ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Friday, March 25, 2016

ತಪ್ಪು ಅಳತೆ

ಕೆಲವೊಮ್ಮೆ ತಪ್ಪಾದ ಅಳತೆಗೋಲಿನಿಂದಲೇ ಅಳೆಯುತ್ತೇವೆ ನಾವು
ಮತ್ತೆ ಮತ್ತೆ ಅಳೆಯುತ್ತಲೇ ಇರುತ್ತೇವೆ.

ಯಾವುದೋ ಸಂಖ್ಯೆಯೊಂದರ ಸಣ್ಣ ತಪ್ಪು
ಅದರಿಂದ ತಪ್ಪಾಗುವ ದೂರ, ವೇಗ,
ಆಳ, ಅಗಲ.
ಈ ನಡುವೆ ಒಂದು ಸಣ್ಣ ಅಕ್ಷರ ತಪ್ಪು
ನೆನಪುಗಳನ್ನೇ ಬುಡಮೇಲಾಗಿಸುತ್ತದೆ.

ಆದರೂ,
ನಮಗೆ ತಪ್ಪಾದ ಅಳತೆಯೇ ಇಷ್ಟ.
ದೂರ ಕಡಿಮೆಯಾಗಿ, ವೇಗ ಹೆಚ್ಚಾಗಿ
ಆಳ ಅಗಲಗಳೆಲ್ಲ ಒಂದಾಗಿಬಿಡುತ್ತವೆ.
ಆಮೇಲೆ ಎಲ್ಲವೂ ಸುಲಭ.

ನಿನ್ನಲ್ಲಿಗಿರುವ ದೂರ,
ನಿನ್ನಲ್ಲಿಗೆ ಬರಬೇಕಾದ ವೇಗ
ತಪ್ಪಿಹೋದಾಗಲೇ
ನಾನು ಎಲ್ಲೂ ತಪ್ಪದ ಹಾಗೆ ತೂಗುಹಾಕಿದ್ದು,
ಬಾವಲಿಯ ಹಾಗೆ.
*

ಮಲಯಾಳಂ ಮೂಲ- ಸುತಾರ್ಯ ಸಿ

ಕನ್ನಡಕ್ಕೆ- ಕಾಜೂರು ಸತೀಶ್


Thursday, March 24, 2016

ದಿನಚರಿ -18

ಆ ವರ್ಷ ಮರದ ತುಂಬಾ ಬೆಣ್ಣೆಹಣ್ಣಿನ 'ಮಿಡಿ'ಗಳು ತುಂಬಿಹೋಗಿದ್ದವು. ಅದು ಹಣ್ಣಾಗುವ, ಅದನ್ನು ಸಕ್ಕರೆಯೊಂದಿಗೆ ಕಲಸಿ ತಿನ್ನುವ ಕನಸು ಕಾಣಲು ತೊಡಗಿ ವರ್ಷಗಳೇ ಬೇಸತ್ತಿದ್ದವು. ಹುಟ್ಟಿ, ಎಂಟು ವರ್ಷ ಬದುಕಿದ್ದೆ ಅಲ್ಲಿ. ಒಂದಿಡೀ ಆಯುಷ್ಯವನ್ನೇ ಸವೆಸಿದ್ದಷ್ಟು ಅನುಭವಗಳನ್ನು ತುಂಬಿಕೊಟ್ಟಿದ್ದವು ಆ ದಿನಗಳು.

ಮಳೆಗಾಲ. ತುಂಬಾ ಮಳೆಯಾಗುವ ಊರು ಅದು. ಮನೆಯ ಎಲ್ಲ ಸಾಮಾನುಗಳನ್ನೂ ಲಾರಿಗೆ ತುಂಬಿದ್ದೆವು. ಮನೆ ಬಿಡುವ ಕಡೆಯ ಕ್ಷಣದಲ್ಲಿ ಬೆಣ್ಣೆಹಣ್ಣಿನ ಮರವನ್ನೊಮ್ಮೆ ನೋಡಿದೆ- ಬಲಿಯಲು ಇನ್ನೊಂದು ತಿಂಗಳಷ್ಟೇ ಸಾಕಿತ್ತು. ನೆಲ ಕಳೆದುಕೊಂಡ ದುಃಖಕ್ಕಿಂತ ಕನಿಷ್ಟ ಒಂದು ಹಣ್ಣನ್ನಾದರೂ ತಿನ್ನಲಾಗಲಿಲ್ಲವಲ್ಲ ಎಂಬುದೇ ಆಗಿನ ನನ್ನ ಸಂಕಟದ ವಿಷಯವಾಗಿತ್ತು!
*
ಕಾಜೂರು ಸತೀಶ್