ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Monday, March 2, 2020

ಒಂದು ಅಕ್ಷರ ಮತ್ತು ಕಾವಲುಭಟರು

(ಅರ್ಪಣೆ:
 ನನ್ನ statusಗಳಿಗೆ ಕಾದು ಕುಳಿತು, screenshot ತೆಗೆದು,ಕೆಲವರಿಗೆ ಕಳುಹಿಸಿ, ಆ statusನ ಅರ್ಥವನ್ನು  ತಮ್ಮ ಅಲ್ಪ ಓದಿನ ಮಿತಿಯಲ್ಲಿ ವಿವರಿಸಿ, ದ್ವೇಷ ಹುಟ್ಟಿಸಿ, ದೊಡ್ಡವರಾಗುತ್ತಿರುವ,  ನನ್ನ ನಗುಮೊಗದ ಸ್ನೇಹಿತರಿಗೆ!)

ಆಳದಲ್ಲಿ ಭ್ರೂಣಗಟ್ಟಿದ ಅಕ್ಷರವೊಂದನು ಧ್ಯಾನಿಸಿ
ಅಳೆದು ತೂಗಿ ಹಡೆದು ತೇಲಿಬಿಟ್ಟೆ ಮೊಬೈಲಿನಲ್ಲಿ
ಹೂ ಎಸಳಿನಂಥ ಅಕ್ಷರ, ಉಸಿರ ಪರಿಮಳ

ನೇಮಿಸಲಾಗಿದೆ ಅಕ್ಷರ ಹೊರಬರುವುದನೇ ಕಾಯಲು ಕಾವಲುಭಟರ
ಬಂದದ್ದೇ ತಡ ಎದ್ದು ಬಿದ್ದು ಎತ್ತಿಕೊಳುವಾಗ ಹಿಂದಿನಿಂದ ಏನೋ ಒಂದು ಸದ್ದು, ಭಾರಕ್ಕೆ!(ಅದೀಗ ಯಾರದೂ ಅಲ್ಲ)
ಸಾವರಿಸಿಕೊಂಡು ಎತ್ತಿ ತಕ್ಕಡಿಯಲಿಟ್ಟರೆ ರೀಡಿಂಗು ಕೂಡ ಸ್ತಬ್ದ.

ಬೆಳಕಿಗೋಸ್ಕರ ನೇಮಿಸಲ್ಪಟ್ಟ ಕಾವಲುಭಟರು ಕತ್ತಲ ಕಾಯ್ದು
ಬೆಳಕು ಮೂಡುವುದೇ ತಡ ನಿದ್ದೆಗೆ ಬಿದ್ದಿದ್ದಾರೆ.

ಅರ್ಥವಾಗದ ಅಕ್ಷರಕ್ಕೆ screenshot ಮತ್ತು shareಗಳ ಕಚಗುಳಿ



ಮೊದಲ ಕಾವಲುಭಟ ' ಮಹಾಪ್ರಭು ಇದು ನಿಮ್ಮ ಕುರಿತಾದದ್ದೇ' ಎಂದ
ಎರಡನೆಯವ ಮೂರನೆಯವ ನಾಲ್ಕನೆಯವ ಹನ್ನೆರಡನೆಯವ 'ನಂದೂ ಅದೇ'!

ಅಕ್ಷರವೀಗ ಕಟಕಟೆಯಲ್ಲಿದೆ
ಅದರ ಹೆಸರಲ್ಲಿ ಒಂದು ಮಾರುಕಟ್ಟೆ ತೆರೆದಿದೆ
ಭರ್ಜರಿ 24×7 ವ್ಯಾಪಾರ!
*



ಕಾಜೂರು ಸತೀಶ್

(ಚಿತ್ರ ಕೃಪೆ- ಅಂತರ್ಜಾಲ)


No comments:

Post a Comment