಟ್ಟು ಇನ್ನೇನ್ ಕಲ್ತಿದ್ದೀಯ ನೀನು' ಎಂದನು.

ಸಹಾಯಕನಿಗೆ ಚಿಕ್ಕ ಯಜಮಾನನು 'ಮಾನ-ಮರ್ಯಾದೆ ಇಲ್ವಾ ನಿಂಗೆ, ಎಷ್ಟ್ಹೊತ್ ಬೇಕು ಈ ಕೆಲ್ಸ ಮಾಡ್ಲಿಕ್ಕೆ' ಎಂದನು.

ಯಜಮಾನನು ಚಿಕ್ಕ ಯಜಮಾನನಿಗೆ 'ಏನ್ ನಿದ್ದೆ ಮಾಡ್ತಿದ್ದೀಯಾ? ಹೊದ್ಕೊಂಡ್ ಮಲ್ಕೊ ಹೋಗು' ಎಂದನು.

ಅಷ್ಟರಲ್ಲಿ ಬಾಲದ ಬೆನ್ನಿಗೆ ಮತ್ತೊಂದು ಕೆಲಸ ಬಂದು ಅಂಟಿಕೊಂಡಿತು.

'ಕೆಲಸ ಮುಗಿದ ತಕ್ಷಣ ಈ ಬಾಲವನ್ನು ಕತ್ತರಿಸಿ ಹೊಸ ಬಾಲವನ್ನು ಜೋಡಿಸು' ಯಜಮಾನ ಚಿಕ್ಕ ಯಜಮಾನನಿಗೆ ಆದೇಶಿಸಿದ.
*


ಕಾಜೂರು ಸತೀಶ್

Sunday, July 5, 2020

ಒಂದು ಚೇಳಿನ ರಾತ್ರಿ




ನನ್ನಮ್ಮನಿಗೆ ಚೇಳು ಕುಟುಕಿದ ರಾತ್ರಿ
ಇನ್ನೂ ನೆನಪಿದೆ ನನಗೆ
ಸತತ ಹತ್ತು ಗಂಟೆಗಳ ಬಿರುಮಳೆಗೆ
ಒಳತೆವಳಿ ಆಶ್ರಯಿಸಿತ್ತದು ಅಕ್ಕಿಮೂಟೆಯ ಕೆಳಗೆ.

ಆ ಕತ್ತಲ ಕೋಣೆಯಲ್ಲಿ
ಬಾಲವನ್ನೆತ್ತಿ ಫಳಾರನೆ ಮಿಂಚಿಸಿ
ವಿಷವನ್ನಿಳಿಸಿ ಹಿಂತಿರುಗಿತು ಮತ್ತೆ ಮಳೆಗೆ.

ಓಡೋಡಿ ಬಂದು ಮುತ್ತಿದರು ರೈತರು -ಗಾಯದ ಮೇಲಿನ ನೊಣಗಳಂತೆ
ಪಠಿಸಿದರು ಮಂತ್ರಗಳ , ಪ್ರಾರ್ಥಿಸಿದರು ನೂರು ಬಾರಿ
'ದುಷ್ಟ ಶಕ್ತಿಗಳ ನಾಶಮಾಡೋ ದೇವಾ..'

ಮೊಂಬತ್ತಿಗಳ ಹಿಡಿದು ಲಾಟೀನುಗಳ ಹಿಡಿದು
ದೈತ್ಯ ಚೇಳಿನ ನೆರಳು ಚೆಲ್ಲಿದರು
ಸುಟ್ಟ ಮಣ್ಣ ಗೋಡೆಗಳ ಮೇಲೆ
ಇಂಚಿಂಚೂ ಹುಡುಕಿದರು ಸುಮ್ಮನೆ.

