ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Saturday, November 28, 2015

ದಿನಚರಿ -11

ಆ ಕಡೆ ಹೋದಾಗಲೆಲ್ಲ ರಸ್ತೆಯ ಬದಿಯಲ್ಲಿ ಯಾರಾದರೊಬ್ಬರು ವಿಚಿತ್ರ ಭಂಗಿಯಲ್ಲಿ ಬಿದ್ದುಕೊಂಡಿರುತ್ತಾರೆ. ಹಾಗೆ ಬಿದ್ದುಕೊಂಡವರೆಲ್ಲ ಹಳೆಯದೊಂದು ಪಂಚೆಯನ್ನು ತೊಟ್ಟಿರುತ್ತಾರೆ. ಕೆಲವೊಮ್ಮೆ ಭಂಗಿಯಲ್ಲಿ ಸ್ವಲ್ಪ ವ್ಯತ್ಯಾಸವಾದಾಗ ಅವರ ಗುಪ್ತಾಂಗವು ದಾರಿಹೋಕರನ್ನು ನೋಡುತ್ತಾ , ಒಳವಸ್ತ್ರದ ಕೊರತೆಯನ್ನೂ, ಬಡತನವನ್ನೂ ಕವಿತೆಯಂತೆ ಹೇಳುತ್ತಿರುತ್ತದೆ. ಆಗ ಒಳಗೊಳಗೇ ನಕ್ಕು ಮುಖ ತಿರುಗಿಸುವ ದಾರಿಹೋಕರ ದರ್ಶನವಾಗುತ್ತದೆ.


ನಮ್ಮ ಸರ್ಕಾರಗಳು ಯಾವುದನ್ನು 'ಅಭಿವೃದ್ಧಿ' ಎಂದುಕೊಂಡಿವೆ? ಜನ ಹೀಗೆ ಹೊಟ್ಟೆ ತುಂಬುವಂತೆ ಕುಡಿದಾಗ ಅದರ ಖಜಾನೆ ತುಂಬುವುದೇನೋ ನಿಜ. ಆದರೆ 'ಸುಖೀ ರಾಜ್ಯ'ದ ಕಲ್ಪನೆ ಸಾಕಾರಗೊಳ್ಳುವುದಾದರೂ ಹೇಗೆ? ಹಾಗೆ ಎಲ್ಲವನ್ನೂ ತೋರಿಸುತ್ತಾ ರಸ್ತೆಯಂಚಲ್ಲಿ ಮಲಗಿರುವವರು ಬಡತನದ ಬೇಗೆಯಿಂದ ಬೇಯುತ್ತಿರುವವರು. ಅವರನ್ನೇ ನಂಬಿಕೊಂಡಿರುವ ಅವರ ಮನೆಮಂದಿಯ ಕಥೆಯಾದರೂ ಏನಾಗಬೇಡ?

ನಾನು ಹೈಸ್ಕೂಲಿನಲ್ಲಿದ್ದಾಗ, ಮೊದಲ ಬಾರಿಗೆ ಕುಡಿದು ಶಾಲೆಯ ಸಮೀಪದ ಪೊದೆಯಲ್ಲಿ ಬಿದ್ದಿದ್ದ ಗೆಳೆಯ ಶಶಿಕುಮಾರನ ಚಿತ್ರ ಕಣ್ಣಿಗೆ ಅಂಟುತ್ತದೆ. ಕುಡಿತದಿಂದ ಬೀದಿಪಾಲಾದ ಕುಟುಂಬಗಳ ಸಂಖ್ಯೆಯಂತೂ ಬೀದಿಗೇ ನೆನಪಿರುವುದಿಲ್ಲ.

ತಂಬಾಕು, ಮದ್ಯಪಾನದ ಸಂಪೂರ್ಣ ನಿಷೇಧದಿಂದ ಸ್ವಲ್ಪಮಟ್ಟಿಗಾದರೂ ಆರ್ಥಿಕ ಸಮಾನತೆಯನ್ನು ಸಾಧಿಸಬಹುದೇನೋ. ದುರಂತವೆಂದರೆ, ನಮ್ಮ ರಾಜಕಾರಣದ ಬೇರಿಗೆ ಇದರ ಅಗತ್ಯವಿರುವುದರಿಂದ ಯಾವ ಟೊಂಗೆಯನ್ನೂ, ಗೂಡುಗಳನ್ನು ಅಷ್ಟು ಸುಲಭವಾಗಿ ಅದು ಕಳೆದುಕೊಳ್ಳಲು ಇಷ್ಟಪಡುವುದಿಲ್ಲ!
**
-ಕಾಜೂರು ಸತೀಶ್

ನಿನ್ನೇ ಪ್ರೀತಿಸುವೆ

ತುಂಬಾ ಹಿಂದೆ ಬರೆದಿಟ್ಟಿದ್ದ ಇದು ಇಂದು ನನ್ನ ಕಣ್ಣಿಗೆ ಬಿತ್ತು. ಇದು ಹುಟ್ಟಿಕೊಂಡ ತುರ್ತು ಏನಿದ್ದಿರಬಹುದೆಂದು ಸ್ಪಷ್ಟವಾಗಿ ಹೇಳಲಾಗುತ್ತಿಲ್ಲ . ಸುಮ್ಮನೆ ಇಲ್ಲಿ ಪೋಸ್ಟ್ ಮಾಡುತ್ತಿದ್ದೇನೆ- ನನಗೆ ನಾನೇ ಪತ್ರ ಬರೆದು ಅಂಚೆಯಲ್ಲಿ ಪೋಸ್ಟ್ ಮಾಡುವ ಹಾಗೆ!
---------------------------------------------------------------

ನನ್ನ -ನಿನ್ನ ನಡುವೆ ಕಡಲೊಂದನ್ನು ಬೇಕೆಂದೇ ನಿರ್ಮಿಸಿಕೊಂಡು
ನಿನ್ನನ್ನು ಗಾಢವಾಗಿ ಪ್ರೀತಿಸುತ್ತೇನೆ.
ಅವ್ವ,ದೇವರುಗಳನ್ನು ಪ್ರೀತಿಸಿದ ಹಾಗೆ.


ಈ ಮಳೆ ನಮ್ಮ ಇಟ್ಟಿಗೆಗಳನ್ನು ಒಂದೊಂದೆ ಕೆಡವಿ
ಮನೆಯೆಂಬೊ ಮನೆಯನ್ನೇ ಕೊಡವಿದಾಗ
ನೀನು ಮತ್ತಷ್ಟೂ ಇಷ್ಟವಾದೆ.
ಮಾಳಿಗೆಯ ಆಣಿಯೊಂದು ಕಾಲಿಗೆ ಚುಚ್ಚಿ
'ಆಣಿ'ಯಾಗಿ ಕುಂಟನಾಗಿದ್ದೇನೆ.
ಅದರಿಂದ ಒಸರುವ ತೊಟ್ಟುರಕ್ತ
ನಾನು ನಡೆದುಹೋದ ರಸ್ತೆಯನ್ನು ನಾಯಿಯಂತೆ ಹಿಂಬಾಲಿಸುತ್ತಿದೆ.
ನನ್ನದೇ ಆಸ್ತಿಯೆಂಬಂತೆ ಬೇಲಿ ಹಾಕುತ್ತಿದೆ.



ನಾನು ನಡೆದುಹೋಗುವಾಗ - ನೀನು ಕಾರಿನ ಸ್ವಪ್ನದಲ್ಲೇ ಇರುವಾಗ-
ನನ್ನ ವೀರ್ಯ ಸ್ಖಲನಗೊಳ್ಳಲಿ.
ನನ್ನ ಏದುಸಿರು,ಬೆವರು
ಎಲ್ಲ ಅಕ್ಷರಗಳ ಬಾಯಿಗೆ ಬೀಗ ಜಡಿಯಲಿ.
ಆಮೇಲಿನ ಮೌನದಲ್ಲಿ ನಾನೊಬ್ಬ ರಾಜನಾಗುತ್ತೇನೆ.
ಕಡಲ ಆಚೆಬದಿಯ ಸಾಮ್ರಾಜ್ಯವೇನಿದ್ದರೂ ನಿನ್ನದೇ.


ಘಾಸಿಗೊಂಡ ಬೆನ್ನಹುರಿಯ ಬಲದಲ್ಲಿ ಪಟ್ಟಕಟ್ಟಿದ ಮೇಲೆ
ಪೀಠದ ಮೊಳೆಗಳು ಭೂಕಂಪನವನ್ನು ಉಂಟುಮಾಡುತ್ತವೆ.
ನನ್ನ ಮೈತುಂಬ ಹುಳುವೆದ್ದು
ನನ್ನೊಳಗೊಂದು ಮನೆ ಕಟ್ಟುತಿರಲು
ನಾನೇ ಮನೆಯಾಗುವ ಖುಷಿಯಲ್ಲಿ
ನಿನ್ನನ್ನು ಗಾಢವಾಗಿ ಪ್ರೀತಿಸುತ್ತೇನೆ.


ಎಷ್ಟು ಬಾರಿ ಹ್ರದಯಸ್ತಂಭನಕ್ಕೊಳಗಾದರೂ ನಿನ್ನ ಸೋಕಿದ ಗಾಳಿ
ಕಡಲು ದಾಟುವಾಗ ಭೋರ್ಗರೆದು ನನ್ನ ತಟ್ಟಿ ಬೀಳಿಸುತ್ತದೆ.
ಬಿದ್ದ ಬಲದಲ್ಲಿ ರಕುತ ಮತ್ತೆ ಕಡಲಾಗಿ ಭೋರ್ಗರೆದು
ಹುಟ್ಟುತ್ತಲೇ ಇದ್ದೇನೆ.
ನನ್ನ ಬದುಕಿಸುವ ನಿನ್ನನ್ನು ಮತ್ತೆ ಮತ್ತೆ ಪ್ರೀತಿಸುತ್ತೇನೆ.


