ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Friday, March 27, 2020

ಬಾನಸಮುದ್ರಕ್ಕೆ ಕವಿತೆಯ ನೋಟದ ಗಾಳ

ಆಧುನಿಕ ಕವಿತೆಗಳ ಮುಖ್ಯ ಲಕ್ಷಣಗಳೆಂದರೆ
-ಅವು ಹೇಳುವುದನ್ನು ವಾಚ್ಯವಾಗಿಸಿಬಿಡುವುದು
-ಹೇಳಿಯೂ ಹೇಳದಂತಿರುವುದು
-ಹೊಸ ಮಾದರಿಯಲ್ಲಿ ಹೇಳುವುದು
-ಅಖಂಡವಾಗಿ ಹೇಳದಿರುವುದು ಅಥವಾ ಅಖಂಡವಾಗಿ ಹೇಳುವಷ್ಟು ಧ್ಯಾನಸ್ಥ ಸ್ಥಿತಿಯಿಂದ ವಂಚಿತವಾಗಿಬಿಡುವುದು.
- ಹೇಳುವಿಕೆಯಲ್ಲಿ ನಿರ್ದಿಷ್ಟತೆಯಿದ್ದರೂ ಕಲಾತ್ಮಕವಾಗಿರದೆ ಇರುವುದು.
-ಒಂದು ಇಸಂ ಅನ್ನು ಸ್ಥಾಪಿಸಲೆಂದೇ ಬರೆಯುವುದು ಮತ್ತು ಸಹಜವಾಗಿ ಉಕ್ಕುವ ಮುಗ್ಧತೆಯನ್ನು ಹತ್ತಿಕ್ಕುವುದು.


ಇವು ಈಗ ಪ್ರಕಟಗೊಳ್ಳುತ್ತಿರುವ ಕವಿತೆಗಳ ಸಾಮಾನ್ಯ ಚಹರೆಗಳು. ಅದು ಕನ್ನಡಕ್ಕೆ ಸೀಮಿತವಾಗುವ ವಿಚಾರವಲ್ಲ. ನಾನು ಹೆಚ್ಚು ಓದಿಕೊಳ್ಳುತ್ತಿರುವ ಸಮಕಾಲೀನ ಮಲಯಾಳಂ ಕಾವ್ಯವು ಗದ್ಯದ ಒಳಗೆ ಪದ್ಯವನ್ನು ಹೊಸ ನೆಲೆಯಲ್ಲಿ ಶೋಧಿಸುವ ಪ್ರಯತ್ನದಲ್ಲಿದೆ. ಭಾಷಿಕ ರೂಪ ಮತ್ತು ಆಕೃತಿಗಳ ಬಗ್ಗೆ ಅದು ತಲೆ ಕೆಡಿಸಿಕೊಳ್ಳುವುದಿಲ್ಲ. 'ಕವಿತೆ ಹೊಸದಾಗಿರಬೇಕು' ಎಂಬ ನಿಲುವಷ್ಟೇ ಅಲ್ಲಿ ನಿಚ್ಚಳವಾಗಿ ಕಾಣಿಸುತ್ತಿದೆ. ಯಾವುದು ಕತೆ , ಯಾವುದು ಕವಿತೆ ಎಂದು 'ಆಲಿಸಿ ಗುರುತಿಸುವುದು' ಅಲ್ಲಿ ಜಟಿಲವಾದ ಸಂಗತಿ. ವಿಷಯ ಕೊಟ್ಟರೆ ಸಾಕು ಅಲ್ಲೇ ಕವಿತೆ!

ಮೇಲಿನ ಅನಿಸಿಕೆಗಳನ್ನು ಹೇಳಬೇಕೆನಿಸಿತು,ಅಷ್ಟೆ . ಯಾವುದನ್ನೋ ಯೋಚಿಸುವಾಗ ಇವೆಲ್ಲಾ ಬಂದುಹೋದವು.
************************************



