'ನನ್ಹೆಸ್ರು ಹುಳು'
'ಹುಳುನಾ?'
ಎತ್ತರದ ದನಿಯಲ್ಲಿ ಕೇಳಿದರು ಟೀಚರ್
ತರಗತಿಯಲ್ಲಿ ಮಕ್ಕಳ ಜೋರು ನಗೆಬುಗ್ಗೆ.
'ಹ್ಮ್
ನನ್ಹೆಸ್ರು ಹುಳು ಅಂತ'
'ಓಹ್ ನಿಜ
ಹಾಜರಿ ಪುಸ್ತಕದಲ್ಲೂ ಅದೇ ಹೆಸರು;
ಹುಳು!'
'ಇದೆಂಥ ಹೆಸ್ರು
ಅದೆಂಥ ಅಪ್ಪ ಅಮ್ಮನೋ'
ಗೊಣಗಿದರು ಟೀಚರ್
'ಸರಿ ಪೆನ್ಸಿಲ್ ತೆಗಿ' ಟೀಚರ್ ಅಂದರು
ಹುಳು ತೆಗೆಯಲಿಲ್ಲ
'ಪುಸ್ತಕ ತೆಗಿ' ಎಂದರು
ಹುಳು ಹೊರತೆಗೆಯಲಿಲ್ಲ
ಬರೆಯಲು ಹೇಳಿದರು
ಹುಳು ಬರೆಯಲಿಲ್ಲ
ಹುಳು
ಆಕಾಶಕ್ಕೆ ಮರಗಳಿಗೆ
ಎಲೆಗಳಿಗೆ
ಎಲೆಗಳಿಂದ ಸುರಿವ ಬೆಳಕಿನೆಡೆಗೆ
ಕಣ್ಣುನೆಟ್ಟು ಕಿವಿ ತೆರೆದು ಬೆರಳ ಚಾಚಿ ಓದಿಕೊಂಡನು
'ಅಪ್ಪ ಅಮ್ಮನ ಕರ್ಕೊಂಡು ಬಾ'
ಮನೆಗೆ ಕಳಿಸಿದರು ಟೀಚರ್
ಮರುದಿನ ಬೆಳಿಗ್ಗೆ ಬಂದನು ಹುಳು
'ಅಪ್ಪ ಅಮ್ಮ ಎಲ್ಲಿ?'
'ಬರ್ತಾರೆ'
ಖಚಿತವಾಗಿ ನುಡಿದನು
ಮಧ್ಯಾಹ್ನದ ಬುತ್ತಿ ಬಿಚ್ಚಿದಾಗ
ಎರಡು ದೊಡ್ಡ 'ಚಿಟ್ಟೆ'ಗಳು
ನುಗ್ಗಿ ಬಂದವು ಆಫೀಸಿನೊಳಗೆ.
ಅವುಗಳ ರೆಕ್ಕೆಗಳು ರೇಷ್ಮೆಯ ವಸ್ತ್ರಗಳು
ಮಧ್ಯಾಹ್ನ ಮೆಲ್ಲನೆ ಕರಗಿಹೋಯಿತು
'ನಾವು ಹುಳುವಿನ
ಅಪ್ಪ ಅಮ್ಮ'
ಚಿಟ್ಟೆಗಳೆಂದವು
'ನಾವು ಅವನನ್ನು
ತುಂಬಾ ಪ್ರೀತಿಯಿಂದ ಸಾಕ್ತಿದ್ದೇವೆ
ಅವನು ಚುಂಬಿಸುತ್ತಲೇ
ಮಕರಂಧವನ್ನು ವರ್ಗಾಯಿಸಬಲ್ಲ
ಒಂದು ಸ್ಪರ್ಶದಿಂದ
ಎಲೆಗಳನ್ನು ಮರಗಟ್ಟಿಸಬಲ್ಲ
ದೊಡ್ಡವನಾದ ಮೇಲೆ
ಅವನಿಗೆ ಪ್ಯೂಪ ಎಂಬ ಹೆಸರಿಡುತ್ತೇವೆ
ಆಮೇಲೆ ಚಿಟ್ಟೆ ಎಂಬ ಹೆಸರಿಡುತ್ತೇವೆ'
'ಏನು ಹುಡುಕ್ತಿದ್ದೀಯಾ?'
ಮನೆಗೆ ತಲುಪಿ
ಬೀರುವಿನೊಳಗೆ ಹುಡುಕುತ್ತಿರುವುದನ್ನು ಗಮನಿಸಿ
ಗಂಡ ಕೇಳಿದ
'ನನ್ನ ರೆಕ್ಕೆಗಳನ್ನು'
ಮೆಲ್ಲನೆ ನುಡಿದರು ಟೀಚರ್
*
ಮಲಯಾಳಂ ಮೂಲ- ಅರುಣ್ ಭಾಸ್ಕರ್ ಪಿ
ಕನ್ನಡಕ್ಕೆ- ಕಾಜೂರು ಸತೀಶ್
ನಾನೂ ಹುಡುಕುತ್ತಿದ್ದೇನೆ ನನ್ನ ರೆಕ್ಕೆಗಳನ್ನು...👌🙏
ReplyDelete