ನಿನ್ನ ಒಮ್ಮೆಯೂ ನೋಡದೇ ಸಾಯುವಾಗಲೂ ನಿನ್ನೇ ಪ್ರೀತಿಸುತ್ತೇನೆ.
ನೆಲಕ್ಕುರುಳುವಾಗ ಅಂಗಿಯ ಅಷ್ಟಿಷ್ಟು ಚಿಲ್ಲರೆಗಳು ನರ್ತಿಸುತ್ತವೆ ನಿನ್ನ ನೆನೆದು.
ಕ್ಷಮಿಸು,ಸಾಯುವ ಹೊತ್ತಲ್ಲಿ ಯಾರನ್ನೆಲ್ಲ ನೆನೆಯಲೆಂಬ ತರಾತುರಿಯಲ್ಲಿ
ನಿನ್ನ ಮರೆತುಹೋದರೂ ಹೋದೀತು.


ಆಮೇಲೂ ನಿನ್ನ ಗಾಢವಾಗಿ ಪ್ರೀತಿಸುವುದು ಸುಲಭ.
ದೇಹವಿಲ್ಲದ ಪ್ರೀತಿ ಕಡಲನ್ನು ಕುಡಿದು ಕೂಡುವುದು ಬೇಗ!
**
-ಕಾಜೂರು ಸತೀಶ್

Thursday, November 26, 2015

ಗಾಯದ ಹೂವುಗಳ ಕುರಿತು ಧನಂಜಯ್ ಮಡಿಕೇರಿ ಅವರ ನುಡಿ

ಗಾಯದ ಹೂವುಗಳು ಮತ್ತು ನಲ್ಮೆಯ ಸತೀಶ್......
-------------------------------------------------------------

ಕಾಜೂರು ಶಾಲೆ ಹತ್ತಿರ ಇರುವ ಪಶುವೈದ್ಯ ಶಾಲೆ ಬಳಿ ಆಲದ ಮರವಿದೆ ಅದರ ಬೇರುಗಳನ್ನು ಹಿಡಿದು ಉಯ್ಯಾಲೆ ಆಡಿದ ನೆನಪು ಮಾತ್ರ ನನಗೆ ಇರುವುದು. ಆದರೆ ನೀವು ಮರವನ್ನೇರಿ ಅದರ ಶೃಂಗದಲ್ಲಿ ನಿಂತು ಹೊರ ಜಗತ್ತನ್ನು ನೋಡಿದ ರೀತಿ ಮಾತ್ರ ಅದ್ಭುತ. ಹಾಗಂತ ನಿಮ್ಮ ಗಾಯದ ಹೂವುಗಳು ನನ್ನಲ್ಲಿ ಪಿಸುಗುಟ್ಟಿದವು. ಗಾಯದ ಹೂವುಗಳು ಕವನ ಸಂಕಲನ ನಿಮ್ಮ ದೈನಂದಿನ ಗೆಳೆಯರು ಯಾರು ? ನಿಮ್ಮ ಆದ್ಯತೆ ಏನು ಎನ್ನುವುದನ್ನು ನನಗೆ ಅರ್ಥೈಸಿದೆ.


ಇರುವೆಯ ಮೂಲಕ ಪ್ರಾರಂಭವಾಗುವ ನಿಮ್ಮ ಕವಿತೆ ಎಲ್ಲಾ ಕಡೆ ಇರುವೆ ಎನ್ನುವ ಸಂದೇಶದೊಂದಿಗೆ ಅದು ಊದುಗೊಳವೆ, ಖಾಲಿ ಡಬ್ಬ, ಚಪ್ಪಲಿಗಳು ಏನೇ ಆಗಿರಲಿ ಅದನ್ನು ನಿಮ್ಮ ಬರವಣಿಗೆ ಮೂಲಕ ಸ್ಪರ್ಶಿಸಿದ ರೀತಿ ಅದ್ಭುತವಾಗಿದೆ. ಕವಿತೆಗಳು ಅಸ್ವಸ್ಥವಾಗಿವೆ ವೈದ್ಯನಿಗೆ ಕೊಡಲು ಕಾಸಿಲ್ಲದೆ ಹಾಸಿಗೆಯ ಮೇಲೆ ನರಳುತ್ತಲೇ ಇವೆ ಎನ್ನುವುದು ನಿಮ್ಮ ಹೃದಯ ವಿಶಾಲತೆ ಅಲ್ಲದೆ ಬೇರೇನು ? ಇರಬಹುದು ನಿನ್ನೆ ಹುಟ್ಟಿದ್ದನ್ನು ಬೀದಿಯಲ್ಲಿ ಮೊನ್ನೆ ಹುಟ್ಟಿದ್ದನ್ನು ಚರಂಡಿಯಲ್ಲಿ ಎಸೆದಿರಬಹುದು. ಅದಕ್ಕೂ ಹಿಂದಿನದನ್ನು ಪೆನ್ನು ಇಂಕುಗಳೊಂದಿಗೆ ಬೆಂಕಿ ಹಚ್ಚಿ ಸುಟ್ಟಿರಬಹುದು. ಅದು ಅತಿಯಾಗಿ ಗಾಯಗೊಂಡವೇ ? ಎನ್ನುವುದು ನನ್ನ ಸಾತ್ವಿಕ ಪ್ರಶ್ನೆ. ಹಾಗಾದರೆ ಗಡಿನಾಡ ಸಂಚಾರಿ, ಶಕ್ತಿ, ವಿಜಯ ಕರ್ನಾಟಕ, ಕನ್ನಡ ಪ್ರಭ, ಉದಯವಾಣಿ, ಅವಧಿ, ಪಂಜು ಮುಂತಾದ ಕಡೆ ನುಸುಳಿದವು ಗಾಯದ ಹೂವುಗಳು ಅಲ್ಲವೇ.? ಹೌದು, ಅವೆಲ್ಲವೂ ಗಾಯದ ಹೂವುಗಳೇ. ಅದನ್ನು ಸಾಹಿತ್ಯ ಲೋಕಕ್ಕೆ ಸಮರ್ಪಿಸಿದ್ದೀರಿ. ಮುಲಾಮು ಹಚ್ಚುವವರು ಹಚ್ಚಲಿ ? ಕೆರೆದು ಗಾಯ ಮಾಡುವವರು ಮಾಡಲಿ ತಪ್ಪೇನು.?


ನಿಮ್ಮ ಕಾವ್ಯ ಕೃಷಿಯಲ್ಲಿ ನನಗೆ ಕಂಡಿದ್ದು ಸೂಕ್ಷ್ಮತೆ, ಬದುಕಿನ ಪದರುಗಳನ್ನು ನೀವು ಪ್ರವೇಶಿಸಿದ ರೀತಿ, ಅದರ ಒಳಹೊಕ್ಕು ನೋಡಿದ ರೀತಿ ಮತ್ತು ಅನಾವರಣಗೊಳಿಸಿದ ಶೈಲಿ, ಅನುಭವ, ಕೋಮಲತೆ, ತೀಕ್ಷ್ಣತೆ ಮತ್ತು ಕಾವ್ಯ ಕೃಷಿಯಲ್ಲಿ ನಿಮಗಿರುವ ಪ್ರಬುದ್ಧತೆ, ಭಕ್ತಿ ಎಲ್ಲವನ್ನು ನಾನು ಕಂಡೆ.


ಸಾಹಿತ್ಯ ಲೋಕದ ಜನಪ್ರಿಯ ಕವಿಗಳ ಸಾಲಿಗೆ ಸೇರುವ ಎಲ್ಲಾ ರೀತಿಯ ಅರ್ಹತೆ ಮತ್ತು ಸಾಮರ್ಥ್ಯ ಗಾಯದ ಹೂವುಗಳಿಗೆ ಇದೆ. ಆ ಮೂಲಕ ಕವಿಯಾದ ನಿಮಗೂ ಇದೆ ಎಂದು ಸಾಕ್ಷೀಕರಿಸಿದ್ದೀರಿ. ಗಾಯದ ಹೂವುಗಳ ಬುಟ್ಟಿಯಲ್ಲಿ ಭಾಷೆ, ಮಣ್ಣಿನ ಸತ್ವ, ಪ್ರಕೃತಿಯ ವೈಭವ, ಹಕ್ಕಿಗಳ ಚಿಲಿಪಿಲಿ, ಪ್ರತಿಭಟನೆ, ಆಧುನಿಕ ಬದುಕು, ಅದರೊಳಗಿನ ಜಟಿಲತೆ, ಕುಟಿಲತೆ ಎಲ್ಲವೂ ಅನಾವರಣಗೊಳಿಸುವ ನಿಮ್ಮ ಶ್ರಮ ಇಷ್ಟವಾಯಿತು. ಪ್ರಕೃತಿ ಮತ್ತು ಮನುಷ್ಯನ ನಡುವೆ ನಿಂತು ಜಗತ್ತನ್ನು ನೋಡಿದ ದೃಷ್ಟಿಕೋನ ನನಗೆ ಒಟ್ಟಾರೆ ನಿಮ್ಮ ಕವನ ಸಂಕಲನ ಓದಿಕೊಂಡು ಹೋದಾಗ ಇಷ್ಟವಾಗಿದ್ದು. ಕವಿತೆಯನ್ನು ಕ್ಲಿಷ್ಟತೆಯ ಗೂಡಾಗಿಸದೆ ಇಷ್ಟವಾಗಿ ಓದಿಕೊಂಡು ಹೋಗುವಂತೆ ಮಾಡಿದ ನಿಮ್ಮ ಶ್ರಮ ಸಾರ್ಥಕವಾಗಿದೆ . ನಿಮ್ಮ ಲೇಖನಿಯಿಂದ ಹೆಚ್ಹು ಹೆಚ್ಚು ಕವಿತೆಗಳು ಮೂಡಲಿ ಬದುಕು ಸುಂದರವಾಗಿರಲಿ.
**

