'ಅವ್ರಿದ್ದಾರಲ್ಲಾ ಒಳ್ಳೆಯ ವ್ಯಕ್ತಿ'
ಹಾಗೆಂದು ಅದುವರೆಗೂ ನೋಡದ ಆ ವ್ಯಕ್ತಿಯ ಕುರಿತು ಹಿರಿಯ ಸ್ನೇಹಿತರೊಬ್ಬರು ಪರಿಚಯಿಸಿದರು.
ಅದೇ ದಿನ ಪರಿಚಯವಾಯಿತು.
ಮರುದಿನ ಅವರಿಗೆ ದಾರಿ ತಿಳಿದಿಲ್ಲವೆಂದು ಸ್ವಲ್ಪ ದೂರ ಕ್ರಮಿಸಿ ಅವರಿಗಾಗಿ ಕಾದುನಿಂತು ತಲುಪಬೇಕಾದ ಜಾಗವನ್ನು ತಲುಪಿದೆ.
ಆ ಊರಿನ ಒಬ್ಬರು ಬಂದು ಒಂದು ಸಂದೇಹವನ್ನು ಕೇಳಿದರು. ನಾನು ಪರಿಹಾರವನ್ನು ಸೂಚಿಸಿದೆ. ಕಛೇರಿಯ ಒಳಗೆ ಹೋಗಿದ್ದೇ ತಡ ' ಪಬ್ಲಿಕ್ ಮುಂದೆ ಏನೂ ಹೇಳಬಾರದು' ಎಂದರು ಆ ಸಹೋದ್ಯೋಗಿ.
ಒಂದು ಅರ್ಜಿಗಾಗಿ ಸುಮಾರು ಹೊತ್ತಿನಿಂದ ವ್ಯಕ್ತಿಯೊಬ್ಬರು ಹೊರಗೆ ಕಾಯುತ್ತಾ ಕುಳಿತಿದ್ದರು. ಅದನ್ನು ನೋಡಿಯೂ ನೋಡದ ಹಾಗೆ ಇದ್ದರು ಆ ಸಹೋದ್ಯೋಗಿ.
ಮಾಣಿಕ್ಯ ಸಿಕ್ಕ ___ ರಂತೆ ಕಾಣಿಸಿದರು. ಆದರೆ ನಾನು ತಲೆಕೆಡಿಸಿಕೊಳ್ಳಲಿಲ್ಲ.
ನಡಾವಳಿ ಬರೆಯುವಾಗಲೂ ತಗಾದೆ. ಸಹಿಸಿದೆ.
ಮಧ್ಯಾಹ್ನ ಊಟದ ಸಂದರ್ಭ ಉಂಡ ತಟ್ಟೆಯನ್ನು ಎತ್ತಿಸಲಿಲ್ಲ. ಆಗ ಒಳಗಿನ ಸರ್ವಾಧಿಕಾರಿ ನಾಪತ್ತೆಯಾಗಿದ್ದ!
ಎಲ್ಲವನ್ನೂ ಹೇಳಿ ಮಾಡಿಸುತ್ತಿದ್ದರು. ಕೆಲಸದ ಕ್ಷಣಕ್ಷಣವೂ ಸರ್ವಾಧಿಕಾರಿ! ಸಂದೇಹ ಪರಿಹರಿಸಲು ಫೋನ್ ಕೊಡಲು ಬಂದ ಸಿಬ್ಬಂದಿಗೆ 'ನಿನಗೆ ನೋಟೀಸ್ ಕೊಡಿಸುತ್ತೇನೆ' ಎಂದು ಭಯ ಹುಟ್ಟಿಸಿದರು. ಮರುಕ್ಷಣವೇ ಉಂಡ ಊಟದ ಹಣವನ್ನು ನೀಡಿ ಒಳಗಿನ ಸರ್ವಾಧಿಕಾರಿಯನ್ನು ಕಳಚಿಕೊಂಡರು.
'ನಾನು ಕೆಲಸ ಹೇಳಬೇಕು ನೀನು ಮಾಡಬೇಕು' ಎಂಬ ಸಿದ್ಧಾಂತದ ಪ್ರತಿಪಾದಕರ ಹಾಗೆ ಇದ್ದರು. ಅದೇ ದಿನ ನನ್ನ ಗೆಳೆಯನಿಗೆ ಕರೆಮಾಡಿ ಇಂತಹ ವಿಚಿತ್ರ ವಿಲಕ್ಷಣ ವ್ಯಕ್ತಿತ್ವದ ಕುರಿತು ಹೇಳಿಕೊಂಡೆ.
