ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Saturday, May 29, 2021

ಮೌಲ್ಯ , ಶಿಕ್ಷಣ, ಅಹಂ, ಕಾಮನ್ ಸೆನ್ಸ್ ಮತ್ತು ಭ್ರಷ್ಟಾಚಾರ

ನಾನು ಪ್ರತಿದಿನ ಸಂಚರಿಸುವ ರಸ್ತೆಯ ಮಧ್ಯಭಾಗದಲ್ಲಿ ಬಿಳಿಯ ಗೆರೆಯೊಂದನ್ನು ಎಳೆಯಲಾಗಿದೆ. ಹೋಗುವವರಿಗೆ ಬರುವವರಿಗೆ ಅದೊಂದು ಸೂಚನೆ; ಮುಟ್ಟಬಾರದೆಂಬ ಸೂಚನೆ; ಆಚೆ ದಾಟಬಾರದೆಂಬ ಸೂಚನೆ.

ನಿತ್ಯ ಎದುರಿಗೆ ವಾಹನಗಳಲ್ಲಿ ಬರುವ ಮಂದಿ ಆ ಗೆರೆಯನ್ನು ಮುಟ್ಟಿ, ದಾಟಿ ಇನ್ನೂ ಈಚೆಗೆ ಬರುತ್ತಾರೆ. ಅವರ ಲೆಕ್ಕ ಇಡುತ್ತೇನೆ. ನೋಡಿದರೆ, ಅವರಲ್ಲಿ white collar ಮಂದಿಯಂತೆ ಕಾಣುವ ಜನರೇ ಹೆಚ್ಚು. 

ನಮಗೆ ರಸ್ತೆಯಲ್ಲಿ ಜಾಗವಿಲ್ಲದಿದ್ದರೆ ಅವರಿಗೇನಂತೆ!
*

ರಸ್ತೆಯಲ್ಲಿ ಹೋಗುತ್ತಿರುತ್ತೇನೆ. ಹಿಂದಿಕ್ಕಿ ಹೋಗುವ ಬೆಲೆಬಾಳುವ (ಕೆಲವೊಮ್ಮೆ ಅಗ್ಗದ ) ಕಾರಿನ ಕಿಟಕಿಯಿಂದ ಪ್ಲಾಸ್ಟಿಕ್ ಬಾಟಲಿ/ತಿಂಡಿಪೊಟ್ಟಣ ರಸ್ತೆಗೆ ಬೀಳುತ್ತದೆ. ನನ್ನನ್ನು ಅವಮಾನಿಸುವ ಹಾಗೆ ರಸ್ತೆಯಲ್ಲೇ ಆ ಬಾಟಲಿ/ಪ್ಲಾಸ್ಟಿಕ್ಕುಗಳು ರಾಜಾರೋಷವಾಗಿ ಮಲಗಿಬಿಡುತ್ತವೆ.
*

ನಿನ್ನೆ ದಿನವೂ ನೋಡಿದೆ. ಪಟ್ಟಣದ ಮುಖ್ಯ ರಸ್ತೆಯಲ್ಲಿ ಕಾರು ನಿಲ್ಲಿಸಿದ ಬಿಳಿಯ ಅಂಗಿ ಧರಿಸಿದ ಆ ವ್ಯಕ್ತಿ ತನ್ನ ಬಲಗೈಯಲ್ಲಿ ಮೂಗನ್ನು ಹಿಡಿದು ಸೀಟಿ ಜನರು ನಡೆದಾಡುವ ರಸ್ತೆಬದಿಗೆ ಸಿಂಬಳದ ಪಾದಸ್ಪರ್ಶವಾಗುವ ಹಾಗೆ ಮಾಡಿ ಎರಡೂ ಕೈಗಳನ್ನು ಉಜ್ಜಿಕೊಳ್ಳುತ್ತಾ ಕಾರು ಹತ್ತಿ ಹೊರಟುಹೋದ.

ಅವನ ವೇಷಭೂಷಣದಿಂದ ಅವನು ಕನಿಷ್ಟ ಒಂದು ಪದವಿಯ ಒಡೆಯನಾದರೂ ಆಗಿರಬಹುದು ಎಂದುಕೊಂಡೆ.
*

ಇದನ್ನು ಓದುತ್ತಿರುವ ಹಲವರು ಅಂದುಕೊಳ್ಳುತ್ತಿರುತ್ತಾರೆ: 'ಅವರು ಏನಾದರೂ ಮಾಡಿಕೊಳ್ಳಲಿ. ಇವನಿಗೇನು? ಅದು ಅವರವರ ಸ್ವಾತಂತ್ರ್ಯ.. ಇವನಿಗೇನು ನಷ್ಟ?!'

