ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Wednesday, February 11, 2015

ನನ್ನ ಶವಪೆಟ್ಟಿಗೆ ಹೊರುವವರಿಗೆ

ನನ್ನ ಶವಪೆಟ್ಟಿಗೆ ಹೊರುವವರಿಗೆ
ಉಯಿಲಿನಲ್ಲೂ ಬರೆದಿಡಲಾಗದ
 ರಹಸ್ಯವೊಂದು  ಹೇಳಲು ಉಳಿದಿದೆ.
ನನ್ನ ಹೃದಯದ ಜಾಗದಲ್ಲೊಂದು ಹೂವಿರುತ್ತದೆ ;
ಏರು ಯೌವ್ವನದಲ್ಲಿ
ಪ್ರೀತಿಯ ಆತ್ಮತತ್ವ ಹೇಳಿಕೊಟ್ಠವಳ ಪೂಜಾದ್ರವ್ಯ.



ಮಣ್ಣುಮುಚ್ಚುವ ಮುಂಚೆ
ಹೃದಯದಿಂದ ಆ ಹೂ ಕಿತ್ತು
ಎಸಳುಗಳಿಂದ ಮುಖವ ಮುಚ್ಚಿಡಬೇಕು.
ರೇಖೆಗಳೇ ಮಾಸಿದ ಹಸ್ತಗಳಲ್ಲೂ ಒಂದೊಂದು ದಳ. 
ಹಿಂತಿರುಗಿ ಹೋಗಬೇಕು ಹೂವಿನೊಂದಿಗೆ,
ಹಿಂತಿರುಗಿ ಹೋಗಬೇಕು .



ಇನ್ನೇನು ಸಾಯಬೇಕು ಎನ್ನುವಾಗ
ಈ ಸತ್ಯ ಹೇಳಲು ಸಮಯವಿರುವುದಿಲ್ಲ.
ಬಾಯಿಗೆ ಸುರಿಯುವ ನೀರು
ಸಾವಿನತ್ತ ಹರಿಯುತ್ತದೆ 

ಇಲ್ಲದಿದ್ದರೆ
ನನ್ನ ಶವಪೆಟ್ಟಿಗೆಯನ್ನು ಮುಚ್ಚಬೇಡಿರಿ
ಮುಚ್ಚಬೇಡಿರಿ ನನ್ನ ಶವಪೆಟ್ಟಿಗೆಯನ್ನು



ಇನ್ನು ನನ್ನ ಸ್ನೇಹಿತರೂ ತೀರಿಕೊಂಡವರಲ್ಲವೇ?


**





ಮಲಯಾಳಂ ಮೂಲ- ಎ. ಅಯ್ಯಪ್ಪನ್


ಕನ್ನಡಕ್ಕೆ -ಕಾಜೂರು ಸತೀಶ್

Sunday, February 8, 2015

ಯಾವುದೀ ಮಾತು

ಕಿಟಕಿಯ ಬಳಿ ನಿಂತು
ಚಹಾ ಕುಡಿಯುತ್ತೇನೆ
ಅದರ ರುಚಿ ಹೀರುವಾಗ
ನಾಲಿಗೆ ಒಂದು ಮಾತನ್ನೂ
ಹೊರತಳ್ಳುವುದಿಲ್ಲ.


ಪುನರಾವರ್ತನೆಗೊಳ್ಳುತ್ತಲೇ ಇರುವ
ಒಂದು ಸಣ್ಣ ಎಲೆಯ ಮಾತನ್ನು
ಆಲಿಸುತ್ತೇನೆ.


ನೋಡನೋಡುತ್ತಿದ್ದಂತೆ
ಮಿಕ್ಕೆಲ್ಲಾ ಎಲೆಗಳೂ ತಲೆಯಾಡಿಸುತ್ತಾ
ಅದನ್ನೇ ಅಂಗೀಕರಿಸಿದಂತೆ,
ತಪ್ಪೊಪ್ಪಿಕೊಂಡಂತೆ ನುಡಿಯುತ್ತವೆ.



ಆಗ,
ಗಾಳಿಯಿಲ್ಲದಿದ್ದರೂ
ರೆಂಬೆ-ಕೊಂಬೆಗಳು ಅಲುಗಾಡತೊಡಗುತ್ತವೆ.




**

ಮಲಯಾಳಂ ಮೂಲ- ಸುಜೀಷ್

ಕನ್ನಡಕ್ಕೆ -ಕಾಜೂರು ಸತೀಶ್