ಗಂಡ ತೀರಿಕೊಂಡ ಹದಿನಾರನೆಯ ದಿನ
ಮನೆಯೊಂದು ಅಕ್ಷರಶಃ ಶ್ಮಶಾನವೆನಿಸಿತವಳಿಗೆ
ತಿಥಿಯೂಟ ಉಂಡು ಹಸಿವು ನೀಗಿಸಿಕೊಂಡ
ಕಾಗೆಗಳೂ
ಹಲಸಿನ ಕೊಂಬೆಯಲ್ಲಿ ಕುಳಿತು
ದುರುಗುಟ್ಟಿ ನೋಡುತ್ತಿರುವುದು ಕಾಣಿಸಿತವಳಿಗೆ
ಎಲ್ಲ ತೆರಳಿದ ಮೇಲೆ
ಆಚೆ ಈಚೆ ಮಕ್ಕಳಿಬ್ಬರನ್ನು ಎದೆಗಪ್ಪಿಕೊಂಡು
ಮಲಗಲು ಹೊರಟಾಗ
ಮನೆಯ ಹೊರಗೆ
ಚಪ್ಪಲಿಗಳು ಮಣ್ಣ-ಮರಳ ಕಣಗಳ ತುಳಿತುಳಿದು
ಉಸಿರುಗಟ್ಟಿಸುವ ಸದ್ದು ಕೇಳಿಸಿತವಳಿಗೆ
ದಿನಸಿ ಅಂಗಡಿಯಲ್ಲಿ
ಪದಾರ್ಥಗಳ ಪಟ್ಟಿ ಹೇಳುವಾಗ
ಸಿಗರೇಟಿನ ಕರೆಯಂಟಿದ
ಕಪ್ಪುತುಟಿಯೊಂದು ಬಳಿಬಂದು
ವಿಕೃತ ನಗುವೊಂದನ್ನು ಎಸೆದುಹೋಯಿತು
ಮುಂಜಾನೆ ಎದ್ದು
ಟೈಲರ್ ಅಂಗಡಿಗೆ ಕೆಲಸಕ್ಕೆ ತೆರಳುವಾಗ
'ನೋಡ್ನೋಡು.. ಶೀಲಾವತಿ ಹೇಗೆ ಡ್ರೆಸ್ ಮಾಡ್ಕೊಂಡು ಹೋಗ್ತಿದ್ದಾಳೆ
ಯಾರನ್ನು ಮರುಳು ಮಾಡ್ಲಿಕ್ಕೋ ಏನೋ'
ಎಂಬ ಅಪವಾದದ ಬಾಣ ನೇರ ಎದೆಗೇ ಬಿತ್ತು
ಪಡಿತರ ಚೀಟಿಯಲ್ಲಿ
ಗಂಡನ ಹೆಸರು ತೆಗೆದುಹಾಕಿ
ಅಕ್ಕಿ ಗೋಧಿಯನ್ನು ಕಡಿತಗೊಳಿಸಿದಾಗಲೇ
ಅವರು ಬಹುದೂರ ಕೆಲಸಕ್ಕೆ ತೆರಳಲಿಲ್ಲವೆಂದೂ
ಮತ್ತೆ ಮರಳಿ ಬರುವುದಿಲ್ಲವೆಂದೂ
ಮನದಲ್ಲಿ ಅಂದುಕೊಂಡಿದ್ದು
ಮಕ್ಕಳ ಪ್ರಗತಿ ಪತ್ರದಲ್ಲಿ
ಸಹಿಮಾಡುವಾಗ
ಏಕಾಂಗಿಯೊಬ್ಬಳು ಏರಬೇಕಾದ
ಹಿಮಾಲಯದ ಮೆಟ್ಟಿಲುಗಳು
ಹಿಮಸುರಿದು ಭಾರವೆನಿಸಿದವು
ಸಂಜೆ ಮನೆಗೆ ತೆರಳಲು
ಗಡಿಬಿಡಿಯಿಂದ ನಡೆಯುವಾಗ
ಒಳಿತಿನ ಮರಗಳ ಕೊಂಬೆಗಳು
ಹಿಂದೆ ಸೇರಿಕೊಂಡು
ಹಗಲಿನ ಬಿಸಿಲಿನುರಿಯಲ್ಲಿ
ದಕ್ಕಿದ ನೆರಳನ್ನು ನೆನೆದು
ತಾನೇ ಹೊಗಳಿಕೊಂಡು
ಒಂದು ರಾತ್ರಿಗೆ ಬೆಲೆಕಟ್ಟುತ್ತಿದ್ದವು.
'ಚಾವಣಿಯ ಆಧಾರಸ್ತಂಭಕ್ಕೆ ಗೆದ್ದಲುಹಿಡಿದ
ಮನೆಯಂತೆ ಆಗಿಬಿಟ್ಟೆ ನೀನು'
ಎಂಬೆಲ್ಲಾ ಕನಿಕರದ ನುಡಿಗಳನ್ನು
ಸ್ತ್ರೀಶಕ್ತಿಸಂಘದ ಮಹಿಳೆಯರು
ಚಹಾದೊಂದಿಗೆ ಸೇವಿಸುತ್ತಿದ್ದರು
ಗಂಡನಿಲ್ಲದವಳ ಸ್ವಾತಂತ್ರ್ಯ
ಬಲೆಗೆ ಸಿಲುಕಿದ ಹೆಣ್ಣು ಹರಿಣದಂತೆ
ಎಂದುಕೊಂಡು
ಗಂಡ ಸತ್ತವಳ ಮೊದಲ ಸ್ವಾತಂತ್ರ್ಯ ಸಮರಕ್ಕೆ ಸೇನಾನಿಯಾಗಿ ನಿಂತಳು.
*
ಮಲಯಾಳಂ ಮೂಲ- ವಿನೀತಾ ಬಿಜು
ಕನ್ನಡಕ್ಕೆ- ಕಾಜೂರು ಸತೀಶ್