ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Friday, February 15, 2019

ಕಡಲಾಚೆಯ ಹುಡುಗಿಗೆ ಕವಿತೆಯ ಕುರಿತು

ಕಾಜೂರು ಸತೀಶ್ ಅವರ ಕಡಲಾಚೆಯ ಹುಡುಗಿಗೆ ಕವಿತೆಯ ಬಗ್ಗೆ ನನ್ನದೊಂದು ಸಹೃದಯ ಓದಿನ ಸ್ಪಂದನೆ ...........

ಅಬ್ಬಾ! ಇದಪ್ಪಾ ಕವಿತೆ ಎಂದರೆ! ಅಂಗ ಮೀರಿದ ಪ್ರೀತಿಯ ಸಂಗ ಬಯಸುವ ಪ್ರೇಮಿಯ ಅದಮ್ಯ ಬಯಕೆ, ತನ್ನ ಪ್ರೇಯಸಿಯನ್ನು ಕೂಡುವ ಸಲುವಾಗಿನ ಹಂಬಲ ಕೇವಲ ಭೌತಿಕ ವಾಂಛೆಯದಲ್ಲ.ಅದು ಪ್ರೇಮಿಗಳನ್ನು ಅಗಲಿಸಿದ ಗಡಿಗಳನ್ನು ; ಭೌಗೋಳಿಕ ಎಲ್ಲೆಗಳನ್ನು ಮೀರಿದ ಒಂದು ವಿಶ್ವಾತ್ಮಕ ಭಾವ ಸಮ್ಮಿಲನದ್ದು. ಭಾವ ಸಮಾಗಮದ್ದು. ಸೀಮಾತೀತವಾದ ಈ ಅಸೀಮ ಪ್ರೇಮಿಯ ; ಅಸೀಮ ಪ್ರೇಮದ ಒಲುಮೆ ,ಆ ತಾರೆ ,ನೀಹಾರಿಕೆ,ಚಂದಿರನ ಅಂಶಗಳಲ್ಲಿ ಬೆಳೆದು ಬೆಳಕಿನ ರೂಪಕಗಳಾಗಿ ಬೆಳೆವ ಈ ನಲ್ಲನ ನಿವೇದನೆ ಇದೆಯಲ್ಲಾ? ಅದು ಕೇಳಿಯೂ ಕಲ್ಲಾದ, ಓದಿಯೂ ಜಡವಾದ ಮನಸುಗಳ ಮರುಭೂಮಿಯಿಂದಲೂ ಒಲುಮೆಯ ಓಯಸಿಸ್ಸಿನ ಝರಿಯನ್ನು ಒಸರುವಂತೆ ಮಾಡುತ್ತದೆ. ನಾನಾದರೂ ಕಡಲ ಆ ತೀರದ ಪ್ರೆಯಸಿಯಾಗಬಾರದಿತ್ತೆ ? ಎಂದು ಮನಸು ಹಂಬಲಿಸುವಂತೆ ಮಾಡುತ್ತದೆ ಈ ಕವಿತೆ.

ಅಭಿನಂದನೆ ನನ್ನ ಪ್ರೀತಿಯ ಹಾಗೂ ಕನ್ನಡದ ಭರವಸೆಯ ಕವಿ ಕಾಜೂರು ಸತೀಶ್ ಅವರೇ.
*



ಪ್ರೊ. ಟಿ.ಯಲ್ಲಪ್ಪ

Wednesday, January 30, 2019

ಪ್ರಚಾರದ ಹಿಂಸೆ

ಆ ಮೇಷ್ಟ್ರ ಹೆಸರನ್ನು ಹಲವರಿಂದ ಕೇಳಿ ತಿಳಿದಿದ್ದೆ. ಒಮ್ಮೆ ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿ( ಒಲ್ಲದ ಮನಸ್ಸಿನಿಂದ! ) ಪ್ರಥಮ ಸ್ಥಾನ ಪಡೆದಿದ್ದರು. (ಇವರ ಹೊರತು ಅಲ್ಲಿ ಭಾಗವಹಿಸಿದ್ದವರೆಲ್ಲರೂ ಚಿತ್ರಕಲಾ ಶಿಕ್ಷಕರು!)

ಮೊನ್ನೆ ಅವರು ಸಿಕ್ಕಿದಾಗ ಒಂದಷ್ಟು ಜನರಿಗೆ ಅವರ ಹೆಸರು, ಶಾಲೆಯಲ್ಲಿ ಅವರು ಮಾಡುತ್ತಿರುವ ಸೇವೆಯನ್ನು ವಿವರಿಸಿದೆ. ಅವರ ಮುಖದಲ್ಲಿನ ಮುಜುಗರ ನನ್ನನ್ನು ಇರಿದು ಕೊಲ್ಲುತ್ತಿತ್ತು!

ಸುಮಾರು ಹೊತ್ತು ಕಳೆದ ಮೇಲೆ ನನ್ನ ಬಳಿ ಬಂದು ಮೆಲ್ಲಗೆ ಉಸುರಿ ಹೋದ ಅವರ ಮಾತುಗಳು ಮಾಗಿಯ ಈ ರಾತ್ರಿಯನ್ನು ಸುಡುತ್ತಿವೆ!

ಅವರು ಅಂದಿದ್ದಿಷ್ಟು: " ಸರ್ ದಯವಿಟ್ಟು ಯಾರಿಗೂ ಹೇಳ್ಬೇಡಿ. ನೀವು ಹೇಳಿ ನಾಲ್ಕು ಜನಕ್ಕೆ ಗೊತ್ತಾಯ್ತು ಅಂತ ಇಟ್ಕೊಳ್ಳಿ, ಆಮೇಲೆ ಅವ್ರು ಇವ್ರು ಬರ್ತಾರೆ, ಅಲ್ಲಿ ಇಲ್ಲಿ ಕರೀತಾರೆ, ಪಾಪ ನಮ್ಮಕ್ಳಿಗೆ ಅನ್ಯಾಯ ಆಗುತ್ತೆ, ಶಾಲೆ ಮುಚ್ಚುತ್ತೆ, ಈ publicityಯಿಂದ ನೆಮ್ದಿನೂ ಹಾಳಾಗುತ್ತೆ.. ದಯವಿಟ್ಟು ಬೇಡ ಸಾರ್.."

ಕ್ಷಮಿಸಿ ಸರ್, ನಿಮ್ಮ ಹೆಸರನ್ನು ಇಲ್ಲಿ ಬರೆದು ಮತ್ತೊಮ್ಮೆ ನಿಮಗೆ ಮುಜುಗರ ಉಂಟುಮಾಡುವುದಿಲ್ಲ!
*
ಕಾಜೂರು ಸತೀಶ್