ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Monday, April 29, 2019

ದಿನಚರಿ

ನನಗೆ ಈ ವಿದ್ಯುತ್ತಿಲ್ಲದ ರಾತ್ರಿಗಳು ಅಂದ್ರೆ ತುಂಬಾ ಇಷ್ಟ. ಪಡ್ಡೆ ಐಕಳ ಆರ್ಭಟವಿರದ ಆ ಕ್ಷಣಗಳು ದಿವ್ಯ ಮೌನವನ್ನು ಹೆರತೊಡಗುತ್ತವೆ. ನಿಜವಾದ ಚಿಂತನೆಗಳು ಮೊಳೆಯುವ, ಬೆಳೆಯುವ ಸುಸಮಯವದು. 

*

ನಿತ್ಯದ ಗಾಯಗಳು ಮತ್ತು ಉಳಿಪೆಟ್ಟುಗಳಷ್ಟೇ ನಮ್ಮನ್ನು ಹೊಸ ಆಕೃತಿಯಲ್ಲಿ  ಜಗತ್ತಿಗೆ ತೋರಿಸುತ್ತವೆ. ನಮ್ಮನ್ನು ಬೆಳೆಸುವ ಪರಮ ಗುರುಗಳವು.

*

"ಆತ/ಆಕೆ ಕೆಟ್ಟವನು/ಳು"


ಹೀಗೆ  ಗುರುತಿಸಿಕೊಳ್ಳುವ ಜನಗಳ ಜೊತೆಗೆ ನಾನು ಸ್ನೇಹವನ್ನು ಬಯಸುತ್ತೇನೆ. ಆಮೇಲೆ ನನಗನ್ನಿಸುತ್ತದೆ: 'ಈ ಜಗತ್ತಿನಲ್ಲಿ ಕೆಟ್ಟದ್ದು ಅನ್ನೋದು  ಏನೂ ಇರಲಾರದು!'

*

ಕಾಜೂರು ಸತೀಶ್

Thursday, April 25, 2019

ಆತ್ಮದಂಥವಳಿಗೆ


ಆತ್ಮದ ಮೈಪಡೆದವಳೇ,


ಎಲ್ಲೋ ಹೇಗೋ ಇದ್ದೆ ನಾನು-  ಮನೆಯಂಗಳದಲ್ಲಿ ಬಿದ್ದ ಎಲೆಯೊಂದರಂತೆ. ಗುಡಿಸಲಿಕ್ಕೆಂದು ಪೊರಕೆ ಹಿಡಿದು ಬಂದ ನೀನು ಎಲೆಯಲ್ಲೇನೋ ಚಿತ್ರ ಕಂಡಂತೆ  ಎತ್ತಿ ಮುಡಿಸಿಕೊಂಡೆ. ಹೀಗೆಲ್ಲ ಆಗುತ್ತದೆಂದು ನನಗೂ ತಿಳಿದಿರಲಿಲ್ಲ. ಮರ ಸತ್ತರೂ ಎಷ್ಟೋ ಕಾಲ ಬದುಕಿರುವಂತೆಯೇ ಎದೆಸೆಟೆಸಿ ನಿಂತೇ ಇರುತ್ತದಲ್ಲಾ ಹಕ್ಕಿಗಳಿಗೂ ತಿಳಿಯದಂತೆ - ಹಾಗೆ!


ಮೊದಲ ಸಲ ಗುಂಡಮ್ಮನ ಹಾಗೆ ಬಂದು ಪರಿಚಯ ಹೇಳಿ ಒಂದು ಬಿಳಿ ಹಾಳೆಯನ್ನು ಕೊಟ್ಟು ಹೋದೆ. ಬೂದುಬಣ್ಣದ ಸೀರೆ. ಮೂಗಿಗೆ ಕಿವಿಯ ಓಲೆಯಂಥಾ ಅದೇನೋ ಒಂದು!

 ಮತ್ತೊಮ್ಮೆ ಇನ್ನೊಂದಷ್ಟು ಹಾಳೆಗಳನ್ನು ಸಂಗ್ರಹಿಸಲು ಬರುವೆನೆಂದು ಮೇಘಸಂದೇಶ ಕಳಿಸಿದ್ದೆ. ಬಂದು ಒಂದು ತಿಳಿಯಾದ ನಗೆನಕ್ಕು ಅವುಗಳನ್ನು ಸಂಗ್ರಹಿಸಿಕೊಂಡು ಹೊರಟುಹೋಗಿದ್ದೆ. 'ಜಗತ್ತು ಶುಭ್ರವಾಗಿದೆ' ಎಂದು ನನ್ನೊಳಗಿನ ಕಾರ್ಮಿಕ ಅವತ್ತು ಕೂಗಿಹೇಳಿದ್ದ!


 ಆ ದಿನದ 'ನೀಲಿ'ಯಲ್ಲಿ ಅದಾವ ಅನಂತತೆಯನ್ನು ಕಂಡುಕೊಂಡೆಯೋ ತಿಳಿಯಲಿಲ್ಲ!


ಯಾವುದನ್ನೂ ಮೈ-ಮನಸ್ಸಿಗೆ ಹಚ್ಚಿಕೊಳ್ಳದೆ ನಿರುಮ್ಮಳವಾಗಿ ಹರಿಯುವ ಅಥವಾ ನಿಲ್ಲುವ ನನ್ನ ನೀರಿನಂಥಾ ಒಡಲಿನ ನಡುವಿಗೆ ನಿನ್ನ ಮುಗ್ಧ ನಿಶ್ವಾಸದಲ್ಲಿ ಅಲೆಗಳ ಸೃಷ್ಟಿಸಿದೆ. ಬೇಡಬೇಡವೆಂದರೂ ಅದೇನೇನೇನೋ ಮೊಗೆಮೊಗೆದು ಕೊಟ್ಟೆ. ತೊಟ್ಟಿಲ ಮಗುವಿನಂತೆ ಹಠಹಿಡಿದೆ, ಫಳಾರನೆ ನಕ್ಕೆ. ಒಂದು ಮಿಠಾಯಿಗೂ ಭೂಮ್ಯಾಕಾಶಗಳ ಅಳೆದು ತೂಗುವವನನ್ನು ಸ್ವೀಕರಿಸುವಷ್ಟರ ಮಟ್ಟಿಗೆ ಕುಟ್ಟಿ, ತಟ್ಟಿ, ಹದಮಾಡಿದೆ!