ನಿತ್ಯ ಮನೆಯಿಂದ ಊಟ ತೆಗೆದುಕೊಂಡು ಹೋಗುತ್ತಿದ್ದವ ನಾನು. ಅವರೊಂದಿಗೆ ಸಾಥ್ ನೀಡಲು ಅದನ್ನು ಬಿಟ್ಟು ಏನೇನೋ ತಿಂದೆ, ಉಪವಾಸವೂ ಇದ್ದೆ.
ಹೇಳಿದ್ದೆಲ್ಲವನ್ನೂ ಮಾಡಿದೆ. ಹಸಿರು ಬಣ್ಣದಲ್ಲಿ ಸಹಿ ಹಾಕುವುದನ್ನೇ ತನ್ನ ಕಾಯಕವಾಗಿಸಿಕೊಂಡ ಅವರು ನನ್ನ ಈ ಮೃದು ಧೋರಣೆಯನ್ನು ಮತ್ತಷ್ಟೂ ನಿಕೃಷ್ಟವಾಗಿ ಬಳಸಿಕೊಂಡರು. ನಾನು ಸಹಿಸಿದೆ.
ಅಷ್ಟೂ ಸಹಿಸಲಿಲ್ಲವೆಂದರೆ ನಾನು ಓದಿಕೊಂಡ ಗಾಂಧಿ , ಕ್ರಿಸ್ತ, ಅಂಬೇಡ್ಕರ್ ,ಬುದ್ಧರೆಲ್ಲ ಸುಮ್ಮನಿರುವರೇ? ಸಹಿಸಿಕೊಂಡೆ!
ಒಂದು ದಿನ ಏನೂ ತಿಳಿಸದೆ ಕೆಲಸಕ್ಕೆ ಬರಲಿಲ್ಲ. ನನಗೇನೂ ಅನಿಸಲಿಲ್ಲ ಆಗ.
ಇನ್ನೊಮ್ಮೆ ಅಲ್ಲೇ ಕೆಲಸವಿದ್ದುದರಿಂದ ನಾನು ಜೊತೆಸೇರಿ ಮಾಡಬೇಕಾಗಿದ್ದ ಕೆಲಸವನ್ನು ಅವರೇ ಮಾಡಿದ್ದರು.
ಸಿದ್ಧಾಂತದ ಕುರಿತು ಮಾತನಾಡುತ್ತಿದ್ದರು. ಒಂದನ್ನೂ ಪಾಲಿಸದೆ ಇಂತಹ ಸಿದ್ಧಾಂತಗಳಿಗೆ ಅರ್ಥವಿಲ್ಲ ಎಂದು ನನ್ನ ಒಳಮನಸ್ಸು ಹೇಳುತ್ತಿತ್ತು.
ಸಾರ್ವಜನಿಕರು ಸಂದೇಹ ಕೇಳಿ ಬಂದರೆ ಅದಕ್ಕೆ ಪರಿಹಾರ ನನಗೆ ತಿಳಿದಿದ್ದರೂ ಮಾತನಾಡುವ ಹಾಗಿರಲಿಲ್ಲ. ಅಂಥವರನ್ನು ಹೊರಗೆ wait ಮಾಡಿ ಎನ್ನುತ್ತಿದ್ದರು. ಸಹಿಸಿದೆ!
ಒಬ್ಬರಂತೂ ಮೇಲಿನವರಿಗೆ ದೂರು ಕೊಟ್ಟರು. ಆದರೆ ಅಲ್ಲಿಂದ ಕರೆಯು ನನ್ನ ಮೊಬೈಲಿಗೆ ಬಂದಿತ್ತು!
ಇದುವರೆಗೆ ಒಂದೇ ಒಂದು ಕೆಲಸದ ಅನುಭವವಿರುವ ಅವರು. ಇಂತಹ ಹದಿನೈದಕ್ಕೂ ಹೆಚ್ಚು ಕೆಲಸಗಳ ಅನುಭವವಿರುವ ನಾನು!
ಬೇರೆ ಕಡೆಗೆ ಹೋಗಬೇಕಾದ ಸಂದರ್ಭದಲ್ಲಿ ' ಅಲ್ಲಿಗೆ ಹೋಗಿ ಅದು ತೆಗೆದುಕೊಂಡು ಬಾ ಎಂದು ಹದಿನೆಂಟು ಕಿಮೀ ಅಲೆಸುತ್ತಿದ್ದರು. ನಾನು ಸಹಿಸಿದೆ!
'ಪ್ರಿಂಟ್ ತೆಗೆದು ನೀನೇ ಸಹಿ ಮಾಡಿ ಕೊಟ್ಟು ಬಾ' ಎಂದರು, ಅದನ್ನೂ ಮಾಡಿದೆ.