ವಿಳಾಸವನ್ನೂ ಕೇಳದೆ ,ಪುಸ್ತಕ ಕಳಿಸುತ್ತಿದ್ದೇನೆ ಎಂದೂ ಹೇಳದೆ, ತಲುಪಿರುವುದನ್ನೂ ಖಾತ್ರಿಪಡಿಸಿಕೊಳ್ಳದೆ(ರಾಮಕೃಷ್ಣ ಸುಗತ ಅವರೂ ಈಚೆಗೆ ಹೀಗೇ ಮಾಡಿದ್ದರು!) ಸುಮ್ಮನೆ ಇರುವ ಪ್ರವೀಣ ಅವರ ಬಾನಸಮುದ್ರಕೆ ಗಾಳನೋಟವನ್ನು ಓದಿದೆ. ಅದರ ಕುರುಹಾಗಿ ಈ ನಾಲ್ಕು ಸಾಲುಗಳು.


" .... ನನ್ನ ಬಹುತೇಕ ಕವಿತೆಗಳನ್ನು ಕಷ್ಟ ಕವಿತೆ, ಕೋಪ ಕವಿತೆ, ಕಟು ಕವಿತೆ ಅಥವಾ ನೋವು ಕವಿತೆಗಳಾಗಿಯೇ ಕಾಣಬಹುದು" ತಮ್ಮ ಕವಿತೆಗಳಿಗೆ ಹೀಗೆ ಮುನ್ನುಡಿ ಬರೆದುಕೊಳ್ಳುವ ಪ್ರವೀಣ 'ಬಾನಸಮುದ್ರಕೆ ಗಾಳನೋಟ' ಸಂಕಲನಕ್ಕೆ ಪ್ರವೇಶವನ್ನು ಒದಗಿಸುತ್ತಾರೆ. ಈ ಚೊಚ್ಚಲ ಹೆರಿಗೆಗಾಗಿ ಅವರು ಕವಿತೆ ಹುಟ್ಟಿದ ನಂತರದ 28 ವರ್ಷಗಳನ್ನು ತೇಯ್ದಿದ್ದಾರೆ. 'ಅಂತೂ ಈ ಗದ್ದಲದಲಿ ಇರಲಿ/ ನನ್ನದೂ ಒಂದು ಕೂಗು' ಎಂದು ನೆಲಬಾನಿನತ್ತ ಗಾಳನೋಟ ಬೀರಿದ್ದಾರೆ.

*
ದುಃಖ ಮತ್ತು ಸಿಟ್ಟನ್ನು ಹಲ್ಲು ಕಚ್ಚಿ ಸಹಿಸುವಾಗಿನ 'ಮೌನ' ಪ್ರವೀಣ ಅವರ ಕವಿತೆಗಳು. ಕವಿತೆಯನ್ನು ಸೃಜಿಸುವುದೆಂದರೆ 'ಮಾತುಗಳು ಹರಿವ ಗಟಾರಿನಲಿ ಮೌನ ಮುತ್ತುಗಳ' ಹುಡುಕುವ ಪರಿ . ಅಲ್ಲಿರುವುದು ಹೊಸತನದ ಹಸಿಮಣ್ಣು. ಹೊಸ ರೂಪಕ ಮತ್ತು ಪ್ರತಿಮೆಗಳು ಅವುಗಳ ಬಾಯಿ:

- ಮಳೆಯ ದಾಳಿಗೆ ಸತ್ತುಬಿದ್ದ ಕಡಲು

-ನೀರ ಬೆಚ್ಚಗಿನ ಎಮ್ಮೆಯಿಲ್ಲದೇ ಚಳಿ ಹಿಡಿದು ನೆಗಡಿ

- ರಾತ್ರಿ ಚಿರಯೌವ್ವನೆ/ಹಗಲು ಹಳಸಿದ ಮುದುಕ

-ಹೊಟ್ಟೆ ಒಲೆಯಲಿ ಅರ್ಧ ಉರಿದ ಒಲವಿನ ಸೌದೆ ಹೊಗೆ ಎಬ್ಬಿಸಿದೆ


ಹೀಗೆ ಪ್ರವೀಣ ಅವರ ಕವಿತೆಗಳು ಯಾರ ಒಳಗೂ 'ಹೊಳೆಯದಿರುವ ಶೂನ್ಯ'ವನ್ನು ಹೊಳೆಯಿಸಿ ತುಂಬಿಕೊಳ್ಳುತ್ತವೆ:

