ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Tuesday, April 23, 2019

ರಾತ್ರಿ ನಡಿಗೆ

ರಾತ್ರಿಯಲ್ಲಿ ನಡೆಯುವುದೆಂದರೆ ನನಗೆ ಎಲ್ಲಿಲ್ಲದ ಪ್ರೀತಿ. ಅದು ನಿರ್ಜನ ರಸ್ತೆಯಾಗಿರಬೇಕು, ಅಲ್ಲಲ್ಲಿ ಬೀದಿ ದೀಪಗಳಿರಬೇಕು. ಅಷ್ಟಿದ್ದರೆ ಸಾಕು - ಮೌನ ಮತ್ತು ಅಧ್ಯಾತ್ಮದ ಪರಮಸುಖ ಅಲ್ಲಿಂದ ಪ್ರಾಪ್ತಿಯಾಗುತ್ತದೆ.

ಬಾಲ್ಯದಲ್ಲಿ ನನಗೆ ಕತ್ತಲೆಂದರೆ ಭಯ ಅಷ್ಟಿಷ್ಟಲ್ಲ. ಮನೆಯಿಂದ ಹೊರಹೋಗುವುದಿರಲಿ, ಕೋಣೆಯಿಂದ ಕೋಣೆಗೆ ತೆರಳಲೂ ಒಬ್ಬರ ಸಹಾಯ ಬೇಕಿತ್ತು. ಎಲ್ಲಿಯಾದರೂ ಕೊಲೆಯಾದರೆ ಅಥವಾ ದೆವ್ವ ಪಿಶಾಚಿಗಳ ಕಥೆ ಕೇಳಿದರೆ ರಾತ್ರಿಯಂತಹ ನರಕ ಮತ್ತೊಂದಿಲ್ಲ!

ನಾನು ಹೈಸ್ಕೂಲಿನಲ್ಲಿದ್ದಾಗ ಮೊದಲ ಬಾರಿಗೆ ಮಡಿಕೇರಿಗೆ ಭಾಷಣ ಸ್ಪರ್ಧೆಗೆ ಭಾಗವಹಿಸಲೆಂದು ಹೋಗಿದ್ದೆ. ಹಿಂತಿರುಗಿ ಬರುವಾಗ ಕತ್ತಲಾಗಿತ್ತು. ಡಿಸೆಂಬರ್ ತಿಂಗಳು; ಸುಡುವ ಚಳಿ! 'ಇಂಥಾ' ಸ್ಥಳದಲ್ಲಿ ಇಳಿಸಿಬಿಡಿ ಎಂದು ಕ್ಲೀನರಿಗೆ ಮೊದಲೇ ಹೇಳಿದ್ದೆ. ಎರಡು ಕಿ.ಮೀ. ಹಿಂದೆಯೇ ನನ್ನನ್ನು ಇಳಿಸಿಬಿಟ್ಟಿದ್ದ! ಕರೆಂಟ್ ಇಲ್ಲದ್ದಕ್ಕೂ, ನಾನು ಅಲ್ಲಿ ಇಳಿದದ್ದಕ್ಕೂ ಸರಿಹೋಯಿತು! ಅಲ್ಲಿಂದ ಮನೆಗೆ ನಾಲ್ಕೂವರೆ ಕಿ.ಮೀ. ಕ್ರಮಿಸಬೇಕಿತ್ತು. ಬಿರಬಿರನೆ ಹೆಜ್ಜೆಹಾಕಿದೆ.

ಮನೆ ತಲುಪುವ ಧಾವಂತದಲ್ಲಿದ್ದ ನನಗೆ 'ಆ ಜಾಗ'ಕ್ಕೆ ಬಂದಾಗ ಆ ಚಳಿಯಲ್ಲೂ ಬೆವರು ಉಕ್ಕತೊಡಗಿತು! ನಮ್ಮೂರಿನ ಪ್ರಭಾವಿಯೊಬ್ಬರ ಮನೆಯಲ್ಲಿ ಮನೆಗೆಲಸಕ್ಕಿದ್ದ ಹೆಣ್ಣುಮಗಳನ್ನು ಕೊಲೆಗೈದು ಎಸೆದಿದ್ದ ಜಾಗವದು(ಅದು ಸಹಜ ಸಾವು ಎಂದಾದದ್ದು ಬೇರೆ ವಿಷಯ!). ಅದು ನೆನಪಾಗಿ ಗಾಬರಿಯಾಗಿತ್ತು.
*