ಹಾಗೆ ಓದುತ್ತಿರುವವರೆಲ್ಲರೂ ವಿದ್ಯಾವಂತರು. ಪಂಡಿತರು! ಹಲವರು ದೊಡ್ಡ ದೊಡ್ಡ ಹುದ್ದೆಯಲ್ಲಿರುವವರು!
*

ಬಸ್ ನಿಲ್ದಾಣದ ಪಕ್ಕದ ಅಂಗಡಿಯವನಿಗೆ - 'ವ್ಯಾಪಾರ ಹೇಗೋ ಆಗುತ್ತದೆ, ಆದರೆ ಕಸ ಬಾಚೋರ್ಯಾರು?' ಎಂಬ ಚಿಂತೆ. ಅಷ್ಟಕ್ಕೂ ಅಲ್ಲಿ ಕಸ ಹಾಕುವವರು ಪ್ರತಿಷ್ಠಿತ ಎನಿಸಿಕೊಂಡ ಸಂಸ್ಥೆಗಳಲ್ಲಿ ಓದುತ್ತಿರುವ ಶಾಲಾ-ಕಾಲೇಜು ವಿದ್ಯಾರ್ಥಿಗಳು!

*
ಹತ್ತು ಗಂಟೆಗೆ ಸಭೆ/ ಕಾರ್ಯಕ್ರಮ ಎಂದು ಸಮಯ ನೀಡಲಾಗಿರುತ್ತದೆ. ಆಯೋಜಕ/ಕಿ ಶಿಸ್ತಿನ ವ್ಯಕ್ತಿಯಾಗಿದ್ದು ಮೊದಲೇ ಸಿದ್ಧನಾಗಿದ್ದಾನೆ/ಳೆ ಎಂದುಕೊಂಡರೆ, ಭಾಗಿಯಾಗಬೇಕಾದವರು ಆ ಹೊತ್ತಿಗೆ ಇನ್ನೂ ತಲೆಯೇ ಬಾಚಿರುವುದಿಲ್ಲ. ಕೆಲವರು ಹಾಸಿಗೆಯಿಂದ ಎದ್ದೇ ಇರುವುದಿಲ್ಲ. ಅಥವಾ ಇವರಲ್ಲನೇಕರು ಸರಿಯಾದ ಸಮಯಕ್ಕೆ ಬಂದು ಹಾಜರಿದ್ದರೂ, ಆಯೋಜಕನ ನಿದ್ದೆ ಬಿಟ್ಟೇ ಇರುವುದಿಲ್ಲ!
*

ಗುಡ್ಡದ ಮೇಲೆ ಚಾರಣ ಹೋದಾಗ ನನ್ನ ಗೆಳೆಯ ಹೇಳುತ್ತಿರುತ್ತಾರೆ- 'ಮನುಷ್ಯರೇ ಇಲ್ಲದಿದ್ದರೆ ಈ ಪರಿಸರ ಎಷ್ಟು ಚೆನ್ನಾಗಿರುತ್ತಿತ್ತು ಅಲ್ವಾ? ಮನುಷ್ಯ ಇಲ್ಲದಿದ್ದರೂ ಇದು ಇದ್ದೇ ಇರುತ್ತದೆ , ಮನುಷ್ಯರನ್ನು ಅದು ಅವಲಂಬಿಸಿಲ್ಲ. ಆದರೆ ಅದು ಇಲ್ಲದೆ ಮನುಷ್ಯರಿರುವುದಿಲ್ಲ...'

