ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Tuesday, June 30, 2020

ಕಾಗುಣಿತ, ABCD, ಅಧಿಕಾರಿ, ನಿರುದ್ಯೋಗಿ etc!

KAS ಅಧಿಕಾರಿಯೊಬ್ಬರು ಬರೆದುಕೊಂಡಿದ್ದ ತಮ್ಮ ಆ ದಿನದ ಅನುಭವಗಳನ್ನು ಓದುತ್ತಿದ್ದೆ. ಕನ್ನಡ ಸಾಹಿತ್ಯವನ್ನು ಮುಖ್ಯ ವಿಷಯವನ್ನಾಗಿ ಆಯ್ದುಕೊಂಡಿದ್ದ ಅವರ ಬರೆವಣಿಗೆಯಲ್ಲಿ ಅನೇಕ ಕಾಗುಣಿತದ ತಪ್ಪುಗಳಿದ್ದವು!
*

' ಇದು ನಿಜ್ವಾಗಿಯೂ ಅವರೇ ಬರ್ದಿದ್ದಾ?'
'ಹೌದು'
'ಏಳ್ನೇ ಕ್ಲಾಸ್ fail ಆದವ್ರೂ ಇದ್ಕಿಂತ ತಪ್ಪಿಲ್ದೆ ಬರೀತಾರೆ'
'(smiley )'

ಉನ್ನತ ಹುದ್ದೆಯಲ್ಲಿರುವ ವ್ಯಕ್ತಿಯೊಬ್ಬರ ಸಂದೇಶವನ್ನು ಓದಿ ದೂರದೇಶದ ಒಬ್ಬರು ಹೀಗೆ ಪ್ರತಿಕ್ರಿಯಿಸಿದ್ದರು.
*

"ಕಾಗುಣಿತ ತಿಳಿಯದ ಕನ್ನಡ ಮೇಷ್ಟ್ರು , singular- pluralಗಳಿದ್ದಾಗ ಬಳಸಬೇಕಾದ ಕ್ರಿಯಾಪದಗಳ ಅರಿವೂ ಇಲ್ಲದ ಇಂಗ್ಲೀಷ್ ಮೇಷ್ಟ್ರು ..." ಇಂತಹ ಸಂಗತಿಗಳು ನಮ್ಮಲ್ಲಿ ಸಾಮಾನ್ಯವಾಗಿ ಕಾಣಸಿಗುತ್ತಿರುತ್ತವೆ. ಓದು-ಬರೆಹಗಳನ್ನು ಚೆನ್ನಾಗಿಯೇ ಬಲ್ಲ ಇಂಥವರ ವಿದ್ಯಾರ್ಥಿಗಳು ಮತ್ತು ಕೈಕೆಳಗೆ ದುಡಿಯುವ ನೌಕರರು ತಮ್ಮ ಹಣೆಬರೆಹವನ್ನು ಶಪಿಸಿಕೊಂಡು ಆಯುಷ್ಯವನ್ನು ಮುಗಿಸಿಬಿಡುತ್ತಾರೆ.