ಒಮ್ಮೆಯೂ ಸಮಯ ತಪ್ಪಿಸಿದವನಲ್ಲ ನಾನು.
ಸಾರ್ವಜನಿಕರು ಬಂದಾಗ ಮಾತನಾಡುವ ಸಂದರ್ಭದಲ್ಲಿ ನಾನು ಅರ್ಥೈಸಲು ಹೋದರೆ ಕೈ ಅಡ್ಡ ಹಿಡಿದು ನನ್ನನ್ನು ತಡೆಯುತ್ತಿದ್ದರು.
ಸಹಿಸಿಕೊಂಡೆ!
ಇಷ್ಟೆಲ್ಲಾ ಆದರೆ ಸಹಿಸಬಹುದಿತ್ತು. ಆದರೆ ಆ ದಿನ ನಿಂತುಕೊಂಡೇ ಇದ್ದಾರೆಂದು ಕುರ್ಚಿ ತೆಗೆದು ಅಲ್ಲಿಟ್ಟು ಕುಳಿತುಕೊಳ್ಳಿ ಎಂದೆ. 'ಕುಳಿತುಕೊಳ್ಳುವ ಪ್ರಶ್ನೆಯೇ ಇಲ್ಲ ಇಡಿ ಅಲ್ಲಿ ' ಎಂದರು. ತಂದ ಕುರ್ಚಿಯನ್ನು ಅದರ ಮೂಲ ಸ್ಥಾನದಲ್ಲಿ ಇಟ್ಟು ಬಂದೆ.
ಅವರು ನನ್ನೊಳಗೆ 'ಅವನು' ಆದ! ಹಳ್ಳಿಯವರು 'ಇದಕ್ಕೆ' ಸಮ ಎನ್ನುತ್ತಾರಲ್ಲಾ- ಹಾಗೆ.
ಇಬ್ಬರು ಸಹೋದ್ಯೋಗಿಗಳ ಕೆಲಸದಲ್ಲಿ ಸೇರಿಕೊಳ್ಳಲು ಹೊರಟಾಗ ಅದನ್ನು ತಡೆದ. ಅವನನ್ನು ದ್ವೇಷಿಸಲಾರಂಭಿಸಿದೆ. ಒಂದೇ ಒಂದು ಕ್ಷಣ ನೋಡಿದ ಆ ಸಹೋದ್ಯೋಗಿಗಳೂ ಇವನ ವರ್ತನೆಯನ್ನು ನೋಡಿ ಸಿಡಿಮಿಡಿಗೊಂಡರು. ತಡವಾದಾಗ ಇವನೇ ಸೇರಿಕೊಂಡ.
ಯಾರು ಯಾವ ಕೆಲಸವನ್ನು ಮಾಡಬೇಕೋ ಅದನ್ನು ಮಾಡಿಸದೆ ಮತ್ತೆ ಈ ಕೆಲಸವನ್ನೂ ನೀನು ಮಾಡು ಎಂದ. ನಾನು ಮಾಡಿದೆ. ವಿರಾಮ ಬೇಕೆನಿಸಿದಾಗ 'ಸ್ವಲ್ಪ ಮಾಡಿ' ಎಂದೆ. ಆಗಲೂ 'ಮಾಡಿ ಮುಗ್ಸಿ' ಎಂದ. ಅಷ್ಟಾದರೂ ನನ್ನ ಅಗ್ನಿಪರ್ವತ ಅವನನ್ನು ಸುಡಲಿಲ್ಲ.
ಬೆಳಿಗ್ಗೆ ಬಂದು ಸ್ವಲ್ಪ ಮಲಗಿ ಮತ್ತೆ ಎಂದಿನ ಕೆಲಸಕ್ಕೆ ತೆರಳಿ ಹಿಂತಿರುಗುವಾಗ ಮತ್ತೊಂದು ಕರೆ. 'ಆ ನಮೂನೆಯನ್ನು ತಲುಪಿಸಿ'.
ನಿದ್ದೆ ನನ್ನನ್ನು ಆವರಿಸುತ್ತಿತ್ತು. ಆಗುವುದಿಲ್ಲವೆಂದೆ.
