ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Thursday, December 18, 2014

ಕವಿತೆ,ಹಸ್ತಪ್ರತಿ ಮತ್ತು ನಾನು

ಎರಡು ಸಾವಿರ್ದ ಹತ್ರಲ್ಲಿ ಯಾರೋ ಕೇಳಿದ್ರು ಅಂತ ನನ್ನ ಕವಿತೆಗಳ್ನೆಲ್ಲ ಗುಡ್ಡೆಹಾಕಿ ಹೊಸ್ದಾಗಿ ಬಟ್ಟೆ ಹೊಲಿಯೋ ಟೈಲರ್ ಥರ ಒಂದು ಹಸ್ತಪ್ರತಿ ಹೊಲ್ದಿದ್ದೆ; ಕೇಳಿದ್ದವ್ರಿಗೆ ಕೊಟ್ಕಳ್ಸಿದ್ದೆ. ತಮಾಷೆ ಅಂದ್ರೆ ಅದೀಗ ಅವ್ರ ಹತ್ರ ಇಲ್ವಂತೆ. ಹಿಂಗೆ ಹೇಳ್ಕೊಳ್ತಿರೋ ಸಾಕ್ಷಿಯೊಂದನ್ನ ಬಿಟ್ರೆ ಹಸ್ತಪ್ರತಿ ಮಾಡಿದ್ದೆ ಅನ್ನೋದಕ್ಕೆ ನನ್ಹತ್ರ ಯಾವ್ದೇ ಸಾಕ್ಷಿಗಳಿಲ್ಲ.ಆ ಕವಿತೆಗಳೂ ಇಲ್ಲ;ಕವಿತೆ ಬರ್ದ ಆ ಕ್ಷಣಗಳೂ ಕೂಡ.



ಮೊನ್ನೆ ಯಾವ್ದೋ ಒಂದು ಸಂದರ್ಭ ನನ್ನ ಎರಡನೇ ಹಸ್ತಪ್ರತಿಯನ್ನೂ 'ಬಿಡುಗಡೆ'ಗೊಳಿಸ್ಲಿಕ್ಕೆ ಒತ್ತಾಯ ಹೇರ್ತು. ಮತ್ತೆ ಗುಡ್ಡೆಹಾಕಿ ಒಂದಿಬ್ರಿಗೆ ಕಳಿಸ್ದೆ. ಪ್ರೀತಿಯ ಕವಿ ವಾಸುದೇವ ನಾಡಿಗ್ ಸರ್ ಅದ್ರಲ್ಲಿದ್ದ ಪೆಕ್ರು-ಪೆಕ್ರಾದ ಕವಿತೆಗಳನ್ನು ಚನ್ನಾಗಿ ವಿಶ್ಲೇಷಿಸಿ ಒಳ್ಳೆ ಸಲಹೆಗಳ್ನ ನೀಡಿದ್ರು. ಓದಿ ಖುಷಿಪಟ್ಟಿದ್ದೆ.



ನಾಳೆ ಒಂದು ಒಳ್ಳೆಯ ಏಕಾಂತದಲ್ಲಿ ಒಲೆ ಉರಿಸ್ಲಿಕ್ಕೆ ,ಧೂಳು ಒರೆಸ್ಲಿಕ್ಕೆ,ಮತ್ತೊಂದು ಕವಿತೆ ಮತ್ತೆ ಇನ್ನೇನೇನೋ ಗೀಚ್ಲಿಕ್ಕೆ ಸದ್ಯಕ್ಕೆ ಉಳ್ದಿರೋ ಈ ಹಸ್ತಪ್ರತೀನ ಬಳಸಿದ್ರೂ ನನ್ನಲ್ಲಿ ಅಂತದ್ದೇನೂ ಬದ್ಲಾವಣೆ ಕಾಣ್ಸೋದಿಲ್ಲ.ಮಳೆ-ಚಳಿಗಾಲ್ದಲ್ಲಿ ಉರ್ಸಿದ್ರೆ ಒಂದಷ್ಟು ಉಪಕಾರವಾದ್ರೂ ಆಗ್ಬಹುದು ಅನ್ನಿಸ್ತಿದೆ.



ನಾನು ಬರ್ದವೆಲ್ಲ ನನ್ನವೇ ಕೂಸುಗಳು ಅಂತ ಪತ್ತೆಹಚ್ಲಿಕ್ಕೆ ಯಾವ DNA ಪರೀಕ್ಷೆಯ ತಂತ್ರಜ್ಞಾನನೂ ಇನ್ನೂ ಬಂದಿಲ್ಲ ಅನ್ಸುತ್ತೆ .ಕವಿತೆ ಹುಟ್ಟುತ್ತಲ್ಲ -ಆ ಕ್ಷಣ ಯಾರ್ದು? ನನ್ನದಾ ಅಥವಾ ಇದ್ದಕ್ಕಿದ್ಹಂಗೆ ಗರ್ಭ ಕಟ್ಟಿಸೋ ಪರಿಸರದ್ದಾ? ಆದ್ರೆ ಒಂದು ವಿಷ್ಯ - ನನ್ನೊಳ್ಗೆ ಬರ್ಸ್ಕೊಂಡ ಎಲ್ಲ ಸಾಲುಗಳನ್ನೂ ನಾನು scientific ಆಗಿ prove ಮಾಡ್ತೀನಿ . ಅದಕ್ಕೆ ಬೇಕಾದ documents / witnesses ನನ್ಹತ್ರ ಇವೆ. ಅದೇ ದೊಡ್ಡ ಖುಷಿ ನಂಗೆ. ನಿಮ್ಗಿದೆಲ್ಲಾ ತಮಾಷೆ ಅನ್ನಿಸ್ಬಹುದೇನೋ!


ನಂಗೆ ಕವಿತೆ ಅನ್ನೋದು ಒಂದು defence mechanism . ಈ ಕವಿತೆಗಳ ಮೇಲೆ ಯಾಕೆ ಅಷ್ಟೊಂದು ಸಿಟ್ಟು ಅಂದ್ರೆ ,ಅವ್ಗಳ ಓದು ನಮ್ಮ ಸಾಹಿತ್ಯ ವಲಯದಲ್ಲಿ prejudice based ಆಗಿರೋದು.ಈಗಾಗ್ಲೇ ಕವಿ ಅಂತ ಗುರುತಿಸ್ಕೊಂಡವ್ರು,ನಾಲ್ಕಾರು ಪ್ರಶಸ್ತಿಗಳ್ನ ತಲೆ ಮೇಲೆ ಅಂಟಿಸ್ಕೊಂಡವ್ರು,famous ಆದವ್ರು ಏನು ಗೀಚಿದ್ರೂನೂ ಕವಿತೇನೇ.ಈ ಕಾಲ್ದಲ್ಲಿ ದಿನಕ್ಕೆ ಹತ್ತೊ- ಹದಿನೈದೊ ಕವಿತೆ ಹಡ್ಯೋರೂ ಇದ್ದಾರೆ ! ಕಾರಲ್ಲೇ ಹೋಗೋರು ಕಾಲ್ನಡಿಗೆಯ ಕವಿತೆಗಳ್ನ ತುಂಬಾ ಚೆನ್ನಾಗಿ ಕಟ್ತಿದ್ದಾರೆ! ನಂಗೆ ನಗು ಬರುತ್ತೆ.


ಹಿಂಗೆ ಹಸ್ತಪ್ರತಿಗಳ್ನ ಆಗಾಗ ಬಿಡುಗಡೆಗೊಳ್ಸೋ ಭಾಗ್ಯ ನಂಗೆ ಬರ್ತಾ ಇರ್ಲಿ ಅಂತ ಕಾಯ್ತಾನೇ ಇರ್ತೀನಿ. ಈ ವರ್ಷ ಕವಿತೆಗಳು ಹೆಚ್ಚೆಚ್ಚು ಸಯಾಮಿಗಳಾಗಿ ಹುಟ್ಟಿ ಮೂರ್ನೇ ಹಸ್ತಪ್ರತೀನ ನಾನೇ ಚಪ್ಪಾಳೆ ತಟ್ಟಿ ನಾನೇ ಬಿಡುಗಡೆಗೊಳಿಸ್ಕೋಬೇಕು ಅನ್ನೋ ಪ್ಲ್ಯಾನೂ ಇದೆ.


ನಿಜ, ಆಮೇಲೆ ನನ್ನನ್ನೇ ನಾನು ಬಿಡುಗಡೆಗೊಳಿಸ್ಕೋಬೇಕು ಅನ್ನೋ ಪ್ಲ್ಯಾನೂ ಕೂಡ ಬಾಕಿ ಇದೆ!!

**

-ಕಾಜೂರು ಸತೀಶ್

Saturday, October 18, 2014

ಅಟ್ಟ

ಬೋರಜ್ಜ ಮಹಾನ್ ಕುಡುಕ .
ಪ್ರತಿದಿನ ಕಂಠಪೂರ್ತಿ ಕುಡಿದು
ಲಕ್ಷ್ಮಜ್ಜಿಗೆ ಬಡಿಯುವುದೇ ಕಾಯಕ.
ಪೆಟ್ಟು ತಿನ್ನುವ ಲಕ್ಷ್ಮಜ್ಜಿ
ಅಕ್ಕಿಮೂಟೆಯ ಹಾಗೆ ಮುದುರಿ
ಚಾಪೆಯಲ್ಲಿ ನಿದ್ದೆ.
ಒಮ್ಮೊಮ್ಮೆ ಜಾಡಿಸಿ ಒದೆಯಬೇಕೆನಿಸಿದ್ದೂ ಉಂಟು ಲಕ್ಷ್ಮಜ್ಜಿಗೆ .
ಹಿಂಸೆ ತಾಳಲಾರದೆ
ಅಡಗಿಕೊಳ್ಳಲು ಅಟ್ಟದ ಆಸರೆ.



'ಏ ರಂಡೆ, ಎಲ್ಸತ್ತೆ'
ಬೋರಜ್ಜನ ಅರಚಾಟ.
ಅಜ್ಜಿ ಅಟ್ಟ ಸೇರಿದ ಮೇಲೆ
ಬೈಗುಳ ಕೇಳುವವರಾರು?




'ಮೇಲೊಬ್ಬರಿದ್ದಾರೆ
ಎಲ್ಲ ಅವ್ರೇ ನೋಡ್ಕೋತಾರೆ'
ಮಡಿಕೆಯೊಡೆದು, ಬಾಗಿಲು ಮುರಿದು
ಸಿಟ್ಟು ತೀರಿಸಿಕೊಳ್ಳುತ್ತಾನೆ ಬೋರಜ್ಜ .



'ಮೇಲೊಬ್ಬರಿದ್ದಾರೆ
ಎಲ್ಲ ಅವ್ರೇ ನೋಡ್ಕೋತಾರೆ '
ಹೇಳಿಕೊಳ್ಳುತ್ತಾಳೆ ಲಕ್ಷ್ಮಜ್ಜಿ.



ಸಿಟ್ಟು ಕಡಿಮೆಯಾಗುವಷ್ಟರಲ್ಲಿ
ಇಬ್ಬರ ದೇವರೂ ಕೆಳಗಿಳಿದು ಬಂದು
ಒಂದೇ ತಟ್ಟೆಯಲ್ಲಿ
ಗಂಜಿಯೂಟ!
**

ಮಲಯಾಳಂ ಮೂಲ- ಸುಧೀಶ್ ಕೊಟ್ಟೆಂಬರಮ್





ಕನ್ನಡಕ್ಕೆ -ಕಾಜೂರು ಸತೀಶ್

Thursday, October 16, 2014

ರಾಮ ಮತ್ತು ಲಕ್ಷ್ಮಣ

ಸಾಹುಕಾರ್ರು ರಾಮ.
ಸರಳತೆಯೆಂದರೇನೆಂದು
ಅವರನ್ನೇ ನೋಡಿ ಕಲೀಬೇಕು.


ಸರಳ ಉಡುಪು
ಮೃದು ಮಾತು
ಸಾತ್ವಿಕ ಆಹಾರ
ಸಾತ್ವಿಕ ಮುಖಭಾವ .


ಆರು ಕಾರುಗಳಿದ್ದರೂ
ಒಂದು ಕಾರಿನಲ್ಲಿ ಹೋಗುವುದನ್ನೂ
ನಾವೆಂದೂ ನೋಡಿಲ್ಲ.
ಕೋಟ್ಯಾಧಿಪತಿಯೆಂಬ ಭಾವ
ಇಲ್ಲವೇ ಇಲ್ಲ.


ವ್ಯಾಪಾರಕ್ಕೆಂದು
ವಾರಕ್ಕೆರಡು ಬಾರಿ
ಮುಂಬೈ-ಚೆನ್ನೈಗೆ ಪ್ರಯಾಣ .
ಹೋಗೋದು,ಬರೋದು
ಯಾರಿಗೂ ಗೊತ್ತಾಗಲ್ಲ.



ತನ್ನ ಉಗ್ರ ಪ್ರತಾಪ ತೋರಿ
ಊರೊಳಗೆ ಮೆರೆಯುವ
ಅಭ್ಯಾಸ ಇಲ್ಲವೇ ಇಲ್ಲ.


ಬಂಗಲೆಯಲ್ಲಿದ್ದಾಗ
ಒಂದು ಬನಿಯನ್ನು
ಒಂದು ಬರ್ಮುಡಾ ಚಡ್ಡಿ .
ಬಾಲ್ಕನಿಯಲ್ಲಿ ಕುಳಿತು
ಮೊಬೈಲಿನಲ್ಲಿ ಮಾತುಕತೆ .



ಬೆಳಿಗ್ಗೆ
ಸಂಜೆ
ದೇವಸ್ಥಾನದಲ್ಲಿ .



ಪ್ರಾರ್ಥಿಸಿದರೆ
ಈ ಸಾಹುಕಾರ್ರ ಹಾಗೆ
ಪ್ರಾರ್ಥಿಸಬೇಕು.


ಕಣ್ಮುಚ್ಚಿ
ಅಡ್ಡಬಿದ್ದು
ನಮಸ್ಕರಿಸುವುದು ನೋಡಿದರೆ
ಎಂಥ ದುಷ್ಟ ದೇವರುಗಳ
ಮನಸ್ಸೂ ಕರಗಿಬಿಡುತ್ತದೆ.



ಕೊಡುಗೈ ದಾನಿ
ದೇವಸ್ಥಾನ
ಮಸೀದಿ
ಚರ್ಚು
ಉತ್ಸವ
ಸಮ್ಮೇಳನ
ಎಲ್ಲಕ್ಕೂ ಇವರದೇ ಪ್ರಾಯೋಜಕತ್ವ.



ಯಾವಾಗ ಸಾಲ ಕೇಳಿದ್ರೂ
ಎಷ್ಟು ಕೇಳಿದ್ರೂ
ಇಲ್ಲವೆನ್ನೋದಿಲ್ಲ.
ಹಿಂತಿರುಗಿಸಲು ಕೇಳುವುದೂ ಇಲ್ಲ.
ಬಾಂಡ್ ಪೇಪರಿನಲ್ಲಿ ಒಂದು ಸಹಿ ಮಾಡಿದರೆ ಸಾಕು.



ಲಕ್ಷ್ಮಣ ಇವನ ತಮ್ಮ .
ಇಷ್ಟೊಳ್ಳೆ ಸಾಹುಕಾರ್ರ ತಮ್ಮ
ಇವನೇನಾ ಅಂತ ಎಲ್ಲರ ಪ್ರಶ್ನೆ .
ರಾಕ್ಷಸ ಕುಲದವನು
ದುಷ್ಟತನದ ಪರಮಾವಧಿ .


ಅಣ್ಣ ಕೊಟ್ಟ ಹಣವನ್ನು
ಹಿಂತಿರುಗಿ ಪಡೆದು
ಜನರಿಗೆ ದ್ರೋಹ ಬಗೆಯುವವನು
ಎಳೆದ ರೇಖೆ ಮೀರಿದರೆ
ಗೂಂಡಾಗಳನ್ನು ಬಿಟ್ಟು ಒದೆಸುವವನು
ಮನೆಯಿಂದ ಎಳೆದು ಹೊರಹಾಕುವವನು
ಕೊಲ್ಲಲೂ ಹಿಂಜರಿಯದವನು.


ಎಷ್ಟು ಆರೋಪಗಳು ಅವನ ಮೇಲೆ
ಅವೆಲ್ಲ ನಿರ್ನಾಮವಾದರೂ
ಕೊಲೆಕೇಸಿನ ಮೇಲೆ
ಕಂಬಿ ಎಣಿಸಿದ್ದೂ ಆಯಿತು .


ಅದರ ತಲೆನೋವೆಲ್ಲ
ಈ ಸಾಹುಕಾರ್ರಿಗೇ.


ಜಾಮೀನು ಪಡೆಯಲು
ಕೇಸು ನಡೆಸಲು
ಲಕ್ಷಗಟ್ಟಲೆ ಖರ್ಚುಮಾಡಿದ್ದಾನೆ
ಚಿನ್ನದಂಥ ಆ ಮನುಷ್ಯ .

**

ಮಲಯಾಳಂ ಮೂಲ- ರಾಧಾಕೃಷ್ಣನ್ ಪೆರುಂಬಳ




ಕನ್ನಡಕ್ಕೆ -ಕಾಜೂರು ಸತೀಶ್

Tuesday, October 7, 2014

ಓಟ

ಒಂದು ದಿನ ನಿದ್ದೆಯಿಂದ ಎದ್ದು ನೋಡಿದೆ.
ಎಲ್ಲವೂ ಓಡುತ್ತಲೇ ಇವೆ:
ಹುಲಿಗಳು,ಮರಗಳು,
ಬೆಟ್ಟಗಳು ,ನದಿಗಳು ,
ಮೋಡಗಳು ,ನಕ್ಷತ್ರಗಳು ,
ಸೂರ್ಯ , ಚಂದ್ರ ...
ಎಲ್ಲವೂ...



ನಿಬ್ಬೆರಗಾಗಿ ನೋಡಿದೆ:
ಒಬ್ಬಾತ ಹುಚ್ಚುಹಿಡಿದಂತೆ
ಚೂಪು ಕಠಾರಿಯ ಹಿಡಿದು
ಅವುಗಳ ಬೆನ್ನಟ್ಟಿ ಓಡುತ್ತಿದ್ದಾನ .



ಅವನನ್ನೇ ದಿಟ್ಟಿಸಿ ನೋಡಿದೆ-
ನೋಡಲು ಥೇಟ್ ನನ್ನ ಹಾಗೆ !
ನನ್ನ ಕೈಗಳನ್ನು ನೋಡಿಕೊಂಡೆ-
ಕೈಯ ತುಂಬೆಲ್ಲ ರಕ್ತವೋ ರಕ್ತ!

**

ಮಲಯಾಳಂ ಮೂಲ- ಕೆ.ಸಚ್ಚಿದಾನಂದನ್

ಕನ್ನಡಕ್ಕೆ - ಕಾಜೂರು ಸತೀಶ್

Sunday, September 21, 2014

ನನ್ನ ಜೀವನದ ಮೊಟ್ಟಮೊದಲ ಸ್ತ್ರೀಯು ಕಟ್ಟಕಡೆಯ ಸ್ತ್ರೀಗೆ ಹೇಳಿದ್ದು

ಮಗಳೇ,
ಅದು ಕಡಲ ತೀರ
ಕಗ್ಗತ್ತಲು
ಉರಿದುರಿದು ಹೋಗುತ್ತಿರುವ
ಕೋಣೆಯ ಮೇಣದ ಬತ್ತಿಗಳು.





ಪರ್ವತಾರೋಹಿಗಳು
ಕೈಕೊಡಲಿಯಿಂದ ಕೊಚ್ಚಿ ಊರುತ್ತಾ
ನನ್ನಾಳಕ್ಕೆ ನುಗ್ಗಿ ಮೇಲೇರುತ್ತಿದ್ದರು.
ಸುಟ್ಟು ಕರಿದರೂ
ಒಂದೆಲೆಯನ್ನು ಗಟ್ಟಿಯಾಗಿ ಹಿಡಿದು ನಿಂತ ಮರದಂತೆ
ಅವನನ್ನು ಹಸಿರಾಗಿಯೇ ನಿಲ್ಲಿಸಿದ್ದೆ.






ಕಡೆಗೆ ,
ಅವನು ಇಳಿದು ಹೋದ-
ನನ್ನಾಳದ ನೋವಿನಿಂದ
ನೋವೇ ಇಲ್ಲದ ಹಾಗೆ.
ತುಂಡಾದ ಕಳ್ಳುಬಳ್ಳಿ
ಮುಂಭಾಗದಲ್ಲೇ ಬಾಲವಿರುವ
ಒಂದು ಹಂದಿಯಾಗಿಸಿತು ನನ್ನನ್ನು .







ಈಗ ,
ಅದೇ ಹಂದಿ
ವಾರ್ಧಕ್ಯದ ಕೆಸರುಗುಂಡಿಯಲ್ಲಿ
ಮೈಮುದುರಿ ಮಲಗಿದೆ.
ನನಗೀಗ ಸಾವಿರ ಸಾವಿರ ಬಾಲಗಳು-
ಉಸಿರಾಡಲು
ಉಚ್ಚೆ ಉಯ್ಯಲು
ಊಟ ಮಾಡಲು
ಔಷಧಿ ಒಯ್ಯಲು.





ಮಗಳೇ,
ಈ ವಾರ್ಧಕ್ಯ ಅಂದ್ರೆ ಹಾಗೇನೇ.
ಅಲ್ಲಿ
ಬಾಲವೇ ತಲೆಗಿಂತ ದೊಡ್ಡದು
ನಿಶ್ಚಲತೆ ಚಲನೆಗಿಂತ ಸ್ಥಾಯಿ
ಫ್ಯಾನಿನ ಹೂದಳಗಳಂಥ ರೆಕ್ಕೆಗಳು
ಮಗನ ಕೈಗಳೆಂಬೊ ರೆಕ್ಕೆಗಳಿಗಿಂತ
ಪ್ರೀತಿಯನ್ನುಣಿಸುತ್ತದೆ.






ಮಗಳೇ,
ಅವನು
ನಿನ್ನ ಬೆರಳುಗಳಲ್ಲಿ ಬೆರಳು ಸೇರಿಸಿ
ಕೂರುವನೇ ನಿನಗಂಟಿಕೊಂಡು?
ನಾಲ್ಕೈದು ಮಾತ್ರೆಗಳ ಬದಲಿಗೆ
ಒಂದು ಚುಂಬನದಿಂದ
ಗುಣಪಡಿಸುವನೇ ನಿನ್ನ ಕಾಯಿಲೆಯನ್ನು ?
ಕಸಬಿದ್ದ ಕಣ್ಣಿಗೆ
ಫೂ..ಫೂ.. ಊದುವನೇ ನಿನ್ನನ್ನಪ್ಪಿ?
ಎಷ್ಟೆಷ್ಟೋ ಅಗ್ನಿಕುಂಡಗಳ
ಧಗಧಗಿಸುವ ಗಾಳಿಯನ್ನು
ಅವನೊಳಗೆ ಕೂಡಿಟ್ಟಿದ್ದೆ ನಾನು .






ಇಷ್ಟಾದರೂ ಅವನಿಗೆ ತಿಳಿದಿಲ್ಲ .
ಪ್ರಿಯ ಮಗಳೇ,
ಸುಮ್ಮನೆ ಅವನ ತೊಡೆಯನ್ನೊಮ್ಮೆ ಅಪ್ಪಿಕೊಂಡಿದ್ದಿದ್ದರೆ
ಸಾವು ಅವನ ಮುಖದ ಮೇಲೆ
ಮಂಜುಗಡ್ಡೆಯನ್ನಿಡುತ್ತಿತ್ತೇನೊ.






ಮುದ್ದು ಮಕ್ಕಳು
ಉತ್ತೀರ್ಣರಾಗುತ್ತಿದ್ದರೂ
ಅನುತ್ತೀರ್ಣಗೊಳ್ಳುತ್ತಲೇ ಇರುವ
ಶಾಲೆಗಳಂತೆ
ಏನಾದರೂ ಸರಿ
ನಾವು ತಳವೂರಿ ನಿಲ್ಲುತ್ತಿದ್ದೇವೆ.






ತೋಯ್ದು ತೊಪ್ಪೆಯಾಗಿ ಬರುವ
ಒಂದು ಬಲಿಷ್ಠ ನಾಯಿಗೆ
ಮುರಿದ ಗುಡಿಸಲಿನ ಕೆಳಗೆ
ಆಶ್ರಯ ಇನ್ನೂ ಇದ್ದೇಯಿದೆ.





ಆ ನಾಯಿ
ಅವನೇ ಆಗಿದ್ದರೂ ಕೂಡ .

**

ಮಲಯಾಳಂ ಮೂಲ: ಪಿ. ಎನ್. ಗೋಪಿಕೃಷ್ಣನ್

ಕನ್ನಡಕ್ಕೆ : ಕಾಜೂರು ಸತೀಶ್

Thursday, September 4, 2014

'ಗುರು' ಎಂಬೋ ಬೆಳಕಿನ ಬೀಜ.

-1-
ಮತ್ತೆ ಶಿಕ್ಷಕರ ದಿನ ಎದುರಿಗೆ ಬಂದಿದೆ .ಎಂಥವರೂ ತಮ್ತಮ್ಮ ಆದರ್ಶ ಶಿಕ್ಷಕರನ್ನು ನೆನೆದು ಭಾವುಕರಾಗುವ ದಿನವಿದು.