ಮತ್ತೆ 'ಅದೇ' ಪರಂಪರೆ ಬೆಳೆದು ನಿಲ್ಲುತ್ತದೆ.
*

ನನಗೆ ಎಷ್ಟೋ ಬಾರಿ ಅನಿಸಿವುದು : 'ಆಡಳಿತಾತ್ಮಕ ವಿಭಾಗದ ಉನ್ನತ ಹುದ್ದೆಯಲ್ಲಿರುವವರಿಗೆ ಓದು-ಬರೆಹ ಬೇಕಿಲ್ಲ. ವ್ಯಾವಹಾರಿಕ ಜ್ಞಾನ ಮತ್ತು ತಂತ್ರ ಇದ್ದರೆ ಸಾಕು (IQಗಿಂತ EQ). ಅವರಿಗೆ ತಂತ್ರಜ್ಞಾನದ ಬಳಕೆ ಗೊತ್ತಿರಲೇಬೇಕೆಂದೇನೂ ಇಲ್ಲ. ಆ ಕೆಲಸವನ್ನು ಅವರ ಅಧೀನದಲ್ಲಿರುವ ನೌಕರರು ಮಾಡುತ್ತಾರೆ. ಹಾಗಾಗಿ ಅಂಥವರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಅಗತ್ಯವಾದರೂ ಏನು!' ಎಂದು.
*
ಕಾಗುಣಿತ ತಿಳಿಯದಿರುವವರನ್ನು ಆಯ್ಕೆ ಮಾಡುವ ಮೌಲ್ಯಮಾಪಕನಿಗೂ ಕಾಗುಣಿತ ತಿಳಿದಿರುವುದಿಲ್ಲ. ಎಲ್ಲೋ ಸಂಭವಿಸಿದ ಭ್ರಷ್ಟತೆ ಇಡೀ ವ್ಯವಸ್ಥೆಯನ್ನೇ ಹೇಗೆ ಬುಡಮೇಲು ಮಾಡುತ್ತದೆ ಎಂಬುದಕ್ಕೆ ಸಣ್ಣ ಉದಾಹರಣೆ ಇದು.
*
ಏಳು ಪದವಿಗಳನ್ನು ಪಡೆದಿರುವ ಬಳ್ಳಾರಿಯ ವ್ಯಕ್ತಿಯೊಬ್ಬರು (ಉದ್ಯೋಗ ಖಾತ್ರಿ ಕೆಲಸವನ್ನು ನಿರ್ವಹಿಸುತ್ತಿರುವ) ಬರೆದ 'ನನಗೊಂದು ನೌಕರಿ ಒದಗಿಸಿ' ಎಂಬ ಪತ್ರವನ್ನು ನೋಡಿ ಇವೆಲ್ಲಾ ಮನಸ್ಸಿನಲ್ಲಿ ಬಂದುಹೋದವು. ನಮಗೆ ನಾವೇ ಶಿಕ್ಷೆ ವಿಧಿಸಿಕೊಳ್ಳಬೇಕಾದ ಕಾಲದಲ್ಲಿ ಇಂತಹ ಶಿಕ್ಷೆಗಳು ನಮಗೆ ಪ್ರಾಪ್ತಿಯಾಗುತ್ತಲೇ ಇರುತ್ತವೆ!
*

-ಕಾಜೂರು ಸತೀಶ್

Tuesday, June 23, 2020

ಹಿಂದುಳಿದವನು



ಎಲ್ಲರೂ ಏರುದನಿಯಲ್ಲಿ ಮಾತನಾಡುತ್ತಿದ್ದಾಗ
ಇವನು ಸದಾ ಮೌನಿಯಾಗಿರುತ್ತಿದ್ದ

ಎಲ್ಲರೂ ಸರಸರ ನಡೆಯುತ್ತಿದ್ದಾಗ
ಇವನು ಸದಾ ಹಿಂದಿರುತ್ತಿದ್ದ

ಎಲ್ಲರೂ ಗಬಗಬ ತಿನ್ನುವುದರಲ್ಲಿ ಮುಳುಗಿದ್ದಾಗ
ಇವನು ಮಂಕಾಗಿ ಮೂಲೆಯಲ್ಲಿ ಕುಳಿತಿರುತ್ತಿದ್ದ

ಎಲ್ಲರೂ ಮಲಗಿ ಗೊರಕೆ ಹೊಡೆಯುತ್ತಿದ್ದಾಗ
ಇವನು ಕತ್ತಲ ಶೂನ್ಯದೊಳಗೆ ಕಣ್ಣುನೆಟ್ಟಿರುತ್ತಿದ್ದ

ಆದರೂ
ಗುಂಡಿನ ದಾಳಿ ನಡೆದಾಗ
ಮೊದಲು ಸತ್ತುಬಿದ್ದದ್ದು ಇವನೇ ಆಗಿದ್ದ.
*


ಹಿಂದಿ ಮೂಲ- ಸರ್ವೇಶ್ವರ ದಯಾಳ್ ಸಕ್ಸೇನ


ಕನ್ನಡಕ್ಕೆ- ಕಾಜೂರು ಸತೀಶ್