ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Wednesday, February 26, 2020

ಸಂತನೊಬ್ಬನ ಕವಿತೆಯ ಹೆಜ್ಜೆಗಳು



ಗೆಳೆಯ ಪ್ರವೀಣಕುಮಾರ ದೈವಜ್ಞಾಚಾರ್ಯ ಅವರ 'ಸಂತನೊಬ್ಬನ ಹೆಜ್ಜೆಗಳು' ಅನೇಕ ವರ್ಷಗಳ ಕಾಲ ಗರ್ಭಾವಸ್ಥೆಯಲ್ಲಿದ್ದು ಕಳೆದ ತಿಂಗಳು ಪ್ರಸವಿಸಿದೆ. ಪುಸ್ತಕ ಪ್ರಾಧಿಕಾರದಿಂದ ಧನಸಹಾಯ ಬಂದಿದ್ದರೂ ಅದನ್ನು ಹಿಂದಿರುಗಿಸಿ ತಮ್ಮ ಕವಿತೆಗಳು ಮತ್ತಷ್ಟೂ ಪಕ್ವಗೊಳ್ಳಲು ಸಂತನ ಹಾಗೆ ಕಾದವರು ಅವರು. ಕಡೆಗೂ ಅವರ ಕವಿತೆಗಳಿಗೆ ಬಿಡುಗಡೆಯ ಭಾಗ್ಯ ಸಿಕ್ಕಿದೆ. ಅದರೊಂದಿಗೆ ತಮ್ಮನ್ನು ತಾವು ಬಿಡುಗಡೆಗೊಳಿಸಿಕೊಂಡ ಕವಿಯೊಬ್ಬನು ಅನುಭವಿಸುವ ಸಣ್ಣದೊಂದು ಸುಖವನ್ನೂ ಅನುಭವಿಸಿದ್ದಾರೆ. ಈ liberation ಅವರ ಕಾವ್ಯದ ಜೀವ. ನಿರೋಗಿ ಎನ್ನುವ ಕವಿತೆಯಲ್ಲಿ ಬಿಡುಗಡೆಯ ಸ್ವರೂಪ ಹೀಗೆ ಮೂಡಿದೆ

ಒಂದು ಹೆರಿಗೆ ಕೋಣೆ
ನನ್ನ ಕಣ್ತೆರೆಸಿತು

ಶವಾಗಾರ ನನ್ನ
ಹೃದಯವನ್ನೇ ಮಾತಾಡಿಸಿತು

ಇಡೀ ಆಸ್ಪತ್ರೆ ನನಗೆ
ಬಹುದೊಡ್ಡ ಪಾಠಶಾಲೆ

ಎದೆಮುಷ್ಠಿ ಬಿಗಿಹಿಡಿದು
ಹೊರಬಂದೆ

ಹಿಡಿದ ಕಾಯಿಲೆ
ವಾಸಿಯಾಗಿತ್ತು

ನಾನೀಗ ನಿರೋಗಿ
*


ಸಂತನೊಬ್ಬನ ಧ್ಯಾನಸ್ಥ ಮನಸ್ಥಿತಿಯಲ್ಲಿಯೇ ಕವಿತೆ ಜನಿಸುವುದು. ಇಲ್ಲಿರುವ ಸಂತನ ಧ್ಯಾನ ಪಾರಮಾರ್ಥಿಕವಾದದ್ದಲ್ಲ; ವಾಸ್ತವದ್ದು. ಅದರ ಹೆಜ್ಜೆಗಳು ಅಪ್ಪ, ಊರು, ಬಿಸಿಲು,ಮಳೆ, ಪ್ರೀತಿ,ಗಾಂಧಿ,ಬಸವ,ಸಿಟ್ಟು , ಬೆಳಕು,ಬಯಲು, ಜನನ, ಮರಣಗಳನ್ನು ಕ್ರಮಿಸಿ ಸಾಗುತ್ತವೆ. ಹೆಚ್ಚೆಂದರೆ ಅವು ಆತ್ಮಗತೀಯವಾದವುಗಳು.

