ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Sunday, April 23, 2023

ಬದುಕನ್ನೇ ಬಸಿದು ಬರೆದ ಕಾವ್ಯ



ತಮ್ಮ ಬದುಕನ್ನು ಬಸಿದು , ಅದರ ಹಸಿವಲ್ಲಿ, ಅವಮಾನದಲ್ಲಿ, ಅದು ಎದುರಿಗಿಟ್ಟ ಕತ್ತಲಲ್ಲಿ ಕಾವ್ಯಹೊಸೆದವರು ರಾಮಪ್ಪ ಕೋಟಿಹಾಳ. ಅವರ ಜಿರಾಫೆ ಕತ್ತಿನ ಅವ್ವ ಕೃತಿಗೆ ಈ ಬಾರಿಯ ಚಿ. ಶ್ರೀನಿವಾಸರಾಜು ಕಾವ್ಯ ಪುರಸ್ಕಾರ ಸಂದಿದೆ. ಓದುವವನ ಕರುಳನ್ನೇ ಕೊರೆಯುವ ಹಸಿವಿನ ಭಯಾನಕ ಚಿತ್ರಣ ಹಸಿಹಸಿಯಾಗಿವೆ ಇಲ್ಲಿ:

ಅನ್ನದ ಕನಸಿಗೆ
ಕಣ್ಣು ಕೊಟ್ಟ ಅಪ್ಪ
ಮನೆ ಮುಂದೆ ಜಮಾಯಿಸಿದ
ಜನರ
ತೀರ್ಪಿಗಾಗಿ ಕಾಯುವನು( ಅವ್ವನ ಸೂರ್ಯ)

ಹಸಿದಾಗ ಚಂದ್ರ ರೊಟ್ಟಿಯಾಗಿ
ಅಣಕಿಸುತ್ತಾನೆ
ಚುಕ್ಕಿಗಳು ಅನ್ನದ ಅಗುಳಾಗಿ
ಕೆಣಕುತ್ತವೆ (ಭೂಮಿ ಒಂದು ಕ್ಷಣ ನಿಂತುಬಿಟ್ಟರೆ..)

ಸೂರ್ಯ ಚಂದ್ರರನು ಹುರಿದು
ಸಾರುಮಾಡಿದ ಅವ್ವ
ಉಣ್ಣದೆ ಮಲಗುವಳು
( ಜಿರಾಫೆ ಕತ್ತಿನ ಅವ್ವ)

ಅವ್ವನ ಹರಿದ ಸೆರಗಿಗೆ ಅಂಟಿದ
ಅನ್ನದ ಅಗುಳು ಹಂಚಿತಿಂದ ನೆನಪು.
(ಮಣ್ಣ ಪರಿಮಳ)

ನನ್ನ ಗುಂಡಿಗೆ
ನಾಯಿಯಂತೆ ಒದರುತ್ತದೆ
ತುತ್ತ ನೆನೆದು
ಜೊಲ್ಲು ಸುರಿಸುತ್ತದೆ.
(ಗುಂಡಿಗೆ ನಾದ)


ಹೀಗೆ ಹಸಿವಿನ ಭೀಕರ ಸ್ಥಿತಿಯಲ್ಲಿರುವಾಗ ತಿನ್ನುವ ಆಹಾರವನ್ನೂ ನಿರ್ಧರಿಸುವ ಸಮಾಜ ಎದುರಾಗುತ್ತದೆ. ಇದು ನಿಷಿದ್ಧ ಎಂದು ಕಟ್ಟಪ್ಪಣೆ ವಿಧಿಸಿ ಅವರ ಮೇಲೆ ದಾಳಿಮಾಡುತ್ತದೆ:

ಮಾಂಸದ ಪರಿಮಳ ಕೇರಿಗೆ ಹರಡಿ
ಕತ್ತಲಲ್ಲೂ ಎದ್ದು ಬಂದವು..

ಕಡೆಗೆ 'ಅವರ' ಆಕ್ರಮಣದಿಂದ ತತ್ತರಿಸಿ-

ಅವ್ವ
ಕಣ್ಣಲ್ಲೇ ದೀಪ ಮೂಡಿಸಿದಳು
ಅಪ್ಪನ ಮೈತುಂಬ ಬೆತ್ತದೇಟು
ಬಾರಿನ ಗೆರೆಗುಂಟ ಹೆಪ್ಪುಗಟ್ಟಿದ ನೆತ್ತರು
ಅವ್ವ
ಕಣ್ಣೀರು ಕುಡಿದು ಮಲಗಿದಳು
(ಉಪ್ಪು ನೀರು)

ಸದ್ಯದ ಅಮಾನುಷ ವರ್ತನೆಯನ್ನು ಎದೆಕಲಕುವಂತೆ ಚಿತ್ರಿಸುತ್ತಾರೆ ರಾಮಪ್ಪ ಕೋಟಿಹಾಳ. ಎನ್ ಕೆ ಹನುಮಂತಯ್ಯ ಅವರ ಕಾವ್ಯದ ಮುಂದುವರಿಕೆಯಾಗಿ ಅವರ ಕವಿತೆಗಳು ಓದಿಸಿಕೊಳ್ಳುತ್ತವೆ. ಅವ್ವ,ಅಪ್ಪ, ಅಕ್ಕ, ತಮ್ಮ, ತಂಗಿ, ಪ್ರೇಯಸಿಯ ಸುತ್ತ ಹೆಣೆದ ಸಾಲುಗಳು ವೈಯಕ್ತಿಕತೆಯನ್ನು ಮೀರುವ ಗುಣವುಳ್ಳವುಗಳು. ನೋವಿನ ರಕ್ತದಲ್ಲದ್ದಿ ಹಾಳೆಗೆ ಅಂಟಿಸಿದ ಚಿತ್ರದಂತಿರುವ ಕವಿತೆಗಳು ಇವರವು.


ಅವರ ಕಾವ್ಯಪ್ರತಿಭೆಗೆ ಈ ಕವಿತೆಯೇ ಸಾಕ್ಷಿ

ಆ ಕೈಗಳು

ಆ ಕೈಗಳು
ತೆರೆದ ಅಂಗೈಗಳು

ಕಪ್ಪು ಬಣ್ಣದಲೆ ಅದ್ದಿದಂತವು
ಕಲ್ಲುಮುಳ್ಳುಗಳಲಿ ಸಿಕ್ಕು ಮಾಸಿದ ಗೆರೆಗಳು
ಸಪೂರ ದೇಹದ ಈ ಕೈಗಳು
ಆಕಾಶವನು ಬಳಸಿ ಬಂದಿವೆ
ಹಕ್ಕಿಯ ಒಲವು
ಚುಕ್ಕಿಯ ಬೆರಗು
ಈ ಕಪ್ಪು ಕೈಗಳು ಸೂರ್ಯನ ಸವರಿ ಬಂದಿವೆ
ಚಂದ್ರನಲಿ ಕಲೆಯಾಗಿ ನಿಂತಿವೆ

*
ಕಾಜೂರು ಸತೀಶ್

No comments:

Post a Comment