 ಕತ್ತಲ ನಡಿಗೆಯ ರುಚಿ ನನಗೆ ಸಿಕ್ಕಿದ್ದು ಪಿಯುಸಿ ನಂತರದ ದಿನಗಳಲ್ಲಿ . ಸಾಹಿತ್ಯದ ಹುಚ್ಚುಹಿಡಿಸಿಕೊಂಡಿದ್ದ ಕಾಲ; ಅಸಾಮಾನ್ಯ ಆಲೋಚನೆಗಳು ಪುಟಿದೇಳುತ್ತಿದ್ದ ಕಾಲ. ನಿತ್ಯ ಮನೆ ತಲುಪುವಾಗ ಕತ್ತಲಾಗುತ್ತಿದ್ದರಿಂದ ನಡಿಗೆಯ ದಾರಿ ಹೆಚ್ಚು ಆಪ್ಯಾಯಮಾನವಾಗಿರುತ್ತಿತ್ತು. ಅವು ಧ್ಯಾನಸ್ಥ ಸಮಯವಾಗಿ ಬಳಕೆಯಾಗುತ್ತಿತ್ತು.
*
ಕತ್ತಲೆಯ ಭಯ ನನ್ನನ್ನು ಪೂರ್ಣವಾಗಿ ತೊರೆದುಹೋದದ್ದು ನಾನು ಕರಿಕೆ ತಲುಪಿದ ಮೇಲೆ. ಕೆಲವೊಮ್ಮೆ ಗೆಳೆಯರೊಡನೆ ಮಾತನಾಡುತ್ತಾ, ಚರ್ಚಿಸುತ್ತಾ ಸಮಯ ರಾತ್ರಿ ಹತ್ತು ಕಳೆಯುತ್ತಿತ್ತು. ಆ ರಾತ್ರಿಯಲ್ಲಿ ಆ ನಿರ್ಜನ ದಾರಿಯಲ್ಲಿ ಒಬ್ಬನೇ ನಡೆದುಹೋಗುವಂತಹ ಅನುಭವ ಚೇತೋಹಾರಿ. ವಾಹನದಲ್ಲಿ ಎದುರಿಗೆ ಬಂದವರು ನನ್ನನ್ನು ನೋಡಿ ಹೆದರಿಕೊಂಡದ್ದೂ ಇದೆ! ಯಾರೊಂದಿಗೂ ಹೆಚ್ಚು ಬೆರೆಯದ ವ್ಯಕ್ತಿಯೊಬ್ಬರು ಒಮ್ಮೆ ನನ್ನನ್ನು ಕರೆದು ' ಅವತ್ತು ರಾತ್ರಿ ನಡ್ಕೊಂಡು ಹೋಗ್ತಿದ್ದವ್ರು ನೀವೇ ಅಲ್ವಾ' ಎನ್ನುತ್ತಾ ತಮ್ಮನ್ನು ಪರಿಚಯಿಸಿಕೊಂಡರು. ಆಮೇಲೆ 'ಟ್ರೆಕ್ಕಿಂಗ್ ಹೋಗುವಾಗ ನಾನೂ ಬರ್ತೇನೆ, ಕರೀರಿ' ಎನ್ನುವಷ್ಟು ಆತ್ಮೀಯರಾಗಿಬಿಟ್ಟರು.
*
ಕತ್ತಲೆಯಲ್ಲಿ ಪಿಶಾಚಿಗಳು ಬರುತ್ತವೆ ಎಂಬ ನನ್ನ ಕಲ್ಪನೆಯು ತಳಸೇರಿದ್ದು- 'ಇದ್ದರೂ ನನ್ನಷ್ಟು ದೊಡ್ಡ ಪಿಶಾಚಿ ಈ ಭೂಮಿಯಲ್ಲಿ ಇರಲಿಕ್ಕಿಲ್ಲ' ಎಂಬ  ನಿಲುವಿನಿಂದ!
*

ಕಾಜೂರು ಸತೀಶ್

No comments:

Post a Comment