ಮಳೆಗಾಲದ ಒಂದು ಸಂಜೆ
ಹಾದಿಬದಿಯಿದ್ದ ನದಿಯನು
ಹೆಗಲ ಮೇಲೆ ಹೊತ್ತು ನಡೆದೆ
ನದಿಯೊಂದು ಮಗು
ನನ್ನ ತೋಳುಗಳಲ್ಲಿ
ಮತ್ತೂ ಮಲಗಿ ನಿದ್ರಿಸುವಾಗ
ಮಡಿಲಲ್ಲಿ.(ನದಿಯ ಕನಸು)

ಈ ಕಡುರಾತ್ರಿ ಯಾರಿಗೂ ತಿಳಿಯದೆ
ಧಿಮ್ಮನೆ ಧೋ ಸುರಿದ
ಮಳೆಯ ಎದೆಯೊಳಗೆ
ಅಷ್ಟು ನೋವ ಹತ್ತಿಟ್ಟವರಾರು?(ಯಾರಿದ್ದೀರಿ ನನ್ನ ಜೊತೆ?)
*
ಶಬ್ದ-ಭಾವಗಳನ್ನು ದುಂದುವೆಚ್ಚ  ಮಾಡದೆ ಬರೆಯುವ ದೈವಜ್ಞಾಚಾರ್ಯರು ಹೆಚ್ಚು ಹೆಚ್ಚು ಬರೆಯುವಂತಾಗಬೇಕು. ಅದೇ ನಮ್ಮೆಲ್ಲರ ನಿರೀಕ್ಷೆ.
*
-ಕಾಜೂರು ಸತೀಶ್

Sunday, February 23, 2020

ಮುತ್ತುಗ




ಮುತ್ತು ಬೆಳೆದಿದೆ ಮುತ್ತುಗ
ಬಿಸಿಲಿಗೆ ಮುತ್ತಿಕ್ಕಿ ತುಟಿಗೆಂಪು
*

ಬಿಸಿಲ ಒಡತಿ
ಬೆಂದಷ್ಟೂ ಕೆನ್ನೆಗೆಂಪು
*

ಅಷ್ಟು ದೂರದಲ್ಲೊಂದು ಮುತ್ತುಗ
ಕಾಡಿನ ಮೂಗುತಿಯ ಕೆಂಪು ಹರಳು
*

ಉರಿಬೇಸಿಗೆಯಲ್ಲಿ ಕಾಡು ನಕ್ಕಿತು
ಬಿಸಿಲ ಜಗಿದುಗುಳಿ ಕೇಸರಿ ನಾಲಗೆ
*

ಧರಿಸಿಕೊಳ್ಳಲೂ ಆಗದಿರುವಷ್ಟು ಬಿಸಿಲು
ಹಳದಿಗೆಂಪು ಬೆತ್ತಲ ಮೈ
*

ಕಾಡು ಎಲೆಗಳಚಿ ಕಪ್ಪಾಗುವ ಹೊತ್ತು
ಮುತ್ತುಗಕ್ಕೆ ಮೈನೆರೆದ ಪುಳಕ
*

ಬೇಯುವ ಬಿಸಿಲು
ಹಳದಿ ಕೇಸರಿ ಹಕ್ಕಿಗಳೆಲ್ಲ ಮುತ್ತುಗದ ಗೆಲ್ಲುಗಳಲ್ಲಿ.
*


ಕಾಜೂರು ಸತೀಶ್

ಅನ್ಯ



ಮುಂಜಾವ ಹಾಸಿಗೆಯಿಂದೆದ್ದು ಹೊರಗಿಣುಕಿದರೆ
ಅಂಗಳದಲ್ಲಿ ಬಿದ್ದುಕೊಂಡಿವೆ ನನ್ನ ತಲೆ ಮತ್ತು ದೇಹ!

