ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Friday, October 10, 2025

ಹುಡುಗಿ ಮತ್ತು ಸನ್ಯಾಸಿ

ಸನ್ಯಾಸಿಗೆ ಹುಡುಗಿಯೊಬ್ಬಳು ಎದುರಾದಳು. ಅವಳು ಅಪಾರ ದುಃಖದಲ್ಲಿದ್ದಳು. ತನ್ನ ದುಃಖವನ್ನು ನಿತ್ಯ ಸನ್ಯಾಸಿಯಲ್ಲಿ ಹೇಳುತ್ತಾ ಹಗುರಾಗುತ್ತಿದ್ದಳು. ಸನ್ಯಾಸಿ ಧ್ಯಾನದಲ್ಲಿ ನಿರತನಾಗಿದ್ದಾಗಲೂ ಅವಳು ಬಂದು ತನ್ನ ದುಃಖವನ್ನು ನಿವೇದಿಸುತ್ತಿದ್ದಳು.

ತಾನು, "ದುಃಖಿತನಾದ ಕಾರಣದಿಂದಲೇ ಸನ್ಯಾಸಿಯಾಗಿದ್ದು"ಎಂದರೆ ''ನಿನಗೇನು ದುಃಖ'' ಎಂದು ತನ್ನ ದುಃಖವನ್ನು ಹೇಳಿಕೊಳ್ಳುತ್ತಿದ್ದಳು. ಅವನು ಧ್ಯಾನದಲ್ಲಿ ನಿರತನಾದರೆ ಇವಳು ಜೋರಾಗಿ ಅಳುತ್ತಿದ್ದಳು. 'ನಿಮಗೆಲ್ಲ ನಮ್ಮ ಕಷ್ಟ ಅರ್ಥವಾಗುವುದಿಲ್ಲ' ಎನ್ನುತ್ತಿದ್ದಳು.

ಧ್ಯಾನರಹಿತ ಸ್ಥಿತಿಯಿಂದಲೂ ಏಕಾಂತದ ಕೊರತೆಯಿಂದಲೂ ಸನ್ಯಾಸಿಯು ಮತ್ತಷ್ಟೂ ದುಃಖಿತನಾದ. ಆದರೆ ಸನ್ಯಾಸಿಯಾದ ಕಾರಣ ತನ್ನ ದುಃಖವನ್ನು ಯಾರೊಂದಿಗೂ ಹೇಳಿಕೊಳ್ಳಲಿಲ್ಲ.

ಸನ್ಯಾಸಿ ಸಿಕ್ಕ ಮೇಲೆ ಹುಡುಗಿ ಗೆಲುವಾದಳು.
*

✍️ಕಾಜೂರು ಸತೀಶ್

Thursday, October 9, 2025

ನನ್ನಲ್ಲಿ ಇರದ ಒಳ್ಳೆಯತನ...

ದಿನಾಂಕ 30/07/2025.
ನಮ್ಮೂರು ವಿದ್ಯುತ್ ಕಾಣದೆ ಎಂಟನೇ ದಿನದ ಸಂಭ್ರಮದಲ್ಲಿದ್ದಾಗ ಮೊಬೈಲ್ ಚಾರ್ಜ್ ಮಾಡಲೆಂದು ಕೂಡಿಗೆಗೆ ತೆರಳಿದ್ದೆ. ಚಾರ್ಜ್ ಮಾಡಿ ಹೊರಬಂದಾಗ ನನ್ನ ಕೈಜಾರಿದ ಚಾರ್ಜರ್ ರಸ್ತೆಯ ಕೆಸರಿನಲ್ಲಿ ಮುಳುಗಿತು. ಅದನ್ನು ಎತ್ತಿಕೊಳ್ಳುವುದನ್ನೇ ನೋಡುತ್ತಿದ್ದ ಆಟೋ ಡ್ರೈವರ್ ಒಬ್ಬರು ತಾವು ಕುಡಿಯಲು ಇಟ್ಟಿದ್ದ ನೀರನ್ನೇ ನೀಡಿ ಚಾರ್ಜರಿನ ಕೆಸರನ್ನು ತೊಳೆಯಲು ಸಹಕರಿಸಿದರು(ನನ್ನೊಳಗಿನ ಕೆಸರನ್ನೂ).
*
ಆ ಡ್ರೈವರಿನ ಜಾಗದಲ್ಲಿ ನಾನಿದ್ದಿದ್ದರೆ ಖಂಡಿತವಾಗಿಯೂ ಕುಡಿಯಲು ಇಟ್ಟಿದ್ದ ನೀರನ್ನು ಕೊಡುತ್ತಿರಲಿಲ್ಲ. ನಾನು 'ಬೇಡ' ಎಂದಾಗಲೂ ಮತ್ತೆ ಒತ್ತಾಯಿಸಿದ ಆ ಮುಖ ಈಗ ನನ್ನೊಳಗೆ save ಆಗಿದೆ. ಇನ್ನು ಆ ದಾರಿಯಲ್ಲಿ ಕ್ರಮಿಸುವಾಗಲೆಲ್ಲ ಅದೇ ಮುಖಕ್ಕಾಗಿ ಕಣ್ಣುಗಳು ಹುಡುಕತೊಡಗುತ್ತವೆ.
*
ಸಣ್ಣ ಸಣ್ಣ ಸಂಗತಿಗಳು ಹೇಗೆಲ್ಲಾ ಕಾಡುತ್ತವೆ, ಎಷ್ಟೆಲ್ಲಾ ಕಲಿಸುತ್ತವೆ, ಸದಾ ಡವಗುಟ್ಟುತ್ತಲೇ ಇರುವ ಈ ಪುಟ್ಟ ಹೃದಯದ ಭಾರವನ್ನು ಹೇಗೆಲ್ಲಾ ಹೆಚ್ಚಿಸುತ್ತಲೇ ಇರುತ್ತವೆ ಅಲ್ಲವೇ?
ಇದೊಂದು ಸೋಜಿಗ.
**

✍️ ಕಾಜೂರು ಸತೀಶ್