ನನ್ನ ಜ್ವಾಲಾಮುಖಿ ಸ್ಫೋಟಗೊಂಡದ್ದು - ಅವನ ಬಳಿಯೇ ಇದ್ದ ಅದನ್ನು ,ಅವನು ಇರುವ ಕಾರ್ಯಕ್ಷೇತ್ರದಲ್ಲೇ ತಲುಪಿಸಬಹುದಾದ ಒಂದು ಕೆಲಸವನ್ನು ,ಒಬ್ಬ ಪಾಪದ ನೌಕರನನ್ನು ಕಳುಹಿಸಿ ಅದನ್ನು ನನ್ನಿಂದ ಪಡೆದುಕೊಂಡು ತಲುಪಿಸಬೇಕಾದಲ್ಲಿಗೆ ತಲುಪಿಸಿ ಎಂದಾಗ. ಅವನ ಸೋಮಾರಿತನ, ಅಹಂಕಾರ, ಸರ್ವಾಧಿಕಾರ, ವಿಕೃತತೆಗಳೆಲ್ಲ ನೆನಪಿಗೆ ಬಂದು ಅವನನ್ನು ಬ್ಲಾಕ್ ಮಾಡಿದೆ.
ಇವತ್ತು ನಾನು ಹೋಗಲಿಲ್ಲ. ಹಸಿರು ಸಹಿ ಹಾಕಿಕೊಂಡು ಅಧಿಕಾರ ಚಲಾಯಿಸುತ್ತಿದ್ದವನಿಗೆ ಇಂದು ನಾಲ್ಕಕ್ಷರ ಬರೆಯುವ ಕೆಲಸ ಸಿಕ್ಕಿದ್ದು ಸಿಟ್ಟು ಉಕ್ಕಿಸಿರಬಹುದು! ಅವನು ಯಾರ್ಯಾರಿಗೋ ಕರೆಮಾಡಿ ನಾನು ಬರಲಿಲ್ಲವೆಂದೂ ಅವನ (ಪಾದ)ಸೇವೆಮಾಡಲಿಲ್ಲವೆಂದೂ ಹೇಳಿಕೊಂಡು ತಿರುಗುತ್ತಿದ್ದಾನೆ.
ಸರ್ವಾಧಿಕಾರಿಗಳನ್ನು ಟೀಕಿಸುವ ಅವನೇ ಸರ್ವಾಧಿಕಾರಿಗಳನ್ನು ಮೀರಿಸುವಷ್ಟು ಇದ್ದಾನೆಂಬುದನ್ನು ನೆನೆದಾಗ ನನಗೆ ನಗು ಬರುತ್ತದೆ. ಇಂತಹವರ ತಲೆಮಾರು ಬೆಳೆಯದಿರಲಿ.
ದೇವರೇ, ಅವನಿಗೆ ತನ್ನ ತಪ್ಪುಗಳು ಮನವರಿಕೆಯಾಗಲಿ!
*
- ಕಾಜೂರು ಸತೀಶ್
ಸಹನೆಯ ಮಿತಿ(ಪರಿಧಿ) ನಿಮಗೆ ಹೆಚ್ಚಿದೆ ಸತೀಶ್. ಆ ಪರಿಧಿಯೊಳೆಗೆ ಕುಳಿತು ಏನೆಲ್ಲ ಸಾಧ್ಯತೆಗಳಿಗೆ ಎದೆಯೊಡ್ಡಬಲ್ಲಿರಿ ಅಥವಾ ಈಡಾಗಬಲ್ಲಿರಿ. ಒಂದು ಸರಳ ಪ್ರತಿಭಟನೆಗೂ ಏನೆಲ್ಲಾ ತಯಾರಿ ಬೇಕು ಮನಸಿಗೆ.ಆತನ ನಡತೆಗೆ ಸ್ಪಷ್ಟ ಕನ್ನಡಿದಿರಿ ನೀವು,ಆದರೆ ಅದನ್ನಾತ ಗ್ರಹಿಸಿರಲಾರ.
ReplyDeleteಮನಸ್ಸಿನಲ್ಲಿರುವ ಅಹಂಕಾರ ಹಳಸಿದ ಆಹಾರದಹಾಗೆ ಅದು ಯಾವಾಗಲು ಸುಗಂಧ ರಹಿತವಾಗಿದ್ದು, ರುಚಿಕರವಾಗಿರುವುದಿಲ್ಲ, ಹಾಗೂ ಅದರ ಸೇವನೆಯಿಂದ ದೇಹಾರೋಗ್ಯಕ್ಕು ಹಾನಿಕಾರಕ ಹಾಗಾಗಿ ಅದನ್ನು ಎಲ್ಲರೂ ಅದನ್ನು ನಿರಾಕರಿಸುತ್ತಾರೆ. ನೀವು ಪ್ರತಿಭಟಿಸಿದ್ದು ಅರೋಗ್ಯಕರವಾದುದ್ದು.
ReplyDelete