ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Tuesday, January 26, 2021

ಆಚರಣೆಗಳ ಸುತ್ತ..

ರಾಷ್ಟ್ರೀಯ ಹಬ್ಬಗಳು!

ಆಚರಣೆಯ ಹಿಂದಿನ ದಿನ ಕೆಲವು ನೌಕರರಿಗೆ ಒತ್ತಡ ಹೆಚ್ಚಿ ನಿದ್ದೆ ಹತ್ತುವುದಿಲ್ಲ. ಕೆಲವರು ನನ್ನನ್ನು ಆಹ್ವಾನಿಸಿಲ್ಲವಲ್ಲ, ಅವರಿಗೆ ಒಂದು ಪಾಠ ಕಲಿಸಬೇಕು ಎಂದು ಮನಸ್ಸಿನಲ್ಲಿ ಲೆಕ್ಕ ಹಾಕುತ್ತಿರುತ್ತಾರೆ. ಕೆಲವರು ಮರುದಿನದ ಕಾರ್ಯಕ್ರಮಕ್ಕೆ ಧರಿಸಬೇಕಾದ ಗರಿಗರಿ ವಸ್ತ್ರದ ಕುರಿತು ಯೋಚಿಸತೊಡಗುತ್ತಾರೆ.

ನಿರೂಪಕ/ಕಿ ಅಲ್ಲಿ ಇಲ್ಲಿ ಬಳಸಿ ಎಸೆದ ಸಾಲುಗಳನ್ನು ಹೆಕ್ಕಿ ಅರಚಲು ತೊಡಗುತ್ತಾನೆ/ಳೆ. ಭಾಷಣಗಳು ಆರಂಭವಾಗುತ್ತವೆ. ಕುರ್ಚಿ ಎತ್ತಲು ಒಂದಷ್ಟು ಜನರಿರುತ್ತಾರೆ. ಗಣ್ಯರು ತಿಂದುಳಿಸಿದ ತಟ್ಟೆಗಳನ್ನು ಎತ್ತಲು ಮತ್ತೊಂದಿಷ್ಟು ಜನರಿರುತ್ತಾರೆ.

ಪಕ್ಕದಲ್ಲೇ ಒಂದು ಕಾಮಗಾರಿ ನಡೆಯುತ್ತಿರುತ್ತದೆ. ಬಿಹಾರಿಗಳು ಅಲ್ಲಿ ಕೆಲಸ ಮಾಡುತ್ತಿರುತ್ತಾರೆ. ಅವರಲ್ಲೊಂದು ಪುಟ್ಟ ಮಗು ತನ್ನ ಹಾಗೇ ಇರುವ ಸಣ್ಣ ಸಣ್ಣ ಇಟ್ಟಿಗೆಗಳನ್ನು ಹೊತ್ತುಕೊಂಡು ಭವಿಷ್ಯದ ಬದುಕನ್ನು ಕಟ್ಟಿಕೊಳ್ಳಲು ಸಿದ್ಧತೆ ನಡೆಸುತ್ತಿರುತ್ತದೆ. ಮತ್ತೊಂದು ಮಗು ಚಡ್ಡಿಯಲ್ಲಿ ಕಕ್ಕ ಮಾಡಿಕೊಂಡು ಅಮ್ಮ ದೂರದಲ್ಲಿ ಇರುವುದನ್ನೂ, ಕೆಲಸದಲ್ಲಿ ತಲ್ಲೀನರಾಗಿರುವುದನ್ನೂ ಗಮನಿಸಿ ಸುಮ್ಮನೆ ಮಲಗುತ್ತದೆ. ನೊಣಗಳು ಆ ಮಗುವನ್ನು ಮಾತನಾಡಿಸಲು ಆಗಾಗ ಬಂದುಹೋಗುತ್ತವೆ.