ಸಂಗೀತವೇ,

 ಇಲ್ಲಿ ಯಾವುದೂ ಶಾಶ್ವತವಲ್ಲ; ಯಾವುದೂ! ಈ ಕ್ಷಣಗಳಷ್ಟೇ ಮುಖ್ಯ;ಪವಿತ್ರ. ಹಾಗೆ ನೋಡಿದರೆ ಈ 'ವರ್ತಮಾನ' ಅನ್ನೋದೇ ಇರುವುದಿಲ್ಲ ನೋಡು! ಈಗ ಉಸುರುತ್ತಿರುವ ಈ ದನಿಗಳೆಲ್ಲ ಉಸುರಿದ ಮರುಕ್ಷಣವೇ 'ಭೂತ'ಕ್ಕೆ ಜಾರಿರುತ್ತವೆ. ಈ ಜಗತ್ತು ಭೂತ-ಭವಿಷ್ಯಗಳ ತಿರುಗುಗೂಟಕ್ಕೆ ಸಿಲುಕಿ ನಿನ್ನ ಎರಡೂಕಾಲು ಇಂಚಿನ ಬಳೆಯ ಹಾಗೆ ನಮ್ಮನ್ನೆಲ್ಲ ಗಿರಗಿರ ಸುತ್ತಿಸುತ್ತದೆ! ಯಾರದೋ ಪಾಲಾಗಲಿರುವ ಅಂಗಡಿಯ ಬಳೆ , ಅಂಗಿ, ಪ್ಯಾಂಟು, ಬೆಲ್ಟು, ಇತ್ಯಾದಿ ಇತ್ಯಾದಿಗಳೆಲ್ಲಾ ಎಷ್ಟೆಷ್ಟೋ ಕನಸ್ಸುಗಳನ್ನು ಕಡಪಡೆದು, ಹೆತ್ತು ಮೈಪಡೆದಿರುತ್ತವೆ!

(ಗಾಬರಿಯಾಗ್ಬೇಡ್ರೀ, ನಂಗೆ ಫಿಲಾಸಫಿ ಅಂದ್ರೆ ಇಷ್ಟ! 🤣)


ಇರಲಿ. ಮುರಿದು ಕಟ್ಟಬಹುದಾದ ಈ ಸಾಲುಗಳಂಥಲ್ಲ ಬದುಕು. ನೀ ಹೆತ್ತ ಮಗುವಿನಂಥದ್ದೇ ಮುನಿಸು,ಮಗುವಿನಾಟ ಹೀಗೇ ಮುಂದುವರಿಯಲಿ. ನಾನು ಕಾಲವಾಗುವ ಮುನ್ನವಾದರೂ ಈ ಜಗತ್ತು ನಿನ್ನ ಬಣ್ಣಬಣ್ಣದ ಕನಸಿನ ಕೈಬಳೆಗಳ ತೊಟ್ಟು ಆಟವಾಡಿಕೊಂಡಿರಲಿ.  ನನ್ನಿಂದ ನಿನಗೆ ತುಸುವಾದರೂ ಒಳಿತಾಗದಿದ್ದಲ್ಲಿ ನಿನ್ನ ಮುನಿಸು ನನ್ನನ್ನು ಈ ಕ್ಷಣವೇ ಸುಟ್ಟುಬಿಡಲಿ!


ನಿರಾಕಾರಿ
(ಕಾಜೂರು ಸತೀಶ್ )

Tuesday, April 23, 2019

ರಾತ್ರಿ ನಡಿಗೆ

ರಾತ್ರಿಯಲ್ಲಿ ನಡೆಯುವುದೆಂದರೆ ನನಗೆ ಎಲ್ಲಿಲ್ಲದ ಪ್ರೀತಿ. ಅದು ನಿರ್ಜನ ರಸ್ತೆಯಾಗಿರಬೇಕು, ಅಲ್ಲಲ್ಲಿ ಬೀದಿ ದೀಪಗಳಿರಬೇಕು. ಅಷ್ಟಿದ್ದರೆ ಸಾಕು - ಮೌನ ಮತ್ತು ಅಧ್ಯಾತ್ಮದ ಪರಮಸುಖ ಅಲ್ಲಿಂದ ಪ್ರಾಪ್ತಿಯಾಗುತ್ತದೆ.

ಬಾಲ್ಯದಲ್ಲಿ ನನಗೆ ಕತ್ತಲೆಂದರೆ ಭಯ ಅಷ್ಟಿಷ್ಟಲ್ಲ. ಮನೆಯಿಂದ ಹೊರಹೋಗುವುದಿರಲಿ, ಕೋಣೆಯಿಂದ ಕೋಣೆಗೆ ತೆರಳಲೂ ಒಬ್ಬರ ಸಹಾಯ ಬೇಕಿತ್ತು. ಎಲ್ಲಿಯಾದರೂ ಕೊಲೆಯಾದರೆ ಅಥವಾ ದೆವ್ವ ಪಿಶಾಚಿಗಳ ಕಥೆ ಕೇಳಿದರೆ ರಾತ್ರಿಯಂತಹ ನರಕ ಮತ್ತೊಂದಿಲ್ಲ!