'ಮತ್ತೆ ಇಷ್ಟು ಉಳಿದಿದೆ ಅಂದ್ರೆ ಅದಕ್ಕೆ ಅಮಾಯಕ, ಅನಕ್ಷರಸ್ಥರೇ ಕಾರಣ!'
*

ನೀತಿ ಹೇಳಿಕೊಡುವ ಗುರುಗಳಲ್ಲಿ/ಸಮಾಜದಲ್ಲಿ ಆ ನೀತಿಗಳ ಕೊರತೆಯನ್ನು ವಿದ್ಯಾರ್ಥಿಗಳು/ಕಿರಿಯರು ಕಂಡುಕೊಂಡಾಗ ಇಡೀ ಮೌಲ್ಯ ವ್ಯವಸ್ಥೆ ಬುಡಮೇಲಾಗುತ್ತದೆ. ಸರಿಯಾಗಿ ಓದಲು- ಬರೆಯಲು ತಿಳಿಯದ, ವಿದ್ಯಾರ್ಥಿಯ ಸಮಸ್ಯೆಗೆ ಪರಿಹಾರ ಸೂಚಿಸಲಾಗದ, ಅವರ ವೇಗದಲ್ಲಿ ಮುನ್ನುಗ್ಗಲಾಗದ ಗುರುಗಳಿದ್ದಾಗ 'ಮೌಲ್ಯ' ಎನ್ನುವುದು ಹೇಳುವುದಕ್ಕೆ ಮಾತ್ರ ಇರುವ ಸಂಗತಿಯಾಗುತ್ತದೆ.
*

' ನಮ್ಮ ಜನಕ್ಕೆ ಯಾಕೆ common sense ಇಲ್ಲ' ಎಂದರು ಗೆಳೆಯರೊಬ್ಬರು. ' ಭ್ರಷ್ಟಾಚಾರ ಸರ್' ಎಂದೆ!!
ತಲೆಬುಡ ಅರ್ಥವಾಗದವರಂತೆ ನೋಡಿದರು. ಎಳೆಎಳೆಯನ್ನೂ ವಿವರಿಸಿದೆ.

'ನಿಜ ಸರ್' 'ಛೆ' ಎಂದರು.
*


ಕಾಜೂರು ಸತೀಶ್

Thursday, May 27, 2021

ಬರೆಯಲಾರೆ

ಈ ರಾತ್ರಿ
ಮಿಡತೆಯ ಹಾಡು
ಕಾಡಾನೆಯ ಘೀಳು
ನಾಯಿಗಳ ಬೊಗಳು
ಮೈಸೋಕುವ ಗಾಳಿ
ಮಳೆಯ ಸಪ್ಪಳ
ಇರದಿದ್ದರೆ
ಕವಿತೆ ಬರೆಯುತ್ತಿದ್ದೆ
ನಿನ್ನ ಕುರಿತು


ಈ ರಾತ್ರಿ
ಗಡಿಯಾರದ ಮುಳ್ಳಿನ ನಡಿಗೆ
ಹೆಂಚಿನ ಸೆರೆಯಿಂದ ಇಳಿವ ಮಳೆಹನಿ
ಕನವರಿಸುವ ಅಮ್ಮನ ದಣಿವು
ಭದ್ರವಿರದ ಗೋಡೆ
ಕಿರುಗುಡುವ ಹಾಸಿಗೆ
ಚರವಾಣಿಯ ರಿಂಗಣ
ಇರದಿದ್ದರೆ
ಕವಿತೆ ಬರೆಯುತ್ತಿದ್ದೆ
ನನ್ನ ಕುರಿತು