ಎಲ್ಲರೂ ಅಭಿವೃದ್ಧಿಯ ಕುರಿತು, ದೇಶಪ್ರೇಮದ ಕುರಿತು, ಸಮಾನತೆಯ ಕುರಿತು, ಸ್ವಾತಂತ್ರ್ಯದ ಕುರಿತು, ಪ್ರಾಮಾಣಿಕತೆಯ ಕುರಿತು, ಗಣ್ಯರ ಕುರಿತು ಮಾತನಾಡುತ್ತಿರುತ್ತಾರೆ. ಅವರು ಏದುಸಿರಿನಲ್ಲಿ ಭಾಷಣ ಮಾಡುವಾಗ ಟ್ರ್ಯಾಕ್ಟರೊಂದು ಅವರ ಶಬ್ದಗಳನ್ನು ನುಂಗಿ ಜೋರು ಸದ್ದುಮಾಡಿಕೊಂಡು ಮುನ್ನುಗ್ಗುತ್ತದೆ. ಅದರ ಟ್ರ್ಯಾಲಿಯಲ್ಲಿ ಒಬ್ಬ ಹುಡುಗ ಕಂಬಿಗೆ ನೇತುಹಾಕಿಕೊಂಡು ಮೈಕುಲುಕಿಸುತ್ತಾ ಟ್ರ್ಯಾಕ್ಟರ್ ಸಾಗಿದ ದಾರಿಯಲ್ಲಿ ಕ್ರಮಿಸುತ್ತಾನೆ. ಸಭಿಕರೆಲ್ಲರೂ ಅವನನ್ನೇ ನೋಡತೊಡಗುತ್ತಾರೆ. ಅವನಿಗೆ ಖುಷಿಯಾಗುತ್ತದೆ.

ಸ್ವಾಗತ ಹೇಳಬೇಕಾದ ಜಾಗದಲ್ಲಿ ವಂದನೆಗಳು ಎಂದವರಿಗೆ ಹಿಗ್ಗಾಮುಗ್ಗ ಬೈಗುಳಗಳು ಸಿಗುತ್ತವೆ. ಉತ್ಸವವನ್ನು ಉಸ್ತವ ಎಂದವರೂ, ದೇಶವನ್ನು ದೇಸ ಎಂದವರೂ, ಭಾಷೆಯನ್ನು ಬಾಸೆ ಎಂದವರೂ ಬೈಯ್ಯಲಿಕ್ಕೆ ಜೊತೆಗೂಡುತ್ತಾರೆ.

ಅನತಿ ದೂರದಲ್ಲಿ ಆಂಬುಲೆನ್ಸ್ ನ ಸದ್ದು ಕೇಳುತ್ತದೆ. ಕಿವಿಗೊಟ್ಟು ಕೇಳಿದವರಿಗೆ 'ಇಲ್ಲಿ ಆಗುವುದಿಲ್ಲ ....ಗೆ ಕರೆದುಕೊಂಡು ಹೋಗಿ' ಎಂಬ ದನಿ ಕೇಳಿಸುತ್ತದೆ.

ತಪ್ಪು ತಪ್ಪು ಮಾತನಾಡುವ ಗಣ್ಯರನ್ನು ನೋಡಿ ಕುರ್ಚಿ ಎತ್ತಲು ಬಂದ , ಫೈಲ್ ಹಿಡಿದುಕೊಳ್ಳಲು ಬಂದ ತರುಣನಿಗೆ ತನ್ನ ಬದುಕಿನ ಕುರಿತು ಜಿಗುಪ್ಸೆ ಹುಟ್ಟುತ್ತದೆ. ಆತ್ಮಹತ್ಯೆ ಮಾಡಿಕೊಳ್ಳೋಣವೆಂದರೆ ಆಶ್ರಿತರ ನೆನಪು ಅಲೆಯಲೆಯಾಗಿ ತೇಲಿಬರುತ್ತದೆ.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ 'ಓ ನನ್ನ ದೇಶಬಾಂಧವರೇ..' ಹಾಡಿಗೆ ಮೂರ್ನಾಲ್ಕು ಪಲ್ಟಿಹೊಡೆದು ನರ್ತಿಸತೊಡಗುತ್ತಾರೆ. ಜನ ಚಪ್ಪಾಳೆ ತಟ್ಟುತ್ತಾರೆ.

ಮಿಠಾಯಿ ಹಂಚಲಾಗುತ್ತದೆ. ಅದರ ಪ್ಲಾಸ್ಟಿಕ್ ಸಿಪ್ಪೆ ನೆಲದಲ್ಲಿ ಸೂರ್ಯನ ಬೆಳಕಿಗೆ ಲಕಲಕ ಎಂದು ಹೊಳೆಯಲು ಆರಂಭಿಸುತ್ತದೆ.
*


ಕಾಜೂರು ಸತೀಶ್



No comments:

Post a Comment