'ಯಾರಾದರೂ ನೋಡುವ ಮೊದಲೇ
ಎಲ್ಲಾದರೂ ಮರೆಮಾಡಬೇಕು '
ಯೋಚಿಸಿದೆ ಯೋಜಿಸಿದೆ

ತಲೆ ಹಿಡಿದೆಳೆದೆ
ಕೂದಲ ಹಿಡಿದೆಳೆದೆ
ತೆರೆದಿದ್ದ ಬಾಯೊಳಗೆ ಕೈಹಾಕಿ ಎಳೆದೆ
ಅಲುಗಾಡುತ್ತಿಲ್ಲ
ಸಲಾಕೆಯಲ್ಲಿ ತಳ್ಳಿದೆ
ಅಲುಗಾಡುತ್ತಿಲ್ಲ 
ಮತ್ತೆ ಮತ್ತೆ ಶ್ರಮಿಸಿದೆ
ಬೆವರಲ್ಲೇ ಮಿಂದೆ

ತೆರೆದ ಬಾಯಿ
ಅಲುಗಾಡದ ಕಣ್ಣಗುಡ್ಡೆ 
ನನ್ನ ಅಸಹಾಯಕತೆಯ ನೋಡಿ ಕೇಕೆಹಾಕಿ ನಕ್ಕವು

'ಮುಂಡವ ಎಳೆದರೆ
ರುಂಡದ ಕೆಳಗೆ ಜೋಡಿಸಬಹುದು'
ಕೈ ಹಿಡಿದೆಳೆದೆ
ಕಾಲು ಹಿಡಿದೆಳೆದೆ
ಸೊಂಟ ಹಿಡಿದೆಳೆದೆ
ಸಲಾಕೆಯಲ್ಲಿ ನೂಕಿದೆ
ಅಲುಗಾಡುತ್ತಿಲ್ಲ 
ಮತ್ತೆಮತ್ತೆ ಶ್ರಮಿಸಿದೆ
ಬೆವರಲ್ಲೇ ಮಿಂದೆ
ಬಸವಳಿದೆ 

ರುಂಡ ಮುಂಡಗಳ ನಡುವೆ
ರುಂಡಕ್ಕೆ ಕೈಯನ್ನೂರಿ
ನಗುತ್ತಿರುವೆ ನಾನು
ಈ ಪ್ರಶಾಂತ ಪ್ರಭಾತದಲ್ಲಿ.
*


ಮಲಯಾಳಂ ಮೂಲ- ವಿಷ್ಣು ಪ್ರಸಾದ್ 



ಕನ್ನಡಕ್ಕೆ- ಕಾಜೂರು ಸತೀಶ್

Saturday, February 22, 2020

ಹುಟ್ಟುಹಬ್ಬ


ತೀರಿಹೋದ ಮಗುವಿನ ಹುಟ್ಟುಹಬ್ಬಕ್ಕೆ
ಆಕಾಶದಲ್ಲಿ ಐದು ನಕ್ಷತ್ರಗಳ ಹಚ್ಚಿಟ್ಟರು ಅಪ್ಪ ಅಮ್ಮ.
ಸುವಿಶಾಲ ಆಗಸವೇ ಕೇಕು.

ಮಗು ಐದು ದೀರ್ಘ ಉಸಿರಿನ ಮೋಡಗಳಿಂದ
ನಕ್ಷತ್ರಗಳ ಆರಿಸಿತು
ಹರಿತ ಚಾಕುವಿನಿಂದ ನೀಲಾಕಾಶದಲ್ಲೆರಡು ಗೆರೆ ಎಳೆಯಿತು.
ರಕ್ತ ಜಿನುಗಿತು ಗೆರೆಗಳಲ್ಲಿ.
ಕತ್ತರಿಸಿ ತೆಗೆದ ಆಕಾಶವನ್ನು ಬಾಯಲ್ಲಿಟ್ಟು
ಮೂವರೂ ಮೇಲಕ್ಕೆ ದಿಟ್ಟಿಸಿದರು
ಅಲ್ಲಿ ಕತ್ತರಿಸಿ ತೆಗೆದ ಭಾಗದಲ್ಲಿ
ಅನೂಹ್ಯ ಸಾವಿನ ಕತ್ತಲು
ಭೂಮಿಯಿಂದೆದ್ದ ಅವರ
ದುಃಖ-ಅಸಹಾಯಕತೆಗಳ ದೃಷ್ಟಿ ಕುಡಿದು
ಕೊತಕೊತ ಕುದಿಯುತ್ತಿದೆ.
*


ಮಲಯಾಳಂ ಮೂಲ- ವಿಷ್ಣು ಪ್ರಸಾದ್



ಕನ್ನಡಕ್ಕೆ- ಕಾಜೂರು ಸತೀಶ್

Friday, February 21, 2020

ಕಾಡುಗವಿತೆಗಳು


'ಈ ಕಾಡು ಹಾದಿಯಲ್ಲಿ
ಇರುವೆಗಳೆರಡು ಮಾತನಾಡಿಕೊಂಡಂತೆ ಕವಿತೆ' ಎಂದುಕೊಂಡೆ

ಈಗೀಗ ಕಾಡು ಕಡಿದಿದ್ದಾರೆ ಜನ
ಹಾದಿಯಲ್ಲಿ ಆನೆಗಳಿವೆ.
*

ಸದ್ದಿಲ್ಲದೆ ಕಾಡು ಕಡಿಯುವ ಯಂತ್ರಗಳಿವೆ ಈಗ;

ಥೇಟ್ ಕವಿತೆ!
*

'ಕಾಡು ಅಂದ್ರೆ ಕವಿತೆ' ಎಂದೆ

ನಡುಹಗಲೇ ಗಂಧ ಕೊಯ್ದವರು ಈಗ ಕವಿಗೋಷ್ಠಿಗಳಲ್ಲಿ.
*

ಎಲೆ ಕಳಚಿ ಬಿತ್ತು ನನ್ನ ಕಿಸೆಗೆ
ಕವಿಗೋಷ್ಠಿಗೆ ಆಹ್ವಾನ ಎಂದುಕೊಂಡರೆ..

ಅಲ್ಲ. ಕವಿತೆ
*

ಆ ಮರದ ಟೊಂಗೆ ಮುರಿದು
ಈ ಮರದ ಮೇಲೆ ಮಲಗಿದೆ
ಈ ಮರ ಎಬ್ಬಿಸಿಲ್ಲ ಇನ್ನೂ ಅದನ್ನು,
ಅದರ ಸಾವನ್ನೂ.
*

ಕೈಗಳಿರದ ಕಾಡಿಗೆ
ಹುಳು ಹುಪ್ಪಟೆಗಳಿರುವಷ್ಟು ಕಾಲ
ಬೆನ್ನು ತುರಿಕೆಯ ಹಿಂಸೆಯಿಲ್ಲ.
*

'ಕುಹೂಽಽ' ಎಂದಿತು ಒಮ್ಮೆ
'ಕುಹೂ' ಎಂದಿತು ಮತ್ತೊಮ್ಮೆ

'ತಪ್ಪು' ಎಂದಿತು ಛಂದಸ್ಸು

ಅದೇನೂ ಹಾಡುವುದನ್ನು ನಿಲ್ಲಿಸಿಲ್ಲ!
*


ಕಾಜೂರು ಸತೀಶ್

Sunday, February 16, 2020

ನನ್ನನ್ನು ಬೀಳ್ಕೊಡು..



ನನ್ನನ್ನು ಬೀಳ್ಕೊಡು ಮಗುವಿನಂಥವಳೇ
ನಿನ್ನೊಳಗಿನ ನನ್ನ ಸಣ್ಣತನಗಳ
ಪೊಟ್ಟಣದಲಿ ಕಟ್ಟಿಟ್ಟು
ಕೊಟ್ಟುಬಿಡು ನನಗೆ ನಿನ್ನ ಉಡುಗೊರೆಯಾಗಿ .

ತಪ್ಪಿರಬಹುದು ನಿನ್ನ ದಾರಿ ಕತ್ತಲು ಬೆಳೆದು
ನನ್ನ ನಿನ್ನ ನಡುವಿನ ಮಾತಲ್ಲಿ ನಗೆಯಲ್ಲಿ ಕನಸಲ್ಲಿ ಮುನಿಸಲ್ಲಿ
ನನ್ನ ದಾರಿಯ ನೆರಳ ನಿನ್ನ ಬೂಟುಗಾಲಲಿ ಅಳಿಸು
ಮತ್ತದರ ನೆನಪುಗಳನೂ..