ಕ್ಷಮಿಸಿ
ಬರೆಯಲಾರೆ
ನಿಮ್ಮ ಕುರಿತು
ಹಗಲಿನಲ್ಲೂ


ಅಳುತ್ತೇನೆ
ಅಷ್ಟೇ.
*


ಕಾಜೂರು ಸತೀಶ್ 

Wednesday, May 26, 2021

Status ಎಂಬ ಮಾಯೆ ಮತ್ತು ಮೂರ್ಖತನದ ಪರಮಾವಧಿ

ಸಾಮಾಜಿಕ ಜಾಲತಾಣ(facebook ,whatsapp ,instagram ಇತ್ಯಾದಿ)ಗಳ Statusಗಳನ್ನು ನೋಡಿದರೆ ಒಂದು 'ವ್ಯವಸ್ಥೆ'(system) ಕಣ್ಣಮುಂದೆ ಪ್ರತ್ಯಕ್ಷವಾಗುತ್ತದೆ. ನಮ್ಮ ನಮ್ಮ ನಿಲುವುಗಳು-ಅದರಲ್ಲಿರುವ ಸೂಕ್ಷ್ಮತೆ- ನಮ್ಮನ್ನು ಅಷ್ಟರ ಮಟ್ಟಿಗೆ ಸಿದ್ಧಗೊಳಿಸಿರುವ ಪದ್ಧತಿ(ಶಿಕ್ಷಣ,ಸಮಾಜ,ಸಂಸ್ಕೃತಿ), ನಮ್ಮ ಹವ್ಯಾಸ -ಅಭ್ಯಾಸಗಳು, ವೃತ್ತಿ-ಪ್ರವೃತ್ತಿಗಳು,ವ್ಯಾಪಾರ- ವಹಿವಾಟು, ಆಸಕ್ತಿಯ ಕ್ಷೇತ್ರಗಳು, ಕೌಟುಂಬಿಕ - ಸ್ನೇಹಿತ ವಲಯ.. ಹೀಗೆ.


ಗಂಡ/ಹೆಂಡತಿ ತಮ್ಮ ಪಕ್ಕದಲ್ಲೇ ಇರುವ ಹೆಂಡತಿ/ಗಂಡನಿಗೆ ಪರಸ್ಪರ ಶುಭಾಶಯ ಹೇಳಿಕೊಳ್ಳಬಹುದಾದ ಅವಕಾಶವನ್ನು ಈ statusಗಳು ಕಸಿದಿವೆ. ಹೀಗೆ, ಕುಟುಂಬದ ಸದಸ್ಯರ ಖಾಸಗಿ ಸಂಗತಿಗಳು ಲೋಕದ ಕಣ್ಣು ಸೇರುತ್ತವೆ. 

ಹುಟ್ಟಿದ್ದೇನೆ/ಮದುವೆಯಾಗಿದ್ದೇನೆ ಎನ್ನುವ ಕಾರಣಕ್ಕೆ ಪ್ರತೀ ವರ್ಷ ಕೇಕು ಕತ್ತರಿಸುವ ಸಂಗತಿ ಮನೆಯ ಗೋಡೆಗಳಿಗೆ ತಿಳಿದರೆ ಸಾಲದೇ? ನಿಜಕ್ಕೂ ಅದು ಸಾಮಾಜಿಕವಾಗಿ ಸಂಭ್ರಮಿಸುವ ಸಂಗತಿಯೇ? 

ಇಂತಹ ಕೃತಕ ಶುಭಾಶಯಗಳು ಯಾವ ಬಗೆಯ ಸುಖವನ್ನು  ನಮಗೆ ನೀಡುತ್ತದೋ- ತಿಳಿಯುತ್ತಿಲ್ಲ.

ಯಾವುದು ವ್ಯಕ್ತಿಗತ ,ಯಾವುದು ಸಾಮಾಜಿಕ ಎನ್ನುವ ಕನಿಷ್ಟ ಅರಿವು ಕೂಡ ನಮ್ಮಿಂದ ದೂರ ಸರಿದಿದೆ. ಹೀಗಾಗಿ ಖಾಸಗಿ ಸಂಗತಿಗಳೇ ವಿಜ್ರಂಭಿಸುತ್ತಿವೆ.


ಇರುವ ಕೆಲವೇ ಕೆಲವು ಸಂವೇದನಾಶೀಲ ಜನರು ಇದರಿಂದ ಬಳಲಿಹೋಗುತ್ತಾರೆ. ಅವರ ಮೌನ ಇವರ ಆರ್ಭಟದಲ್ಲಿ ಮತ್ತಷ್ಟೂ ನಿರ್ವಾತ ಸ್ಥಿತಿಯನ್ನು ಮುಟ್ಟುತ್ತದೆ.


ಎಷ್ಟಾದರೂ, ನಾವು ಹಂಚಿಕೊಳ್ಳುವ statusಗಳು ನಮ್ಮ maturityಯನ್ನು ಪರೋಕ್ಷವಾಗಿ(ಪ್ರತ್ಯಕ್ಷವಾಗಿಯೂ) ಮಾಪನ ಮಾಡುತ್ತಿರುತ್ತವೆ. ನಮ್ಮ ಶೂನ್ಯಸಂಪಾದನೆ ಮಾತ್ರ ಯಾರಿಗೂ ತಿಳಿಯುವುದಿಲ್ಲ.
*


