ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Wednesday, February 12, 2020

ಬಾಲಗಳು


ಬಾಲಗಳು
ಮತ್ತೊಂದು ದೊಡ್ಡ ಬಾಲದಂತಿರುವ ಶರೀರದ ಹಿಂದೆ
ಮೂಸುತ್ತಾ ಸಾಗುತ್ತಿರುತ್ತವೆ
ಅವುಗಳಿಗೆ ಕಣ್ಣುಗಳಿರುವುದಿಲ್ಲ
ಮೈಯೆಲ್ಲಾ ಕಿವಿ.

ದೊಡ್ಡ ಬಾಲಕ್ಕೂ ಕಣ್ಣುಗಳಿರುವುದಿಲ್ಲ;
ಇದೆಯೆಂಬಂತೆ ಬಿಂಬಿಸಲಾಗಿರುತ್ತದೆ;
ಯಾರದೋ ಎರಡು ಕಣ್ಣುಗಳನ್ನು ಕಿತ್ತು ಅಂಟಿಸಲಾಗಿರುತ್ತದೆ.

ದೊಡ್ಡ ಬಾಲದಂತಿರುವ ಶರೀರಕ್ಕೆ ನಾಲ್ಕಕ್ಷರ ಜ್ಞಾನ
ದೊಡ್ಡ ಬಾಯಿಂದ ಬಿದ್ದ ಒಂದಕ್ಷರವೇ ಇವಕ್ಕೆ ಬ್ರಹ್ಮಾಂಡ
ಬಿದ್ದಿದ್ದೇ ತಡ ಬಾಚಿ ತಬ್ಬಿಕೊಳ್ಳುತ್ತವೆ.

ದೊಡ್ಡ ಬಾಲದ ಹಿಂದೆ ಹಿಂದೆ ಸುತ್ತುವುದೇ ಸೇವೆ.
ಅದರ ಕತೆ ಇದರ ಕತೆ
ಅದು ತಿನ್ನಿಸಿ ಇದು ತಿನ್ನಿಸಿ
ಕಟ್ಟುವುದು ಮತ್ತು ಕೆಡವುವುದು.

ಎಲ್ಲ ಕುಸಿದುಬಿದ್ದಾಗ
ದೊಡ್ಡ ಬಾಲದಂತಿರುವ ಶರೀರ 
ಮತ್ತು
ಮೂಸುತ್ತಾ ಸಾಗುವ ಬಾಲಗಳು 
ಎಷ್ಟು ಜೋರು ಸದ್ದು ಮಾಡುತ್ತವೆ!

ದೊಡ್ಡ ಬಾಲದಂತಿರುವ ಶರೀರವು ಸಿಳ್ಳೆ ಹೊಡೆದರೆ ಸಾಕು
ಇವೆಲ್ಲಾ ಕುಂಯ್ಗುಟ್ಟಿ ನುಲಿಯುವುದ ನೋಡಬೇಕು
ಪಾಪ ಗಾಂಧಿ ಅಂಬೇಡ್ಕರ್ .

ಕುರ್ಚಿ ಏರಿ ಕುಳಿತು ಬಾಲಕ್ಕೆ ಮುಳ್ಳು ಸಿಕ್ಕಿಸಿಕೊಳ್ಳುವ ಇವು
ಇಳಿಯುವಾಗ ಕುರ್ಚಿಗೇ ಅಂಟಿಸಿಟ್ಟುಬಿಡುತ್ತವೆ
ಬಾಲವಿರದ ಶರೀರಗಳೇನಾದರೂ ಏರಿ ಕುಳಿತರೆ..

ಪಾಪ!

*


ಕಾಜೂರು ಸತೀಶ್

Tuesday, February 11, 2020

ಕ್ಯಾಲೆಂಡರ್ ಮಾರಾಟಕ್ಕಿದೆ



ದಶಕದಷ್ಟು ಹಳೆಯದು
ಅರ್ಧ ಶತಮಾನದಷ್ಟು ಹಳೆಯದು
ಶತಮಾನದಷ್ಟು ಹಳೆಯದು..

ಹೇ..
ಮನೆಬಿಟ್ಟು ಹೋಗಲಿಚ್ಛಿಸದವರೇ..
ಕಳೆದ ದಿನಗಳು
ಕಳೆದ ವರ್ಷಗಳು
ಕಳೆದ ದಶಕಗಳನ್ನೆಲ್ಲ
ಹಿಂತಿರುಗಿಸುವುದೀ ಕ್ಯಾಲೆಂಡರ್
ಬನ್ನಿ ಕೊಂಡುಹೋಗಿ.

ಜನ್ಮದಿನ
ಸತ್ತದಿನ
ಶ್ರಾದ್ಧದ ದಿನ
ಮರೆತುಹೋದ ದಿನ

ಅಮ್ಮ
ಅಪ್ಪ
ಹಠಾತ್ತನೆ ತೀರಿಕೊಂಡ ನಾಯಕರು

ಜಾತ್ರೆ
ಉರೂಸ್
ಸ್ವಾತಂತ್ರ್ಯ ದಿನ

ಯಾವುದೋ ಒತ್ತಡದಲ್ಲಿ ನೀವು ಮರೆತದ್ದು
ನಿಮ್ಮ ಮಕ್ಕಳಿಗೆ ತಿಳಿಯಲಿ

ಹಿಂದೆಯೊಬ್ಬ
ಅಪ್ಪನಿದ್ದ
ಹಿಂದೆಯೊಬ್ಬಳು
ಅಮ್ಮ ಇದ್ದಳು
ದೇಶವಿತ್ತು
ಸ್ವಾತಂತ್ರ್ಯ ದಿನವಿತ್ತು.

ಒಂದೇ ಒಂದು ಪಂಚೆಯಲ್ಲಿ ಬದುಕು ಕಳೆದ ನಾಯಕರು
ಬ್ಯಾಂಕ್ ಸಾಲ ಮಾಡಿ ತೀರಿಸಲಾಗದೆ ತೀರಿಕೊಂಡ ಪ್ರಧಾನಿ
ಕಡಲ ಕುದಿಸಿ ಉಪ್ಪನ್ನೇ ಎದೆಗಿಳಿಸಿಕೊಂಡವರು

ಕ್ಯಾಲೆಂಡರ್
ಎಲ್ಲ ಭಾಗಗಳಲ್ಲಿಯೂ
ಸಾಕ್ಷಿಯಾಗುತ್ತಿದೆ
ಮೌನದಲ್ಲೇ ಮಾತಿಗಿಳಿಯುತ್ತಿದೆ

ಆಗಸ್ಟ್ 15
ಜನವರಿ 26
ಮತ್ತು
ಮತ್ತೆಮತ್ತೆ ಜನವರಿ 30.
*


ಮಲಯಾಳಂ ಮೂಲ- ಟಿ ಸಿ ವಿ ಸತೀಶನ್


ಕನ್ನಡಕ್ಕೆ- ಕಾಜೂರು ಸತೀಶ್