ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Tuesday, March 31, 2020

ಒಂದು ದಶಕದ ಗೃಹಬಂಧನ ಮತ್ತು ಕೊರೋನಾ

ಜನ ಮನೆಯ ಒಳಗೆ ಬಂಧಿಯಾಗಿದ್ದಾರೆ. 'ಕೊರೋನಾ' ಅಂತಹ  ಅನಿವಾರ್ಯತೆಯನ್ನು ಸೃಷ್ಟಿಸಿದೆ;  ಜಗತ್ತನ್ನು ಇಕ್ಕಟ್ಟಿಗೆ ಸಿಕ್ಕಿಸಿದೆ. ಸೃಜನಶೀಲವಾಗಿ ಖಾಲಿಖಾಲಿಯಾಗಿರುವ ಜನ, ಹಲವು ಚಟಗಳನ್ನು ರೂಢಿಸಿಕೊಂಡಿರುವ ಜನ 'ಮನೆಯೊಂದು ಬಂಧೀಖಾನೆ' ಎಂಬಂತೆ ಬದುಕುತ್ತಿದ್ದಾರೆ.
*

ಗೆಳೆಯನಿಗೆ SMS ಕಳಿಸಿದ್ದೆ: 'ಎಲ್ಲಿದ್ದೀರಿ ಸಾಹೇಬ್ರೇ?'
 ಗಂಟೆಗಳು ಕಳೆದ ಮೇಲೆ ಅತ್ತಲಿಂದ ಉತ್ತರ:------
ನನ್ನ ಸರದಿ: ಅಯ್ಯೋ ಇನ್ನೂ ಅಲ್ಲೇ ಇದ್ದೀರಾ? ಒಬ್ರೇನಾ?
'ಹೌದು'!

'ಗೃಹಬಂಧನ' ಎನ್ನುವುದು ನನಗೆ ಮತ್ತು ನನ್ನ ಆ ಗೆಳೆಯನಿಗೆ ಹೊಸದಲ್ಲ. ಒಂದು ದಶಕದಷ್ಟು ಕಾಲ ನಾವು ಗೃಹಬಂಧನದಲ್ಲಿದ್ದವರು. ಒಂದು ಕಡೆ ಅದು ನನ್ನನ್ನು ಮತ್ತಷ್ಟೂ introvert ಆಗಿಸಿದರೆ ಇನ್ನೊಂದು ಕಡೆ ಅದನ್ನು ನೀಗಿಸಿಕೊಳ್ಳಲು ಸೃಜನಶೀಲ ದಾರಿಯನ್ನು ಹುಡುಕತೊಡಗುವಂತೆ ಮಾಡಿತು.

ಅಗತ್ಯ ವಸ್ತುಗಳು ದೊರೆಯದೆ ನಾವೆಷ್ಟೋ ದಿನ ಉಪವಾಸ ಮಲಗಿದ್ದೇವೆ. ಹೊರಮನುಷ್ಯರ ಸಂಪರ್ಕಕ್ಕಾಗಿ ಮೊಬೈಲು ಹಿಡಿದು ಗುಡ್ಡಗಳನ್ನು ಏರಿದ್ದೇವೆ. ATMನಲ್ಲಿ ಹಣ ಪಡೆಯಲು ಒಂದು ದಿನದ ಸಾಂದರ್ಭಿಕ ರಜೆಯನ್ನು ಹಾಕಿದ್ದೇವೆ.  ಬಸ್ಸಿನ ಮುಖನೋಡದೆ ಎಷ್ಟೋ ದಿನಗಳನ್ನು ಕಳೆದಿದ್ದೇವೆ.
*

ಮಾರ್ಚ್ 14ರ ನಂತರ ನನ್ನ ಆ ಗೆಳೆಯ ಅಂಗಡಿಯ ಮುಖ ನೋಡಲಿಲ್ಲ. ಅದೃಷ್ಟವೆಂದರೆ ಅವರಿಗೆ ಅಗತ್ಯ ವಸ್ತುಗಳ ಕೊರತೆಯಿಲ್ಲ. ಒಂದೊಮ್ಮೆ ನಾನು ಇನ್ನೂ ಅಲ್ಲೇ ಇದ್ದಿಬಿಟ್ಟಿದ್ದರೆ ಅರೆ ಜೀವವಾಗುತ್ತಿದ್ದೆ, ಅಥವಾ ಸತ್ತುಹೋಗುತ್ತಿದ್ದೆ!

ಗೃಹಬಂಧನದ ಒಂದು ದಶಕವು ನನಗೆ ಮನುಷ್ಯನ ಸಣ್ಣತನಗಳನ್ನೂ, ಏಕಾಂತದ ಪರಮಸುಖವನ್ನೂ, ನಿಸರ್ಗದ ಒಡನಾಟದ ದಿವ್ಯ ಅನುಭವವನ್ನೂ ಒಟ್ಟಿಗೆ ಕೊಟ್ಟಿದೆ. ಒಬ್ಬ ಕಾರಾಗೃಹವಾಸಿಯ ಒಳಗೆ ಪರಕಾಯ ಪ್ರವೇಶ ಮಾಡುವುದನ್ನೂ ಕಲಿಸಿದೆ.
*


ಕಾಜೂರು ಸತೀಶ್ 

2 comments: