ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Thursday, October 29, 2026

ದೇವರು

ಗೃಹಪ್ರವೇಶಕ್ಕೆ ಬನ್ನಿ ಎಂದರು ಅಧಿಕಾರಿ.

ತಿಮ್ಮ ಮನೆಯನ್ನು ವೀಕ್ಷಿಸಿದ ಮೇಲೆ " ಈಗ ದೇವರ ಕೆತ್ತನೆಗೆ ಎಷ್ಟು ಬೆಲೆ? " ಕೇಳಿದನು.

"ಹತ್ತು ಸಾವಿರ "

ತಿಮ್ಮ ಮನಸ್ಸಿನಲ್ಲಿ ಹೇಳಿಕೊಂಡನು " ಹಾಗಾದರೆ ಈ ದೇವರು ನನ್ನದು. ನಾನೂ ಹತ್ತು ಸಾವಿರ ಲಂಚ ಕೊಟ್ಟಿದ್ದೆ ".
*
✍️ ಕಾಜೂರು ಸತೀಶ್

ನಿವೃತ್ತಿ ವೇತನ

ರಾಜನು ಸೈನಿಕರ ನಿವೃತ್ತಿ ವೇತನವನ್ನು ನಿಲ್ಲಿಸಿದ. ಅದರ ಬದಲಿಗೆ ಅವರ ವೇತನದ ಸ್ವಲ್ಪ ಭಾಗವನ್ನು ಹಿಡಿದು ನಿವೃತ್ತಿಯ ನಂತರ ಕೊಡಲು ನಿರ್ಧರಿಸಿದ.

ಮಂತ್ರಿ "ಹೀಗೇಕೆ?" ಎಂದು ಕೇಳಿದಾಗ " ಹೇಗೂ ಇವರಿಗೆ ಕೊಡುವ ಆಹಾರದಲ್ಲಿ, ನಾವು ಕೊಡುವ ಒತ್ತಡದಲ್ಲಿ ನಿವೃತ್ತಿಯವರೆಗೆ ಬದುಕುವುದು ಸಂದೇಹ. ನಮ್ಮ ಬೊಕ್ಕಸ ಹೆಚ್ಚಾಗುವುದು ಹೀಗೆ. ಇವರ ಆಶ್ರಿತರಿಗೆ ಇವರ ನಿವೃತ್ತಿ ವೇತನವನ್ನು ನೀಡುವುದಿಲ್ಲ ಎಂದಿದ್ದು ಒಳ್ಳೆಯದೇ ಆಯಿತು "
ಖುಷಿಯಿಂದ ನುಡಿದ ರಾಜ.
*
✍️ ಕಾಜೂರು ಸತೀಶ್

ಚಿನ್ನ

ಹೊಸದಾಗಿ ಕೆಲಸ ಪಡೆದಿದ್ದಳು ತಿಮ್ಮಿ - ಅದೂ rank ಪಡೆದು.

ಊರಿನಲ್ಲಿ ಮದುವೆಯೊಂದಿತ್ತು. ತಿಮ್ಮಿ ಹಾಜರಾದಳು. ಅಲ್ಲಿದ್ದವರೆಲ್ಲಾ ಇವಳನ್ನೇ ನೋಡತೊಡಗಿದರು.

ಇದನ್ನೆಲ್ಲಾ ನೋಡುತ್ತಿದ್ದ ತಿಮ್ಮ ಯೋಚಿಸಿದ. ಅವರು ನೋಡುತ್ತಿರುವುದು ಅವಳನ್ನಲ್ಲ. ಅವಳ ಕತ್ತಿನಲ್ಲಿ ಇಲ್ಲದ ಚಿನ್ನವನ್ನು.
*
✍️ ಕಾಜೂರು ಸತೀಶ್

ಸಾವಿರ ಅಂತಸ್ತಿನ ಮನೆ

ಸಾವಿರ ಅಂತಸ್ತಿನ ಮನೆಯನ್ನು ನೋಡಲು ತಿಮ್ಮ ಗುಂಡನೊಂದಿಗೆ ಹೊರಟ. ಆದರೆ, ಗೇಟಿನಲ್ಲಿ ಭದ್ರತಾ ಸಿಬ್ಬಂದಿಗಳು ಅವರನ್ನು ತಡೆದರು.

"ಮತ್ತೆ ಹೇಗೆ ನೋಡುವುದು? '' ಗುಂಡ ಕೇಳಿದ.
"ಗುಡ್ಡ ಹತ್ತಿ ಅದರ ಮೇಲಿಂದ ನೋಡೋಣ" ತಿಮ್ಮ ಸಲಹೆಯಿತ್ತ.