ಧನಂಜಯ್ ಮಡಿಕೇರಿ

Monday, November 23, 2015

'ಗಾಯದ ಹೂವುಗಳು' ಕುರಿತು ಬಸೂ ಅವರ ಮಾತು

ಗೆಳೆಯ ಕಾಜೂರು ಸತೀಶ್ ರ 'ಗಾಯದ ಹೂಗಳು' ಕವನ ಸಂಕಲನ ಇಂದು ತಲುಪಿತು. ಸಂಕಲನದ ಹೆಸರೇ ನನ್ನೊಳಗೊಂದು ತಲ್ಲಣ ಹುಟ್ಟಿಸಿದೆ. ಸಂಕಲನವನ್ನು ಮುಟ್ಟುವಾಗ ಬೆರಳು ಸುಮ್ಮನೆ ಕಂಪಿಸುತ್ತಿದ್ದವು. ಎದೆಯೊಳಗೆ ಯಾವುದೊ ಸಂಕಟ ಎದ್ದುಬಂದ ಹಾಗೆ ತಳಮಳ. ಅದು ತುಂಬ ಆಳಕ್ಕಿಳಿಯಿತು. ಒಂದೆರಡು ಕವಿತೆಗಳನ್ನಷ್ಟೆ ಓದಲು ಸಾಧ್ಯವಾಗಿದೆ. ಕಣ್ಮುಚ್ಚಿ ಧ್ಯಾನಸ್ಥವಾಗುವ ಮನಸು ಓದು ಮುಂದುವರೆಸಲು ಒಪ್ಪುತ್ತಿಲ್ಲ.



ಸತೀಶ್ ನಮ್ಮ ನಡುವಿನ ತುಂಬ ಭರವಸೆಯ ಯುವಕವಿ. ಎಫ್ ಬಿ ಮೂಲಕವೆ ಪರಿಚಯವಾದ ಅವರ ಸಾಲು ಎಷ್ಷು ತಾಕಿದ್ದವು ಎಂದರೆ ಕಳೆದ ಸಲ ಹಾವೇರಿಯಲ್ಲಿ ನಾವು ಸಂಘಟಿಸಿದ ಮೇ ಸಾಹಿತ್ಯ ಮೇಳದಲ್ಲಿ ಕವಿತೆ ಓದಲು ಅವರನ್ನು ಕರೆಯಿಸಿಕೊಂಡಿದ್ದೆ. ಮೌನವಾಗಿ ಗಾಢವಿಷಾಧವನ್ನು ಗುಲ್ಜಾರರಷ್ಟೆ ಅವರು ಕನ್ನಡದಲ್ಲಿ ಸಶಕ್ತವಾಗಿ ಕಟ್ಟಿಕೊಡಬಲ್ಲರು.


ಈ ರಾತ್ರಿಗೆ ನಾನು ಅವರ ಗಾಯದ ಹೂಗಳೊಂದಿಗಿರುವೆ. ಗಾಯಗೊಳಿಸದೆ ಕವಿತೆ ಓದಿಸಲು ಅವರಿಗೆ ಬರುವುದಿಲ್ಲ. ಹಿಂಸೆ ಮತ್ತು ಉನ್ಮಾದದ ಉತ್ಪಾದನೆಯಲ್ಲಿ ರಾಜ್ಯದ ಕೆಲ ಶಕ್ತಿಗಳು
ಮುಳುಗಿರುವ ಸಮಯದಲ್ಲಿ ಈ ಕವಿ ತಾನು ಗಾಯಗೊಂಡು ಲೋಕವನ್ನು ಮಾನವೀಯವಾಗಿಸಲು ಅಕ್ಷರಗಳನ್ನು ಒಳಗಿಳಿಸಿಕೊಂಡಿದ್ದಾರೆ. ಈ ಕವಿಗೊಂದು ಶರಣು.
*

-ಬಸೂ

Saturday, November 21, 2015

'ಗಾಯದ ಹೂವುಗಳು' ಕುರಿತು ಟಿ.ಕೆ.ತ್ಯಾಗರಾಜ್ ಅವರ ಅನಿಸಿಕೆ

ನನ್ನ ಜಿಲ್ಲೆಯ ಪ್ರೀತಿಯ ಗೆಳೆಯ,ಪ್ರತಿಭಾವಂತ ಕವಿ ಕಾಜೂರು ಸತೀಶ್ ತಮ್ಮ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ ಪಡೆದ "ಗಾಯದ ಹೂವುಗಳು" ಕವನ ಸಂಕಲನವನ್ನು ನೆನಪಿಟ್ಟು ಕಳಿಸಿಕೊಟ್ಟಿದ್ದಾರೆ.ಸುಂದರವಾದ ಮುಖಪುಟವಷ್ಟೇ ಅಲ್ಲ.ನಿಮ್ಮೆದೆಯ ಕದ ತಟ್ಟ ಬಲ್ಲ ಕವನಗಳ ಬುತ್ತಿಯನ್ನೇ ಕಟ್ಟಿ ಕೊಟ್ಟಿದ್ದಾರೆ.


"ನೀನು ನನ್ನ ಜತೆ ಬದುಕಿಕೊಳ್ಳಬಹುದು" ಎಂಬ ಕವನದಲ್ಲಿ ಅವರು ಹೇಳುತ್ತಾರೆ :


ನನ್ನ ಪಕ್ಕೆಲುಬುಗಳನ್ನು ಕಿತ್ತು
ಪಂಜರವಾಗಿಸುತ್ತೇನೆ
ನೀನದರ ಹೊರಗೆ ಹಾರಾಡಿಕೊಂಡಿರಬಹುದು.
.......
.......
ನನ್ನ ಕಣ್ಣ ಕೆಂಪನ್ನು ಬಸಿದು
ಹೂವೊಂದನ್ನು ಸೃಷ್ಟಿಸುತ್ತೇನೆ
ನೀನದನ್ನು ಮುಡಿಗೇರಿಸಿಕೊಳ್ಳಬಹುದು.

ಇನ್ನೊಂದು ಪದ್ಯ "ಇನ್ನೂ ಬದುಕಿರುವ ಕವಿತೆಗಳು" ವಿನಲ್ಲಿ ಅವರು ಹೇಳುತ್ತಾರೆ :
ಜೀವ ಚಡಪಡಿಸುವ ಹೊತ್ತಲ್ಲಿ
ವೈದ್ಯರ ಬಳಿ ಹೋದೆ
ಹರಿದ ನನ್ನ ಜೇಬು ತಡಕಾಡಿದರು.
ಹೊರ ಬರುವ ಹೊತ್ತಲ್ಲಿ
ಜೇಬಿನ ತುತ್ತ ತುದಿಯ ದಾರಕ್ಕೆ
ಪದ್ಯಗಳು ಜೋತು ಬಿದ್ದಿದ್ದವು.
ಅದರ ಬಲದಲ್ಲಿ
ನಾನೀಗಲೂ ಬದುಕಿಕೊಂಡಿದ್ದೇನೆ.
...........
ಅವರ ಕಾವ್ಯ ಪ್ರತಿಭೆಗೆ ಎರಡು ಉದಾಹರಣೆಗಳನ್ನಷ್ಟೇ ನಾನು ನಿಮ್ಮ ಮುಂದಿರಿಸಿದ್ದೇನೆ. ಬೆಂಗಳೂರಿನ ಫಲ್ಗುಣಿ ಪುಸ್ತಕ ಈ ಸಂಕಲನವನ್ನು ಪ್ರಕಟಿಸಿದೆ.ಹೊಸ ತಲೆಮಾರಿನ ಸಂವೇದನೆ ನಿಮಗೂ ಇಷ್ಟವಾಗುತ್ತದೆ.
**

ಟಿ.ಕೆ.ತ್ಯಾಗರಾಜ್

ನಡೆದೂ ಮುಗಿಯದ ಹಾದಿ

ಕಂಡುಂಡದ್ದನ್ನು ತಮ್ಮ ಪಾಡಿಗೆ ತಾವು ಬರೆದು ಹಗುರಾಗುವ ಮಾರುತಿ ದಾಸಣ್ಣವರ ಸರ್ ,ಈಚೆಗೆ 'ನಡೆದೂ ಮುಗಿಯದ ಹಾದಿ' ಎಂಬ ತಮ್ಮ ಎರಡನೆಯ ಕವನ ಸಂಕಲನವನ್ನು ಹೊರತಂದರು.