-ಸಾವು ನಿರಂತರ ನಿರ್ಭಯ ನಿರ್ವಸ್ತ್ರ
ಗೆಳತಿಯಂತೆ ಬಂದು
ತಬ್ಬಿಕೊಳ್ಳುತ್ತದೆ

-ನಿನ್ನ ನೆನಪು ನನ್ನ ತೋಳು ಜಗ್ಗುತ್ತದೆ
ನಾನು ಬನೀನು ಕಂಡೀತೆಂದು ಕಾಲರೆಳೆದುಕೊಳ್ಳುತ್ತೇನೆ.
*
ಕವಿತೆ ಹುಟ್ಟುವುದೇ ಹತಾಶೆಯಲ್ಲಿ ಮತ್ತು ಅದನ್ನು ನಿವಾರಿಸಿಕೊಳ್ಳುವ ಹಪಾಹಪಿಯಲ್ಲಿ. ಈ 'ಬಿಡುಗಡೆಗೊಳ್ಳಬಯಸುವ' ಪ್ರಕ್ರಿಯೆಯಲ್ಲಿ ಅಭಿವ್ಯಕ್ತಿಯು philosophical ಆಗಿಬಿಡುತ್ತದೆ:

-ಗವಿಯ ಒಳಗಿನ ಕೊನೆಯಲ್ಲಿ
ಬೆಳಕಿನೂರಿನ ಗಿಡನೆಟ್ಟರೂ
ಹೂವು ಅರಳುವುದೆಂಬ ಕನಸು
ಸಾಕಾರಗೊಳ್ಳುವುದಿಲ್ಲ.

- ಕತೆ ಮುಗಿದ ಮೇಲೆ ನೀತಿ ಹೇಳುತ್ತೀರಿ
ಅರ್ಥವಾಗುವುದೇ ಇಲ್ಲ
ಮೊದಲೇ ಹೇಳಿದ್ದರೆ ಕತೆಯನ್ನಾದರೂ ತಿರುಚಬಹುದಿತ್ತು.

-ಬೆಂಕಿ ಎಂದೂ ಸುಟ್ಟುಕೊಳ್ಳುವುದಿಲ್ಲ
ಸುಡುವುದು ಅದನ್ನು ಹೊತ್ತಿಸಿದ್ದು.

-ನೀನೀಗ ಬೆತ್ತಲಾಗಿ ಬಂದರೂ
ಪ್ರೀತಿ ಹುಟ್ಟುವುದಿಲ್ಲ
ಒಳಗೆ ಬೆಂಕಿ ಹೊತ್ತಿಕೊಳ್ಳದೆ
ಹೊರಗೆ ಬೆಳಕು ಚೆಲ್ಲುವುದಿಲ್ಲ


*

ಛಂದಸ್ಸಿನ ಪ್ರಯೋಗಶೀಲ ಬಳಕೆಯಲ್ಲೂ ಕೆಲವು ಕಡೆಗಳಲ್ಲಿ ಕವಿ ಪ್ರವೀಣರು:

ಪಿಸುಕಿದ ಪರಕಾರದಲಿ ನಗುದುಟಿಯ ಬಣ್ಣ
ನಗುವಿನ ಚಂದ್ರನಿಗೆ ಒಂಟಿ ತಾರೆ ಕಣ್ಣ
ನೋವ ಬಾಣಲೆಯಲಿ ಖುಷಿ ಬಾರೆ ಹಣ್ಣ
ಮಾತಿನ ಮೊರದಲ್ಲಿ ಖೇರು ಎದೆಯ ಹುಣ್ಣ
*

ಸಾಮಾನ್ಯವಾಗಿ ಆಧುನಿಕ ಕವಿತೆಗಳಿಗೆ clarity ಲಭಿಸುವುದು ಕಥನ ಕವನಗಳಿಂದ.ಪ್ರವೀಣ ಅವರ ಕವಿತೆಯೊಳಗಿನ ಕಥೆಗಾರರಿಗೆ ಕತೆ ಮತ್ತು ಕವಿತೆಯನ್ನು ಸಮದೂಗಿಸಿಕೊಂಡು ಹೋಗಬಲ್ಲ ಕಸುವಿರುವುದರಿಂದ- Narration ಸಾಗುತ್ತಿದ್ದಂತೆ ಚಂಗನೆ ಜಿಗಿದು ಹೊಸ ಅರ್ಥ ಹೊಳೆಯಿಸುವಲ್ಲಿ ಯಶ ಕಾಣುತ್ತಾರೆ.

