ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Wednesday, July 31, 2024

ನಶೆಯ ಲೇಖನಿಯಲ್ಲಿನ ಕವಿತೆಗಳು

ಮನದ ಬೇಗುದಿಗೆ
ಮುಲಾಮು ಹಚ್ಚಲು
ನನ್ನೀ ಲೇಖನಿಯೊಟ್ಟಿಗೆ ಹೊರಟಿರುವೆ

ಹೀಗೆ ತಮ್ಮ ಕವಿತೆಗಳ ಸ್ವರೂಪದ ಕುರಿತು ಹೇಳುತ್ತಾ ಸೌಮ್ಯ ಹೆಗ್ಗಡಹಳ್ಳಿ ಅವರು ಶ್ರಮಸಂಸ್ಕೃತಿಯ ಬೇರುಗಳನ್ನು ಅವ್ವ ಅಪ್ಪ ಆದಿಮ ಕೃಷಿಯ ರೂಪಕದೊಂದಿಗೆ ತಮ್ಮ ಕವಿತೆ ನಶೆಯ ಲೇಖನಿಯಲ್ಲಿ ನೋಡುತ್ತಾರೆ. ಶ್ರಮದ ಹಿಂದಿರುವ ಸಹಜ ಅಸಹಾಯಕತೆಗಷ್ಟೇ ಅದು ನಿಲ್ಲುವುದಿಲ್ಲ. ದುಃಖವನ್ನು ಹತಾಶೆಯನ್ನು ಮೀರುವ ಛಲವೂ  ಈ ಕವಿತೆಗಳಿಗಿವೆ.


ನಿಗಿ ಕೆಂಡಕೆ ನೀರಟ್ಟಿದಂತೆ
ಕಾವುತಾಗಿಸಿ ಬಿಡಲೊಲ್ಲಳು ಅವ್ವ
ಹಣೆಯಲ್ಲಿ ಬೆವರುಟ್ಟುವ ತನಕ
(ಮೀಯುವುದೆಂದರೆ ಚೈತನ್ಯಗಳ ಹುಟ್ಟು)

ಕುದಿಯೊಳಗಿನ ಬೆಂದಕ್ಕಿಯು
ಎಡೆಗೆ ಅನ್ನವಾಗಿ
ಹಸಿವ ತಣಿಯುವಾಗ
ಮನದ ಬೇಗುದಿಗೆ
ಕಣ್ಣೀರಾಗುವುದೇಕೆ?
ನಿನ್ನೊಳಗಿನ ಛಲದ ಚಿಗುರಿಗೆ
ಚುಮುಕಿಸಿದ ನೀರಾಗಲಿ ಬಿಡು
( ನಿನ್ನೊಳಗಿನ ನೀನು)

ಈ ಶ್ರಮಸಂಸ್ಕೃತಿಯ ಛಲ ಹಠತ್ತಾಗಿ ಕುಸಿಯುವುದು ಸಾವಿನ ಮೂಲಕ:

ಅಪ್ಪ ಅಜ್ಜನಾಗಿ ತಲೆಗೊಂದು ಪೇಟಕಟ್ಟಿ
ಕೋಲಿಡಿದು ನಮ್ಮೊಟ್ಟಿಗೆ ಸುತ್ತಿ ಬರುವೆನೆಂದು ಕನಸ ಕಂಡಿದ್ದೆ
ಕೋಲಿನ ಹಿಡಿಕೆ ಸವೆಯಲ್ಲಿಲ್ಲ ನೆರಿಗೆ ಹತ್ತಲಿಲ್ಲ ಬಟ್ಟೆ ಹೀಗೆಂದು ಮಾತಿಲ್ಲದೆ ಸಾಗಿಬಿಟ್ಟ ಅಪ್ಪ
(ಅಪ್ಪನೆಂಬ ಅನಂತ)

ಹೀಗೆ ಸಮಾಜವು ಹುಟ್ಟುವ ಅಸಮಾನತೆಯ ಫಲಿತವಾದ ಅಸಹಾಯಕತೆಯನ್ನು ದಾಟುವ ಅದಮ್ಯ ಛಲ ಮತ್ತೆ ಮತ್ತೆ ಆವರ ಕವಿತೆಗಳಲ್ಲಿ ಮರಳುತ್ತದೆ.