ಅವರೆಂದರು:
'ಅದು ಹೊರಳಿದಂತೆಲ್ಲ ಇವಳ ರಕ್ತದಲ್ಲಿ ವಿಷವೇರುತ್ತದೆ
ಅದು ಅಲುಗಾಡದಿರಲಿ..'
'ನಿನ್ನ ಕಳೆದ ಜನ್ಮದ ಪಾಪಗಳೆಲ್ಲ ಈ ರಾತ್ರಿ ಉರಿದುಹೋಗಲಿ..'
'ನಿನ್ನೀ ನೋವು ಮರುಜನ್ಮದ ದುಃಖಗಳ ಕಳೆಯಲಿ..'
'ಈ ಮಿಥ್ಯೆಯ ಜಗದಲ್ಲಿ
ಜಗದ ಅಷ್ಟೂ ಕೆಡುಕುಗಳು ಒಳಿತಿನೆದುರು ಕರಗಿ
ಸಮದೂಗಲಿ ನಿನ್ನ ನೋವಿನಿಂದ..'
'ನಿನ್ನ ರಕ್ತದಲ್ಲಿನ ವಿಷವು
ಶುದ್ಧಗೊಳಿಸಲಿ ನಿನ್ನ ಆಸೆ ಆಕಾಂಕ್ಷೆಗಳನ್ನು'

ಕುಳಿತರು ಅವರು ನನ್ನಮ್ಮನ ಸುತ್ತ
ಅವಳ ಅರ್ಥೈಸಿಕೊಂಡವರಂತೆ ಶಾಂತಚಿತ್ತದಿಂದ
ಮತ್ತಷ್ಟೂ ಮೊಂಬತ್ತಿಗಳು, ಮತ್ತಷ್ಟೂ ಲಾಟೀನುಗಳು
ನೆರೆಯವರು, ಕೀಟಗಳು
ಬಿಡದೆ ಸುರಿಯುವ ಮಳೆ
ಮತ್ತು
ನಡುವೆ ಚಾಪೆಯಲಿ ನರಳಿ ಒದ್ದಾಡುತ್ತಿರುವ ನನ್ನಮ್ಮ.

ನನ್ನಪ್ಪ ಬುದ್ಧಿಜೀವಿ, ಯಾವುದನ್ನೂ ಸುಲಭಕ್ಕೆ ಒಪ್ಪಿಕೊಳ್ಳದವ
ಹರಸಿ ಶಪಿಸಿ ಅವಳ ಕಿವಿಯಲ್ಲಿ ಉಸುರಿದ ತರ್ಕ ಸಿದ್ಧಾಂತಗಳ
ಹಚ್ಚಿದ ಬಗೆಬಗೆಯ ಪುಡಿ, ಮೂಲಿಕೆ, ಮಿಶ್ರಣಗಳ..
ನೋವು ನೀಗಲೇ ಇಲ್ಲ

ಚೇಳು ಕುಟುಕಿದ ಹೆಬ್ಬೆರಳಿಗೆ
ಪ್ಯಾರಾಫೀನ್ ಸುರಿದು ಕಡ್ಡಿ ಗೀರಿದ
ಅವಳ ಸಾರ ಹೀರಿ
ಬೆಂಕಿ ಧಗಧಗಿಸುವುದ ನೋಡಿದೆ
ನೋವ ನೀಗಿಸಲು
ಪಟಪಟ ಮಂತ್ರ ಪಠಿಸುತ್ತಿದ್ದವನ ನೋಡಿದೆ

