ಸೋಮವಾರಪೇಟೆ ತಾಲ್ಲೂಕು ಸಾಹಿತ್ಯ ಸಮ್ಮೇಳನವು ಆಲೂರು ಸಿದ್ದಾಪುರದಲ್ಲಿ (ಜುಲೈ 26,2018)ನಡೆದಾಗ ಕವಿಗೋಷ್ಠಿಯಲ್ಲಿ ಭಾಗವಹಿಸಲು ಅಲ್ಲಿಗೆ ಹೋಗಿದ್ದೆ. ಕವಿಗೋಷ್ಠಿ ಆರಂಭವಾಗುವಾಗಲೇ ಬೆಳಕು ಕಣ್ಣುಮುಚ್ಚಿ ನಾಲಗೆ ಹೊರಚಾಚಿತ್ತು. ಆ ಅಧಿಕಾರಿಗಳು ಕುರ್ಚಿಯಿಂದೆದ್ದು ಮನೆಗೆ ತೆರಳಲು ನಾಲ್ಕೈದು ಹೆಜ್ಜೆ ಮುಂದೆ ಬಂದಿದ್ದರು.
ನಾನು ಎದುರಿಗೆ ಸಿಕ್ಕಾಗ, "ನೀವೂ ಇದ್ದೀರಾ?" ಎಂದು ಕೇಳಿ ಮತ್ತೆ ಬಂದು ಕುರ್ಚಿಯಲ್ಲಿ ಕುಳಿತರು! ಒಮ್ಮೆ ಮಾತ್ರ ನನ್ನನ್ನು ನೋಡಿದ್ದ ಆ ಅಧಿಕಾರಿ ಎರಡನೇ ಬಾರಿ ನನ್ನೊಡನೆ ಮಾತನಾಡಿದ್ದರು.
ಅವರೆದುರು ನನಗೆ ವೇದಿಕೆಯಲ್ಲಿ ಕುಳಿತುಕೊಳ್ಳಲು ಮುಜುಗರವಾಗುತ್ತಿತ್ತು. ಸಮಯ ಮೀರಿದ್ದರಿಂದ ಕೆಲವೇ ಮಾತುಗಳನ್ನಷ್ಟೇ ಆಡಿದ್ದೆ. ಒಂದು ಕವಿತೆಯನ್ನೂ ವಾಚಿಸಿದ್ದೆ.ಕತ್ತಲಾದರೂ ಅವರು ಅಲ್ಲೇ ಕುಳಿತು ಎಲ್ಲವನ್ನೂ ಆಲಿಸುತ್ತಿದ್ದರು.
ಮರುದಿನ ನಾನು ವಾಚಿಸಿದ ಕವಿತೆಯ ಸಾಲೊಂದನ್ನು ಹೇಳಿ, 'ಹೆಚ್ಚು ಮಾತನಾಡಬೇಕಿತ್ತು' ಎಂದರು. (ಅವರಿಗೆ ಮಾತು ಎಂದರೆ ಅಷ್ಟು ಪ್ರೀತಿ!)
*
ಮಾರ್ಚ್ 1, 2019. ಮಧ್ಯರಾತ್ರಿ ಒಂದು ಕವಿತೆಯನ್ನು ಟೈಪಿಸಿ ನಮ್ಮ ಗುಂಪಿನಲ್ಲಿ ಹಂಚಿಕೊಂಡರು. ಮರುದಿನ ಅವರೊಡನೆ ತೆರಳುವಂತೆ ಕರೆ ಮಾಡಿದ್ದರು. ದಾರಿಯಲ್ಲಿ ಆ ಕವಿತೆಯ ಬಗ್ಗೆ ಉಲ್ಲೇಖಿಸಿದರು. 'ತುಂಬಾ ಚೆನ್ನಾಗಿದೆ ಹೆಚ್ಚು ಬರೀರಿ ಸರ್' ಎಂದೆ. ಆಮೇಲೆ ಊಟಕ್ಕೆ ಅಲ್ಲಿದ್ದ ಒಂದು ಸಣ್ಣ ಹೋಟೇಲಿಗೆ ಕರೆದುಕೊಂಡು ಹೋದರು. ಅಲ್ಲಿನ BLO ಹಣಕೊಟ್ಟಾಗ 'sorry sorry please please ' ಎಂದು ಪ್ರೀತಿಯಿಂದ ಹಿಂತಿರುಗಿಸಿದ್ದರು.