ಗುಡ್ಡದ ಮೇಲೆ ಹತ್ತಿ ನೋಡಿದರು. ತಿಮ್ಮ ಹೇಳಿದ "ಇಷ್ಟೇ ಇಷ್ಟು!"
*
✍️ಕಾಜೂರು ಸತೀಶ್ 

ಜ್ಞಾನೋದಯ

ತಿಮ್ಮನನ್ನು ಅರಮನೆಯ ಎಲ್ಲಾ ಸುಖ ಭೋಗಗಳಲ್ಲೇ ಬೆಳೆಸಲಾಯಿತು. ಅವನಿಗೆ ಹೊರಗಿನ ಪ್ರಪಂಚವನ್ನು ತೋರಿಸಲು ರಾಜನಿಗೆ ಇಷ್ಟವಿರಲಿಲ್ಲ. ಹಾಗೇನಾದರೂ ಹೋಗುವುದಿದ್ದರೆ ವಾಯುಮಾರ್ಗದಲ್ಲೇ ಹೋಗಿ ಹಿಂತಿರುಗುತ್ತಿದ್ದರು.

ಒಮ್ಮೆ ತನ್ನ ಸಹಾಯಕ ಗುಂಡನನ್ನು ಕರೆದುಕೊಂಡು ಯಾರಿಗೂ ತಿಳಿಯದಂತೆ ರಸ್ತೆಗೆ ಇಳಿದನು. ರಸ್ತೆಯ ಗುಂಡಿಗಳಲ್ಲಿ ಮೊಣಕಾಲಿನಷ್ಟು ನೀರು ತುಂಬಿತ್ತು. ಮುಂದೆ ಹೋದಂತೆ ಅರಮನೆಯಂಥ ಮನೆಗಳೂ, ಅದರ ಸನಿಹದಲ್ಲೇ ಗುಡಿಸಲುಗಳು ಕಂಡವು. ತುಸು ದೂರದಲ್ಲಿ ಜನ ತಮ್ಮ ಗುರುತಿನ ಚೀಟಿಗಾಗಿ ಸಾಲುಗಟ್ಟಿ ನಿಂತಿದ್ದರು: ನಿಂತೂ ನಿಂತೂ ಕೆಲವರು ಕುಸಿದು ಬೀಳುತ್ತಿದ್ದರು.

"ಇವೆಲ್ಲಾ ಯಾಕೆ ಹೀಗೆ" ಕೇಳಿದನು ತಿಮ್ಮ.

"ರಾಜ ಮತ್ತು ಪ್ರಜೆಗಳು ಭ್ರಷ್ಟರಾದರೆ ಹೀಗೆ ಆಗುತ್ತೆ " ಉತ್ತರಿಸಿದನು ಗುಂಡ.

"ಸಾಕು " ಎಂದನು ತಿಮ್ಮ.

"ಇನ್ನೂ ಎಷ್ಟೊಂದಿವೆ ಮುಂದೆ ಹೋಗೋಣ" ಎಂದನು ಗುಂಡ.

ತನ್ನ ಕಣ್ಣುಗಳನ್ನು ಮುಚ್ಚಿಕೊಂಡು ಅರಮನೆಗೆ ಹಿಂತಿರುಗಲು ಸೂಚನೆಯಿತ್ತನು ತಿಮ್ಮ.

"ಈಗ ಕಾಡುಗಳಿಗೆ ಪ್ರವೇಶ ನಿಷಿದ್ದ " ಧ್ಯಾನದ ನೆನಪಿನಲ್ಲಿದ್ದ ತಿಮ್ಮನಿಗೆ ನೆನಪಿಸಿದನು ಗುಂಡ.
*
✍️ಕಾಜೂರು ಸತೀಶ್

ಸುಖ

ಬೆಳಿಗ್ಗೆ ಬಂದು ಸಹಿ ಮಾಡಿ ಚಂದದ ಕುರ್ಚಿಯಲ್ಲಿ ಕುಳಿತು ಒಂದಷ್ಟು ರೀಲ್ಸ್ ಗಳನ್ನು ನೋಡಿ ಕುಟುಂಬದವರಿಗೆ ಕರೆಮಾಡಿ ಕ್ಷೇಮ ಸಮಾಚಾರ ವಿಚಾರಿಸಿ ಆ ದಿನ ಹೇಗೆ ಹಣ ಮಾಡಬಹುದು ಎಂದು ಯೋಜಿಸಿ ಏನು ಕೊಂಡೊಯ್ಯಬಹುದು ಎಂದು ಯೋಚಿಸಿ ಮಧ್ಯಾಹ್ನ ಕುರ್ಚಿಯಿಂದೆದ್ದು ಊಟ ಮಾಡಿ ಹರಟೆ ಹೊಡೆದು ಸಂಜೆ ಮಾಡಿ ಕಾರಿನಲ್ಲಿ ಹೊರಟುಹೋಗುವ ಸುಖವನ್ನು- ಎದೆಯೊಡೆದುಕೊಂಡು ಕೆಲಸ ಮಾಡುತ್ತಿದ್ದ ತಿಮ್ಮನು ನೋಡಿದನು.
*
✍️ ಕಾಜೂರು ಸತೀಶ್