ಎಂಜಲೆಲೆಗೆ ಕೈಯಿಟ್ಟು
ಹಸಿವ ತಣಿವ ಕೈಗಳಿರುವಾಗ
ಮೃಷ್ಟಾನ್ನದ ಬಯಕೆ
ನನಗೇಕೆ?
(ಛಲ)

'ಅಕ್ಷರ'ವೆಂಬ ಬೆಳಕು ಇಂತಹ ಅಸಮಾನತೆಗಳನ್ನು ದೂರಮಾಡುತ್ತದೆ ಎಂಬ ನಿಲುವು ಕವಿಯದು.

ತಗ್ಗಿದ ತಲೆಯೊಳಗೆ
ಹೊಕ್ಕಿದ ವಿಚಾರಗಳು
ತಲೆಯೆತ್ತಿ ನಡೆಯಲೇಬೇಕು
ಅದೊಮ್ಮೆ
ಅಕ್ಷರವಾಗಿ ಪುಟಿದು
ಓದುವ ಕೈಗಳಿಗೆ
ತಾಗಲೇಬೇಕು
(ಓದು)

ಬಡತನ, ಶೋಷಣೆ, ಹಸಿವು, ಅಸಮಾನತೆಗಳ ಮೇಲಿನ ಕಾವ್ಯವಿದು; ನೆಲಮೂಲದ ಕಾವ್ಯವಿದು. ಅಕ್ಷಯ ಪಾತ್ರೆಯಂತಹ ಇಂತಹ ಆಶಯಗಳು ಎಲ್ಲ ಕಾಲದಲ್ಲೂ ಹುಟ್ಟುವಂತವುಗಳು. ಇನ್ನಷ್ಟೂ ತೀವ್ರವಾಗಿ ಹಾಗೂ ಸೂಕ್ಷ್ಮವಾಗಿ ಅವುಗಳನ್ನು ಹೇಳಿದರೆ ಈ ಕವಿತೆಗಳಿಗೆ ಹೆಚ್ಚು ಪರಿಣಾಮ ದಕ್ಕಬಲ್ಲದು.
*
ಕಾಜೂರು ಸತೀಶ್ 

Wednesday, July 24, 2024

ಪ್ರಶ್ನೆ

ರಾಜನು ಸಭೆ ಕರೆದು ತನ್ನ ಸಾಧನೆಗಳನ್ನು ವಿವರಿಸತೊಡಗಿದನು. ತಾನಿನ್ನು ಹೂವಿನ ರಸ್ತೆಯನ್ನು ನಿರ್ಮಿಸಬೇಕೆಂದಿದ್ದೇನೆ ಎಂದು ಹೇಳಿದನು. ಆ ಕುರಿತು ಪ್ರತಿಯೊಬ್ಬರ ಬಳಿ ಅಭಿಪ್ರಾಯ ಕೇಳಿದನು. ಎಲ್ಲರೂ 'ಅತ್ಯುತ್ತಮ ನಿರ್ಧಾರ' ಎಂದರು. ತಿಮ್ಮನ ಸರದಿ ಬಂದಾಗ ' ಅಷ್ಟೆಲ್ಲಾ ಹೂವುಗಳನ್ನು ಕಿತ್ತರೆ ಹಕ್ಕಿಗಳ, ಚಿಟ್ಟೆಗಳ ಆಹಾರ ಕಸಿದಂತಾಗುವುದಿಲ್ಲವೇ? ಬೇಸಿಗೆಯಲ್ಲಿ ಬಾಡುವುದಿಲ್ಲವೇ? ಮಳೆಗಾಲದಲ್ಲಿ ಕೊಚ್ಚಿಹೋಗುವುದಿಲ್ಲವೇ?' ಎಂದನು.

ಅಂದಿನಿಂದ ತಿಮ್ಮನಿಗೆ ಗೆಳೆಯರು ಇಲ್ಲವಾದರು. ಅವರೆಲ್ಲರೂ ಮಾಡಬೇಕಾಗಿದ್ದ ಕೆಲಸಗಳು ತಿಮ್ಮನ ಹೆಗಲಿಗೇರಿದವು.
*
ಕಾಜೂರು ಸತೀಶ್