ಮಾರುತಿ ಸರ್ ಅವರ ಪರಿಚಯ ನನಗಾದದ್ದು ಅವರ ಕವಿತೆಗಳ ಮೂಲಕ. ಒಂದು ದಶಕದ ಹಿಂದೆ 'ಮಯೂರ ಕಲ್ಪನೆ ' ವಿಭಾಗದಲ್ಲಿ ಬೆಳಗಾವಿ ಕನ್ನಡದ ಸಮರ್ಥ ಬಳಕೆಯೊಂದಿಗೆ ಕಟ್ಟುತ್ತಿದ್ದ ಕವಿತೆ ಮತ್ತು ಅದಕ್ಕೂ ಮಿಗಿಲಾಗಿ ,ಅದರ ಕೆಳಗೆ ಬರೆದುಕೊಳ್ಳುತ್ತಿದ್ದ 'ಗಾಳಿಬೀಡು' ಎಂಬ ಊರು . ಇವು ಪರಿಚಯದ ಹಿಂದಿರುವ ಕಾರಣಗಳು.



ಇಷ್ಟಾದರೂ ನಾನವರನ್ನು ಮೊದಲು ನೋಡಿದ್ದು ಫೆಬ್ರವರಿ 16, 2009ರಲ್ಲಿ. ಭಾಗಮಂಡಲದಲ್ಲಿ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ . ಆ ದಿನ ಅವರು 'ಯಾರೋ ಒಬ್ಬ ಮುದುಕ ' ಎಂಬ ಕವಿತೆಯನ್ನು ಓದಿದ್ದರು. ಅಲ್ಲೂ ನಾನವರನ್ನು ಮಾತನಾಡಿಸಿರಲಿಲ್ಲ! ಮತ್ತೆ 2011,ಜನವರಿ 27ರಂದು ಪದವಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಸ್ಪರ್ಧಾ ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ ನಾವಿಬ್ಬರು ಪರಸ್ಪರ ಪರಿಚಯ ಮಾಡಿಕೊಂಡೆವು.



ಅದಾದ ಮೇಲೆ ಅವರು ಮಡಿಕೇರಿ ಬಸ್ ನಿಲ್ದಾಣದಲ್ಲಿ ಸಿಕ್ಕಾಗ ವರ್ಗಾವಣೆಯ ನಿಮಿತ್ತ ಕೌನ್ಸಿಲಿಂಗಿಗೆ ಹೈದರಾಬಾದ್ ಹೊರಟಿದ್ದೇನೆ ಎಂದಿದ್ದರು. ಸ್ವಲ್ಪ ದಿನಗಳ ನಂತರ ಅವರದೇ ಶಾಲೆಯಲ್ಲಿ ತಾಲ್ಲೂಕು ಸಾಹಿತ್ಯ ಸಮ್ಮೇಳನ ನಡೆದರೂ,ಅವರ ಉಪನ್ಯಾಸ ಕೇಳಿದರೂ ,ಮಾತನಾಡಿಸಲಾಗಲಿಲ್ಲ!



ಸದ್ಯ ಮಾರುತಿ ಸರ್ ಉತ್ತರ ಪ್ರದೇಶದ ಕೌಶಾಂಬಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.



ಮೊನ್ನೆ , 'ನಡೆದೂ ಮುಗಿಯದ ಹಾದಿ'ಯನ್ನು ಪ್ರೀತಿಯಿಂದ ಕಳುಹಿಸಿಕೊಟ್ಟಾಗ ಇಷ್ಟೆಲ್ಲಾ ನೆನಪಾಯಿತು . ಇಂಥ ಸೂಕ್ಷ್ಮಗಳನ್ನು ಈ ಕಾಲದ ತುರ್ತು ಎಂದುಕೊಂಡು ಇಲ್ಲಿ ಹೇಳಿಕೊಳ್ಳುತ್ತಿದ್ದೇನೆ.ಮತ್ತೂ ಆಶ್ಚರ್ಯವೆಂದರೆ,ಅವರು ಪುಸ್ತಕದಲ್ಲಿ ನನ್ನನ್ನು ನೆನಪುಮಾಡಿಕೊಂಡಿದ್ದಾರೆ.ಪುಸ್ತಕ ತಲುಪಿ ಇಷ್ಟು ದಿನಗಳಾದರೂ ,ತಲುಪಿರುವ ಕುರಿತು ಇನ್ನೂ ಏನೂ ಹೇಳದ ನನಗೆ ,
ಪಾಪಪ್ರಜ್ಞೆ ಹೆಗಲೇರಿಕೊಂಡಿದೆ.

*

ಬದುಕಿದಂತೆ,ಬದುಕುವಂತೆ ಬರೆಯುವ ('ನನ್ನ ಪಾಡೂ ಹಾಡಾಗಲಿ') ಬರೆಯುವ ಮಾರುತಿ ದಾಸಣ್ಣವರ ಸರ್,ತಮ್ಮ ಬದುಕನ್ನು ಕಾವ್ಯದ ಮೂಲಕ ಉಸಿರಾಡುವವರು.ಹಾಗೆಂದು ಅದನ್ನು ಖಾಸಗಿಯಾಗಿಸದೆ ತಮ್ಮ ಅನುಭವ ದರ್ಶನವನ್ನು ಸಾಂಸ್ಕೃತಿಕವಾಗಿ,ಮೌಲಿಕವಾಗಿ ದಾಟಿಸಬಲ್ಲವರು.



ಅವರ ಕವಿತೆಗಳಲ್ಲಿ ಇಣುಕುವ ಅಪ್ಪನ ಬದುಕಿನ ಮಾರ್ಗವೇ ಒಟ್ಟು ಸಮಾಜದ ಭಿನ್ನ ಸ್ತರಗಳನ್ನೂ,ಅವರ ಶೋಚನೀಯ ಸ್ಥಿತಿಗತಿಗಳನ್ನೂ ಬಿಂಬಿಸುವ ದರ್ಪಣ.(ಶ್ರೀಮಂತ ,ಬಡವ,ಕಲಾವಿದ ,ಹೆಡ್ಡ,ದೊಡ್ಡ ಕುಳ,ಗುಲಾಮ ). ಅಮ್ಮ ಇಲ್ಲಿ ಪ್ರಚಂಡ ಇಚ್ಛಾಶಕ್ತಿಯೊಂದಿಗೆ ಶಿಲ್ಪಿಯ ಉಳಿಪೆಟ್ಟಿಗೆ ಸದಾ ಮೈಯ್ಯೊಡ್ಡಿ ಕೂತ ಸಹನಶೀಲೆ.



ನನ್ನನ್ನು ಕಾಡುವುದು- ಮಾರುತಿ ಸರ್ ಅವರ ಕವಿತೆಗಳ ಪ್ರಾಮಾಣಿಕತೆ . ಇಲ್ಲಿನ ಅನೇಕ ಕವಿತೆಗಳಲ್ಲಿ ಕಾಲದ,ಸಂಬಂಧದ ಸೂಕ್ಷ್ಮಗಳು ನವಿರಾಗಿ ತೆರೆದುಕೊಳ್ಳುತ್ತವೆ.



ಅಪ್ಪ ಅವ್ವಂದಿರ ಸಂತೆಯ ಗಂಟು /
ಬಿಚ್ಚಿ ಹೋಗಿತ್ತೇ,ಹರಿದು ಹೋಗಿತ್ತೇ/
ಚುರುಮುರಿ ಬಟಗಡಲೆ/
ಬಿದ್ದಿವೆ ಅಲ್ಲಲ್ಲಿ.[ನಡೆದೂ ಮುಗಿಯದ ಹಾದಿ]



ಮೌಲ್ಯವಿರದ ತರುಣ ಪೀಳಿಗೆಯ ಮೇಲಿನ ಸಣ್ಣ ಆಕ್ರೋಶ ಹೀಗೆ ವ್ಯಕ್ತವಾಗುತ್ತದೆ :



ತಟ್ಟೆಯಲ್ಲಿ ಸ್ಟೈಲಾಗಿ ಅನ್ನ ಬಿಟ್ಟೇಳುವ/
ಮಗನ ಹಮ್ಮಿಗೆ ರೇಗುತ್ತೇನೆ.[ಅವ್ವ ಕಟ್ಟಿಕೊಟ್ಟ ಬುತ್ತಿ]


ಮಾರುತಿ ಸರ್ ತಮ್ಮ ದೇಸಿ ಭಾಷೆಯಲ್ಲಿ ಹಾಡು ಹೊಸೆಯುತ್ತಾ ಸಂಭ್ರಮಿಸುತ್ತಾರೆ(ಬಿದ್ಹೋದ ಬಿದಿರೂ ಕೊಳಲಾದ ಹಾಂಗ ). 'ಎಲ್ಲಿದ್ದಿ ಜೋಗಪ್ಪ','ಯಾರೋ ಬಂದು ', 'ಬಾಲ್ಯ ಹೊಲದ ತೆನೆ'- ಈ ಕವಿತೆಗಳು ಅವರ ಸಂಗೀತ ಪ್ರಜ್ಞೆಯನ್ನು ತೋರಿಸುತ್ತವೆ .




