ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Thursday, April 27, 2023

ಮೌನದೊಡಲಿನ ಗಜ಼ಲ್

ಅಂಬವ್ವ ಪ್ರತಾಪ್ ಸಿಂಗ್ ಅವರು ಮೌನದೊಡಲ ಮಾತು(ಗಜ಼ಲ್) ಸಂಕಲನವನ್ನು ತಿಂಗಳ ಹಿಂದೆಯೇ ಕಳಿಸಿ ಅದು ತಲುಪಿರುವ/ ಓದಿರುವ ಸಂಗತಿಯನ್ನೇನೂ ವಿಚಾರಿಸದೆ ಕಾವ್ಯಧ್ಯಾನದಲ್ಲಿರುವಂತೆ ಮೌನವಾಗಿದ್ದಾರೆ. (ನನಗೆ ಅವರ ಪರಿಚಯವಿಲ್ಲ, ಬಹುಶಃ ಅವರಿಗೂ!)

ಅಂಬವ್ವ ಅವರು ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನವರು, ಶಿಕ್ಷಕಿ. ಶಿಕ್ಷಕರೊಬ್ಬರು ಸೃಜನಶೀಲರಾಗಿದ್ದರೆ ಅವರಿಂದ ಹೊಮ್ಮುವ ಪ್ರಭಾವ/ ಪ್ರೇರಣೆಗಳು ವ್ಯಕ್ತಿ-ಕಾಲದೇಶಗಳನ್ನು ಸ್ಪರ್ಶಿಸಿ ಬೆಳೆಯುತ್ತದೆ. ಅದರಲ್ಲೂ, ಬರೆಯುವ ಪ್ರಕ್ರಿಯೆಯ ಹಿಂದೆ ಓದುವ, ಧ್ಯಾನಿಸುವ ಪ್ರಕ್ರಿಯೆ ಜೊತೆಯಾಗಿರುತ್ತದೆ. ಬೇರೆಯವರ ಮಾತು ಬಿಡಿ, ಮಕ್ಕಳೊಂದಿಗೆ ಒಡನಾಡುವ ಶಿಕ್ಷಕರಿಗೇ ಓದಿನ ಬಲವಿಲ್ಲದೆ ಇರುವ ಕಾಲದಲ್ಲಿರುವಾಗ ಅಂಬವ್ವ ಟೀಚರ್ ಅವರ ನಡೆ ಇಷ್ಟವಾಗುತ್ತದೆ.


ಅಂಬವ್ವ ಪ್ರತಾಪ್ ಸಿಂಗ್ ಅವರು ಈಗಾಗಲೇ ನಾಲ್ಕು ಕೃತಿಗಳನ್ನು ರಚಿಸಿದ್ದಾರೆ. ಮೌನದೊಡಲ ಮಾತು ಅವರ ಐದನೆಯ ಕೃತಿ. ಅರುವತ್ತು ಗಜ಼ಲ್ ಗಳ ಗುಚ್ಛ. ಗಜ಼ಲ್ - ಹೆಚ್ಚು ಚರ್ಚೆಗೆ ಒಳಪಡುವ ಮಾದರಿ. ಮೂಲ ಮಾದರಿ(ಪಾರ್ಸಿ, ಉರ್ದು), ಕನ್ನಡದ ಮಾದರಿ ಮತ್ತು ರೂಪಾಂತರದ ಮಾದರಿ- ಇವುಗಳ ನಡುವೆ ಯಾವುದು ಗಜ಼ಲ್ ಯಾವುದು ಅಲ್ಲ ಎನ್ನುವ ಜಿಜ್ಞಾಸೆ ಇದೆ(ಅದೇನೇ ಇದ್ದರೂ ಬರೆದ ಒಂದೆರಡು ಸಾಲುಗಳಲ್ಲೇ ಕಾವ್ಯಶಕ್ತಿಯನ್ನು ಗ್ರಹಿಸಬಹುದು).