Saturday, July 20, 2024

ದನಿ

-೧-
ಪ್ರಿಯ ಮಧ್ಯರಾತ್ರಿಯೇ
ಯಾರೋ ನಿನ್ನ ನಿದ್ದೆ ಕದ್ದರು
ಮೌನವಾಗಿದ್ದ ಕಾಲದಲ್ಲಿ
ಹೂಂಗುಡುತ್ತಿದ್ದ ಕಾಲದಲ್ಲಿ
ಹೇಗೋ ನಿದ್ದೆಗೆ ಶರಣಾಗುತ್ತಿದ್ದೆ
ಈಗ ದನಿಯೇರಿಸಿರುವೆ
ಸಾಯುವುದಕ್ಕೂ ಸಿದ್ಧವಾಗಿರುವೆ
ಇನ್ನು ನಿನ್ನ ನಿದ್ದೆಯೆಲ್ಲಾ
ನ್ಯಾಯದೇವತೆಯ ಕಣ್ಣುಗಳಿಗೇ

-೨-
ಈಗ ಬೆಳಕಾಗಿದೆ
ಯಾರೋ ನಿನ್ನ ನಿದ್ದೆ ಕದ್ದ ಖುಷಿಯಲ್ಲಿ
ಬೆಳಕನ್ನೂ ಕದ್ದರು
ಮೌನವಾಗಿದ್ದ ಕಾಲದಲ್ಲಿ
ಕಿವಿತುಂಬ ಹಕ್ಕಿಗೊರಲು
ಈಗ ದನಿಯೇರಿಸಿರುವೆ
ಸಾಯುವುದಕ್ಕೂ ಸಿದ್ಧವಾಗಿರುವೆ
ಕದ್ದವರ ಕೈಯಲ್ಲೀಗ ಹಸಿರು ಶಾಯಿ.
*

✍️ಕಾಜೂರು ಸತೀಶ್

ಮರಣದಂಡನೆ

ದಿನ ಕಳೆದಂತೆ 'ಮೌನ'ಕ್ಕೆ ಬದುಕುವುದು ಕಷ್ಟವೆನಿಸಿತು. ಒಂದು ದಿನ ಅದು ಮಾತನ್ನು ಕೊಂದಿತು. ಆದರೆ ಯಾವ ಸಾಕ್ಷಿಯನ್ನೂ ಅದು ಉಳಿಸಲಿಲ್ಲ.

ಮರುದಿನವೇ ಅದಕ್ಕೆ ಮರಣದಂಡನೆ ವಿಧಿಸಲಾಯಿತು. 'ಹೇಗೂ ಮಾತನಾಡುವುದಿಲ್ಲವಲ್ಲಾ' ನ್ಯಾಯಾಧೀಶ ಹೇಳಿದ್ದ.
*

ಕಾಜೂರು ಸತೀಶ್ 

Tuesday, July 9, 2024

ಪಾದ

ಪಾದ ಆಗಿದ್ದಕ್ಕೇನೋ
ಸದಾ ತುಳಿಸಿಕೊಳ್ಳುತ್ತಿರುವುದು

ಇನ್ನು
ನಾನೊಂದು ಆಕಾಶವಾಗಬೇಕು
ನಕ್ಷತ್ರಗಳಷ್ಟೇ ಬಿರಿದು ಅರಳುವ
ಅಪಾರ ಕಾಯ
*


ಮಲಯಾಳಂ ಮೂಲ - ಲೂಯಿಸ್ ಪೀಟರ್ 

ಕನ್ನಡಕ್ಕೆ- ಕಾಜೂರು ಸತೀಶ್

ನೆರೆಮನೆ


ಬೆಳಕಾದಾಗ
ನೆರೆಮನೆ ಮಾಯವಾಗಿತ್ತು

ಏನಾಗಿರಬಹುದು
ಕುಂಞಾಲಿ ಕಾಕನಿಗೂ
ಆಮೀನ ಅತ್ತೆಗೂ
ಕುಂಞಾಮೀನಾಳಿಗೂ

ಅವರ ಅಂಗಳದ
ಮದರಂಗಿಯ ಬೇರುಗಳು
ನನ್ನ ಮನೆಯ ದಾಸವಾಳವನ್ನು
ಭಯದಿಂದ ನಡುಗುತ್ತಾ ಬಿಗಿದಪ್ಪಿದೆ

ಒಂದರಿಂದ ಹತ್ತರವರೆಗೆ
ಭಾರತವೇ ನಮ್ಮ ದೇಶವೆಂದು
ಒಟ್ಟಾಗಿ ಕಲೆತು ಕಲಿತ
ಕುಂಞಾಮೀನಾಳ ಕಣ್ಣುಗಳು
ನನ್ನ ಕಿಟಕಿಯ ಒಳಗೆ ತುಂಬಿ ತುಳುಕುತ್ತಿವೆ