ನೋವು ಇಳಿಯಿತು
ಇಪ್ಪತ್ತು ಗಂಟೆಗಳ ಅನಂತರ

ಅಮ್ಮ ಹೇಳಿದಳು
'ದೇವ್ರೇ.. ಸದ್ಯ, ಚೇಳು ನನ್ನ ಮಕ್ಕಳಿಗೆ ಕಚ್ಚಲಿಲ್ಲವಲ್ಲಾ..'
*


ಇಂಗ್ಲೀಷ್ ಮೂಲ- ನಿಸ್ಸೀಮ್ ಎಜೆ಼ಕಿಯಲ್ 



ಕನ್ನಡಕ್ಕೆ- ಕಾಜೂರು ಸತೀಶ್

ದೇವನೂರ ಮಹಾದೇವ ಅವರ ಮಾರಿಕೊಂಡವರು -mp3

ಇಲ್ಲಿ ಕ್ಲಿಕ್ಕಿಸಿ ಮಾರಿಕೊಂಡವರು 

Wednesday, July 1, 2020

ಶಿಕ್ಷಣ ಮತ್ತು ಸ್ವಾತಂತ್ರ್ಯ

ಮಂಡ್ಯ ಅನ್ನೋ ತನ್ನ ಪಾಡಿಗೆ ತಾನು ಬದುಕುವ ಒಂದು ಊರು ನನಗೆ ಸಿನಿಮಾದ ಹುಚ್ಚು ಹಿಡಿಸಿದ್ದು. ಅಲ್ಲಿನ ಶಂಕರಗೌಡ ಶಿಕ್ಷಣ ಮಹಾವಿದ್ಯಾಲಯವನ್ನು ನಾನು ಆಗಾಗ ನೆನಪಿಸಿಕೊಳ್ಳುತ್ತಿರುತ್ತೇನೆ. ಅದಕ್ಕೆ ಮುಖ್ಯ ಕಾರಣ ಅದು ನಮಗೆ ಕೊಟ್ಟಿದ್ದ ಸ್ವಾತಂತ್ರ್ಯ. ಹಾಗೆ ನೋಡಿದರೆ ನನ್ನ ವಿದ್ಯಾರ್ಥಿ ಜೀವನ ಹತ್ತನೇ ತರಗತಿಯಲ್ಲೇ ಕೊನೆಗೊಂಡಿತ್ತು. ಅನಂತರದ್ದು ನರಕ. ಸ್ವಾತಂತ್ರ್ಯವೇ ಇಲ್ಲದ ಶಿಕ್ಷಣವನ್ನು 'ವೈಭವೋಪೇತ' ಎಂದು ವರ್ಣಿಸಲು ನನ್ನಿಂದಾಗದು.


ಹಳೇ 'ಕೈನೆಟಿಕ್ ಹೊಂಡ'ದಲ್ಲಿ ಬಂದು ಒಂದು ದಮ್ಮು ಎಳೆದು ತೋಳು ಮಡಿಸಿಕೊಂಡು ಯಾವುದೇ ವಿಷಯವನ್ನು ನೀಡಿದರೂ ಲೀಲಾಜಾಲವಾಗಿ ಮಾತನಾಡುತ್ತಿದ್ದ ಡಾ.ಶಂಕರೇಗೌಡ ಸರ್, ಸದಾ ನಗುಮೊಗದ; ಇಂಗ್ಲೀಷ್ ತಿಳಿಯದಿದ್ದರೂ ಅಪಾರ ಆತ್ಮವಿಶ್ವಾಸದಿಂದ ತಮಗೆ ತಿಳಿದ ಪದಗಳನ್ನೆಲ್ಲ ಒಟ್ಟುಗೂಡಿಸಿ ಮಾತನಾಡುತ್ತಿದ್ದ ಡಾ.ಚನ್ನಕೃಷ್ಣಯ್ಯ ಸರ್, ಸಾಹಿತ್ಯದಲ್ಲಿ ಅಪಾರ ಆಸಕ್ತಿಯಿದ್ದರೂ ಏನನ್ನೂ ಹೇಳಿಕೊಳ್ಳದೆ ವಿಷಯ(content)ವನ್ನು ತಿಳಿಸಲು ಶ್ರಮಿಸುತ್ತಿದ್ದ ಡಾ.ಸುವರ್ಣ ಮೇಡಂ , ಕಲೆಯಲ್ಲಿ ಮಿಂದೇಳುತ್ತಿದ್ದ ಡಾ.ಚಿದಾನಂದ ಸರ್.. ಇವರೆಲ್ಲರೂ ನಮಗೆ ಕೊಟ್ಟಿದ್ದ ಸ್ವಾತಂತ್ರ್ಯವನ್ನು ನಾವು ಗರಿಷ್ಠ ಪ್ರಮಾಣದಲ್ಲಿ ಸದುಪಯೋಗಪಡಿಸಿಕೊಂಡಿದ್ದೆವು.
*
ವಿಶೇಷ ಉಪನ್ಯಾಸ ನೀಡಲು ಇತರೆ ಕಾಲೇಜಿನಿಂದ ಆಗಮಿಸುತ್ತಿದ್ದ ಉಪನ್ಯಾಸಕರನ್ನೂ ನಾವೆಲ್ಲಾ ತೂಗಿ ನೋಡುತ್ತಿದ್ದೆವು. Depth ಇರುವ ಮಂದಿಯ ಮಾತುಗಳನ್ನು ಕೇಳುತ್ತಿದ್ದರೆ ನನಗೆ ಎದ್ದು ತಕತೈ ಕುಣಿಯಬೇಕೆನಿಸುವಷ್ಟು ಖುಷಿಯಾಗುತ್ತಿತ್ತು. ಅಂಥವರನ್ನು ನನ್ನ ಗೆಳೆಯರೆಲ್ಲಾ 'ಏನು ಕುಯ್ತಾನಪ್ಪಾ' ಎಂದು ಶಪಿಸುತ್ತಿದ್ದರು. Sillyಯಾಗಿ ಮಾತನಾಡಿ ಸಮಯ ಹಾಳುಮಾಡುವವರನ್ನು ಕಂಡರೆ ಎದ್ದು ಓಡಿಬಿಡೋಣ ಎನಿಸುತ್ತಿತ್ತು. ಅವರನ್ನು 'ಸಖತ್ ಮಗಾ' ಎಂದು ನನ್ನ ಗೆಳೆಯರು ಸಂಭ್ರಮಿಸುತ್ತಿದ್ದರು. ನಾನು ಎಲ್ಲೋ ಎಡವಿದ್ದೇನೆ ಎಂದು ಆಗೆಲ್ಲಾ ಅನಿಸುತ್ತಿತ್ತು.