- ಕಾಜೂರು ಸತೀಶ್

Tuesday, May 25, 2021

ಭಾಗ್ಯ

ಹಿನ್ನೀರಿನ ಮೇಲಿನ ಹಕ್ಕಿ
ನೀರು ಮುಟ್ಟದೆ
ಗಾಳಿ ಮುಟ್ಟದೆ
ಗಗನ ಮುಟ್ಟದೆ
ಈಜಿ ಈಜಿ
ನೀರು ಮುಗಿದು
ನೆಲ ಬಂದರೆ
ಹಾರತೊಡಗುತ್ತದೆ
ಗಾಳಿಯಲ್ಲಿ
ಗಗನ ಆಗ ಪ್ಯಾರಾಚೂಟು
ಬಿಚ್ಚಿಕೊಳುವುದು ಮೆಲ್ಲನೆ

ನೆಲದ ಒಳಗಿನ ನೀರಿಗೆ 
ಹಾರಲು ಈಜಲು
ರೆಕ್ಕೆಯ ಭಾಗ್ಯವಿಲ್ಲ


ಎಲಾ! ಕಪ್ಪೆಯ ಭಾಗ್ಯವೇ!
*



ಕಾಜೂರು ಸತೀಶ್ 

ಬೇಸಿಗೆಯಲಿ ಗಾಯಗೊಳ್ಳಬಾರದು

ಬೇಸಿಗೆಯಲಿ ಗಾಯಗೊಳ್ಳಬಾರದು

ಅಕಾಸ್ಮಾತ್ ಪಾದದಲ್ಲಿ 
ಅಥವಾ ತುಸು ಮೇಲೆ
ಮಂಡಿಯಲ್ಲಿ ತೊಡೆಯಲ್ಲಿ
...................................
ಗಾಯಗೊಂಡರೆ...


ಹೊಟ್ಟೆಪಾಡು ಬಿಸಿಲಿಗೆ ಬೆಂದು
ಕಡಲು ಅಪ್ಪಳಿಸಿ
ಹನಿಹನಿ
ಕೆಳಜಾರಿ
ತಾಗಿದರೆ
'ಚುರುಕ್'


ಅದಕ್ಕೇ ಹೇಳುತ್ತಿರುವುದು
ಮಳೆಸುರಿಯುತ್ತಿರಬೇಕು
ಕಾಲ ಚಂಡಿಯಾಗಿರಬೇಕು
ತಿಳಿಯಬಾರದು ಕಣ್ಣಿಗೂ..

ನಾಲಿಗೆಯೂ ಒಣಗಬಾರದು.
*




ಕಾಜೂರು ಸತೀಶ್ 

Thursday, May 20, 2021

ಸಂತೆ

ಈ ಸಂತೆಯನ್ನು ನನ್ನ ಕಣ್ಣುಗಳು ನುಂಗಿವೆ
ಕಿವಿಗಳು ಕುಡಿದಿವೆ
ನಾನೀಗ ಒಂಟಿ
ಯೋಗಿ


ಒಳಗೆ ಸರಿಯುವ ನೂರಾರು ಚಕ್ರಗಳು 
ಸಾವಿರಾರು ಕರೆಗಳು
ದಾರಿಯಲ್ಲಿ ನಾನು
ಒಂಟಿ


ಇಲ್ಲಿ ಮೇಲೆತ್ತುವ ಕೈಗಳು ಬೆಳಗುವ ಹಲ್ಲುಗಳು
ನಕ್ಕು ಕೆನ್ನೆ ನೋವು
ಹೆಗಲ ಮೇಲಿದೆ ಕೈ
ನನ್ನದೇ



ಯಾರೋ ಕೈಮುಗಿದು ಕೈಚಾಚುತ್ತಾರೆ
ಕೊಟ್ಟು ಆಚೆ ತಿರುವಿಗೆ ಬಂದರೆ
ಮತ್ತೆ ಅವೇ ಕೈಗಳು
ಸಂತೆಯದು

*


ಕಾಜೂರು ಸತೀಶ್



ಅಂತರ

'....ಇದೇ ಕೆಲಸವನ್ನು ಖಾಸಗಿಯವರಿಗೆ ಹಂಚಿದ್ದಿದ್ದರೆ..' ಗೆಳೆಯರೊಬ್ಬರು ಕೇಳಿದರು.