ನನ್ನ ನಿಮಿತ್ತ ಬೆಳೆದ ನಿನ್ನ ನೋವುಗಳನ್ನು
ಬೇಯಿಸಿ ಬುತ್ತಿಯೊಳಗಿಟ್ಟು ಕಳಿಸಿಕೊಡು
ತಿನ್ನುತ್ತೇನೆ ಗಬಗಬನೆ ,ಇಂಗದ ಹಸಿವು ನನ್ನದು.


'ನೀನೆಂಬ ಏನೂ ಉಳಿದಿಲ್ಲ' ಎಂದೊಂದು ಷರಾ ಬರೆದು
ಬೀಳ್ಕೊಡು ನನ್ನನ್ನು ಮಗುವಿನಂಥವಳೇ..
*


ಕಾಜೂರು ಸತೀಶ್ 

Thursday, February 13, 2020

ಸೃಜನಶೀಲ ಅಧಿಕಾರಿಯ ಕುರಿತ ಕೆಲವು ನುಡಿಚಿತ್ರಗಳು

ಸೋಮವಾರಪೇಟೆ ತಾಲ್ಲೂಕು  ಸಾಹಿತ್ಯ ಸಮ್ಮೇಳನವು ಆಲೂರು ಸಿದ್ದಾಪುರದಲ್ಲಿ (ಜುಲೈ 26,2018)ನಡೆದಾಗ ಕವಿಗೋಷ್ಠಿಯಲ್ಲಿ ಭಾಗವಹಿಸಲು ಅಲ್ಲಿಗೆ ಹೋಗಿದ್ದೆ. ಕವಿಗೋಷ್ಠಿ ಆರಂಭವಾಗುವಾಗಲೇ ಬೆಳಕು ಕಣ್ಣುಮುಚ್ಚಿ ನಾಲಗೆ ಹೊರಚಾಚಿತ್ತು. ಆ ಅಧಿಕಾರಿಗಳು ಕುರ್ಚಿಯಿಂದೆದ್ದು ಮನೆಗೆ ತೆರಳಲು ನಾಲ್ಕೈದು ಹೆಜ್ಜೆ ಮುಂದೆ ಬಂದಿದ್ದರು. 



ನಾನು ಎದುರಿಗೆ ಸಿಕ್ಕಾಗ, "ನೀವೂ ಇದ್ದೀರಾ?" ಎಂದು ಕೇಳಿ ಮತ್ತೆ ಬಂದು ಕುರ್ಚಿಯಲ್ಲಿ ಕುಳಿತರು! ಒಮ್ಮೆ ಮಾತ್ರ ನನ್ನನ್ನು ನೋಡಿದ್ದ   ಆ ಅಧಿಕಾರಿ ಎರಡನೇ ಬಾರಿ ನನ್ನೊಡನೆ ಮಾತನಾಡಿದ್ದರು.


ಅವರೆದುರು ನನಗೆ ವೇದಿಕೆಯಲ್ಲಿ ಕುಳಿತುಕೊಳ್ಳಲು ಮುಜುಗರವಾಗುತ್ತಿತ್ತು. ಸಮಯ ಮೀರಿದ್ದರಿಂದ ಕೆಲವೇ ಮಾತುಗಳನ್ನಷ್ಟೇ ಆಡಿದ್ದೆ. ಒಂದು ಕವಿತೆಯನ್ನೂ ವಾಚಿಸಿದ್ದೆ.ಕತ್ತಲಾದರೂ ಅವರು ಅಲ್ಲೇ ಕುಳಿತು ಎಲ್ಲವನ್ನೂ ಆಲಿಸುತ್ತಿದ್ದರು.

ಮರುದಿನ ನಾನು ವಾಚಿಸಿದ ಕವಿತೆಯ ಸಾಲೊಂದನ್ನು ಹೇಳಿ, 'ಹೆಚ್ಚು ಮಾತನಾಡಬೇಕಿತ್ತು' ಎಂದರು. (ಅವರಿಗೆ ಮಾತು ಎಂದರೆ ಅಷ್ಟು ಪ್ರೀತಿ!)
*


