ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Wednesday, August 27, 2025

ಡೆಮಾಕ್ರಸಿ

ತಿಮ್ಮ ಮೂರು ಮೂಟೆಗಳನ್ನು ಒಂದೇ ಸಲ ಹೊರುತ್ತಿದ್ದ. ಈ ವಿಷಯ ಎಲ್ಲೆಲ್ಲೂ ಹಬ್ಬಿತ್ತು. ಅದಕ್ಕಾಗಿಯೇ ಅವನು ಹೋದ ಹೋದಲ್ಲೆಲ್ಲ ಕೆಲಸ ಇದ್ದೇ ಇರುತ್ತಿತ್ತು. ಆದರೆ ಒಂದು ಮೂಟೆ ಹೊರುವವರಿಗೂ ಇವನಿಗೂ ಒಂದೇ ಸಂಬಳ ಸಿಗುತ್ತಿತ್ತು.

ಮೊದಮೊದಲು ಯಜಮಾನನಿಗೆ ತಿಮ್ಮನ ಮೇಲೆ ಅಭಿಮಾನ ಉಕ್ಕುತ್ತಿತ್ತು. ಆದರೆ ತಿಮ್ಮ ಬಹುಬೇಗ ಕೆಲಸವನ್ನು ಮುಗಿಸುತ್ತಿದ್ದುದರಿಂದ ಯಜಮಾನನು ಕ್ರಮೇಣ ನಾಲ್ಕು ಮೂಟೆಗಳನ್ನು ಒಟ್ಟಿಗೆ ಹೊರಿಸುತ್ತಿದ್ದನು. ಅದನ್ನೂ ಮಾಡಿದ ತಿಮ್ಮನ ಮೇಲೆ ಮತ್ತೆ ಸಿಟ್ಟು ಬಂದು ಐದು ಮೂಟೆಗಳನ್ನು ಹೊರಿಸುತ್ತಿದ್ದನು. ಅಲ್ಲಿಗೆ ತಿಮ್ಮನ ತಾಳ್ಮೆ ಮುಗಿದು ಯಜಮಾನನ ಕಪಾಳದಲ್ಲೊಂದು ಸೇಬುಹಣ್ಣು ಮೂಡಿಸಿ ಊರು ಬಿಡುತ್ತಿದ್ದನು.

ಇದು ಅವನ ದಿನಚರಿಯಾಗಿದ್ದರಿಂದ ತಿಮ್ಮ ಒಂಟಿಯಾಗಿಯೇ ಇದ್ದನು.

*
✍️ಕಾಜೂರು ಸತೀಶ್

ಗಡಿ



'ಗಡಿಸಮಸ್ಯೆ'ಯ ಬಗ್ಗೆ ಚರ್ಚೆ ಸಾಗಿತ್ತು. 

ಹಕ್ಕಿಯೊಂದು ಅಲ್ಲೇ ಸನಿಹದಲ್ಲಿದ್ದ ಹಣ್ಣಿನ ಮರದಿಂದ ಹಣ್ಣನ್ನು ಕಿತ್ತು ನೆರೆಯ ದೇಶಕ್ಕೆ ಹಾರಿಹೋಗಿ ತಿಂದ ಹಣ್ಣಿನ ಬೀಜವನ್ನು ಹಿಕ್ಕೆ ಹಾಕಿತು. 

ಅದು ಮೊಳಕೆಯೊಡೆಯಿತು. ಅದು ಮರವಾಯಿತು. ಅದು ಹಣ್ಣುಕೊಟ್ಟಿತು...

'ಗಡಿಸಮಸ್ಯೆ'ಯ ಬಗ್ಗೆ ಚರ್ಚೆ ಸಾಗಿತ್ತು.
*

✍️ಕಾಜೂರು ಸತೀಶ್

ಚಿಂತಕ



ಜೀವಪರ ಚಿಂತಕರೊಬ್ಬರು ತೀರಿಕೊಂಡರು.

