ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Saturday, November 28, 2015

ನಿನ್ನೇ ಪ್ರೀತಿಸುವೆ

ತುಂಬಾ ಹಿಂದೆ ಬರೆದಿಟ್ಟಿದ್ದ ಇದು ಇಂದು ನನ್ನ ಕಣ್ಣಿಗೆ ಬಿತ್ತು. ಇದು ಹುಟ್ಟಿಕೊಂಡ ತುರ್ತು ಏನಿದ್ದಿರಬಹುದೆಂದು ಸ್ಪಷ್ಟವಾಗಿ ಹೇಳಲಾಗುತ್ತಿಲ್ಲ . ಸುಮ್ಮನೆ ಇಲ್ಲಿ ಪೋಸ್ಟ್ ಮಾಡುತ್ತಿದ್ದೇನೆ- ನನಗೆ ನಾನೇ ಪತ್ರ ಬರೆದು ಅಂಚೆಯಲ್ಲಿ ಪೋಸ್ಟ್ ಮಾಡುವ ಹಾಗೆ!
---------------------------------------------------------------

ನನ್ನ -ನಿನ್ನ ನಡುವೆ ಕಡಲೊಂದನ್ನು ಬೇಕೆಂದೇ ನಿರ್ಮಿಸಿಕೊಂಡು
ನಿನ್ನನ್ನು ಗಾಢವಾಗಿ ಪ್ರೀತಿಸುತ್ತೇನೆ.
ಅವ್ವ,ದೇವರುಗಳನ್ನು ಪ್ರೀತಿಸಿದ ಹಾಗೆ.


ಈ ಮಳೆ ನಮ್ಮ ಇಟ್ಟಿಗೆಗಳನ್ನು ಒಂದೊಂದೆ ಕೆಡವಿ
ಮನೆಯೆಂಬೊ ಮನೆಯನ್ನೇ ಕೊಡವಿದಾಗ
ನೀನು ಮತ್ತಷ್ಟೂ ಇಷ್ಟವಾದೆ.
ಮಾಳಿಗೆಯ ಆಣಿಯೊಂದು ಕಾಲಿಗೆ ಚುಚ್ಚಿ
'ಆಣಿ'ಯಾಗಿ ಕುಂಟನಾಗಿದ್ದೇನೆ.
ಅದರಿಂದ ಒಸರುವ ತೊಟ್ಟುರಕ್ತ
ನಾನು ನಡೆದುಹೋದ ರಸ್ತೆಯನ್ನು ನಾಯಿಯಂತೆ ಹಿಂಬಾಲಿಸುತ್ತಿದೆ.
ನನ್ನದೇ ಆಸ್ತಿಯೆಂಬಂತೆ ಬೇಲಿ ಹಾಕುತ್ತಿದೆ.



ನಾನು ನಡೆದುಹೋಗುವಾಗ - ನೀನು ಕಾರಿನ ಸ್ವಪ್ನದಲ್ಲೇ ಇರುವಾಗ-
ನನ್ನ ವೀರ್ಯ ಸ್ಖಲನಗೊಳ್ಳಲಿ.
ನನ್ನ ಏದುಸಿರು,ಬೆವರು
ಎಲ್ಲ ಅಕ್ಷರಗಳ ಬಾಯಿಗೆ ಬೀಗ ಜಡಿಯಲಿ.
ಆಮೇಲಿನ ಮೌನದಲ್ಲಿ ನಾನೊಬ್ಬ ರಾಜನಾಗುತ್ತೇನೆ.
ಕಡಲ ಆಚೆಬದಿಯ ಸಾಮ್ರಾಜ್ಯವೇನಿದ್ದರೂ ನಿನ್ನದೇ.


ಘಾಸಿಗೊಂಡ ಬೆನ್ನಹುರಿಯ ಬಲದಲ್ಲಿ ಪಟ್ಟಕಟ್ಟಿದ ಮೇಲೆ
ಪೀಠದ ಮೊಳೆಗಳು ಭೂಕಂಪನವನ್ನು ಉಂಟುಮಾಡುತ್ತವೆ.
ನನ್ನ ಮೈತುಂಬ ಹುಳುವೆದ್ದು
ನನ್ನೊಳಗೊಂದು ಮನೆ ಕಟ್ಟುತಿರಲು
ನಾನೇ ಮನೆಯಾಗುವ ಖುಷಿಯಲ್ಲಿ
ನಿನ್ನನ್ನು ಗಾಢವಾಗಿ ಪ್ರೀತಿಸುತ್ತೇನೆ.


ಎಷ್ಟು ಬಾರಿ ಹ್ರದಯಸ್ತಂಭನಕ್ಕೊಳಗಾದರೂ ನಿನ್ನ ಸೋಕಿದ ಗಾಳಿ
ಕಡಲು ದಾಟುವಾಗ ಭೋರ್ಗರೆದು ನನ್ನ ತಟ್ಟಿ ಬೀಳಿಸುತ್ತದೆ.
ಬಿದ್ದ ಬಲದಲ್ಲಿ ರಕುತ ಮತ್ತೆ ಕಡಲಾಗಿ ಭೋರ್ಗರೆದು
ಹುಟ್ಟುತ್ತಲೇ ಇದ್ದೇನೆ.
ನನ್ನ ಬದುಕಿಸುವ ನಿನ್ನನ್ನು ಮತ್ತೆ ಮತ್ತೆ ಪ್ರೀತಿಸುತ್ತೇನೆ.


ನಿನ್ನ ಒಮ್ಮೆಯೂ ನೋಡದೇ ಸಾಯುವಾಗಲೂ ನಿನ್ನೇ ಪ್ರೀತಿಸುತ್ತೇನೆ.
ನೆಲಕ್ಕುರುಳುವಾಗ ಅಂಗಿಯ ಅಷ್ಟಿಷ್ಟು ಚಿಲ್ಲರೆಗಳು ನರ್ತಿಸುತ್ತವೆ ನಿನ್ನ ನೆನೆದು.
ಕ್ಷಮಿಸು,ಸಾಯುವ ಹೊತ್ತಲ್ಲಿ ಯಾರನ್ನೆಲ್ಲ ನೆನೆಯಲೆಂಬ ತರಾತುರಿಯಲ್ಲಿ
ನಿನ್ನ ಮರೆತುಹೋದರೂ ಹೋದೀತು.


ಆಮೇಲೂ ನಿನ್ನ ಗಾಢವಾಗಿ ಪ್ರೀತಿಸುವುದು ಸುಲಭ.
ದೇಹವಿಲ್ಲದ ಪ್ರೀತಿ ಕಡಲನ್ನು ಕುಡಿದು ಕೂಡುವುದು ಬೇಗ!
**
-ಕಾಜೂರು ಸತೀಶ್

No comments:

Post a Comment