ಒಂದೇ ಒಂದು ರಾತ್ರಿಯ ಕತ್ತಲಲ್ಲಿ
ಸಾವಿರ ಸಾವಿರ ಮನೆಗಳು ಮಾಯವಾಗಬಹುದು
ಕೋಟಿ ಜನ ಕಾಣೆಯಾಗಬಹುದು

ಆದರೆ ಒಂದು ಬೆಳಗು ಸಾಕು ನಮಗೆ
ಒಂದು ಬೆಳಕು ಸಾಕು..
*


ಮಲಯಾಳಂ ಮೂಲ - ಪವಿತ್ರನ್ ತೀಕ್ಕುನಿ

ಕನ್ನಡಕ್ಕೆ- ಕಾಜೂರು ಸತೀಶ್

Sunday, July 7, 2024

ಪತ್ರ

'ಪ್ರೀತಿಪೂರ್ವಕವಾಗಿ'
ಎಂದಷ್ಟೇ ಬರೆದ ಪತ್ರವೊಂದು ಸಿಕ್ಕಿತು
ಬರೆದದ್ದು ಯಾರು?
ಎಲ್ಲಿಂದ ಬರೆದದ್ದು?
ಗೊತ್ತಿಲ್ಲ
ಬರೀ ಒಂದೇ ಒಂದು ಸಾಲಿನ ಪತ್ರ.


ಯಾರಿರಬಹುದೆಂದು ಯೋಚಿಸಿದೆ
ಎಷ್ಟು ಉದಾತ್ತ ಪ್ರೀತಿ
ಇಲ್ಲ ನೆನಪಾಗುತ್ತಿಲ್ಲ


ತಮಾಷೆಗೆ ಯಾರಾದ್ರೂ ಮಾಡಿರ್ಬಹುದು
ಗೆಳೆಯ ಹೇಳಿದ

ಯಾಕೋ ಆ ರಾತ್ರಿ
ನಿದ್ದೆಹತ್ತಲೇ ಇಲ್ಲ

ವಿದ್ಯುದ್ದೀಪದ ಸ್ವಿಚ್ ಆನ್ ಮಾಡಿದೆ
ಕಿಟಕಿ ತೆರೆದೆ
ಹೆಸರೇ ತಿಳಿಯದ ಹೂಗಳ
ಪರಿಮಳದೊಂದಿಗೆ
ಗಾಳಿ ಪ್ರವೇಶಿಸಿತು 
ಕೋಣೆಯಿಡೀ ಅದರದ್ದೇ ಓಡಾಟ 

ಪುಟ್ಟ ಮಕ್ಕಳಿಗೆ ಹೇಳುವಂತೆ 
ಬೀಳ್ಬೇಡ ಜೋಪಾನ ಎಂದು 
ಗಾಳಿಗೆ ಹೇಳಿದೆ

ಯಾಕೋ  ಎನೋ 
ಮನೆಗೆ ಕರೆಮಾಡಬೇಕೆನಿಸಿತು

ಏನಾಯ್ತು ಎಂದರು   ಗಾಬರಿಯಿಂದ 
ಏನೂ ಇಲ್ಲ ಸುಮ್ನೆ ಮಾಡಿದ್ದು
ಎಂದಷ್ಟೇ ಉತ್ತರಿಸಿ ಫೋನಿಟ್ಟೆ

ಮೇಜಿನ ಮೇಲಿದ್ದ
ಆ ಪತ್ರ ರೆಕ್ಕೆಬಿಡಿಸಿತು 
'ಪ್ರೀತಿಪೂರ್ವಕ' ಎಂಬ ಆ ಹಕ್ಕಿ
 ಹಾರುತ್ತಾ ಹಾರುತ್ತಾ
ನೇರ ಎದೆಗೇ ಇಳಿಯಿತು.
*


ಮಲಯಾಳಂ ಮೂಲ - ಹರೀಶ್ ಶಕ್ತಿಧರನ್
ಕನ್ನಡಕ್ಕೆ- ಕಾಜೂರು ಸತೀಶ್ 

Friday, July 5, 2024

ಎಲ್ಲಿ ಹೋದರು?

ಆ ಮನುಷ್ಯ ಈ ಬೆಳಿಗ್ಗೆ  ನೆನಪಾದರು.ಅವರಿಂದ ಸಂದೇಶ ಬರದೆ ಮೂರು ತಿಂಗಳಾಗಿದ್ದವು!