ಒಮ್ಮೆ ಡಾ. ಲ್ಯಾನ್ಸಿ ಡಿಸೋಜ ಸರ್ ಅವರನ್ನು ಕರೆಸಿದ್ದರು. ಅವರ ವಿಷಯದ ಆಳ, ಪ್ರಸ್ತುತಪಡಿಸುವ ವಿಧಾನಗಳು ನನ್ನನ್ನು ಆಕರ್ಷಿಸಿತ್ತು. ಗೆಳೆಯರಿಗೆ ಅವರು ಇಷ್ಟವಾಗಲಿಲ್ಲ. ಪಿಸಪಿಸ ಮಾತು ಆರಂಭವಾಯಿತು. 'ನಿಮಗೆ ಇಷ್ಟವಿಲ್ಲದಿದ್ದರೆ ನೀವು ಹೊರಗೆ ಹೋಗಿ,ಇಲ್ಲದಿದ್ದರೆ ನಾನೇ ಹೋಗುತ್ತೇನೆ' ಎಂದಾಗ ಅವರ ಸದ್ದು ಅಡಗಿದ್ದನ್ನು ನಾನು ಒಳಗೊಳಗೇ ಸಂಭ್ರಮಿಸಿದ್ದೆ.
*
ನಾವೇ ನಾವಾಗಿ ಓದಿಕೊಂಡು ಕಲಿಯುತ್ತೇವಲ್ಲಾ- ಅದರಲ್ಲಿ ಸ್ವರ್ಗ ಸುಖವಿದೆ. ಅಲ್ಲಿ ಸ್ವಾತಂತ್ರ್ಯವಿರುತ್ತದೆ. ಹಾಗಾಗಿ ಕಲಿತದ್ದು ಅಚ್ಚೊತ್ತಿ ನಿಲ್ಲುತ್ತದೆ.
ಇಷ್ಟಾದರೂ ಕಾಲೇಜು ಜೀವನವನ್ನೇ ಅನುಭವಿಸದ ನೋವು ಮಾತ್ರ ಆಗಾಗ ಕಾಡುತ್ತದೆ.
*


ಕಾಜೂರು ಸತೀಶ್