ನಾನು ಹೈಸ್ಕೂಲಿನಲ್ಲಿದ್ದಾಗ ಮೊದಲ ಬಾರಿಗೆ ಮಡಿಕೇರಿಗೆ ಭಾಷಣ ಸ್ಪರ್ಧೆಗೆ ಭಾಗವಹಿಸಲೆಂದು ಹೋಗಿದ್ದೆ. ಹಿಂತಿರುಗಿ ಬರುವಾಗ ಕತ್ತಲಾಗಿತ್ತು. ಡಿಸೆಂಬರ್ ತಿಂಗಳು; ಸುಡುವ ಚಳಿ! 'ಇಂಥಾ' ಸ್ಥಳದಲ್ಲಿ ಇಳಿಸಿಬಿಡಿ ಎಂದು ಕ್ಲೀನರಿಗೆ ಮೊದಲೇ ಹೇಳಿದ್ದೆ. ಎರಡು ಕಿ.ಮೀ. ಹಿಂದೆಯೇ ನನ್ನನ್ನು ಇಳಿಸಿಬಿಟ್ಟಿದ್ದ! ಕರೆಂಟ್ ಇಲ್ಲದ್ದಕ್ಕೂ, ನಾನು ಅಲ್ಲಿ ಇಳಿದದ್ದಕ್ಕೂ ಸರಿಹೋಯಿತು! ಅಲ್ಲಿಂದ ಮನೆಗೆ ನಾಲ್ಕೂವರೆ ಕಿ.ಮೀ. ಕ್ರಮಿಸಬೇಕಿತ್ತು. ಬಿರಬಿರನೆ ಹೆಜ್ಜೆಹಾಕಿದೆ.

ಮನೆ ತಲುಪುವ ಧಾವಂತದಲ್ಲಿದ್ದ ನನಗೆ 'ಆ ಜಾಗ'ಕ್ಕೆ ಬಂದಾಗ ಆ ಚಳಿಯಲ್ಲೂ ಬೆವರು ಉಕ್ಕತೊಡಗಿತು! ನಮ್ಮೂರಿನ ಪ್ರಭಾವಿಯೊಬ್ಬರ ಮನೆಯಲ್ಲಿ ಮನೆಗೆಲಸಕ್ಕಿದ್ದ ಹೆಣ್ಣುಮಗಳನ್ನು ಕೊಲೆಗೈದು ಎಸೆದಿದ್ದ ಜಾಗವದು(ಅದು ಸಹಜ ಸಾವು ಎಂದಾದದ್ದು ಬೇರೆ ವಿಷಯ!). ಅದು ನೆನಪಾಗಿ ಗಾಬರಿಯಾಗಿತ್ತು.
*

 ಕತ್ತಲ ನಡಿಗೆಯ ರುಚಿ ನನಗೆ ಸಿಕ್ಕಿದ್ದು ಪಿಯುಸಿ ನಂತರದ ದಿನಗಳಲ್ಲಿ . ಸಾಹಿತ್ಯದ ಹುಚ್ಚುಹಿಡಿಸಿಕೊಂಡಿದ್ದ ಕಾಲ; ಅಸಾಮಾನ್ಯ ಆಲೋಚನೆಗಳು ಪುಟಿದೇಳುತ್ತಿದ್ದ ಕಾಲ. ನಿತ್ಯ ಮನೆ ತಲುಪುವಾಗ ಕತ್ತಲಾಗುತ್ತಿದ್ದರಿಂದ ನಡಿಗೆಯ ದಾರಿ ಹೆಚ್ಚು ಆಪ್ಯಾಯಮಾನವಾಗಿರುತ್ತಿತ್ತು. ಅವು ಧ್ಯಾನಸ್ಥ ಸಮಯವಾಗಿ ಬಳಕೆಯಾಗುತ್ತಿತ್ತು.
*
ಕತ್ತಲೆಯ ಭಯ ನನ್ನನ್ನು ಪೂರ್ಣವಾಗಿ ತೊರೆದುಹೋದದ್ದು ನಾನು ಕರಿಕೆ ತಲುಪಿದ ಮೇಲೆ. ಕೆಲವೊಮ್ಮೆ ಗೆಳೆಯರೊಡನೆ ಮಾತನಾಡುತ್ತಾ, ಚರ್ಚಿಸುತ್ತಾ ಸಮಯ ರಾತ್ರಿ ಹತ್ತು ಕಳೆಯುತ್ತಿತ್ತು. ಆ ರಾತ್ರಿಯಲ್ಲಿ ಆ ನಿರ್ಜನ ದಾರಿಯಲ್ಲಿ ಒಬ್ಬನೇ ನಡೆದುಹೋಗುವಂತಹ ಅನುಭವ ಚೇತೋಹಾರಿ. ವಾಹನದಲ್ಲಿ ಎದುರಿಗೆ ಬಂದವರು ನನ್ನನ್ನು ನೋಡಿ ಹೆದರಿಕೊಂಡದ್ದೂ ಇದೆ! ಯಾರೊಂದಿಗೂ ಹೆಚ್ಚು ಬೆರೆಯದ ವ್ಯಕ್ತಿಯೊಬ್ಬರು ಒಮ್ಮೆ ನನ್ನನ್ನು ಕರೆದು ' ಅವತ್ತು ರಾತ್ರಿ ನಡ್ಕೊಂಡು ಹೋಗ್ತಿದ್ದವ್ರು ನೀವೇ ಅಲ್ವಾ' ಎನ್ನುತ್ತಾ ತಮ್ಮನ್ನು ಪರಿಚಯಿಸಿಕೊಂಡರು. ಆಮೇಲೆ 'ಟ್ರೆಕ್ಕಿಂಗ್ ಹೋಗುವಾಗ ನಾನೂ ಬರ್ತೇನೆ, ಕರೀರಿ' ಎನ್ನುವಷ್ಟು ಆತ್ಮೀಯರಾಗಿಬಿಟ್ಟರು.
*
ಕತ್ತಲೆಯಲ್ಲಿ ಪಿಶಾಚಿಗಳು ಬರುತ್ತವೆ ಎಂಬ ನನ್ನ ಕಲ್ಪನೆಯು ತಳಸೇರಿದ್ದು- 'ಇದ್ದರೂ ನನ್ನಷ್ಟು ದೊಡ್ಡ ಪಿಶಾಚಿ ಈ ಭೂಮಿಯಲ್ಲಿ ಇರಲಿಕ್ಕಿಲ್ಲ' ಎಂಬ  ನಿಲುವಿನಿಂದ!
*