ಅಂಬವ್ವ ಅವರು ತೀರಾ ಗಹನವಾದ ತಾತ್ತ್ವಿಕತೆಗೆ ಹೊರಳುವುದಿಲ್ಲ. ಸರಳ, ಸಹಜವಾದ ಮಾತುಗಳು ಅಲ್ಲಿವೆಯಾದರೂ ಯಾವುದಕ್ಕಾಗಿ ಅವರ ಮನಸ್ಸು ತುಡಿಯುತ್ತದೆ ಎನ್ನುವಲ್ಲಿ ಪ್ರಗತಿಪರವಾದ ಧೋರಣೆಗಳಿವೆ. 'ಅಂತರ್ಮುಖಿ' ಎಂಬ ಮಂಗಳಮುಖಿಯರ ಬಗೆಗಿನ ಕಥನಗಳನ್ನು ಪ್ರಕಟಿಸಿರುವಲ್ಲಿಯೇ ಈ ಧೋರಣೆ ವ್ಯಕ್ತವಾಗುತ್ತದೆ.

ಇಲ್ಲಿನ ಬಿಡಿ ಸಾಲುಗಳು ಅವರು ಮತ್ತಷ್ಟೂ ಒಳ್ಳೆಯ ಕಾವ್ಯವನ್ನು ಸೃಷ್ಟಿಸಬಲ್ಲರು ಎನ್ನುವುದಕ್ಕೆ ನಿದರ್ಶನ:

ನಿನ್ನ ಸ್ವಾಗತಕ್ಕಾಗಿ ನದಿಯು ಸಂಗೀತ ನುಡಿಸುತ್ತಿದೆ
ಅದಕ್ಕೆ ನನ್ನ ಹೃದಯದ ತಾಳವು ಮಿಳಿತಗೊಳ್ಳುತ್ತಿದೆ(ಗಜ಼ಲ್ -5)

ನಿನಗಾಗಿ ಗಾಳಿಯೂ ಖುಷಿಯಾಗಿ ಕೊಳಲನೂದುತ್ತಿದೆ
ಅದಕ್ಕೆ ನನ್ನ ಉಸಿರಾಟ ಜುಗಲ್ಬಂದಿಯಾಗುತ್ತಿದೆ(ಗಜ಼ಲ್ -5)

ರೈತನ ಕೊರಳು ನೇಣಿನ ಹಗ್ಗಕ್ಕೆ ಉರುಳುತ್ತಿದ್ದರೆ
ದಲ್ಲಾಳಿಗಳ ಕುತ್ತಿಗೆ ಚಿನ್ನದ ಭಾರಕ್ಕೆ ಮಣಿಯುತ್ತಿದೆ( ಗಜ಼ಲ್-7)

ಕೊನೆಗೊಮ್ಮೆ ನನ್ನ ಶವವನ್ನಾದರೂ ತೋರಿಸಿಬಿಡಿ
ವನಿತಾ ಹೇಗೆ ಕಾಣುವಳೆಂದು ನೋಡುವೆ ನಾನು( ಗಜ಼ಲ್ -14)

ಪ್ರೀತಿಸುವ ಜೋಡಿಯ ನೋಡಿ ಜಗವೇಕೆ ದ್ವೇಷ ಕಾರುತಿಹುದು
ಸಮಾಧಿಯ ಒಳಗೆ ಲೈಲಾ ಮಜುನೂ ಜೋಡಿ ರೋದಿಸುತ್ತಿದೆ(ಗಜ಼ಲ್ -36)

ಬಿಸಿಲು ಬೆಳದಿಂಗಳಾಗಿ ತಂಪು ಸೂಸುತ್ತಿದೆ ನಿನ್ನ ನೆರಳಿನಲ್ಲಿ
ಇರುಳ ಬೇಗೆ ಕಳೆಯುತ್ತಿದೆ ನಿನ್ನನು ಸೇರಿದ ಮೇಲೆ( ಗಜ಼ಲ್ -55)