'ಕೆಲಸ ಬೇಗ ಮುಗಿಯುತ್ತಿತ್ತು, discipline ಇರುತ್ತಿತ್ತು, ಮಾಡುವ ಕೆಲಸದಲ್ಲಿ dedication ಇರುತ್ತಿತ್ತು', ಹೇಳಿದೆ.

'ಅವರೂ ಮನುಷ್ಯರಲ್ಲವೇ? ಕೆಲಸದ ವಿಷಯದಲ್ಲಿ ಅವರಿಗೇಕೆ ವಿಶೇಷ ಗುಣಗಳು ಪ್ರಾಪ್ತವಾಗುವುದು? ಅವರ ಕೆಲಸ ಯಾಕೆ ಅಷ್ಟು ವೇಗವನ್ನು ಪಡೆದುಕೊಳ್ಳುತ್ತದೆ?' ಕೇಳಿದರು.

'ಬದುಕು', ಹೇಳಿದೆ.

'ಅದು ಕೊರತೆಯನ್ನು ಸೃಷ್ಟಿಸಿದಷ್ಟೂ ನಮ್ಮ ಆಲಸ್ಯ ನೀಗುತ್ತಾ ಹೋಗುತ್ತದೆ. ಅದಕ್ಕಾಗಿ ನಾವು ನಿಷ್ಠೆಯಿಂದ ದುಡಿಯಬೇಕಾಗುತ್ತದೆ. ಆಗ ನಮ್ಮನ್ನು ನಿಯಂತ್ರಿಸುವ ಕೈಗಳು ಶಕ್ತವಾಗಿರುತ್ತವೆ. ಅನಿವಾರ್ಯವಾಗಿ ನಾವು ಒಪ್ಪಿಕೊಂಡು ಸಹಿಸಿಕೊಂಡು ದುಡಿಯುವವರಾಗುತ್ತೇವೆ'.

' ಹಾಗಾದರೆ ಇಲ್ಲಿ ಅದು ಸಾಧ್ಯವಿಲ್ಲವೇ?'

' ಸಾಧ್ಯ, ನಿಯಂತ್ರಿಸುವವರ ಮನಸ್ಸು, ಕೈಗಳು ಶುದ್ಧವಾಗಿದ್ದರೆ ಅದು ಸಾಧ್ಯ'

'ಅಥವಾ, ಈಗ ಕೆಲವೇ ಕೆಲವರಿಗಿರುವ ಸ್ವಯಂಶಿಸ್ತು ಎಲ್ಲರಲ್ಲೂ ತುಂಬಿಕೊಂಡಾಗ..'

'ಅಥವಾ ದುಡಿದಷ್ಟು ಪಗಾರ ನೀಡಿದಾಗ, ಸಾಮರ್ಥ್ಯ ಇರುವವರಿಗೆ ಬಡ್ತಿ ನೀಡಿದಾಗ..'
*


ಕಾಜೂರು ಸತೀಶ್

ಹುಟ್ಟು

ಪ್ರೀತಿ ಬಂದು ಹಾಸಿಗೆಯಲಿ ಕುಳಿತಿತು
ಮುತ್ತು ಮತ್ತು ಅಪ್ಪುಗೆ ಹುಟ್ಟಿದವು

ಪ್ರೀತಿ ಮತ್ತು ಕಾಮ ಹಾಸಿಗೆಯಲಿ ಕುಳಿತವು
ಅಳುಅಳುತಾ ಮಕ್ಕಳು ಹುಟ್ಟಿದವು.
*


ಕಾಜೂರು ಸತೀಶ್ 

Monday, May 10, 2021

ಸಾವು



ಬೀದಿ ದೀಪ ಕೆಟ್ಟುಹೋದ ಹಾಗೆ ಸೂರ್ಯ ಕಂತಿದ ಮೇಲೆ
ಕತ್ತಲಿಗೆ ಕಂಬಗಾಲುಗಳು ಹುಟ್ಟಿ ಅಗಲ ಕಿವಿಗಳು ಮೊಳೆತು
ಉದ್ದ ಮೂಗಲ್ಲಿ ಮೂಸುತ್ತಾ ನಡೆವಾಗ
ಎದುರಿಗೆ ಬತ್ತಿದ ಕೆರೆ - ಬತ್ತಿ ಇಟ್ಟು ಬೆಳಗಿಸಲೂ ಆಗದಂತೆ
ತೇಗದ ಒಳಗೆ ಅವಿತ ಚಿಲ್ಲರೆ ಹಣ
ಜಣ ಝಣ ಝ್ಜಣ ಪೊಟರೆ ತುಂಬ ಹಣ