ಕಾಜೂರು ಸತೀಶ್

ಕರಿಕೆಯ ಉರಗಲೋಕದ ಹೆಜ್ಜೆಗುರುತುಗಳು

'ನೀನು ಹೋಗುತ್ತಿರುವ ಊರಲ್ಲಿ ವಿಷಕಾರಿ ಹಾವುಗಳಿವೆ ಅಂತ ಕೇಳಿದ್ದೆ, ಜೋಪಾನ' ಎಂದಿದ್ದರು ಹಲವರು. ಕರಿಕೆಗೆ ಹೋಗಿ 8 ತಿಂಗಳು ಕಳೆದಿದ್ದರೂ ಒಂದೇ ಒಂದು ಹಾವು ಕೂಡ ಕಣ್ಣಿಗೆ ಬಿದ್ದಿರಲಿಲ್ಲ. 'ಹಾವಂತೆ ಹಾವು'ಎಂದು ನಾನು ಗೊಣಗಿಕೊಂಡಿದ್ದೆ.

ಮಾರ್ಚ್ 10ರಂದು ಪಕ್ಕದ ಮನೆಯವರು 'ಸಾರ್ ಒಂದು ದೊ...ಡ್ಡ ಹಾವಿದೆಯಂತೆ, ಮಗ್ಳು ನೋಡಿದ್ಳಂತೆ' ಎಂದು ವರದಿ ಒಪ್ಪಿಸಿದರು. 'ಕೇರೆ ಹಾವಿರ್ಬಹುದು, ಅದೂ ದೊಡ್ದಾಗಿರುತ್ತೆ', ಎಂದು ಹೇಳಿ ಹೊರಬಂದೆ. ನಮ್ಮ ಪಕ್ಕದ ಗಿಡಗಂಟಿಗಳು ಅಲುಗಾಡತೊಡಗಿದವು. ಮೈ ಜುಮ್ಮೆಂದಿತು - 'ಕಾಳಿಂಗ'! ಅದನ್ನು ನೋಡಿದ್ದೇ ಗೆಳೆಯ ದೇವರಾಜ ಮೇಷ್ಟ್ರ ಬಾಯಿಂದ 'ಹೆಬ್ಬಾವು' ಎಂಬ ಉದ್ಘಾರ ಬಂದಿತು!