ಉದಾಹರಣೆಗೆ- 1. ಲೂಜ಼್ ಕನೆಕ್ಷನ್ - ಅಸತ್ಯದ ಕಾಲದಲ್ಲಿ ಬೆಳಕು ಹೊತ್ತಿಕೊಳ್ಳುವುದು ಅನ್ಯಾಯದ ಮಾರ್ಗದಿಂದ ಎಂಬುದನ್ನು ಧ್ವನಿಸುವ ಕವಿತೆ. ಇಂದಿನ ವ್ಯಾಪಾರೀಕರಣದ ಸ್ಥಿತಿ. ಬಾಡಿಗೆ ಮನೆ ಎಂಬ ಕಾರಣಕ್ಕಾಗಿ ಹೊಸ ಸ್ವಿಚ್ ತರದೆ ಮತ್ತೊಂದನ್ನು ಕಿತ್ತು ಅಂಟಿಸುವ electricianನ ಕೆಲಸ. ಸ್ವಿಚ್ ಹೋಗಿರುವುದೇ ದೀಪ ಉರಿಯದಿರಲು ಕಾರಣವೆಂದರೂ, ಸುಳ್ಳೇಸುಳ್ಳು ನುಡಿದು ಆದಾಯ ಮಾಡಬಯಸುವ electrician. (ಈ ಕವಿತೆಯಲ್ಲಿ ಪ್ರವೀಣರು ಸರಳವಾಗಿಯೂ ಕವಿತೆಯನ್ನು ಉಸುರಬಲ್ಲರು ಎನ್ನುವುದನ್ನು ತೋರಿಸಿದ್ದಾರೆ)

2. ದಿಕ್ಕಿಲ್ಲದ ಬಯಲಲ್ಲಿ- ರಾಡಿಯೆದ್ದ ವ್ಯವಸ್ಥೆಯೊಂದಿಗೆ ರಾಜಿಮಾಡಿಕೊಳ್ಳುತ್ತಿರುವ ನಾವು. ಮೈಮೇಲೆ ಹಿಕ್ಕೆಹಾಕಿದ ಕಾಗೆಯ ವಿರುದ್ಧದ ಸೇಡು ತೀರಿಸಿಕೊಳ್ಳುವ ನಡಿಗೆ ಕಡೆಗೆ ಕಾಗೆಯೇ ಆಗಿಬಿಡುವ ಸ್ಥಿತ್ಯಂತರ.
*
ಪ್ರವೀಣರ ಕವಿತೆಗಳ ಹೆಚ್ಚುಗಾರಿಕೆಯೆಂದರೆ ಅವು ಇಸಂಗಳ ಕಡೆಗೆ ಚಲಿಸದೆ ಅನ್ನಿಸಿದ್ದನ್ನು ಹೇಳುವ ಮುಗ್ಧತೆಯನ್ನು ಹೊಂದಿರುವುದು. ಎಲ್ಲೂ ಅವು ಖಾಸಗಿ ಸಂಗತಿಗಳಾಗಿ ಉಳಿದುಬಿಡುವುದಿಲ್ಲ. ಅಲ್ಲಿ ಸಾಮಾಜಿಕ ಸಂರಚನೆಯ ಬುಡ ಅಲುಗಾಡುತ್ತಿರುವ, ಮಾನವೀಯ ಕಾಳಜಿಗಳ ಅತ್ಯಗತ್ಯತೆಯ ಕುರಿತ ಸೂಕ್ಷ್ಮ ಗ್ರಹಿಕೆಗಳಿವೆ.
ಇನ್ನೂ simple ಆಗಿ ಹೇಳುತ್ತಾ ಅಪಾರಾರ್ಥವನ್ನು ಮೂಡಿಸಲಿ ಎಂಬುವುದೇ ನನ್ನ ಕೋರಿಕೆ.
*


ಕಾಜೂರು ಸತೀಶ್

No comments:

Post a Comment