ಕಳೆದೆರಡು ವರ್ಷಗಳ ಹಿಂದೆ ನನ್ನ ಗೆಳೆಯನೊಬ್ಬ ನಮಗೆ ಹೈಸ್ಕೂಲಿನಲ್ಲಿ ಗಣಿತ ಪಾಠ ಹೇಳಿಕೊಡುತ್ತಿದ್ದ 'ಗುರುಸ್ವಾಮಿ ಮಾಸ್ಟ್ರ' ಮೊಬೈಲ್ ನಂಬರ್ ಕೊಟ್ಟಿದ್ದ . ಈವರೆಗೂ ನಾನವರಿಗೆ ಕರೆಮಾಡಲು ಹೋಗಲಿಲ್ಲ ; ಎಷ್ಟೋ ಬಾರಿ ಕರೆಮಾಡೋಣವೆಂದು ಮೊಬೈಲ್ ಕೈಗೆತ್ತಿಕೊಂಡರೂ ಮತ್ತೆ ಸುಮ್ಮನಾಗಿದ್ದೆ.


ನನ್ನ ಹೈಸ್ಕೂಲು ವಿದ್ಯಾಭ್ಯಾಸ ಮುಗಿದು ಮೂರು ವರ್ಷಗಳ ಮೇಲೆ ನಾನು ಮತ್ತು ಅವರು ಸಂಜೆಗತ್ತಲಿನಲ್ಲಿ ಭೇಟಿಯಾಗುತ್ತಿದ್ದೆವು.ಅವರ ಕೈಯಲ್ಲೊಂದು ಸಣ್ಣ ಟಾರ್ಚ್ ಇರುತ್ತಿತ್ತು .ನಾನು ಕಾಲೇಜು ಮುಗಿಸಿ ಮನೆಗೆ ಹಿಂತಿರುಗಲು ಗಡಿಯಾರದ ಮುಖವನ್ನೇ ನೋಡಿರದ ಸರ್ಕಾರಿ ಬಸ್ಸನ್ನು ಕಾಯುತ್ತಾ ಕೂತಿರುತ್ತಿದ್ದೆ. ಅವರೂ ಸ್ಪೆಷಲ್ ಕ್ಲಾಸ್ ಮುಗಿಸಿ ಮನೆಯ ಹಾದಿ ಹಿಡಿದಿರುತ್ತಿದ್ದರು .ರಾತ್ರಿ ಮನೆ ತಲುಪುತ್ತಿದ್ದದ್ದು 8ಕ್ಕೆ.ಬೆಳ್ಳಂಬೆಳಿಗ್ಗೆಯೇ ಮನೆಬಿಟ್ಟು ಶಾಲೆ ತಲುಪುತ್ತಿದ್ದರು. ಅವರ Dedication ನೆನೆದಾಗ ನಿಜಕ್ಕೂ ಮಾತು ಹೊರಳೋದಿಲ್ಲ.


ಗುರುಸ್ವಾಮಿ ಮಾಸ್ಟ್ರು ಮೂರು ವರ್ಷಗಳಲ್ಲಿ ನಮಗೆ ಹೇಳಿದ್ದು ಒಂದೇ ಒಂದು ಜೋಕ್-'ಭಾರತೀಯನ ಮೆದುಳು ಸವೆಯೋದಿಲ್ಲ'! [ತಮಾಷೆ ಅಂದ್ರೆ ,ನಾನು ಶಿಕ್ಷಕನಾದ ಮೇಲೆ ನನ್ನ ವಿದ್ಯಾರ್ಥಿಗಳಿಗೂ ಇದನ್ನು ಹೇಳಿಕೊಟ್ಟಿದ್ದೆ. ಮುಂದೆ ಅದೇ ಜೋಕನ್ನು ಅದೇ ಮಕ್ಕಳಿಗೆ ಮಾಸ್ಟ್ರು ಹೇಳಲು ಹೊರಟಾಗ 'ಇದನ್ನು ಸತೀಶ್ ಮಾಸ್ಟ್ರು ಹೇಳಿಕೊಟ್ಟಿದ್ದಾರೆ' ಎಂದರಂತೆ!]


ಒಮ್ಮೆ ಪ್ರಿನ್ಸಿಪಾಲರಾದ್ದ ಕೆಂಪಯ್ಯ ಸರ್ ಎಲ್ಲರ ಎದುರಿಗೆ 'ಗುರುಸ್ವಾಮಿ ಮಾಸ್ಟ್ರು ಈಗ ಒಂದು ಹಾಡು ಹಾಡುತ್ತಾರೆ' ಎಂದುಬಿಟ್ಟರು! ಮುಜುಗರಕ್ಕೊಳಗಾದ ಮಾಸ್ಟ್ರು ' ಭೂಮಿ ಹುಟ್ಟಿದ್ದು ಹೇಗೆ? ಹೇಗೆ? ಹೇಗೆ?' ಎಂದು ಹಾಡಲು ತೊಡಗಿದಾಗ ಒಂದು ಕ್ಷಣ ನಾವೆಲ್ಲರೂ ನಕ್ಕುಬಿಟ್ಟಿದ್ದೆವು!


ಒಂದು ಇರುವೆಯನ್ನೂ ನೋಯಿಸದ ವ್ಯಕ್ತಿ ಅವರು . ಆದರೆ ,ಸಿಟ್ಟು -ಸಂತೋಷದ ಸಂದರ್ಭಗಳಲ್ಲಿ ಇದ್ದಕ್ಕಿದ್ದಂತೆ ಭಾವುಕರಾಗಿಬಿಡುತ್ತಿದ್ದರು. ಗಾಂಧಿಯ ಪ್ರತಿರೂಪದಂತಿರುವ ಅವರು ಈಗ ಕುಶಾಲನಗರದ ಕಾಲೇಜಿನಲ್ಲಿ ಭೌತಶಾಸ್ತ್ರ ಉಪನ್ಯಾಸಕರಾಗಿ ಯಾವ ಪ್ರಶಸ್ತಿಗೂ ಅರ್ಜಿ ಸಲ್ಲಿಸದೆ ಮತ್ತದೇ ಸೇವಾ ಮನೋಭಾವದಿಂದ ದುಡಿಯುತ್ತಿದ್ದಾರೆ.


-2-

ಇಂತಹ ಅನೇಕ ಶಿಕ್ಷಕರುಗಳ ಬೆಳಕನ್ನು ಕಡೆಪಡೆದವರಂತೆ ಪಡೆದು ಬದುಕುತ್ತಿದ್ದೇವೆ. ಆದರೆ , ವಾಸ್ತವ ಅತ್ಯಂತ ಭೀಕರವಾಗಿದೆ. ಶಿಕ್ಷಕರ ನಡವಳಿಕೆಯ ಮೇಲೆ ಸಮಾಜ ಸಂಶಯಪಡುವಂತಾಗಿದೆ. ವೃತ್ತಿಯ ಒತ್ತಡ 'ಅತೃಪ್ತಿ'ಯನ್ನು ಉಡುಗೊರೆಯಾಗಿ ನೀಡುತ್ತಿದೆ .ಶಿಕ್ಷಕರೇ ಹಳೆಯ ವಿದ್ಯಾರ್ಥಿಗಳು ಸಿಕ್ಕಾಗ ಪರಿಚಯ ಹೇಳಿಕೊಳ್ಳುವ ಕಾಲ ಸೃಷ್ಟಿಯಾಗುತ್ತಿದೆ! ಅದರ ನಡುವೆ ಹುಣ್ಣಿಮೆ- ಅಮವಾಸ್ಯೆಗಳಂದು ಶಾಲೆಯ ಕಡೆ ಮುಖಮಾಡುವ 'ಶಿಕ್ಷಕ'ರೆನಿಸಿಕೊಂಡ ಕೆಲವರು 'ರಾಜ್ಯ ಪ್ರಶಸ್ತಿ'ಯನ್ನು 'ಪಡೆದು' ಬೀಗುತ್ತಿದ್ದಾರೆ.

ಈ ಕೊರತೆಗಳನ್ನು ಮೀರುವ ಕಾಲ ಬರುತ್ತದೆ ಎಂದು ನನಗೇನೂ ಅನ್ನಿಸುವುದಿಲ್ಲ. ಇಡೀ ವ್ಯವಸ್ಥೆಯೇ ಖಾಸಗೀಕರಣದ ಮುಖವನ್ನು ಧರಿಸುತ್ತಿದೆ. 'ಏಕರೂಪದ ವ್ಯವಸ್ಥೆ' ಈ ಶತಮಾನ ಕಳೆದರೂ ಜಾರಿಯಾಗುವುದಿಲ್ಲ ಎನ್ನಿಸುತ್ತಿದೆ.


ಎಲ್ಲರಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು!


-ಕಾಜೂರು ಸತೀಶ್

Tuesday, September 2, 2014

ನನ್ನ ಪ್ರೀತಿಯ ಸಾವಿಗೆ

ಯಾಕೆ ಓಡಿಹೋಗುತ್ತಿರುವೆ
ಮುದಿ ವಯಸ್ಸಿನ ಮಂದಿಯ ಜೊತೆಗೆ
ಎಳೆ ವಯಸ್ಸಿನ ಮಕ್ಕಳ ಜೊತೆಗೆ .



ಮಳೆಗಾಲದ ಮೀನಿನ ಕಣ್ಣುಗಳನ್ನು ಧರಿಸಿರುವ ನಿನಗೆ
ದಾರಿ ತೋರುವೆ ಬಾ
ಇಕೋ ನನ್ನೆರಡು ಶುಭ್ರ ಕಣ್ಣುಗಳು .



ನೋಡಿಲ್ಲಿ
ತಾರುಣ್ಯವನ್ನು ಹೇಗೆ ಮೈದುಂಬಿ ನಿಂತಿದ್ದೇನೆ ನಾನು .



ಜಾತಿಯಿಲ್ಲದ, ಆಕಾರವೇ ಇಲ್ಲದ
ನೀನೆಂದರೆ ನನಗಿಷ್ಟ.
ಬಾ, ಕೈ ಕೈ ಹಿಡಿದು ಎಲ್ಲಾದರೂ ಓಡಿಹೋಗೋಣ
ಲೋಕಕ್ಕೆ ತಿಳಿಯದ ಹಾಗೆ .



ನೀನೊಂದು ಗಾಳಿಯ ಮುದ್ದೆ
ನಿನ್ನ ಗಾಳಿಬೆರಳು, ಗಾಳಿತುಟಿ
ಗಾಳಿಯದ್ದೇ ಅಂಗಾಂಗ
ನನ್ನ ಕಾದ ಮೈಗೆ ಅದೆಷ್ಟು ಮುದ ನೀಡಬಹುದು !



ಎರಡೇ ಎರಡು ಆಸೆ ನನಗೆ :
ನಿನ್ನೊಂದಿಗೆ ಕೂಡುವುದು
ಮತ್ತು
ನಿನ್ನೊಂದಿಗೆ suicide ಮಾಡಿಕೊಳ್ಳುವುದು !
**

-ಕಾಜೂರು ಸತೀಶ್

Friday, August 29, 2014

ನನಗೆ ಸ್ವಾತಂತ್ರ್ಯ ಸಿಗುವ ದಿನ

-೧-

ನನಗೆ ಸ್ವಾತಂತ್ರ್ಯ ಸಿಗುವ ದಿನ:



ಗಾಳಿಯನ್ನು ಕಿಟಕಿ -ಬಾಗಿಲುಗಳಲ್ಲಿ ಊಳಿಡಲು ಬಿಡುತ್ತೇನೆ;
ಹೊರಗಿರುವ ನಾಯಿಯೂ ಅದನ್ನೇ ಅನುಕರಿಸಿದರೆ ಸುಮ್ಮನಿರುತ್ತೇನೆ.





ಬೆಳಕಿಗಾಗಿ ಗೋಡೆಯನ್ನೆಲ್ಲ ತೂತುಮಾಡಿ ಕೆಡವುತ್ತೇನೆ;
ಕೋಣೆಯೊಳಗೂ ಹೊರಗೂ ಒಂದೇ ಬಟ್ಟೆ ತೊಟ್ಟು ನಡೆಯುತ್ತೇನೆ.







ನೋಟು -ನಾಣ್ಯಗಳನ್ನು ಮೇಜಿನ ಮೇಲೆ ಹರಡಿಡುತ್ತೇನೆ;
ಅಡುಗೆ ಪಾತ್ರೆಗೆ ಮುಚ್ಚಳ ಬಳಸುವುದನ್ನೇ ನಿಷೇಧಿಸುತ್ತೇನೆ.






ಕವಿತೆ ಬರೆದಿಟ್ಟ ಹಾಳೆಗಳಲ್ಲಿ ತಿಂಡಿ ಪೊಟ್ಟಣ ಕಟ್ಟುತ್ತೇನೆ;
ಬೀಗದ ಕೀಗಳನ್ನು ಗುಜರಿಯಂಗಡಿಗೆ ಬಿಟ್ಟಿಯಾಗಿ ಕೊಡುತ್ತೇನೆ .






ನಡುರಾತ್ರಿಯಲ್ಲಿ ದೀಪಗಳನ್ನು ಬಹಿಷ್ಕರಿಸುತ್ತೇನೆ;
ಸುಂದರಿ ಗೆಳತಿಯನ್ನು ಅದೇ ಹೊತ್ತಿಗೆ ಕುಂಟಾಬಿಲ್ಲೆ ಆಡಲು ಕಳಿಸುತ್ತೇನೆ.






ಹುಟ್ಟುವ ಕತೆ-ಕವಿತೆಗಳನ್ನು ಕೊಲ್ಲುತ್ತೇನೆ;
ರಸ್ತೆಯ ಕಪ್ಪು ಕಂಬಳಿಯಲ್ಲಿ ಮಲಗಿ ಹಾಯಾಗಿ ನಿದ್ರಿಸುತ್ತೇನೆ.










-೨-


ನನಗೆ ಸ್ವಾತಂತ್ರ್ಯ ಸಿಗುವ ದಿನ:


ಮನೆ-ದೇಶ-ರಾಜ್ಯಗಳುದುರುತ್ತವೆ.
ಆಮೇಲೆ -ನಕ್ಷೆಯೆಂದರೆ ನೆಲ ಮತ್ತು ನೀರು,ಅಷ್ಟೆ .







ಜಗತ್ತು ಮನೆಯಾಗುತ್ತದೆ;
ನಾವೆಲ್ಲ ಅದರ ಮಕ್ಕಳಾಗುತ್ತೇವೆ.










ಹಿಂಸಿಸುವ ಎಲ್ಲವೂ ಮಾಯವಾಗುತ್ತದೆ;
ಬಾಂಬು ,ಬಂದೂಕು ,ಕತ್ತಿ ,ಮಾತು, ಕವಿತೆ...
ಎಲ್ಲವೂ ಆರ್ಟ್ ಗ್ಯಾಲರಿಗಳಲ್ಲಿ ಖುಷಿಯಾಗಿರುತ್ತವೆ.


**

-ಕಾಜೂರು ಸತೀಶ್




Wednesday, August 6, 2014

ನೀನು ಕೊಲೆಯಾದ ಮೇಲೆ ನಿನ್ನ ಅಂಗಿ ಧರಿಸಿ ಬರೆದದ್ದು .

ಎಷ್ಟು ನೆನಪುಗಳ ಭಾರ
ನಾನು ಧರಿಸಿದ ನಿನ್ನ ಅಂಗಿಯಲ್ಲಿ.


ಹೊರಡುವ ಮುನ್ನ
ಯಾವ ವಿಷಜಂತುಗಳಿರುವ ಕಾಡು ನುಗ್ಗಿದ್ದೆ ನೀನು -
ಅವುಗಳಿಗೆ ಸರಿದಾರಿ ತೋರಿಸಿ ಬರಲು.
ಅಂಗಿಗಂಟಿದ ಚುಂಗು ಎಷ್ಟು ಕಿತ್ತರೂ
ಅಲ್ಲೊಂದಿಲ್ಲೊಂದರಂತೆ ಚುಚ್ಚುತ್ತಾ
ನಿನ್ನ ನೆನಪಿಸಲೆಂಬಂತೆ ಉಳಿದುಕೊಂಡಿವೆ.


ನೀನು ಹೊರಟುಹೋದ ಮೇಲೂ
ನೀಲಿಗಟ್ಟಿದ ನಿನ್ನ ಮೈಗೆ ಅಂಟಿ
ಬಲೂನಾಗಲು ಹೊರಟ
ಉಣ್ಣಿಯ ನೆನಪು ನನಗೀಗ.


ನಿನ್ನಂಗಿಯ ಕ್ಯಾನ್ವಾಸಿನಲ್ಲಿ
ಗಾಯದ ಕೆಂಪುಗೆರೆ
ಗೇರು ಹಣ್ಣಿನ ಗುರುತು
ಬಾಳೆಯೆಲೆಯ ಕಲೆ
ಸೆಗಣಿ ಗೊಬ್ಬರದ ಕಂಪು.




ನೀನು ಗೀಚಿ ಜೇಬಲ್ಲಿಟ್ಟ ಪ್ರೇಮ ಕವಿತೆ
ಸುರಿದ ಹಾಳು ಮಳೆಯ ಕೃತಿಚೌರ್ಯಕ್ಕೆ ಸಿಲುಕಿದೆ
ಒದ್ದೆಯಾದ ಬಿಳಿಯ ಹಾಳೆ
ಅವಳ ಊದಿದ,ಬಿಳುಚಿಕೊಂಡ ಮುಖ
ಹೃದಯದ ಕೆಂಪು ಬಸಿದು
ಜೇಬಲ್ಲಿರಿಸಿದ ಗುಲಾಬಿಯದ್ದೂ ಅದೇ ಕಥೆ.




ಹಾದಿ-ಬೀದಿಯಲ್ಲಿ ನಿನ್ನ ಅಂಗಿ ತೊಟ್ಟು ನಡೆವಾಗ
ಹಿಂಬದಿಯಿಂದ ಯಾರೋ ನಿನ್ನ ಹೆಸರ ಕೂಗಿ ಕರೆವಾಗ
ಹಿಂತಿರುಗಿಯೂ ನೋಡದೆ ನಡೆದುಹೋಗುತ್ತೇನೆ
ನಿನ್ನ ಬದುಕಿಸುವ ಮಹದಾಸೆಯಿಂದ.




ವ್ಯಾಲಿಡಿಟಿ ಮುಗಿದ ನಿನ್ನ ಮೊಬೈಲ್ ಸಂಖ್ಯೆಯನ್ನು ರಿಚಾರ್ಜ್ ಮಾಡಲು ಹೊರಟಿದ್ದೇನೆ
ನಿನ್ನ ಬೇಟೆಯಾಡಿದ್ದಕ್ಕೆ
ನಮ್ಮ ಬೇಟೆಯಾಡುತ್ತಿರುವುದಕ್ಕೆ
ಕಾರಣ ಕೇಳಬೇಕು .




ಬೆಳಕಾಗುವವರೆಗೂ
ಕರೆಮಾಡಿ ಕೇಳುತ್ತಲೇ ಇರುತ್ತೇನೆ.

**

-ಕಾಜೂರು ಸತೀಶ್

Saturday, August 2, 2014

ಸೆರೆಸಿಕ್ಕದವ

ಪ್ರಿಯ ಪೊಲೀಸಣ್ಣಾ..
ಎಷ್ಟೆಂದು ಕಾಯಲಿ ನಿನ್ನ .





ನೀ ಬರಬಹುದೆಂದು
ಅವರು ಕರೆಮಾಡಿ ತಿಳಿಸಿದ ರಾತ್ರಿ
ಒಂದು ರಂ ಬಾಟಲಿ ತಂದಿಟ್ಟೆ.
ಚಿಕನ್ ಬಿರಿಯಾನಿ ಮಾಡಿಟ್ಟೆ.
ದಾರಿ ತಪ್ಪದಿರಲೆಂದು
ರಾತ್ರಿಯಿಡೀ ದೀಪ ಹಚ್ಚಿಟ್ಟೆ.






ಆದಾಗ್ಯೂ ದಾರಿ ತಪ್ಪಿದೆ ನೀನು .
ಯಾರೋ ತಪ್ಪಿಸಿದರು.
ದೂರದ ಮೊಬೈಲ್ ಟವರಿನ ಕೆಳಗೆ ನಿನ್ನ ಕರೆಗಳೆಲ್ಲ
ಹತಾಶವಾಗುರುಳುತ್ತಿದ್ದದ್ದು ನನಗರಿಯಿತು.






ನಾನು ಕೊಲೆಗೈದ ವ್ಯಕ್ತಿ
ಆ ರಾತ್ರಿ ಕನಸಿನಲ್ಲಿ ಬಂದಿದ್ದ.
ನಿನಗೆಂದು ಮಾಡಿಟ್ಟ ಬಿರಿಯಾನಿಯನ್ನು
ನಾನವನಿಗೆ ಕೊಟ್ಟೆ.
ಜೊತೆಗೆ ಒಂದು ಲೋಟ ತಣ್ಣೀರು .
ತಿಂದು , ಈ ಬೆಂಚಿನಲ್ಲಿ ಮಲಗಿ ನಿದ್ದೆಹೋದ.







ಈಗಲೂ ,
ನನ್ನೊಳಗಿನ ಆ ಬೆಂಚಿನಲ್ಲಿ
ಆತ ನಿದ್ರಿಸುತ್ತಿದ್ದಾನೆ.
ನನಗ್ಗೊತ್ತು,ಆತ ಎದ್ದೇ ಏಳುತ್ತಾನೆ;
ನನ್ನ ನೋಡುತ್ತಾನೆ .
ಅವನಿಗಷ್ಟೆ ಸಾಧ್ಯವಿರುವ
ಕರುಣೆ ತುಂಬಿದ ಧ್ವನಿಯಲ್ಲಿ ಪ್ರಶ್ನಿಸುತ್ತಾನೆ.
ಏನೆಂದು ಉತ್ತರಿಸಲಿ ನಾನು ?






ಕತ್ತಿಯ ಅಂಚು ನಾನಾಗಿದ್ದೆ;
ಹಿಡಿತ ಅವರದಾಗಿತ್ತು ಎನ್ನಲೇ?
ಬೆರಳಚ್ಚು ನನ್ನದು;
ಮಾತಿನ ಅಚ್ಚು ಅವರದಾಗಿತ್ತು ಎನ್ನಲೇ?
ಪ್ರಯೋಗ ನಾನು ;
ಆದರ್ಶ ಅವರು ಎನ್ನಲೇ?







ಅದನ್ನೆಲ್ಲ ನೆನೆಯುವಾಗ
ಒಂದೊಂದು ನೆರಳೂ ನನ್ನ ಉಸಿರುಗಟ್ಟಿಸುತ್ತಿದೆ.
ಒಂದೊಂದು ನಿಮಿಷವೂ ಸುಡುತ್ತಿದೆ.
ನಾನು ನನ್ನನ್ನೇ ಬಂಧಿಸಿಕೊಳ್ಳುತ್ತಿದ್ದೇನೆ.
ಬಿಡುಗಡೆಗೊಳ್ಳುತ್ತಲೂ ಇದ್ದೇನೆ.
ಯಾರೋ ಸೇದುವ ಬೀಡಿಯ ಹಾಗೆ
ಕ್ಷಯಿಸುತ್ತಾ ಬರುತ್ತಿದ್ದೇನೆ.
ಯಾರೋ ಜಗಿಯುವ ಚ್ಯುಯಿಂಗ್ ಗಮ್ಮಿನ ಹಾಗೆ
ವೃದ್ಧಿಸುತ್ತಲೇ ಇದ್ದೇನೆ.
ಹಗಲುಗಳು ನನ್ನ ಅಡಗಿಸಿಡುತ್ತವೆ,
ರಾತ್ರಿಗಳು ನನ್ನ ಬಯಲಾಗಿಸುತ್ತವೆ.






ಪೊಲೀಸಣ್ಣಾ ..
ನೀ ಯಾಕೆ ಬರಲಿಲ್ಲ ಹೇಳು.







ಆ ಮಚ್ಚನ್ನು
ಪವಿತ್ರ ಗ್ರಂಥದ ಹಾಗೆ ಜೋಪಾನವಾಗಿರಿಸಿದ್ದೇನೆ.
ನಡುನಡುವೆ ಓದುತ್ತೇನೆ.
ಲೋಹದಲ್ಲಿ ಬರೆದಿದ್ದು.
ಅದರರ್ಧ ರಕ್ತ
ಇನ್ನರ್ಧ ಮಾಂಸ.









ಆದರೂ ,ಅದಲ್ಲ ವಂಚನೆ
ಅದಲ್ಲ ಅಪರಾಧ .





ನನ್ನ ಜನರೇ,
ಎಂಥ ವಂಚಕ ನಾನು !
ನನ್ನಂಥವರ ಸೃಷ್ಟಿಸಲೇನು
ನೀವು ಸಂಘಟನೆ ಮಾಡಿದ್ದು?
ಸಹಿಸಿದ್ದು,ತ್ಯಜಿಸಿದ್ದು?
ನನ್ನ ಅಡಗಿಸಿಡಲೇನು
ನೀವು ನಿವಾಸಗಳನ್ನು ಸಿದ್ಧಗೊಳಿಸಿದ್ದು?
ನನ್ನನ್ನು ಬರೆಯಲೇನು
ನೀವು ರಕ್ತ ಬೆರೆಸಿದ್ದು?
ನನ್ನನ್ನು ಸ್ವತಂತ್ರಗೊಳಿಸಲೇನು
ನೀವು ಸ್ವಾತಂತ್ರ್ಯ ಸ್ವಾತಂತ್ರ್ಯ ಎಂದು ಕೂಗಿದ್ದು?



ಪ್ರಿಯ ಪೊಲೀಸಣ್ಣಾ...
**


ಮಲಯಾಳಂ ಮೂಲ- ಪಿ.ಎನ್. ಗೋಪಿಕೃಷ್ಣನ್

ಕನ್ನಡಕ್ಕೆ -ಕಾಜೂರು ಸತೀಶ್

Friday, August 1, 2014

ಮಹಜರು

ಯಾರು ಬಾಗಿಲು ಮುರಿದು ಒಳಹೋಗಿದ್ದು?
ನಾನು ,ಸಾಬು ಮತ್ತು ಲಾಡ್ಜ್ ಮ್ಯಾನೇಜರ್.
ಬಾಡಿ ಮೊದಲು ಕಂಡಿದ್ದು ಯಾರು ?
ನಾನು ಮತ್ತು ಈ ರೂಂ ಬಾಯ್.
ಎಲ್ಲಿ ?
ಒಂದು ಮಂಚದಲ್ಲಿ
ಇನ್ನೊಂದು ನೆಲದಲ್ಲಿ .
ಹೇಗೆ?
ಊದಿಕೊಂಡು,ವಾಸನೆ ಬಂದಿತ್ತು .
ಮೈಮೇಲೆ ಬಟ್ಟೆಯಿರಲಿಲ್ಲ.
ಓಹೋ..ಆಗ ಎಲ್ಲ ಮುಗಿದಿತ್ತು?
ಆಮೇಲೆ ?
ಮೈಮೇಲೆ ಬಟ್ಟೆ ಮುಚ್ಚಿದೆವು.
ತಪ್ಪು..ಸಾಕ್ಷಿ ನಾಶಪಡಿಸಬಾರದಿತ್ತು.
ಹುಂ..ಆಮೇಲೆ ?
ಸ್ಟೇಷನ್ನಿಗೆ ಫೋನ್ ಮಾಡಿ ಹೇಳ್ದೆ.
ಏನಾದ್ರೂ ಪತ್ರ-ಗಿತ್ರ ಸಿಕ್ತಾ?
ಈ ಕಾಗದದ ಚೂರು ಸಿಕ್ತು.
'ಅಮ್ಮಾ,ದಯವಿಟ್ಟು ಕ್ಷಮಿಸು' ಅಂತ ಇದೆ.
ಯಾರು ಇವ್ರಿಬ್ರು?
ಆಶಿಕ್ ಮತ್ತು ರಾಧ.
ಬೆಂಗಳೂರಿನವ್ರು.
ಪ್ರಾಯ?
20, 25.






ಕಷ್ಟ ,ಹೂವಿನಂಥ ಯೌವ್ವನದಲ್ಲಿ
ಯಾಕೆ ಹೀಗೆ ಮಾಡ್ಕೊಂಡ್ರು?
ಅದೂ ಈ ಪುಣ್ಯಕ್ಷೇತ್ರದಲ್ಲಿ.
ರತಿಯೂ ಇವರ ಪ್ರಣಯಲೀಲೆಗಳನ್ನು
ಅನುಭವಿಸಲಿಲ್ಲ ಅನ್ಸುತ್ತೆ.
ಇಲ್ದಿದ್ರೆ ಸಾಯ್ತಿರ್ಲಿಲ್ಲ.
ರತಿಯಲ್ವೆ ಪ್ರಣಯಕಥೆಯ ಏರಿಳಿತಗಳ ಸಾರ?
ಹೋಗ್ಲಿ ಬಿಡಿ,
ಪೊಲೀಸ್ರಿಗೆ ಅವೆಲ್ಲ ಯಾಕೆ?




ಮುಖಭಾವ ಹೇಗೆ?
ಹತಾಶೆ?ದುಃಖ ?ಖಿನ್ನತೆ?
ಅದೆಲ್ಲ ಸಹಜ ಸಾರ್ ಈಗ-
ಭಕ್ತರ ಮುಖದಲ್ಲೂ ಕೂಡ .
ಇಲ್ಲೆಷ್ಟು ದಿನ ಇದ್ರು?
ಹತ್ತು.




ಏಯ್ ರೂಂ ಬಾಯ್..
ನಗು ,ಅಳು ಅಥವಾ
ಏನಾದ್ರೂ ಕಿರುಚಾಟ ಕೇಳಿಸ್ತಾ ಅಲ್ಲಿಂದ?
ಹುಚ್ಚುಹುಚ್ಚಾದ ಒಂದು ಹಾಡು ಕೇಳಿದ್ದೆ.
ಯಾವ ಹಾಡು?
'ಅಮ್ಮ ಲೂಸಾ..
ಅಪ್ಪ ಲೂಸಾ..'
ಹಾಗಾದ್ರೆ ನೀನು ಬಾಗಿಲಿಗೆ ಕಿವಿಗೊಟ್ಟು ನಿಂತಿದ್ದೆ;
ಏನ್ ನಿನ್ನ್ ಹೆಸ್ರು?
ಇಲ್ಲ ಸಾರ್.. ನಾನಂಥವನಲ್ಲ.
ಹೆಸ್ರು?
ಭವದಾಸ್.
ಭವದಾಸಾ..ಹೇಳು ,ಏನು ಕೇಳಿಸ್ಕೊಂಡೆ?
ಹೊಸ ಗೆಸ್ಟುಗಳನ್ನು ರೂಮಿನೊಳಗೆ ಬಿಟ್ಟು
ವೆರಾಂಡದಲ್ಲಿ ಬರ್ತಿದ್ದಾಗ
ಆ ಹಾಡಿನ ಬಾಕಿ ಕೇಳಲು ಕಿವಿಗೊಟ್ಟೆ.
ಆದರೆ ಕೇಳಿದ್ದು:
ರಿಪೇರಿಯಾಗಿದ್ದ ಫ್ಯಾನ್
ಗಾಳಿ ಸಿಗದೆ ನರಳುತ್ತಿದ್ದದ್ದು,
ರಾತ್ರಿಯೆಂಬೊ ಹಕ್ಕಿಯ
ಕಡೆಗಾಲದ ಬಿಕ್ಕುವಿಕೆ.
ಹಾಡಿನ ದನಿ ಕಡಿಮೆಯಾಗುತ್ತಾ
ನಿಂತೇ ಹೋದದ್ದನ್ನು ಕೇಳಿ
ಅತ್ತುಬಿಟ್ಟೆ..
ಆ ಅಳು ನನ್ನ ಸಾವಿನ ಹಾಗೆ ಸಾರ್.







ಈಚೆ ಬಾ.
ನೀನೇನೊ ಮುಚ್ಚಿಡ್ತಿದ್ದೀಯ.
ಕವಿತೆಯ ಹಾಗೆ ಮಾತಾಡಿ
ಮರೆಮಾಚಬೇಡ.
ಕೀ ಹಾಕುವ ಕಿಂಡಿಯೊಳಗೆ
ಕಣ್ಣು ತೊರಿಸಿ ನೋಡಿಲ್ವಾ ನೀನು ?
ಇಲ್ಲ ಸಾರ್.
ನಿಜ ಹೇಳು-
ನಿನಗೂ ,ಆ ಹುಡುಗಿಗೂ ಸಂಬಂಧವಿರ್ಲಿಲ್ವಾ?
ಅದಕ್ಕಲ್ವಾ ಅವ್ರಿಬ್ರೂ ಸತ್ತಿದ್ದು?
ಹೇಳು, ಎಷ್ಟು ಮಂದಿಗೆ ನೀನವಳ ಬಿಟ್ಟುಕೊಟ್ಟೆ?
ಅವರಲ್ಲಿ ಯಾರು ಯಾರನ್ನು ಕೊಂದರು?
ನಿಜ ಹೇಳು,ನೀನು ಯಾರನ್ನು ಕೊಂದೆ?




ಅಯ್ಯೋ ಸಾರ್
ನನಗ್ಗೊತ್ತೇ ಇಲ್ಲ ಅವ್ರು.
ಸುಂಟಿಕೊಪ್ಪದವ್ನು ನಾನು,
ಮಡಿಕೇರಿಯ ಹತ್ರ.



ನಿಮ್ಮಲ್ಲಿ ಎಷ್ಟು ಜನ ಸ್ಟಾಫ್?
ನಲ್ವತ್ತು.
ಅಷ್ಟೇನಾ?
ಅಷ್ಟೆ.
ನೀವೇನಾ ಆಲಿಬಾಬಾ ಮತ್ತು ನಲ್ವತ್ತು ಕಳ್ಳರು ?
ಏನ್ ಸಾರ್?
ಇನ್ನೂ ಕೇಳಲು ಬಾಕಿಯಿದೆ-
ಹಾಡಿನ ಬಗ್ಗೆ ,ಸಾವಿನ ಬಗ್ಗೆ ..
ಪೋಸ್ಟ್ ಮಾರ್ಟಂ ರಿಪೋರ್ಟ್ ಬರಲಿ.




ಆತ್ಮಹತ್ಯೆ ಯಾವತ್ತೂ ನಡೆಯುತ್ತಾ ಇಲ್ಲಿ?
ಇದೇ ಮೊದ್ಲು ಸಾರ್.
ಇಲ್ಲಿಯವರೆಗೆ
ಎಲ್ಲೂ ಸಿಗದ
ಸಾವಿಲ್ಲದ ಲಾಡ್ಜಿನ ಸಾಸಿವೆ
ಇಲ್ಲೇ ಸಿಗುತ್ತಿತ್ತು ಸಾರ್.



ಏನು?
ಸಾರಿ ಸಾರ್.




ಸಂದರ್ಶಕರ ರಿಜಿಸ್ಟರ್ ಇದೆಯಾ?
ಇದೆ ಸಾರ್.
ರಾತ್ರಿ ಗೇಟಿಗೆ ಬೀಗ ಹಾಕ್ತೀರಾ?
ಹಾಕ್ತೇವೆ ಸಾರ್.
ಬೀಗ ಹಾಕಿದ್ರೂ
ವಿಐಪಿಗಳಿಗೆ ಬರಬಹುದಲ್ವೇ?
ರಿಜಿಸ್ಟರ್ನಲ್ಲಿ ಹೆಸರು ಬರೆಯಬಾರದಂಥವರಿಗೆ?




ಕಡೆಯ ಬಾರಿಗೆ
ಯಾರು ಆ ಕೋಣೆಗೆ ಹೋಗಿದ್ದು?
ಯಾವಾಗ?





ಸಾರ್..
ಮೂರನೇ ತಾರೀಕು ರಾತ್ರಿ;
ಮರೆತುಬಿಟ್ರಾ?!
ಫುಲ್ ಟೈಟ್ ಆಗಿದ್ರಿ ನೀವು.
ಮತ್ತೆ
ಇವತ್ತು ಬಾಗಿಲು ಮುರಿದು
ನಾನು ಮತ್ತು ಮ್ಯಾನೇಜರ್.




ಮತ್ತೆ..
ಎರಡನೇ ಸಲ ನೀವು!!
**
ಮಲಯಾಳಂ ಮೂಲ- ಕೆ.ಜಿ. ಶಂಕರಪಿಳ್ಳೆ



ಕನ್ನಡಕ್ಕೆ - ಕಾಜೂರು ಸತೀಶ್

Sunday, July 27, 2014

ಬೆಂಕಿಯ ಬೀಜ

ರಣಹದ್ದಿನ ಶವವನ್ನು
ರಣಹದ್ದು ತಿನ್ನುವುದಿಲ್ಲ.
ಕೊಳೆತು ನಾರುವ ಮುನ್ನ
ಅದೊಂದು ವಿಮಾನವಾಗುತ್ತದೆ.ಯುದ್ಧಭೂಮಿಯೆಂದುಕೊಂಡು ಬಟಾಬಯಲಿನಲ್ಲಿ
ಹಾರಾಡಿ ಇಳಿಯುತ್ತದೆ .




ಚೆಂಡಿಲ್ಲದಿದ್ದರೂ ಫೂಟ್ಬಾಲ್ ಆಡುವ ಮಕ್ಕಳು
ಅದರ ಬಳಿ ಬಂದು
ಮುಟ್ಟಿ ,ಸವರಿ ಬೆರಗುಗೊಂಡು
ಕೆಲವರು ಅದರ ಒಳಗಿಳಿಯುತ್ತಾರೆ.
ಕೆಲವರು ಚಂಗನೆ ಜಿಗಿದು ಹತ್ತುತ್ತಾರೆ.
ಇನ್ನೂ ಕೆಲವರು ರೆಕ್ಕೆಗಳಲ್ಲಿ ತೂಗಾಡುತ್ತಾರೆ.







ಇದ್ದಕ್ಕಿದ್ದಂತೆ
ಯಾರೋ, ಹೇಗೋ ಕೀ ಕೊಟ್ಟ ಹಾಗೆ
ಮೈಕೊಡವುತ್ತಾ ವಿಮಾನ ಮೇಲೇರುತ್ತದೆ.
ಒಳಗೂ, ಹೊರಗೂ
ರೆಕ್ಕೆಗಳಲ್ಲೂ,ಕೊಕ್ಕಿನಲ್ಲೂ
ಬೆರಗಿನಿಂದ ಕುಳಿತ ,ನೇತಾಡುವ
ಮಕ್ಕಳ ಹೊತ್ತು ಹಾರುತ್ತದೆ.




ಮತ್ತೆ ಹಸಿವಾದಾಗ,
ಮುಗಿಲೆತ್ತರದ ಕಟ್ಟಡದಲ್ಲಿ ಕುಳಿತು
ಕೆಲವು ತುಂಟ ಮಕ್ಕಳ ಕುಕ್ಕಿ ತಿನ್ನುತ್ತದೆ.
ಹೊಟ್ಟೆ ತುಂಬಿದಾಗ ಮತ್ತೆ ಹಾರಿ
ನಗರಗಳಲ್ಲೂ, ಹಳ್ಳಿಗಳಲ್ಲೂ
ಬೆಂಕಿಯ ಬೀಜಗಳೊಂದಿಗೆ
ಆ ಮಕ್ಕಳನ್ನೂ ಚೆಂಡಿನಂತೆ ಎಸೆಯುತ್ತದೆ.
**



ಮಲಯಾಳಂ ಮೂಲ- ಮೋಹನಕೃಷ್ಣನ್ ಕಾಲಡಿ



ಕನ್ನಡಕ್ಕೆ - ಕಾಜೂರು ಸತೀಶ್

Wednesday, July 23, 2014

ದೇವರು ಕಟ್ಟಕಡೆಗೆ ಸೃಷ್ಟಿಸಿದ್ದು ನನ್ನನ್ನೇ

ಅಯ್ಯೋ ನನ್ನ ದೇವರೇ,
ನೀನು ಅತ್ತಿದ್ದು ಯಾಕೆ?
ಕಡೆಯ ಕವಿತೆ ಬರೆಯುತ್ತಿರುವ ಕವಿಯ ಹಾಗೆ
ಹೊರಳಾಡಿದ್ದು ಯಾಕೆ?
ಕಣ್ಣೆದುರಿಗೇ ಸಾವು ಕಂಡ ಹಾಗೆ
ಚಕಿತನಾಗಿದ್ದು ಯಾಕೆ?

ಇಷ್ಟಿಷ್ಟೇ ನಿನ್ನ ಬೆರಳುಗಳಲ್ಲಿ
ಆಕಾರ ಪಡೆಯುತ್ತಾ ಬಂದೆ ನಾನು .
ನನ್ನ ಕಣ್ಣುಗಳು ,ಮುಖ,ಮೊಲೆ..
ಎಲ್ಲವನ್ನೂ ಉರುಟುರುಟಾಗಿಸಿದೆ ನೀನು .
ಜೇಡಿ ಮಣ್ಣಲ್ಲಿ ಕನ್ನಡಿ ಮಾಡಿ
ಸೊಂಟವ ಬಳುಕುವ ಹಾಗೆ ಮಾಡಿದೆ.
ಎಲ್ಲ ನಕ್ಷತ್ರಗಳು
ನನ್ನ ಮೇಲೆ ಮುಗಿಬಿದ್ದು
ಮಿನುಗಲು ತೊಡಗಿದವು.


ನೀನು
ತಂದೆಯೋ ಕಾಮುಕನೋ ಎಂದು
ಒಂದು ಕ್ಷಣ ಸಂದೇಹ ಪಟ್ಟೆ ನಾನು .


ಹೀಗಿದ್ದರೂ
ಮೋಡದಿಂದ ಮಳೆ ಸುರಿಯುವ ಹಾಗೆ
ನಿನ್ನಿಂದ ಹೊರಬಂದೆ.
ನಿನ್ನ ಬೆರಳುಗಳು ನನ್ನ ಹಿಂದೆ
ತಟಸ್ಥವಾಗಿ ನಿಂತವು.


ಹಿಂತಿರುಗಿ ನೋಡಿದರೆ
ಒಮ್ಮೆಯೂ ಹೋಗಲಾಗುವುದಿಲ್ಲ ಎಂದುಕೊಂಡು
ಮುಂದಕ್ಕೇ ನಡೆದೆ.


ನನ್ನ ಮುಂದೆಯೇ ಅವರು ನಡೆದುಹೋಗುತ್ತಿದ್ದರು.
ನಿನ್ನಿಂದ ಕೇವಲ
ಆರೇ ಆರು ದಿನಗಳಲ್ಲಿ ಸೃಷ್ಟಿಯಾದವರು.
ಎರಡು ಕೊಂಬುಳ್ಳವರು.
ನಾಲ್ಕು ಕಾಲು ಮತ್ತು ಬಾಲವುಳ್ಳವರು.


ಸ್ವಲ್ಪವೇ ಮುಂದೆ ಅವನೂ..
ಅವನು
ಕಬ್ಬಿಣ ,ಪ್ಲಾಸ್ಟಿಕ್ಕುಗಳಿಂದಾದವನು.
ನೆಲವನ್ನು ಗ..ಟ್ಟಿಯಾಗಿ ತುಳಿಯುವವನು.
ಅಗತ್ಯಕ್ಕಿಂತ ಹೆಚ್ಚು ಮಾತನಾಡುವವನು.
ತುಸು ಹೆಚ್ಚಾಗಿಯೇ ಅಭಿನಯಿಸುವವನು.


ಆದರೂ ,
ಒಂದನ್ನೂ ಸರಿದೂಗಿಸದವನು.
ಆ ದೇಹವನ್ನು ಮುಗಿಸಲು
ಮುಂದೆ ಹೋಗುತ್ತಿರುವವರ ಮೈಮೇಲೆ
ಚಾಟಿಯೇಟು ಕೊಡುವವನು.
ಒದೆಯುವವನು.
ಕೊಲ್ಲುವವನು.


ದೇವರೇ,
ನಿನ್ನ ಒಮ್ಮೆಯೂ ಮುಖತಃ ಕಾಣದಿರಲೆಂದು
ನಿನ್ನ -ಅವನ ನಡುವೆಯೊಂದು ಪರದೆಯಾಗಿ
ನನ್ನ ನಿಯೋಜಿಸಿದ್ದೇಕೆ?
ನನ್ನಿಂದಾಚೆಗೆ ಕಣ್ಣುಗಳು ಸೋತುಹೋದರೂ...
ಅವನು ಈಗಲೂ ಸುಳ್ಳನ್ನೇ ಹೇಳುತ್ತಿದ್ದಾನೆ:
"ನಾನೇ ಹಿಂದಿನಿಂದ ಮೊದಲಿಗನು".


ಆ ಸುಳ್ಳನ್ನು ಬಯಲು ಮಾಡಲು
ಅವನು ಮಿಂಚನ್ನು ಸೃಷ್ಟಿಸಿದ .
ಪ್ರಳಯ ಎಬ್ಬಿಸಿದ.
ಹಣದ ಪೆಟ್ಟಿಗೆ ನಿರ್ಮಿಸಿದ .
ಭಾಷೆಗಳನ್ನು ಕಲಸಿದ.
ದೇಶಗಳ ವಿಭಜಿಸಿದ.
ಅದೆಲ್ಲವನ್ನೂ ಸೇರಿಸಿ
ಹೊಸ ಪವಿತ್ರ ಗ್ರಂಥವನ್ನು ಬರೆದ.


ವಾಸ್ತವವಾಗಿ ,
ಪವಿತ್ರ ಗ್ರಂಥ ತುಂಬಾ ಸಣ್ಣದು.
ದೇವರೇ,
ನನಗೂ ನಿನಗೂ ಗೊತ್ತೇ ಇದೆ-
ಅದರಲ್ಲಿರೋದು ಎರಡೇ ಎರಡು ವಾಕ್ಯಗಳು ..


"ದೇವರು ಕಟ್ಟಕಡೆಯದಾಗಿ
ಸ್ತ್ರೀಯನ್ನು ಸೃಷ್ಟಿಸಿದರು.
ಆಮೇಲೆಲ್ಲ
ಅವಳೇ ಲೋಕವನ್ನು ಸೃಷ್ಟಿಸಿದಳು".
**
ಮಲಯಾಳಂ ಮೂಲ - ಪಿ.ಎನ್. ಗೋಪಿಕೃಷ್ಣನ್

ಕನ್ನಡಕ್ಕೆ- ಕಾಜೂರು ಸತೀಶ್



Wednesday, July 16, 2014

ಅಲಂಕಾರ

ಸತ್ತಾಯಿತು
ಇನ್ನು ಅಲಂಕಾರವಷ್ಟೆ ಬಾಕಿ.




ಹೊರಬಿದ್ದ ಕಣ್ಣಗುಡ್ಡೆಗಳನ್ನು
ಮುಚ್ಚಿಡಲಾಗಿದೆ.
ಕಾಡಿಗೆಯಲ್ಲಿ ತಿದ್ದಿ ಕಪ್ಪಾಗಿಸಿದ
ಕಣ್ಣಿನ ಕಡೆಯ ಕನಸ್ಸನ್ನು
ಬಿಡುಗಡೆಗೊಳಿಸಲಾಗಿದೆ.





ಕನ್ನಡಕ ಬಿಚ್ಚದೆಯೇ ಇವತ್ತಿನ ಸ್ನಾನ.




ಬೇಗ ..
ಅಲಂಕಾರಕ್ಕೆ ಸಿದ್ಧಗೊಳಿಸಿ,
ಇನ್ನೂ ಎಷ್ಟೊಂದು ಕೆಲಸಗಳು ಬಾಕಿ ಇವೆ.




ಮೊದಲು ಹಣೆಗೆ ಬೊಟ್ಟು ಇಡೋಣ
ಅದು ಸಿಂಧೂರವಾಗಿರಲಿ
ವೃತ್ತಾಕಾರದಲ್ಲಿರಲಿ.
ಅಂಟುವ ಸಿಂಧೂರ ಬೇಡ
ಅದರ ಕಲೆ ಅಲ್ಲೇ ಉಳಿಯುತ್ತದೆ .
ಗಂಧದ ಬೊಟ್ಟು ಬೇಕಾ?
ವಿಭೂತಿಯಾದರೆ ಚೆನ್ನ
ಸ್ಮಶಾನಕ್ಕಲ್ಲವೇ?




ಕಣ್ರೆಪ್ಪೆಗಳಿಗೆ ಕಾಡಿಗೆ ಬೇಡ
ಕಣ್ಣೀರು ಜಿನುಗಿದರೆ
ಶುಭ್ರವಾಗಿ ಕಾಣಿಸಬಹುದು .



ಮೂಗಿನಲ್ಲಿ ಹತ್ತಿ ಇಡಲು ಮರೆಯಬಾರದು
ನಮ್ಮ ವಾಸನೆ ಹಿಡಿದು ಹಿಂದೆಯೇ ಬಂದರೆ?





ಸತ್ತು ಬಿಳುಚಿದ ತುಟಿಗಳು
ಕಳೆಗುಂದಿದ ಹಲ್ಲುಗಳು
ದಂಗೆಯೇಳದೆ ಇರುವುದಿಲ್ಲ .
ಒಂದು ಹೊಸ ಹತ್ತಿ ಬಟ್ಟೆ ಹರಿದುಕೊಡಿ
ಸೇರಿಸಿ ಕಟ್ಟಿ ಹಾಕೋಣ
ಪಾಠ ಕಲಿಸಬೇಕು .






ನಾಲಗೆಯಿಂದಿಳಿಯುತ್ತಿರುವ ವಿಷ
ಹೊರಗಿಳಿಯದಂತೆ ನೋಡಿಕೊಳ್ಳಬೇಕು
ಕೆನ್ನೆಯ ಈ ಒಂಟಿ ಕುಳಿಯನ್ನು ಮುಚ್ಚಿಡಬೇಕು
ಇನ್ನಾದರೂ ಸುಳ್ಳು ಹೇಳುವುದನ್ನು ನಿಲ್ಲಿಸಲಿ.






ರಕ್ತ ಇಳಿಯುತ್ತಿರುವ ಕಿವಿಗಳಲ್ಲಿ
ಹತ್ತಿಯುಂಡೆಗಳನ್ನು ತುರುಕೋಣ
ಎಂಥ ಆಲಿಸುವ ಸಾಮರ್ಥ್ಯವಿತ್ತು-
ನಾವು ಹೇಳದಿರುವುದೇ ಕೇಳಿಸುತ್ತಿತ್ತು.
ಹೊಳೆಯುವ ಈ ವಾಲೆಗಳನ್ನು
ಬಿಚ್ಚಿಡಲು ಮರೆಯಬೇಡಿ
ಅದು ಹೊಳೆದದ್ದು ಸಾಕು.