ಅದುವರೆಗೆ ಮೃಗಾಲಯದಲ್ಲಷ್ಟೇ ನೋಡಿದ್ದ ಕಾಳಿಂಗವನ್ನು ಅಷ್ಟು ಹತ್ತಿರದಲ್ಲಿ ನೋಡುವ ಭಾಗ್ಯ ಒದಗಿ ಬಂದಿತು. ಸ್ನೇಕ್ ಸತೀಶ್(ನಾನಲ್ಲ!) ಅವರಿಗೆ ಕರೆಮಾಡಲು, ಅವರು ತಮ್ಮ ಸಂಗಡಿಗರನ್ನು ಕಳಿಸಿಕೊಟ್ಟರು. ಅವರು ತಲುಪುವಾಗಲೇ ರಾತ್ರಿಯಾಗಿದ್ದರಿಂದ ಹಾವು ನಾಪತ್ತೆಯಾಗಿತ್ತು.
*
ಹೀಗೆ ಕರಿಕೆಯ ಹಾವಿನ ಲೋಕಕ್ಕೆ ಆ ಹಾವು ಬಂದು ಸ್ವಾಗತ ಭಾಷಣ ಮಾಡಿ ಹೋಗಿತ್ತು. ಆಮೇಲೆ ನಾನು ನೋಡಿದ ಹಾವುಗಳಿಗೂ, ಅವು ನನ್ನನ್ನು - ನಾನು ಅವುಗಳನ್ನೂ ಕಾಡಿಸಿದ, ತಮಾಷೆ ನೋಡಿದ ಪ್ರಸಂಗಗಳಿಗೆ ನನ್ನ ಬಳಿ ಲೆಕ್ಕವಿಲ್ಲ!
*
ಒಮ್ಮೆ ಕನ್ನಡಿಯಲ್ಲಿ ಮುಖನೋಡಿಕೊಳ್ಳುತ್ತಿದ್ದೆ. ತಲೆಯ ಇಷ್ಟೇ ಮೇಲೆ ಹಾವೊಂದು ತೂಗಾಡುತ್ತಿರುವುದನ್ನು ಕನ್ನಡಿಯು ಹೇಳಿತು. ಮೆಲ್ಲಗೆ ಹೊರಬಂದು ಒಂದು ಉದ್ದನೆಯ ಕೋಲಿನಲ್ಲಿ ಅದನ್ನು ಮೇಲಿಂದ ಕೆಳಗೆ ಇಳಿಸಿದೆ. ಅದರ ಸಿಟ್ಟು ಎಲ್ಲಿತ್ತೋ ಏನೋ- ಕೋಲಿಗೆ ಅದರ ಹಲ್ಲು ಮುರಿದುಹೋಗುವಂತೆ ಕುಟುಕಲು ಆರಂಭಿಸಿತು. ಹೇಗೆ ಎಳೆದರೂ ಅದಕ್ಕೆ ಹೊರಗೆ ಬರಲು ಮನಸ್ಸಾಗಲಿಲ್ಲ! ನನ್ನ ಸರ್ಕಸ್ಸನ್ನು ನೋಡಿದ ನೆರೆಮನೆಯವರು ಒಂದು ತೆಳ್ಳನೆಯ ಕೋಲು ತಂದು ಬಡಿದು ಕೊಂದೇಬಿಟ್ಟರು!
*
ನಮ್ಮ ಕಿಟಕಿ ಬಾಗಿಲುಗಳು ಯಾವಾಗಲೂ ಮುಚ್ಚಿದ ಸ್ಥಿತಿಯಲ್ಲೇ ಇರುತ್ತಿದ್ದವು. ತೆರೆದದ್ದೇ ತಡ 'ಏನು ಮಾಡುತ್ತಿದ್ದೀಯ ಸತೀಶಾ' ಎಂಬಂತೆ ಇಣುಕಿ ನೋಡಲು ಹಾವುಗಳು ಬಂದೇ ಬರುತ್ತಿದ್ದವು.
*
ನಮ್ಮ ಬಾತ್ರೂಮಿನ ಒಳಕ್ಕೆ ವಾರಕ್ಕೆ ಕನಿಷ್ಟ ಒಂದು ಹಾವಾದರೂ ಬಂದು ಟೆಂಟು ಹಾಕಿರುತ್ತಿತ್ತು. ನಾನದಕ್ಕೆ ನೀರು ಸುರಿದು ಸ್ನಾನಮಾಡಿಸುತ್ತಿದ್ದೆ! ಕೆಲವು ಹಾವುಗಳು ಎಷ್ಟು ನೀರು ಸುರಿದರೂ ಅಲ್ಲಿಂದ ಕದಲುತ್ತಿರಲಿಲ್ಲ.ಹಾಗೆ ಬರುತ್ತಿದ್ದ ಹಾವುಗಳು ಬಹುತೇಕ ಸೋಮಾರಿಗಳು! ಅವು ದಿನವಿಡೀ ಅಲ್ಲೇ ಇದ್ದು ನಂತರ ಹೊರಟುಹೋಗುತ್ತಿದ್ದವು.
*
ಒಮ್ಮೆ ಬೆಳಿಗ್ಗೆ ಎಂದಿನಂತೆ ರನ್ನಿಂಗ್ ಮಾಡುತ್ತಿದ್ದಾಗ ರಸ್ತೆಯಲ್ಲಿದ್ದ ಹಾವು ಹೆಡೆಯೆತ್ತಿ ನಿಲ್ಲಲು , ಅದರ ಮೇಲೆ ಚಂಗನೆ ಜಿಗಿದು ಓಡಿಬಿಟ್ಟಿದ್ದೆ! ಇನ್ನೊಮ್ಮೆ, ಸುರುಳಿಸುತ್ತಿ ಮಲಗಿದ್ದ ಹಾವಿನ ಮೇಲೆ ಕಾಲಿಟ್ಟಾಗ ರಬ್ಬರಿನಂತಹ ವಸ್ತುವು ತಾಗಿದಂತಾಗಿ ಕಾಲೆತ್ತಿ ನೋಡಿದರೆ ನನ್ನ ಆನೆಭಾರಕ್ಕೆ ಅದು ಗಾಬರಿಗೊಂಡಂತ್ತಿತ್ತು!
*

ಶಶಿ ಫಾರೆಸ್ಟರ್ ಬಂದ ಮೇಲೆ ಸುಮಾರು ಹೆಬ್ಬಾವುಗಳನ್ನು ಹಿಡಿದರು. ಅದಕ್ಕೂ ಮೊದಲು ಹೆಬ್ಬಾವು/ಕಾಳಿಂಗವನ್ನು ಕೆಲವರು ಹೊಡೆದು ಕೊಂದುಬಿಡುತ್ತಿದ್ದರು.
*

ನಮ್ಮ ಶಾಲೆಯ ಯಾವ ಮೂಲೆಯಲ್ಲಿ ಹಾವಿದ್ದರೂ ಮಕ್ಕಳು ನನ್ನನ್ನು ಕರೆದುಕೊಂಡು ಹೋಗಿ ತೋರಿಸುತ್ತಿದ್ದರು. ಹಾವುಗಳನ್ನು ಕೊಲ್ಲುವುದರಿಂದಾಗುವ ಅನಾಹುತಗಳನ್ನು ಮಕ್ಕಳಿಗೆ ಹೇಳುತ್ತಿದ್ದೆ.
*

ಒಮ್ಮೆ ಬಸ್ ಸ್ಟ್ಯಾಂಡಿನಲ್ಲಿ ಕುಳಿತ್ತಿದ್ದಾಗ ಹಾವೊಂದು ದೊಪ್ಪನೆ ಕೆಳಗೆ ಬಿತ್ತು. ಥೇಟ್ ಬಿಸಿಲು ಹಾವಿನಂತಿತ್ತು. ಅದಕ್ಕಿಂತ ಸ್ವಲ್ಪ ದಪ್ಪ ಮತ್ತು ಉದ್ದಕ್ಕಿತ್ತು. ಬೇಡಬೇಡವೆಂದರೂ ಒಬ್ಬಾತ 'ತುಂಬಾ ವೆಷಂ ಸಾರೇ' ಎಂದು ಅದನ್ನು ಹೊಡೆದು ಕೊಂದೇಬಿಟ್ಟ.ಒಂದೆರಡು ಪೆಟ್ಟು ಬಿದ್ದಿದ್ದೇ ತಡ ಅದು ಸಂಪೂರ್ಣ ನೀಲಿಗಟ್ಟಿತು! ಸತ್ತಾಗಲಂತೂ ನೀಲಿಹಾವು!
*