ಹಿಂತಿರುಗುವಾಗ ಜ್ಯೂಸ್ ಕುಡಿಸಿದರು. ಎಲ್ಲೇ ಹೋಗಲಿ ಅವರ ಕಿಸೆಯಿಂದಲೇ ಹಣ ಖರ್ಚಾಗಬೇಕು. ಹೊರಗೆ ಸಿಕ್ಕಾಗಲೆಲ್ಲ
ಮನುಷ್ಯನ ಕೆಟ್ಟ ಗುಣಗಳ ಕುರಿತು ಅವರು ಸದಾ ಬೇಸರಿಸುತ್ತಿದ್ದರು. ಒಬ್ಬರಿಂದಲೂ ಅವರು ಹಣ ಕಸಿದುಕೊಂಡವರಲ್ಲ.
*
ನನ್ನ ಸಂದರ್ಶನವನ್ನು ಕಳಿಸಿದ್ದೆ. ಆಲಿಸಿ ಇಂಗ್ಲೀಷಿನಲ್ಲಿ ಟೈಪಿಸಿ ಪ್ರತಿಕ್ರಿಯಿಸಿದ್ದರು. ಅಷ್ಟು ಒತ್ತಡದ ವೃತ್ತಿಯಲ್ಲಿ ಅಷ್ಟು ಟೈಪಿಸುವ ಅವರ ತಾಳ್ಮೆಗೆ ಬೆರಗಾಗಿದ್ದೆ.
*
ಒಮ್ಮೆ ಒಂದು ಸಭೆಯಲ್ಲಿ(28-12-2018) ಅಷ್ಟೇನೂ ವಿಷಯ ಜ್ಞಾನವಿರದ ಒಬ್ಬರು ಮಾತನಾಡುತ್ತಿದ್ದರು. ಸ್ವಲ್ಪ ಆಲಿಸಿದ ನಂತರ ಇಷ್ಟು ವ್ಯಾಪ್ತಿಯುಳ್ಳ ವಿಷಯದ ಕುರಿತು ಹೇಳಲು ಕಷ್ಟ ಅಲ್ವಾ ಎಂದು ಹಿಂದಿನ ಮಾತುಗಳಲ್ಲಿದ್ದ ತಪ್ಪುಗಳನ್ನು ನಯವಾಗಿ ತಿದ್ದಿದ್ದರು.
*
ಹೋದಹೋದಲ್ಲೆಲ್ಲ ಅವರು ಕಸ ಹೆಕ್ಕುತ್ತಿದ್ದರು. ಗಾಂಧಿ ಎಂದರೆ ಅಷ್ಟು ಪ್ರೀತಿ ಅವರಿಗೆ .
*
ಕಡೆಗೂ ಮೈಸೂರಿಗೆ ವರ್ಗಾವಣೆಯ ಆದೇಶ ಬಂದಿತ್ತು. ಭಾನುವಾರ ಕಚೇರಿಗೆ ಬಂದು ಚಾಲನಾ ಆದೇಶವನ್ನು ತಾವೇ ಟೈಪಿಸಿದರು. ದಿನಾಂಕ 14-10-2019ಕ್ಕೆ ಹೊರಡುವಾಗ ಅವರ ಕಣ್ಣುಗಳು ದುಃಖದ ನೀರಲ್ಲಿ ಮುಳುಗಿದ್ದವು.
*
ಒಬ್ಬ ಸೃಜನಶೀಲ ಅಧಿಕಾರಿ ನಮಗೆ ದಕ್ಕಿದಾಗ ಅಲ್ಲಿ ಮೇಲಿನ ಪ್ರಸಂಗಗಳು ಘಟಿಸುತ್ತವೆ. ಅಲ್ಲಿ ಮನುಷ್ಯನ ಘನತೆಗೆ ಬೆಲೆ ಇರುತ್ತದೆ. ಕಲೆ-ಸಾಹಿತ್ಯಗಳೆಲ್ಲಾ ಜೀವಂತವಾಗಿ ಉಳಿಯುತ್ತವೆ.
ಧನ್ಯವಾದಗಳು ಶ್ರೀ ಸಿ.ಆರ್.ನಾಗರಾಜಯ್ಯ ಸರ್!
*
ಕಾಜೂರು ಸತೀಶ್
ತಂಬಾ ಅರ್ಥ ಗರ್ಭಿತ ಮಾತುಗಳು ಸಾರ್.
ReplyDeleteನಾಗರಾಜಯ್ಯ ಸರ್ ದೆವರಂಥ
ReplyDeleteಮನುಷ್ಯ
😍🙏
ReplyDeleteಕೊಡಗಿನಲ್ಲಿ ಮಹಾ ಮಳೆ, ಭೂಕುಸಿತ ಉಂಟಾದಾಗ ಕಾಳಜಿ ಕೇಂದ್ರಗಳಲ್ಲಿ ಹಗಲು - ರಾತ್ರಿ ಒಂದೇ ಎಂಬಂತೆ ಶ್ರಮಿಸಿದ ನಾಗರಾಜಯ್ಯ ಸರ್ ಮಾನವೀಯತೆಯ ಪ್ರತಿರೂಪ ಆಗಿದ್ದರು..
ReplyDelete