ಹೀಗೆ ಅಂಬಮ್ಮ ಟೀಚರ್ ಅವರ ದೊಡ್ಡ ಆಶಯಗಳು ಇಷ್ಟವಾಗುತ್ತವೆ. ಅಂತೆಯೇ,ಇವು ಗಜ಼ಲ್ ಕುರಿತ ಹೆಚ್ಚಿನ ಅಧ್ಯಯನವನ್ನೂ, ಕಲಾತ್ಮಕತೆಯನ್ನೂ, ಮಾತಿನ ಮಿತಬಳಕೆಯನ್ನೂ ನಿರೀಕ್ಷಿಸುತ್ತವೆ. ಕೃತಿಯಲ್ಲಿ ಅಕ್ಷರದೋಷ ಇಲ್ಲದಿರುವುದು ತುಂಬಾ ಖುಷಿಯ ಸಂಗತಿ.
*

ಕಾಜೂರು ಸತೀಶ್


Sunday, April 23, 2023

ಬದುಕನ್ನೇ ಬಸಿದು ಬರೆದ ಕಾವ್ಯ



ತಮ್ಮ ಬದುಕನ್ನು ಬಸಿದು , ಅದರ ಹಸಿವಲ್ಲಿ, ಅವಮಾನದಲ್ಲಿ, ಅದು ಎದುರಿಗಿಟ್ಟ ಕತ್ತಲಲ್ಲಿ ಕಾವ್ಯಹೊಸೆದವರು ರಾಮಪ್ಪ ಕೋಟಿಹಾಳ. ಅವರ ಜಿರಾಫೆ ಕತ್ತಿನ ಅವ್ವ ಕೃತಿಗೆ ಈ ಬಾರಿಯ ಚಿ. ಶ್ರೀನಿವಾಸರಾಜು ಕಾವ್ಯ ಪುರಸ್ಕಾರ ಸಂದಿದೆ. ಓದುವವನ ಕರುಳನ್ನೇ ಕೊರೆಯುವ ಹಸಿವಿನ ಭಯಾನಕ ಚಿತ್ರಣ ಹಸಿಹಸಿಯಾಗಿವೆ ಇಲ್ಲಿ:

ಅನ್ನದ ಕನಸಿಗೆ
ಕಣ್ಣು ಕೊಟ್ಟ ಅಪ್ಪ
ಮನೆ ಮುಂದೆ ಜಮಾಯಿಸಿದ
ಜನರ
ತೀರ್ಪಿಗಾಗಿ ಕಾಯುವನು( ಅವ್ವನ ಸೂರ್ಯ)

ಹಸಿದಾಗ ಚಂದ್ರ ರೊಟ್ಟಿಯಾಗಿ
ಅಣಕಿಸುತ್ತಾನೆ
ಚುಕ್ಕಿಗಳು ಅನ್ನದ ಅಗುಳಾಗಿ
ಕೆಣಕುತ್ತವೆ (ಭೂಮಿ ಒಂದು ಕ್ಷಣ ನಿಂತುಬಿಟ್ಟರೆ..)

ಸೂರ್ಯ ಚಂದ್ರರನು ಹುರಿದು
ಸಾರುಮಾಡಿದ ಅವ್ವ
ಉಣ್ಣದೆ ಮಲಗುವಳು
( ಜಿರಾಫೆ ಕತ್ತಿನ ಅವ್ವ)

ಅವ್ವನ ಹರಿದ ಸೆರಗಿಗೆ ಅಂಟಿದ
ಅನ್ನದ ಅಗುಳು ಹಂಚಿತಿಂದ ನೆನಪು.
(ಮಣ್ಣ ಪರಿಮಳ)

ನನ್ನ ಗುಂಡಿಗೆ
ನಾಯಿಯಂತೆ ಒದರುತ್ತದೆ
ತುತ್ತ ನೆನೆದು
ಜೊಲ್ಲು ಸುರಿಸುತ್ತದೆ.
(ಗುಂಡಿಗೆ ನಾದ)