'ನಿಮ್ಮ ಓದಿಗೆ' ಎಂಬ ಆರಂಭ ಅವರ ಸಂದೇಶಗಳಿಗೆ. ಪ್ರತಿಕ್ರಿಯಿಸಿದರೆ ಅವರ ಸಂಭ್ರಮ ನೋಡಬೇಕು!

ಫೇಸ್ಬುಕ್ ನಲ್ಲಿ ಅವರನ್ನು ಹುಡುಕಿದೆ. ಜನ ಅವರಿಗೆ ಅಂತಿಮ ನಮನವನ್ನು ಸಲ್ಲಿಸಿ ಮೂರು ತಿಂಗಳು ಕಳೆದಿದ್ದವು!


ಮಾಲಿಂಗರಾಯ ಹೂಗಾರ ಎಂಬ ಈ ಅಪ್ಪಟ ಕಾವ್ಯಪ್ರೇಮಿ ಅನಾರೋಗ್ಯದಿಂದ ತೀರಿಹೋಗಿದ್ದರು! ನನ್ನಂಥ ನೂರಾರು ಜನರೊಂದಿಗೆ ಕವಿತೆಯ ಕಾರಣಕ್ಕಾಗಿ ಪರಿಚಿತರಾಗಿ ಇದ್ದಕ್ಕಿದ್ದ ಹಾಗೆ ಕವಿತೆಯನ್ನೂ ಅದರಂತೆಯೇ ಇರುವ ಅವರ ದೇಹವನ್ನೂ ತೊರೆದುಹೋದ ಆ ಮನುಷ್ಯ ಈ ದಿನವೆಲ್ಲ ನನ್ನನ್ನು ಮತ್ತಷ್ಟೂ ಭಾರವಾಗಿಸಲೆಂಬಂತೆ ಉಳಿದುಹೋಗಿದ್ದಾರೆ.
*
ಕಾಜೂರು ಸತೀಶ್

ಸುರಿವ ಮಳೆಯಲ್ಲಿ



ಬಿಸಿಲಲ್ಲಿ
ಮಳೆಯಲ್ಲಿ
ಕೊಡೆಯಲ್ಲಿ
ನನ್ನೊಂದಿಗೆ ಹೆಜ್ಜೆಹಾಕಲು
ನಿನ್ನ ಕರೆದದ್ದು
ಬದಲಿಗೆ ಕೊಡೆ ಹಿಡಿಯಲಿಕ್ಕಲ್ಲ

ಹೂವಿನ ಪರಿಮಳ ಹೀರಿ
ಸುಖಿಸಲು ನಿನಗೆ ಹೇಳಿದ್ದು
ಹೂವನ್ನೇ ಕುಯ್ಯಲಿಕ್ಕಲ್ಲ

ಆದರೆ
ನೀನು ನನ್ನ ಕೊಡೆಯನ್ನೂ ಹೂವನ್ನೂ ತೆಗೆದು
ಬಿಸಿಲಲ್ಲಿ ಓಡಿದೆ

ಸುರಿವ ಮಳೆಯಲ್ಲಿ
ನಾನು ನನ್ನ ಕಣ್ಣುಗಳಲ್ಲಿ ಕಡಲಾಗಿ
ಸುಮ್ಮನೆ ನಿಂತುಬಿಟ್ಟೆ
*


ಮಲಯಾಳಂ ಮೂಲ- ಶಿಮ್ನ ಕೇರಳ ಕೆ ಪಿ

ಕನ್ನಡಕೆ - ಕಾಜೂರು ಸತೀಶ್

ದಾನ



ನನ್ನನ್ನು ತುಂಡು ತುಂಡಾಗಿ
ಹಂಚಿಬಿಡುತ್ತೇನೆ
ಮಕ್ಕಳಿಗಾಗಿ
ಗಂಡನಿಗಾಗಿ
ಮಿತ್ರರಿಗಾಗಿ
ಅಸಹಾಯಕರಿಗಾಗಿ

ಕಡೆಗೆ
ನನ್ನ ಕನ್ನಡಿಯಲ್ಲಿ 
ನನ್ನ ಕಣ್ಣುಗಳನ್ನಷ್ಟೇ ನೋಡುತ್ತೇನೆ
ಜೊತೆಗೆ ಕಣ್ಣೀರನ್ನೂ 
*


ಮಲಯಾಳಂ ಮೂಲ - ಮಾಧವಿಕುಟ್ಟಿ 

ಕನ್ನಡಕ್ಕೆ- ಕಾಜೂರು ಸತೀಶ್