ಸಮಾಜದ ಬಿಕ್ಕಟ್ಟುಗಳನ್ನು,ವೈರುಧ್ಯಗಳನ್ನು ಸ್ವಯಂ ಅನುಭವಿಸಿ ,ಅವುಗಳನ್ನು ಭಿನ್ನವಾಗಿ ಕಟ್ಟಿಕೊಡುತ್ತಾರೆ.ಆಗ ಉದ್ಭವಿಸುವ ಆಕ್ರೋಶವೆಲ್ಲ ನ್ಯಾಯೋಚಿತವಾದದ್ದೇ:


ಏಕಲವ್ಯನ ಬೆರಳ ಕತ್ತರಿಸಿದಾಗ/
ಅತ್ತುಬಿಟ್ಟ ವಾಲ್ಮೀಕಿ[ವಿಪರ್ಯಾಸ]
+



ಮೂರ್ತಿಪೂಜೆಯ ಹಗ್ಗ /
ಹರಿದೊಗೆದ ನಿನಗೆ /
ಅದರದೇ ಉರಳು.
+


ಸಾದಾ ಸರಳ ಭಿಕ್ಕುವಿಗೆ /
ಎಷ್ಟೊಂದು ಗೋಲ್ಡನ್ನು /
ಟೆಂಪಲ್ಲುಗಳು.[ಬುದ್ಧನಿಲ್ಲದ ಬೋಧಿ]
+


ನನ್ನನ್ನಿರಲು ಬಿಡಿ ಹಾಗೇ/
ನಿಮ್ಮೊಳಗೆ ಬರೆಯದೇ ಉಳಿದ /
ಕವಿತೆಯಾಗಿ[ಗೋರಿ ಕಟ್ಟಬೇಡಿ]
+


ಅಸ್ತ್ರವಿಡಿದಿದ್ದಾಳೀಕೆ/
ಯಾರಿಗೋ ಗೊತ್ತಿಲ್ಲ /
ಆಟವಾಡಲು ಕೊಡು /
ಎಂದು ಮಗ/
ರಂಪ ಹೂಡಿದ್ದಾನೆ [ಯುದ್ಧ ಮುಗಿದ ಮೇಲೆ ]
+


ಆಧುನೀಕತೆಯು ಸಂಬಂಧಗಳನ್ನು ಛಿದ್ರಗೊಳಿಸುತ್ತಿರುವಾಗ,ಬಹುತೇಕ ಕವಿತೆಗಳು ಭೂತ-ವರ್ತಮಾನಗಳನ್ನು ತುಲನಾತ್ಮಕವಾಗಿ ಗ್ರಹಿಸುತ್ತವೆ. 'ಮಲ್ಲಿಗೆ ಮತ್ತು ಬೇವು', 'ಗೆಳೆಯನಿಗೆ', 'ಬೇಗ ಬಾ' , 'ಹಳೆಬೇರು-ಹೊಸಚಿಗುರು' -ಇಂತಹ ಮಾದರಿಯವು.



ಕೆರೆ ದಂಡೆಗೆ ಬೇಲಿಯು ಇದೆ/
ಈಜಾಡುವ ಹೈದರಿಲ್ಲ[ಹಳೆಬೇರು ಹೊಸಚಿಗುರು]
*


ಟಿ.ವಿ. ಕೇಬಲನ್ನು/
ತೆಗೆಸಿಬಿಡುತ್ತೇನೆ/
ಕಂಪ್ಯೂಟರನ್ನು ಆಫ್ ಮಾಡಿ/
ಮಲಗಿಸಿ ಬಿಡುತ್ತೇನೆ[ಗೆಳೆಯನಿಗೆ]
*


ಸಂಕೀರ್ಣ ಬದುಕಿನಿಂದ ಬಿಡಿಸಿಕೊಂಡು ಬದುಕಬೇಕಾದ ತುರ್ತನ್ನು ಹೇಳುವ,ವಾಸ್ತವದ ಲೆಕ್ಕ ತಪ್ಪಿದುದರ ಕುರುಹುಗಳಿರುವ ಇಂತಹ ಅನೇಕ ಕವಿತೆಗಳು ಸಂಕಲನದಲ್ಲಿವೆ .



'ಅವ್ವ ಮತ್ತು ಕುಂಕುಮ' ಕವಿತೆ ಇಲ್ಲಿ ಗಮನಾರ್ಹವಾದುದು.ಕನ್ನಡಿಯ ತುಣುಕು ,ಜೇನ ಮೇಣದ ಡಬ್ಬಿ,ಕುಂಕುಮ ಬಟ್ಟಲು- ಇವು ಅವ್ವನ ಸಿಂಗಾರ ಸಾಮ್ರಾಜ್ಯದ ಸರಕುಗಳು .



ಅಪ್ಪ ಕಾಯಿಲೆ ಬಂದು ಮಲಗಿದಾಗ/
ಅವ್ವನ ಕುಂಕುಮದ ಹಾರೈಕೆ/
ಇನ್ನೂ ಜೋರಾಗಿರುತ್ತದೆ.



ಮನಕಲಕುವ ಇಂತಹ ಸಂಗತಿಗಳನ್ನು ಕಾವ್ಯಾತ್ಮಕಗೊಳಿಸಿದ ಬಗೆ ಬೆರಗು ಹುಟ್ಟಿಸುತ್ತದೆ.ಕನ್ನಡಿ ಮತ್ತು ಕುಂಕುಮದ ಪ್ರತಿಮೆಗಳು ಶಕ್ತವಾಗಿ ಹೊರಹೊಮ್ಮಿವೆ.



ಕನ್ನಡಿ ಫಳಫಳ ಹೊಳೆಯುತ್ತದೆ/
ಕುಂಕುಮದ ಕೆಂಪು ತುಂಬಿಕೊಂಡು .


ಅಪ್ಪನನ್ನೂ ಕುಂಕುಮವನ್ನೂ/
ಮಗುವಿನಂತೆ ಸಾಕಿದ್ದ/
ಅವ್ವನ ಹಣೆ/
ಈಗ ಖಾಲಿಯಿದೆ(ಕೊರಳೂ)



ಹೀಗೆ ಬದುಕಿನ ಎಲ್ಲ ಸೂಕ್ಷ್ಮಗಳನ್ನು ಹೇಳಹೊರಡುವ ಮಾರುತಿ ಸರ್ ಅವರ ಕೆಲವು ಕವಿತೆಗಳಲ್ಲಿ ಮಾತು ಕೂಡ ಇಣುಕುತ್ತದೆ.ಅದನ್ನು ನೀಗಿಸಿಕೊಳ್ಳುವ ಎಲ್ಲ ಕಸುವೂ ಅವರಿಗಿದೆ.ನನ್ನಂಥವರನ್ನೂ ನೆನೆಸಿಕೊಳ್ಳುವ ಅವರ ದೊಡ್ಡಗುಣಕ್ಕೆ ಶರಣು!

**

-ಕಾಜೂರು ಸತೀಶ್

Tuesday, November 17, 2015

എന്റെ അകത്തേക്കു കയറുംബേള്

കാലിങ് ബെല് ഇല്ലെങ്കിലും
എന്റെ വാരിയെല്ലീനെ തട്ടിയാല് മതി -
ഞാന് വാതില് തുറക്കുന്നു .



മൊട്ടാവുന്ന,വിടരുന്ന
എല്ലാം ഹൃദയങ്ങള്ക്കും ഒരേ ഒരു നിറം
എന്റെ വീട്ടില് പൈന്റ്റ൪ പുരട്ടിയതും അതേ നിറം .



എന്റെ കുടലിന്റെ പായ് വിരിക്കുന്നു.
നിങ്ങള് അതില് ഇരിക്കുക, വിശ്രമിക്കുക.
തലച്ചോറ് , ഹൃദയം ,രക്തത്തിന്റെ കുറിച്ചു
ചര്ച്ച നടത്തുക.



എന്റെ വീട്ടിനെ പൂട്ട് ഇല്ല -
നിങ്ങള് എപ്പോഴെങ്കിലും വരാം .
മഴക്കാലത്ത് തകര്ന്നു വീണാല്
മണ്ണിന്റെ അകത്തു എന്റെ വീട് .
അവിടെ നഖം, രോമം ,എല്ലിനെ പറ്റി ചര്ച്ച ചെയ്യുക .



എന്റെ വീട്ടിന്റെ അകത്തുള്ള സ്നേഹം
ഏതു മഴ ,ഏതു കാറ്റിലും തകര്കുന്നതല്ല.
കാലിങ് ബെല് ഇല്ലെങ്കിലും
കാറ്റിന്റെ വാതില് തട്ടി അവിടത്തേക്ക് വരിക .
**


-കാജൂരു സതീഷ്

Saturday, November 14, 2015

ದೋಷ

ಈಗೀಗ ಅಜ್ಜನಿಗೆ ಉಚ್ಚಾರಣಾ ದೋಷ.
'ಪಾಪು' ಎನ್ನಲು 'ಪುಪಾ' ಎನ್ನುತ್ತಾರೆ
'ಪುಟ್ಟ' ಎನ್ನಲು 'ಟ್ಟಪು'
'ಮುದ್ದು' ಎನ್ನಲು 'ದ್ದುಮು'...

ಆದರೆ,
ಮನೆಯಿಂದ ಹೊರಗೆ
'ಪುಟ್ಟಿ'ಯನ್ನು ಕರೆಯಲು
ಯಾಕೋ ತುಂಬಾ ಹೆದರಿಕೊಳ್ಳುತ್ತಿದ್ದಾರೆ!
**

-ಕಾಜೂರು ಸತೀಶ್

Wednesday, November 11, 2015

ಚಿಟ್ಟೆ ಮತ್ತು ಗಿಳಿ

ಚಿಟ್ಟೆ ಮತ್ತು ಗಿಳಿ
ಹೂದೋಟದ ತುಂಬ ಹಾರಾಡಿ
ದಣಿದು ಕುಳಿತಿವೆ.


ಗಿಳಿಯ ಕಣ್ಣುಗಳು
ಚಿಟ್ಟೆಯ ಮೇಲೆ
ಚಿಟ್ಟೆಯ ಕಣ್ಣುಗಳು
ಹೂವಿನ ಮೇಲೆ.