ಹೀಗೆ ಹಸಿವಿನ ಭೀಕರ ಸ್ಥಿತಿಯಲ್ಲಿರುವಾಗ ತಿನ್ನುವ ಆಹಾರವನ್ನೂ ನಿರ್ಧರಿಸುವ ಸಮಾಜ ಎದುರಾಗುತ್ತದೆ. ಇದು ನಿಷಿದ್ಧ ಎಂದು ಕಟ್ಟಪ್ಪಣೆ ವಿಧಿಸಿ ಅವರ ಮೇಲೆ ದಾಳಿಮಾಡುತ್ತದೆ:

ಮಾಂಸದ ಪರಿಮಳ ಕೇರಿಗೆ ಹರಡಿ
ಕತ್ತಲಲ್ಲೂ ಎದ್ದು ಬಂದವು..

ಕಡೆಗೆ 'ಅವರ' ಆಕ್ರಮಣದಿಂದ ತತ್ತರಿಸಿ-

ಅವ್ವ
ಕಣ್ಣಲ್ಲೇ ದೀಪ ಮೂಡಿಸಿದಳು
ಅಪ್ಪನ ಮೈತುಂಬ ಬೆತ್ತದೇಟು
ಬಾರಿನ ಗೆರೆಗುಂಟ ಹೆಪ್ಪುಗಟ್ಟಿದ ನೆತ್ತರು
ಅವ್ವ
ಕಣ್ಣೀರು ಕುಡಿದು ಮಲಗಿದಳು
(ಉಪ್ಪು ನೀರು)

ಸದ್ಯದ ಅಮಾನುಷ ವರ್ತನೆಯನ್ನು ಎದೆಕಲಕುವಂತೆ ಚಿತ್ರಿಸುತ್ತಾರೆ ರಾಮಪ್ಪ ಕೋಟಿಹಾಳ. ಎನ್ ಕೆ ಹನುಮಂತಯ್ಯ ಅವರ ಕಾವ್ಯದ ಮುಂದುವರಿಕೆಯಾಗಿ ಅವರ ಕವಿತೆಗಳು ಓದಿಸಿಕೊಳ್ಳುತ್ತವೆ. ಅವ್ವ,ಅಪ್ಪ, ಅಕ್ಕ, ತಮ್ಮ, ತಂಗಿ, ಪ್ರೇಯಸಿಯ ಸುತ್ತ ಹೆಣೆದ ಸಾಲುಗಳು ವೈಯಕ್ತಿಕತೆಯನ್ನು ಮೀರುವ ಗುಣವುಳ್ಳವುಗಳು. ನೋವಿನ ರಕ್ತದಲ್ಲದ್ದಿ ಹಾಳೆಗೆ ಅಂಟಿಸಿದ ಚಿತ್ರದಂತಿರುವ ಕವಿತೆಗಳು ಇವರವು.


ಅವರ ಕಾವ್ಯಪ್ರತಿಭೆಗೆ ಈ ಕವಿತೆಯೇ ಸಾಕ್ಷಿ

ಆ ಕೈಗಳು

ಆ ಕೈಗಳು
ತೆರೆದ ಅಂಗೈಗಳು

ಕಪ್ಪು ಬಣ್ಣದಲೆ ಅದ್ದಿದಂತವು
ಕಲ್ಲುಮುಳ್ಳುಗಳಲಿ ಸಿಕ್ಕು ಮಾಸಿದ ಗೆರೆಗಳು
ಸಪೂರ ದೇಹದ ಈ ಕೈಗಳು
ಆಕಾಶವನು ಬಳಸಿ ಬಂದಿವೆ
ಹಕ್ಕಿಯ ಒಲವು
ಚುಕ್ಕಿಯ ಬೆರಗು
ಈ ಕಪ್ಪು ಕೈಗಳು ಸೂರ್ಯನ ಸವರಿ ಬಂದಿವೆ
ಚಂದ್ರನಲಿ ಕಲೆಯಾಗಿ ನಿಂತಿವೆ

*
ಕಾಜೂರು ಸತೀಶ್