ಮಾರ್ಚ್ 1, 2019. ಮಧ್ಯರಾತ್ರಿ ಒಂದು ಕವಿತೆಯನ್ನು ಟೈಪಿಸಿ ನಮ್ಮ ಗುಂಪಿನಲ್ಲಿ ಹಂಚಿಕೊಂಡರು. ಮರುದಿನ ಅವರೊಡನೆ ತೆರಳುವಂತೆ ಕರೆ ಮಾಡಿದ್ದರು. ದಾರಿಯಲ್ಲಿ ಆ ಕವಿತೆಯ ಬಗ್ಗೆ ಉಲ್ಲೇಖಿಸಿದರು. 'ತುಂಬಾ ಚೆನ್ನಾಗಿದೆ ಹೆಚ್ಚು ಬರೀರಿ ಸರ್' ಎಂದೆ. ಆಮೇಲೆ ಊಟಕ್ಕೆ ಅಲ್ಲಿದ್ದ ಒಂದು ಸಣ್ಣ ಹೋಟೇಲಿಗೆ ಕರೆದುಕೊಂಡು ಹೋದರು. ಅಲ್ಲಿನ BLO ಹಣಕೊಟ್ಟಾಗ 'sorry sorry please please ' ಎಂದು ಪ್ರೀತಿಯಿಂದ  ಹಿಂತಿರುಗಿಸಿದ್ದರು.

 ಹಿಂತಿರುಗುವಾಗ ಜ್ಯೂಸ್ ಕುಡಿಸಿದರು.  ಎಲ್ಲೇ ಹೋಗಲಿ ಅವರ ಕಿಸೆಯಿಂದಲೇ ಹಣ ಖರ್ಚಾಗಬೇಕು. ಹೊರಗೆ ಸಿಕ್ಕಾಗಲೆಲ್ಲ
ಮನುಷ್ಯನ ಕೆಟ್ಟ ಗುಣಗಳ ಕುರಿತು ಅವರು ಸದಾ ಬೇಸರಿಸುತ್ತಿದ್ದರು. ಒಬ್ಬರಿಂದಲೂ ಅವರು ಹಣ ಕಸಿದುಕೊಂಡವರಲ್ಲ. 
*
ನನ್ನ ಸಂದರ್ಶನವನ್ನು ಕಳಿಸಿದ್ದೆ. ಆಲಿಸಿ ಇಂಗ್ಲೀಷಿನಲ್ಲಿ ಟೈಪಿಸಿ ಪ್ರತಿಕ್ರಿಯಿಸಿದ್ದರು. ಅಷ್ಟು ಒತ್ತಡದ ವೃತ್ತಿಯಲ್ಲಿ ಅಷ್ಟು ಟೈಪಿಸುವ ಅವರ ತಾಳ್ಮೆಗೆ ಬೆರಗಾಗಿದ್ದೆ.
*


ಒಮ್ಮೆ ಒಂದು ಸಭೆಯಲ್ಲಿ(28-12-2018) ಅಷ್ಟೇನೂ ವಿಷಯ ಜ್ಞಾನವಿರದ ಒಬ್ಬರು ಮಾತನಾಡುತ್ತಿದ್ದರು. ಸ್ವಲ್ಪ ಆಲಿಸಿದ ನಂತರ ಇಷ್ಟು ವ್ಯಾಪ್ತಿಯುಳ್ಳ ವಿಷಯದ ಕುರಿತು ಹೇಳಲು ಕಷ್ಟ ಅಲ್ವಾ ಎಂದು ಹಿಂದಿನ ಮಾತುಗಳಲ್ಲಿದ್ದ ತಪ್ಪುಗಳನ್ನು ನಯವಾಗಿ ತಿದ್ದಿದ್ದರು.
*