ಕೈಗೆ ಕಟ್ಟಿದ ಕಪ್ಪು ದಾರದಲ್ಲಿರುವ
ತಾಯತವನ್ನು ಕತ್ತರಿಸಿಹಾಕಬೇಕು
ನೋಡೋಣ
ಇನ್ನ್ಯಾವ ರಕ್ಷೆಯಿದೆ ಇವಳಿಗೆ .






ಉಬ್ಬಿದ ನರಗಳಿರುವ ಕೈಗಳ
ಊದಿದ ಬೆರಳುಗಳನ್ನೆಲ್ಲ ಸೇರಿಸಿ
ಈಗಲೇ ಕಟ್ಟಿಹಾಕಬೇಕು
ಬಲೆ ಹೆಣೆಯುವ ಬೆರಳುಗಳವು
ಎಷ್ಟು ವೇಗ ಅವಕ್ಕೆ!
ಬೆರಳಿಗೆ ಅಂಟಿಕೊಂಡಿರುವ ಯಾವುದಾದರೂ
ಉಂಗುರವಿದೆಯೇ ನೋಡಿಕೊಳ್ಳಿ.



ಖಾಲಿ ಹಸ್ತಗಳನ್ನು
ಕ್ಷಮೆ ಕೇಳುವ ಹಾಗೆ ಜೋಡಿಸಿಡಿ.




ಘಲ್ಲು ಘಲ್ಲೆನ್ನುವ ಕಾಲ್ಗೆಜ್ಜೆಗಳನ್ನು
ಬಿಚ್ಚಿಟ್ಟುಬಿಡಿ
ಶ್..ಜಾಗ್ರತೆ
ಶಬ್ದ ಕೇಳಿಸಬಾರದು.
ಕಾಲುಗಳನ್ನು ಸುಮ್ಮನೆ ಬಿಡಬಾರದು -
ಕಟ್ಟಿಹಾಕಬೇಕು.
ಮತ್ತೆ ಎದ್ದು ಬರಬಾರದು
ಯಾರ ನೆನಪಿನಂಗಳಕ್ಕೂ.





ಸಾಕು
ಎಲ್ಲ ತಯಾರಿಗಳೂ ಮುಗಿದವು
ಈಗ ನೋಡುವ ಸಮಯ.



ಕಡೆಯ ಬಾರಿ ಒಮ್ಮೆ ನೋಡಿ ಹೋಗೋಣ .





ಏನನ್ನೂ ಕೊಂಡು ಹೋಗುತ್ತಿಲ್ಲವೆಂದು
ಸರಿಯಾಗಿ ನೋಡಿ ಖಾತ್ರಿಪಡಿಸಿಕೊಳ್ಳಿ.





ಸ್ವಲ್ಪ ದೂರ ನಿಂತು
ಕಣ್ಣುಗಳನ್ನು ಒರೆಸೋಣ
ಸುಡುವ ಅವಳ ಎದೆಯ ಮೇಲೊಂದು
ಹೂವನ್ನಿಡೋಣ
ಎದೆಬಿರಿಯುವಂತೆ ಜೋರಾಗಿ ಅತ್ತುಬಿಡೋಣ.





ಆದರೆ ಹೆಚ್ಚು ಹೊತ್ತು ಮಲಗಿಸುವುದು ಬೇಡ
ಗುಂಡಿ ತೋಡಿ ಮುಚ್ಚಿಹಾಕಬೇಕು ಬೇಗ.




ಹಿರಿಯರು ಇನ್ನೂ ಬದುಕಿದ್ದಾರೆ.
ಶವ ಸುಡಲು
ಮಾವಿನ ಮರವನ್ನು ಕತ್ತರಿಸುವುದು ಬೇಡ.




ಸುಡುವುದೇ ಬೇಡ ಬಿಡಿ
ಸುಟ್ಟರೆ ಬೂದಿ ಉಳಿದುಬಿಡುತ್ತದೆ.

**
ಮಲಯಾಳಂ ಮೂಲ: ಕೀರ್ತನಾ ವಿಶ್ವನಾಥ್




ಕನ್ನಡಕ್ಕೆ - ಕಾಜೂರು ಸತೀಶ್

Monday, July 7, 2014

ಜ್ವರ

ಮಳೆಯನ್ನು ನಿಂದಿಸುತ್ತಿರುವ ಅಮ್ಮಾ ..
ವೈದ್ಯರನ್ನು ಹುಡುಕುತ್ತಿರುವ ಅಪ್ಪಾ..
ಸುಡುತ್ತಿರುವ ಹಣೆಯನ್ನು
ಮುಂಗೈಯಲ್ಲಿ ಮುಟ್ಟಿ ನೋಡುತ್ತಿರುವ ಅಕ್ಕಾ...
ಇದು ಜ್ವರವಲ್ಲವೇ ಅಲ್ಲ .





ಕೂದಲುಗಳಲ್ಲಿ
ಒದ್ದೆಯಾದ, ತಣ್ಣನೆಯ ಬೆರಳಾಡಿಸಿ
ನನ್ನನ್ನು ಬಾಚಿ ತಬ್ಬಿಕೊಂಡ
ಮಳೆಯ ಹೃದಯದ ಕಾವು ಅದು.






ಗೊತ್ತಿಲ್ಲವೇ ನಿಮಗೆ ?
ಮಳೆಯ ಮನಸ್ಸೊಂದು ಮರುಭೂಮಿ
ಶರೀರ ವಿಸ್ತಾರ ಕಡಲು.
**

ಮಲಯಾಳಂ ಮೂಲ - ಸುಜೀಷ್ ಎನ್. ಎಂ.




ಕನ್ನಡಕ್ಕೆ - ಕಾಜೂರು ಸತೀಶ್

Friday, July 4, 2014

ಆ ಗಾಯ ಮತ್ತು ಆ ಹುಡುಗನ ನಿರ್ಲಿಪ್ತತೆ..

ನಿನ್ನೆ ಮಧ್ಯಾಹ್ನ ನಾವು 'ಅಕ್ಷರ ದಾಸೋಹ' ಬಿಸಿಯೂಟ ಸವಿಯುತ್ತಿದ್ದಾಗ ತರಗತಿಯಲ್ಲಿ ಹುಡುಗನೊಬ್ಬ ಜಾರಿಬಿದ್ದು ಮಣೆಯ ನೆತ್ತಿಗೆ ಹಣೆಯನ್ನು ಚಚ್ಚಿಸಿಕೊಂಡಿದ್ದ. ಈ ಗುಡ್ಡದಲ್ಲಿ ಇಂತಹ ಘಟನೆಗಳು ನಮಗೆ ಹೊಸದಲ್ಲವಾದರೂ,ರಕ್ತ ಚಿಮ್ಮಿ ಕಣ್ಣಿಗಿಳಿಯುತ್ತಿದ್ದ ಸ್ಥಿತಿಯಲ್ಲಿ -ಆಚೀಚೆ ಒಬ್ಬೊಬ್ಬ ಅವನ ಕೈಹಿಡಿದು ನಮ್ಮ ಮುಂದೆ ತಂದು ನಿಲ್ಲಿಸಿದಾಗಲೂ,ಏಳು ವಸಂತಗಳನ್ನೂ ಕಾಣದ ಆ ಪುಟ್ಟ ಹುಡುಗ ಏನೂ ಆಗಿಲ್ಲವೆಂಬಂತೆ ನಿಂತುಕೊಂಡಿದ್ದನಲ್ಲಾ- ಅದು ನನ್ನನ್ನು ತುಂಬಾ ಕಲಕಿತು! ಕಣ್ಣಿಗೆ ,ಮೂಗಿಗೆ ಇಳಿಯುತ್ತಿದ್ದ ರಕ್ತವನ್ನು
ಗಮನಿಸಿಯಾದರೂ ,ಅಥವಾ ಅವನನ್ನು ನೋಡಲು ಕಿಟಕಿ-ಬಾಗಿಲುಗಳ ಬಳಿ ಗುಡ್ಡೆಹಾಕಿಕೊಂಡು ಕಾಯುತ್ತಿದ್ದ ಮಕ್ಕಳನ್ನು ನೋಡಿಯಾದರೂ ಅವನ ಭಾವನೆಯಲ್ಲಿ ಒಂದಷ್ಟು ಬದಲಾವಣೆ ಕಾಣಬೇಕಿತ್ತು. ಉಹೂಂ.. ಆ ಗಾಯ ಅವನ ಮನಸ್ಸಿಗೆ ನಾಟಿರಲಿಲ್ಲ. ಅವನ ನಿರ್ಲಿಪ್ತತೆ ನನ್ನ ಹೃದಯದಲ್ಲೊಂದು ಗಾಯ ಮಾಡಿಬಿಟ್ಟಿತ್ತು,ಅಷ್ಟೆ ..



ಅವನ ಕೈಹಿಡಿದು ನೆರೆಯ ಕೇರಳ ರಾಜ್ಯದ ಒಂದು ಖಾಸಗಿ ಕ್ಲಿನಿಕ್ಕಿಗೆ ಕರೆದುಕೊಂಡು ಹೋದೆ. ಪದೇಪದೇ 'ನೋವಿದ್ಯಾ?' ಎಂದು ಕೇಳುತ್ತಿದ್ದೆ. 'ಇಲ್ಲ' ಎನ್ನುತ್ತಿದ್ದ. ಸಣ್ಣಗೆ ಮಳೆಯಾಗುತ್ತಿದ್ದರೂ ಅವನ ಮೈಯ ಬಿಸಿ ಏರುತ್ತಿತ್ತು.



ಪುಟ್ಟ ಹುಡುಗ .
'ಸಾರ್..ಇಲ್ಲಿ ನೋಡು..ಸಾರ್.. ಇಲ್ಲಿ ಬಾ..'
ಎಂಬ ಸಣ್ಣಪುಟ್ಟ ವ್ಯಾಕರಣ ದೋಷ ಬಿಟ್ಟರೆ ಕನ್ನಡವನ್ನು ಮಾತನಾಡಲು ಕಲಿತುಕೊಂಡಿದ್ದ. ಮಲಯಾಳಂ ಮಾತೃಭಾಷೆ . ಮರಾಠಿಗರೇ ಬಹುತೇಕ ಇರುವ ಕಾರಣ ಅದನ್ನೂ ಅಲ್ಪಸ್ವಲ್ಪ ತಲೆಗೆ ತುಂಬಿಸಿಕೊಂಡಿದ್ದ.



ವೈದ್ಯರು ಬಂದು ಅನಸ್ತೇಷಿಯಾ ಕೊಡುವಾಗಲೂ , ಹೊಲಿಯುವಾಗಲೂ ಸುಮ್ಮನೆ ಮಲಗಿದ್ದ . ಅಷ್ಟರಲ್ಲಿ ಅವನ ಮಾವನಿಗೆ ಈ ಸುದ್ದಿ ತಲುಪಿ ,ಅಲ್ಲಿಗೆ ಬಂದಾಗಲೂ ಅದೇ ನಿರ್ಲಿಪ್ತತೆ!




ಅಪ್ಪನ ಸಂಪರ್ಕವಿರದ ಆ ಮಗುವಿನ ಭಾವನಾತ್ಮಕ ಒಳ ಸಂಘರ್ಷಗಳು ಅವನನ್ನು ಇಡಿಯಾಗಿ ಹೇಗೆ ಕದಡಿಹಾಕಿದೆ ಎಂಬುದನ್ನು ಊಹಿಸುತ್ತಿದ್ದೇನೆ. ಇತ್ತ ಕೆಲಸದ ನಿಮಿತ್ತ ದೂರದಲ್ಲಿರುವ ಅಮ್ಮನ ಮುಖವೂ ನಿತ್ಯ ಕಾಣುವುದಿಲ್ಲ . ಒಂದು ನಿಮಿಷವೂ ಕೂತಲ್ಲಿ ಕೂರದ ಅವನ ಅಷ್ಟು Hyper-activeness ಗೆ ಸೂಕ್ತ ಮಾರ್ಗ ತೋರಿಸುವುದಕ್ಕೆ ಸದ್ಯದ ವ್ಯವಸ್ಥೆಯಲ್ಲಿ ನಮಗೆ ಸಾಧ್ಯವಾಗುತ್ತಿಲ್ಲವಲ್ಲಾ ಎಂಬ ಮತ್ತೊಂದು ಗಾಯ ನನ್ನಾಳಕ್ಕೆ ಇಳಿಯುತ್ತಲೇ ಇದೆ..



**
-ಕಾಜೂರು ಸತೀಶ್

Wednesday, July 2, 2014

ಬಿಕ್ಕಟ್ಟಿನ ಕಾಲದಲ್ಲಿ ಅವಿಸ್ಮರಣೀಯ ಸಾಹಿತ್ಯ ಮೇಳಗಳು..

ಕವಿ,ಹೋರಾಟಗಾರ ಮೃದುಮನಸ್ಸಿನ ಬಸವರಾಜ ಸೂಳಿಭಾವಿಯವರ ಪರಿಚಯವಾದದ್ದು ಮೂರು ವರ್ಷಗಳ ಹಿಂದೆ . ಆಮೇಲೆ , ೮೦ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಕವಿತೆ ವಾಚಿಸಲು ಮಡಿಕೇರಿಗೆ ಬಂದಿಳಿದಿದ್ದೇ ತಡ,ತುಂಬಾ ಆಪ್ತವಾಗಿ,ಗಂಭೀರವಾಗಿ ಮಾತನಾಡಿದ್ದರು.

ಮತ್ತೆ ,ಮೊನ್ನೆ ಹಾವೇರಿಯಲ್ಲಿ ನಡೆದ 'ಮೇ ಸಾಹಿತ್ಯ ಮೇಳ'ದ ಕವಿಗೋಷ್ಠಿಗೆ ಆಹ್ವಾನಿಸಿದ್ದರು.ತಮ್ಮ 'ಲಡಾಯಿ' ಪ್ರಕಾಶನದ ವತಿಯಿಂದ ಕೆಲವು ಸಂಘಟನೆಗಳ ಸಹಭಾಗಿತ್ವದಲ್ಲಿ ನಡೆಸಿದ ಮೇ ಸಾಹಿತ್ಯ ಮೇಳವು ಸದ್ಯದ ನಮ್ಮ ಸವಾಲುಗಳ ಕುರಿತು ಸೂಕ್ಷ್ಮವಾಗಿ ಬೆಳಕು ಚೆಲ್ಲಿತು. ಸಾಮಾಜಿಕ ನ್ಯಾಯವನ್ನು ಸ್ಥಾಪಿಸುವ ಪರಮ ಹಂಬಲವನ್ನಿಟ್ಟುಕೊಂಡ ಮೇಳವು- ಕೋಮುವಾದ, ಭಯೋತ್ಪಾದಕತೆ,ಬಂಡವಾಳಶಾಹಿ ಧೋರಣೆ ಮುಂತಾದ ಆತಂಕಕಾರಿ ಅಂಶಗಳನ್ನು ಪ್ರಬಲವಾಗಿ ಖಂಡಿಸಿತು.

ಮೇ ಸಾಹಿತ್ಯ ಮೇಳ-೨೦೧೪, ಈ ನಾಡಿನ ಅಪೂರ್ವ ಚಿಂತಕರ ಸಮಾಗಮ.ಅಲ್ಲಿ ವಿದ್ವತ್ ಪೂರ್ಣ ಗೋಷ್ಠಿಗಳು, ಹೋರಾಟದ ಗೀತೆಗಳು ,ನಾಟಕ, ಪುಸ್ತಕ ಪ್ರದರ್ಶನ-ಮಾರಾಟ, ಊಟೋಪಚಾರಗಳಿದ್ದವು.

'ನನ್ನ ಕಾವ್ಯ -ನನ್ನ ಬದುಕು ' ಕಾರ್ಯಕ್ರಮದಲ್ಲಿ ದು.ಸರಸ್ವತಿ , ಎಚ್.ಎನ್.ಆರತಿ, ಸತೀಶ ಕುಲಕರ್ಣಿಯವರು ತೆರೆದಿಟ್ಟ ಬದುಕು ಮತ್ತು ಅದರಂತೆಯೇ ಇದ್ದ ಕವಿತೆ ವಿಶಿಷ್ಟವಾಗಿತ್ತು. ದು. ಸರಸ್ವತಿಯವರ ಕವಿತೆಯಂತೂ ಎಂಥವರನ್ನೂ ಬೆಚ್ಚಿಬೀಳಿಸುವ ಪ್ರತಿಮೆಗಳಿಂದ ಕೂಡಿದ್ದವು.

ಎ.ರೇವತಿಯವರು ಬರೆದ ತಮ್ಮ ಹಿಜ್ರಾ ಜೀವನದ ನೋವು -ನಲಿವುಗಳನ್ನು ನಾಟಕದಲ್ಲಿ ತಾವೇ ಅಭಿನಯಿಸುವ ಮೂಲಕ ಪಾತ್ರಗಳಿಗೆ ಜೀವ ತುಂಬಿದರು.ಭಾರತೀಯ ನಾಟಕ ರಂಗದಲ್ಲಿ ಇದೊಂದು ವಿಶಿಷ್ಟ ಪ್ರಯೋಗ .

ತೆಲುಗಿನ ಖ್ಯಾತ ಕವಿಗಳಾದ ಕೆ. ಶಿವಾರೆಡ್ಡಿ ಹಾಗೂ ನಗ್ನಮುನಿಯವರ ಉಪಸ್ಥಿತಿ ಮತ್ತು ಅವರೊಂದಿಗಿನ ಸಂವಾದವು ಮೇಳದ ಗಂಭೀರತೆಯನ್ನು ಹೆಚ್ಚಿಸಿದವು. ಡಾ.ಟಿ.ಆರ್.ಚಂದ್ರಶೇಖರ, ಡಾ.ಚಂದ್ರ ಪೂಜಾರಿ, ಪ್ರೊ. ವಿ.ಎಸ್.ಶ್ರೀಧರ, ದಿನೇಶ್ ಅಮೀನ್ ಮಟ್ಟು, ಡಾ. ಭಂಜಗೆರೆ ಜಯಪ್ರಕಾಶ್, ಡಾ.ಬಿ.ಎನ್. ಸುಮಿತ್ರಾಬಾಯಿ,ಡಾ.ಲಕ್ಷ್ಮೀನಾರಾಯಣ, ಡಾ.ಮುಜಾಫ್ಘರ್ ಅಸಾದಿ,ಪ್ರೊ.ಬಿ. ಗಂಗಾಧರಮೂರ್ತಿ ಮೊದಲಾದ ಚಿಂತಕರು ಅಸಮಾನ ಕರ್ನಾಟಕದ ಪ್ರತಿರೋಧದ ನೆಲೆಗಳನ್ನು , ಸವಾಲುಗಳನ್ನು ವರ್ತಮಾನ ಹಾಗೂ ಭವಿಷ್ಯದ ಹಿನ್ನೆಲೆಯಲ್ಲಿ ವಿಶ್ಲೇಷಿಸಿದರು.


ಕಿರಿಯರೆಂಬ ಭೇದವಿಲ್ಲದೆ ಬರೆದ ಬರೆಹಗಳಿಗೆ ಅನಿಸಿಕೆ ಹೇಳುತ್ತಿದ್ದ , ಬೆನ್ನು ತಟ್ಟುತ್ತಿದ್ದ ಶೂದ್ರ ಶ್ರೀನಿವಾಸ್, ಎಂ.ಎಸ್.ರುದ್ರೇಶ್ವರಸ್ವಾಮಿ ,ಡಾ. ಎಚ್.ಎಸ್.ಅನುಪಮಾ, ಡಾ.ಕೃಷ್ಣ ಗಿಳಿಯಾರ್ ,ಗಣೇಶ್ ಹೊಸ್ಮನೆ, ಚಿನ್ಮಯ್ ಹೆಗ್ಡೆ, ನಾಗರಾಜ ಹರಪನಹಳ್ಳಿ, ಮಮತಾ ಅರಸೀಕೆರೆ ಮೊದಲಾದವರನ್ನು ಮೊದಲ ಬಾರಿಗೆ ಮುಖತಃ ನೋಡುವ ಅವಕಾಶವನ್ನು ಮೇಳವು ಒದಗಿಸಿತ್ತು. ಜಿಲ್ಲೆಯಿಂದ ಜಾನ್ ಸುಂಟಿಕೊಪ್ಪ
ನನ್ನೊಂದಿಗಿದ್ದರು.

*

ಲಕ್ಷಾಂತರ ಜನ ಮಡಿಕೇರಿಯ ಬೀದಿ-ಬೀದಿಗಳಲ್ಲಿ ನಡೆದುಹೋಗುವುದೆಂದರೆ? ಮತ್ತೆ ೮೦ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನೆನಪಾಗುತ್ತಿದೆ. ಆ ಕ್ಷಣಗಳನ್ನು ನೆನೆದರೆ ರೋಮಾಂಚನವಾಗುತ್ತದೆ. ಅದರಲ್ಲಿ ಹಗಲು -ರಾತ್ರಿಯೆನ್ನದೆ ದುಡಿದ ಮಂದಿಗೆ 'ಆತ್ಮ ತೃಪ್ತಿ'ಯ ಬಹುದೊಡ್ಡ ಕಾಣಿಕೆ ಇದ್ದೇ ಇರುತ್ತದೆ . ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಟಿ.ಪಿ. ರಮೇಶ್ ಮತ್ತು ಬಳಗಕ್ಕೆ ಅದರ ಶ್ರೇಯಸ್ಸು ಸಲ್ಲಬೇಕು.

ಕೊಡಗಿನಲ್ಲಿ ಈ ಹಿಂದೆ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನೆನಪುಗಳನ್ನು ಹಿರಿಯ ಪತ್ರಕರ್ತರಾದ ಟಿ.ಕೆ. ತ್ಯಾಗರಾಜ್ ತಮ್ಮ ಜಾಲತಾಣದ ಗೋಡೆಯಲ್ಲಿ ಬರೆಯುತ್ತಿದ್ದರು. ಕೊಡಗನ್ನು ಇನ್ನೂ ಹೃದಯದಲ್ಲಿಟ್ಟುಕೊಂಡೇ ಬದುಕುತ್ತಿರುವ ಅವರ ಇಲ್ಲಿನ ನೆನಪುಗಳು ಆರ್ದ್ರವಾಗಿ ತಟ್ಟುತ್ತವೆ. ಪ್ರತೀ ಸಮ್ಮೇಳನಗಳೂ ಪ್ರತಿಯೊಬ್ಬರ ಎದೆಯಲ್ಲಿ ಉಳಿಯುತ್ತವೆ ಎನ್ನುವುದಕ್ಕೆ ಅವರ ಮಾತುಗಳು ಸಾಕ್ಷಿಯಾಗುತ್ತವೆ.

ಸಮ್ಮೇಳನ ನಡೆಯುತ್ತಿದ್ದ ಸಂದರ್ಭದಲ್ಲಿ ಸ್ವಲ್ಪ ಹೊತ್ತು ಅತ್ಯುತ್ತಮವಾಗಿ ವ್ಯವಸ್ಥೆ ಕಲ್ಪಿಸಲಾಗಿದ್ದ ಪುಸ್ತಕ ಮಳಿಗೆಗೆ ಹೋಗಿದ್ದೆ.ಲಡಾಯಿ ಬಸೂ ಅಲ್ಲೇ ಆ ಸಂಜೆ ಸಮಾನ ಮನಸ್ಕರ ಕವಿಗೋಷ್ಠಿಯೊಂದನ್ನು ಏರ್ಪಡಿಸುವ ಸಿದ್ದತೆಯಲ್ಲಿದ್ದರು. ಸಮಾನತೆಯ ಬೀಜ ಬಿತ್ತುವ ಅವರ ಕನಸು ಎಷ್ಪರ ಮಟ್ಟಿಗೆ ಜಾಗೃತಗೊಂಡಿದೆ ಎಂಬುದನ್ನು ಊಹಿಸಿಕೊಂಡೆ.

ಈಗಲೂ ,ಸಾಹಿತ್ಯ ಸಮ್ಮೇಳನದ ಕೆಲವು ಕ್ಷಣಗಳನ್ನು ಯೂಟೂಬಿನಲ್ಲಿ ನೋಡಿ ಸಂಭ್ರಮಿಸುತ್ತೇನೆ.

*

ಎಲ್ಲ ಸಾಹಿತ್ಯ ಕಾರ್ಯಕ್ರಮಗಳ ಆಶಯ ಒಂದೇ - ಅದು ಈ ನೆಲದ ನಾಡಿಮಿಡಿತವನ್ನು ಅರಿಯುವುದು.ಕೆಲವು ಸಾಹಿತಿಗಳೆನಿಸಿದವರು ಅದನ್ನು 'ಶೋಕಿ' ಮಾಡುವ ಸ್ಥಳಗಳೆಂದುಕೊಂಡಿದ್ದರೂ , ಸಾಮಾಜಿಕ -ಸಾಂಸ್ಕೃತಿಕ ಕಳಕಳಿಯಿಲ್ಲದ ಯಾವೊಬ್ಬ ಬರೆಹಗಾರನೂ 'ಸಾಹಿತಿ' ಎನಿಸಿಕೊಳ್ಳಲಾರ. ಯಾವುದೋ ಕೆಲವು ಸಿದ್ಧಾಂತಕ್ಕೆ ಕಟ್ಟುಬಿದ್ದ ಸಾಹಿತಿಗಳೆನಿಸಿದ ಕೆಲವು ಮಂದಿ ಬೌದ್ಧಿಕ ದೀವಾಳಿಗಳಾಗುತ್ತಿದ್ದಾರೆ.ಈ ಹೊತ್ತು ,ಸಿದ್ಧಮಾದರಿಯ ಸಮಾನತೆಯ ಕಲ್ಪನೆಗಳನ್ನು ಮರುರೂಪಿಸಿ ,ಸಾಂಸ್ಥಿಕ ನ್ಯಾಯವನ್ನು ದೊರಕಿಸಿಕೊಡಲು ಹೋರಾಡುತ್ತಿರುವ ಕೆಲವು ಮಂದಿಗಾದರೂ ಅಂಥ ಪ್ರಜ್ಞೆಯಿದೆಯಲ್ಲಾ ಎಂಬುದನ್ನು ನೆನೆದಾಗ ಖುಷಿಯಾಗುತ್ತದೆ.