ಅವರ ಹೆಸರಿನಲ್ಲಿ ಹಗ್ಗಜಗ್ಗಾಟ ಸ್ಪರ್ಧೆ ನಡೆಯಿತು. ಎಡಭಾಗದಲ್ಲಿದ್ದವರು ಹೆಸರಿನ ಅರ್ಧಭಾಗವನ್ನೂ ಬಲಭಾಗದಲ್ಲಿದ್ದವರು ಇನ್ನರ್ಧ ಭಾಗವನ್ನೂ ಹಂಚಿಕೊಂಡರು .

ಸೀಟಿ ಊದಿ ತೀರ್ಪುನೀಡಿದ ನಿರ್ಣಾಯಕನಿಗೆ ಸ್ವಲ್ಪ ನಡುವಿನ ಭಾಗ ಸಿಕ್ಕಿತು.
*
✍️ಕಾಜೂರು ಸತೀಶ್ 

ಮೌನ



ಯುವಕ ಯುವತಿಯರು ಹುಚ್ಚೆದ್ದು ಕುಣಿಯುತ್ತಿದ್ದರು. ಡಿಜೆ ಸದ್ದಿಗೆ ವಯಸ್ಕರೊಬ್ಬರು ಎದೆಯೊಡೆದು ಸತ್ತರು.

ಮೃತರಿಗೆ ಒಂದು ನಿಮಿಷದ ಮೌನಾಚರಣೆ ಮಾಡಲಾಯಿತು. ಆ ಒಂದು ನಿಮಿಷದ ಮೌನವನ್ನು ಅನುಭವಿಸಲಾಗದೆ ಹಲವು ಯುವಕ ಯುವತಿಯರು ಕುಸಿದುಬಿದ್ದರು.

ಡಿಜೆಯ ಸದ್ದಿಗೆ ಮತ್ತೆ ಎಚ್ಚರವಾದರು.
*

✍️ಕಾಜೂರು ಸತೀಶ್ 

ಸಮಾನತೆ



ಸಮಾನತೆಯ ಬಗ್ಗೆ ಉಪನ್ಯಾಸವಿತ್ತು. ಜನ ನಿದ್ದೆ ಮಾಡತೊಡಗಿದರು.

ಗುದ್ದಲಿ ಹಿಡಿದು ಆ ದಾರಿಯಲ್ಲಿ ಹೊರಟಿದ್ದ ತಿಮ್ಮ ಅವರನ್ನೆಲ್ಲ ನೋಡಿ ತನ್ನಲ್ಲೇ ಹೇಳಿಕೊಂಡ: 'ನಿದ್ದೆಯಲ್ಲಿ ಎಲ್ಲರೂ ಸಮಾನರೇ!'
*
✍️ಕಾಜೂರು ಸತೀಶ್ 

Tuesday, August 26, 2025

ಭಾಷೆ ಮತ್ತು ನಾಗರಿಕ ಸೇವೆ

ಮೊನ್ನೆ ಮೊನ್ನೆ ಜಿಲ್ಲೆಯೊಂದರ ನಾಗರಿಕ ಸೇವಾ ಅಧಿಕಾರಿಯೊಬ್ಬರು ಸರ್ಕಾರಿ ಶಾಲೆಯೊಂದಕ್ಕೆ ಭೇಟಿ ನೀಡಿ ಅದರ ಕಾರ್ಯವೈಖರಿಯನ್ನು ಮೆಚ್ಚಿ ಪ್ರಶಂಸನಾ ಅಭಿಪ್ರಾಯವನ್ನು ಶಾಲಾ ದಾಖಲೆಯಲ್ಲಿ ಬರೆದಿದ್ದರು. ಸರ್ಕಾರಿ ಶಾಲೆಗೆ ಭೇಟಿ ನೀಡುವ, ಅಲ್ಲಿನ ಹಲವು ಸವಾಲುಗಳ ನಡುವೆ ಅದನ್ನು ಮೆಚ್ಚುವ ಈ ಬಗೆಯ ಅಧಿಕಾರಿಗಳು ಹಾಗೂ ಮೆಚ್ಚಿಸಿಕೊಳ್ಳುವ ಶಾಲೆಗಳು ವಿರಳ. ಅದಕ್ಕಾಗಿ ಆ ಅಧಿಕಾರಿ ಹಾಗೂ ಶಾಲೆಯ ಶಿಕ್ಷಕರು ಅಭಿನಂದನಾರ್ಹರು.