ಹೋದಹೋದಲ್ಲೆಲ್ಲ ಅವರು ಕಸ ಹೆಕ್ಕುತ್ತಿದ್ದರು. ಗಾಂಧಿ ಎಂದರೆ ಅಷ್ಟು ಪ್ರೀತಿ ಅವರಿಗೆ .
*


ಕಡೆಗೂ ಮೈಸೂರಿಗೆ ವರ್ಗಾವಣೆಯ ಆದೇಶ ಬಂದಿತ್ತು. ಭಾನುವಾರ ಕಚೇರಿಗೆ ಬಂದು ಚಾಲನಾ ಆದೇಶವನ್ನು ತಾವೇ ಟೈಪಿಸಿದರು. ದಿನಾಂಕ 14-10-2019ಕ್ಕೆ ಹೊರಡುವಾಗ ಅವರ ಕಣ್ಣುಗಳು ದುಃಖದ ನೀರಲ್ಲಿ ಮುಳುಗಿದ್ದವು.
*
ಒಬ್ಬ ಸೃಜನಶೀಲ ಅಧಿಕಾರಿ ನಮಗೆ ದಕ್ಕಿದಾಗ ಅಲ್ಲಿ ಮೇಲಿನ  ಪ್ರಸಂಗಗಳು ಘಟಿಸುತ್ತವೆ. ಅಲ್ಲಿ ಮನುಷ್ಯನ ಘನತೆಗೆ ಬೆಲೆ ಇರುತ್ತದೆ. ಕಲೆ-ಸಾಹಿತ್ಯಗಳೆಲ್ಲಾ  ಜೀವಂತವಾಗಿ ಉಳಿಯುತ್ತವೆ. 

ಧನ್ಯವಾದಗಳು ಶ್ರೀ ಸಿ.ಆರ್.ನಾಗರಾಜಯ್ಯ ಸರ್!

*


ಕಾಜೂರು ಸತೀಶ್ 

Wednesday, February 12, 2020

ಬಾಲಗಳು


ಬಾಲಗಳು
ಮತ್ತೊಂದು ದೊಡ್ಡ ಬಾಲದಂತಿರುವ ಶರೀರದ ಹಿಂದೆ
ಮೂಸುತ್ತಾ ಸಾಗುತ್ತಿರುತ್ತವೆ
ಅವುಗಳಿಗೆ ಕಣ್ಣುಗಳಿರುವುದಿಲ್ಲ
ಮೈಯೆಲ್ಲಾ ಕಿವಿ.

ದೊಡ್ಡ ಬಾಲಕ್ಕೂ ಕಣ್ಣುಗಳಿರುವುದಿಲ್ಲ;
ಇದೆಯೆಂಬಂತೆ ಬಿಂಬಿಸಲಾಗಿರುತ್ತದೆ;
ಯಾರದೋ ಎರಡು ಕಣ್ಣುಗಳನ್ನು ಕಿತ್ತು ಅಂಟಿಸಲಾಗಿರುತ್ತದೆ.

ದೊಡ್ಡ ಬಾಲದಂತಿರುವ ಶರೀರಕ್ಕೆ ನಾಲ್ಕಕ್ಷರ ಜ್ಞಾನ
ದೊಡ್ಡ ಬಾಯಿಂದ ಬಿದ್ದ ಒಂದಕ್ಷರವೇ ಇವಕ್ಕೆ ಬ್ರಹ್ಮಾಂಡ
ಬಿದ್ದಿದ್ದೇ ತಡ ಬಾಚಿ ತಬ್ಬಿಕೊಳ್ಳುತ್ತವೆ.

ದೊಡ್ಡ ಬಾಲದ ಹಿಂದೆ ಹಿಂದೆ ಸುತ್ತುವುದೇ ಸೇವೆ.
ಅದರ ಕತೆ ಇದರ ಕತೆ
ಅದು ತಿನ್ನಿಸಿ ಇದು ತಿನ್ನಿಸಿ
ಕಟ್ಟುವುದು ಮತ್ತು ಕೆಡವುವುದು.

ಎಲ್ಲ ಕುಸಿದುಬಿದ್ದಾಗ
ದೊಡ್ಡ ಬಾಲದಂತಿರುವ ಶರೀರ 
ಮತ್ತು
ಮೂಸುತ್ತಾ ಸಾಗುವ ಬಾಲಗಳು 
ಎಷ್ಟು ಜೋರು ಸದ್ದು ಮಾಡುತ್ತವೆ!

ದೊಡ್ಡ ಬಾಲದಂತಿರುವ ಶರೀರವು ಸಿಳ್ಳೆ ಹೊಡೆದರೆ ಸಾಕು
ಇವೆಲ್ಲಾ ಕುಂಯ್ಗುಟ್ಟಿ ನುಲಿಯುವುದ ನೋಡಬೇಕು
ಪಾಪ ಗಾಂಧಿ ಅಂಬೇಡ್ಕರ್ .