*

-ಕಾಜೂರು ಸತೀಶ್



ಶಿವ

ಶಿವ
ಪ್ರತಿದಿನ
ಹಣೆಗೆ ಟಾರ್ಚ್ ಕಟ್ಟಿ
ರಬ್ಬರ್ ಟ್ಯಾಪಿಂಗಿಗೆ ಹೊರಡುತ್ತಾನೆ.
ತಮಾಷೆಗೆ ನಾನವನನ್ನು
'ಮುಕ್ಕಣ್ಣ' ಎನ್ನುತ್ತೇನೆ.





ಅಪ್ಪಿತಪ್ಪಿ ಬಿದ್ದು
ಅವನ 'ಹಣೆಗಣ್ಣು' ಒಡೆದರೆ
ದಾರಿ ಕಾಣೋದಿಲ್ಲ-
ವಿಷಜಂತುಗಳಿರುವ ರಬ್ಬರ್ ತೋಟದಲ್ಲಿ .





ಮುಂಜಾನೆ ಮೂರರ ಸಮಯ.
ನನ್ನ ಕವಿತೆಗಳು ಹಡೆಯುವ ಹೊತ್ತು .
ಆ ಏಕಾಂತದಲ್ಲಿ ಶಿವನೂ ಒಬ್ಬ ಕವಿಯೇ,
ಬರೆದಿಡುತ್ತಾ ಕೂತರೆ
ಹೊಟ್ಟೆಗೆ ಹಿಟ್ಟು ಸಿಗೋದಿಲ್ಲ,ಅಷ್ಟೆ .





ಅವನ ಹಣೆಗಣ್ಣಿಗೆ ಚಾರ್ಜ್ ಆಗುವ ಸೂರ್ಯ
ಅವನು ದಣಿವಾರಿಸಿಕೊಳ್ಳುವ ಹೊತ್ತು
ಉರಿಯಲು ತೊಡಗುತ್ತದೆ.
ಹಗಲಿಡೀ ಅವನ ಕಣ್ಣು ಆಕಾಶದಲ್ಲಿ .





ಒಬ್ಬ ಕಲಾವಿದ ಕಂಡರೆ
'ಶಿವ'ನ ನಿಜರೂಪ ಬಿಡಿಸಲು ಹೇಳಬೇಕು
ಮುಂಜಾವ ರಬ್ಬರ್ ಟ್ಯಾಪಿಂಗ್ ಮಾಡಲು ಹೊರಡುವ ಹೊತ್ತು .
**

-ಕಾಜೂರು ಸತೀಶ್

Sunday, June 29, 2014

ಕೊಡಗು

ಆಹಾ...
ಇಲ್ಲಿ ಶಬ್ದಗಳೆಲ್ಲ ಸ್ತಬ್ಧ!

ಹಸಿರು :
ನೀರ್ಮಣ್ಣುಗಳಣುಗಳು ಜೀವರಸವ ಕಡೆದು
ಎಲೆಗಳಿಗುಣೆಸಿ ಮುದ್ದಿಸುವ ತುತ್ತು
ದಿಟ್ಟಿಸುವ ಕಣ್ಣೊಳಗೊಂದೇ ವರ್ಣ
ಅದು ಉಸುರುವ ಉಸಿರಿಗೆ
ಜಗದ ನಾಸಿಕಗಳೆಲ್ಲ ಕೊಳಲು.


ಗಿರಿ:
ತಡಿಯಂಡಮೋಳ್,ಬ್ರಹ್ಮಗಿರಿ
ಕೋಟೆಬೆಟ್ಟ, ಪುಷ್ಪಗಿರಿಗಳ
ಬಲಿಷ್ಠ ತೋಳುಗಳು
ಆಕಾಶಕ್ಕೆ ಹೆಗಲು
ಮೋಡಗಳಿಗೆ ತೊಟ್ಟಿಲು,
ಮೆಟ್ಟಿಲು
ಸೂರ್ಯನಿಗೆ ಮುತ್ತಿಕ್ಕಿ
ಸುಟ್ಟುಕೊಂಡ ತುಟಿಗಳು .


ನೆಲ-ಜಲ:
ಉಮ್ಮತ್ತಾಟ್,ಬೊಳಕಾಟ್
ಹೆಜ್ಜೆ ಎತ್ತಿಟ್ಟರೆ ಸಾಕು
ಅಲ್ಲೇ ಅಚ್ಚು
ಅಷ್ಟು ಕೆಚ್ಚು
ಕಾಫಿ,ಕಿತ್ತಳೆ ಏಲಕ್ಕಿಗಳೆಂಬೊ
ಹಚ್ಚಿಟ್ಟ ಹಣತೆ
ಒಂಭತ್ತು ದ್ವಾರಗಳಿಂದ
ಅಬ್ಬಿ,ಇರ್ಪು,ಮಲ್ಲಳ್ಳಿಗಳ ತಿಳಿಹಾಲು
ಕಾವೇರಿಗೆ ಕಾವೇರಿಸುವಷ್ಟು ಪುರುಷತ್ವ.


ಮಾಗಿ:
ಬಿರುಸು ನಾಲಿಗೆ
ದೈತ್ಯನ ಬಾಯಿ
ನೆಕ್ಕಿದರೆ ಸೀಳಿ ಬರುವುದು
ನೆಲಾಕಾಶಗಳ ಸಿಪ್ಪೆ .




ಮಳೆ:
ಆಕಾಶ  ನಕ್ಕೂ ನಕ್ಕೂ
ಧುಮ್ಮಿಕ್ಕುವ ಆನಂದಬಾಷ್ಪ .



-2-

ಉಹೂಂ ...
ಇಲ್ಲಿ ಬಿಕ್ಕುಗಳೂ ಸ್ತಬ್ಧ!

ಕಛೇರಿ :
ಒಳಗೆ ಕಾಲಿಡುವ ಮುಗ್ಧ ಮೈಗೆ
ಕಟಕಟ ಮರಕುಟಿಕನ ಕುಟುಕು
ಇಷ್ಟುದ್ದದ ಹಸ್ತ
ತೆರೆದು-ಮುಚ್ಚುವ ಡ್ರಾಯರ್.




ರಸ್ತೆ:
ಚಚ್ಚಿಸಿಕೊಂಡು ಅರೆಜೀವವಾಗಿ
ಮುದುಡಿ ಮಲಗಿದ ಕೇರೆ ಹಾವು
ಕಾಡಾನೆಯ ಲದ್ದಿಯ ಸಿಂಡು
ಹುಲಿಯ ಹೆಜ್ಜೆಯ ಹಚ್ಚೆ
ಆಚೀಚೆ ಅಪ್ಪಿಕೊಳ್ಳಲು ಹವಣಿಸುವ
ಬೇಲಿಯ ಭಯದ ನೆರಳು.

ಕಾರ್ಮಿಕ:
ಆಕಾಶದ ತಾರಸಿ
ನೆಲದ ಗಟ್ಟಿ ಅಡಿಪಾಯ
ಚಂದಿರನ ಚಿತ್ರ ಪ್ರದರ್ಶನ
' ಠೇಂಽಽ..' ಓಂದೇ ಒಂದು ಗುಂಡೇಟಿಗೆ
ಪೂರ್ಣವಿರಾಮ.




ಕಾಡು:
ಬೇಸಿಗೆಗೆ ಬೆದರಿ ನರಸತ್ತ ತೇಗ
ಅಲ್ಲಲ್ಲಿ ತಂತಿ ಬೇಲಿಗೆ ಬೊಜ್ಜು
ಸರಾಗ ನಡೆದಾಡಲು ಸುಗಮ ದಾರಿ.


-3-

ಬೇಲಿಗಳೇ ಇಲ್ಲದ
ಕಾಂಪೌಂಡುಗಳೇ ಇಲ್ಲದ
ಹಚ್ಚಹಸುರಿನ ಕೊಡಗೆಂದರೆ ಮಾತ್ರ ನಂಗಿಷ್ಟ.



ಪ್ರಭೂ,
ಪ್ರಭುತ್ವದ ಆಸೆಗೆ ಬಿದ್ದ
ಎಂಥ ಮಳೆಗೂ
ನೆಲ ಬಿರುಕುಬಿಡದಂತೆ ನೋಡಿಕೊಂಡಿರು!


**
-ಕಾಜೂರು ಸತೀಶ್ 

Monday, June 23, 2014

ಇನ್ಕ್ವಿಲಾಬ್ ಜಿಂದಾಬಾದ್[ಕಥೆ]

ಒಂದು ವಾರ ಎಡೆಬಿಡದೆ ಗೇರು ಬೀಜ ಹೆಕ್ಕಿ, ಇನ್ನೊಂದು ವಾರ ಕಾಡು ಸುತ್ತಿ ಅಲ್ಲಿನ ಜನರೊಂದಿಗೆ ಬೆರೆತ ಕಾರಣ,ಬಿಡುವೇ ಇಲ್ಲದಂತಾಗಿ ತುಂಬ ದಣಿದಂತಾಗಿದ್ದೆ.



ನಾನು ಕಾಡಿಗೆ ನುಗ್ಗಿದಂದಿನಿಂದ ನನ್ನನ್ನು ಜನ ವಿಚಿತ್ರವಾಗಿ ನೋಡಲಾರಂಭಿಸಿದ್ದು ನನಗೂ ಅರಿವಿಗೆ ಬಂದಿತ್ತು. ಮೊದಲೇ ನಾನಿರುವುದು ಬಾಡಿಗೆ ಮನೆಯಲ್ಲಿ. ಅಷ್ಟೇನೂ ಪರಿಚಿತವಲ್ಲದ ಊರು. ಊರು ಎಂದರೆ ಕಾಡಿನಂಥ ಒಂದು ಊರು. ಮನೆಗಳಿದ್ದರೂ ಅಷ್ಟು ಸುಲಭವಾಗಿ ಕಣ್ಣಿಗೆ ಬೀಳುವುದಿಲ್ಲ. ಊರಿಡೀ ಹುಡುಕಿದರೂ ಪತ್ರಿಕೆ ಓದುವವರು ನಾಲ್ಕೈದು ಮಂದಿ ಸಿಗಬಹುದು. ಆದರೆ,ರಾಜಕೀಯದ ವಿಷಯಕ್ಕೆ ಬಂದಾಗ ಮಾತ್ರ ತುಂಬ ಚಾಣಾಕ್ಷರು. ಇತ್ತೀಚೆಗೆ ರೇಡಿಯೋವನ್ನೂ ಮೂಲೆಗೆಸೆದು ಟಿ.ವಿ. ಧಾರಾವಾಹಿಗಳನ್ನು ತಪ್ಪದಂತೆ ನೋಡುವುದನ್ನು ರೂಢಿಸಿಕೊಂಡಿದ್ದಾರೆ. ಮೊಬೈಲ್ ಫೋನ್  ಬಳಸುವುದನ್ನು ಕಲಿತಿದ್ದಾರೆ. ಮುಂದಿನ ವರ್ಷಕ್ಕೆಇರೋಬರೋ ಗೇರು ತೋಟವನ್ನೆಲ್ಲ ಕಡಿದು ರಬ್ಬರ್ ನೆಡುವ ಯೋಜನೆ ಪ್ರತಿಯೊಬ್ಬರ ಬಾಯಿಂದ ಬಾಯಿಗೆ ಕಾಯಿಲೆಯಂತೆ ಹರಡಿದೆ .ತುಂಬ ಹುಡುಕಿದರೆ ಸಿಗುವುದುಎರಡೇ ಎರಡು ಭತ್ತದ ಗದ್ದೆ. ಬರುವ ವರ್ಷ ಅದರಲ್ಲೂ ರಬ್ಬರ್ ಹುಟ್ಟುತ್ತದಂತೆ.  ಸಾಂಸಾರಿಕ ಜೀವನವಂತೂ ರಸವತ್ತಾದದ್ದು. ಪ್ರೀತಿಸಿದ ಜೋಡಿ ಕಾಡಿಗೆ ತೆರಳಿ ಎರಡು ದಿನ ಪತ್ತೆಯಾಗಿಲ್ಲವೆಂದರೆ ಮದುವೆಯಾಯಿತೆಂದೇ ಅರ್ಥ.ಮದುವೆಯಾದ ಗಂಡ -ಹೆಂಡತಿಯರು ಮತ್ತೊಬ್ಬರೊಂದಿಗೆ ಓಡಿಹೋಗುವುದು ಸಹಜವಾದ ವಿಚಾರ.





ಇಂಥ ಊರಲ್ಲಿ ನಾನು ಪ್ರತೀ ವರ್ಷ ಗೇರು ತೋಟದ ಗುತ್ತಿಗೆ ಪಡೆಯಲು ಬರುತ್ತೇನೆ . ಅಬ್ಬಬ್ಬ ಅಂದರೆ ಎರಡು ತಿಂಗಳ ಕೆಲಸ. ಹೀಗಾಗಿ, ಜನಗಳಿಗಿಂತ ನನಗೆ ಇಲ್ಲಿರುವ ಕಾಡಿನ ಮೂಲೆ ಮೂಲೆಗಳೇ ಹೆಚ್ಚು ಪರಿಚಿತ. ನಾನೂ ಜನಗಳ ಬಗ್ಗೆ ಅಷ್ಟೇನೂ ತಲೆಕೆಡಿಸಿಕೊಂಡಿಲ್ಲ. ಕಾಡಿನಲ್ಲಿ ಮೀನು ಹಿಡಿಯುವುದು, ತೂಗುಪಾಲ ಕಟ್ಟಲು ಸಹಕರಿಸುವುದು, ಹಳೆಯ ಪತ್ರಿಕೆಗಳನ್ನು ಕೊಂಡೊಯ್ದು ಶಾಲೆಗೆ ತೆರಳದೆ ಕದ್ದು ಕುಳಿತ ಮಕ್ಕಳನ್ನು ಓದಿಸುವುದು..ಇಂಥದ್ದನ್ನೆಲ್ಲ ಮಾಡುತ್ತಿದ್ದೆ.





ಆದರೆ, ಈಚೆಗೆ ಕಾಡಿಗೆ ನುಗ್ಗುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ನೂರೆಂಟು ಪ್ರಶ್ನೆಗಳು,ತಪಾಸಣೆ ,ಗಸ್ತು ತಿರುಗುವುದು ಇತ್ಯಾದಿ .







ಮನಸ್ಸು ಏಕಾಂತವನ್ನು ಬಯಸುತ್ತಿತ್ತು,. ಎಲ್ಲಾದರೂ ದೇಶಾಂತರ ಹೊರಟುಹೋಗಬೇಕೆನಿಸುತ್ತಿತ್ತು. ಕೋಣೆಗೆ ತೆರಳಿದೆ.
*

ಮೊದಲ ದಿನ:

ಕತ್ತಲಾಗುತ್ತಲೇ ಬಾಗಿಲು ಕುಂಯ್ಗುಟ್ಟದ ಹಾಗೆ ನಿಧಾನಕ್ಕೆ ತೆರೆದು ಮುಂಬಾಗಿಲಿಗೆ ಬೀಗ ಜಡಿದೆ. ಹಿಂಬಾಗಿಲಿನಿಂದ ಒಳಗೆ ಸೇರಿಕೊಂಡು ಭದ್ರಪಡಿಸಿದೆ.



ಹಾಗೆ ಮಾಡೋದಕ್ಕೂ ಮುಂಚೆ ಮೂರು ದಿನಗಳ ಮಟ್ಟಿಗೆ ಬೇಕಾಗಬಹುದಾದ ಜೋಳದ ರೊಟ್ಟಿ,ಚಟ್ನಿಪುಡಿ,ಸೇಬು,ಬಾಳೆಹಣ್ಣು,ಅವಲಕ್ಕಿ,­ಪುರಿ,ಪೇಸ್ಟು,ಸೋಪು..ಇತ್ಯಾದಿ ಇತ್ಯಾದಿ ವಸ್ತುಗಳೆಲ್ಲ ಇವೆಯೇ ಎಂದು ಖಾತ್ರಿಪಡಿಸಿಕೊಂಡೆ. ಪರ್ಫ್ಯೂಮು,ಹೇರ್ ಡೈ ಮುಗಿದುಹೋಗಿದ್ದರೂ,ರೂಮಿನಲ್ಲಿದ್ದಾಗ ಅದರ ಅವಶ್ಯಕತೆ ಇಲ್ಲವಲ್ಲ ಎಂದು ಸುಮ್ಮನಾಗಿದ್ದೆ. ಕಿಟಕಿಗೆ ಕಪ್ಪು ಕರ್ಟನನ್ನು ಚೆನ್ನಾಗಿಯೇ ಕಟ್ಟಿದ್ದೆ. ನೆಲವನ್ನೆಲ್ಲ ಗುಡಿಸಿದೆ. ಒರೆಸಿದೆ.ಅನ್ನದ ತಪಲೆ,ನೀರಿನ ಪಾತ್ರೆಗಳನ್ನೆಲ್ಲ ತೊಳೆದು ಮಕಾಡೆ ಮಲಗಿಸಿದೆ. ಅಪ್ಪಿತಪ್ಪಿ ಮರೆತು ಕರೆಂಟು ಸ್ವಿಚ್ಛು ಒತ್ತುತ್ತೇನೊ ಎಂಬ ಭಯದಲ್ಲಿ ಬಲ್ಬುಗಳನ್ನು ಬಿಚ್ಚಿಟ್ಟೆ. ಕ್ಯಾಂಡಲನ್ನು ಕೈಗೆ ಸಿಗದ ಹಾಗೆ ಬಚ್ಚಿಟ್ಟೆ. ಬೆಳಕಿರುವಷ್ಟು ಹೊತ್ತು ಓದಲು ಒಂದಷ್ಟು ಪುಸ್ತಕಗಳನ್ನು ಗುಡ್ಡೆಹಾಕಿದೆ: ಕಾರಂತ,ತೇಜಸ್ವಿ,ಲಂಕೇಶ,­ಫ್ರಾಯ್ಡ್,ಚೆ,ನೆರೂಡ,ಲಾರೆನ್ಸ್,ಕಾಫ್ಕಾ,ವೈಕ್ಕಂ...ಹೀಗೆ.ಅವುಗಳಲ್ಲಿ ಲಾರೆನ್ಸನ 'ದಿ ರೈನ್ ಬೌ' ವನ್ನು ಮೊದಲು ಓದಲು ಮನಸ್ಸು ಹೇಳಿತು. ಏಕಾಂತದ ಒತ್ತಡವನ್ನು ಅದು ನಿಭಾಯಿಸುತ್ತದೆ ಎಂದು ಯಾರೊ ಹೇಳಿದ ನೆನಪು. ಅಗತ್ಯವಿದ್ದವರಿಗೆಲ್ಲ ಕರೆಮಾಡಿ ಮೊಬೈಲ್ ಹಾಗೂ ನನ್ನ ಸಾಫ್ಟ್ವೇರ್ ಹೋಗಿದೆಯೆಂದೂ,ರಿಪೇರಿಗೆ ಕೊಡುತ್ತಿದ್ದೇನೆ ಎಂದೂ ,ಸರಿಯಾಗಲು ಮೂರು ದಿನಗಳಾದರೂ ಬೇಕಾಗಬಹುದು ಎಂದೂ ಸೊಗಸಾಗಿ ಸುಳ್ಳು ಹೇಳಿದೆ. ಮೊಬೈಲಿನ ಸಿಮ್ ಕಳಚಿಟ್ಟೆ. ಇನ್ನುಇಂಟರ್ನೆಟ್ ಸಹವಾಸವೂ ಬೇಡ. ಮೂರು ದಿನಗಳ ಕಾಲ ಫ್ಯಾನಿನ ತಿರುಗುವ ಸ್ವಾತಂತ್ರ್ಯವನ್ನೂ ಕಸಿದುಕೊಂಡೆ.





ರಾತ್ರಿ ದೀಪ ಹಚ್ಚಲಿಲ್ಲ. ಎಂದಿನ ಸಮಯಕ್ಕೆ ಚಾಪೆಯ ಮೇಲುರುಳಿದರೂ, ಬೇಗ ನಿದ್ದೆ ಹತ್ತಲಿಲ್ಲ. ಮರುದಿನ ಮುಂಜಾವ ಮೂರರ ಸುಮಾರಿಗೆ ಎದ್ದು ಬಚ್ಚಲ ಮನೆಗೆ ಮೆತ್ತಗೆ ಹೆಜ್ಜೆಯಿಡುವಾಗ ಕತ್ತಲಿನ ಅರ್ಥ ತಿಳಿಯುತ್ತಾ ನನ್ನೊಳಗೆ ಬೆಳಕು ಹಬ್ಬಿತು. ಒಳಗಿನ ಬೆಳಕು,ಹೊರಗಿನ ಕತ್ತಲು ಗಾಢವಾಗಿ ಮತ್ತೆ ಹಾಸಿಗೆಗೆ ಹೊರಳಿದೆ.



ಎರಡನೇ ದಿನ:

ಕತ್ತಲಲ್ಲಿ ಬೆಳಕು ಹಚ್ಚಲು ಹೆದರಿ ತಡವಾಗಿ ಎದ್ದಿದ್ದೆ. ನಾನು ಹೆದರಿದ್ದು ಬೆಳಕಿಗೊ ಅಥವಾ ನನ್ನ ಸುತ್ತಲಿರುವ ಜನಗಳಿಗೊ ಎನ್ನುವ ಪ್ರಶ್ನೆ ನನ್ನನ್ನು ಸಣ್ಣಗೆ ಕೊರೆಯುತ್ತಿತ್ತು. ಜೋಳದ ರೊಟ್ಟಿ, ಶೇಂಗಾ ಚಟ್ನಿಯ ನಿಜವಾದ ರುಚಿ ನನಗೆ ಅವತ್ತು ತಿಳಿಯಿತು.




ಯಾರೋ ಬಾಗಿಲು ಬಡಿದರು.ಈ ಹಾಳು ಕೊತ್ತಿ ಪಾತ್ರೆ ತಟ್ಟಿ ಬೀಳಿಸಿ ಸದ್ದು ಮಾಡಿದ್ದು ಅವರಿಗೆ ಕೇಳಿಸಿರಬೇಕು.

ಬೀಗ ಹಾಕಿದ್ದರೂ ಈ ಮನುಷ್ಯರು ಬಾಗಿಲು ತಟ್ಟುತ್ತಾರಲ್ಲಾ ಎನಿಸಿತು.


ಮಧ್ಯಾಹ್ನ ಹಸಿವು ಸ್ವಲ್ಪ ಜಾಸ್ತಿಯೇ ಕಾಡುತ್ತಿತ್ತು. ಹೊಟ್ಟೆ ಖಾಲಿಯಾದಾಗಲೆಲ್ಲ ಒಂದೆರಡು ಹೋಳು ಗೇರುಹಣ್ಣು ತಿಂದರೆ ಹಸಿವಿನ ಸಮುದ್ರ ಶಾಂತವಾಗುವಾಗುತ್ತದೆ ಎಂಬುದು ನನ್ನ ಅನುಭವ.ಹಾಗೇ ಮಾಡಿದೆ. ವಾರ್ತೆ ಕೇಳಬೇಕೆನಿಸಿತು. ಮೊಬೈಲಿನಲ್ಲಿ ರೇಡಿಯೊ ಹಾಕಿದೆ. ಹಾಡು ಬರುತ್ತಿತ್ತು:

'ಮನೆಯೊಳಗೆ ಮನೆಯೊಡೆಯನಿದ್ದಾನೋ  ಇಲ್ಲವೋ...'

ರೇಡಿಯೊ ಆಫ್ ಮಾಡಿ ನಾನೇ ಹೇಳಿಕೊಂಡೆ:
'ಮನೆಯೊಳಗೆ ಮನೆಯೊಡೆಯನಿದ್ದಾನೆ. ಆದರೆ ಹೊಸ್ತಿಲೊಳಗೆ ರಜ ತುಂಬಿ ,ಮನೆಯೊಳಗೆ ಕಸ ತುಂಬಿಹೋಗಿದೆ..'

ಮೇಜಿನ ಮೇಲೆ ಗುಡ್ಡೆ ಹಾಕಿದ್ದ ಪುಸ್ತಕಗಳಲ್ಲಿ ಯಾವುದನ್ನೂ ಓದಿ ಪೂರ್ಣಗೊಳಿಸಲಾಗಲಿಲ್ಲ. ಆಡು ಮೇಯ್ದ ಹಾಗೆ ಸ್ವಲ್ಪ-ಸ್ವಲ್ಪ ಮೇಯ್ದರೂ ಹೊಟ್ಟೆ ತುಂಬಿದಷ್ಟು ತೃಪ್ತಿಯಾಗಿರಲಿಲ್ಲ.