ಆದರೆ, ಆಂಗ್ಲ ಭಾಷೆಯಲ್ಲಿ ಬರೆಯಲಾಗಿದ್ದ ಆ ಅಭಿಪ್ರಾಯವನ್ನು ಓದಿದ ಮೇಲೆ ಹಲವು ಸಂಗತಿಗಳು ನನ್ನ ಬಳಿ ಸುಳಿದುಹೋದವು:

1.ಹಲವು ವ್ಯಾಕರಣ ದೋಷಗಳು!

2.ಕನ್ನಡ ತಿಳಿದಿದ್ದರೂ ಅದನ್ನು ಬಳಸದಿರುವುದು (ಅಥವಾ ಅದೂ ಸ್ಪಷ್ಟವಾಗಿ ದಕ್ಕದಿರುವುದು!)

3.ನಾಗರಿಕ ಸೇವೆಗಳು ಮತ್ತು ಆಂಗ್ಲ ಭಾಷೆಯ ಅಗತ್ಯತೆ.

4.ನಮಗೆ ತಿಳಿದ ಭಾಷೆಯ ಮೇಲಿನ ಅವಜ್ಞೆ ಮತ್ತು ಅನ್ಯದ ಮೇಲಿನ ಒಲವು.

5.ನಾಗರಿಕ ಸೇವೆ ಮತ್ತು ಭಾಷೆಯ(ಭಾಷೆಗಳ) ಅರಿವಿನ ಅಗತ್ಯತೆ/ ಅನಿವಾರ್ಯತೆ.

6.ಓದಿ ಪಡೆಯುವ ಹುದ್ದೆಗಳು, ಅದನ್ನು ಗಿಟ್ಟಿಸಿದ ಮೇಲಿನ ಓದಲಾಗದ ಸ್ಥಿತಿ; ಜ್ಞಾನದ ನಿಲುಗಡೆ.

7.ಶಿಕ್ಷಣ ಪದ್ಧತಿ ಮತ್ತು ಬಾಯಿಪಾಠವನ್ನು ಪುರಸ್ಕರಿಸುವ ಮೌಲ್ಯಮಾಪನ ಕ್ರಮಗಳು; ಅಂಕ ಕೇಂದ್ರಿತ ನೇಮಕಾತಿ.

8.ನಾಗರಿಕ ಸೇವಾ ಹುದ್ದೆಗಳ ಆಯ್ಕೆ ಪ್ರಕ್ರಿಯೆ.

9.ಭ್ರಷ್ಟ ವ್ಯವಸ್ಥೆ.

10.ಇತ್ಯಾದಿ!

Sunday, August 24, 2025

ಆಕಾಶ ನದಿ ಬಯಲು- ಮೇರಿ ಆಲಿವರ್ ಕವಿತೆಗಳು

‌1. ಪುಲಿಟ್ಜರ್ ಪ್ರಶಸ್ತಿ ಬಂದಾಗ ಟಿವಿ ಚಾನಲ್ ನಿಂದ 'ನಿಮ್ಮ ಸಂದರ್ಶನ ಮಾಡಲು ನಾವು ಬರಬಹುದೇ?'ಎಂದಾಗ ಹೆಂಚು ಜೋಡಿಸುತ್ತಿದ್ದ ಲೇಖಕಿಯು 'ದಯವಿಟ್ಟು ಬೇಡ' ಎನ್ನುತ್ತಾರೆ!

