ನನ್ನ ಕೆಲವು ಆದರ್ಶ ಗುರುಗಳ ಬಗ್ಗೆ ಅನೇಕ ಕಡೆಗಳಲ್ಲಿ ಹೇಳುತ್ತಾ ಬಂದಿದ್ದೇನೆ. ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಲು ಪ್ರಯತ್ನಿಸಿದ್ದೇನೆ; ಪ್ರಯತ್ತಿಸುತ್ತಿದ್ದೇನೆ.
ಆದರೆ, ನನಗೆ ಸಿಕ್ಕ ಕೆಲವು ಸೋಮಾರಿ ಶಿಕ್ಷಕರ ಬಗ್ಗೆಯೂ ಹೇಳಬೇಕೆನಿಸುತ್ತಿದೆ. ಸಮಾಜವೊಂದು ಆರೋಗ್ಯಕರವಾಗಿರಲು ಒಳ್ಳೆಯ ಶಿಕ್ಷಕರ ಪಾತ್ರ ಎಷ್ಟಿರುತ್ತದೋ, ಕೆಟ್ಟುಹೋಗಲು ಇಂತಹ ಕೆಟ್ಟ ಶಿಕ್ಷಕರ ಪಾಲೂ ಇರುತ್ತದೆ.
ನಾನು ಎರಡನೇ ತರಗತಿಯಲ್ಲಿ ಓದುತ್ತಿದ್ದಾಗ ಯಾವಾಗಲೋ ಒಮ್ಮೆ ತರಗತಿಗೆ ನುಗ್ಗಿ ನಮಗೆಲ್ಲಾ ನಾಲ್ಕು ಬಾರಿಸಿ ಒಂದು ಲೆಕ್ಕ ಮಾಡಿ ಹೊರಟುಹೋಗುತ್ತಿದ್ದ ಆ ಮನುಷ್ಯ ಮತ್ತೆ ಬರುತ್ತಿದ್ದದ್ದು ಮತ್ತೊಂದು ತಿಂಗಳಲ್ಲಿ!
ಕೆಲಸ ಎಂದರೆ ಅಷ್ಟು ಸುಲಭ ಅವರಿಗೆ! ಉಳಿದ ಶಿಕ್ಷಕರಿಗೆ ಕಲಿಸುವ ಹಂಬಲ. ಇವರಿಗೆ ಊರು ಸುತ್ತುವ ಚಟ! ಹಾಗಾಗಿ ನನಗೆ ಗಣಿತವೆಂದರೆ ಪ್ರಾಥಮಿಕ ಶಿಕ್ಷಣ ಮುಗಿಯುವವರೆಗೂ ಕಬ್ಬಿಣದ ಕಡಲೆ.
ಒಮ್ಮೆ ಕಷ್ಟ ಬಂದರೆ ಜೀವನವಿಡೀ ಕಷ್ಟ ಬಾಧಿಸುತ್ತದಂತೆ; ಸುಖ ಬಂದರೆ ಜೀವನವಿಡೀ ಸುಖ. ಇವರ ಕತೆಯೂ ಅಂತಹದ್ದೇ. ಆಗ ಅನುಭವಿಸಿದ ಅದೇ ಸುಖವನ್ನು ಈಗಲೂ ಅನುಭವಿಸುತ್ತಿದ್ದಾರೆ!( ಅವರನ್ನು ನನ್ನ ಗುರುಗಳ ಸಾಲಿನಿಂದ ಎಂದೋ ಕಿತ್ತು ಬಿಸಾಕಿದ್ದೇನೆ).
ಸೋಮಾರಿಗಳು ಯಾವಾಗಲೂ ಸುಖದಿಂದಿರುತ್ತಾರೆ ಎನ್ನುವುದಕ್ಕೆ ಇವರೊಂದು ಉದಾಹರಣೆಯಷ್ಟೆ.
*
ನಾನು ಬೆಳೆದು ದೊಡ್ಡವನಾದ ಮೇಲೆ, ಪುಸ್ತಕಗಳ ಹುಚ್ಚು ಹತ್ತಿದ ಮೇಲೆ, ಮತ್ತಿಬ್ಬರು ಮಹಾಶಯರು ಸಿಕ್ಕರು. ಒಬ್ಬರು ಬರೀ ಸುಳ್ಳು ಹೇಳಿ ತಮ್ಮ ಅವಧಿಯನ್ನು ಮುಗಿಸುತ್ತಿದ್ದರು. ಜೇಬಿನಲ್ಲಿ ಹಸಿರು ಶಾಯಿ ಇರುತ್ತಿದ್ದರೂ ಕಾಗುಣಿತ ಬರುತ್ತಿರಲಿಲ್ಲ. ಅವರ ಪರಮ ಸ್ನೇಹಿತ ಮತ್ತೊಬ್ಬ ವ್ಯಕ್ತಿಯು ನಾಲ್ಕು ಪುಸ್ತಕಗಳನ್ನು ತಂದು ಹುಡುಗಿಯರ ಕಡೆಗೆ ನೋಡುತ್ತಾ ಅದನ್ನು ಓದಿ ಮುಗಿಸುತ್ತಿದ್ದರು. ಆಗೆಲ್ಲ ನಾನು ನನ್ನ ನೋಟ್ ಪುಸ್ತಕದಲ್ಲಿ ಬಂಡಾಯ ಕವಿತೆಗಳನ್ನು ಹಡೆಯುತ್ತಿದ್ದೆ!
*
ಇಷ್ಟಾದರೂ, ಇಂತಹ ಶಿಕ್ಷಕರು 'ನಾನು ಇವರಂತೆ ಕೆಟ್ಟ ಶಿಕ್ಷಕನಾಗಬಾರದು' ಎಂಬ ನಿರ್ಧಾರವನ್ನು ತಳೆಯಲು ಕಾರಣಕರ್ತರಾದರು. ಅದಕ್ಕಾಗಿಯಾದರೂ ಅವರನ್ನು ಅಭಿನಂದಿಸಬೇಕು!
*
-ಕಾಜೂರು ಸತೀಶ್
Really sir. Nangu ansuthe chapli tagandu hodyona antha
ReplyDelete