ನನಗೆ ಆಗಾಗ ತಲೆಬಿಸಿ ಮಾಡುತ್ತಿದ್ದದ್ದು ಪಕ್ಕದ ಮನೆಯ ಟಾಮಿ. ನನ್ನ ವಾಸನೆ ಹಿಡಿದು ಬಾಗಿಲ ಬಳಿ ಬಂದು 'ಕುಂಯ್ಕುಂಯ್' ಅಂದಾಗ ಯಾರಾದರೂ ಅನುಮಾನ ಪಟ್ಟಾರು ಎಂಬ ಭಯ ನನ್ನನ್ನು ಕಾಡುತ್ತಿತ್ತು. ಅದು ದಿನಾಲೂ ನನ್ನ ಬಳಿ ಬಂದಾಗ ಮೀನಿನ ತಲೆಯೊ ಅಥವಾ ಬಿಸ್ಕೇಟೊ ಕೊಟ್ಟು ಅಲ್ಲಾಡುವ ಬಾಲವನ್ನು ನೆಟ್ಟಗೆ ಮಾಡಿ ಕಳಿಸುತ್ತಿದ್ದೆ.




ಮೂಲೆಯ ಯಾವುದೋ ಪ್ಲಾಸ್ಟಿಕ್ಕಿನಿಂದ ಜಿರಲೆಗಳು ಸಂಗೀತ ಹೊಮ್ಮಿಸುತ್ತಿದ್ದವು. ಹಲ್ಲಿಗಳೆರಡು ತಮಗಿಷ್ಟವಾದ ಕ್ರೀಡೆಯಲ್ಲಿ ನಿರತವಾಗಿದ್ದವು. ಹೊರಗಿರುವ ರಸ್ತೆಯಲ್ಲಿ ಜನ ನನ್ನ ಇಲ್ಲದಿರುವಿಕೆಯ ಭಾವದಿಂದ ಸಂಪೂರ್ಣ ಸ್ವಾತಂತ್ರ್ಯವನ್ನು ಬಳಸಿಕೊಂಡು ಯಾರದೋ ಮನೆಯ ಕಥೆಯೊಂದನ್ನು ಟಿ.ವಿ.ಯಲ್ಲಿ ಮಾತನಾಡುವಂತೆ ಮುಕ್ತವಾಗಿ ಚರ್ಚಿಸಿಕೊಂಡು ಹೋಗುತ್ತಿದ್ದರು.




ನಿಜ ಹೇಳಬೇಕೆಂದರೆ, ನನ್ನ ಖಿನ್ನತೆ ಸ್ವಲ್ಪ ಕಡಿಮೆಯೇ ಆಗಿತ್ತು.





ತುಸು ಗಾಳಿ ಬರಲೆಂದು ಮೇಲ್ಭಾಗದ ಹೆಂಚನ್ನು ಸರಿಸಿದೆ. ಚಂದ್ರ ಕಂಡೊಡನೆ ನನಗೆ ಸ್ವಾತಂತ್ರ್ಯ ಸಿಕ್ಕಷ್ಟು ಖುಷಿಯಾಯಿತು.



ಮಧ್ಯರಾತ್ರಿಯಲ್ಲಿ ಎದ್ದೆ, ಸಪ್ಪಳ ಬಾರದ ಹಾಗೆ ನಡೆದೆ. ಫಳಾರನೆ ಮಿಂಚು ಕವಿಯಿತು. ಗೋಡೆಯ ಮೇಲೆ ನೇತು ಹಾಕಿದ್ದ ಬುದ್ಧನ ಚಿತ್ರದ ಮಂದಸ್ಮಿತಕ್ಕೆ ಪ್ರತಿಯಾಗಿ ನಾನೂ ಅದನ್ನೇ ಅನುಕರಿಸಬೇಕೆನಿಸಿತು. ಸ್ವಲ್ಪ ಮಳೆಯಾದರೂ ಬೀಳಬಾರದೇ ಎನ್ನಿಸಿದಾಗಲೇ ಕೆಲವು ಹನಿಗಳು ಉದುರತೊಡಗಿದವು.


ಮೂರನೇ ದಿನ:


ಬೆಳಕಾಗುವ ಮೊದಲೇ ಹಿಂಬಾಗಿಲಿನಿಂದ ಬಂದು ನಾನು ಬೀಗ ತೆಗೆಯಬೇಕಿತ್ತು. ಯಾಕೋ ಹಾಗನ್ನಿಸಲಿಲ್ಲ. ಕೋಣೆಯೊಳಗಿನ ಅರ್ಧಂಬರ್ಧ ಕತ್ತಲು, ಬೆಳಕು ,ಮೌನ..ಎಲ್ಲ ತುಂಬ ಹಿಡಿಸಿತ್ತು, ಈಚೆಗೆ ಮನುಷ್ಯರನ್ನು ಕಂಡರೇನೆ ಭಯವಾಗುತ್ತೆ ಎಂದು ಮೊನ್ನೆ ಆಫ್ರಿಕಾದಗೆಳೆಯನಿಗೆ ಮೈಲ್ ಕಳಿಸಿದ್ದೆ.

'ಅದು ಯಾವುದೋ 'ಕಾಂಪ್ಲೆಕ್ಸ್' ಇರಬಹುದು ,ಬೇಗ ಮನೋವೈದ್ಯರನ್ನು ಭೇಟಿಯಾಗು' ಎಂದು ಅದರ ಮಾರನೇ ದಿನ ಸೂಚಿಸಿದ್ದ.

'ನನಗೆ ಯಾವ ಕಾಂಪ್ಲೆಕ್ಸೂ ಇಲ್ಲ ಮಾರಾಯ , ಕಟ್ಟಿಸಲೂ ಕೂಡ ಹಣವಿಲ್ಲ' ಎಂದು ಉತ್ತರಿಸಿದ್ದೆ.

ಪ್ರಜ್ಞಾಪೂರ್ವಕವಾಗಿರುವಾಗ ಮಾ ತ್ರ ಕೇಳಿಸುವ ತೋಡು ನೀರಿನ ಹಾಡು ಬದಲಾಗಿರಲಿಲ್ಲ. ಅದು ಬದಲಾಗಬೇಕೆಂದರೆ ಮಳೆ ಸುರಿಯಬೇಕು. ಅದು ತಾರಕದಲ್ಲಿ ಹಾಡುತ್ತಿದ್ದರಂತೂ ಈಚೇಚೆಗೆ ರೇಡಿಯೋದಲ್ಲಿ ಕೇಳಿಬರುತ್ತಿರುವ ಕೆಲವರ ಅರಚುಗಾನದಂತೆ ಕೇಳಿಬರುತ್ತದೆ. ಅದಕ್ಕೇ, ಹಾಗಾಗದಿರಲಿ ಎಂದುಕೊಳ್ಳುತ್ತಿದ್ದೆ.





ಗೋಡೆಯ ಮೇಲೆ ಮಹಾನ್ ಕಳ್ಳನಂತೆ ಹತ್ತಿಳಿಯುತ್ತಿದ್ದ ಶತಪದಿ, ಸಹಸ್ರಪದಿಗಳು ಒಮ್ಮೊಮ್ಮೆ ಕಾಲಿಗೆ ಸಿಕ್ಕಿ 'ಕಚಕ್' ಆಗಿಬಿಡುತ್ತಿದ್ದವು. ಬಾಗಿಲು ತೆರೆಯದಿದ್ದುದಕ್ಕೆ ಗೋಡೆಯಲ್ಲಿ ನೀರಿನ ಪಸೆ ಇತ್ತು. ಹೊಳೆ, ತೋಡಿನ ಬಳಿ ಮನೆಯಿದ್ದರೆ ಈ ಸಮಸ್ಯೆ ಇದ್ದದ್ದೇ. ನೆಲವೂ ಓಯಾಸಿಸ್ನಂತಾಗಿತ್ತು.




ಯಾರದೋ ಮಾತು ಕೇಳಿಸಿತು. ಬಾಗಿಲು ಕುಟ್ಟುವ ಶಬ್ದ. ಆಮೇಲೆ ಗರಗಸದ ಸದ್ದು. ಇದ್ದಕ್ಕಿದ್ದಂತೆ ನಾಲ್ಕಾರು ಮಂದಿ ಬಾಗಿಲು ಮುರಿದು ಒಳಬಂದರು! ಜೊತೆಗೆ ಟಿ.ವಿ. ಮಾಧ್ಯಮದವರು, ಫೊಟೋಗ್ರಾಫರುಗಳು,ಪತ್ರಕರ್ತರು.ಕೆಲವರು ಒಳನುಗ್ಗಿದವರೇ ನನ್ನನ್ನು ಅನಾಮತ್ತಾಗಿ ಎತ್ತಿಕೊಂಡು ಹೊರನಡೆದರು!



ಆಸ್ಪತ್ರೆ! ನನಗೆ ಹುಚ್ಚು ಹಿಡಿದಿದೆಯೆಂದು ಪಕ್ಕದ ಊರಿನ ಒಬ್ಬಳು ದೇವರು ಬರುವ ಮುದುಕಿ ಹೇಳಿದ್ದಳಂತೆ. ಇನ್ನೂ ಏನೇನೋ ಹೇಳಿದಳಂತೆ.



ಮುಜುಗರಕ್ಕೊಳಗಾದ ನಾನು ಬೆವತುಹೋದೆ. ವೈದ್ಯರೊಬ್ಬರು ಬಂದವರೇ ನನ್ನ ಜೇಬು ತಪಾಸಣೆ ಮಾಡತೊಡಗಿದರು. ನಾನು ಬರೆದಿಟ್ಟ ಕವಿತೆಯೊಂದು ಸಿಕ್ಕಿತು. ನಾನು ಬರೆದಿದ್ದೆ:

'ಬಾಗಿಲು ತೆರೆದೊಡನೆ
ಒಳಗಿರುವ ಕತ್ತಲಿಗೆ
ಹೊರಗಿರುವ ಬೆಳಕಿಗೆ
ಸ್ವಾತಂತ್ರ್ಯೋತ್ಸವ!'


ಅದನ್ನು ಅರ್ಥಮಾಡಿಕೊಳ್ಳಲಾಗದೆ ಕಸದ ಬುಟ್ಟಿಗೆ ಎಸೆದರು. ಅದು ರಕ್ತ ಮೆತ್ತಿದ ಹತ್ತಿಯ ಮೇಲೆ ಬಿದ್ದು ಕೆಂಪಾಯಿತು. ನಾನು 'ಕೆಂಪು ಕಾವ್ಯ' ಎಂದೆ. ನನ್ನನ್ನೊಮ್ಮೆ ದುರುಗುಟ್ಟಿ ನೋಡಿದರು. ನಾನು ನೋಟದಲ್ಲಿ ಪ್ರತಿಭಟಿಸಲಿಲ್ಲ.ಅವರು, ಸಿರಿಂಜಿನೊಂದಿಗೆ ಒಳಪ್ರವೇಶಿಸಿದ ಸುಂದರವಾಗಿದ್ದ ನರ್ಸಿನ ಗಲ್ಲವನ್ನು ಹಿಡಿದು ಪೋಲಿ ಜೋಕೊಂದನ್ನು ಹೇಳಿದರು. ಅವಳ ಮುಖವು ಬೆಳಗು-ಬೈಗುಗಳ ಪೂರ್ವ-ಪಶ್ಚಿಮಗಳಾಗಿ ಅಲ್ಲಿಂದ ಕಾಲ್ಕಿತ್ತಳು.


'ಡಾಕ್ಟರ್, ಆಯ್ಯಾಮ್ ಆಲ್ರೈಟ್' ಎಂದೆ.

ತುಸು ನಕ್ಕವನಂತೆ ನಟಿಸಿ ಯಾವುದೋ ವ್ಯವಹಾರದೊಂದಿಗೆ ಎಗ್ರಿಮೆಂಟ್ ಮಾಡಿಕೊಂಡವರಂತೆ ಗಂಭೀರವಾಗಿ ಮಾತನಾಡುತ್ತಿದ್ದರು.



ನನ್ನ ಪಕ್ಕದ ಬೆಡ್ಡಿನಲ್ಲಿದ್ದ ವ್ಯಕ್ತಿ ನನ್ನನ್ನು ನೋಡಿ ಪರಿಚಯಸ್ಥನಂತೆ ನಕ್ಕ. ಅವನ ತಲೆ ನಿಜವಾಗಿಯೂ ಕೆಟ್ಟಿತ್ತು. ಮತ್ತೊಮ್ಮೆ ನೋಡಿದೆ. ಅರೆ , ಬಡ್ಡಿಮಗ! ನಮ್ಮೂರಿನ ತಾಲ್ಲೂಕು ಆಫೀಸಿನಲ್ಲಿ ವಿಎ ಆಗಿದ್ದವ. ಅವನು ನನ್ನನ್ನು ಪೀಡಿಸುತ್ತಿದ್ದ ಪಾಡನ್ನು ನೆನೆದು ಮೈಯೆಲ್ಲಾ ಉರಿದುಹೋಯಿತು. ಶಾಲೆಗೆ ಹೋಗುತ್ತಿದ್ದಾಗ ಇವನನ್ನು ಕೊಲ್ಲಬೇಕು ಎಂದು ಸೇಡು ಇಟ್ಟುಕೊಂಡಿದ್ದೆ.'ನಿನ್ದು ಆ ಜಾತಿಯಲ್ಲ, ಆದಾಯ ಜಾಸ್ತಿ ಇದೆ' ಎಂದಿದ್ದಕ್ಕೆ 'ನಂಗೆ ಜಾತಿಯೇ ಇಲ್ಲವೆಂದು ಬರೆದುಕೊಡು' ಎಂದು ಗುಡುಗಿದ್ದೆ. 'ನಿನ್ನಂತವರ ಹಿಂಸೆಯಿಂದ ನಾನು ಮತಾಂತರ ಹೊಂದುತ್ತೇನೆ' ಎಂದಿದ್ದೆ.




ಅವನಿಂದಾಗಿ ದೊಡ್ಡವನಾದ ಮೇಲೆ ಒಬ್ಬ ಭಯೋತ್ಪಾದಕನಾಗಬೇಕು ಎಂದುಕೊಂಡಿದ್ದೆ. ನಾನಾಗ ನೋಡುತ್ತಿದ್ದ ಕೆಲವು ಕನ್ನಡ,ಮಲಯಾಳಂ,ತಮಿಳು ಸಿನಿಮಾಗಳು ನನಗೆ ಸಾಥ್ ಕೊಡುತ್ತಿದ್ದವು. ಆದರೆ,ಈಗ ನನಗೆ ಹಾಗೇನೂ  ಅನ್ನಿಸುತ್ತಿರಲಿಲ್ಲ. ಪಾಪ,ಹಾಳಾಗಿ ಹೋಗಲಿ ಎಂದು ಸುಮ್ಮನಾದೆ.


ನನ್ನನ್ನು ಮಲಗಿಸಿದ್ದ ಬೆಡ್ಡಿನ ಪಕ್ಕದಲ್ಲಿಟ್ಟ ಸ್ವಲ್ಪ ತುಕ್ಕುಹಿಡಿದಿದ್ದ ಸ್ಟೂಲಿನ ಮೇಲೆ ಡಿಸ್ಚಾರ್ಜ್ ಆಗಿದ್ದ ರೋಗಿಯ ಕಡೆಯವರು ಕಣ್ಣಾಡಿಸಿ ಬಿಟ್ಟುಹೋದ ಪತ್ರಿಕೆಯಿತ್ತು. ಖುಷಿಯಿಂದ ನೋಡತೊಡಗಿದೆ. ನನ್ನ ಭಾವಚಿತ್ರವನ್ನೇ ನೋಡಿದಂತೆನಿಸಿತು. ಅಯ್ಯೋ.. ಹೌದು,ನನ್ನದೇ!. ಕೆಲವೇ ಗೆರೆಗಳಲ್ಲಿ ಕಲಾವಿದನೊಬ್ಬ ನನ್ನ ಭಾವಚಿತ್ರವನ್ನು ಅದ್ಭುತವಾಗಿ ಬಿಡಿಸಿದ್ದ. ಇದಕ್ಕೂ ಮುಂಚೆ ನಾನೂ ಎಷ್ಟೋ ಸಲ ನನ್ನನ್ನು ಬಿಡಿಸಲು ಪ್ರಯತ್ನಿಸಿದ್ದೆ. ಆದರೆ ಅದು ನನ್ನ ಮುಪ್ಪಿನ ಕಾಲದ ಭಾವಚಿತ್ರವಾಗಿರುತ್ತಿತ್ತು. ಅಥವಾ ಹಾಗೆಂದುಕೊಂಡು ನನ್ನೊಳಗಿನ ಆಗಷ್ಟೆ ಕಣ್ಣುಬಿಡುತ್ತಿದ್ದ ಕಲಾವಿದನನ್ನು ಸಮಾಧಾನಪಡಿಸುತ್ತಿದ್ದೆ.





ಆದರೆ, ಇಲ್ಲಿರುವ ನನ್ನ ಚಿತ್ರದ ಕೆಳಗೆ 'ಶಂಕಿತ ಆರೋಪಿ' ಎಂದಿತ್ತು!






ನನಗೆ ಹಸಿವು, ನೀರಡಿಕೆ ಜಾಸ್ತಿಯಾಗಿತ್ತು. ಏನಾದರೂ ಸಿಗಬಹುದಾ ಎಂದು ಆಸೆಯಿಂದ ನೋಡಿದೆ . ಪಕ್ಕದ ಆ ವಿಎಗೆ ಅವನ ಮನೆಯವರು ಫ್ಲಾಸ್ಕಿಂದ ಚಹಾ ಉಯ್ಯುತ್ತಿದ್ದರು. ಲೋಟದ ಮೇಲೆ ತೇಲುತ್ತಿದ್ದ ಇರುವೆ ಸಮೇತ ಕುಡಿದುಬಿಟ್ಟ.

'ಇರುವೆ ತಿಂದರೆ ಕಣ್ಣೀಗೆ ಒಳ್ಳೇದು' ಎಂದು ಕಾಫಿಯಲ್ಲಿ ಬಿದ್ದಿರುತ್ತಿದ್ದ ಇರುವೆಯನ್ನು ನೋಡಿ ಅಮ್ಮ ಯಾವುತ್ತೂ ಹೇಳುತ್ತಿದ್ದದ್ದು ನೆನಪಾಯಿತು.

ಊಹೂಂ.ನನಗೆ ಆಹಾರ ಸಿಗುವ ಯಾವ ಲಕ್ಷಣಗಳು ಅಲ್ಲಿ ಕಾಣಲಿಲ್ಲ.


ಮತ್ತೆ ಓದಿದೆ.. ಏನೂ ಅರ್ಥವಾಗಲಿಲ್ಲ. ಇನ್ನೊಮ್ಮೆ ಓದಿ ಚೆನ್ನಾಗಿ ಅರ್ಥಮಾಡಿಕೊಳ್ಳಬೇಕು ಎಂದು ನಿರ್ಧರಿಸಿದಾಗಲೇ ಪೊಲೀಸರ ಹೆಜ್ಜೆಗಳು ಸಂಗೀತದಂತೆ ತೇಲಿಬಂದವು.

***

ಅಪ್ಪ,ಅಮ್ಮ ಚಿಂತೆಯಿಂದ ಸೊರಗಿಹೋಗಿದ್ದರು.



ಮೊನ್ನೆ ಅಪ್ಪ ಹೇಳುತ್ತಿದ್ದರು- ಜೈಲಿಗೆ ಒಯ್ಯುವಾಗ , ಅದರೊಳಗಿರುವಾಗಲೆಲ್ಲ ಪ್ರತೀ ದಿನ ನಾನು 'ಇನ್ಕ್ವಿಲಾಬ್ ಜಿಂದಾಬಾಬ್' ಎನ್ನುತ್ತಿದ್ದೆನಂತೆ.

ಆದರೆ ನನಗೀಗ ಅದ್ಯಾವುದೂ ಅಷ್ಟಾಗಿ ನೆನಪಿಗೆ ಬರುತ್ತಿಲ್ಲ.



ನರೆತು,ಹಳಸಿಹೋದ ಗಡ್ಡವನ್ನು ನೀವುತ್ತಾ, ಕನ್ನಡಿಯಲ್ಲಿ ನೋಡಿಕೊಳ್ಳುತ್ತಾ ಟಿ.ವಿ. ವೀಕ್ಷಿಸುತ್ತಿದ್ದೆ.

ನನ್ನ ಕುರಿತು ಚರ್ಚೆ ನಡೆಯುತ್ತಿತ್ತು. ಚಾನಲ್ ಬದಲಾಯಿಸಿದೆ. ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮ ವೈಭವೋಪೇತವಾಗಿ ಸಾಗಿತ್ತು.

**
-ಕಾಜೂರು ಸತೀಶ್ 



Sunday, June 22, 2014

ಆಕಾಶ ಧುಮ್ಮಿಕ್ಕುತ್ತಿದೆ ನೀರಾಗಿ

ಜುಳುಜುಳು ಆಕಾಶದಲ್ಲಿ ಬಾವಲಿಗಳೆಂಬೊ ತಿಮಿಂಗಿಲಗಳು
ಟಪಟಪ ರೆಕ್ಕೆಬಡಿದು ವೈಯ್ಯಾರದಿಂದ ಈಜುತ್ತಿವೆ.




ಕಿತ್ತು ತಟ್ಟಾಟ ಆಡಿ ಬಿಸುಟಿದ ಚೆಂಡುಮಲ್ಲಿಗೆ ಹೂಗಳು
ಆಕಾಶದುದ್ದಕ್ಕೂ ಮುಳುಗಿ ಚುಕ್ಕಿಗಳಾಗಿ ಬೆಳಗಲು ಪ್ರತಿಷ್ಠಾಪನೆಗೊಂಡಿವೆ.




ಈ ಗುಲಾಬಿ ಹೂವು ಚೆಂಡುಮಲ್ಲಿಗೆಗಳಿಗೆಲ್ಲ ರಾಣಿಯೆಂಬಂತೆ
ಜಲರಾಶಿಯಲ್ಲುರಿದುರಿದು ಕೆಂಪು ಎಸಳುಗಳ ಭೂಮಿಗೆಸೆದು ಬೆಳಕು ಹಬ್ಬಿಸಿದೆ.




ವಿಮಾನಗಳು ಹಡಗುಗಳಾಗಿ ಹಕ್ಕಿಗಳ ಕಲ್ಲುಬಂಡೆಗಳಿಗೆ ಢಿಕ್ಕಿಯಾಗದಂತೆ
ಗಾಳಿಯ ನೀರನ್ನು ಸೀಳಿ ಸಿಳ್ಳೆಹಾಕಿ ಮುನ್ನುಗ್ಗುತ್ತಿವೆ.




ಕಪ್ಪು ಕಪ್ಪೆಗಳು ಮೋಡಗಳಾಗಿ ನೀರೊಳಗೆ ಕುಪ್ಪಳಿಸಿ ಹನಿಗಳ ಚಿಮುಕಿಸುತಿವೆ ನೆಲಕೆ;
ಅವು ಲೋಕದುದರವ ಹುಡುಕ್ಹುಡುಕಿ ಸಮಾಗಮಿಸುವಂತೆ ತಟತಟ ಉದುರುತ್ತಿವೆ.




ಅಡ್ಡಾಡಲೆಂಬಂತೆ ಮೇಲೆದ್ದ ಮಲೆಗಳು ಆಕಾಶದ ನೀರ ಸೀಳಲು -ದ್ವೀಪ;
ಮುಖ ತೊಳೆಯಲೆದ್ದ ಮರದ ತಲೆಮೇಲೆ ಉರಿವ ಹೂವಿನ ದೀಪ.




ಮೇಲೆ ನೀರು, ಕೆಳಗೆ ನೆಲ ;
ಮುಳುಗೇಳುತ್ತಾ ನಾವಿಲ್ಲಿ- ನಡುವಿನ ಉಬ್ಬು-ತಗ್ಗುಗಳಲ್ಲಿ.

**
-ಕಾಜೂರು ಸತೀಶ್

ಒಂದು ಪೆದ್ದು- ಪೆದ್ದಾದ ಪತ್ರ !

ಪ್ರೀತಿಯ ಸ್ಮಿತಾ ಮೇಡಂ,

ನಮಸ್ಕಾರ . ಕವಿತೆಗಳು ನಿಮ್ಮ ಜೊತೆಯಲ್ಲಿರುವಾಗ ನೀವು ಆರೋಗ್ಯದಿಂದ್ದೀರಿ ಎಂದುಕೊಳ್ಳುತ್ತೇನೆ!!

ಒಂದು ದಿನ ಮಯೂರದಲ್ಲಿ ಒಂದು ಚುಟುಕ ಓದಿದ್ದೆ.ಅಲ್ಲಿ ನನ್ನನ್ನು ಕಾಡಿದ್ದು ನಿಮ್ಮ ಹೆಸರಲ್ಲ- ಅದರ ಮುಂದಕ್ಕಿದ್ದ 'ಸಂಪಾಜೆ' ಎಂಬ ಹೆಸರು . ಅದೇ ಚುಟುಕು ಮಯೂರದಲ್ಲಿ ಮತ್ತೊಮ್ಮೆ ಪ್ರಕಟಗೊಂಡಾಗ ಅದು 'ಪಂಪಾಜೆ' ಎಂದು ಓದಿಸಿಕೊಂಡಿತ್ತು! ಆಮೇಲೆ , ಕೊಡಗಿನ ಇಂಥದ್ದೊಂದು ಊರಲ್ಲಿ ಇಂಥವರೊಬ್ಬರು ಬರೆಯುತ್ತಿದ್ದಾರೆ ಎಂದು ಗುರುತು ಮಾಡಿಕೊಂಡೆ.