2. ನೆರೆಮನೆಯ ಒಬ್ಬರು ಬಂದು ' ನಿಮ್ಮನ್ನು ಟಿವಿಯಲ್ಲಿ ನೋಡಿದ ಹಾಗೆ ಅನ್ನಿಸ್ತು.. ನೀವೇನಾ ಅದು?' ಎಂದು ಪ್ರಶ್ನೆ ಎಸೆದುಹೋಗುತ್ತಾರೆ.


ಕಾಡಿನ ದಟ್ಟ ಮೌನವನ್ನು ಮೆಲ್ಲುತ್ತಾ ಕವಿತೆಗಳನ್ನೇ ಬಾಳಿದ ಮೇರಿ ಆಲಿವರ್ (1935-2019) ಕುರಿತ ಮಾತುಗಳಿವು. ಚಿಕ್ಕ ಪ್ರಾಯದಲ್ಲೇ ಲೈಂಗಿಕ ದೌರ್ಜನ್ಯಕ್ಕೊಳಗಾದ ಮೇರಿಗೆ ನಿಸರ್ಗದ ಒಡನಾಟವು ತಾನು ಕಳೆದುಕೊಂಡ ಬದುಕಿನ ಚೈತನ್ಯವನ್ನು ಮರುಪೂರಣಗೊಳಿಸಿಕೊಳ್ಳಲು ಸಹಕರಿಸಿತು. ಅದರ ಧ್ಯಾನದ ಫಲ ಈ ಕವಿತೆಗಳು.


Small is beautiful ಎಂಬ ತತ್ವದಲ್ಲಿ ನಂಬಿಕೆಯಿರಿಸಿದ್ದ ಮೇರಿ ಆಲಿವರ್ ಅವರ ಇಂಗ್ಲಿಷ್ ಕವಿತೆಗಳನ್ನು 'ಆಕಾಶ ನದಿ ಬಯಲು' ಎಂಬ ಶೀರ್ಷಿಕೆಯಲ್ಲಿ ಚೈತ್ರಾ ಶಿವಯೋಗಿಮಠ ಅವರು ಅನುವಾದಿಸಿದ್ದಾರೆ. ಹಲಸಂಗಿಯ ಸುಗಮ ಪುಸ್ತಕ ಇದನ್ನು ಪ್ರಕಟಿಸಿದೆ. "ನಾನು ಸಮಾಧಾನ ಕೊಡುವ, ಮನಸ್ಸಿಗೆ ಆಹ್ಲಾದವನ್ನು ನೀಡುವಂತಹ ಪದ್ಯಗಳನ್ನು ಬರೆಯುತ್ತೇನೆ.." ಎನ್ನುವ ಮೇರಿ ಆಲಿವರ್ ಅವರ ಕವಿತೆಗಳನ್ನು ತಮ್ಮದಾಗಿಸಿಕೊಂಡು ಚೈತ್ರಾ ಶಿವಯೋಗಿಮಠ ಕನ್ನಡದಲ್ಲಿ ಸೃಷ್ಟಿಸಿದ್ದಾರೆ.


ನಿಸರ್ಗದ ಸಣ್ಣ ಸಣ್ಣ ಸಂಗತಿಗಳು ಇಲ್ಲಿ ಹಾಡಾಗಿವೆ. ಭತ್ತ, ಮೆಣಸಿನ ಗಿಡ, ಗುಮ್ಮ, ಕೇರೆ ಹಾವು, ನಾಯಿ, ಮಿಡತೆ, ಬೆಟ್ಟ, ಹೆಬ್ಬಾತು, ಎಲೆ, ಮರ, ಕಡಲು, ಹಂಸ, ಹಕ್ಕಿ, ಮಿಂಚುಳ್ಳಿ, ಹೂವು, ಮೀನು, ಕಾಡು - ಇವೆಲ್ಲಾ ಮೇರಿಯ ಕಾವ್ಯ ವಸ್ತುಗಳು. ಅವೇ ಅವಳ ನಿಜ ಜೀವನದ ಪ್ರಪಂಚವೂ ಹೌದು.