ಒಂದು ಸಲ ಹಾರಿದರೂ ಸಾಕು
ಚಿಟ್ಟೆಗೆ ಮಕರಂಧ ಹೀರಬಹುದು
ಗಿಳಿಗೆ ಚಿಟ್ಟೆಯನ್ನು ತಿನ್ನಬಹುದು.


'ಚಿಟ್ಟೆಯೋ ಅಥವಾ ಗಿಳಿಯೋ
ಮೊದಲು ಹಾರುವವರಾರು?'
ಯೋಚಿಸಿದ ಹೂದೋಟದವ.


ಚಿಟ್ಟೆ ಹಾರಿತೆಂದರೆ
ಒಂದು ಹೂವು ಸಿಗಬಹುದು
ಇನ್ನೂ ಹಾರಿತೆಂದರೆ ಮತ್ತೊಂದು ಹೂವು.
ಮತ್ತೂ ಹಾರಬಹುದು-
ಸುಸ್ತಾಗಿ ಕುಳಿತ ಗಿಳಿ ಹಾರುವವರೆಗೆ.


ಆದರೆ
ಚಿಟ್ಟೆ ಹಾರಲಿಲ್ಲ
ಗಿಳಿಯೂ ಕೂಡ.
**

ಮಲಯಾಳಂ ಮೂಲ- ಡೋನಾ ಮಯೂರ

ಕನ್ನಡಕ್ಕೆ- ಕಾಜೂರು ಸತೀಶ್

Tuesday, November 10, 2015

ದಿನಚರಿ-10

ಗುಂಪುಘರ್ಷಣೆಯಲ್ಲಿ ಸಾಯುವ ಪ್ರತಿಯೊಬ್ಬ ಅಮಾಯಕ ವ್ಯಕ್ತಿಯ ಮೇಲೆ ಅಪಾರ ಮರುಕವಾಗುತ್ತದೆ[ತತ್ವ ,ಸಿದ್ಧಾಂತ, ವರ್ಗಗಳ ಹಂಗಿಲ್ಲದೆ]. ಇವರನ್ನು ಬೀದಿಗಿಳಿಸಿ ಬೀದಿಪಾಲು ಮಾಡುವ ನೇತಾರರ ಮೇಲೆ ತೀರಿಸಲಾರದಷ್ಟು ಆಕ್ರೋಶ ಹುಟ್ಟುತ್ತದೆ.



ಇಂತಹ ಅಮಾಯಕರನ್ನು ಬಾಲ್ಯದಿಂದಲೇ ನೋಡುತ್ತಾ ಬಂದಿದ್ದೇನೆ. ಅವರಲ್ಲನೇಕರು ತೀರಿಕೊಂಡಿದ್ದಾರೆ. ಉಳಿದವರು ತಮ್ಮ ಮೈಮೇಲೆ ಹೇರಲಾಗಿರುವ ಆಪಾದನೆಗಳ ಪೊರೆ ಕಳಚಲು ಕೋರ್ಟು ಕಚೇರಿಗೆ ಅಲೆದೂ ಅಲೆದು ಈಗ ಸದ್ದೇ ಇಲ್ಲದ ಹಾಗೆ ಕೌಟುಂಬಿಕ ಚಕ್ರದ ಕೆಳಗಿನ ನೆಲವಾಗಿದ್ದಾರೆ.ಹೊಟ್ಟೆಪಾಡಿಗಾಗಿ ಬದುಕುವ ಇಂತಹ ಅಮಾಯಕರಿರುವವರೆಗೂ ರಕ್ಕಸರು ಸದ್ದಿಲ್ಲದೆ ಇವರ, ನೆಲದ ರಕ್ತ ಹೀರಲು ತೊಡಗುತ್ತಾರೆ.

ಅವತ್ತು ಯಾರನ್ನು ಬೆಂಬಲಿಸಿ ಬೀದಿಗಿಳಿದಿದ್ದರೋ,ಅದೇ ಮನುಷ್ಯ ಈಗ ಇವರೆದುರು ಅಪರಿಚಿತನಂತೆ ಅಧಿಕಾರದ ಅಮಲಿನ ಬಲದಿಂದ ಹಾಯಾಗಿ ಹಾದುಹೋಗುತ್ತಾನೆ.
**

-ಕಾಜೂರು ಸತೀಶ್

Tuesday, November 3, 2015

ಬಹಿಷ್ಕೃತ

ನಾನು ಕಳಿಸಿಕೊಟ್ಟ ಖರ್ಜೂರ ತಿನ್ನುತ್ತಾ
ಎಷ್ಟು ಸಂಭ್ರಮಿಸುತ್ತಿರುವೆ ನೀನು
'ಆಹಾ ಎಷ್ಟು ಸಿಹಿ' ಎಂದು ಚಪ್ಪರಿಸುತ್ತಿರುವೆ.


ಆ ಸಿಹಿಯ ಒಳಗೆ ಗುಟ್ಟಾಗಿ ಕುಳಿತಿರುವ
ಸುಡುಬಿಸಿಲಿನ ಬಗ್ಗೆ ಗೊತ್ತಿಲ್ಲ ನಿನಗೆ.


ಅದರ ಒಂದು ಬೀಜವನ್ನಾದರೂ ಹೂತುಬಿಡು
ನಿನ್ನ ಹೃದಯದಲ್ಲಿ .
ಮೊಳೆತು ಮರವಾದ ಮೇಲೆ
ನೀನೇ ಸುಡುಬಿಸಿಲಾಗಿಬಿಡುತ್ತೀಯ.


ಹೂವಾಗಿ ಕಾಯಾಗಿ
ಹಣ್ಣಾದ ಮೇಲೆ
ಒಂದೊಂದೇ ಖರ್ಜೂರ ನಿನ್ನೊಳಗಿಳಿಯುವಾಗ
ಸಿಹಿಯ ಒಳಗೆ ಅಡಗಿ ಕುಳಿತಿರುವ
ಸುಡುಬಿಸಿಲು ತಿಳಿಯುವುದು.


ಆಮೇಲೆ
ಆ ಮರಕ್ಕೆ
'ಬಹಿಷ್ಕರಿಸಲ್ಪಟ್ಟವನು' ಎಂಬ ಹೆಸರಿಟ್ಟುಬಿಡು!
**
ಮಲಯಾಳಂ ಮೂಲ- ಪ್ರದುಲ್ ಷಾದ್ ಸಿ.


ಕನ್ನಡಕ್ಕೆ -ಕಾಜೂರು ಸತೀಶ್

ದಿನಚರಿ -9

ಪೋಸ್ಟ್ ಮಾರ್ಟಂ ದೃಶ್ಯವನ್ನು ನೋಡಿದೆ. ಆ ವೈದ್ಯ, ಮತ್ತವರ ಸಹವರ್ತಿಗಳು ಜೀವಂತ ಶರೀರಗಳ ಜೊತೆ ಒಡನಾಡುವಾಗ ಅವರ ಮನಸ್ಸಿನಲ್ಲಿ ಯಾವ ವಿಚಾರಗಳು ಹರಿದಾಡುತ್ತಿರಬಹುದು? ಚರ್ಮ, ಮೂಳೆ, ರೋಮ, ಉಗುರು - ಇವುಗಳಷ್ಟೆ ನೆನಪಾಗಬಹುದೇ?

ಅಮೂರ್ತವಾದ ಪರಿಕರಗಳೇ ವ್ಯಕ್ತಿಯ ಅಸ್ಮಿತೆಯನ್ನು ಸಾರುವುದು, ವ್ಯಕ್ತಿತ್ವವನ್ನು ರೂಪಿಸುವುದು. ಅವುಗಳ ಅನುಪಸ್ಥಿತಿ ಆ ದೇಹಗಳಲ್ಲಿರುವುದಿಲ್ಲ ಎಂಬ ನಿಲುವನ್ನು ಗಟ್ಟಿಯಾಗಿ ತಳೆದುಕೊಂಡು ತನ್ನವರೊಂದಿಗೆ ಸಹಜವಾಗಿ ಒಡನಾಡುತ್ತಾರೆಯೇ? ಪ್ರೀತಿ, ಸ್ನೇಹ, ಕಾಮ, ಸಿಟ್ಟು, ತಮಾಷೆ ಇವುಗಳನ್ನೆಲ್ಲ ಅಷ್ಟು ಸುಲಭವಾಗಿ ಕೊಡು-ಕೊಳ್ಳಲು ಸಾಧ್ಯವೇ?

ಹಕ್ಕಿಗಳೆಲ್ಲ ಗಂಟಲು ಸರಿಪಡಿಸಿಕೊಳ್ಳುತ್ತಿರಬಹುದಾದ ಈ ಬೆಳ್ಳಂಬೆಳಿಗ್ಗೆ ಇವೆಲ್ಲ ಯಾಕೆ ಕಾಡುತ್ತಿವೆಯೋ ತಿಳಿಯುತ್ತಿಲ್ಲ.
**
-ಕಾಜೂರು ಸತೀಶ್

Monday, November 2, 2015

ದಿನಚರಿ -8

ಮೂಟೆ ಕಟ್ಟಿಟ್ಟ ಪುಸ್ತಕದ ಚೀಲವನ್ನು ಅಟ್ಟದಿಂದ ಇಳಿಸಿದೆ- ಬಾಲ್ಯ ನಿದ್ರಿಸುತ್ತಿತ್ತು ಅದರೊಳಗೆ. ಕಟ್ಟುಬಿಚ್ಚಿದೆ- ನೆಟಿಗೆ ಮುರಿದು ಕಣ್ಣುಗಳನ್ನು ಉಜ್ಜುತ್ತಾ ಎದ್ದುಬಿಟ್ಟಿತು.

