ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Tuesday, March 17, 2020

ಮಾರ್ಚ್ ತಿಂಗಳ ಕುಲುಮೆ ಮತ್ತು ನಾನು

ಯಾಕೋ ಏನೋ ಈ ಮಾರ್ಚ್ ತಿಂಗಳ ಈ ದಿನದ ಕತ್ತಲಲ್ಲಿ ಚಂದ್ರ ತಣ್ಣಗೆ ಆಕಳಿಸಿ ಅರೆತೆರೆದ ಕಣ್ಣುಗಳಲ್ಲಿ ನಿದ್ರಿಸುತ್ತಿರುವಾಗ, ನಾನಿಲ್ಲಿ ಸಣ್ಣಗೆ ಬೆವರುತ್ತಿರುವಾಗ,ಎರಡು ವರ್ಷಗಳ ಹಿಂದಿನ ಒಂದು ದಶಕದ ಬಿರುಬೇಸಿಗೆಯು ಬಂದು 'ಹೇಗಿದ್ದೀಯ   ಈಗ' ಎಂದು ಕ್ಷೇಮ ವಿಚಾರಿಸಿ ಹೋಯಿತು!

ಮಾರ್ಚ್ ಅಲ್ಲಿ ಕುಲುಮೆಯೊಳಗೆ ಮನೆಮಾಡಿತ್ತು. ನಾನು ಆಕ್ಸಿಜನ್ನಿಗೆ ಹಪಹಪಿಸಿ ವಿಶಾಲವಾಗಿ ಹಬ್ಬಿದ್ದ ಸಸ್ಯರಾಶಿಯ ಹಸಿರು ಮುಖವನ್ನು ದೀನನಾಗಿ ದಿಟ್ಟಿಸುತ್ತಿದ್ದೆ. ಅವಕ್ಕೆ ನನ್ನ ಮೇಲೆ ಕರುಣೆ ಉಕ್ಕುತ್ತಿರಲಿಲ್ಲ. ನಿಂತಲ್ಲಿ , ಕೂತಲ್ಲಿ ಮಂಕಾಗಿ ನಾನು ನಿದ್ದೆಹೋಗುತ್ತಿದ್ದೆ.

ರಾತ್ರಿಯ ಬದುಕು! ಆಹಾ! ಮಲಗುವ ಮುನ್ನ ಒಂದು ಕೊಡ ನೀರನ್ನು ಮಂಚದ ಕೆಳಗೆ ಸುರಿಯುವುದು. ಫ್ಯಾನಿಗೂ ಉಸಿರುಗಟ್ಟುವ ಹಾಗೆ ಅದರ ರೆಕ್ಕೆಗಳನ್ನು ತಿರುಗಿಸವುದು. ವಿದ್ಯುತ್ ಗೊಟಕ್ ಎಂದರೆ ನಿದ್ದೆಗೂ ಅದೇ ಗತಿ!

ಕತ್ತಲಲ್ಲಿ ಒಂದು ಹೆಜ್ಜೆಯನ್ನು ಭೂಮ್ತಾಯಿಯ ಎದೆಯ ಮೇಲಿಡುತ್ತಿದ್ದೇನೆ ಎಂದರೆ ಟಾರ್ಚಿನ ಸಹಾಯ ಬೇಕಿತ್ತು! ಸ್ವಲ್ಪ ಯಾಮಾರಿದರೂ ಮುಲಾಜಿಲ್ಲದೆ ಕುಟುಕಿಬಿಡುತ್ತವೆ ಹಾವುಗಳು! ಕಿಟಕಿಯಲ್ಲಿ, ಬಾಗಿಲಲ್ಲಿ, ಅಂಗಳದಲ್ಲಿ, ಬಚ್ಚಲ ಮನೆಯಲ್ಲಿ ...ಎಲ್ಲೆಲ್ಲೂ ಹಾವುಗಳದ್ದೇ ಪಾರಮ್ಯ! ನಾನು ನನ್ನ ಪಾಡಿಗೆ , ಅವು ಅವುಗಳ ಪಾಡಿಗೆ!
(ಮನುಷ್ಯರಷ್ಟು ಕ್ರೂರಿಯಲ್ಲ ಅವು!)

ತಲೆಯ ಮೇಲೆ ಕಂಡಿದ್ದು, ಕಾಲಡಿಗೆ ಸಿಕ್ಕಿಹಾಕಿಕೊಂಡಿದ್ದು, selfie ತೆಗೆದುಕೊಂಡಿದ್ದು... ಅವೆಲ್ಲಾ ಅಲ್ಲಿನ ಬೆಂಕಿಬಿಸಿಲಿನ ಎದುರು ಮಂಕಾಗಿ ನೆನಪಾಗುತ್ತಿವೆ..
*


ಕಾಜೂರು ಸತೀಶ್ 

No comments:

Post a Comment