ಇವು ನಿಸರ್ಗದ ಕಡೆಗಿನ ಪಯಣ. ಹುಟ್ಟಿದ ಮಗುವಿಗೆ ನಿಸರ್ಗ ಬೆರಗಿನಂತೆ ಕಂಡು ಅದು ನಮ್ಮನ್ನು ಪ್ರಶ್ನಿಸುವ ರೀತಿಯಲ್ಲಿಯೇ ಮೇರಿ ಆಲಿವರ್ ಅದನ್ನು ಕಾವ್ಯಾತ್ಮಕವಾಗಿ ಪ್ರಶ್ನಿಸುತ್ತಾ ನಿಸರ್ಗಕ್ಕೇ ಪ್ರಶ್ನೆ ಎಸೆಯುತ್ತಾರೆ. ಈ ನಡಿಗೆ ಒಂಟಿ ನಡಿಗೆ ಅಲ್ಲ; ಅದೊಂದು ಪ್ರಾರ್ಥನೆ; ಧನ್ಯತೆ.


ಮೇರಿಯ ಕವಿತೆಗಳ ಮತ್ತು ಚೈತ್ರಾ ಅವರ ಅನುವಾದದ ಮಾದರಿ ಇಲ್ಲಿದೆ:

ಪ್ರಾರ್ಥನೆಯ ಪ್ರಾರ್ಥನೆ ತಿಳಿಯದ ನನಗೆ
ಗೊತ್ತಿರುವುದಿಷ್ಟೇ- ಗಮನಿಸೋದು
ಹುಲ್ಲಿನ ಮೇಲೆ ಮೈಕೊಡವಿ
ಉರುಳಿ, ಮಂಡಿಯೂರಿ
ಸುಮ್ಮನಿದ್ದು ಧನ್ಯಳಾಗುವುದು ( ಬೇಸಿಗೆಯ ಒಂದು ದಿನ)

ಯಾರೂ ನೋಡಬಾರದು ನಾನು
ಮಾರ್ಜಾಲ ಹಕ್ಕಿಗಳೊಂದಿಗೆ ಮಾತಿಗಿಳಿಯುವುದನ್ನು
ಪುರಾತನ ಆಲದಮರ ತಬ್ಬಿಕೊಳ್ಳುವುದನ್ನು
ಪ್ರಾರ್ಥನೆಗೆ ನನ್ನದೇ ರೀತಿ ಇದೆ
ನಿನಗೆ ನಿನ್ನದು ಇರುವಂತೆ ( ಕಾಡು ಸುತ್ತುವಾಗ )
*

✍️ಕಾಜೂರು ಸತೀಶ್


Monday, August 18, 2025

ರಂಗಧಾಮಪ್ಪ ಸರ್ ಅವರ ಕುರಿತು

ಕೊಡಗು ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ರಂಗಧಾಮಪ್ಪ ಸರ್ ಇಂದು ವರ್ಗಾವಣೆಗೊಂಡು ಜಿಲ್ಲೆಯನ್ನು ತೊರೆದಿದ್ದಾರೆ. "ಎರಡು ವರ್ಷಗಳ ಇಲ್ಲಿನ ಸೇವಾವಧಿಯಲ್ಲಿ ಒಮ್ಮೆಯೂ ಜ್ವರ ಶೀತದಿಂದ ಬಳಲಲಿಲ್ಲ, ಅದಕ್ಕೆ ಇಲ್ಲಿನ ಶುದ್ಧ ಪರಿಸರವೇ ಕಾರಣ" ಎನ್ನುತ್ತಾ ತೊರೆಯಲು ಅಸಾಧ್ಯವಾದ ನೆನಪುಗಳನ್ನು ಕೊಂಡೊಯ್ದಿದ್ದಾರೆ.