ನೋಟ್ಪುಸ್ತಕಗಳ ತೆರೆದರೆ, ಸಹಿಮಾಡಿದ ಗುರುಗಳೆಲ್ಲರೂ ಪ್ರತ್ಯಕ್ಷ[ಅವರಿಗೆ ವರ್ಗಾವಣೆಯಿಲ್ಲ, ಬಡ್ತಿಯಿಲ್ಲ, ಸಾವೂ ಇಲ್ಲ!]

ಆಡಿ ಅರ್ಧಕ್ಕೆ ನಿಲ್ಲಿಸಿದ 'ಕಳ್ಳ-ಪೊಲೀಸ್' ಆಟದ 'ಕಳ್ಳ' ಎನ್ನುವ ಚೀಟಿ ಅಲ್ಲೇ ಉಳಿದುಬಿಟ್ಟಿತ್ತು. ಬರೆದ ಭೂಪಟಗಳೆಲ್ಲ ಏಕಕೋಶೀಯ ಜೀವಿಗಳಾಗಿ ಗಡಿದಾಟಿಬಿಟ್ಟಿದ್ದವು!

ಕಳಕೊಳ್ಳಲು ಇಷ್ಟವಿಲ್ಲ. ಮತ್ತೆ ಮೂಟೆ ಕಟ್ಟಿಟ್ಟೆ.
**
-ಕಾಜೂರು ಸತೀಶ್

ಕಿರುಗವಿತೆಗಳು

-೧-
ಮರ ಹತ್ತುವಾಗ ಒಂದು ಹಾವು ಸಿಕ್ಕಿತು
ಹಿಡಿದು ಎಸೆದುಬಿಟ್ಟೆ ಜೀವಭಯದಿಂದ

ಹಾವು ಸತ್ತಿತು
ಹಡೆದ ಅಷ್ಟೂ ನನ್ನ ಕವಿತೆಗಳೂ.

-೨-
ಇವತ್ತು ಅಮವಾಸ್ಯೆ
ಟಾರ್ಚಿಲ್ಲದೆ ನಡೆದುಬಂದೆ

ಕತ್ತಲು ಕೂಡ ಮುಖಕ್ಕೆ ಮಸಿಬಳಿಯಲಿಲ್ಲ.

-೩-
ಬೆಳಕ ಝರಿ ಹರಿದು
ಕಡಲ ಸೇರಿದೆ

ಮರುಭೂಮಿಗಳು ಹೆಚ್ಚುತ್ತಲೇ ಇವೆ.

-೪-
ತಲೆಯಾಡಿಸುವ ನಾಯಿಯ ಕಿವಿಗಳ ಸದ್ದು
ಗಡಿಯಾರದ ಮುಳ್ಳು ಮೈಮುರಿವ ಸದ್ದು
ನಿನ್ನ ಹೃದಯದ ಹೂವರಳುವ ಸದ್ದು
ಕೇಳುತ್ತಿಲ್ಲವೆಂದರೆ

ದಯವಿಟ್ಟು
ಕವಿತೆ ಹಡೆಯುವುದ ನಿಲ್ಲಿಸಿಬಿಡು.
***
-ಕಾಜೂರು ಸತೀಶ್

ರೊಟ್ಟಿ

-೧-
ರೊಟ್ಟಿ ತಟ್ಟುವ ಅವ್ವನಿಗೆ
ಹೆಬ್ಬೆಟ್ಟಿನ ಸಹಿ ಬಲು ಸುಲಭ

ಅವ್ವ ರೊಟ್ಟಿ ತಟ್ಟಿ
ಜ್ಯಾಮಿತಿಯ ವೃತ್ತಕ್ಕೆ ದ್ರೋಹ ಬಗೆಯುವುದಿಲ್ಲ

ನನ್ನ ಹೊಟ್ಟೆಗಿಳಿದ ರೊಟ್ಟಿ
ಅವಳ ಹೆಬ್ಬೆಟ್ಟು ಸಹಿಗಳ ಜೀರ್ಣಿಸಿ
ಕವಿತೆಗಳ ಜನನ

-೨-
ನಾ ತಟ್ಟುವ ರೊಟ್ಟಿ
ಭೂಪಟಗಳ ನೆನಪಿಸುವುದು
ನನ್ನ ನಾಯಿಗೆ ಕಿತ್ತು ಕೊಡುವಾಗಲೂ
ಗಡಿ ಉಲ್ಲಂಘನೆಯಾಗುವುದಿಲ್ಲ
ಯುದ್ಧ ಸಂಭವಿಸುವುದಿಲ್ಲ

-೩-
ಅವ್ವಂದಿರ ತಪ್ಪಾಗಿ ಅರ್ಥೈಸಿದ ಸೂರ್ಯ
ರೊಟ್ಟಿ ಸುಡುತ್ತಿದೆ ನೆಲದ ಕಾವಲಿಯಲ್ಲಿ
ನೇಗಿಲ ಸೌದೆ ಎಷ್ಟು ಚೆನ್ನಾಗಿ ಉರಿಯುತ್ತದೆ

ಅದು ತಿಂದುಳಿದು
ಇಟ್ಟ
ರೊಟ್ಟಿ
ಮರಗಟ್ಟಿ
ಮರುಭೂಮಿಗಳಾಗಿವೆ

ಕುಣಿಕೆಗಳ ಎಸೆದರೆ ಸೂರ್ಯ ಮುಟ್ಟಿಯೂ ನೋಡುತ್ತಿಲ್ಲ
ಸುಲಭಕ್ಕೆ ಸಿಗುವ ಗೆಲ್ಲುಗಳೂ ಸೌದೆಗಳಾಗುತ್ತಿಲ್ಲ

-೪-
ನರಿ ಹೊಂಚು ಹಾಕುತಿದೆ
ಕಾಗೆ ಇನ್ನೇನು ಹಾಡಲಿದೆ.
***

-ಕಾಜೂರು ಸತೀಶ್

Sunday, November 1, 2015

ಗಾಳಿ

ಗಿಡಮರಗಳ ಹೊಕ್ಕಳಿಂದುಕ್ಕುವ ಗಾಳಿಯ ತೊರೆ, ನದಿ
ಗುಪ್ತವಾಗಿ ಸುಪ್ತವಾಗಿ ಹರಿದು, ಕೂಡಿ ವಾತಸಮುದ್ರ



ಎಷ್ಟು ಹಕ್ಕಿಗಳು ಈಜಾಡಿಕೊಂಡಿವೆ ಅಲ್ಲಿ
ಎಷ್ಟು ಉದುರಿದೆಲೆಗಳು ಮೀನುಗಳ ಅನುಕರಿಸುತಿವೆ ಅಲ್ಲಿ
ಎಷ್ಟು ಮರಗಳು ಮುಳುಗಿ ಜಳಕಮಾಡುತಿವೆ ಅಲ್ಲಿ
ಮುಜುಗರವಿಲ್ಲದೆ ಬೆತ್ತಲ, ಬೆಳಗತ್ತಲ ಲೆಕ್ಕವಿಲ್ಲದೆ



ಮೇಲ್ಪದರದಲ್ಲೇ ತೇಲುತಿರುವ ಇಷ್ಟೆತ್ತರದ ಮರದ ಗೆಲ್ಲಿಗೆ
ಮರೆತುಹೋಗಿರಬಹುದೇ ಪಾತಾಳದ ಬೇರು?
ಮುದಿತಳದ ಪ್ರೀತಿ?



ಎಷ್ಟು ರಂಧ್ರಗಳಿವೆಯೋ ನಮ್ಮೊಳಗೆ ಗಾಳಿಗಷ್ಟೇ ಗೊತ್ತು
ಉಳಿದ ನಮ್ಮ ನಾಳೆಗಳೆಷ್ಟೋ ಗಾಳಿಗಷ್ಟೇ ಗೊತ್ತು



ಕತ್ತರಿಸಿದರೂ ಕತ್ತುಹಿಚುಕಿದರೂ ನೋವಿಲ್ಲದ ಸಾವಿಲ್ಲದ ಬದುಕು
ರಕ್ತವಿಲ್ಲದ ವರ್ಣವಿಲ್ಲದ ವಾತಸಮುದ್ರ ಕೆಂಪಾಗುವುದೇ ಇಲ್ಲ.

**

-ಕಾಜೂರು ಸತೀಶ್

ದಿನಚರಿ -7

ಕನಿಷ್ಟ ಒಂದು ಚಿತ್ರ, ಒಂದು ಕತೆ, ಒಂದು ಹಾಡು, ಒಂದು ನಾಟಕ - ಇಷ್ಟನ್ನಾದರೂ ಕಲಿಸಿಕೊಡದ ;
ಒಂದು ದಿನವಾದರೂ ಮಕ್ಕಳೊಂದಿಗೆ ಆಡಿ ಬಟ್ಟೆ ತುಂಬಾ ಮಣ್ಣು ಮಾಡಿಕೊಳ್ಳದ ವ್ಯಕ್ತಿಯನ್ನು 'ಶಿಕ್ಷಕ/ಶಿಕ್ಷಕಿ' ಎಂದು ಕರೆಯಲು ಎದೆ ಸೀಳಿದಷ್ಟು ಹಿಂಸೆಯಾಗುತ್ತದೆ!