ಕಡೆಗೆ ರಸ್ತೆಗಿಳಿದು- ಆ ಕಪ್ಪು ಈ ಕಪ್ಪು  ಒಂದಾದ ಹಾಗೆ
ಹಾಲು ಜೇನು ಬೆರೆತ ಹಾಗೆ ಜೀವ ಗಟಗಟಗಟ
ನೆಟ್ಟ ಬೆವರು ಬುಡಸಮೇತ ಕಿತ್ತು
ಅರ್ಜಿ ಹಾಕಿದರೆ ಕಾಲಾತೀತ ಉತ್ತರ


ಸಂಜೆ ನಂದಿಹೋಗುವ ಬೀದಿ ದೀಪದ ಸೂರ್ಯ
ಮರುದಿನ ಕಣ್ಣು ತೆರೆದವರ ಬೆಳಕಲ್ಲಿ ಉರಿದು
ಅಳಿದುಳಿದ ಕತ್ತಲು ಮರಳಿ  ಕಾಡಿಗೆ 
ನೋಡಬೇಕು ನೀವದರ ನಡಿಗೆ
*


- ಕಾಜೂರು ಸತೀಶ್ 

ಸೇತುವೆ ಮತ್ತು ಬಸ್ಸು



ಬಸ್ಸು ಸೇತುವೆಯ ಮೇಲಿದ್ದಾಗ
ನದಿಯ ಮೈಗೆ ಮೈತಾಕಿಸಿ ಹರಿವ ಬಸ್ಸು

ಬಸ್ಸು ಸೇತುವೆಯಲ್ಲಿ ಚಲಿಸುವಾಗ
ನೆರಳ ಮೈತಾಕಿಸಿ ಪುಳಕಗೊಳ್ಳುವ ನದಿ

ಬಸ್ಸಿಗೂ ನದಿಯ ತಣ್ಣನೆಯ ಮೈಯ್ಯೆಂದರೆ ಪ್ರೀತಿ
ಅಲೆಯ ಉಬ್ಬುತಗ್ಗುಗಳಲ್ಲಿ ಈಜು ಕಲಿಯುವುದು ಕನಸ್ಸಲ್ಲಿ

ಬಸ್ಸಿಗೆ ಹರಿಯುವ
ನದಿಗೆ ಚಲಿಸುವ
ಬಸ್ಸಿಗೆ ತಣ್ಣಗಾಗುವ
ನದಿಗೆ ಬೆಚ್ಚಗಾಗುವ
ಕನಸು
ವಿರಹ

ಒಂದು ದಿನ
ಮನೆಬಿಟ್ಟು ಓಡಿಹೋದ ಪ್ರೇಮಿಯ ಹಾಗೆ
ದಾರಿತಪ್ಪಿದ ಬಸ್ಸು
ರಸ್ತೆಯಿಂದ ಹಾರಿ
ನದಿಯ ತೋಳಲ್ಲಿ ಬಂಧಿ

ನದಿಗೂ ಬಸ್ಸಿಗೂ
ತುಂಬುಪ್ರೀತಿ
ಸಾವಿನಂಥ ಪ್ರೀತಿ

ಸಾವಿನ ಜನನ.
*


ಕಾಜೂರು ಸತೀಶ್

Sunday, May 9, 2021

ನಿವೃತ್ತಿ ಮತ್ತು ಸುಲಿಗೆ

ನಿವೃತ್ತಿ !

ಸಾಮಾನ್ಯವಾಗಿ ಸರ್ಕಾರಿ ನೌಕರರು ನಿವೃತ್ತಿ ಹೊಂದಿದಾಗ ಆ ದಿನ ಕೆಲವು ಗಣ್ಯವ್ಯಕ್ತಿಗಳು ಅವರ ಕೆಲಸದ ಸ್ಥಳಕ್ಕೆ ತೆರಳಿ ಕೊರಳಿಗೆ ಹಾರ ಹಾಕಿ ಶಾಲು ಹೊದಿಸಿ ಬಾಯಿ ತುಂಬಾ ಹೊಗಳಿ (ಅಟ್ಟಕ್ಕೇರಿಸಿ) ಪಟ ತೆಗೆಸಿಕೊಂಡು ಮಾರನೆಯ ದಿನ ಪತ್ರಿಕೆ/ಟಿವಿಯಲ್ಲಿ ಬರುವಂತೆ ಮಾಡುತ್ತಾರೆ.