ರಂಗಧಾಮಪ್ಪ ಸರ್ ಅವರಿಗೆ ನನ್ನ ಪರಿಚಯವಿಲ್ಲ. ಆದರೆ, 'ಆ ದಿನದ ಒಂದು ಫೋನ್ ಕಾಲ್' ಅವರ ಕುರಿತು ಬರೆಯುವಂತೆ ಮಾಡಿದೆ. ಜೂನ್ 28 2024. ನನ್ನ ಸುಡುವ ದನಿಗೆ ಅತ್ತಲಿಂದ ಬುದ್ಧನಂಥ ಉತ್ತರ. ಆಮೇಲೆ ನಾನು ಅಕ್ಷರಗಳಿಂದ ಇಲ್ಲಿನ ಅವ್ಯವಸ್ಥೆಯ ಕುರಿತು ಖಾರಿಕೊಂಡೆ. ಅವರಿಂದ ಮೌನದ ಸಾಥ್ ಸಿಕ್ಕಿತು. ನನ್ನ ಪರಿಚಯವಿಲ್ಲವೆಂದುಕೊಂಡು ಅವರು ಸುಮ್ಮನೆ ಇರಬಹುದಿತ್ತು. ಆದರೆ ' ಇದು ಯಾಕೆ ಹೀಗಾಗುತ್ತಿದೆ? ನೀವು ನನಗೆ ಉತ್ತರಿಸಿ' ಎಂದು ಸಮಸ್ಯೆಯ ಬುಡಕ್ಕೆ ತಮ್ಮ ಮೌನದಂಥ ಮಾತಿನ ಚಾಟಿಯನ್ನು ಬೀಸಿದ್ದರು. ವಿಚಾರವಂತರೂ, ನೀತಿವಂತರೂ ಆದ ಮನುಷ್ಯರಿಂದ ಮಾತ್ರ ಇದು ಸಾಧ್ಯ ಎಂದು ಆ ದಿನ ಅವರನ್ನು ನನ್ನೊಳಗೆ ಚಿತ್ರಿಸಿಕೊಂಡೆ.


ಮೊದಲ ಬಾರಿಗೆ ಅವರ ಮಾತುಗಳನ್ನು ಕೇಳಿಸಿಕೊಂಡಿದ್ದು ಡಿಸೆಂಬರ್ 6, 2024ರಂದು. ಒಂದೊಂದು ಶಬ್ದದಲ್ಲೂ ಓದಿನ ಬಲವಿತ್ತು. ಮತ್ತೆ ಮೆಚ್ಚಿಕೊಂಡೆ!

ಆಮೇಲೆ ಹಲವು ಬಾರಿ ಅವರನ್ನು ನೋಡಿದೆ. ಮೊನ್ನೆ ಕೂಡ. ಆದರೆ ಮಾತನಾಡಬೇಕು ಎನಿಸಲಿಲ್ಲ.
*
ಪ್ರಾಮಾಣಿಕರನ್ನು ವರ್ಗಾಯಿಸಲಾಗುತ್ತದೆ. ಇವರನ್ನೂ ಈಗ ವರ್ಗಾಯಿಸಲಾಗಿದೆ. ಕೆಲಸ ಮಾಡುವವರಿಗೆ ಯಾವ ಊರಾದರೇನು? ಆದರೂ ನನ್ನೊಳಗಿನ ಒಂದುಕ್ಷಣದ ಬೆಳಗುವ ಬಯಕೆಗೆ ಅವರ ನೆನಪಿನ ಬತ್ತಿಯಿದೆ...
*

✍️ಕಾಜೂರು ಸತೀಶ್