ಮೂರ್ನಾಲ್ಕು ವರ್ಷಗಳ ಹಿಂದೆ 'ಕೊಡಗಿನ ಶತಮಾನದ ಕಾವ್ಯ ' ಎಂದು ಒಂದಷ್ಟು ಶ್ರಮವಹಿಸಿ ಹೊರತಂದ ಕೃತಿಯಲ್ಲಿ ನಿಮ್ಮ ಕವಿತೆ ಇರಬೇಕಿತ್ತು ಎಂದು ಅದರ ಸಂಪಾದಕಿ ಡಾ. ಕವಿತಾ ರೈಯವರಿಗೆ ಬರೆದ ಉದ್ದದ ಪತ್ರದಲ್ಲಿ ಸೂಚಿಸಿದ್ದೆ.

ಮತ್ತೊಂದು ದಿನ ನೀವು ಫೇಸ್ಬುಕ್ಕಿನಲ್ಲಿ ಕಾಣಿಸಿಕೊಂಡಾಗ , ಹೀಗೀಗೆ 'ಬೇರೆ ಬೇರೆ ' ಕಡೆಗಳಲ್ಲಿ ನಿಮ್ಮನ್ನು ಓದಿಕೊಂಡಿದ್ದೇನೆ ಎಂದು ಮೆಸೇಜು ಟೈಪಿಸಿದ್ದೆ.

ಆಮೇಲಾಮೇಲೆ, ಮಡಿಕೇರಿ ಆಕಾಶವಾಣಿಯ ರಾತ್ರಿ 8ರ ಯುವವಾಣಿಯಲ್ಲಿ ಮೊದಲ ಬಾರಿಗೆ ನಿಮ್ಮ ದನಿಯನ್ನು ಗುರುತಿಸಿದ್ದೆ. ಮತ್ತೆ , ಚೌತಿಗೋ/ದೀಪಾವಳಿಗೋ ಕಾವೇರಿ ಎಕ್ಸಪ್ರೆಸ್ಸಿನಲ್ಲಿ ಬಡಿಸಿದ ಖಾದ್ಯವನ್ನು ನನ್ನ ಮೊಬೈಲಿಗೆ ತುಂಬಿಟ್ಟಿದ್ದೆ.[ಕಳೆದ ಮಾರ್ಚ್ ನಲ್ಲಿ ಯಾವುದೋ ವೈರಸ್ಸೊಂದು ಅವುಗಳನ್ನು ಓದಿಕೊಳ್ಳಲು ಪಡೆದು ಹಿಂತಿರುಗಿಸಲೇ ಇಲ್ಲ !!]
*

ಕವಿತೆಯನ್ನು,ಬದುಕನ್ನು ಬೆಂಕಿಚೆಂಡಿನಂತೆ ಉಳ್ಳಾಡಿಸುತ್ತಿರುವ ನಾನು , ಕೆಸದ ಎಲೆ ಮೇಲಿನ ನೀರಿನ ಹಾಗೆ ಎತ್ತಿ ಅಂಗೈಯಲ್ಲಿಟ್ಟುಕೊಳ್ಳುವಾಗ ಎಲ್ಲಿ ಜಾರಿ ಹೋಗುತ್ತದೋ ಎನ್ನುವಂತಿರುವ ನಿಮ್ಮ ಕವಿತೆಗಳ ಕುರಿತು ನಾನೇನು ಹೇಳಲಿ ನೀವೇ ಹೇಳಿ ! ನನ್ನ ಮಾತುಗಳೀಗ ತುಟಿಯಂಚಲ್ಲೇ ಉ'ಳಿ'ಯುತ್ತಿವೆ ! ಹಹ್ಹಹ್ಹಾ..

ಅಂದ ಹಾಗೆ, ನೀವು ಓದುವ ಶೈಲಿಯಲ್ಲೇ ನಾನು ನಿಮ್ಮ ಕವಿತೆಗಳನ್ನು ಓದಿ ಮುಗಿಸಿದ್ದು! ಪುಸ್ತಕ ಕಳಿಸಿದ್ದಕ್ಕೆ ತುಂಬಾ ಥ್ಯಾಂಕ್ಸ್ ಆಯ್ತಾ..

*

ನನಗೆ ಖುಷಿಕೊಟ್ಟ ಸಾಲುಗಳು :

ನಿನ್ನೆಗಳೆಲ್ಲವನ್ನೂ ಮರೆತು/
ಲಾಲಿ ಹಾಡುತ್ತಿದೆ ಮರೆಗುಳಿ /
ಮರ.[ಎಲೆ-ಮರ]

ಅವರಿವರ ಕೈದಾಟುತ್ತಾ ಬಾಡುವ/
ಅನಾಥ ಕೂಸು ಮಾತು.[ಮೌನದ ಪದಗಳು ]

ಬಲವಂತದಲ್ಲಿ ಹುಟ್ಟುವುದಿಲ್ಲ ಕವಿತೆ[ಕವಿತೆಗೆ].

ಸುರುಳಿ ಸುತ್ತುವ ಅಲೆಗಳು /
ಕೆಲ ಕ್ಷಣವಾದರೂ ನನ್ನವೇ ಅಲ್ಲವೇ?[ಒಂದು ಬಿನ್ನಹ]

ಸುರಿವ ಬೆವರೊರೆಸಿಕೊಳ್ಳದೆಯೇ/
ಒಡಲೊಳಗೆ ಇಳಿದುಬಿಟ್ಟ..
[ತೊರೆಯ ಅಹವಾಲು]

ಬೆಳಕಿನುರಿಯಲ್ಲಿ ಕಿಸಕ್ಕನೆ/
ನಕ್ಕವರು ಎಲ್ಲಿ ?[ಪ್ರೀತಿ ದೀಪ ]

'ಮುಂಬಾಗಿಲ ಕವಿತೆ ' ನನಗೆ ಹೆಚ್ಚು ಇಷ್ಟವಾದ ಕವಿತೆ.

***

ಇನ್ನು ,ನನ್ನ ಹಾಗೆ ಹೆಚ್ಚು ಮಾತನಾಡುವ ಕವಿತೆಗಳೂ ಇವೆ!!

ಈ ವರ್ಷದಲ್ಲಿ ಮತ್ತೊಂದು ಸಂಕಲನ ಹೊರತನ್ನಿ. ಹೀಗೆ ಏನೇನೋ ತೀರಾ ಪೆದ್ದುಪೆದ್ದಾಗಿ ಗೀಚುವ ನನ್ನನ್ನು ಪ್ರೋತ್ಸಾಹಿಸುತ್ತಿರಿ!!

ಹೆಚ್ಚು ಬರೆಯಲು ಗೊತ್ತಿಲ್ಲ . ವಿರಮಿಸುತ್ತೇನೆ.

ವಂದನೆಗಳು ಮೇಡಂ..

-ಕಾಜೂರು ಸತೀಶ್



ಛಾಯೆ

ಮೊದಲ ಸಲ ಮನೆಗೆ ಬಂದ ಗೆಳೆಯ
ಗೋಡೆಗೆ ನೇತುಹಾಕಿದ
ನನ್ನ ಹಳೆಯ ಭಾವಚಿತ್ರ ನೋಡಿ ಕೇಳಿದ :
'ನಿನ್ನ ತಮ್ಮನಲ್ವಾ?'



"ಹೌದು"



"ಅಲ್ಪ-ಸ್ವಲ್ಪ ನಿನ್ನದೇ ಮುಖ,
ಅಡ್ಡಾದಿಡ್ಡಿ ಸರಿದ ನಿನ್ನಂಥದ್ದೇ ಕೂದಲು,
ನಿನಗಿಂತಲೂ ಸವಿನೆನಪುಗಳ ಹೊತ್ತ ಮುಖಭಾವ,
ನಿನ್ನಷ್ಟು ಗುಳಿಬೀಳದ ಕಣ್ಣುಗಳು ,
ನಿನಗಿಂತಲೂ ಚೆಲುವ..."



ಅವನ ಆತ್ಮವಿಶ್ವಾಸ ಹೆಚ್ಚುತ್ತಿದ್ದಂತೆ
ಮಾತಿಗೆ ವೇಗ ಹೆಚ್ಚಿತು
ಹೋಲಿಕೆಯ ಕುರಿತ ತರ್ಕಕ್ಕೆ ದೃಢತೆ ಹೆಚ್ಚಿತು
ಆ ಏಕಾಂತದಲ್ಲೂ
ಅವನಿಗೆ ಸುಮ್ಮನಿರಲಾಗಲಿಲ್ಲ.



ಮತ್ತೆ ಭಾವಚಿತ್ರವನ್ನು ದಿಟ್ಟಿಸಿ
ದನಿ ಕುಗ್ಗಿಸಿ ಕೇಳಿದ:
"ಇವನು ಬದುಕಿಲ್ವಾ?"



"ಇಲ್ಲ
ಬಹುತೇಕ ಇಲ್ಲ "

**
ಮಲಯಾಳಂ ಮೂಲ- ಕಲ್ಪೆಟ್ಟ ನಾರಾಯಣನ್

ಕನ್ನಡಕ್ಕೆ - ಕಾಜೂರು ಸತೀಶ್



Saturday, May 24, 2014

ಬಾಧೆ

ಹಳ್ಳಿಗಳಲ್ಲಿ
ನಗರಗಳಲ್ಲಿ
ಒಬ್ಬನೇ ನಡೆದೆ.


ಸತ್ತೇ ಹೋಗಲಿ ಎಂದು
ವಾಹನಗಳು ಸರಿದಾಡುವ ಡಾಂಬರು ರಸ್ತೆಯಲ್ಲಿ
ಅಂಗಾತ ಮಲಗಿದೆ.


ಆಕಾಶದಷ್ಟೆತ್ತರದ ಆಲದ ಕೊಂಬೆಯಲ್ಲಿ
ಗುರುತ್ವವನ್ನೂ ಲೆಕ್ಕಿಸದೆ
ಕಾಲುಚಾಚಿ ಮಲಗಿದೆ.


ಬೆಂಕಿಯಲ್ಲಿ ಸ್ನಾನಮಾಡಿ
ಮಂಜುಗಡ್ಡೆಯ ಬಾಚಿ
ಮೈತುಂಬ ಹೊದ್ದು ಮಲಗಿದೆ.


ವಾಹನಗಳು ಛಿದ್ರಗೊಳಿಸಲಿಲ್ಲ
ಆಲದ ಕೊಂಬೆ ಮುರಿಯಲಿಲ್ಲ
ಬೆಂಕಿ ಸುಡಲಿಲ್ಲ
ಮಂಜುಗಡ್ಡೆ ಮೈಕೊರೆಯಲಿಲ್ಲ
ಯಾವ ತೊಂದರೆಯೂ ಇಲ್ಲದೆ
ಪ್ರತೀ ಬಾರಿ ಹಿಂತಿರುಗಿದೆ.


ಕೋಣೆಯ ಉದ್ದ ಕನ್ನಡಿಯ ಮುಂದೆ ನಿಂತು
ಅಡಿಯಿಂದ ಮುಡಿಯವರೆಗೆ ದಿಟ್ಟಿಸಿದೆ.


ಇಲ್ಲ
ನೀನಿನ್ನೂ ಪೂರ್ತಿ ಹೋಗಲಿಲ್ಲ
ಒಳಗೂ
ಹೊರಗೂ!
**


ಮಲಯಾಳಂ ಮೂಲ- ಸುಧೀಶ್ ಕೊಟ್ಟೆಂಬರಮ್

ಕನ್ನಡಕ್ಕೆ - ಕಾಜೂರು ಸತೀಶ್

Wednesday, May 21, 2014

ರಿಹಾನ

ಮರಳಿ ಬರುವೆನು ನಾನು
ಹಾಡು ಹಾಡುತ್ತಾ
ನಗರಗಳ ವಶೀಕರಿಸುವ
ಹುಡುಗಿಯ ಜೊತೆಗೆ .


ಡಿಸ್ಕೊ ಪಾರ್ಟಿಯಿಂದಿಳಿದು ಬರುವ
ಅವಳನ್ನು ನನ್ನವಳನ್ನಾಗಿಸುವಾಗ
ಬಣ್ಣದಲ್ಲಿ ಮಿಂದೆದ್ದ ಅವಳ ತಲೆಗೂದಲಿನಂತೆ
ಅವಳಲ್ಲಿ ಬೇರೂರಿ ಸ್ವತಂತ್ರನಾಗುವ ಬಯಕೆ .


ಅವಳ ಕೂದಲುಗಳು
ಪೋಲಿ ಗಾಳಿಯೊಂದಿಗೆಲ್ಲ
ನರ್ತಿಸಲು  ತೊಡಗುತ್ತವೆ.


ಬಿರುಬಿಸಿಲಿನ ಚುಂಬನಕ್ಕೆ
ಸುಟ್ಟ ಅವಳ ತುಟಿಗಳ ಕೆಂಪಾಗಿಸಲು
ವಸಂತದ ಋತುಸ್ರಾವದ ರಕ್ತವನ್ನು ತೆಗೆದಿರಿಸಬೇಕು.


ಒಂದೇ ಒಂದು ಕೋಣೆಯಿರುವ
ತೆಂಗಿನ ಗರಿಯಲ್ಲಿ ಹೆಣೆದ ನನ್ನ ಗುಡಿಸಲಿಗೆ
ನಗರಗಳನ್ನೇ ವಶೀಕರಿಸುವ
ಹುಡುಗಿಯೊಂದಿಗೆ ಮರಳಿದಾಗ-
ಸೆಗಣಿ ಸಾರಿಸಿದ ಮೆಟ್ಟಿಲಿನಲ್ಲಿ ಕುಳಿತು
ಕಾಯಿಸಿ ಆರಿಸಿದ ತೆಂಗಿನೆಣ್ಣೆಯಲ್ಲಿ
ಅವಳ ಕೂದಲುಗಳನ್ನು ಕಪ್ಪಾಗಿಸುತ್ತೇನೆ.
ಮಧ್ಯಾಹ್ನ ಒಂದೊಂದೇ ಕೂದಲುಗಳ ಎಣಿಸಿ, ಬಾಚುವಾಗ
ನಡುವೆ ನುಸುಳುವ ಹೇನುಗಳ ಕೊಂದು
ಅವಳು ಮತ್ಯಾರ ಸ್ವತ್ತೂ ಅಲ್ಲವೆಂಬುದನ್ನು
ಸಾಬೀತುಪಡಿಸುತ್ತೇನೆ.


ವಿರಸದಿಂದಿರುವಾಗ,
ಅವಳ ನರೆತ ಕೂದಲುಗಳ ಕಿತ್ತೆಸೆಯುತ್ತೇನೆ-
ಅವಳಿಗರಿಯದ ಹಾಗೆ.
ಅವಳಿಗದು ತಿಳಿದರೆ
ಮತ್ತೆ ಬಣ್ಣ ಹಚ್ಚುತ್ತಾಳೆ.


ಆದರೆ ,
ನಗರಗಳನ್ನು ವಶೀಕರಿಸಲು ಮಾತ್ರ
ಮತ್ತೆ ಪ್ರಯತ್ನಿಸಲಾರಳು!

**

ಮಲಯಾಳಂ ಮೂಲ- ಸುಜೀಶ್ ಎನ್. ಎಂ.

ಕನ್ನಡಕ್ಕೆ - ಕಾಜೂರು ಸತೀಶ್ 

Monday, May 19, 2014

ನನ್ನ ತಂಗಿಯ ಬೈಬಲ್

ನನ್ನ ತಂಗಿಯ ಬೈಬಲ್ನಲ್ಲಿರುವುದು:
ಮಾಸಿಹೋದ ರೇಷನ್ ಕಾರ್ಡ್,
ಸಾಲಕೊಳ್ಳುವ ಅರ್ಜಿ ನಮೂನೆ,
ಈಗಾಗಲೇ ಪಡೆದುಕೊಂಡ ಬಡ್ಡಿ ಸಾಲದ ಕಾರ್ಡ್,
ಚರ್ಚು-ದೇವಸ್ಥಾನಗಳ ಪೂಜಾ ಆಮಂತ್ರಣ ಪತ್ರ,
ಅಣ್ಣನ ಮಗುವಿನ ಫೊಟೊ,
ಮಗುವಿಗೆ ಟೋಪಿ ಹೊಲಿಯುವ ಕುರಿತ ಮಾಹಿತಿಯಿರುವ ಹಾಳೆ,
ನೂರು ರೂಪಾಯಿಯ ಒಂದು ನೋಟು,
ಒಂದು ಎಸ್ಸೆಸ್ಸೆಲ್ಸಿ ಪುಸ್ತಕ .




ಅವಳ ಬೈಬಲ್ನಲ್ಲಿಲ್ಲದ್ದು:
ಮುನ್ನುಡಿ ,
ಹಳೆಯ ಮತ್ತು ಹೊಸ ಒಡಂಬಡಿಕೆಗಳು,
ಭೂಪಟಗಳು,
ಕೆಂಪು ರಕ್ಷಾಪುಟ.

**
ಮಲಯಾಳಂ ಮೂಲ- ಎಸ್.ಜೋಸೆಫ್

ಕನ್ನಡಕ್ಕೆ - ಕಾಜೂರು ಸತೀಶ್



Saturday, May 17, 2014

ಮಚ್ಚೆ

ಆ ಹುಡುಗಿಯ ಬಲಕೆನ್ನೆಯಲ್ಲೊಂದು ಮಚ್ಚೆಯಿತ್ತು.
ಬೆಟ್ಟದಾಚೆ ಗೇರುಮರಗಳ ನಡುವೆ ಅವಳ ಮನೆ.
ನನ್ನ ಮನೆಯ ಸಮೀಪದ ಓಣಿಯಲ್ಲಿ
ಅವಳು ನಡೆದುಹೋಗುವಾಗಲೆಲ್ಲ
ನೋಟದಲ್ಲೇ ಅವಳ ಮಚ್ಚೆಯನ್ನು ಅಳಿಸಿಹಾಕುತ್ತಿದ್ದೆ.


ಅವಳು ತಲೆಬಾಗಿಸಿ ನಡೆದುಹೋಗುತ್ತಿದ್ದಳು.


'ಅವಳೊಬ್ಬಳು ಮನೆಗೆಲಸದವನ ಮಗಳಲ್ಲವೇ?
ಗೆಳೆಯರೇ ಇಲ್ಲ ಅವಳಿಗೆ'-ಅಮ್ಮ ಹೇಳಿದಳು.
ಆಮೇಲೆ ಮರಗೆಲಸದವನೊಬ್ಬ ಅವಳನ್ನು ಮದುವೆಯಾದ.
ಅವಳಿಗೆ ಮಕ್ಕಳೂ ಆಗಿ ತುಂಬು ಸಂಸಾರ.


ಈಗ,ಅಲ್ಲಿ ಒಂದು ಗೇರುಮರವೂ ಕಾಣಸಿಗುವುದಿಲ್ಲ.


ನನ್ನ ಕವಿತೆಗೆ ಏನೋ ಕೊರತೆಯಿದೆ-
ಯಾರೋ ಹೇಳಿದರು.


ನಾನು ಕೇಳಿದೆ-
'ಒಂದು ದೊಡ್ಡ ಮಚ್ಚೆಯ ಕೊರತೆಯಲ್ಲವೇ?'
**



ಮಲಯಾಳಂ ಮೂಲ - ಎಸ್. ಜೋಸೆಫ್



ಕನ್ನಡಕ್ಕೆ -ಕಾಜೂರು ಸತೀಶ್

Friday, May 16, 2014

ಸಹಮತ ಹಾಸನ : ಹಾವೇರಿ ಮೇ ಸಾಹಿತ್ಯ ಮೇಳ

ಸಹಮತ ಹಾಸನ : ಹಾವೇರಿ ಮೇ ಸಾಹಿತ್ಯ ಮೇಳ: ಹಾವೇರಿ ಮೇ ಸಾಹಿತ್ಯ ಮೇಳ ಮತ್ತು ಅದರಲ್ಲಿ ಭಾಗವಹಿಸಿದ ವಿದ್ವಾಂಸರ ಹಾಗೂ  ವೈಚಾರಿಕರ ವಿಭಿನ್ನ ಭಾವ ನೋಟಗಳು... ಹಾವೇರಿಯಲ್ಲಿ ಮೇ ೧೧ ಮತ್ತು ೧೨ರಂದು  ನ...

Friday, May 2, 2014

ಒಂದು ಅನುವಾದಿತ ಕವಿತೆ

കര്‍ണ്ണാടകയില്‍ നിന്ന് യുവ എഴുത്തുകാരന്‍ ശ്രീ കാജൂരു സതീഷ്, കവിതകളോടുള്ള മമത കൊണ്ടാവാം, വീണ്ടും എന്റെ ഒരു കവിത കന്നഡയിലേക്ക് പരിഭാഷപ്പെടുത്തി അയച്ചുതന്നിരിക്കുന്നു. 'കാത്തുശിക്ഷിക്കണേ' എന്ന എന്റെ രണ്ടാമത്തെ സമാഹാരത്തിലെ 'ചിക് പുക് ചിക് പുക് റെയിലേ' എന്ന കവിതയാണ് കാജൂരു എനിക്കറിയാത്ത കന്നഡയുടെ അജ്ഞാതസൗന്ദര്യത്തിലേക്ക് മൊഴിമാറ്റിയിരിക്കുന്നത്. നേരത്തേ മാതൃഭൂമി ആഴ്ച്ചപ്പതിപ്പില്‍ വന്ന എന്റെ മല്ലു ഗേള്‍ ഹോട്ട് മൊബൈല്‍ കോള്‍ കന്നഡയിലേക്ക് പരിഭാഷപ്പെടുത്താനുള്ള സ്‌നേഹം കാജൂരു കാണിച്ചിരുന്നു. ഇപ്പോള്‍ ഈ കവിതയും. കന്നഡ ലിപികളിലും കന്നഡ തന്നെ ഇംഗ്ലീഷില്‍ വായിക്കാവുന്ന വിധത്തിലും കജൂരു അയച്ചുതന്നത് കന്നഡ അറിയാത്ത എനിക്കും എന്റെ സുഹൃത്തുക്കള്‍ക്കും വേണ്ടി, വെറുതേ ഒരു ഭംഗിക്ക് ഇവിടെ അണിനിരത്തുന്നു. മറ്റൊരു ഭാഷയുടെ ചിത്രലിപികള്‍ ഇടയ്ക്ക് കാണുന്നതും കൂടിയാണല്ലോ ഭാഷാസൗമനസ്യം. ഒപ്പം തൊട്ടുതാഴെ, ഈ കവിതയുടെ മലയാളവും ചേര്‍ക്കുന്നു. ചിക് പുക് ചിക് പുക് റെയിലേ…..

*ಚುಕ್ಕುಪುಕ್ಕು ಚುಕ್ಕುಪುಕ್ಕು ರೈಲುಬಂಡಿ..*
---------------------------

ರಾತ್ರಿಯಿಡೀ
ರೈಲಿನಲ್ಲಿ
ನಿದ್ದೆಗೆಟ್ಟು ಹಾಡುವ
ಈ ಪಕ್ಷಿ ಯಾವುದು?

ಅದರ ಬಣ್ಣ ಕಪ್ಪು.
ಮುಂದೆ ಮುಂದೆ ಹೋದಂತೆಲ್ಲ
ಧೂಳು ಹಿಡಿವ ರೆಕ್ಕೆಗಳು.

ಮನೋರೋಗಿಯಂತೆ ಆ ಪಕ್ಷಿ.
ಎಲ್ಲ ಯಾತ್ರೆಗಳಲ್ಲೂ
ಹತ್ತಲಾಗದೆ ಇಳಿಯಲಾಗದೆ
ಎಂದೆಂದೂ ಒಳಗೇ ಸೇರಿಕೊಂಡಿದೆ.

ಅಪರಿಚಿತನ ಕೀರ್ತನೆಗಳಿಗೆ
ವಿಭ್ರಾಂತಿ ಬಾಧಿಸಿದರೆ
ಕೇಳಲು ಎಷ್ಟು ಮಜವಾಗಿರುತ್ತದೆ.
ತಾರಕ-ಮಂದ್ರ-ಸ್ಥಾಯಿಗಳಲ್ಲಿ
ನಿನ್ನ ಹಾಡಿನ ಆಲಾಪನೆಯನ್ನು
ಉಡಾಫೆಯಿಂದ ಗಮನಿಸುತ್ತಲೇ
ಎಷ್ಟೆಷ್ಟೋ ದೂರ ಕ್ರಮಿಸಿದೆವು-
ಮೊಬೈಲುಗಳನ್ನು ಹಿಡಿದುಕೊಂಡು.
ಕಾಫಿ,ಟೀ,ಭಾಷೆಗಳ ಕಲಸು ಮೇಲೋಗರ
ನಿನ್ನ ಸಾಂಕ್ರಾಮಿಕ ಗಾನವನ್ನು
ಅಪಹಾಸ್ಯ ಮಾಡಿದವು.