**

-ಕಾಜೂರು ಸತೀಶ್

ದಿನಚರಿ -6

ಎಷ್ಟೆಷ್ಟೋ ಸಲ 'Love You' ಅಂತ ಹೇಳಬೇಕೆಂದುಕೊಳ್ಳುತ್ತೇನೆ. ಆದರೆ ಈ ಹಾಳು phrase ನಿಂದ ಮದುವೆಯ ಮತ್ತು ಕಾಮದ ಕಮಟು ವಾಸನೆ ಹೊಡೆಯುತ್ತಿರುತ್ತದೆ. ಅದಕ್ಕೇ, ಲೆಕ್ಕವಿಲ್ಲದಷ್ಟು ಸಲ ನುಂಗಿಕೊಂಡಿದ್ದೇನೆ!

**

-ಕಾಜೂರು ಸತೀಶ್

ದಿನಚರಿ -5

ಹೀಗೆ ಘನಮೌನದಲ್ಲಿ ಒಬ್ಬನೇ ಬದುಕುವುದು ಎಷ್ಟು ಖುಷಿ ಗೊತ್ತಾ? ಅದೆಂಥದ್ದೇ ಹಿಂಸೆಯಾಗಲಿ, ಅಥವಾ ಸತ್ತೇ ಹೋಗಲಿ- ಅದರಲ್ಲಿ ನನಗಂತೂ ತುಂಬ ತುಂಬಾ ಖುಷಿಯಿದೆ!



ಒಮ್ಮೆ ಹೀಗೇ ಗಂಭೀರವಾಗಿ ಏನನ್ನೋ ಧ್ಯಾನಿಸುತ್ತಾ ಒಳಗೇ ಕೂತುಬಿಟ್ಟಿದ್ದೆ. ಎರಡನೇ ದಿನ ಪಕ್ಕದವರು ಬಂದು ಬಾಗಿಲು ತಟ್ಟಿದರು! "ಓ.. ನೀವಿದ್ದೀರಾ? ಸದ್ದೇ ಇರ್ರಿಲ್ಲ ಅದ್ಕೆ ಕರ್ದೆ" ಎಂದರು. ಅವರ ಕಲ್ಪನೆಯಲ್ಲಿ ನನ್ನ ಸಾವು ಹೇಗಿದ್ದೀರಬಹುದೆಂದು ಊಹಿಸುತ್ತಾ ಹಲ್ಲುಗಳು ಕಾಣದ ಹಾಗೆ ನಕ್ಕುಬಿಟ್ಟಿದ್ದೆ!
**

-ಕಾಜೂರು ಸತೀಶ್

ದಿನಚರಿ -2

ನನ್ನ ಜೀವನದಲ್ಲಿ ಕಂಡ ಮಹಾನ್ ಸುಳ್ಳುಗಾರನ ಕುರಿತ ಲೇಖನವನ್ನು ಈಚೆಗೆ ಓದಿದ್ದೆ. ಹೊಗಳಿ ಹೊಗಳಿ ಅಟ್ಟಕ್ಕೇರಿಸಿಬಿಟ್ಟಿದ್ದರು. ತಮ್ಮ ಬೇಳೆಕಾಳು ಬೇಯಿಸಿಕೊಳ್ಳಲು ಮುಖವಾಡ ತೊಡುವ ಇಂತಹ so called ಸಾಹಿತಿಗಳ ಮುಖ ನನಗೆ ಹೊಸತಲ್ಲವಾದರೂ, ಈ ಕಾಲದ ಸಾಹಿತ್ಯ ಹೇಗಿತ್ತು ಎನ್ನುವುದನ್ನು ನಾಳಿನ ದಿನಗಳಲ್ಲಿ ನನ್ನ ವಿದ್ಯಾರ್ಥಿಗಳು, ಅವರ ಮಕ್ಕಳು-ಮೊಮ್ಮಕ್ಕಳೆಲ್ಲ ತಿಳಿಯಲು ಅನುಕೂಲವಾಗಲಿ ಎಂದು ಇದನ್ನು ಶಾಸನದ ಹಾಗೆ ಇಲ್ಲಿ ಬರೆದಿಟ್ಟಿದ್ದೇನೆ!


**

-ಕಾಜೂರು ಸತೀಶ್

ದಿನಚರಿ -4

ಒಂದು ದಿನ 'ನಿಮ್ಮ ಪುಸ್ತಕ ಪ್ರಕಟಿಸುತ್ತೇವೆ, ಕವಿತೆಗಳನ್ನು ಕಳುಹಿಸಿಕೊಡಿ' ಎಂಬ ಪತ್ರವೊಂದು ಬಂದಿತ್ತು. ಕಳುಹಿಸಿಕೊಟ್ಟೆ. ಆಮೇಲೆ ಅವರೇನೂ ಹೇಳಲಿಲ್ಲ , ನಾನೇನೂ ಕೇಳಲಿಲ್ಲ. ಹಾಗೆ ನನ್ನ ಮೊದಲ ಹಸ್ತಪ್ರತಿ ಕಳೆದುಹೋಯಿತು!

ಮತ್ತೊಂದು ದಿನ ನನ್ನ ಎರಡನೇ ಹಸ್ತಪ್ರತಿ ಹೇಗ್ಹೇಗೋ ಪುಸ್ತಕವಾಗಿ ಮುದ್ರಿತವಾಯಿತು. ಅದರಲ್ಲೊಮ್ಮೆಯಾದರೂ ಕಣ್ಣಾಡಿಸೋಣವೆಂದರೆ, ಅದಿನ್ನೂ ನನ್ನ ಬಡಪಾಯಿ ಕೋಣೆಗೆ ಬರುವುದಿಲ್ಲವೆಂಬಂತೆ ರಾಜಧಾನಿಯ ಚರಂಡಿಯ ಪರಿಮಳವನ್ನಷ್ಟೇ ಆಘ್ರಾಣಿಸುತ್ತಾ ಕುಳಿತಿದೆ. ಹಾಗೆ, ನನ್ನ ಎರಡನೆಯ ಹಸ್ತಪ್ರತಿಯೂ ಮರಣದಂಡನೆಗೆ ಒಳಗಾಯಿತು!



ಸದ್ಯ! ಮೂರನೇ ಹಸ್ತಪ್ರತಿ ಭದ್ರವಾಗಿದೆ. ನಾಲ್ಕನೆಯದರ ಸುದ್ದಿಯನ್ನು ಸದ್ಯದಲ್ಲೇ ಬರೆದುಕೊಳ್ಳುವೆ.
**

-ಕಾಜೂರು ಸತೀಶ್

ದಿನಚರಿ -3

ಎಷ್ಟೆಷ್ಟೋ ಪತ್ರಿಕೆಗಳನ್ನು ನೋಡಿದ್ದೇನೆ;ಓದಿದ್ದೇನೆ. ಆದರೆ ಒಂದು ಗುಂಪಿನ ಜನ ಎಂದೆಂದೂ ತಲೆಯ ಮೇಲೆ ಹೊತ್ತೊಯ್ಯುವ ಈ ಪತ್ರಿಕೆಗೆ ಇರುವ ಬರಹಗಾರರ ಮೇಲಿನ ನಿಲುವು ನನ್ನನ್ನು disturb ಮಾಡುತ್ತದೆ. ಹೊಸ ಬರಹಗಾರನೊಬ್ಬ ಇಲ್ಲಿ ಕಾಣಿಸಿಕೊಳ್ಳಲು ದೊಡ್ಡವರ ಶಿಫಾರಸ್ಸು ಬೇಕು. ನನ್ನಂಥ untouchable ವ್ಯಕ್ತಿಗಳು ಇಂತಹವುಗಳಿಂದ ದೂರ ಉಳಿಯುವುದೇ ಒಳ್ಳೆಯದು. ಅದು ತನ್ನ ಪೂರ್ವಾಗ್ರಹಪೀಡಿತ ಬಲೆಯೊಳಗೆ ಮತ್ತಷ್ಟೂ ಸಿಲುಕಿಕೊಂಡು ಸಂಭ್ರಮಿಸಲಿ!
**

-ಕಾಜೂರು ಸತೀಶ್

ದಿನಚರಿ -1

ಈ ಚಿಂತನೆಗಳು ಅಕ್ಷರಗಳಾಗಿ ಹುಟ್ಟಿಕೊಳ್ಳುವಾಗ ಒಬ್ಬ ಕೂಲಿ ಕಾರ್ಮಿಕನಾಗಿರುತ್ತೇನೆ: ಬೆವರು ಧಾರಾಕಾರ ಜಿನುಗುತ್ತದೆ, ಹೃದಯ ಚಂಡೆಯಾಗಿರುತ್ತದೆ, ಕಣ್ಣುಗಳು ಅದ್ಯಾವುದೋ ಕೇಂದ್ರದ ದಾಸನಾಗಿರುತ್ತವೆ.



ಇದೇ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬ ಕ್ರಾಂತಿಕಾರಿ ಆಗುತ್ತಾನೆ. ಇದೇ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬ ನೇಣುಹಾಕಿಕೊಳ್ಳುತ್ತಾನೆ. ಇದೇ ಸ್ಥಿತಿಯಲ್ಲಿ ಧೋ ಧೋ ಮಳೆ ಸುರಿಯುತ್ತದೆ. ಬಿಸಿಲು ಸುಟ್ಟೂ ಸುಡುತ್ತದೆ. ಎಲೆಯ ತೊಟ್ಟು ಕಳಚಿ ಭೂಮಿಯ ಪಾದ ಸೇರುತ್ತದೆ.

ಇದೇ ಸ್ಥಿತಿಯಲ್ಲಿಯೇ ಸಿದ್ದಾರ್ಥ ಬುದ್ಧನಾದದ್ದು!
**

-ಕಾಜೂರು ಸತೀಶ್