ಕುರ್ಚಿ ಏರಿ ಕುಳಿತು ಬಾಲಕ್ಕೆ ಮುಳ್ಳು ಸಿಕ್ಕಿಸಿಕೊಳ್ಳುವ ಇವು
ಇಳಿಯುವಾಗ ಕುರ್ಚಿಗೇ ಅಂಟಿಸಿಟ್ಟುಬಿಡುತ್ತವೆ
ಬಾಲವಿರದ ಶರೀರಗಳೇನಾದರೂ ಏರಿ ಕುಳಿತರೆ..

ಪಾಪ!

*


ಕಾಜೂರು ಸತೀಶ್

Tuesday, February 11, 2020

ಕ್ಯಾಲೆಂಡರ್ ಮಾರಾಟಕ್ಕಿದೆ



ದಶಕದಷ್ಟು ಹಳೆಯದು
ಅರ್ಧ ಶತಮಾನದಷ್ಟು ಹಳೆಯದು
ಶತಮಾನದಷ್ಟು ಹಳೆಯದು..

ಹೇ..
ಮನೆಬಿಟ್ಟು ಹೋಗಲಿಚ್ಛಿಸದವರೇ..
ಕಳೆದ ದಿನಗಳು
ಕಳೆದ ವರ್ಷಗಳು
ಕಳೆದ ದಶಕಗಳನ್ನೆಲ್ಲ
ಹಿಂತಿರುಗಿಸುವುದೀ ಕ್ಯಾಲೆಂಡರ್
ಬನ್ನಿ ಕೊಂಡುಹೋಗಿ.

ಜನ್ಮದಿನ
ಸತ್ತದಿನ
ಶ್ರಾದ್ಧದ ದಿನ
ಮರೆತುಹೋದ ದಿನ

ಅಮ್ಮ
ಅಪ್ಪ
ಹಠಾತ್ತನೆ ತೀರಿಕೊಂಡ ನಾಯಕರು

ಜಾತ್ರೆ
ಉರೂಸ್
ಸ್ವಾತಂತ್ರ್ಯ ದಿನ

ಯಾವುದೋ ಒತ್ತಡದಲ್ಲಿ ನೀವು ಮರೆತದ್ದು
ನಿಮ್ಮ ಮಕ್ಕಳಿಗೆ ತಿಳಿಯಲಿ

ಹಿಂದೆಯೊಬ್ಬ
ಅಪ್ಪನಿದ್ದ
ಹಿಂದೆಯೊಬ್ಬಳು
ಅಮ್ಮ ಇದ್ದಳು
ದೇಶವಿತ್ತು
ಸ್ವಾತಂತ್ರ್ಯ ದಿನವಿತ್ತು.

ಒಂದೇ ಒಂದು ಪಂಚೆಯಲ್ಲಿ ಬದುಕು ಕಳೆದ ನಾಯಕರು
ಬ್ಯಾಂಕ್ ಸಾಲ ಮಾಡಿ ತೀರಿಸಲಾಗದೆ ತೀರಿಕೊಂಡ ಪ್ರಧಾನಿ
ಕಡಲ ಕುದಿಸಿ ಉಪ್ಪನ್ನೇ ಎದೆಗಿಳಿಸಿಕೊಂಡವರು

ಕ್ಯಾಲೆಂಡರ್
ಎಲ್ಲ ಭಾಗಗಳಲ್ಲಿಯೂ
ಸಾಕ್ಷಿಯಾಗುತ್ತಿದೆ
ಮೌನದಲ್ಲೇ ಮಾತಿಗಿಳಿಯುತ್ತಿದೆ

ಆಗಸ್ಟ್ 15
ಜನವರಿ 26
ಮತ್ತು
ಮತ್ತೆಮತ್ತೆ ಜನವರಿ 30.
*


ಮಲಯಾಳಂ ಮೂಲ- ಟಿ ಸಿ ವಿ ಸತೀಶನ್


ಕನ್ನಡಕ್ಕೆ- ಕಾಜೂರು ಸತೀಶ್