ರಾತ್ರಿ
ಕರುಣಾಮಯವಾದ ವೇಗದೋಟದಲ್ಲಿ
ಅವರವರ ಬೋಗಿಗಳಲ್ಲಿ
ಸರಪಳಿ ಎಳೆಯುವುದನ್ನೇ ಕಾಯುತ್ತಾ
ನಿದ್ದೆಗಾಗಿ ಕಾಯುತ್ತಾ ಮಲಗಿರುವಾಗ
ಇದ್ದಕ್ಕಿದ್ದಂತೆ ನಿನ್ನ ನಿದ್ರಾಲಾಪಗಳೆಲ್ಲ
ಜೋಗುಳವಾಗುವುದೂ
ಹೆರಳಿಗೆ ಮುಡಿದ ಹೂಮಾಲೆಯ ಕಟ್ಟು ಬಿಚ್ಚುವುದೂ
ಹೂವಿನ ಹಾಸಿಗೆ ಬಿರಿಯುವುದನ್ನೆಲ್ಲ ನೆನೆದು
ನಾವು ರಸಿಕರಾದೆವು.

ರೈಲಿನಲ್ಲಿ
ರಾತ್ರಿಯಿಡೀ ನಿದ್ದೆಗೆಟ್ಟು ಹಾಡುವ ಆ ಪಕ್ಷಿ
ಹಗಲುಗಳಲ್ಲಿ ನಾವು ಪಾಲಿಸದೇ ಬಿಟ್ಟ
ಮಾತುಗಳಾಗಿರಬಹುದು.
ಬೈದು,ನಿಂದಿಸಿ
ನಾವು ಅವಮಾನಗೊಳಿಸಿದ
ಭಾಷೆಯಾಗಿರಬಹುದು.
ತೊಲಗಾಚೆ ಎಂದು ಹೊರಗಟ್ಟಿದ
ನಲ್ವತ್ತೊಂಬತ್ತು ಅಕ್ಷರಗಳಾಗಿರಬಹುದು.

*
ಮಲಯಾಳಂ ಮೂಲ- ಎಂ. ಎಸ್. ಬನೇಶ್

ಕನ್ನಡಕ್ಕೆ- ಕಾಜೂರು ಸತೀಶ್.

കവിത
എംഎസ് ബനേഷ്

ചിക് പുക് ചിക് പുക് റെയിലേ

തീവണ്ടിയില്‍
രാത്രി മുഴുവന്‍
ഉറക്കമിളച്ചിരുന്നു പാടുന്ന
ആ പക്ഷി ആരാണ്?

അതിന്റെ നിറം കറുപ്പാണ്.
യാത്ര പോലെ പൊടിപുരണ്ടത്
അതിന്റെ ചിറകുകള്‍.

മനോരോഗിയെപ്പോലെയാകാം
ആ പക്ഷി.
എല്ലാ യാത്രകളിലും
ഇറങ്ങാനോ കയറാനോ ഇല്ലാതെ
എപ്പോഴും അകമേതന്നെയായി
അതുണ്ട്.

ആരാന്റെ കീര്‍ത്തനങ്ങള്‍ക്ക്
ഭ്രാന്തുപിടിച്ചാല്‍
കേട്ടിരിക്കാന്‍ എന്തുരസം
എന്നതുപോലെ
ഉച്ചനീചസ്ഥായികളിലെ
നിന്റെ ഗാനാലാപനത്തെ
അശ്രദ്ധയോടെ ശ്രദ്ധിച്ച്
ഞങ്ങള്‍ മൊബൈലുകള്‍ കൊണ്ട്
ദൂരങ്ങള്‍ താണ്ടി.
ചായ, കാപ്പി, ഭാഷാധിനിവേശങ്ങള്‍
നിന്റെ സാംക്രമികഗീതത്തെ
പുച്ഛിച്ചുതള്ളി. രാത്രി,
സുരതസ്ഥായിയായ
വേഗച്ചലനത്തില്‍
അവനവന്റെ ഉപഗ്രഹങ്ങളില്‍
ചങ്ങല വലിയുന്നതും കാത്ത്
ഉറക്കം കൊതിച്ചുകിടക്കേ,
പൊടുന്നനെ,
നിന്റെ ഉരുക്കീണം താരാട്ടായി മാറുന്നതും
പുഷ്പമെത്ത വിരിയുന്നതും
ഞങ്ങള്‍ രസിച്ചറിഞ്ഞു.

തീവണ്ടിയില്‍
രാത്രി മുഴുവന്‍
ഉറക്കമുണര്‍ന്നിരുന്നു പാടുന്ന
ആ പക്ഷി,
പകലുകളില്‍
നാം പാലിക്കാതെ വിട്ട വാക്കുകളാവാം.
ശകാരിച്ചും ഭര്‍ത്സിച്ചും
നാം മാനം കെടുത്തിയ ഭാഷയാവാം.
കടന്നുപോ പുറത്തെന്ന്
നാം ഇറക്കിവിട്ട
അമ്പത്തൊന്നക്ഷരങ്ങളാവാം.
*


Thursday, May 1, 2014

ಸಾವಿರ ವರ್ಷ ಕಳೆದು

ಒಲೆಯಲ್ಲಿ ಸೌದೆ ಎಸೆಯುತ್ತೇನೆ
ರಾತ್ರಿಯ ಬೆಂಕಿಕಿಡಿಗಳನ್ನು ಸ್ವಾಗತಿಸುತ್ತೇನೆ
ಬೆಂಕಿಯ ಕಿಡಿಗಳು ಮೌನದಿಂದಾಚೆ
ಸೂಪುಮಾಡುವ ಮಹಿಳೆಯೊಬ್ಬಳ
ಕಣ್ರೆಪ್ಪೆಗಳಿಗೆ ತಲುಪುತ್ತವೆ.
ಸಾವಿರ ಸಾವಿರ ವರ್ಷಗಳಾದವು-
ಉಮ್ಮ ಇದನ್ನೇ ಪುನರಾವರ್ತಿಸುತ್ತಿದ್ದಾಳೆ.
ಅವಳು ಬೆಂಕಿಗೆಸೆದುಹೋದ
ನಮ್ಮ ಉಪ್ಪುಪ್ಪರನ್ನು ಹೊಗಳುತ್ತಾಳೆ.
ಅವರನ್ನು- ಅವಳ ಒಲೆಯ
ಸುಗಂಧದ ಹೊಗೆಯಾಗಲು ಆಹ್ವಾನಿಸುತ್ತಾಳೆ.
ಅವರೊಂದಿಗೆ ಮಾತನಾಡುತ್ತಾಳೆ,ನಗುತ್ತಾಳೆ.
ನಮಗವರು ಕಾಣಿಸುತ್ತಿದ್ದಾರೊ ಇಲ್ಲವೊ ತಿಳಿಯಲು
ನಮ್ಮತ್ತ ತಿರುಗಿ ನೋಡುತ್ತಾಳೆ
'ಊಂ... ಅವರು ನಿಜಕ್ಕೂ ಇದ್ದಾರೆ'!

ಅವರ ಸುಟ್ಟುಹೋದ ನಾಲಗೆಗಳು
ರಾತ್ರಿಯೂಟದೆಡೆಗೆ ತೆರಳಲಿ
ನಾವು ನಮ್ಮ ಹುಚ್ಚುನಗುವಿನ
ತಾಳದೊಂದಿಗೆ ನೃತ್ಯ ಮಾಡುವಂತಾಗಲಿ.


* *

ಮೂಲ.: ನಜೆತ್ ಅದೌನಿ[ಟ್ಯುನೀಷಿಯಾ]

ಮಲಯಾಳಂ ಅನುವಾದ: ಕೆ. ಸಚ್ಚಿದಾನಂದನ್

ಕನ್ನಡಕ್ಕೆ: ಕಾಜೂರು ಸತೀಶ್

ನನ್ನ ನೆರಳಿನದ್ದೂ, ಭೂಮಿಯದ್ದೂ

ಆಕಾಶವೇ ಬಾ ನನ್ನ ಬಳಿ
ಬಂದು ವಿಶ್ರಮಿಸು
ಕಿರಿದಾದ ನನ್ನ ಸ್ಮಶಾನದಲ್ಲಿ
ಅಗಲವಾದ ನನ್ನ ಹುಬ್ಬುಗಳಲ್ಲಿ
ಕೈ , ಮುಖಗಳಿಲ್ಲದಂತಾಗು.
ನಿನ್ನ ಗಂಟಲಲ್ಲಿ ಕೀರಲುಗಳಿಲ್ಲದೆ
ಒಂದೂ ನಾಡಿಮಿಡಿತವಿಲ್ಲದೆ
ಬಾ ಕೆಳಗೆ
ಎರಡಾಗಿ ನಿನ್ನ ಆಕೃತಿಯ ಬರೆ.
ನನ್ನ ನೆರಳಿನದ್ದೂ,
ಭೂಮಿಯದ್ದೂ.



ಸಿರಿಯಾ ಮೂಲ: ಅಡೋನಿಸ್

ಮಲಯಾಳಂ ಭಾಷಾಂತರ: ಪಿ.ಕೆ. ಪಾರಕ್ಕಡವು

ಕನ್ನಡಕ್ಕೆ: ಕಾಜೂರು ಸತೀಶ್

RED INK

When we were in School,
we were writing questions in red ink,
answers in blue or black.

Now,
to attract the readers,
to pierce into their eyes,
answers should be in red ink;
Red!

Our questions must also be in red.
No matter by which they answer;
blue or black or green...
Our Red Eyes interpret it.

**
-kajooru sathish 

MOTHER

My mother is a desert
A Cactus flower upon the sun's spit.


She drinks the sun
To pervade the humidity
Over my glowing heap of sand.

Her Eye to collect the Rain
When cries-green tears
Upon the chest of the Globe.

She ties the night to her eyes
Moon to taste her sweat
And to enjoy the dance of her nerves.

She-a musician in her heart
A vacuum lives to guard around it.

My mother-a desert
To blossom every grain of sand.
**
-Kajooru sathish.

YOU CAN LIVE WITH ME ,NOW

I break my ribs
And make a cage.
You can fly around it.

I rub my palm
And make a polished canvas.
You can draw your own lines of liberty,there.

I filter my reddishness from the eye
And create a red flower.
You can keep it on your tress of hair.

I squeeze my outer skin
And keep it under the sun,to dry,to lose the lust.
You can embrace it with all your gentle love.

I shave my thorny moustache and beard
And make a plough land.
You can work without any wounds,there.

I will become a girl
You can live with me,now!
**

-Kajooru sathish.

Monday, April 28, 2014

ಪರೀಕ್ಷೆ

-1-


ಹಸಿದ ಹುಡುಗ
ಪರೀಕ್ಷೆಯಲ್ಲಿ
ಅರಮನೆಯ ಸುಖ ಜೀವನವನ್ನು ವಿವರಿಸುತ್ತಿದ್ದಾನೆ.


ಅವನ ದುಃಖ
ನಡುನಡುವೆ ನುಸುಳಿ
ಉತ್ತರ ನಿರಾಭರಣವಾಗುತ್ತಿದೆ.


ಹೊಟ್ಟೆ ತುಂಬಿದ ಹುಡುಗರು
ಎಷ್ಟು ಚೆನ್ನಾಗಿ ಉತ್ತರಿಸುತ್ತಾರೆ.


ಆಮೇಲೆ -
ಗೋಲ್ಡ್ ಮೆಡಲುಗಳು, ಪಾರ್ಟಿಗಳು
ಇತ್ಯಾದಿ ಇತ್ಯಾದಿ .


-2-


ಹಸಿದ ಹುಡುಗ
ಪರೀಕ್ಷೆಯಲ್ಲಿ
ಗುಡಿಸಲಿನ ಹಸಿವನ್ನು ವಿವರಿಸುತ್ತಿದ್ದಾನೆ.


ಅವನ ದುಃಖ
ನಡುನಡುವೆ ನುಸುಳಿ
ಉತ್ತರ ದಿಕ್ಕು ತಪ್ಪುತ್ತಿದೆ.


ಹೊಟ್ಟೆ ತುಂಬಿದ ಹುಡುಗರು
ಎಷ್ಟು ಚೆನ್ನಾಗಿ ಉತ್ತರಿಸುತ್ತಾರೆ!


ಆಮೇಲೆ-
ಗೋಲ್ಡ್ ಮೆಡಲುಗಳು, ಪಾರ್ಟಿಗಳು
ಇತ್ಯಾದಿ,ಇತ್ಯಾದಿ.



**

-ಕಾಜೂರು ಸತೀಶ್

Tuesday, April 22, 2014

ಕಸದ ತೊಟ್ಟಿಯ ಕಾಗದದ ಲೋಟಗಳು

ಕಸದ ತೊಟ್ಟಿಯ ಕಾಗದದ ಲೋಟಗಳಲ್ಲಿ
ಚಹಾ ಹೀರಿದವರ ತುಟಿಗಳನ್ನು
ಚಪ್ಪರಿಸುತ್ತಲೇ ಇರಲು
ಕೆಲವು ಹನಿಗಳು ಉಳಿದಿರುತ್ತವೆ.





ಆ ಹನಿಗಳ ಮೇಲೆ
ಸೂರ್ಯ
ಗಾಳಿ
ಇರುವೆಗಳು
ಈಗಾಗಲೇ ಯುದ್ಧ ಸಾರಿವೆ.

**

-ಕಾಜೂರು ಸತೀಶ್

Sunday, April 13, 2014

ಕಾಡುಗಳ ಹಾಡು



ಆದಿವಾಸಿಗಳು ಕಾಡುಗಳ ಹಾಡು ಹಾಡುತ್ತಾರೆ
ಅವರ ಹಾಡುಗಳಿಗೇ ನಿರ್ಬಂಧ ವಿಧಿಸಿದರೆ
ದಟ್ಟ ಕಾಡುಗಳ ಹಾಡು ಹಾಡುವವರಾರು?

ಅವರು ಮರಗಳನ್ನು ಪ್ರೇಯಸಿಯರಂತೆ ಪ್ರೀತಿಸುತ್ತಾರೆ
ಅವರ ಪ್ರೀತಿಗೇ ನಿರ್ಬಂಧ ವಿಧಿಸಿದರೆ
ಮರಗಳಿಗೆ ಅಮರ ಪ್ರೀತಿಯನ್ನುಣಿಸುವವರಾರು?

ಅವರು ಪ್ರಾಣಿಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳುತ್ತಾರೆ
ಆ ಒಡಂಬಡಿಕೆಯಲ್ಲಿ ಸಹಿ ಮಾಡಲು ಇನ್ಯಾರಿಗೆ ಸಾಧ್ಯವಿದೆ?

ಹುಲ್ಲಿನಲ್ಲಿ ಮನೆಯ ಮಹಡಿಯ ಕಟ್ಟುವ ವಿದ್ಯೆ
ಹುಲ್ಲಿನಲ್ಲೇ ಬರೆದಿರುತ್ತದೆ
ಅದ ಓದಿಕೊಳ್ಳಬಲ್ಲವರು ಮತ್ಯಾರಿದ್ದಾರೆ ಇಲ್ಲಿ?

ಕಾಡ ತೊರೆಗಳು ಆಳ-ಅಗಲಗಳನ್ನು ಹುಡುಕ್ಹುಡುಕಿ ಹೊರಡುತ್ತವೆ
ಜೇನ್ನೊಣಗಳು ಮರದಿಂದ ಮರಕ್ಕೆ ಹಾಡುತ್ತಾ ಹಾರಾಡುತ್ತವೆ
ಕಾರ್ಮೋಡಗಳು ಬೆಟ್ಟದಂಚುಗಳ ಸುತ್ತೆಲ್ಲಾ ಹಾಯಾಗಿ ಸುತ್ತಾಡುತ್ತವೆ.

ಆದಿವಾಸಿಗಳು ಕಾಡುಗಳ ಹಾಡು ಹಾಡುತ್ತಾರೆ
ಅವರ ಹಾಡುಗಳಿಗೇ ನಿರ್ಬಂಧ ವಿಧಿಸಿದರೆ
ದಟ್ಟ ಕಾಡುಗಳ ಹಾಡು ಹಾಡುವವರಾರು?
***

ಮಲಯಾಳಂ ಮೂಲ: ಎಸ್. ಜೋಸೆಫ್

ಕನ್ನಡಕ್ಕೆ:ಕಾಜೂರು ಸತೀಶ್



Sunday, March 23, 2014

ಸ್ವಾತಂತ್ರ್ಯ

ಬಾಗಿಲು ಮುಚ್ಚುವಾಗಿನ ಸದ್ದು
ನಮ್ಮ ಸ್ವಾತಂತ್ರ್ಯವನ್ನು ಅಣಕಿಸುತ್ತದೆ.


*


ಗಡಿಯಲ್ಲಿ ಕಾವಲು ಕಾಯುತ್ತಿದ್ದಾರೆ
ಆಚೆ ಈಚೆಗೂ ದುಂಬಿಯೊಂದು
ಹಾಯಾಗಿ ಹಾರಾಡಿಕೊಂಡಿದೆ.


*


ಚರಿತ್ರೆಯ ಕಾಲಿಗೆ ಬಿಗಿದ
ಸರಪಳಿಯ ಬೀಗದ ಕೀ ಕಾಣೆಯಾಗಿದೆ
ಅದೀಗ ವಂಶವಾಹಿನಿಗೆ ಹಬ್ಬುತ್ತಿದೆ.


*


ಕೊಲೆಯಾದವನು ಮಣ್ಣಾದ ಮಣ್ಣಲ್ಲಿ
ಹುಟ್ಟಿದ ಹೂಗಳು ಕೊಲೆಯಾಗುವುದಿಲ್ಲ.


*


ಸುಡುವ ಬೀದಿಗಳಲ್ಲಿ
ಪಾದಗಳ ಊರಿ ನಡೆದುಹೋಗುತ್ತೇನೆ
ಊರಿದ ಒಂದು ಪಾದದಡಿಯ ನೆಲ ಯಾರದು?
ಗಾಳಿಯಲ್ಲಿರುವ ಇನ್ನೊಂದು ಪಾದದ ಬಗ್ಗೆ ನನಗೆ ಭಯವಿಲ್ಲ
ಅಲ್ಲಿ ಯಾರೂ ಬೇಲಿ ಹಾಕುವುದನ್ನು ಕಲಿತಿಲ್ಲ!


*


-ಕಾಜೂರು ಸತೀಶ್



ಚಿತ್ರ: ದಿನೇಶ್ ಕುಕ್ಕುಜಡ್ಕ
[ನನ್ನ ಕವಿತೆಯೊಂದಕ್ಕೆ ಬರೆದ ಚಿತ್ರ]

Saturday, March 22, 2014

'ಹನಿ'ಗಳು

ಹೂಳಲು,ಸುಡಲೂ ಕೂಡ
ಸ್ಥಳವಿರಬಾರದು.
ಕೆಲವು ನಾನ್ವೆಜ್ ಪ್ರಾಣಿಗಳ
ಹೊಟ್ಟೆಯಲ್ಲಾದರೂ
ಬದುಕಿಕೊಳ್ಳಬಹುದು!

*

ಜೀವ ಚಡಪಡಿಸುವ ಹೊತ್ತಲ್ಲಿ
ವೈದ್ಯನ ಬಳಿ ಹೋದೆ.
ಹರಿದ ಜೇಬು ತಡಕಾಡಿದ.


ಹೊರಬರುವ ಹೊತ್ತಲ್ಲಿ
ಜೇಬಿನ ತುತ್ತ ತುದಿಯ ದಾರಕ್ಕೆ
ಪದ್ಯಗಳು ಜೋತುಬಿದ್ದಿದ್ದವು.

ಅದರ ಬಲದಲ್ಲಿ
ನಾನೀಗಲೂ ಬದುಕಿಕೊಂಡಿದ್ದೇನೆ!

*

-ಕಾಜೂರು ಸತೀಶ್



ಇರಲಿ

ಆ ಬಳ್ಳಿ ಅಲ್ಲೇ ಇರಲಿ
ಅದರ ಕುಣಿಕೆ ಕೊರಳ ಜೋಕಾಲಿ ಯಾಡದಿರಲಿ.


ಆ ಕತ್ತಿ ಹಾಗೇ ಇರಲಿ
ಅದರ ಹರಿತಕ್ಕೆ ಗಾಳಿ ಮಾತ್ರ ಕೊಯ್ದುಕೊಳ್ಳುತಲಿರಲಿ.


ಆ ಬೆ೦ಕಿ ಹಾಗೇ ಇರಲಿ
ಅದ ಕುಡಿಯಲು ನಾಲಗೆ ತೇವವಾಗಿರಲಿ
ಆಮೇಲಾದರೂ ಅದು ಸುಖವಾಗಿರಲಿ.


ಈ ಬೀದಿಗಳಲ್ಲಿ ಮಳೆಯಾಗದಿರಲಿ
ಕಪ್ಪೆಗಳು
ಚಕ್ರಗಳಿ೦ದ
ಬರ್ಬರ ಕೊಲೆಯಾಗದಿರಲಿ.

ಈ ಕಪ್ಪು ಹಾಗೇ ಇರಲಿ
ಕಣ್ಣು ಸಹಿಸದಿದ್ದರೆ ನಿಮಗಿಷ್ಟದ ಬಣ್ಣ ಸುರಿದುಬಿಡಿ
ಚರ್ಮ ಸುಲಿದರೂ ಸರಿ 'ಹೋಳಿ' ಎ೦ದುಕೊಳ್ಳುವೆ.


ಪಾದುಕೆಗಳು ,ಒಳಉಡುಪುಗಳು ಕಳುವಾಗದಿರಲಿ
ರೊಟ್ಟಿಯ ತು೦ಡಲ್ಲಿ ಹಸಿದವರ ಹೆಬ್ಬೆಟ್ಟೊತ್ತಲು ಜಾಗವಿರಲಿ.

**

-ಕಾಜೂರು ಸತೀಶ್

ಗಾಯದ ಹೂಗಳು

ಗಾಯಗಳು ಹಾಡಬೇಕು ಕೆಂಪು ಹೂಗಳಾಗಿ;
ಒಸರುವ ಅಷ್ಟೂ ರಕ್ತ ಹೂವಿಗೆ
ಅಂದ ನೀಡಬೇಕು.



ಮಿದುಳಿಗೊಯ್ಯಬೇಕು ಪರಾಗಗಳ ಅಲೆಅಲೆಯಾಗಿ ಅಲೆಯುವ ಹುಳುಗಳು ಬರಿಯ ಪಾದಗಳಲ್ಲಿ;
ಗರ್ಭಕಟ್ಟಿದ ಮೇಲೆ ಕಳ್ಳುಬಳ್ಳಿಗಳನ್ನು ಬಾಂಬುಗಳಿಂದಲೂ ಸಿಡಿಸಲಸಾಧ್ಯವಾಗಬೇಕು.



ಕರಕಲಾಗಬಾರದು ಹೀರುವ ಯಾವ ದುಂಬಿಗಳೂ ಸುಟ್ಟು;
ಹೀರಿದ್ದು ಮೀರಿದರೆ ಅವೂ ಕೆಂಪುಹೂಗಳಾಗಿ ಹಾರಿಹೋಗಬೇಕು.



ಬಣ್ಣ ಮುಗಿದಿದ್ದರೆ ಓಡಿಬರಬೇಕು ಕಲಾವಿದ- ಕತ್ತಿಯ ಕುಂಚ ಎಸೆದು;
ಗಾಯದ ಹೂಗಳು ಕಣ್ಣೊಳಗೂ ಇಳಿದು ಅವನ ಕಣ್ಣುಗಳೂ ಹೂವಾಗಬೇಕು.



ಬಿಳಿಹೂವಾಗಬೇಕು ಚರಿತ್ರೆಗುಡ್ಡದಲ್ಲಿ -ಹೊರಬರುತ್ತಿದ್ದರೆ ಗಾಯದ ಕೀವು;
ಹುಳುಹತ್ತಿದರೆ ಅವುಗಳ ಹಸಿದ ಹೊಟ್ಟೆಗೆ ಕೀವು ಜೇನಾಗಬೇಕು.



ಎಲ್ಲ ಗಾಯಗಳೂ ಹೂವಾಗಬೇಕು
ನನ್ನ-ನಿಮ್ಮ ಹೃದಯಗಳಲ್ಲಿ.


**

-ಕಾಜೂರು ಸತೀಶ್


ಬಣ್ಣಗಳು ಬೇಕಿಲ್ಲ ನಮಗೆ

ಹಸ್ತದಲ್ಲೊಂದು ಕಿರು ಗಾಯ ಸಾಕು
ನಿನ್ನ ಗೆಲ್ಲಿಸಲಿಕ್ಕೆ ಮುದ್ರೆಯೊತ್ತಲು.
ಗೆದ್ದ ಮೇಲೆ ನಮಗೆ ತುಂಬಿದರೆ ಸಾಕು.

ಆಮೇಲೆ-
ನಮ್ಮ ಮರೆತಾಗಲೆಲ್ಲ
ಹಿಂತಿರುಗಿ ಗೋಡೆಯಲ್ಲೊಮ್ಮೆ ಕಣ್ಣು ಹಾಯಿಸು.
ಅಥವಾ ನಿನ್ನ ಕಣ್ಗಳನ್ನೇ ಅಲ್ಲಿ ಪ್ರತಿಷ್ಠಾಪಿಸು.
ನಮ್ಮ ಹಸ್ತದ ಒಡಕುಗೆರೆಗಳು
ಅದಕ್ಕೆ ರೆಪ್ಪೆಗಳಾಗಿ ಕಾವಲಿರುತ್ತವೆ.

ಹೆಚ್ಚೆಂದರೆ
ಬಣ್ಣಗಳು ಬೇಕಿಲ್ಲ ನಮಗೆ
ರೆಟ್ಟೆ ಮೆದುವಾಗುವವರೆಗೆ!

***

-ಕಾಜೂರು ಸತೀಶ್