'ಇಷ್ಟು ಕಾಲ ದುಡಿದದ್ದಾಯಿತು- ಇನ್ನು ಮನೆಯಲ್ಲಿ ಹಾಯಾಗಿರೋಣ' ಎಂಬ ಕನಸು ಯಾರಿಗಿರುವುದಿಲ್ಲ ಹೇಳಿ? ಆದರೆ, ಹಾಗೆ ಮನೆಯಲ್ಲಿ ಇರಲು ಸಾಧ್ಯವೇ? ಪಿಂಚಣಿ ಬೇಡವೇ? ಮನೆಯಲ್ಲಿ ಸುಮ್ಮನೆ ಕುಳಿತರೆ ಅದು ಸಿಗುವುದೇ?

ಸನ್ಮಾನ ಮಾಡಿದ ಮಂದಿ ತಮ್ಮ ಪಟ/ವೀಡಿಯೊಗಳನ್ನು ಪತ್ರಿಕೆ/ದೃಶ್ಯ ಮಾಧ್ಯಮದಲ್ಲಿ ನೋಡಿ ಹಿರಿಹಿರಿ ಹಿಗ್ಗಿ ತಮ್ಮ ಬೆನ್ನುಗಳನ್ನು ಇತರರಿಗೆ ಕೇಳಿಸುವಷ್ಟು ಜೋರಾಗಿ ತಟ್ಟಿಕೊಳ್ಳುತ್ತಾರೆ.
ಅಂದ ಹಾಗೆ, ಮೊನ್ನೆ ಗೆಳೆಯರೊಬ್ಬರು ಕರೆಮಾಡಿ ಹೇಳುತ್ತಿದ್ದರು: 'ಸನ್ಮಾನ ಮಾಡ್ತಾರಲ್ವಾ.. ಹಾರ- ಶಾಲು-ಹಣ್ಣು.. ಇವೆಲ್ಲಾ ಅವ್ರ ಹತ್ರಾನೇ ಸುಲಿಗೆ ಮಾಡಿ ತಗೊಂಡಿರ್ತಾರೆ'!

ಕೆಲಸಕ್ಕೆ ಸೇರುವಾಗಲೇ ಸುಲಿಗೆ ಮಾಡುವ ಕಚೇರಿ, ನಿವೃತ್ತಿ ಹೊಂದಿದಾಗ ಮತ್ತೆ ಸುಲಿಗೆ ಮಾಡುತ್ತದೆ. ನಿವೃತ್ತಿ ಹೊಂದಿದ ದಿನ ಬಹುಪರಾಕ್ ಹೇಳಿದ ಮಂದಿಯೆಲ್ಲ ಲಂಚಕ್ಕೆ ಬೇಡಿಕೆಯಿಡುತ್ತಾರೆ. ಕೊಡದಿದ್ದರೆ ಪಿಂಚಣಿಯೇ ಇಲ್ಲ!

ಸೇವೆಯಲ್ಲಿರುವಾಗಲೇ ನಿಧನಹೊಂದಿದರೆ ಮುಗಿಯಿತು- ಕೆಲಸ ಬಯಸಿ ಬರುವ ಅವರ ಮಕ್ಕಳನ್ನು ಸುಲಿದು ನುಂಗಿ ನೀರುಕುಡಿಯುತ್ತಾರೆ.

ಹಾಗೆ ಕೆಲಸ ಪಡೆದುಕೊಂಡ ಮಕ್ಕಳೇ ಮತ್ತೊಂದಷ್ಟು ನಿವೃತ್ತರ, ಮರಣ ಹೊಂದಿದ ನೌಕರರ ಮಕ್ಕಳ ರಕ್ತ ಹೀರುತ್ತಾರೆ.

ಹಿಂಸೆ ಮುಂದುವರಿಯುತ್ತದೆ..
*




- ಕಾಜೂರು ಸತೀಶ್