ನನ್ನ ಸಹೋದ್ಯೋಗಿಗೆ ಒಂದು ಸಂಜೆ ಹಾವು ಕುಟುಕಿದ್ದು ಅವರ ಅರಿವಿಗೂ ಬರಲಿಲ್ಲ. ಆಮೇಲೆ ವಿಷವೇರತೊಡಗಿದಾಗ ಅದು ಹಾವೆಂದು ತಿಳಿದು ಕೆಲಕಾಲ ಚಿಕಿತ್ಸೆ ಪಡೆದರು.
*
ಮಳೆಗಾಲದಲ್ಲಂತೂ ರಸ್ತೆಯಲ್ಲಿ ಹಾವುಗಳು ವಾಹನಗಳಿಗೆ ಸಿಲುಕಿ ಸತ್ತುಬಿದ್ದಿರುತ್ತಿದ್ದವು. ನಿತ್ಯಹರಿದ್ವರ್ಣದ ಕರಿಕೆ ತನ್ನ ನಿಜದ ಚೆಲುವನ್ನು ಉಳಿಸಿಕೊಳ್ಳಲು ಒಂದಷ್ಟು ಚೆಲುವು ಚೆಲುವಾದ ಹಾವುಗಳನ್ನು ಸಾಕಿಕೊಂಡಿತ್ತು.
*

ಕಾಜೂರು ಸತೀಶ್

Thursday, April 18, 2019

ಹಸಿವು, ಮದುವೆ ಮತ್ತು ರಕ್ಕಸತನ

ನಾನು ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದ ಕಾಲದಲ್ಲಿ ನಡೆದ ಒಂದು ಘಟನೆಯು ನನ್ನನ್ನು ಬುಡಸಮೇತ ಅಲುಗಾಡಿಸಿತ್ತು. ಮದುವೆ ಮಂಟಪದಲ್ಲಿ ಹೆಚ್ಚು-ಹೆಚ್ಚು ನಾನ್ವೆಜ್ ಬಡಿಸಿಲ್ಲವೆಂದು ಆರಂಭವಾದ ಕಿತ್ತಾಟವು, ಬೆಳೆಬೆಳೆದು ಮದುವೆ ನಡೆಯುತ್ತಿದ್ದ ಸ್ಥಳವೇ ರಣಾಂಗಣವಾಗಿ ಒಂದಷ್ಟು ಜನರನ್ನು ಆಸ್ಪತ್ರೆಗೆ ದಾಖಲು ಮಾಡಿಸಿತ್ತು!
*

ಒಂದು ಮದುವೆಗೆ ಹೋಗಿದ್ದೆ. ಊಟಕ್ಕೆಂದು ಬಾಗಿಲ ಬಳಿ ಕಾಯುತ್ತಾ ನಿಂತಿದ್ದರು ಜನ. ಬಾಗಿಲು ತೆರೆದಿದ್ದೇ ತಡ- ಕದ ತೆಗೆದ ಜಲಾಶಯದ ನೀರಿನಂತೆ ನುಗ್ಗಿದರು. ನೂಕಾಟಕ್ಕೆ ವ್ಯಕ್ತಿಯೊಬ್ಬರು ಬಿದ್ದುಬಿಟ್ಟರು. ಬಿದ್ದ ವ್ಯಕ್ತಿಯ ಮೈಮೇಲೆ ತುಳಿದುಕೊಂಡು ಹೋಗಿ ಜನ ತಮ್ಮ ಆಸನವನ್ನು ಭದ್ರಪಡಿಸಿಕೊಂಡರು!
*

'ಮದುವೆ' ಎಂದರೆ 'ತಿನ್ನುವುದು' ಎಂಬ ಕಲ್ಪನೆ ಜನರಲ್ಲಿ ಬೀಡುಬಿಡುತ್ತಿದೆ. 'ಇದೆಂಥಾ ಮಾರಾಯ ಬರೀ ಪುಳಿಚಾರು... ನಾನು ಜಾಸ್ತಿ ಕವರ್ ಹಾಕಲ್ಲ'ಎಂದು ಕವರಿನಲ್ಲಿ ಹಾಕಿದ ನೂರರ ನೋಟೊಂದನ್ನು ಹಿಂತೆಗೆದು ಕಿಸೆಗಿಳಿಸಿಕೊಂಡ ಶುದ್ಧ ವಾಣಿಜ್ಯ ವ್ಯವಹಾರಕ್ಕೆ ಅದೆಷ್ಟು ಸಲ ಸಾಕ್ಷಿಯಾಗಿಲ್ಲ!
*
ಹಸಿವಾದಾಗಲಷ್ಟೇ ತಿನ್ನುವ ಪ್ರಾಣಿಗಳೆಲ್ಲಿ ಮತ್ತು ಹೊಟ್ಟೆ ತುಂಬಿದ್ದರೂ ಮತ್ತೆ ಮತ್ತೆ ತುರುಕಿ ತುಂಬಿಸಿಕೊಳ್ಳುವ ಬಕಾಸುರ ಮನುಷ್ಯರೆಲ್ಲಿ! ಮುಂದೊಂದು ದಿನ ಈ ಸ್ಥಿತಿ ಮನುಷ್ಯನನ್ನು ಯಾವ ಮಟ್ಟಕ್ಕೆ ಒಯ್ಯಬಹುದು-ಯೋಚಿಸಿದರೆ ಭಯವಾಗುತ್ತದೆ!
*

ಕಾಜೂರು ಸತೀಶ್

ಜನ್ಮದಿನಾಚರಣೆಯೂ ಮತ್ತು ಬಡತನವೂ..

ಹಾಗೇ facebookನೊಳಕ್ಕೆ ಇಣುಕುತ್ತಿದ್ದಾಗ ಶಿಕ್ಷಕಿಯೊಬ್ಬರು ತಮ್ಮ ಮಗುವಿನ ಜನ್ಮದಿನವನ್ನು ಸರ್ಕಾರಿ ಶಾಲೆಯ ತರಗತಿಯೊಂದರಲ್ಲಿ ಆಚರಿಸುತ್ತಿರುವ ಚಿತ್ರವನ್ನು ನೋಡಿದೆ. ಮೇಜಿನ ಮೇಲೆ ಮಗುವಿನ ಹೆಸರು ಬರೆದಿರುವ ಕೇಕು ಮತ್ತು ಉರಿಯುತ್ತಿರುವ ಕ್ಯಾಂಡಲ್ಲು. ಅದನ್ನು ಬೆರಗಿನಿಂದ ನೋಡುತ್ತಿರುವ ಮಕ್ಕಳು!

ಬಹುತೇಕ ಸರ್ಕಾರಿ ಶಾಲಾ ವಿದ್ಯಾರ್ಥಿಗಳು ತಮ್ಮ ಜನ್ಮದಿನವನ್ನು ಹೀಗೆ ಕೇಕು ಕತ್ತರಿಸಿ ಕ್ಯಾಂಡಲ್ ಆರಿಸಿ ಆಚರಿಸಿಕೊಳ್ಳುವುದಿಲ್ಲ. ಆ ಟೀಚರ್ - ಕತ್ತರಿಸಿದ ಕೇಕನ್ನು ಮಕ್ಕಳಿಗೆ ಕೊಡಬಹುದು; ಅದನ್ನು ಆ ಮಕ್ಕಳು ಖುಷಿಖುಷಿಯಿಂದ ತಿನ್ನಬಹುದು.

ನನ್ನ ಎದೆಸೀಳುವುದು ಅದರ ನಂತರದ ಸ್ಥಿತಿ. ನಾಳೆ ದಿನ ಆ ಮಕ್ಕಳು 'ನಾವೂ ಯಾಕೆ ನಮ್ಮ ಜನ್ಮದಿನವನ್ನು ಹಾಗೆ ಆಚರಿಸಬಾರದು' ಎಂದುಕೊಂಡು ಪೋಷಕರ ಬೆನ್ನುಬೀಳುತ್ತವೆ. ಪೋಷಕರು ಅದನ್ನು ತಿರಸ್ಕರಿಸುತ್ತಾರೆ. 'ಒಬ್ಬರಿಗೆ ಸಾಧ್ಯವಾಗುವ ಸಂಗತಿ ನಮಗೇಕೆ ಸಾಧ್ಯವಿಲ್ಲ'ಎಂದು ಆ ಮಕ್ಕಳು ಯೋಚಿಸುತ್ತಾರೆ; ಹತಾಶರಾಗುತ್ತಾರೆ. ಅವರ ಮುಗ್ಧ ಬಾಲ್ಯವನ್ನದು ಹಿಂಡಿ ಹಿಪ್ಪೆ ಮಾಡುತ್ತದೆ.

ಬುದ್ಧಿವಂತರೆನಿಸಿಕೊಂಡ ಧನಿಕರಿಗಿದು ಅರ್ಥವಾಗುವುದಿಲ್ಲ!
*

ಕಾಜೂರು ಸತೀಶ್

Monday, April 15, 2019

ಕೆಂಪು ಬಿಸಿಲು ಮತ್ತು ಉರಿಯ ಪ್ರತಾಪ

ಜನವರಿಯು ತನ್ನ ಚಳಿಯ ಅಂಗಿಯನ್ನು ಕಿತ್ತೆಸೆದು ಬಂತೆಂದರೆ ಥೇಟ್ ದಗದಗ ಉರಿಯುತ್ತಿರುವ ಒಲೆಬುಡದಲ್ಲಿ ಕುಳಿತ ಹಾಗೆ. ಗೇರುಹಣ್ಣುಗಳು ಆ ಉರಿಯನ್ನೇ ತಿಂದಂತೆ ಕೆಂಪಗೆ ನಗುತ್ತವೆ. ಅಂಥಾ ಹಿಂಸೆಯಲ್ಲೂ ಅಲ್ಲಿನ ಮರಗಳು ಎಲೆಯನ್ನು ಕಳಚಿ ಹೇಡಿಯಂತೆ ವರ್ತಿಸುವುದಿಲ್ಲ.

ಥರ್ಮೋಮೀಟರಿನ ಪಾದರಸ 39 ಡಿಗ್ರಿಯನ್ನು ಮುಟ್ಟಿ ನೋಡುತ್ತದೆ. ಎಷ್ಟು ಮರಗಿಡಗಳಿದ್ದರೇನು- ಆಕ್ಸಿಜನ್ ಮಾತ್ರ ಮೂಗಿನೊಳಗೆ ಹೋಗುವುದೋ ಬೇಡವೋ ಎಂಬ ದ್ವಂದ್ವದಲ್ಲಿರುತ್ತದೆ. ಫ್ಯಾನಿನ ತಲೆತಿರುಗಿದರೂ ಸುಡುಸುಡುಗಾಳಿ! ಸೂರ್ಯ ಮಾತ್ರ ಅಲ್ಲಿದ್ದವರ ಬೆವರ ಚಪ್ಪರಿಸಿ ನೀರಡಿಕೆಯನ್ನು ನೀಗಿಸಿಕೊಂಡು ಕೆಂಪುಕೆಂಪು ನಗು ಚೆಲ್ಲುತ್ತಾನೆ/ಳೆ.

ತರಗತಿಯಲ್ಲಿ ಆಕ್ಸಿಜನ್ ಸಿಗದೆ ನಿಂತಲ್ಲೇ ಕುಸಿಯುವಂತಾಗುತ್ತದೆ. ಮಾರ್ಚ್-ಏಪ್ರಿಲುಗಳ ಹಿಂಸೆ ತಡೆಯಲಾರದೆ ರಾತ್ರಿ ಮಲಗುವ ಮುನ್ನ ಮಂಚದ ಕೆಳಗಿನ ನೆಲಕ್ಕೆ ಒಂದು ಬಕೇಟ್ ನೀರನ್ನು ಸುರಿದುಬಿಡುತ್ತಿದ್ದೆ. ಬೆಳಿಗ್ಗೆದ್ದು ನೋಡಿದರೆ ಅದು ಮಧ್ಯರಾತ್ರಿಯಲ್ಲೇ ಕಾಲ್ಕಿತ್ತ ಸಾಕ್ಷಿಗಳು ಉಳಿದಿರುತ್ತಿದ್ದವು.

ಹಸಿರಿನಿಂದ ನೆಲವೇ ಕಾಣದ ನೆಲದಲ್ಲೇ ಈ ಪರಿಯ ಉರಿಯ ಪ್ರತಾಪವಿರುವಾಗ ಬರಡುನಾಡಿನ ಬದುಕು ಅದೆಷ್ಟು ದಾರುಣವಾಗಿರಬಹುದೆಂಬುದನ್ನು ನೆನೆದು ತಲ್ಲಣಿಸುತ್ತೇನೆ.
*

ಕಾಜೂರು ಸತೀಶ್

ಓಹ್! ಇದ್ದೀರಾ?!

ಒಂದೆರಡು ರಜೆ ಸಿಕ್ಕಿತೆಂದರೆ ಗೆಳೆಯ ಭರಮಪ್ಪ ಪಾಶಗಾರರಿಗೆ 'free ಇದ್ದೀರಾ?' ಅನ್ನೋ ಒಂದು ಮೆಸೇಜು ಕುಟ್ಟಿ ಎಸೆದುಬಿಡುತ್ತಿದ್ದೆ. ಅತ್ತಲಿಂದ 'yes' ಎಂಬ ಅವರ ಸಂದೇಶ ತಡಬಡಾಯಿಸಿಕೊಂಡು ಇನ್ನ್ಯಾವಾಗಲಾದರೂ ಬಂದು ಬಾಗಿಲು ತಟ್ಟಿದರೆ ಮರುದಿನ ಯಾವುದಾದರೂ ಬೆಟ್ಟಕ್ಕೆ ಹೋಗುವುದೋ ಅಥವಾ ಜಲಪಾತದ ಜೊತೆಗೂಡುವುದೋ ಅಥವಾ ಕೇರಳದ ಯಾವುದಾದರೂ ಒಂದು ಸ್ಥಳಕ್ಕೆ ಪಾದಸ್ಪರ್ಶಿಸಿ ಬರುವುದೋ ಆಲೋಚಿಸುತ್ತಾ ಕೂರುತ್ತಿದ್ದೆ.

ಒಂದೊಮ್ಮೆ 'No sir' ಎಂದು ಮೊಬೈಲು ಕುಂಯ್ಗುಟ್ಟಿದರೆ ಮುಚ್ಚಿದ ಮುಂಬಾಗಿಲಿಗೆ ಎರಡು ದಿನಗಳ ಪೂರ್ಣರಜೆಯನ್ನು ಕೊಟ್ಟು ಪುಸ್ತಕ-ಸಿನಿಮಾ-ಅಡುಗೆ-ಸಾಹಿತ್ಯ-ಸಂಗೀತ-ಚಿತ್ರಕಲೆಗೆ ಅಂಟಿಕೊಂಡುಬಿಡುತ್ತಿದ್ದೆ.
*

ಒಮ್ಮೆ ಮೂರು ದಿನಗಳ ರಜೆಯೊಳಗೆ ಕದವನ್ನೂ ತೆರೆಯದೆ ಕುಳಿತುಕೊಂಡಿದ್ದೆ. ಮೂರನೇ ದಿನ ಬಾಗಿಲು ಸದ್ದುಮಾಡಿತು.

ಬಾಗಿಲು ತೆರೆದರೆ ಎದುರಿಗಿರುವ ವ್ಯಕ್ತಿ -' ಓಹ್ ಇದ್ದೀರಾ ಮಾಷ್ಟ್ರೇ?! ಎರಡು ದಿನಗಳಿಂದ ಹೊರಗೇ ಕಾಣ್ಲಿಲ್ಲ? ಅದ್ಕೇ ನೋಡ್ಕೊಂಡು ಹೋಗೋಣ ಅಂತ ಬಂದೆ.. ಹಹ್ಹಹ್ಹಹ್ಹಾ' ಎಂದು ನಗುವನ್ನು ಮೊಗೆಮೊಗೆದು ಚೆಲ್ಲಿ ಹೊರಟುಹೋದರು.
*
ಅವರ ಕಲ್ಪನೆಯಲ್ಲಿ ನನ್ನ ಸಾವು ಹೇಗೆಲ್ಲಾ ಮೂಡಿರಬಹುದು ಎಂಬುದನ್ನು ಯೋಚಿಸಿ ಸಿಕ್ಕಾಪಟ್ಟೆ ನಗು ತುಂಬಿಕೊಂಡೆ!
*

ಕಾಜೂರು ಸತೀಶ್